ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇಂದ್ರನಮರಾವತಿ ಇಲ್ಲೇ ಭಾಗವತರ ಕಾಲಬುಡದಲ್ಲೇ…’ – ಪ್ರಜ್ಞಾ ಮತ್ತೀಹಳ್ಳಿ ಕವನ

ವೇಷದ ಪದ್ಯಗಳು



1
ದೂರದ ಕತ್ತಲ ಬಾನಲಿ ಚಂಡೆ
ಧ್ವನಿಯ ಅಬ್ಬರ ಬಿಡ್ತಿಗೆ ಕೇಳಿದ್ದೇ
ನವಿರೇಳುತ್ತದೆ ಗುಂಡಿಗೆ
ನೆನೆಯಿರೊ ಜನರೆಲ್ಲ ಕರೆ ಮೊರೆ
ಯುತ್ತದೆ ಗೆಜ್ಜೆ ಕಟ್ಟಿರದಿದ್ದರೂ
ತಯ್ಯ ತಾ ತಾ ತಾನೇ ತಾನಾಗಿ
ತೆರೆ ಹೊಡೆಯುತ್ತದೆ ಮತ್ತೀಗ ಕನಸಿನ
ಒಡ್ಡೋಲಗ ಭಳಿರೇ ಪರಾಕ್ರಮ
ಕಂಠೀರವ ಬಲ್ಲಿರೇನಯ್ಯಾ
2
ಕೆಲವೊಮ್ಮೆ ಪದ್ಯ ಮುಗಿದರೂ
ಗುಂಯ್ ಗುಡುವ ರಾಗ
ವéೇಷ ಕಳಚಿದರೂ ಇಳಿಯದ ಪಾತ್ರ
ಉರಿದರೂ ಆರದ ದಾಕ್ಷಾಯಣಿ
ಹುಗಿದ ರಥವಿಳಿಯದ ರಾಧೇಯ
ಚೌಕಿಯಾಚೆಗೂ ಬರುತ್ತಾರೆ
ಕಣ್ಣಲ್ಲುಳಿದ ಕಾಡಿಗೆಯಾಗಿ ಒರೆಸಿದರೂ
ಕಲೆಯುಳಿಸುವ ಗುಲಾಬಿಯಾಗಿ
ಜೊತೆಗೇ ಚಾ ಕುಡಿಯುತ್ತಾರೆ
ಹಚ್ಚಿದ ಅವಲಕ್ಕಿಗೂ ಕೈ ಹಚ್ಚಿ
ಕೊಟ್ಟಿಗೆ ಸಗಣಿ ಬಳಿದು ಸೊಪ್ಪು
ಹೊರೆ ಹೊತ್ತು ಮತ್ತೊಂದು ಪಾತ್ರಕ್ಕೆ
ಬಣ್ಣ ಬಳಿದಾದ ಮೇಲೇ
ಹೋಗುತ್ತಾರೆ ಕನ್ನಡಿ ನೋಡಿಕೊಂಡು

3
ಹೆಸರಲ್ಲಿ ಮನೆ ಇದ್ದರೂ ಕೋಣೆ
ಇರಬೇಕೆಂದಿಲ್ಲ ಕಡೆಗೆ ಗೋಡೆ ಛಾವಣಿ ಕೂಡ
ಬೇಕಾಗಿಲ್ಲ ಎಳೆದು ಕಟ್ಟಿದ ಹಗ್ಗದ ಮೇಲೆ
ಹರವಿದಂತೆಲ್ಲ ಕಸೆ ಸೀರೆ ವೀರಗಾಸೆ
ಭುಜಕೀರ್ತಿ ಎದೆಹಾರ ಅಲ್ಲೇ ಕೆಳಗೆ
ಟ್ರಂಕಿನ ಮೇಲೊಂದು ಕಿರೀಟ ಗಣಪತಿ
ಎಣ್ಣೆ ಕಲಸಿದ ಬೇಸು ನೀರಲ್ಲಿ ಸಪೇದು
ಕವಳ ತುಂಬಿದ ಬಾಯಿಗಳ ಸಂಜ್ಞಾ
ಸಂವಹನಕ್ಕೆ ತುಳುಕಿದ ಕೆಂಪುರಸ
ಇಳಿದು ಬಂತಲ್ಲೇ ಚೌಕಿಮನೆ
4
ಬಣ್ಣ ಹಚ್ಚಿ ಕಿರೀಟ ಕಟ್ಟಿದ್ದೇ ತಡ
ಒಡಮೂಡುತ್ತದೆ ವೇಷ ಹಾಗೇ
ಅದರ ಆವೇಶ ಆಮೇಲಿಂದ
ಎಲ್ಲ ಅದರ ಆದೇಶ
ನರಪೇತಲನೂ ರಕ್ಕಸನಾಗಿ ಕುಪ್ಪಳಿಸಿ
ಬೆಕ್ಕಸಗೊಳಿಸುತ್ತಾನೆ ಕೀ ಹಲಲ
ಬೊಕ್ಕತಲೆ ಕುರೂಪಿಯ ಮೋಹಕ
ಬೆಡಗಿನ ನಾಗವೇಣಿ ದಿತ್ತೈಯತ್ತ
ಸೃಷ್ಟಿಗೊಬ್ಬನೆ ಅರ್ಜುನ
ಬೆಳಗು ಹರಿಯುವ ತನಕ
ಇಂದ್ರನಮರಾವತಿ ಇಲ್ಲೇ ಭಾಗವತರ
ಕಾಲಬುಡದಲ್ಲೇ
 

‍ಲೇಖಕರು avadhi

18 March, 2013

2 Comments

  1. ಸಾಕ್ಷಿ

    ಬಹಳ ಚೆನ್ನಾಗಿದೆ. ಮತ್ತೆ ಮತ್ತೆ ಓದುಂತೆ ಮಾಡಿತು… ಧನ್ಯವಾದಗಳು…

  2. ಉಷಾಕಟ್ಟೆಮನೆ

    ಚೆನ್ನಾಗಿದೆ. ನಮ್ಮ ಭಾವಕೋಶದ ಯಕ್ಷ, ಕಿನ್ನರ, ಗಂಧರ್ವ ಲೋಕದವರೆಲ್ಲಾ ಯಕ್ಷಗಾನದ ಭಾಗವತಿಕೆಯಲ್ಲಿ ಮೈದಳೆದವರೇ ಆಗಿರುತ್ತಾರೆ; ಇದು ಸತ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading