ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ..

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ದೇಶೀಯತೆಯ ಚಿಂತನೆ

ಡಾ ಪ್ರಕಾಶ ಗ ಖಾಡೆ

 

ಆಧುನಿಕತೆಯ ಸಂದರ್ಭದಲ್ಲಿ ಇವತ್ತು ದೇಶಿಯತೆಯ ಚಿಂತನೆ ತುಂಬಾ ಅಗತ್ಯವಾಗಿದೆ.ಪ್ರಸ್ತುತ ಮಡಿಕೇರಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯ ಮತ್ತು ದೇಶೀಯತೆ’ಕುರಿತು ಗೋಷ್ಠಿ ಆಯೋಜಿಸಿರುವುದು ವಿಷಯದ ಮಹತ್ವವನ್ನು ಸಾರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವಾಗ ಜನಪದೀಯ ನೆಲೆಗಟ್ಟಿನಿಂದ ಬಂದ ಲಾವಣಿ, ತತ್ವಪದ, ಭಜನೆ ಮೊದಲಾದ ಕಾವ್ಯಗಳನ್ನು ದೂರಸರಿಸಲಾಗಿರುವುದೂ ಒಂದು ದುರಂತವೆನಿಸುತ್ತದೆ.

‘ಹೊಸಗನ್ನಡದ ಅರುಣೋದಯವನ್ನು ಕೆಂಪು ನಾರಾಯಣ, ಮುದ್ದಣರಿಂದ ಆರಂಬಿಸಿ ಹಟ್ಟಿಯಂಗಡಿ ನಾರಾಯಣರಾಯರು, ಬಿ.ಎಂ.ಶ್ರೀ. ಅವರ ರಚನೆಗಳಿಂದ ಗುರುತಿಸುವುದು ನಮಗೆ ವಾಡಿಕೆಯಾಗಿದೆ. ಆದರೆ ವಾಸ್ತವವಾಗಿ ಹೊಸಗನ್ನಡದ ಅರುಣೋದಯವನ್ನು ತತ್ತ್ವಪದಗಳು ಮತ್ತು ತತ್ತ್ವಪದಕಾರರಿಂದಲೇ ಆರಂಬಿಸಬೇಕಾಗಿದೆ. ಜನಪದ ಸಾಹಿತ್ಯವಾಗಲಿ, ವಚನ ಸಾಹಿತ್ಯವಾಗಲಿ ಪೂರ್ವಧ್ಯಾನಿತವಾದ ಅಥವಾ ಪ್ರಜ್ಞಾಪೂರ್ವಕವಾದ ಕಾವ್ಯಸೃಷ್ಟಿಯಲ್ಲ. ಇವರಾರಿಗೂ ತಮ್ಮ ರಚನೆಗಳು ಸಾಹಿತ್ಯವೆಂಬ ಭ್ರಮೆ ಇರಲಿಲ್ಲ. ವಚನಗಳು ಸೃಷ್ಟಿಯಾದ 500 ವರ್ಷಗಳ ನಂತರ ಅದಕ್ಕೆ ಸಾಹಿತ್ಯವೆಂಬ ಮನ್ನಣೆ ಲಬಿಸಿದೆ. ಅಂತೆಯೇ ಭಾರತವು ವಸಾಹತುಶಾಹಿ ಪ್ರಕ್ರಿಯೆಗೆ ಒಳಪಟ್ಟಿದ್ದಾಗ ಮೂಡಿ ಬಂದ ಕನ್ನಡದ ತತ್ವಪದಗಳು ಮತ್ತು ತತ್ವಪದಕಾರರು ಇದುವರೆಗೆ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಪ್ರತಿಷ್ಟಿತ ಗ್ರಂಥಗಳಲ್ಲಿ ಸ್ಥಾನಗಿಟ್ಟಿಸಿಲ್ಲದಿರುವುದು ಕಾಣುತ್ತೇವೆ.

ಈ ಅಪಾಯಕಾರಿ ಚಿಂತನಾ ಕ್ರಮಗಳು ಹುಟ್ಟುಹಾಕಿದ ಸಂದರ್ಭಗಳು ಒಟ್ಟು ಜನಪದರ ಕಾಣ್ಕೆಯನ್ನು ನಿರ್ಲಕ್ಷಿಸಿದವು. ದೇಶೀಯ ಕಾವ್ಯವನ್ನೂ ಕಟ್ಟಿದ ಯಾರೂ ಆಧುನಿಕ ಚಿಂತಕರಿಗೆ ಶ್ರೇಷ್ಟರಾಗಿ ಕಾಣಲಿಲ್ಲ. ಹೋಗಲಿ ಅವರ ಮೌಲ್ಯಯುತ ಸಾಧನೆಗೆ ತಕ್ಕುದಾದ ಗೌರವವನ್ನೂ ಕೊಡಲಿಲ್ಲ. ಅಸಾರತೆ ಮತ್ತು ಸ್ಥಗಿತಗೊಂಡ ಕಾಲವೆಂದು ಹೇಳುವ ಕಾಲಘಟ್ಟದಲ್ಲಿಯೇ ಇವರು ಹುಟ್ಟುಹಾಕಿದ ದೇಸೀತನ ತನ್ನ ಶ್ರೇಷ್ಟತೆಯನ್ನು ಕಾಯ್ದುಕೊಂಡಿತ್ತೆಂದೆ ಹೇಳಬೇಕು. ಯಾಕೆಂದರೆ ಈ ಕಾಲಘಟ್ಟದಲ್ಲಿಯೇ ಸಾಧು ಸಂತರು, ತತ್ವ್ನ್ತಪದಕಾರರು, ಬುಡಕಟ್ಟು ನಾಯಕರು, ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ, ಅದರ ಜೀವ ವಿರೋದಿ ನೆಲೆಗಳ ವಿರುದ್ಧ ತಮ್ಮ ಅನುಭಾವಿಕ ನೆಲೆಯಿಂದ ಲೋಕಾನುಭವದಿಂದ ಖಂಡಿಸಿದವರು ಚಳುವಳಿ ಮಾಡಿದವರು. ಆ ಮೂಲಕ ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದವರು. ಪ್ರಭುತ್ವ ವಿರೋದಿ ನೆಲೆಗಳನ್ನು ಎತ್ತಿ ಹಿಡಿದ ಇವರು ನವೋದಯ ಸಂದರ್ಭದ ಪ್ರಮುಖ ಧಾರ್ಮಿಕ ನಿಲುವಾದ ಧರ್ಮ ನಿರಪೇಕ್ಷಕ ನೆಲೆಗೆ ತಳಹದಿ ಹಾಕಿಕೊಟ್ಟವರು. ಈ ಸೆಳಕುಗಳು ಲಾವಣಿಕಾರರಿಗೂ ಪ್ರಮುಖ ಪ್ರೇರಣೆಯಾಗಿದ್ದವು.

ಸ್ಥಳೀಯ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸಂಗತಿಗಳಿಗೆ ಮಹತ್ವಕೊಟ್ಟು ಜನರೊಡಲಿಂದ ಹುಟ್ಟಿಬಂದ ಸ್ವಾನುಭವಪ್ರಧಾನವಾದ ದೇಸಿ ಪರವಾಗಿ ಅರಳಿಕೊಂಡಿದ್ದ ಈ ನೀತಿ ಸಂಪ್ರದಾಯದಂಥ ಎಷ್ಟೊ ಸ್ಥಳೀಯ ಅಬಿವ್ಯಕ್ತಿಗಳನ್ನು ಇಲ್ಲಿ ನಿರ್ಲಕ್ಷಿಸಲಾಯಿತು. ಪಾಶ್ಚಾತ್ಯ ಸಿದ್ಧಾಂತಗಳ ಮೇಲೆ ರೂಪುಗೊಂಡ ನವೋದಯ ಚಳುವಳಿಗಳು ಇಂಥ ದೇಸಿತನಗಳನ್ನು ಉಪೇಕ್ಷೆ ಮಾಡಿದವು. ಹೀಗೆ ಲಾವಣಿ, ತತ್ತ್ವಪದ ಮೊದಲಾದ ಸ್ಥಳೀಯ ಕಾವ್ಯ ಪ್ರಕಾರಗಳು ಒಂದೆಡೆ ಈ ನೆಲೆಯಲ್ಲಿ ತಮ್ಮ ಅಸ್ತಿತ್ವ ರೂಪಿಸಿಕೊಳ್ಳುವ ಹೊತ್ತಿನಲ್ಲಿ ನಾವು ಯಾವುದನ್ನೂ ಆಧುನಿಕವೆಂದು ಕರೆದುಕೊಂಡು ಬಂದೆವೋ, ಅವು ಈ ನೆಲದ ಇಂಥ ಪ್ರೇರಣೆಗಳಿಂದ ಹೊರತಾಗಲಿಲ್ಲ. ಒಂದೆಡೆ ಪಶ್ಚಿಮದ ಕಾವ್ಯರೂಪಗಳಿಂದ ಪ್ರಭಾವಿತರಾಗಿ ಅವುಗಳಿಗೆ ಸಂವಾದಿಯಾಗಿ ಹೊಸ ರೂಪಗಳನ್ನು ಕನ್ನಡದಲ್ಲಿ ಆವಿಷ್ಕಾರಮಾಡುವ ಪ್ರಯತ್ನಗಳು ಅನುವಾದ, ರೂಪಾಂತರ, ಅಳವಡಿಕೆ ಇತ್ಯಾದಿಗಳ ಮೂಲಕ ಕೆಲವರಿಂದ ಪ್ರಾರಂಭವಾದರೂ ಈ ಹೊಸ ರೂಪಗಳ ಒಳಕ್ಕೆ ತುಂಬಿಕೊಳ್ಳಬೇಕಾದ ಹೂರಣ ಈ ನೆಲದ ಮಣ್ಣಿನಿಂದ ಬೆಳೆದುಕೊಂಡಿದ್ದೇ ಆಗಿರಬೇಕೆಂಬ ತಿಳಿವು ಇಂಥ ಹಿನ್ನೆಲೆಯಲ್ಲಿತ್ತೆಂಬುದು ಮಹತ್ವದ ಸಂಗತಿಯಾಗಿದೆ ಕನ್ನಡದಲ್ಲಿ ಕಾಲಕಾಲಕ್ಕೆ ಕಾಣಿಸಿಕೊಂಡ ಇಂಥ ಹೊಸ ರೂಪಗಳಿಗೆ ಜಾನಪದ ನೀಡಿದ ಪ್ರೇರಣೆ, ಪ್ರಭಾವಗಳು ಅದರ ಪ್ರಾಧಾನ್ಯವನ್ನು ಸಾರುತ್ತವೆ. ಕನ್ನಡದ ಸಂದರ್ಭದಲ್ಲಿ ಕಾವ್ಯ ಪಡೆದುಕೊಂಡು ಬಂದ ಪ್ರೇರಣೆ, ಪ್ರಭಾವಗಳಿಗೆ ಒಟ್ಟು ದೇಶೀಯ ಕಾಣ್ಕೆಯನ್ನು ದೂರವಿಟ್ಟು ನೋಡದೆ, ಅದರ ಒಳಗಡೆಯೇ ನಡೆಯುತ್ತಿದ್ದ ಈ ಚಲನಶೀಲತೆಯನ್ನು ಕಾವ್ಯದ ಜೀವಂತಿಕೆಗೆ ಕಾರಣವಾದ ಕಾಣ್ಕೆಗಳನ್ನು ದಾಖಲಿಸಬೇಕಾಗಿದೆ.

ವಸಾಹತೀಕರಣಗೊಂಡ ದೇಶಗಳಲ್ಲಿ ವಿಜೇತರ ಸಂಸ್ಕೃತಿಯ ಮಾದರಿಗಳು ವಿವೇಚನೆಯಿಲ್ಲದೆ ಪಡೆಯುವಂತೆ ಸಾಹಿತ್ಯ ತತ್ವಗಳನ್ನು ಪಡೆದುಕೊಂಡಾಗ ನಿರ್ಮಾಣಗೊಳ್ಳುವ ಅತಂತ್ರ ಭಾವನೆಯೇ ದೇಸಿವಾದದ ಒಲವಿಗೆ ಕಾರಣವಾಗಿದೆ. ಕನ್ನಡ ನವೋದಯದ ಕೂಸನ್ನು ಶೆಲ್ಲಿ, ವಡ್ಸ್ವವರ್ತ, ಬ್ರಾಡ್ಲೆಯರ ಸಾಹಿತ್ಯ ತತ್ವಗಳ ತೊಟ್ಟಿಲು ಪೊರೆಯಿತು ಎಂದು ಹೇಳುವ ರಹಮತ್ ತರೀಕೆರೆ ಅವರು ಆದರೂ ನವೋದಯದ ಬರಹಗಾರರು ದೇಸಿ ಪರಂಪರೆಯ ಹೊಕ್ಕಳು ಬಳ್ಳಿಯನ್ನು ಕತ್ತರಿಸಿಕೊಂಡಿರಲಿಲ್ಲ ಎನ್ನುವಲ್ಲಿ ನವೋದಯಕ್ಕೆ ಜೀವ ಚೇತನವನ್ನು ದೇಸಿಯತೆಯೇ ನೀಡಿತೆನ್ನುವುದನ್ನು ಪ್ರಧಾನವಾಗಿ ಪ್ರಮಾಣಿಕರಿಸುವುದಿದೆ. ಹೀಗೆ ನಮ್ಮ ಕವಿಗಳು ಜನಪದದತ್ತ ಕಾವ್ಯ ಸಂವಹವನ್ನು ವಿಸ್ತರಿಸಿಕೊಂಡ ನೆಲೆಗಳು ಹುಟ್ಟುಹಾಕಿದ ಕೊಡುಗೆಗಳು ಇಲ್ಲಿ ಜನಪರವಾದದ್ದು ಜನಪದದ ಮಹತ್ವ ಸಾರುತ್ತವೆ. ಒಬ್ಬ ಕವಿಯ ಅಥವಾ ಆ ಕಾಲದ ಕವಿಗಳ ಸಾಹಿತ್ಯ ದೇಸಿಯವಾಗುವುದು ಎಂದರೆ ಕವಿ ತಾನು ಬೆಳೆದು ಬಂದ ಸಮಾಜ, ಸಂಸ್ಕೃತಿ, ಪರಂಪರೆಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು, ಅವುಗಳೊಂದಿಗೆ ಆತ್ಮೀಯವಾದ ಸೃಜನಶೀಲ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು, ನಮ್ಮ ಸಾಹಿತ್ಯದ ಪಾಶ್ಚಾತ್ಯೀಕರಣದ ತೀವ್ರತೆಯ ಬಗ್ಗೆ ಎಚ್ಚರವಹಿಸುವುದು, ನಮ್ಮ ಪರಂಪರೆಯಲ್ಲಿಯ ಜೀವಂತಿಕೆಯು, ಅರ್ಥಪೂರ್ಣವೂ ಆದ ನೆಲೆಗಳನ್ನು ಉಳಿಸಿಕೊಂಡು ಅವುಗಳನ್ನು ಇಂದಿನ ಅಗತ್ಯತೆಗೆ ತಕ್ಕಂತೆ ಹೊಸ ರೀತಿಯಲ್ಲಿ ಹೊಸ ಅರ್ಥಕ್ಕಾಗಿ ಬಳಸಿ, ಬೆಳೆಸಿ ಭಾರತೀಯವಾಗಿ ವಿಶಿಷ್ಟವಾದ ಸಾಹಿತ್ಯ ಪರಂಪರೆಯೊಂದನ್ನು ನಿರ್ಮಿಸುವುದು.

ಕನ್ನಡ ನವೋದಯ ಕಾವ್ಯ ಈ ಕಾರ್ಯವನ್ನು ತುಂಬಾ ಎಚ್ಚರದಿಂದಲೇ ಮಾಡಿತು. ಒಟ್ಟಾರೆ ಕನ್ನಡ ಸಾಹಿತ್ಯವು ಹಂತ ಹಂತದಲ್ಲೂ ಪಾಶ್ಚಾತ್ಯ ಪ್ರೇರಣೆಯಿಂದಲೇ ಹೊಸ ರೂಪಗಳನ್ನು ಆವಿಷ್ಕಾರಗೊಳಿಸಿಕೊಂಡಿತೆನ್ನುವುದನ್ನು ಬದಿಗಿಟ್ಟು ಇಲ್ಲಿ ಮೂಡಿದ ಹಲವು ನೆಲೆಗಳಲ್ಲಿ ನಡೆದ ಪ್ರಯೋಗಗಳು ಮುಖ್ಯವಾಗಬೇಕಿದೆ. ಸ್ಥಳೀಯ ಕಾವ್ಯ ಸಂವಹನ ಉಂಟುಮಾಡಿದ ಜಾಗೃತಿ ಯ ಕಾರಣವಾಗಿ ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಒಳಗಡೆ ನಡೆದ ಹೊಸ ಸಂಸ್ಕೃತಿಯ ಬೇರಿನಾಳಕ್ಕೆ ಇಳಿದ ದೇಸಿ ಸಂಸ್ಕೃತಿಯ ಜೀವರಸ ಒಟ್ಟು ಚೇತನಕ್ಕೆ ಕಾರಣವಾಯಿತು. ಹಾಗಾಗಿ ಹೊಸತನದ ವೈಭವೀಕರಣದಲ್ಲಿ ಕಾರಣವಾದ ಸ್ಥಳೀಯ ಕಾವ್ಯ ಪ್ರಕಾರಗಳನ್ನು ನಿರ್ಲಕ್ಷಿಸದೆ ಪ್ರಧಾನ ಆಕರವಾಗಿ ಕಾಣುವ ಮತ್ತು ಗುರುತಿಸಿ ಪ್ರಕಟಪಡಿಸುವ ಜವಾಬ್ದಾರಿಯೊಂದಿಗೆ ಇಂದು ಹೊಸದಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮುರಿದು ಕಟ್ಟಬೇಕಾಗಿದೆ. ಸಮ್ಮೇಳನವು ಈ ದಿಸೆಯಲ್ಲಿ ತನ್ನ ಚಿಂತನೆಗೆ ಅವಕಾಶಗಳನ್ನು ತೆರೆದಿಡಬೇಕಾಗಿದೆ.

‍ಲೇಖಕರು G

9 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading