ಕೊನೆಯ ಭೇಟಿ
ನವೀನ್ ಮಧುಗಿರಿ
ಬಹುಶಃ ಇದು ನಮ್ಮ
ಕೊನೆಯ ಭೇಟಿ
ಅದೇ ಮಾಮೂಲಿ ದರ್ಶಿನಿಯಲ್ಲಿ
ಒಂದೇ ಮಸಾಲೆ ದೋಸೆ
ಒಂದು ಕಪ್ ಕಾಫೀ
ಅರ್ಧರ್ಧ ತಿನ್ನೋಣ
ಒನ್ ಬೈಟು ಕುಡಿಯೋಣ
ಇಷ್ಟು ದಿನಗಳ ನಮ್ಮ ಆಚರಣೆ
ಕೊನೆಯ ಭೇಟಿಯಲ್ಲಿ
ಬದಲಾಗದಿರಲಿ

ಮನಸುಗಳು ಸತ್ತ
ದೇಹಗಳ ದೆವ್ವ ನಾವಿಂದು
ಅಂಟಿಕೊಂಡಿರುವ ಆತ್ಮಗಳ
ಹರಿದುಕೊಳ್ಳಬೇಕು
ಅಕಸ್ಮಾತ್
ನಾವು ಹಂಚಿಕೊಂಡ ಕನಸುಗಳು
ಕೈ ಹಿಡಿದು ಅತ್ತರೆ
ಬೆನ್ನಿಗೆರಡು ಬಾರಿಸಿ
ಕಿವುಡರಾಗೋಣ
ಮತ್ತೆ ಮನಸು ಕರಗಿ
ನಾವು ಒಂದಾದರೆ
ನಮ್ಮಿಬ್ಬರಿಗೇ ತೊಂದರೆ
ಹಿಂತಿರುಗಿ ನೋಡದೇ
ಹೊರಟು ಬಿಡಬೇಕು
ಮನಸಿನ ಕದ ಮುಚ್ಚಿಟ್ಟು
ನೆನಪುಗಳು ಒಳಗಡಿಯಿಟ್ಟರೆ ಕಷ್ಟ
ನೋವುಗಳ ಬೀಜವದು
ಇಂದು ನಾವು ಕೂತೆದ್ದ ಜಾಗದಲ್ಲಿ
ನಾಳೆ ಹೊಸ ಪ್ರೇಮಿಗಳು
ಬಂದು ಕೂರಬಹುದು






0 Comments
Trackbacks/Pingbacks