'ಇಂಥ ರಾಷ್ಟ್ರಗಳಲ್ಲಿ ಮನುಷ್ಯರಾಗಿ ಬೆಳೆಯುವುದು ಕಷ್ಟ' – ಜಿಪಿ ಬಸವರಾಜು

ಜಿ ಪಿ ಬಸವರಾಜು

ಒಂದು ರಾಷ್ಟ್ರದ ಪ್ರಗತಿಯನ್ನು ಗುರುತಿಸುವಾಗ ಆ ರಾಷ್ಟ್ರದ ಉತ್ಪಾದನೆಯ ಮಾನದಂಡವನ್ನು ಬಳಸಿ ಅರ್ಥವ್ಯವಸ್ಥೆ ಹೇಗಿದೆ ಎಂದು ನೋಡುತ್ತಾರೆ. ಜಿಡಿಪಿ ಎಷ್ಟು ಹೆಚ್ಚಾಗಿದೆ ಎಂದು ಗುರುತಿಸುತ್ತಾರೆ. ತಲಾವಾರು ಆದಾಯ, ರಫ್ತು ಪ್ರಮಾಣ ಇತ್ಯಾದಿ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆ ರಾಷ್ಟ್ರದ ಬೆಳವಣಿಗೆಯನ್ನು ನಿರ್ಧರಿಸುತ್ತಾರೆ. ಅಕ್ಷರಜ್ಞಾನ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕೆಗಳು, ಕೃಷಿ, ಗಣಿಗಾರಿಕೆ ಇತ್ಯಾದಿ ಹಲವಾರು ಸಂಗತಿಗಳನ್ನು ಗಮನಿಸುವುದೂ ಉಂಟು. ಭಾರತ ಕಳೆದ ಕೆಲವಾರು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ರಾಜಕಾರಣಿಗಳ ಮಾತುಗಳನ್ನು ಕೇಳಿದರೂ ಸಾಕು, ಅದು ಗೊತ್ತಾಗಿಬಿಡುತ್ತದೆ. ಈ ರಾಜಕಾರಣಿಗಳಿಗೆ ಅಂಕಿ ಅಂಶಗಳನ್ನು ಒದಗಿಸುವ ಆಡಳಿತ ಯಂತ್ರದ ನುಡಿಗಟ್ಟೂ ಇಂಥ ‘ಪ್ರಗತಿ’ಯನ್ನು ತಿಳಿಸುತ್ತದೆ. ಅಂಕಿಅಂಶಗಳೇ ಒಂದು ರಾಷ್ಟ್ರದ ಬೆಳವಣಿಗೆಯನ್ನು ಗುರುತಿಸಲು ಇರುವ ಪ್ರಮುಖ ಸಂಗತಿಗಳೇನೋ ಎಂಬ ಭ್ರಮೆಯೂ ಹುಟ್ಟಿಬಿಡುವ ಸಾಧ್ಯತೆ ಇರುತ್ತದೆ.
ರಾಷ್ಟ್ರದ ನೈತಿಕ ಶಕ್ತಿಯನ್ನಾಗಲಿ, ಅಲ್ಲಿರುವ ಬದುಕು, ಸಂಸ್ಕೃತಿ, ಸಾಹಿತ್ಯ, ಸಂಗೀತ ಇತ್ಯಾದಿ ಅಂಶಗಳ ಒಳಸತ್ವಗಳನ್ನಾಗಲೀ ಗುರುತಿಸಿಕೊಳ್ಳುವ, ಅದರೊಳಗೇ ಇರಬಹುದಾದ ಕೊರತೆಗಳನ್ನು ತುಂಬಿಕೊಳ್ಳುವ ಪ್ರಯತ್ನವನ್ನು ಯಾವ ಸರ್ಕಾರವೂ ಮಾಡಿದ ಉದಾಹರಣೆಗಳು ಕಡಿಮೆ. ಇಂಥ ಒಂದು ಪ್ರಯತ್ನ ನಡೆದ ಕೂಡಲೇ ಅನೇಕ ಹುಳುಕುಗಳು ಹೊರಬಿದ್ದು, ಆರ್ಥಿಕವಾಗಿ ಬಲಿಷ್ಠವಾದ ರಾಷ್ಟ್ರವೂ ತಲೆತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಬಹುದು.
ಉದಾಹರಣೆಗೆ ಇವತ್ತು ನಮ್ಮ ರಾಷ್ಟ್ರದ ನಿಜರೂಪವನ್ನೇ ಗಮನಿಸಿ: ಇಲ್ಲಿ ಒಂದು ಹೆಣ್ಣುಮಗು ಶಾಲೆಗೆ ಹೋಗಬೇಕೆಂದರೆ ತಂದೆತಾಯಿಗಳು ಹಲವಾರು ಬಗೆಯ ಚಿಂತೆಗಳಿಗೆ ಒಳಗಾಗಬೇಕಾಗುತ್ತದೆ. ಮನೆಯಿಂದ ಶಾಲೆಗೆ ಈ ಮಗು ಹೇಗೆ ಹೋಗಬೇಕು, ಸುರಕ್ಷಿತ ದಾರಿಗಳು ಎಲ್ಲಿವೆ, ಬಸ್ಸೊ, ಆಟೋ, ನಡೆದು ಹೋದರೆ ತೊಡಕುಗಳೇನು, ಶಾಲೆಯ ವಾತಾವರಣ ಹೇಗಿದೆ ಇತ್ಯಾದಿ. ಶಾಲೆಯ ಆಡಳಿತವರ್ಗಕ್ಕೂ ಇಂಥವೇ ತಲೆನೋವುಗಳು. ಶಿಕ್ಷಣ ಇಲಾಖೆ ಸುರಕ್ಷತೆಗಾಗಿ ತರುವ ಹಲವಾರು ಕ್ರಮಗಳು, ಪ್ರತಿಶಾಲೆಯಲ್ಲಿಯೂ ಸಿಸಿ ಕ್ಯಾಮೆರಾ, ಭದ್ರತಾ ಸಿಬ್ಬಂದಿ ಇತ್ಯಾದಿ. ಇಷ್ಟಾದರೂ ಅಧ್ಯಾಪಕ ವರ್ಗ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ಒಂದು ಶಾಲೆಯ ಮರ್ಯಾದೆ ನಿಂತಿರುತ್ತದೆ. ಮಕ್ಕಳು ಬಸ್ಸಿನಲ್ಲಿ ಹೋಗುವುದಾದರೆ ಉಳಿದ ಪ್ರಯಾಣಿಕರ ವರ್ತನೆ, ಕಂಡಕ್ಟರ್ ಡ್ರೈವರ್ ವರ್ತನೆ ಹೀಗೆ ಸಮಸ್ಯೆಗಳು ಸಾಲುಸಾಲಾಗಿ ಎದುರು ನಿಲ್ಲುತ್ತವೆ. ಈ ಎಲ್ಲ ಭದ್ರಕೋಟೆಯನ್ನು ಒಡೆದು ಹುಡುಗಿಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಇಂಥದನ್ನು ಒಂದು ರಾಷ್ಟ್ರ ತಡೆಯುವುದು ಹೇಗೆ?

ಭ್ರಷ್ಟಾಚಾರ ಎನ್ನುವುದೂ ಇದೇ ಮಾದರಿಯದು. ಹಲವಾರು ಸುತ್ತಿನ ಕೋಟೆಗಳನ್ನು ಕಟ್ಟಿದರೂ ಅದನ್ನು ಭೇದಿಸುವುದು ಭ್ರಷ್ಟಾಚಾರಿಗಳಿಗೆ ಸುಲಭ. ವಿಚಕ್ಷಣ ದಳ, ಲೋಕಾಯುಕ್ತ, ಬಲೆಬೀಸುವ ಪೊಲೀಸರು, ನ್ಯಾಯಾಲಯ ಯಾವುದು ಇವರಿಗೆ ಲೆಕ್ಕವಲ್ಲ. ಭ್ರಷ್ಟಾಚಾರವನ್ನು ತಡೆಯುವುದು ಹೇಗೆ? ರಾಜಕಾರಣಿಗಳೇ, ಅಧಿಕಾರಿಗಳೇ, ಪೊಲೀಸರೇ, ನ್ಯಾಯಾಧೀಶರೇ, ವಕೀಲರೇ-ಯಾರು ಈ ಭ್ರಷ್ಟಚಾರದಿಂದ ಮುಕ್ತಿಪಡೆದಿದ್ದಾರೆ. ಕೊಡುವವರಿದ್ದರೆ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ ಎಂಬ ಸಾಮಾನ್ಯ ಹೇಳಿಕೆಯೊಂದು ಇದೆ. ಕೋಟಿಗಟ್ಟಲೆ ಅವರು ನುಂಗುತ್ತಿರುವಾಗ ಪುಡಿಗಾಸಿಗೆ ಕೈಚಾಚುತ್ತಿರುವ ನಮ್ಮನ್ನೇಕೆ ಕೆಂಗಣ್ಣಿನಿಂದ ನೋಡುತ್ತೀರಿ ಎಂದು ಪೊಲೀಸರು, ಬಸ್ಕಂಡಕ್ಟರ್, ನರ್ಸುಗಳು, ವೈದ್ಯರು, ಅಧ್ಯಾಪಕರು, ಗುಮಾಸ್ತರು ಕೇಳುತ್ತಾರೆ. ‘ಅವರು’ ಎಂದರೆ ರಾಜಕಾರಣಿಗಳು. ಯಾವ ರಾಜಕಾರಣಿಯನ್ನೇ ನೋಡಿ ಅವನ ಸುತ್ತ ಒಂದು ವಿಷವರ್ತುಲ ಇದ್ದೇ ಇರುತ್ತದೆ. ಯಾವ ರಾಜಕಾರಣಿಯೂ ಹಣಕ್ಕೆ ಕೈಚಾಚಬೇಕಾಗಿಲ್ಲ. ಅದೇ ಬಂದು ಬೀಳುತ್ತದೆ. ಸಹಿಮಾಡಬೇಕು, ಒಪ್ಪಿಗೆ ನೀಡಬೇಕು, ಯೋಜನೆಗಳನ್ನು ಮಂಜೂರು ಮಾಡಬೇಕು. ಪ್ರತಿಯೊಂದು ಯೋಜನೆಯಲ್ಲೂ ಅವರವರ ಪಾಲು ಅವರಿಗೆ ಮೀಸಲು.
ಹೀಗಿರುವಾಗ ಶುದ್ಧರಾಜಕಾಣಿಯನ್ನು ಎಲ್ಲಿಂದ ತರುವುದು. ಕಟ್ಟುನಿಟ್ಟಿನ ಅಧಿಕಾರಿ ಇದ್ದರೆ ಅವನಿಗೆ ವರ್ಗಾವಣೆ, ಹಲಬಗೆಯ ಕಿರುಕುಳ. ಇದೆಲ್ಲವನ್ನೂ ಸಹಿಸಿ ಅವನು ಅಥವಾ ಆಕೆ ನಿಷ್ಠೆಯಿಂದ ಕೆಲಸ ಮಾಡಲು ಮುಂದಾದರೆ ಅಂಥವರನ್ನು ಕೊಲೆಮಾಡಲಾಗುತ್ತದೆ. ಯಾರೂ ಅವರ ರಕ್ಷಣೆಯ ಮಾತನ್ನು ಆಡುವುದಿಲ್ಲ. ರಾಜಕೀಯ ಪಕ್ಷಗಳು, ಅವುಗಳ ನಿಧಿ, ಚುನಾವಣೆ, ಮತದಾರರ ಓಲೈಕೆ ಇವುಗಳ ಸುತ್ತ ಸುತ್ತುತ್ತ, ತನಗೆ, ತನ್ನ ಹಿಂಬಾಲಕರಿಗೆ, ತನ್ನ ಪಕ್ಷಕ್ಕೆ, ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧುಬಾಂಧವರು ಹೀಗೆ ದೊಡ್ಡ ಪರಿವಾರಕ್ಕೆ ಹಣ, ಆಸ್ತಿ, ಸಂಪತ್ತು ಶೇಖರಿಸುವುದರಲ್ಲೇ ಹಗಲು ರಾತ್ರಿಗಳನ್ನು ಕಳೆಯಬೇಕಾದ ರಾಜಕಾರಣಿ ಜನರಿಗಾಗಿ, ಅವರ ಕಲ್ಯಾಣಕ್ಕಾಗಿ ಕೆಲಸಮಾಡುತ್ತಾನೆಂದರೆ ಅದನ್ನು ನಂಬುವುದು ಹೇಗೆ?
ಜನ ಸಾಮಾನ್ಯರೆಂಬುವವರಂತೂ ನೈತಿಕತೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇಡೀ ಸಮಾಜವೇ ಸುಖದ ಸುಪ್ಪತಿಗೆಯಲ್ಲಿ ಮೈಚಾಚಲು ಹವಣಿಸುತ್ತಿರುವಾಗ ಎಲ್ಲದರಿಂದಲೂ ವಂಚಿತರಾದ ಸಾಮಾನ್ಯ ಜನ ಹೇಗೆ ತಾನೆ ನೈತಿಕತೆಯ ಮಾತುಗಳನ್ನು ಆಡುತ್ತಾರೆ? ನೀನು ಕೆಲಸ ಮಾಡುವುದೇ ಬೇಡ, ಇಲ್ಲಿ ಸಹಿ ಹಾಕು, ಅರ್ಧ ಹಣ ನಿನಗೆ, ಅರ್ಧ ನನಗೆ ಎಂದು ಅಧಿಕಾರಿಯೊಬ್ಬ ಆಸೆ ತೋಡಿಸಿದರೆ ಈ ಶ್ರೀಸಾಮಾನ್ಯ ಹೇಗೆ ತಾನೇ ಅದನ್ನು ಪ್ರತಿಭಟಿಸಿಯಾನು? ಪ್ರತಿಭಟಿಸಿದರೆ ಯೋಜನೆಯೂ ಇಲ್ಲ, ದಿನದ ದುಡಿಮೆಯೂ ಇಲ್ಲ. ಇದನ್ನು ತಡೆಯುವವರು ಯಾರು?
ಅರ್ಹತೆಯಿಲ್ಲದೆ ಅಂತಸ್ತು ಸಿಕ್ಕಬೇಕು, ಪಾಠಮಾಡದೆ ವೇತನ ಬೇಕು, ಓದದೆ ಅಂಕಗಳು ಬೇಕು, ತನ್ನ ಬಳಿಗೆ ಬರುವ ರೋಗಿಯ ಚರ್ಮವನ್ನು ಸುಲಿದೇ ಮನೆಗೆ ಕಳುಹಿಸಬೇಕು, ಕಾನೂನು ಎಂಬುದು ಕಮಾಯಿಗೆ ದಾರಿಮಾಡಿಕೊಡಬೇಕು. ದುಡಿದು ತಿನ್ನುವುದು ಕಾಯಕದ ತತ್ವ ಎನ್ನುವ ಸಿದ್ಧಾಂತವನ್ನು ಇತಿಹಾಸದಲ್ಲಿ ಮಾತ್ರ ಹುಡುಕಬೇಕು. ವರ್ತಮಾನವೆಂದರೆ ಬೇಕುಗಳ ಸಂತೆ. ದುಡ್ಡುಕೊಟ್ಟು ಕೊಳ್ಳುವುದಲ್ಲ. ಸಿಕ್ಕಸಿಕ್ಕಲ್ಲಿ ಕೊಳ್ಳೆಹೊಡೆದು ಬಾಚಿಕೊಳ್ಳುವುದು.
ಇದನ್ನು ಶುದ್ಧೀಕರಿಸುವುದು ಹೇಗೆ? ಒಂದು ದಿನ ಪೊರಕೆ ಹಿಡಿದು ಮಾಧ್ಯಮದವರಿಗೆ ಪೋಸ್ ಕೊಟ್ಟು ಫ್ಲಾಷ್ಲೈಟ್ಗಳಲ್ಲಿ ಮಿಂಚಿದರೆ ರಾಷ್ಟ್ರ ಶುದ್ಧವಾಗುತ್ತದೆಯೇ. ಒಳಗಿನ ಮಾತಿರಲಿ, ಹೊರಗಿನ ಭಾರತವೂ ಸ್ವಚ್ಛವಾಗಲಿಲ್ಲವಲ್ಲಾ? ಹಾಗಾದರೆ ಈ ರಾಷ್ಟ್ರದ ಭವಿಷ್ಯವೇನು?
ಇಂಥ ಪ್ರಶ್ನೆಗಳನ್ನು ಎತ್ತಿದ ಕೂಡಲೇ ಪಠ್ಯಗಳಲ್ಲಿ ನೈತಿಕ ಪಾಠಗಳನ್ನು ಸೇರಿಸಿ ಎಂದು ಹೇಳುತ್ತಾರೆ ನೀತಿ ಚಿಂತಾಮಣಿಗಳು. ಅಂದರೆ ಎಳೆಯರು ಓದಿ ನೀತಿಯನ್ನು ರೂಢಿಸಿಕೊಳ್ಳಬೇಕು. ಚಿಂತಾಮಣಿಗಳು ಹೆಜ್ಜೆ ಇಟ್ಟಲ್ಲೆಲ್ಲ ಭ್ರಷ್ಟಾಚಾರದ ಕೊಳೆಯೇ ತುಂಬಿತುಳುಕುತ್ತಿರುವಾಗ ಎಳೆಯರು ಇದನ್ನೆಲ್ಲ ದಾಟಿಕೊಂಡು, ಕೇವಲ ಪಠ್ಯಗಳಲ್ಲಿರುವ ಅಕ್ಷರಗಳಿಗೆ ಕಣ್ಣುನೆಟ್ಟು ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು. ಇದು ಸಾಧ್ಯವೇ?
ಯೋಗ್ಯನಾಗಿ ಬದುಕಬೇಕು, ಲಂಚಕೊಡದೆ ನ್ಯಾಯಬದ್ಧವಾಗಿ ನಡೆಯಬೇಕು, ನನ್ನ ದುಡಿಮೆಯ ಹಣ ಮಾತ್ರ ನನಗೆ, ಪರರ ಗಂಟು ನನಗೆ ಬೇಡ ಎಂಬ ಅಪರೂಪದ ವ್ಯಕ್ತಿಗಳು ಈ ನಾಡಿನಲ್ಲಿ ಹುಚ್ಚರಾಗಿ ಕಾಣಿಸುತ್ತಾರೆ; ವ್ಯವಹಾರಜ್ಞಾನವಿಲ್ಲದವರಾಗಿ ಕಾಣುತ್ತಾರೆ. ಬದುಕುವ ದಾರಿ ತಿಳಿಯದ ಗುಗ್ಗುಗಳಾಗಿಯೂ ಕಾಣಿಸುತ್ತಾರೆ. ಪ್ರಮಾಣಿಕ ಬದುಕಿಗೆ ಹಂಬಲಿಸುವವರೇ ಇಲ್ಲಿ ಸಲ್ಲದವರಾಗುತ್ತಾರೆ.
ಜಿಡಿಪಿಯನ್ನು ಬದಿಗೆ ಸರಿಸಿ, ಒಂದು ದಿನವಾದರೂ ಇಂಥ ಪ್ರಶ್ನೆಗಳಿಗೆ ಎದುರಾಗದಿದ್ದರೆ ಒಂದು ರಾಷ್ಟ್ರ ಅರಳುವುದಾದರೂ ಹೇಗೆ? ಈ ಕೆಲಸವನ್ನು ಯಾರು ಮಾಡಬೇಕು?
ಇಂಥ ವಿಚಿತ್ರ ಸನ್ನಿವೇಶದಲ್ಲಿ ನಮ್ಮ ಮಕ್ಕಳು ಬೆಳೆಯಬೇಕಾಗಿದೆ; ಅವರ ಭವಿಷ್ಯ ಚಿಗುರಬೇಕಾಗಿದೆ. ಬಂಡೆಯ ಮೇಲೆ ಚಿಗುರೊಡೆಯುವುದು ಸುಲಭ; ಇಂಥ ರಾಷ್ಟ್ರಗಳಲ್ಲಿ ಮನುಷ್ಯರಾಗಿ ಬೆಳೆಯುವುದು ಕಷ್ಟ.
 

‍ಲೇಖಕರು G

June 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Anonymous

    ಯೋಗ್ಯನಾಗಿ ಬದುಕಬೇಕು, ಲಂಚಕೊಡದೆ ನ್ಯಾಯಬದ್ಧವಾಗಿ ನಡೆಯಬೇಕು, ನನ್ನ ದುಡಿಮೆಯ ಹಣ ಮಾತ್ರ ನನಗೆ, ಪರರ ಗಂಟು ನನಗೆ ಬೇಡ ಎಂಬ ಅಪರೂಪದ ವ್ಯಕ್ತಿಗಳು ಈ ನಾಡಿನಲ್ಲಿ ಹುಚ್ಚರಾಗಿ ಕಾಣಿಸುತ್ತಾರೆ; ವ್ಯವಹಾರಜ್ಞಾನವಿಲ್ಲದವರಾಗಿ ಕಾಣುತ್ತಾರೆ. 100%ನಿಜ. ಅದಕ್ಕಾಗಿ “ಲೋಕದ ಡೊಂಕವ” ಎಂದು ನಾನು ಮಾಡುವ ಕೆಲಸದಲ್ಲಿ ನಂಬಿಕೆ ಇಟ್ಟು,ಕೈಲಾದ ಮಟ್ಟಿಗೆ ನಮ್ಮ ಆತ್ಮಕ್ಕೆ ಸಾಕ್ಷಿಯಾಗಿ ಜೀವನ ನಡೆಸಬೇಕು.ನಮ್ಮನ್ನು ನಾವು ಹೊರಗಿನಿಂದಲೇ ಬರುವ ರಾಕ್ಷಸ ದಾಳಿಗಳಿಂದ ರಕ್ಷಿಸಿಕೊಳ್ಳಬೇಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: