ಮೊನ್ನೆ ಜೂನ್‌ 15ಕ್ಕೆ ಭಾರತೀಸುತರ ನೂರನೇ ಹುಟ್ಟುಹಬ್ಬ

ಜೋಗಿ

ಮೊನ್ನೆ ಮೊನ್ನೆ ಮಡಿಕೇರಿಯಲ್ಲೊಂದು ಪುಟ್ಟ ಸಭೆ ನಡೆಯಿತು. ಅಲ್ಲಿ ಸೇರಿದವರೆಲ್ಲ ಭಾರತೀಸುತರನ್ನು ಈ ತಲೆಮಾರು ಮರೆತೇಬಿಟ್ಟಿದೆ ಎಂದು ಬೇಸರಪಟ್ಟುಕೊಂಡರು. ಅದಕ್ಕೇನು ಸಂದರ್ಭ ಎಂದು ಹುಡುಕಾಡುವ ಹೊತ್ತಿಗೆ ಕತೆಗಾರ ಕೆ. ಕೆ. ಗಂಗಾಧರನ್‌ ಎಸ್ಸೆಮ್ಮೆಸ್‌ ಕಳಿಸಿ, ಇದು ಭಾರತೀಸುತರ ಶತಮಾನೋತ್ಸವ ವರುಷ ಅಂದರು.
ನೋಡಿದರೆ, ಮೊನ್ನೆ ಜೂನ್‌ 15ಕ್ಕೆ ಭಾರತೀಸುತರ ನೂರನೇ ಹುಟ್ಟುಹಬ್ಬ ಆಗಿಹೋಗಿದೆ.

ಸರ್ಕಾರ ಭಾರತೀಸುತರ ಶತಮಾನೋತ್ಸವ ಆಚರಿಸಿಲ್ಲ, ಸಾಹಿತ್ಯ ಪರಿಷತ್ತು ಆ ಕೆಲಸ ಮಾಡಿಲ್ಲ ಅಂತೆಲ್ಲ ಕೊರಗುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಆಚರಣೆ ಕಾಟಾಚಾರದ್ದೇ ಆಗಿರುತ್ತದೆ. ಆ ಸಮಾರಂಭಕ್ಕೆ ಬರುವ ಅತಿಥಿಗಳು ಭಾರತೀಸುತರ ಪುಸ್ತಕಗಳನ್ನೇನೂ ಓದಿಕೊಂಡಿರುವುದಿಲ್ಲ. ಕೇವಲ ವಿಶೇಷಣಗಳ ಮೂಲಕ ಆತನನ್ನು ಬಣ್ಣಿಸಿ ಹೊರಟು ಹೋಗುತ್ತಾರೆ. ಅದರಿಂದ ಆ ಲೇಖಕನ ಮನೆಯವರಿಗೆ ಕಿಂಚಿತ್‌ ಸಂತೋಷ ಉಂಟಾಗಬಹುದು. ಅದರಿಂದಾಚೆಗೆ ಯಾವ ಲಾಭವೂ ಉಪಯೋಗವೂ ಇಲ್ಲ.

ನಿಜಕ್ಕೂ ಒಬ್ಬ ಲೇಖಕನಿಗೆ ಮರುಜೀವ ಕೊಡಬೇಕಾದವರು ಓದುಗರು. ಅದಕ್ಕೆ ನೆರವಾಗಬೇಕಾದವರು ಪ್ರಕಾಶಕರು. ಭಾರತೀಸುತರ ಕಾದಂಬರಿಗಳನ್ನು ಮರುಮುದ್ರಣ ಮಾಡಿದ್ದನ್ನು ಇತ್ತೀಚೆಗೆ ನೋಡಿದೆ. ಸುಮಾರು 32 ಕಾದಂಬರಿಗಳನ್ನು ಬರೆದ ಭಾರತೀಸುತ ಸಣ್ಣಕತೆಗಳನ್ನೂ ಬರೆದಿದ್ದಾರೆ. ಅವರ ಹುಲಿಯ ಹಾಲಿನ ಮೇವು, ಬಯಲುದಾರಿ, ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಗಳೆಲ್ಲ ಸಿನೆಮಾಗಳಾಗಿವೆ. ಎಡಕಲ್ಲು ಗುಡ್ಡದ ಮೇಲೆ ಆ ಕಾಲಕ್ಕೆ ಅತ್ಯಂತ ಕ್ರಾಂತಿಕಾರಿ ಕತೆ.
ಭಾರತೀಸುತ ಕೇವಲ ಕಾದಂಬರಿಗಾರ ಮಾತ್ರವಲ್ಲ. ಸ್ವಾತಂತ್ರ ಹೋರಾಟಕ್ಕೆ ಧುಮುಕಿದವರು. ಕಣ್ಣಾನೂರು, ತಿರುಚಿನಾಪಳ್ಳಿಯ ಜೈಲುಗಳಲ್ಲಿ ಇದ್ದವರು. ಬಡತನ ಕಂಡವರು. ಪಂಜೆ ಮಂಗೇಶರಾಯರ ಶಿಷ್ಯರಾಗಿದ್ದವರು. ಕಾಫಿ ತೋಟದಲ್ಲಿ ರೈಟರ್‌ ಆಗಿದ್ದವರು. ಕನ್ನಡ ಪಂಡಿತರಾಗಿ, ಶಿಕ್ಷಕರಾಗಿ ಹೆಸರಾಗಿದ್ದವರು. ಅವರ ಕಾದಂಬರಿಗಳನ್ನು ನಾನು ಈಗಲೂ ತನ್ಮಯನಾಗಿ ಓದಿಯೇನು.
ಅವರ ಶತಮಾನೋತ್ಸವವನ್ನು ಹೇಗೆ ಆಚರಿಸಬೇಕು? ನಮಗೆ ಗೊತ್ತಿಲ್ಲ. ನಮ್ಮ ಅತ್ಯುತ್ತಮ ಕಾದಂಬರಿಕಾರ ನಮಗೆ ಅಪ್ರಸ್ತುತ ಆಗುತ್ತಿದ್ದಾನೆ ಎಂಬ ಮಾತನ್ನು ದುಃಖದಿಂದಲೋ ಬೇಸರದಿಂದಲೋ ಹೇಳಬೇಕಾಗಿ ಬರುವುದು ನಿಜವಾದ ದುರಂತ.
ಓದುವವರು ಕಮ್ಮಿಯಾಗಿದ್ದಾರೆ ಅನ್ನುವುದನ್ನು ಒಪ್ಪಿಕೊಂಡರು ಕೂಡ, ಅವರ ಕಾದಂಬರಿ ಆಧಾರಿತ ಸಿನೆಮಾಗಳ ಒಂದು ಚಿತ್ರೋತ್ಸವ ಇಟ್ಟುಕೊಂಡು ಅವರ ಕುರಿತೊಂದು ಕಾರ್ಯಕ್ರಮ ಮಾಡಬಹುದಲ್ಲ.
 

‍ಲೇಖಕರು G

June 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: