ಇಂಥ ಆವಲೋಕನಕ್ಕೆ ಅವರು ಸಿದ್ಧರಿದ್ದಾರೆಯೆ?…

ಮೊನ್ನೆ ಫಲಿತಾಂಶ ಪ್ರಕಟಣೆಗೆ ಒಂದು ದಿನ ಮೊದಲು ಸರಕಾರದಿಂದ ಒಂದು ಆದೇಶ ಹೊರಗೆ ಬಿತ್ತು.
ದಕ್ಷ ಅಧಿಕಾರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಹೊರಡಿಸಿದ್ದ ಸುತ್ತೋಲೆ ಅದು. ಮುಖ್ಯಮಂತ್ರಿಗೆ ಅವರ ಗೃಹ ಕಚೇರಿ ಇಲ್ಲವೇ ಪ್ರವಾಸದ ವೇಳೆ ಸಲ್ಲಿಕೆಯಾಗುವ ಜನಸಾಮಾನ್ಯರ ಅರ್ಜಿಯನ್ನು ಜೋಪಾನವಾಗಿ ಕಂಪ್ಯೂಟರೀಕರಣ ಮಾಡಿ, ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ, ಕುಂದು ಕೊರತೆಯನ್ನು ನೀಗಿಸಬೇಕು . ಏನು ಇಲ್ಲ ಅಂದರೂ ಸಂಬಂಧಪಟ್ಟವರಿಗೆ ಮಾಹಿತಿಯಾದರೂ ಹೋಗಬೇಕು ಎನ್ನುವುದು ಈ ಸುತ್ತೋಲೆಯ ಸಾರಾಂಶ.

ಆಡಳಿತದಲ್ಲಿ ಇಂಥ ಸುಧಾರಣೆ , ಸುತ್ತೋಲೆ ಸಹಜ.

ಆದರೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಇಂಥದ್ದೊಂದು ಸುತ್ತೋಲೆ ಹೊರಡಿಸಲು ಅಧಿಕಾರಕ್ಕೆ ಬಂದ ಒಂದು ವರ್ಷದವರೆಗೆ ಕಾಯಬೇಕಾಗಿದೆ ಬಂತಲ್ಲವ ಎನ್ನುವುದೇ ಇಲ್ಲಿಯ ಸೋಜಿಗ.
ಇದು ಸ್ವಲ್ಪ ಅತಿಶಯೋಕ್ತಿ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಮುಖ್ಯಮಂತ್ರಿ ತಮ್ಮ ಸುತ್ತ ಕಟ್ಟಿಕೊಂಡಿರುವ ಪಟಾಲಂ ಗಳ ರೀತಿನೀತಿ ನೋಡಿದ್ರೆ ಇದು ಸತ್ಯವೇ.

ಒಂದು ಕಾಲಕ್ಕೆ ಹಳ್ಳಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸಿದ ಕುಮಾರಸ್ವಾಮಿ ಇವರೇನಾ? ಎಂದು ಅನುಮಾನ ಬರಿಸುವಷ್ಟು ವಂದಿಮಾಗಧರಿಂದ ಸುತ್ತುವರೆಯಲ್ಪಟ್ಟ ನಾಯಕ. ಈ ಕಿಚನ್ ಕ್ಯಾಬಿನೆಟ್ ನಲ್ಲಿ ಸುಳ್ಳುಗಳನ್ನು ಆಕರ್ಷಕವಾಗಿ, ಉಪ್ಪುಖಾರ ಬೆರಿಸಿ ಮುಖ್ಯಮಂತ್ರಿಯ ಕಿವಿಗಳಿಗೆ ಹಿತವಾಗಿ, ವಸ್ತು ಸ್ಥಿತಿ ಎಷ್ಟೇ ಕಹಿಯಾಗಿದ್ದರೂ ಅದನ್ನೇ ತಿರುಚಿ, ಸಿಹಿಯಾಗಿ ಮುಖ್ಯಮಂತ್ರಿ ಪರ ಎಂಬಂತೆ ಬಿಂಬಿಸಿ ಹೇಳುವ, ಬಹುಪರಾಕ್ ಹೇಳಿಕೊಂಡು ಕಮಾಯಿ ಮಾಡಿಕೊಳ್ಳುವ, ದಂಧೆ ನಡೆಸುವ ಪಡೆಯೇ ಇದೆ.

ಉರಿಬಿಸಿಲಲ್ಲಿ ಜನ ಕಾದು ನಿಂತು ನೀಡುವ, ತಮ್ಮ ದುಃಖ ದುಮ್ಮಾನ ತುಂಬಿದ ನೋವಿನ, ನೆರವಿನ ಪತ್ರಗಳನ್ನು ಮುಖ್ಯಮಂತ್ರಿ ಕಳಕಳಿಯಿಂದ ಆಲಿಸಿ ಸ್ವೀಕರಿಸುತ್ತಾರೆ. ಕೆಲವು ಸಮಸ್ಯೆಗಳಿಗೆ ವೈಯುಕ್ತಿಕವಾಗಿ ನೆರವು ನೀಡುವ ಉದಾರತೆ ಇದೆ ಎನ್ನುವುದೂ ಸರಿ. ಆದರೆ ಮುಖ್ಯಮಂತ್ರಿ ಕೈ ದಾಟಿ ಅವರ ಆಪ್ತ ಕಾರ್ಯದರ್ಶಿ, ಸಹಾಯಕರ ಕೈಗೆ ಹೋದದ್ದೇ ತಡ ಈ ಅರ್ಜಿಗಳು ಕವಡೆ ಕಿಮ್ಮತ್ತು ಕಳೆದುಕೊಳ್ಳುತ್ತವೆ. ಮುಖ್ಯಮಂತ್ರಿ ಪಕ್ಕಕ್ಕೆ ಸರಿದಿದ್ದೆ ತಡ ಈ ಮಹಾನುಭಾವರು ಕಿಂಚಿತ್ತೂ ಮರುಕವೆ ಇಲ್ಲದೆ, ಅತ್ಯಂತ ಹೀನಾಯವಾಗಿ ಕಸದಬುಟ್ಟಿಗೆ, ಎಷ್ಟೋ ವೇಳೆ ಕಾರು ಚಲಿಸುವಾಗ ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಬಿಸಾಕಿದ ಉದಾಹರಣೆ ಇದೆ.

ಮುಖ್ಯಮಂತ್ರಿ ”ಒಳ್ಳೆಯವರೇ ಆಗಿದ್ದರೂ“ ತಮ್ಮ ಸುತ್ತ ಇಂಥ ಹೀನಾಯ ನಡವಳಿಕೆಯ ಸಹಾಯಕರನ್ನು ಸಚಿವರನ್ನು ಇಟ್ಟು ರಾಜ್ಯ ಆಳುವ ವೈಖರಿಗೂ, ಜನ ಬೇಸತ್ತು ಇವರ ಸಹವಾಸವೇ ಬೇಡ ಎಂದು ಸಾರಾಸಗಟು ತಿರಸ್ಕರಿಸಿ ಬರೋಬ್ಬರಿ 25 ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡುವ ರೀತಿಗೂ ಸಂಬಂಧ ಇಲ್ಲ ಎಂದು ಹೇಗೆ ಹೇಳುವುದು?

ಒಂದು ಸಣ್ಣ ಸುತ್ತೋಲೆಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ವಿವರಿಸಲು ಕಾರಣವಿದೆ. ಇವತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚಾರಿತ್ರಿಕವಾಗಿ ಧೂಳೀಪಟ ಆಗಿದೆ. ಜೆಡಿಎಸ್ ಅಂತೂ ನೆಲಕಚ್ಚಿದೆ.
ಅತ್ಯಂತ ಮಹತ್ವದ ಸಂದೇಶ ಸಾರುವ ಈ ಚುನಾವಣೆಯ ಫಲಿತಾಂಶವನ್ನು “ಮೋದಿ ಅಲೆ “ ಅಲ್ಲವೇ “ಹಿಂದುತ್ವದ ಪ್ರಯೋಗದ “ ಫಲ ಅಥವಾ ಇಡೀ ದೇಶಕ್ಕೆ ಇದು ಅನ್ವಯ ಎಂದು ಸಾರಾಸಗಟು ಅಭಿಪ್ರಾಯದೊಂದಿಗೆ ಉಡಾಫೆಯಿಂದ ತಳ್ಳಿಹಾಕುವ ಯತ್ನವೊಂದು ಮೈತ್ರಿ ಪಕ್ಷಗಳಲ್ಲಿ ಆರಂಭವಾಗಿದೆ.
ಇದು ಮತ್ತೆ ಅಧಿಕಾರಸ್ಥರ ಸುತ್ತ ಇರುವ “ಚಮಚಾಗಳು” ತಮ್ಮ ಬೇಳೆ ಬೇಯಿಸಿಕೊಳ್ಳಲು, ಅಧಿಕಾರಸ್ಥರನ್ನು ಮತ್ತೊಮ್ಮೆ ಭ್ರಮೆಯ ಕೂಪಕ್ಕೆ ತಳ್ಳಲು ಹೂಡುತ್ತಿರುವ ತಂತ್ರ ವಲ್ಲದೆ ಬೇರೇನೂ ಅಲ್ಲ.

ಮೋದಿ ಅಲೆ ಎನ್ನುವುದು ಮೇಲ್ನೋಟದ ಒಂದು ಅಂಶವಾದರೇ, ಜಾತ್ಯತೀತತೆಯ ಹೆಸರಲ್ಲಿ ಅಧಿಕಾರ ಹಂಚಿಕೊಂಡವರು ಕುರ್ಚಿ ಸಿಕ್ಕಿದ್ದೇ ತಡ ಜನರ ಆಶೋತ್ತರಗಳಿಗೆ ಎಳ್ಳು ನೀರು ಬಿಟ್ಟು ಮಾನ ಮರ್ಯಾದೆ ಇಲ್ಲದೇ “ಫೈವ್ ಸ್ಟಾರ್ ದರ್ಬಾರ್ “ ನಡೆಸಲು ಶುರುಮಾಡಿದ್ದು ಕೂಡಾ ಇದೀಗ ಧೂಳೀಪಟ ಆಗಲು ಮುಖ್ಯ ಕಾರಣ.

ಈ ವಾಸ್ತವದ ಎಚ್ಚರ ಮುಖ್ಯಮಂತ್ರಿಗೆ ಈ ಹೊತ್ತಿನ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎನ್ನುವುದು ಇಲ್ಲಿಯ ಮುಖ್ಯ ಆಶಯ. ಇದಕ್ಕೆಲ್ಲ.. ಮೈತ್ರಿಕೂಟದ ನಾಯಕ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಹೊಣೆಯಲ್ಲದೆ ಇನ್ಯಾರೂ ಅಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಬ್ಬೇಪಾರಿಗಳ ಸ್ಥಿತಿಗೆ ಬಂದು ತಲುಪಲು ಬರೀ ಮೋದಿ ಅಷ್ಟೆ ಅಲ್ಲ ಮುಖ್ಯಮಂತ್ರಿ ಸೇರಿದಂತೆ ಜೆಡಿಎಸ್ – ಕಾಂಗ್ರೆಸ್ ನಾಯಕರ ಸಣ್ಣತನ ಕಾರಣ ಎನ್ನುವುದಕ್ಕೆ ದಾಖಲೆಗಳೇ ಸಿಗುತ್ತವೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 43.37% ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಪಡೆದ ಮತಗಳು 41.15%. ಜೆಡಿಎಸ್ ಗೆ 11.07% ಮತಗಳು ಲಭ್ಯವಾಗಿದ್ದವು. ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಸರಿ ಇದ್ದಿದ್ದರೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟಕ್ಕೇ ಬರೋಬ್ಬರಿ 52.22% ರಷ್ಟು ಮತ ಚಲಾವಣೆ ಆಗಿ ಕನಿಷ್ಟ 18 ಸ್ಥಾನಗಳನ್ನು ಜಂಟಿಯಾಗಿ ಗೆಲ್ಲಬೇಕಾಗಿತ್ತು. ಈ ಮೈತ್ರಿ ಮತಗಳಾಗಿ ವರ್ಗಾವಣೆ ಆಗಿದ್ದರೆ, ಬಿಜೆಪಿ ಧೂಳೀಪಟ ಆಗಬೇಕಾಗಿತ್ತು.

ಅಷ್ಟೆ ಯಾಕೆ ವಿಧಾನಸಭೆ ಚುನಾವಣೆಯಲ್ಲಿ ಉಭಯಪಕ್ಷಗಳಿಗೆ ಬಿದ್ದ ಮತಗಳನ್ನು ಮಾನದಂಡವಾಗಿ ಇಟ್ಟುಕೊಂಡರೆ ಮೈತ್ರಿ ಕೂ ಟ 21 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಆದರೆ ತಲಾ ಒಂದೊಂದು ಸ್ಥಾನವನ್ನು ಗೆದ್ದು ಮಣ್ಣು ಮುಕ್ಕುವಂತಹ ಪರಿಸ್ಥಿತಿ ಉಂಟಾಗಿದ್ದಕ್ಕೆ, ಬರೀ ಮೋದಿಯತ್ತ ಬೆರಳು ಮಾಡಿದರೆ ಆದೀತೆ?
ಎಂಥಾ ದಯನೀಯ ಚಿತ್ರಣ ನೀವೇ ನೋಡಿ.

ಒಗ್ಗಟ್ಟು ಇದ್ದು, ಜಾತ್ಯಾತೀತ ಸಿದ್ಧಾಂತವೇ ಮುಖ್ಯವಾಗಿ, ಮೈತ್ರಿ ಸರಕಾರ ಒಂದು ವೇಳೆ ಯಶಸ್ಸು ಕಂಡಿದ್ದರೆ ಎಷ್ಟು ಪ್ರಮಾಣದಲ್ಲಿ ಓಟು ಪಡೆಯಬೇಕಿತ್ತೋ, ಅಷ್ಟು ಪ್ರಮಾಣದ ವೋಟು ಎದುರಾಳಿ ಬಿಜೆಪಿಗೆ ಬಿದ್ದಿದೆ.
ಈ ಚುನಾವಣೆಯಲ್ಲಿ ಬಿಜೆಪಿಗೆ 51.35% ವೋಟು ಬಿದ್ದಿದ್ದರೆ, ಕಾಂಗ್ರೆಸ್ ಗೆ 31.89%, ಜೆಡಿಎಸ್ ಗೆ 9.68% ಮತಗಳು ಬಿದ್ದು ಮೈತ್ರಿಕೂಟದ ಕಲ್ಪನೆ, ಉದ್ದೇಶವೇ ನಾಮಾವಶೇಷ ಆಗಿದೆ.

ಈ ಸೋಲು ಬರೀ ಲೆಕ್ಕಾಚಾರದ ಸೋಲಲ್ಲ. ಪರ್ಯಾಯ ರಾಜಕಾರಣದ ಸೋಲು. ನಾಯಕರು ತಮ್ಮ ಕಾಲಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಂಡ ಸೋಲು. ಮೇಲೆ ಒಗ್ಗಟ್ಟು ತೋರಿದರೂ ಒಳಗೊಳಗೇ ಒಬ್ಬರ ಬೆನ್ನಿಗೆ ಮತ್ತೊಬ್ಬರು ಚೂರಿ ಹಾಕಿ, ಪರಸ್ಪರರು ರಾಜಕೀಯ ಆಸ್ಥಿತ್ವಕ್ಕೆ ಸಂಚಕಾರ ತಂದುಕೊಂಡ ಸೋಲು ಇದು.  ಮೈತ್ರಿ ಕೂಟ ಎಂದರೆ ಇವರ ಅಧಿಕಾರ ದಾಹಕ್ಕೆ ಸಿದ್ದಾಂತದ ಲೇಪನ ನೀಡಿ ರೂಪಿಸಿಕೊಂಡ ತಂಡವೇ ಎಂದು ಅನುಮಾನಕ್ಕೆ ಈಡು ಮಾಡುವ ಸೋಲು ಇದು. ಸ್ವಲ್ಪ ಕಠೋರ ಎನಿಸಿದರೂ ಈ ಮಾತುಗಳನ್ನು ಹೇಳಲೇಬೇಕಿದೆ.

2009 ರ ಲೋಕಸಭೆ ಚುನಾವಣೆಯಲ್ಲಿ 37.65 % ರಷ್ಟು ಕಡಿಮೆ ಮತ ಪಡೆದಿದ್ದ ಕಾಂಗ್ರೆಸ್ ನಂತರ ತನ್ನ ಮಟ್ಟವನ್ನು, 2014 ರಲ್ಲಿ 41.15% ರಷ್ಟು ಹೆಚ್ಚಿಸಿಕೊಂಡಿತ್ತಾದರೂ, ಈ ಚುನಾವಣೆಯಲ್ಲಿ ತಳ ಕಚ್ಚಿತು.
ಇನ್ನು ಜೆಡಿಎಸ್ ಕಥೆಯಂತೂ ಕರುಣಾಜನಕ. ತನ್ನ ಇರುವಿಕೆಗೆ ಧಕ್ಕೆ ತಂದುಕೊಳ್ಳುವ ಮಟ್ಟಿಗೆ ಈ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಪತನ ಕಂಡುಕೊಂಡಿದೆ.

2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 13.57 % ಮತ ಪಡೆದ ಜೆಡಿಎಸ್, 2014 ರಲ್ಲಿ 11% ರಷ್ಟು ಪಡೆದು ಕುಸಿಯಿತು. 2019 ರಲ್ಲಿ ಈ ಕುಸಿತ 9.68 %ರಷ್ಟು ಪಾತಾಳ ಕಂಡಿದೆ.

ಇಲ್ಲಿ ಮೈತ್ರಿ ವಿಫಲ ಅಷ್ಟೆ ಅಲ್ಲ, ಇದೇ ಮೊದಲ ಬಾರಿಗೆ ಜೆಡಿಎಸ್ ನ ಭದ್ರಕೋಟೆ ಗೆ ಬಿಜೆಪಿ ದಾಪುಗಾಲು ಹಾಕಿ, ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಹಳೆ ಮೈಸೂರು ಜೆಡಿಎಸ್ ನ ಪಾಳೆಪಟ್ಟು ಎನ್ನುವುದು ಈ ಚುನಾವಣೆಯಲ್ಲಿ ಹುಸಿಯಾಗಿದೆ. ಬಿಜೆಪಿ ಮುಂಬೈ ಕರ್ನಾಟಕದ ಪ್ರಬಲ ಪಕ್ಷ ಎಂಬ ಲೆಕ್ಕಾಚಾರ ಮೀರಿ, ತನ್ನ ರಾಜಕೀಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು, ಗೌಡರ ನೆಲೆಯನ್ನು ಅಲುಗಾಡಿಸಿದೆ ಎನ್ನುವುದೇ ಇದರ ಸಾರಾಂಶ. ರಾಜ್ಯ ರಾಜಕಾರಣದಲ್ಲಿ ಇದೊಂದು ದೊಡ್ಡ ಬೆಳವಣಿಗೆ.
ಇಲ್ಲಿ ವೈಫಲ್ಯದ ಇನ್ನಷ್ಟು ಸರಮಾಲೆಯೇ ಸಿಗುತ್ತದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪ್ರಚಾರದ ಸಿಂಹಪಾಲು ದಿನಗಳನ್ನು, ಶಕ್ತಿ , ಸಾಮರ್ಥ್ಯವನ್ನು ವ್ಯಯಮಾಡಿದ ಮಂಡ್ಯ ಕ್ಷೇತ್ರದತ್ತ ನೋಡೋಣ. ಕಾಂಗ್ರೆಸ್ ಜೆಡಿಎಸ್ ಬಲಾಬಲಕ್ಕೆ ಅನುಗುಣವಾಗಿ 82% ಮತಗಳನ್ನು ಪಡೆದು ನಿಖಿಲ್ ದಾಖಲೆ ಅಂತರದಲ್ಲಿ ಗೆಲ್ಲಬೇಕಿತ್ತು, ಆದರೆ ಹಾಗಾಗಲಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ 51% ಮತಗಳು ಬಿದ್ದರೆ, ನಿಖಿಲ್ ಗೆ 41% ಮಾತ್ರ ಬಿದ್ದವು. ಇಲ್ಲಿ ಮೈತ್ರಿ ಯಾಕೆ ಫಲಿಸಲಿಲ್ಲ.
ಕರ್ನಾಟಕದ ಹಿರಿಮೆ ಎಂದೇ ಬಣ್ಣಿಸಲಾದ ದೇವೇಗೌಡರು ಪರಾಭವ ಹೊಂದಿದ ಕ್ಷೇತ್ರದಲ್ಲಿ ಒಗ್ಗಟ್ಟು ಇದ್ದಿದ್ದರೆ 62 % ಮತಗಳು ಬಿದ್ದು ಗೌಡರು ದಿಗ್ವಿಜಯ ಸಾಧಿಸಬೇಕಾಗಿತ್ತು. ಆದರೆ ಅವರಿಗೆ ಬಿದ್ದದ್ದು ಕೇವಲ 46.8% ಮತಗಳು ಮಾತ್ರ.

ಕೋಲಾರ, ಮೈಸೂರು, ಚಿಕ್ಕಬಳ್ಳಾಪುರ , ಚಿತ್ರದುರ್ಗ ಮೊದಲಾದ ಕಡೆ ಇದೆ ಗೋಳು. ಅಷ್ಟೆ ಯಾಕೆ ಬೆಂಗಳೂರಿಗೆ ಬನ್ನಿಮೈತ್ರಿ ಹೊಂದಾಣಿಕೆ ಯಶಸ್ವಿಯಾಗಿ, ಮತ ವರ್ಗಾವಣೆಯಾಗಿದ್ದರೆ , ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರದಲ್ಲಿ ಕಾಂಗ್ರೆಸ್ ಗೆಲ್ಲಬೇಕಾಗಿತ್ತು. ಆದರೆ ಫಲಿತಾಂಶ ಮೈತ್ರಿ ಕೇವಲ ಭ್ರಮೆ ಎಂದು ಸಾರಿತು.
ಇಲ್ಲೂ ಅಷ್ಟೇ ಜೆಡಿಎಸ್ ನ ಒಕ್ಕಲಿಗ ಸಮುದಾಯದ ಮತದಾರರು , ತಮ್ಮ ನಾಯಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಲು ಮೈತ್ರಿ ಕೂಟಕ್ಕೆ ಬೆಂಬಲಿಸಬಹುದು ಎಂಬ ನಿರೀಕ್ಷೆ ಹುಸಿ ಆಗಿದೆ. ಈ ಸಮುದಾಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸ್ಥಾನದ ಬಗ್ಗೆ ಯೋಚನೆಯನ್ನೇ ಮಾಡಿಲ್ಲ.ಈ ಸಮುದಾಯ ಬಿಜೆಪಿ ಬೆಂಬಲಿಸಿರುವುದು ಗೆದ್ದ ಅಭ್ಯರ್ಥಿಗಳ ದಾಖಲೆ ಅನಂತರ ಗಮನಿಸಿದರೆ ಗೊತ್ತಾಗುತ್ತೆ. ಒಕ್ಕಲಿಗ ಸಮುದಾಯದ ಮೇಲೂ ಇವರ ನಿಯಂತ್ರಣ ತಪ್ಪುತ್ತಿದೆಯೆ ಎಂಬ ಅನುಮಾನಕ್ಕೆ ಈಡು ಕಾರಣವಾಗಿದೆ. ಅಂದರೆ ಅನುಮಾನವೇ ಬೇಡ.ಜೆಡಿಎಸ್ ನೆಲೆಯೇ ಛಿದ್ರವಾಗುವ ಮುನ್ಸೂಚನೆ ಇದು.

ಇಷ್ಟೆಲ್ಲಾ ಹೇಳುವುದಕ್ಕೆ ಮುಖ್ಯ ಕಾರಣವಿದೆ. ಸಿದ್ದರಾಮಯ್ಯ ಅವರ ಹಠಮಾರಿ ಧೋರಣೆ, ಅಥವಾ ಅವರ ಬೆಂಬಲಿಗ ಶಾಸಕರ ಹಾವಳಿ, ಕಾಂಗ್ರೆಸ್ನಲ್ಲಿ ನ ಆಂತರಿಕ ಕಿತ್ತಾಟ ಇದ್ಯಾವುದೂ ಕಮ್ಮಿ ಏನಲ್ಲ. ಅದೂ ಕೂಡಾ ಎಲ್ಲರಿಗೂ ಗೊತ್ತಿರುವ ವಿಚಾರವೆ. ಹಾಗೆಯೇ ಪರ್ಯಾಯ ರಾಜಕಾರಣ, ಜಾತ್ಯಾತೀತ ಸಿದ್ದಾಂತ ಇದರ ಬಗ್ಗೆ ಕೊಂಚವೂ ಗಂಧ ಗಾಳಿ ಇಲ್ಲದೆ ಮಂತ್ರಿಗಳಾದ ಜಿ. ಟಿ. ದೇವೇಗೌಡ, ಸಾ.ರಾ. ಮಹೇಶ್ ಅವರು ಸಿದ್ದರಾಮಯ್ಯ ಮೇಲಿನ ದ್ವೇಷಕ್ಕೆ ಬಿಜೆಪಿ ಬೆಂಬಲಕ್ಕೆ ನಿಂತಿದ್ದು ನೋಡಿದರೆ ಇವರ ರಾಜಕಾರಣದ ಮಟ್ಟ ಅರ್ಥ ಆಗುತ್ತದೆ. ಮೈತ್ರಿ ರಾಜಕಾರಣ ಹಳ್ಳ ಹತ್ತಲು ಇವೆಲ್ಲ ಕಾರಣವೇ.

ಆದರೆ.. ಕುಮಾರಸ್ವಾಮಿ ಅವರು ಇದನ್ನು ನಿಭಾಯಿಸುವ, ಮೈತ್ರಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಮ್ಮ ವಿರುದ್ಧದ ಟೀಕೆಗಳನ್ನು ಸಮಚಿತ್ತತೆಯಿಂದ ಸ್ವೀಕರಿಸುವ, ಮುತ್ಸದ್ದಿತನ ತೋರಲಿಲ್ಲ ಎನ್ನುವುದೇ ಇಂದಿನ ಜಟಿಲ ಪರಿಸ್ಥಿತಿಯ ಮುಖ್ಯ ವಿಚಾರವಾಗಿದೆ.

ಹಾಗೆ ನೋಡಿದರೆ ಬಹಳಷ್ಟು ಬಾರಿ ಸೌಜನ್ಯ, ಸ್ನೇಹಶೀಲ ವ್ಯಕ್ತಿಯೇ ಆಗಿರುವ ಸಿಎಂ ಮೈತ್ರಿ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ಜಾಣ್ಮೆ ತೋರುವಲ್ಲಿ ವಿಫಲರಾಗುತ್ತಾರೆ, ತಾಳ್ಮೆ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರ ವರ್ತನೆ ಮತ್ತು ನಿಲುವುಗಳು ಬದಲಾಗಿ “ಇವರು ಹಿಂದಿನ ಕುಮಾರಸ್ವಾಮಿ ಅಲ್ಲ. ಅಧಿಕಾರ ಬಂದಾಗಿನಿಂದ ಬದಲಾಗಿದ್ದಾರೆ “ಎನ್ನುವ ಅಭಿಪ್ರಾಯ ಮೂಡಿಸಿ ನಿರಾಸೆ ಮೂಡಿಸುತ್ತಾರೆ.

ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಹಳ್ಳಿ ಬದುಕಿಗಾಗಿ ಮಿಡಿದ ಕುಮಾರಸ್ವಾಮಿ, ಈಗ ಆದ್ಯತೆ, ವೈಖರಿ ಬದಲಾಯಿಸಿಕೊಂಡಿದ್ದಾರೆ. ಜನ ಶಕ್ತಿಯ ಕೇಂದ್ರ ವಿಧಾನಸೌಧಕ್ಕಿಂತ ಪಂಚತಾರಾ ಹೋಟೆಲ್ ಇವರ ಕಾರಸ್ಥಾನದ ಭಾಗ. ನಿಭಾಯಿಸಲು ಸಾಧ್ಯವಿಲ್ಲದಷ್ಟು ಖಾತೆಗಳ ಭಾರ. ಹಣಕಾಸು,ಇಂಧನ, ಶಿಕ್ಷಣ..ಹೀಗೆ ಸಾಗುತ್ತದೆ ಇವರ ಖಾತೆಗಳ ಜವಾಬ್ದಾರಿ.

ಸೋತಾಗ ನಿಂದಿಸಲು, ಅವರನ್ನು ಅವಹೇಳನ ಮಾಡಲು ಈ ವಿಶ್ಲೇಷಣೆ ಮಾಡುತ್ತಿಲ್ಲ. ಕುಮಾರಸ್ವಾಮಿ ಅವರ ತಪ್ಪು ನಿರ್ಧಾರಗಳಿಂದ ಪರ್ಯಾಯ ರಾಜಕಾರಣದ ಯತ್ನಕ್ಕೆ ಹಿನ್ನಡೆ ಆಗಿದೆ. ಇವತ್ತು ಮುಖ್ಯಮಂತ್ರಿ ಆಗಿರುವ ಕಾಲಕ್ಕೆ ತುಮಕೂರಿನಲ್ಲಿ ದೇವೇಗೌಡರು ಪರಾಭವ ಹೊಂದುವಂತಹ ಪರಿಸ್ಥಿತಿಗೆ ಕುಮಾರಸ್ವಾಮಿಯವರೆ ಹೊಣೆ. ದೇವೇಗೌಡರು ಈ ನೆಲದ ಅಸ್ಮಿತೆ. ಇಲ್ಲಿಯ ಸ್ವಾಭಿಮಾನದ ಸಂಕೇತ. ಪಕ್ಷ ರಾಜಕಾರಣ ಮೀರಿ ನಿಂತ ಹೆಮ್ಮೆ. ಅಂಥವರು ಹಾಸನ ಬಿಟ್ಟು ಹೊಸ ಲೋಕಸಭೆ ಕ್ಷೇತ್ರಕ್ಕೆ, ಅದರಲ್ಲೂ ತಕ್ಕಮಟ್ಟಿಗೆ ಬಿಜೆಪಿ ಪ್ರಭಾವ ಇರೋ ಕ್ಷೇತ್ರಕ್ಕೆ ಬಂದು ನಿಂತಾಗ, ಮಗ ಕುಮಾರಸ್ವಾಮಿ ಅಲ್ಲಿ ಬೀಡು ಬಿಟ್ಟು ಬಿಜೆಪಿ ಹಿಮ್ಮೆಟ್ಟಿಸುವ ಕೆಲಸ  ಮಾಡಬೇಕಾಗಿತ್ತು. ತನ್ನ ಮಗನ ಕ್ಷೇತ್ರಕ್ಕೆ ಕೊಟ್ಟ ಕಾಳಜಿಯ ಅರ್ಧಭಾಗ ವಾದರೂ ಅಲ್ಲಿ ವ್ಯಯ ಮಾಡಬೇಕಾಗಿತ್ತು. ಅವರು ತಮ್ಮ ತಂದೆ ಅಷ್ಟೆ ಅಲ್ಲ ಇಡೀ ಕರ್ನಾಟಕದ ಆಸ್ತಿ ಎಂದು ಭಾವಿಸಿ ,ಬಿಜೆಪಿ ತಂತ್ರಗಾರಿಕೆ ವಿರುದ್ದ ಸೆಡ್ಡು ಹೊಡೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ಪರಿಣಾಮ ದೇವೇಗೌಡರು ಸೋತು ರಾಜ್ಯದ ದೊಡ್ಡ ವರ್ಗ ತತ್ತರಿಸುವಂತೆ ಆಯಿತು. ದಿಲ್ಲಿಯಲ್ಲಿ ರಾಜ್ಯದ ಪರ ದನಿ ಎತ್ತುವ ವ್ಯಕ್ತಿಯೇ ಇಲ್ಲವಾಯಿತು.

ಅದೆಲ್ಲ ಹಾಗಿರಲಿ. ಮಂಡ್ಯದಲ್ಲಿ ನಿಖಿಲ್ ನಿಲ್ಲಿಸೋ ಬದಲು ದೇವೇಗೌಡರನ್ನು ಅಖಾಡಕ್ಕೆ ಇಳಿಸಿದ್ದರೆ ಇಷ್ಟೆಲ್ಲ ಫಜೀತಿಯೆ ಇರುತ್ತಿರಲಿಲ್ಲ. ಮಗನ ಮೇಲಿನ ಪ್ರೀತಿಯಲ್ಲಿ ಸಿ.ಎಂ ಅವರ ರಾಜಕೀಯ ದೂರದೃಷ್ಟಿಯೇ ಮಂಕಾಯಿತೆ? ಹೀಗೆ ಹೇಳುತ್ತ ಹೋದರೆ..ಹತ್ತಾರು ಸಂಗತಿಗಳಿವೆ.

ಭರವಸೆ ಮೂಡಿಸಿದ ನಾಯಕ ಕುಮಾರಸ್ವಾಮಿ ಇಡುತ್ತಿರುವ ತಪ್ಪುಹೆಜ್ಜೆಗಳನ್ನು ಗುರುತಿಸುವ ಯತ್ನ.
ಇಷ್ಟಿದ್ದರೂ ಕರ್ನಾಟಕದ ಬಗ್ಗೆ , ನೆಲ, ಜಲ, ಭಾಷೆ ವಿಚಾರ ಬಂದಾಗ ರಾಜಿ ಮಾಡಿಕೊಳ್ಳದ ಕಳಕಳಿಯ ನಾಯಕ. ರೈತರ ಬಗ್ಗೆ ಅಪ್ರತಿಮ ಕಳಕಳಿಯ ಮನುಷ್ಯ. ರಾಜ್ಯದ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರುವ ವ್ಯಕ್ತಿ.
ಇಂಥ ವ್ಯಕ್ತಿ ಕಳಪೆ ರಾಜಕಾರಣದಲ್ಲಿ ತಪ್ಪುಗಳನ್ನು ಮಾಡುತ್ತಾ ಕಳೆದು ಹೋಗದಿರಲಿ. ಪರ್ಯಾಯ ರಾಜಕಾರಣದ ಕನಸು ಭಗ್ನ ಆಗದಿರಲಿ. ಆಡಳಿತ ಸುಸೂತ್ರವಾಗಿ ನಡೆಯಲಿ. ತಪ್ಪು ಸರಿಮಾಡಿಕೊಂಡು, ಕಾಂಗ್ರೆಸ್ ಜೊತೆ ಸಮನ್ವಯತೆ ಸಾಧಿಸಿ ಅದಕ್ಷ ಮಂತ್ರಿಗಳನ್ನು ಕಿತ್ತುಹಾಕಲಿ. ದಕ್ಷತೆಗೆ ಮನ್ನಣೆ ನೀಡಲಿ
ಬಿಜೆಪಿ ತುದಿಗಾಲಲ್ಲಿ ನಿಂತಿರುವ ಈ ಹೊತ್ತಲ್ಲಿ ತುರ್ತು ಆತ್ಮಾವಲೋಕನದ ಅಗತ್ಯವಿರುವುದನ್ನು ಪ್ರತಿಪಾದಿಸಲು ಇದನ್ನು ಹೇಳಬೇಕಾಯಿತು.

ಇಂಥ ಆವಲೋಕನಕ್ಕೆ ಅವರು ಸಿದ್ಧರಿದ್ದಾರೆಯೆ?…

‍ಲೇಖಕರು avadhi

May 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. subray mattihalli.

    ಸದ್ಯದ ರಾಜಕೀಯ ವಿಪ್ಲವಕ್ಕೆ ಹಿಡಿದ ಸಮರ್ಥ ಕನ್ನಡಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: