ಸದಾ ನನ್ನ ತಲೆ ಎತ್ತಿ ನಡೆದಿದ್ದೇನೆ !

ಖ್ಯಾತ ಸಾಹಿತಿ ಕವಿ ಕಾಝಿ ನಜ್ರುಲ್ ಇಸ್ಲಾಂ ಅವರ ಬಂಗಾಲಿ ಕವನ ‘ವಿದ್ರೋಹಿ’ ಆಂಗ್ಲ ಭಾಷೆಗೆ ಹಲವರಿಂದ ಭಾಷಾಂತರಗೊಂಡಿದೆ. ಕನ್ನಡದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಜಿ ಎನ್ ನಾಗರಾಜ್ ಅವರು ತಮ್ಮ FB ಗೋಡೆಯಲ್ಲಿ ಹಂಚಿಕೊಂಡಿದ್ದ ಈ ಸುದೀರ್ಘ ಪದ್ಯವನ್ನು ಕನ್ನಡಕ್ಕೆ ತಂದಿದ್ದೇನೆ. ತಾಳ್ಮೆಯಿಂದ ಓದಿ. ಉತ್ತಮ ಕವನ . ಅನುವಾದದ ತಪ್ಪುಗಳಿದ್ದರೆ ತಿಳಿಸುವುದು ಒಳಿತು. ಇದೊಂದು ಪ್ರಯತ್ನವಷ್ಟೆ. – ನಾ ದಿವಾಕರ-

ಬಂಡಾಯಗಾರ
ಮೂಲ : ಕಾಝಿ ನಝ್ರುಲ್ ಇಸ್ಲಾಂ-( ವಿದ್ರೋಹಿ)
ಕನ್ನಡಕ್ಕೆ : ನಾ ದಿವಾಕರ

ಘೋಷಿಸು, ನಾಯಕ
ಘೋಷಿಸು ನಾನೇ ನಾಯಕನೆಂದು
ತಲೆಎತ್ತಿ ಮುಂದಡಿಯಿಡುವೆನೆಂದು
ಹಿಮಾಲಯದ ಉತ್ತುಂಗದ ಶಿಖರವೂ
ನನ್ನೆದುರು ತಲೆಬಾಗುವುದೆಂದು !

ಘೋಷಿಸು ನಾಯಕ ; ಘೋಷಿಸು
ಗಗನ ಚುಂಬಿಸುವಂತೆ
ಸೂರ್ಯ ಚಂದ್ರರ ದಾಟಿ ಗ್ರಹಕೂಟಗಳ ಮೀಟಿ
ತಾರೆಗಳ ಬದಿಗೊತ್ತಿ ಮೇಧಿನಿಯ
ಭೇದಿಸುವಂತೆ ;
ಸ್ವರ್ಗ ನೆಲೆಗಳ ಮೆಟ್ಟಿ ವ್ಯೋಮದಂಚನು ದಾಟಿ
ಆ ಸರ್ವಶಕ್ತನ ಪೀಠ ಧಿಕ್ಕರಿಸಿ
ನಾನು ಮೇಲೇರಿದ್ದೇನೆ !
ಸೃಷ್ಟಿಕರ್ತನ ಅದ್ಭುತ ನಾನು
ಚಿರಂತನ ಚಿಲುಮೆ ನಾನು
ರುದ್ರ ಶಿವ ಕಂಗೊಳಿಸುವ ಲಲಾಟದಲಿ
ದಿಗ್ವಿಜಯದ ಪತಾಕೆಯಂತೆ !

ಘೋಷಿಸು , ನಾಯಕ
ಘೋಷಿಸು , ನಾ ಸದಾ ತಲೆ ಎತ್ತಿ ನಡೆವೆ !

ನಾ ಸದಾ ಅದಮ್ಯ ಚೇತನ, ಕ್ರೂರಿ, ಹಠಮಾರಿ
ನಾ ವಿನಾಶ ಕಾಲದ ರುದ್ರ ನರ್ತಕ
ನಾ ಚಂಡ ಮಾರುತ ನಾ ವಿನಾಶದ ದ್ಯೋತಕ !
ನಾ ಭೀತಿಯ ಪ್ರತೀಕ ನಾ ಜಗದ ಪಾಲಿಗೆ ಶಾಪ.
ನನ್ನ ತಡೆವವರಾರು
ಧೂಳೆಬ್ಬಿಸುವೆ ಎಲ್ಲವನ್ನೂ ಛಿದ್ರಗೊಳಿಸುವೆ !
ನಾ ಸ್ವಚ್ಚಂದ ನಿಯಮ ಭಂಜಕ
ಎಲ್ಲವನ್ನೂ ಹೊಸಕಿ ಹಾಕುತ್ತೇನೆ
ಎಲ್ಲವನ್ನೂ ಬಂಧ ನಿಯಮ ಶಿಸ್ತು ಎಲ್ಲವನ್ನೂ !
ನಾ ಕಾನೂನು ಪಾಲಿಸಲಾರೆ
ಸರಕು ತುಂಬಿದ ನಾವೆಗಳ ಮುಳುಗಿಸುವ ಸ್ಫೋಟಕ
ಚಲಿಸುವ ರುದ್ರ ಗಣಿ ನಾನು ;
ನಾ ಬಿರು ಬೇಸಿಗೆಯ ಚಂಡಮಾರುತ
ವಿನಾಶದ ವಾಹಕ ;
ನಾ ದಂಗೆಕೋರ
ಸೃಷ್ಟಿಕರ್ತನ ಬಂಡಾಯಗಾರ ಸಂತತಿ !

ಘೋಷಿಸು , ನಾಯಕ
ಘೋಷಿಸು , ನಾ ಸದಾ ತಲೆ ಎತ್ತಿ ನಡೆವೆ !

ಚಂಡಮಾರುತ ನಾ ಪ್ರಚಂಡಮಾರುತ
ನಡೆವ ಹಾದಿಯ ಎಲ್ಲವನ್ನೂ ಧ್ವಂಸ ಮಾಡುವೆ
ನನ್ನದೇ ಸ್ವರಗಳಿಗೆ ಮೀಟಿ
ನರ್ತಿಸುವ ಸ್ವರ ತರಂಗ ನಾನು .
ನಾ , ಮುಕ್ತ ಬದುಕಿನ ಸಂತಸದ ದ್ಯೋತಕ
ಸ್ವರ ರಾಗ ತಾಳಗಳಂತೆ ಮಿಂಚಿ ಮುನ್ನಡೆವೆ
ಅತ್ತಿತ್ತ ತಿರುಗುತ್ತಾ ಗಿರಕಿ ಹೊಡೆಯುತ್ತಾ ,
ನೆಗೆಯುತ್ತೇನೆ ಜಿಗಿಯುತ್ತೇನೆ ಸಂಭ್ರಮಿಸುತ್ತೇನೆ !
ನನ್ನ ಮನ ಬಯಸಿದುದ ಮಾಡುವೆ
ಶತ್ರುವನೂ ಅಪ್ಪುವೆ ಸಾವಿನೊಡನೆ ಸೆಣಸುವೆ !
ನಾ ಮಣಿಯದ ಜೀವ ನಾ ಬಿರುಗಾಳಿ !
ನಾ ಮಹಾಮಾರಿ ಮೇಧಿನಿಗೆ ಸಂಚಕಾರಿ
ಎಲ್ಲ ಭೀಭತ್ಸ ಸಾಮ್ರಾಜ್ಯಗಳ ಅಂತಕ ನಾನು
ಜ್ವಲಂತ ಪ್ರಕ್ಷುಬ್ಧತೆಯ ವಾಹಕ !

ಘೋಷಿಸು , ನಾಯಕ
ಘೋಷಿಸು , ನಾ ಸದಾ ತಲೆ ಎತ್ತಿ ನಡೆವೆ !

ನಾ ನಿಯಂತ್ರಣಕೆ ಸಲ್ಲದವ ದಮನಕ್ಕೊಳಗಾಗದವ
ನನ್ನ ದಿವ್ಯೌಷಧದ ಬಟ್ಟಲು ಸದಾ ಪೂರ್ಣ.
ಬಲಿಪೀಠದ ಅಗ್ನಿ ನಾನು
ಯಮದಾಗ್ನಿ ನಾನು ಅಗ್ನಿ ವಾಹಕ ನಾನು.
ಬಲಿಯೂ ನಾನೇ ಪುರೋಹಿತನೂ ನಾನೇ
ಬೆಂಕಿಯೂ ನಾನೇ.
ನಾನೇ ಸೃಷ್ಟಿ ನಾನೇ ಲಯ
ನಾನೇ ನೆಲೆ ಸ್ವತಃ ನಾನೇ ಮಸಣ ;
ರಾತ್ರಿಗಳ ಅಂತ್ಯ ನಾನು
ನಾನೇ ಅಂತಿಮ
ಕರದೊಳು ಚಂದ್ರ ಲಲಾಟದಲಿ ಸೂರ್ಯನ ಹೊತ್ತ
ಇಂದ್ರಾಣಿಯ ಪುತ್ರ ನಾನು :
ಒಂದು ಕೈಯ್ಯಲಿ ಕೊಳಲು
ಮತ್ತೊಂದರಲಿ ವಿಜಯ ದುಂದುಭಿ
ನಾ ಶಿವನ ನೀಲ ಕಂಠ
ನೋವಿನ ಸಾಗರದಿಂದ ವಿಷ ಕುಡಿವವ
ವ್ಯೋಮಕೇಶ ನಾನು ನನ್ನ ನೆಲಹಾಸುಗಳ
ದಾಟಿ ಹರಿವಳು ಗಂಗೆ ಸರಾಗವಾಗಿ !

ಘೋಷಿಸು , ನಾಯಕ
ಘೋಷಿಸು , ನಾ ಸದಾ ತಲೆ ಎತ್ತಿ ನಡೆವೆ !

ನಾನು ವಿರಾಗಿ , ಲಾವಣಿಕಾರ
ನಾ ರಾಜಕುವರ, ಡಾಂಭಿಕರನ್ನೂ ನಾಚಿಸುತ್ತದೆ
ನನ್ನ ರಾಜ ಠೀವಿ ;
ಅಶೋಕ ಸಾಮ್ರಾಟ ನಾನು ಚೆಂಗೆಜ್ ಖಾನ್ ನಾನು
ಅನ್ಯರಿಗೆ ಸಲ್ಲದು
ನನಗೆ ನಾನೇ ವಂದಿಸುವೆ ;
ಬರಸಿಡಿಲು ನಾನು ಶಂಖದೊಳಗಿನ
ಓಂಕಾರ ನಾನು ;
ಇಸ್ರಫಿಲ್ಲನ ರಣಕಹಳೆ ನಾನು
ಪಿನಾಕಪಾಣಿಯ ಢಮರು, ತ್ರಿಶೂಲ
ನ್ಯಾಯ ದೇವತೆಯ ರಾಜದಂಡ ;
ಸುದರ್ಶನ ಚಕ್ರ ನಾ ಶಂಖವೂ ನಾನೇ
ಆದಿ ಕಾಲದ ವಾದ್ಯ !
ವಿಶ್ವಾಮಿತ್ರನ ಶಿಷ್ಯ ದೂರ್ವಾಸ ನಾನು
ಅಗ್ನಿಯಷ್ಟೇ ಭೀಕರ ಭಸ್ಮ ಮಾಡಬಲ್ಲೆ
ಭೂ ಖಂಡವನು
ಸೃಷ್ಟಿಯನ್ನೇ ಬೆದರಿಸುವ
ಭಾವೋದ್ರೇಕದ ನಗೆ ನಾನು ;
ಸರ್ವನಾಶದ ದಿನದಂದು ದ್ವಾದಶ
ಸೂರ್ಯಗಳಿಗೆ ನಾನೇ ಗ್ರಹಣವಾದೇನು ;
ಕೆಲವೊಮ್ಮೆ ಶಾಂತ ಕೆಲವೊಮ್ಮೆ ಪ್ರಕ್ಷುಬ್ಧ
ನಾನು ಹೊಸ ರಕ್ತದ ಯುವಕ
ವಿಧಿಯ ಹೆಮ್ಮೆಯನೂ ಮಣಿಸಬಲ್ಲೆ ;
ಸುಂಟರಗಾಳಿಯ ಭೀಕರ ಸುರುಳಿ ನಾನು
ಸಾಗರದಲೆಗಳ ಅಬ್ಬರದ ದನಿ ನಾನು
ಪ್ರಜ್ವಲಿಸುವ ಹೊಳಹು ನಾನು
ಉಕ್ಕಿ ಹರಿವ ಜಲಧಾರೆಯ ಝುಳು ಝುಳು
ನಾದ ನಾನು
ಏರಿಳಿಯುವ ಅಲೆಗಳ ಹಿಂದೋಳ ನೃತ್ಯ ನಾನು!

ನಾ ಕನ್ಯೆಯ ಸಿಕ್ಕುಗಟ್ಟದ ಕೂದಲು
ಅವಳ ಕಂಗಳೊಳಗಿನ ಬೆಂಕಿ.
ನಾ ಹದಿಹರೆಯದ ಬಾಲಕಿಯ ರಂಜನೆ
ನಾನು ಪರಮ ಸುಖದ ಅವಸ್ಥೆ ;
ನಾ ವಿರಕ್ತ ಭಾವದ ಹುಚ್ಚು
ನಾ ವಿಧವೆಯೋರ್ವಳ ಸಾಂತ್ವನ
ನಾ ಅತೃಪ್ತರ ಆಕ್ರೋಶ
ನಾ ನಿರ್ವಸಿತರ ನೋವು ;
ನಾನು ಅವಮಾನಿತರ ನೋವು
ನಾ ಪ್ರೀತಿಗಾಗಿ ಹಲುಬುವರ ನೊಂದ ಹೃದಯ
ನಾ ಮೊದಲ ಚುಂಬನದ ಉತ್ಸಾಹದ ಚಿಲುಮೆ
ನಾ ಗುಪ್ತ ಪ್ರೇಮಿಯ ವಾರೆ ನೋಟ ;
ನಾ ಪ್ರಕ್ಷುಬ್ಧ ಪ್ರೇಯಸಿಯ ಪ್ರೀತಿ
ಅವಳ ಬಳೆಗಳ ಸಂಗೀತದ ಕಲರವ
ನಾ ಚಿರಂತನ ಹಸುಳೆ ಚಿರಂತನ ಯುವಕ
ಗ್ರಾಮೀಣ ಬಾಲಕಿಯ ಪ್ರೌಢವಸ್ಥೆಯ ಲಜ್ಜೆ
ನಾನು ಉತ್ತರದ ತಂಗಾಳಿ ದಕ್ಷಿಣದ ತಂಗಾಳಿ
ಮೆದುವೇಗದ ಪೂರ್ವದ ಗಾಳಿ ;
ನಾ ಲಾವಣಿಕಾರನ ಪದ್ಯ
ಅವನ ಕೊಳಲ ನಾದ ಅವನ ತಂತಿವಾದ್ಯ
ನಾನು ದಣಿವಾರದ ಬೇಸಿಗೆಯ ದಾಹ
ಬಿರು ಬೇಸಿಗೆಯ ಸೂರ್ಯನ ಸುಡು ಕಿರಣ
ನಾ ಮೃದುವಾಗಿ ಹರಿಯುವ ಮರುಭೂಮಿಯ ಚಿಲುಮೆ
ಹಸಿರು ಓಯಸಿಸ್ !

ಉನ್ಮತ್ತ ಹರುಷದಲಿ, ಹುಚ್ಚು ಭಾವನೆಗಳಲಿ
ನನ್ನ ನಾ ಅರಿತಿರುವೆ
ಎಲ್ಲ ತಡೆಗೋಡೆಗಳೂ ಕುಸಿದಿವೆ !
ನಾನೇ ಉತ್ಕರ್ಷ ನಾನೇ ಅಧಃಪಾತ
ಪ್ರಜ್ಞಾಹೀನ ಮನದಾಳದಿ ನಾನೇ ಪ್ರಜ್ಞೆ ;
ಜಗದ ದ್ವಾರದಲಿ
ನಾನೇ ದಿಗ್ವಿಜಯದ ಧ್ವಜ
ಮಾನವತೆಯ ದಿಗ್ವಿಜಯದ ಧ್ವಜ !

ಚಂಡಮಾರುತದಂತೆ ನಾನು
ನಾಕ ನರಕಗಳ ಸಂಚರಿಸುತ್ತೇನೆ
ಏಳುತಲೆಯ ಹಾರುವ ಕುದುರೆಯೇರಿ
ಹುಸೇನನ ಕಲಾಕುಂಚಗಳನೇರಿ
ಭೂತಳದ ಕಡಲಾಗ್ನಿಯ ಪ್ರಕ್ಷುಬ್ಧತೆಯ ಮೀರಿ ;
ಮಿಂಚುಗಳ ಮೇಲೆ ಸವಾರಿ ಮಾಡುವೆ
ಭೂಕಂಪನಗಳಿಂದ ಜಗದಲಿ ಆತಂಕ ಸೃಷ್ಟಿಸುವೆ !
ನಾ ಸರ್ಪರಾಜನ ಹೆಡೆಯನಪ್ಪುವೆ
ಗೇಬ್ರಿಯಳಲ ರೆಕ್ಕೆಗಳನಾಲಂಗಿಸುವೆ .
ನಾ ದೈವೀಕ ಹಸುಳೆ ಪ್ರಕ್ಷುಬ್ಧ ಉದ್ಧಟನು ;
ಭೂತಾಯಿಯ ಉಡುಗೆಯನು
ಕಚ್ಚಿ ತುಂಡರಿಸಿಬಿಡುವೆ !

ನಾನು ಅನಾಥನ ಕೊಳಲು
ಪ್ರಕ್ಷುಬ್ಧ ಸಾಗರವ ಮೆತ್ತಗಾಗಿಸುವೆ
ನನ್ನ ಮಧುರ ದನಿಯ ಚುಂಬನದಿಂ
ಜ್ವರಪೀಡಿತ ಜಗತ್ತಿಗೆ
ವಿಸ್ಮೃತಿಯ ನಿದ್ದೆ ತರಿಸುವೆ ;
ಕೃಷ್ಣನ ಕೈಗಳ ಕೊಳಲು ನಾನು
ಉದ್ರೇಕದಿಂದ ವಿಶಾಲ ಗಗನ ಸಂಚರಿಸಿದಾಗ
ಸಪ್ತ ನರಕಗಳ ಸುಪ್ತಾಗ್ನಿಯೂ
ಭೀತಿಯಲಿ ನಡುಗಿ ಸಾಯುತ್ತದೆ ;
ನಾನು ಬಂಡಾಯದ ಸಂವಾಹಕ
ಭೂಮಿ ಆಕಾಶಗಳಗಲಕ್ಕೂ !

ನಾನು ಬೃಹತ್ ಪ್ರವಾಹ
ಕೆಲವೊಮ್ಮೆ ಭೂಮಿಯ ಹಾರೈಸುತ್ತೇನೆ
ಒಮ್ಮೊಮ್ಮೆ ಧ್ವಂಸ ಮಾಡುತ್ತೇನೆ ;
ವಿಷ್ಣುವಿನ ವಕ್ಷಸ್ಥಳದ ಈರ್ವರು
ಕನ್ಯೆಯರನು ಹೊಡೆದುರುಳಿಸುತ್ತೇನೆ ;
ನಾ ಅನ್ಯಾಯ ನಾ ಉಲ್ಕೆ ನಾನೇ ಶನಿ
ನಾ ಕೆರಳಿದ ಧೂಮಕೇತು ವಿಷಪೂರಿತ ಸರ್ಪ !
ಶಿರ ಇಲ್ಲದ ಚಂಡಿ ನಾನು
ಸಮರವೀರ ರಾವಣನು ನಾನು.
ನರಕದ ಅಗ್ನಿಯ ನಡುವೆ ಕುಳಿತು
ಅಮಾಯಕ ಹೂವಿನಂತೆ ಮುಸಿನಗುತ್ತೇನೆ !
ಜೇಡಿ ಮಣ್ಣಿನಿಂದ ಮಾಡಲ್ಪಟ್ಟಿದ್ದೇನೆ
ಆತ್ಮದ ಸಾಕ್ಷಾತ್ಕಾರವಾಗಿದ್ದೇನೆ
ಅಜಾತ ಅವಿನಾಶ, ಅತೀತ ಅಮರ್ತ್ಯ ನಾನು
ಮನುಜ ರಕ್ಕಸ ದೇವರಿಗೂ ಸಿಂಹಸ್ವಪ್ನ ;
ಸದಾ ಅಜೇಯ ನಾನು ;
ಸ್ವರ್ಗ ನರಕಗಳ ಸಂಚರಿಸುವ
ದೇವಾಧಿಗಳ ದೈವ ನಾ
ಉನ್ನತ ಮಾನವತೆ ನಾನು ;

ನಾನು ಹುಚ್ಚ ನಾನು ಹುಚ್ಚ
ನನ್ನ ನಾ ಅರಿತಿರುವೆ
ಎಲ್ಲ ತಡೆಗೋಡೆಗಳೂ ಧ್ವಂಸವಾಗಿವೆ !

ಪರಶುರಾಮನ ನಿರ್ದಯ ಕೊಡಲಿ ನಾ
ಯುದ್ಧ ಪಿಪಾಸುಗಳೆಲ್ಲರನು ಕೊಂದು
ಶಾಂತಿ ಸ್ಥಾಪಿಸುವೆನು ;
ಬಲರಾಮನ ಭುಜದ ಮೇಲಿನ ನೇಗಿಲು ನಾನು
ದಾಸ್ಯಕೊಳಗಾದ ವಿಶ್ವವ ಬುಡಮೇಲು ಮಾಡುವೆನು
ಹರುಷದಿಂದ ಪುನಃ ಸೃಷ್ಟಿಸುತ್ತೇನೆ ;
ಸಮರ ಬಯಸದ ನಾನು ಮಹಾನ್ ವಿದ್ರೋಹಿ
ಭೂಮಿ ಆಕಾಶಗಳಲಿ
ದಮನಿತರ ಆಕ್ರೋಶದ ಮಾರ್ದನಿ
ಕೊನೆಗೊಂಡರೆ ಮಾತ್ರ ;
ನಿರಂಕುಶ ದೊರೆಯ ರಕ್ತಸಿಕ್ತ ಕತ್ತಿ
ರಣಭೂಮಿಯಲಿ ನರ್ತಿಸದಿರೆ ಮಾತ್ರ
ಶಾಂತಿಯಿಂದ ವಿಶ್ರಮಿಸುತ್ತೇನೆ ;
ಆಗಲೇ ನಾನು , ಬಂಡಾಯಗಾರ ನಾನು
ಶಾಂತಿಯಲಿ ನೆಲೆಸುತ್ತೇನೆ !

ಭೃಗು ಮಹರ್ಷಿಯಂತೆ ದಂಗೆಕೋರ ನಾ
ಸೃಷ್ಟಿ ಸಂಕಷ್ಟದಿ ನರಳುವಾಗ
ವಿಮುಖನಾಗಿ ವಿಲಕ್ಷಣನಾಗಿ ನಿದ್ರಿಸುವ
ದೇವರ ಎದೆಯ ಮೇಲೆ
ನನ್ನ ಹೆಜ್ಜೆ ಗುರುತು ಮೂಡಿಸುತ್ತೇನೆ ;
ನಾನು ಬಂಡಾಯಗಾರ ಭೃಗು
ನಾನು ವಿಲಕ್ಷಣ ದೇವರ ಎದೆ ಸೀಳಿಬಿಡುತ್ತೇನೆ !

ನಾನು ಚಿರಂತನ ವಿದ್ರೋಹಿ
ಈ ಜಗತ್ತನ ಮೀರಿ ಬೆಳೆದಿದ್ದೇನೆ, ಏಕಾಂಗಿಯಾಗಿ
ಸದಾ ನನ್ನ ತಲೆ ಎತ್ತಿ ನಡೆದಿದ್ದೇನೆ !

‍ಲೇಖಕರು avadhi

May 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: