ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂತಹದೇ ಮಳೆ ನಿನ್ನೆ..

ಲಕ್ಷ್ಮಣ್ ವಿ ಎ 

ಹೊರಗೆ ಮಳೆ ಸದ್ದಿದೆ ಎಲೆಗಳ ಮೇಲೆ
ಸಿನೇಮಾ ಹಾಡುಗಳಲ್ಲಿ ನಟಿ
ಗೆಜ್ಜೆಯ ಹಜ್ಜೆ ಇಡುತ್ತಾಳಲ್ಲ ಸೀದಾ
ನಟನ ಎದೆಯ ಮೇಲೆ

ನಿನ್ನ ಶಹರಿನ ಬೀದಿಗಳಲ್ಲಿ ಇಂತಹದೇ ಮಳೆ
ಸುದ್ದಿ ನಿನ್ನೆ
ಇಡೀ ಪೇಪರಿನ ತುಂಬ
ಯಾರೋ ಚೆಲುವಿಯೊಬ್ಬಳು ಆಗಸಕೆ ಮುಖವೊಡ್ಡಿ
ಏನು ಪ್ರಾರ್ಥಿಸುತ್ತಿದ್ದಳೋ ?
ಅವಳ ಕಣ್ಣುಗಳಲ್ಲಿ ಕಾಮನ ಬಿಲ್ಲು ಮೂಡಿದ ಚಿತ್ರ

ತಾಯಿ ಸೆರಗಿನಂತೆ ಹಾಯುವ ‘ಹಾಯ್ ‘ಎನ್ನುವ
ಮರದ ಗಾಯಗಳ ಮೇಲಿನ ತಂಗಾಳಿ‌
ಹತಗೊಂಡ ಕಳ್ಳಿ ಬೇಲಿಯೂ ಹಾಲು ಸುರಿಸಿ
ಸಮಯ ನಿಂತ ಗೋಡೆಗಡಿಯಾರದೊ
-ಳಗೊಂದು

ದಾರಿ ತಪ್ಪಿದ ಇರುವೆಯಂತೆ ನಾನೂ ಇರುವೆ
ಒಂದೊಂದು ಮುಳ್ಳುಗಳೂ ಕಾಲಿಗೆ ನಾಟಿ
ಒಂದೊಂದು ಯುಗ ಸರಿದಂತೆ ಕಾಲ ಚಕ್ರಗಳ ದಾಟಿ
ಲೋಹ ಭಾರದ ಎದೆಯ ಹೊತ್ತು
ಇಂತಹದೇ ಮಳೆಯ ರಾತ್ರಿಯ ಹೊತ್ತು
ನಿನ್ನ ಶಹರದ ಬೀದಿಗಳಲ್ಲಿ
ಇರುವೆ ನಾನು ವೃಥಾ ಸುತ್ತುತ್ತ ಸರ್ಕಲ್ಲುಗಳ

ಬದುಕು ಎರಡಂಕದ ನಾಟಕವಲ್ಲ
ಒಂದು ಮಧ್ಯಂತರದ ಸಿನೇಮಾ ಅಲ್ಲ
ನಿತ್ಯ ಸುತ್ತ ಬೇಕು ಇಲ್ಲಿ
ಹೊರದಾರಿಯ ಹುಡುಕುತ್ತ ಸೆಲ್ಲಾರಿದ ಗಡಿಯಾರದೊಳಗಿನ ಇರುವೆಯಂತೆ
ಸುತ್ತುತ್ತೇನೆ ನಾನೂ ಕಾಲು ಸೋಲುವ ತನಕ
ನಿನ್ನ ಹೆಜ್ಜೆಗಳ ಹುಡುಕುತ್ತ ನಿನ್ನ ಶಹರಿನ ಬೀದಿಗಳಲ್ಲಿ
ಇರುವೆ

‍ಲೇಖಕರು avadhi

19 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading