ಯುದ್ಧ ಸೋಲಲಿ ಶಾಂತಿ ಗೆಲ್ಲಲಿ
ಜಾರ್ಜ್ ಆರ್ವೆಲ್ ನ ‘ಎನಿಮಲ್ ಫಾರ್ಮರ್’ ಎನ್ನುವ ಕಾದಂಬರಿಯಲ್ಲಿ ಎರಡು ಕಾಲಿನ ಮನುಷ್ಯ ತುಂಬಾ ಅಪಾಯಕಾರಿ ಎಂದು ಪ್ರಾಣಿಗಳು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತವೆ. ಆದರೆ ಕೊನೆಗೆ ಅವು ಕೂಡಾ ಪ್ರಭುತ್ವ ಸ್ಥಾಪನೆಯಲ್ಲಿ ತೊಡಗಿ ಅಧಿಕಾರದ ಮೋಹಕ್ಕೆ ಸಿಲುಕಿ, ಮನುಷ್ಯನಂತೆ ಎರಡು ಕಾಲಿನಲ್ಲಿ ನಡೆಯಲು ಆರಂಭಿಸುತ್ತವೆ. ಅದೊಂದು ಸಾಹಿತ್ಯ ಕೃತಿ ಅಲ್ಲಿ ಅಸಂಗತವೂ ಸಂಗತವಾಗುವ ಸಾಧ್ಯತೆಯಿದೆ ಎನ್ನಬಹುದು. ಹಾಗಾದರೆ ವಾಸ್ತವಕ್ಕೆ ಬನ್ನಿ. ವಾಸ್ತವದಲ್ಲಿ ಹೊಟ್ಟೆ ತುಂಬಿದ ಕ್ರೂರ ಪ್ರಾಣಿಗೂ ಮತ್ತು ಹೊಟ್ಟೆ ತುಂಬಿದ ಮನುಷ್ಯನಿಗೂ ತುಂಬಾ ಅಂತರಗಳಿವೆ. ಹೊಟ್ಟೆ ತುಂಬಿದ ಕ್ರೂರ ಪ್ರಾಣಿ ಸಂತನಂತೆ ವರ್ತಿಸಿದರೆ, ಮನುಷ್ಯ ಮಾತ್ರ ಸೈತಾನನಂತೆ ವರ್ತಿಸುತ್ತಾನೆ. ಇಂದು ಗ್ಲೋಬ್ ಮೇಲೆ ನೀವು ಎಲ್ಲೇ ಕೈ ಬೆರಳಿಟ್ಟರೂ ಚುರ್..! ಎನ್ನುವಷ್ಟು ಗರಂ ಆಗಿದೆ. ಕೆಲವು ಕಡೆ ಹೊತ್ತಿ ಹುರಿಯುತ್ತಿರಬಹುದು ಮತ್ತೆ ಕೆಲವು ಕಡೆ ಹೊಗೆ ಏಳುವ ಹಂತದಲ್ಲಿರಬಹುದು. ಇಂದು ತಾಲಿಬಾನ್ ಮತ್ತು ತಾಲಿಬಾನಿಗಳು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವದ ಎಲ್ಲ ಭಾಗಗಳಲ್ಲಿಯೂ ತಾಲಿಬಾನಿಗಳ ಮನ:ಸ್ಥಿತಿ ಮೊಳಕೆಯೊಡೆಯುತ್ತಿದೆ. ಕಳೆದ ಅನೇಕ ದಿನಗಳಿಂದ ಇಸ್ರೇಲ್ ಮತ್ತು ಪ್ಯಾಲಿಸ್ತೇನಿಯನ್ನರ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆ ವಿಶ್ವದ ಗಮನವನ್ನು ಸೆಳೆಯುವಲ್ಲಿ ವಿಫéಲವಾದದ್ದೇ ಬಹುದೊಡ್ಡ ವ್ಯಂಗ್ಯ. ಅಮೇರಿಕಾದಂತಹ ರಾಷ್ಟ್ರಗಳು ಇಸ್ರೇಲ್ ಧಾಳಿಯನ್ನು ಕುರಿತು ಮೌನ ವಹಿಸುತ್ತಿರುವುದು ಇನ್ನೊಂದು ವಿಷಾದ.

ಅತ್ತ ಇಸ್ರೇಲಿ ಮಿಲ್ಟರಿ ಪಡೆಗಳು ಪ್ಯಾಲಿಸ್ತೇನಿಯನ್ನರ ಮೇಲೆ ರಾಕೆಟ್ ಕ್ಷಿಪಣಿಗಳನ್ನು ಹಾರಿಸುವದನ್ನು ಮಾತ್ರ ನಿಲ್ಲಿಸಿಲ್ಲ. ಅವರ ಧಾಳಿಯ ವ್ಯಾಪ್ತಿ ಶಾಲೆ ಮತ್ತು ಆಸ್ಪತ್ರೆಗಳನ್ನು ಕೂಡಾ ಬಿಟ್ಟಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಯತ್ನ ಎಂದು ಅನೇಕ ರಾಷ್ಟ್ರಗಳು ಬೊಬ್ಬಿರಿದರೂ ಅದಾವುದನ್ನೂ ಲೆಕ್ಕಿಸದೇ ಇಸ್ರೇಲ್ ತನ್ನ ಬಾಂಬ್ ಧಾಳಿಯನ್ನು ಮುಂದುವರೆಸಿದೆ. ಕೆವಲ 143 ಕಿಲೋ ಮೀಟರ್ ವ್ಯಾಪ್ತಿಯ ಈ ಗಾಜಾ ಪಟ್ಟಿಯಲ್ಲಿ ಇಸ್ರೇಲಿಗಳು ಉಳಿಯಬೇಕೋ ಇಲ್ಲಾ ಪ್ಯಾಲಿಸ್ತೇನಿಯನ್ನರು ಉಳಿಯಬೇಕೋ ಎನ್ನುವ ಪ್ರಶ್ನೆಯೇ ಈ ಬಗೆಯ ಘರ್ಷಣೆಗೆ ಕಾರಣ. ಇಲ್ಲಿಯವರೆಗೆ ಸುಮಾರು 1500 ಕಿಂತಲೂ ಹೆಚ್ಚು ಜನರು ಈ ಇಸ್ರೇಲ್ ಧಾಳಿಯಲ್ಲಿ ಅಸುನೀಗಿರುವದಿದೆ. 4-5 ಸಾವಿರ ಜನರು ಗಾಯಾಳುಗಳಾಗಿದ್ದಾರೆ. ಈ ಬಗೆಯ ಘರ್ಷಣೆಗಳು ಆಗಾಗ ಜರುಗುತ್ತಲೇ ಇವೆ. ಈಚೆಗಷ್ಟೇ ರಶ್ಯಾ ಮತ್ತು ಉಕ್ರೇನ್ ಗಡಿ ಭಾಗದಲ್ಲಿ ವಿಮಾನವೊಂದನ್ನು ಗಡಿ ಉಲ್ಲಂಘನೆಯ ಹೆಸರಲ್ಲಿ ಹೊಡೆದು ಉರುಳಿಸಿದ ನೆನಪು ಇನ್ನೂ ಹಸಿ ಹಸಿಯಾಗಿಯೇ ಇದೆ. ಜಿನಿವಾದಲ್ಲಿ ಆಗಾಗ ಸಭೆ ಸೇರಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಈ ಬಗೆಯ ಹಿಂಸಾ ಘಟನೆಗಳು ಅಲ್ಲಲ್ಲಿ ತಲೆ ಎತ್ತಿತ್ತಿರುವದು ಈ ಕಾಲದ ಬಹು ದೊಡ್ಡ ವಿಷಾದ ಮತ್ತು ವ್ಯಂಗ್ಯ.
ನಾವೀಗ ಜಾಗತೀಕರಣದ ಸಂದರ್ಭದಲ್ಲಿದ್ದೇವೆ ಮಾತೆತ್ತಿದರೆ ಸಾಕು ‘ಗ್ಲೋಬಲ್ ವಿಲೇಜ್’ ಎನ್ನುವ ಪದ ಬಳಸುತ್ತೇವೆ. ರಚನಾತ್ಮಕವಾಗಿರುವ ಕ್ರಿಯಾಚಟುವಟಿಕೆಗಳು ಇನ್ನೂ ಇಡಿ ವಿಶ್ವವನ್ನು ವ್ಯಾಪಿಸಿವೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ತಾಲೀಬಾನೀಕರಣದ ಗುಣ ಮಾತ್ರ ಜಾಗತೀಕರಣಗೊಳ್ಳುತ್ತಿದೆ ಎನ್ನುವುದೇ ಮನುಕುಲದ ಬಗ್ಗೆ ಕಾಳಜಿ ಇರುವವರ ಬಹುದೊಡ್ಡ ಆತಂಕ. 1948 ರ ಸಂದರ್ಭದಲ್ಲಿ ರೂಪಿಸಿಕೊಂಡ ಒಂದು ನೆಲೆಯೇ ಈ ಗಾಜಾಪಟ್ಟಿ. ಇಲ್ಲಿರುವವರು ಬಹುತೇಕರು ಪ್ಯಾಲಿಸ್ತೇನಿಯನ್ನರು. ಅವರು ಈ ನಿರಾಶ್ರಿತರ ನೆಲೆಯನ್ನು ನಖಬಾ ಎಂದು ಕರೆಯುವದಿದೆ. ಜ್ಯೂ ಜನಾಂಗ ದವರು ಈ ಗಾಜಾ ಪಟ್ಟಿ ತಮ್ಮ ನೆಲೆ ಅದನ್ನು ರೂಪಿಸಿದವರು ತಾವು ಎಂದು ಪಟ್ಟು ಹಿಡಿದು ಪ್ಯಾಲಿಸ್ತೇನಿಯನ್ನರ ಮೇಲೆ ಆಕ್ರಮಣವನ್ನು ಆರಂಭಿಸಿದ್ದಾರೆ. ಅಲ್ಲೀಗ ನೆತ್ತರ ನದಿಯಾಗಿ ಹರಿಯುವ ವಾತಾವರಣ ಸೃಷ್ಟಿಯಾಗಿದೆ. ಗಾಜಾ ಪಟ್ಟಿ ತಮ್ಮದು ಎನ್ನುವ ಇಸ್ರೇಲಿಯನ್ನರು ಅದನ್ನು ತೆರವುಗೊಳಿಸಿಯೇ ತೀರುತ್ತೆವೆ ಎಂದು ಪಟ್ಟು ಹಿಡಿದಿರುವಂತಿದೆ. ಈ ಪ್ಯಾಲಿಸ್ತೇನಿಯನ್ನರು 1948 ರ ಸಂದರ್ಭದಲ್ಲಿ ಇಲ್ಲಿಗೆ ವಲಸೆ ಬಂದವರು. ಅಲ್ಲಿಂದ ಇಲ್ಲಿಯವರೆಗೆ ಅಲ್ಲಿಯೇ ವಾಸವಾಗಿರುವ ಈ ಪ್ಯಾಲಿಸ್ತೇನಿಯನ್ನರನ್ನು ಇಸ್ರೇಲಿಗಳು ಆಗಾಗ ಜನಾಂಗೀಯ ಕಾರಣವನ್ನು ಮುಂದಿಟ್ಟುಕೊಂಡು ಕೆಣಕುತ್ತಲೇ ಬಂದಿರುವದಿದೆ. ಈಗಂತೂ ಕಳೆದ ಅನೇಕ ದಿನಗಳಿಂದಲೂ ಅವರ ಮೇಲೆ ಅವರ ಮನೆಗಳ ಮೇಲೆ ಬಾಂಬಿನ ಸುರಿ ಮಳೆಗೈಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಖಂಡಿಸಿ ಹೋರಾಟಗಳೂ ನಡೆದಿವೆ. ಈ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿಯೂ ಆಗಿದೆ. ಮಕ್ಕಳು, ಮಹಿಳೆಯರು ಎನ್ನುವದನ್ನು ಪರಿಗಣಿಸುವ ಮನ:ಸ್ಥಿತಿಯಂತೂ ಇಲ್ಲಿ ಉಳಿದಿಲ್ಲ.
ಮೆಡಿಟೇರಿಯನ್ ಸಮುದ್ರ ಮತ್ತು ಜೋರ್ಡಾನ್ ನದಿಯ ದಡದಲ್ಲಿರುವ ಈ ಗಾಜಾಪಟ್ಟಿ ಇಂದು ಸಂಪೂರ್ಣವಾಗಿ ಇಸ್ರೇಲ್ ವಶದಲ್ಲಿದೆ.ಇಲ್ಲಿರುವ ಪ್ಯಾಲಿಸ್ತೇನಿಯನ್ನರು ಇಸ್ರೇಲ್ ದ ನಾಗರಿಕತೆಯನ್ನು ಹೊಂದಿರುವಾಗಲೂ ಅವರನ್ನು ಹಕ್ಕುಗಳಿಂದ ವಂಚಿಸಲಾಗುತ್ತಿದೆ. 1970 ರ ಸುಮಾರಿಗೆ ಪೆಲಿಸ್ತೇನಿಯನ್ನರು ತಾವು ನೆಲೆಸಿರುವ ಜಮೀನಿನ ಸುಮಾರು 75 ಪ್ರತಿಶತ ಜಮೀನನ್ನು ಕಳೆದುಕೊಳ್ಳಬೇಕಾಯಿತು. ಮೊದಲು ಈ ನೆಲೆಯಲ್ಲಿ ಇಸ್ರೇಲ್ ಮತ್ತು ಪೆಲಿಸ್ತೇನಿಯನ್ನರಿಬ್ಬರೂ ಇರುವದಿತ್ತು. ಈಗ ಇದ್ದಕ್ಕಿದ್ದಂತೆ ಅಲ್ಲಿ ತಾವು ಮಾತ್ರ ಇರಬೇಕು ಎನ್ನುವ ಇಸ್ರೇಲಿಯನ್ನರ ಭಂಡತನ ಶುರುವಾಗಿದೆ. ಆ ಮೂಲಕ ಅಪಾರ ಸಂಖ್ಯೆಯ ಮಹಿಳೆಯರನ್ನು, ಮಕ್ಕಳನ್ನು ಪ್ಯಾಲಿಸ್ತೇನಿಯನ್ನರು ನಿರಾಶ್ರಿತರನ್ನಾಗಿಸಿದ್ದಾರೆ. ಗಂಡ-ಹೆಂಡತಿಯರನ್ನು ನಾಗರಿಕ ಹಕ್ಕುಗಳ ವಿಷಯವಾಗಿ ಒಡೆದಾಳಲಾಗುತ್ತಿದೆ. ಗಂಡ ಒಂದೊಮ್ಮೆ ಇಸ್ರೇಲ್ ನಾಗರಿಕತ್ವ ಹೊಂದಿದ್ದರೆ ಹೆಂಡತಿ ಹೊಂದಿರದಿದ್ದರೆ ಗಂಡನಿಗೆ ಮಾತ್ರ ಹಕ್ಕುಗಳನ್ನು ಒದಗಿಸಿ ಹೆಂಡತಿಯನ್ನು ವಂಚಿಸಲಾಗುತ್ತಿದೆ. 1967 ರ ಸಂದರ್ಭದಲ್ಲಿ ವೆಸ್ಟ್ ಬ್ಯಾಂಕ್ ಮತ್ತು ಈಸ್ಟ್ ಜೆರಸಲೋಮ್ ನ ಭಾಗಗಳಲ್ಲಿ ವಶಪಡಿಸಿಕೊಂಡ ವಸಾಹತುಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಆ ಕೆಲಸ ಮಾಡಲಾಗಿದೆ ಎಂಬ ಆರೋಪವನ್ನು ಹೊರಿಸಲಾಗಿತ್ತು. ಇದಾವದನ್ನೂ ಲೆಕ್ಕಿಸದೇ ಇಸ್ರೇಲಿಯನ್ನರು ಪ್ಯಾಲಿಸ್ತೇನಿಯನ್ನರ ಮನೆಗಳ ಮೇಲೆ ಬಾಂಬುಗಳ ಮಳೆ ಗರೆಯುತ್ತಿದ್ದಾರೆ. ಅವರು ಅಲ್ಲಿ ಅನಧೀಕೃತವಾಗಿ ನುಸುಳಿದವರು ಎನ್ನುವ ಆರೋಪವನ್ನು ಮುಂದಿಟ್ಟು ಅವರ ಮೇಲೆ ಆಕ್ರಮಣಗೈಯಲ್ಲಾಗುತ್ತಿದೆ. ಮಾರ್ಚ 2012 ರ ಸಂದರ್ಭದಲ್ಲಿಯೇ ಇಸ್ರೇಲ್ ನ ಈ ಬಗೆಯ ಕ್ರಮವನ್ನು ಸಂಯುಕ್ತ ರಾಷ್ಟ್ರ ತೀವ್ರವಾಗಿ ಖಂಡಿಸಿರುವದಿತ್ತು.
ಆ ಎಲ್ಲ ಖಂಡನೆ ಟೀಕೆಗಳನ್ನು ಮೀರಿ ಇಸ್ರೇಲ್ ತನ್ನ ಧಾಳಿಯನ್ನು ಮುಂದುವರೆಸಿದೆ. ಪ್ಯಾಲಿಸ್ತೇನಿಯರನ್ನು ನಿರಂತರವಾಗಿ ಬಂಡುಕೋರರ ಹೆಸರಲ್ಲಿ ಜೈಲಿಗೆ ತಳ್ಳಲಾಗುತ್ತಿದೆ. ರಮಜಾನ್ ಹಬ್ಬದ ಸಂದರ್ಭದಲ್ಲಿಯೂ ಹೀಗೆ ಸತತವಾಗಿ ಬಾಂಬ್ ಸುರಿಮಳೆಗೈಯುವ ಮೂಲಕ ಒಂದು ಭಯಂಕರವಾದ ಜೀವಂತ ನರಕವನ್ನು ಸೃಷ್ಟಿಸಿದ ಇಸ್ರೇಲಿಗಳು ಇಲ್ಲಿಯವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಪ್ಯಾಲಿಸ್ತೇನಿಯನ್ನರನ್ನು ಶವವಾಗಿಸಿದೆ. ಎಲ್ಲೋ ಬೆಂಕಿ ಇನ್ನೆಲ್ಲೋ ಹೊಗೆ ಎನ್ನುವ ಹಾಗೆ ಬಂಡುಕೋರರ ಸಂಘನೆಯೊಂದು ಮುಂಬೈ ಪೋಲಿಸ್ ಕಮೀಷನರ್ ಗೆ ಬೆದರಿಕೆಯ ಪತ್ರವನ್ನು ಬರೆದು ಮುಂಬೈ ಮೇಲೆ ಧಾಳಿ ಮಾಡುತ್ತೇವೆ ಎಂದು ಧಮಕಿ ಹಾಕುವ ಮನ:ಸ್ಥಿತಿ ಇನ್ನೊಂದು ರೀತಿಯಲ್ಲಿ ರೋಗಗ್ರಸ್ಥವಾದುದು. ಅಷ್ಟಕ್ಕೂ ಹಿಂಸೆಗಾಗಿ ಹಿಂಸೆ ಎನ್ನುವುದು ಕೊನೆಯವರೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಲಾರದು. ಕಟ್ಟ ಕಡೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡೊಣ ಎಂದಾಗ ಭೂಮಿಯ ಮೇಲೆ ಮನುಕುಲವೇ ಉಳಿದಿರುವದಿಲ್ಲ. ಇಲ್ಲಿ ಐನಸ್ಟೀನ್ ಮೂರನೇಯ ಜಾಗತಿಕ ಮಹಾಯುದ್ಧದ ಪರಿಣಾಮದ ಬಗ್ಗೆ ಭವಿಷ್ಯ ನುಡಿದದ್ದನ್ನು ನೆನಪಿಸಿಕೊಳ್ಳಬೇಕು. ಅತ ಹೇಳಿದ್ದ ತಪ್ಪಿ ಏನಾದರೂ ಈ ಭೂಮಿಯ ಮೇಲೆ ಮೂರನೇಯ ಜಾಗತಿಕ ಮಹಾಯುದ್ಧ ನಡೆದರೆ ಯುದ್ಧನಂತರ ಭೂಮಿಯ ಮೇಲೆ ಕೇವಲ ಕಲ್ಲುಗಳು ಮಾತ್ರ ಉಳಿದಿರುತ್ತವೆ. ನಮಗೆಲ್ಲಾ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ [ಅಗಸ್ಟ 6 ಮತ್ತು 9] ಗಳ ಮೇಲೆ ಮಾಡಲಾದ ಅಣುಬಾಂಬಿನ ಪ್ರಯೋಗಗಳು ಮತ್ತು ಅವುಗಳ ಪರಿಣಾಮ ತಿಳಿದಿವೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಆ ಬಾಂಬ್ ಧಾಳಿ ಅಲ್ಲಿಯ ನೆಲ-ಜಲವನ್ನು ಕೂಡಾ ವಿಷಮಯಗೊಳಿಸಿತು. ಆ ಗಳಿಗೆಯನ್ನು ಕಣ್ಣಾರೆ ಕಂಡವರು ಅದರ ಭೀಭತ್ಸ ದೃಶ್ಯಗಳನ್ನು ಈಗಲೂ ಮರೆತಿಲ್ಲ. ಒಂದು ಕುಂಬಳ ಕಾಯಿಯ ತೋಟ ಸುಟ್ಟು ಕಣ್ಣೆದುರಲ್ಲಿಯೇ ಕರುಕಲಾದ ಬಗ್ಗೆ ಮತ್ತು ಜನರ ಮುಖ ಹಿಂದೆ-ಮುಂದೆ ಯಾವುದು ಎನ್ನುವದನ್ನು ಗುರುತಿಸಲಾಗದಷ್ಟು ವಿಕಾರವಾಗಿದ್ದವು. ಅವರು ತಮಗೆ ನಡೆದಾಡುವ ಭೂತಗಳಂತೆ ಅವರು ತೋರುತ್ತಿದ್ದರು. ಎಂದು ಆಗ ಬದುಕಿ ಉಳಿದವರು ಹೇಳಿದ ಮಾತು.
ಈ ಯುದ್ಧ ಮತ್ತು ಬಂಡುಕೋರ ಚಟುವಟಿಗಳು ಭೂ ಮಂಡಲದ ಯಾವುದೇ ಭಾಗದಲ್ಲಿ ಜರುಗಿದರೂ ಅದು ಮನುಕುಲಕ್ಕೆ ಮಾತ್ರ ಅಪಾಯಕಾರಿ. ಹಿಂದೆ ನಡೆದ ಧಾಳಿಗಳಿಗೂ ಈಗ ನಡೆಯುತ್ತಿರುವ ಧಾಳಿಗಳಿಗೂ ಒಂದು ತೀಕ್ಷ್ಣವಾದ ಅಂತರವಿದೆ. ಅಂದು ಯುದ್ಧ ನಡೆದರೆ ಅದು ನಡೆಯುತ್ತಿರುವ ರಾಷ್ಟ್ರಗಳು ಮಾತ್ರ ಹೆಚ್ಚಿನ ಬಾಧೆಗೆ ಒಳಗಾಗಬೇಕಿತ್ತು. ಈಗ ಹಾಗಲ್ಲ, ಇಡೀ ವಿಶ್ವವೇ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಇಂದು ಖಾಸಗಿ ಸಶಸ್ತ್ರ ಪಡೆಗಳು ಭಯಂಕರವಾಗಿ ಬೆಳೆಯುತ್ತಿವೆ. ಇವು ಸರಕಾರದ ಆದೇಶ ಮತ್ತು ನಿಯಂತ್ರಣಕ್ಕಾಗಿ ಕಾಯುವದಿಲ್ಲ. ತಮ್ಮದೇಯಾದ ಒಂದು ನಿಲುವು, ಧೋರಣೆಯ ಮೂಲಕ ಇವರು ಧಾಳಿ, ಆಕ್ರಮಣಕ್ಕೆ ಮುಂದಾಗುತ್ತಾರೆ. ಪರಿಣಾಮ ಮಾತ್ರ ಅಮಾಯಕರು ಎದುರಿಸಬೇಕಾಗುತ್ತದೆ. ಸದ್ಯದ ಸಂದರ್ಭದಲ್ಲಂತೂ ನಮ್ಮ ಖಾಸಗಿ ಬದುಕಿನ ಬಗ್ಗೆಯೂ ನಾವು ಆಲೋಚಿಸದಂತಹ ಪರಿಸರವನ್ನು ಈ ಬಗೆಯ ಸಂಘರ್ಷಗಳು ನಿಮರ್ಾಣ ಮಾಡಿವೆ. ಎಲ್ಲ ಮುಗಿದು ಹೋದ ಮೇಲೆ ಶಾಂತಿಗಾಗಿ ತಹತಹಿಸುವ ಬದಲಾಗಿ ಈಗಲೇ ಎಚ್ಚೆತ್ತುಕೊಂಡು ಇಡೀ ಜಗತ್ತಿ ಶಾಂತಿ ಮಂತ್ರವನ್ನು ಪಠಣ ಮಾಡಿದರೆ ಒಳಿತು ಇಲ್ಲದಿದ್ದರೆ ಭವಿಷ್ಯದಲ್ಲಿ ಬರೀ ಕಲ್ಲು-ಮಣ್ಣು ಮಾತ್ರ ಈ ಭೂಮಿಯ ಮೇಲೆ ಉಳಿದೀತು..? ಯುದ್ಧ ಯಾವುದೇ ಎರಡು ರಾಷ್ಟ್ರಗಳ ನಡುವೆ ನಡೆದರೂ ಜಾಗತೀಕರಣದ ಸಂದರ್ಭದಲ್ಲಿ ಅದರ ಪರಿಣಾಮ ಒಟ್ಟು ಮನುಕುಲಕ್ಕೆ ಸಂಬಂಧಿಸಿರುತ್ತದೆ. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಮತ್ತೆ ನಿರ್ಣಾಯಕರಾಗುತ್ತಾರೆ.
ಕೊನೆಗೂ ನಮಗೆ ನೆಮ್ಮದಿ ಕೊಡುವ ಸೂತ್ರಗಳೆಂದರೆ ಶಾಂತಿ, ಅಹಿಂಸೆ. ನಾವೆಲ್ಲರೂ ಶಾಂತಿಗಾಗಿ ಬಾಯಾರುವ, ತುಡಿಯುವ ಅವಶ್ಯಕತೆಯಿದೆ. ಯಾವ ಬಾಂಬುಗಳು, ಕ್ಷಿಪಣಿಗಳು ಮನುಕುಲದ ಉದ್ದಾರವನ್ನು ಮಾಡುವದಿಲ್ಲ. ಕೊನೆಗೂ ಗೆಲ್ಲಬೇಕಾದುದು ಶಾಂತಿ ಮಂತ್ರ. ಇನ್ನು ಈ ಯುದ್ಧ ಮತ್ತು ಶಾಂತಿಯ ವಿಷಯವಾಗಿ ನಾವು ಮಹಿಳೆಯ ಪಾತ್ರವನ್ನು ಮೊದಲಿನಿಂದಲೂ ಅಷ್ಟಾಗಿ ಪರಿಗಣಿಸಿದಂತಿಲ್ಲ. ಇದನ್ನು ಗಮನಿಸಿಯೇ ಸಂಯುಕ್ತ ರಾಷ್ಟ್ರ ಸಂಘ ಒಂದು ದಶಕದ ಹಿಂದೆಯೇ ಸುಮಾರು 1325 ಮಹಿಳೆಯರನ್ನು ಈ ಬಗೆಯ ಶಾಂತಿ ಸ್ಥಾಪನೆಗಾಗಿ ನಿಯೋಜನೆಗೊಳಿಸಿ ಅವರನ್ನು ತೊಡಗಿಸಿತು. ಈ ತಂಡ ಸಾಕಷ್ಟು ಕಾರ್ಯವನ್ನು ಆ ದಿಶೆಯಲ್ಲಿ ಮಾಡಿತಾದರೂ ಅದಕ್ಕೆ ಸಾಕಷ್ಟು ಪ್ರಮಾಣದ ಹಣಕಾಸಿನ ನೆರವು ದೊರೆಯದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಅಲ್ಲಿ ಕೆಲಸಗಳು ನಡೆಯಲಿಲ್ಲ. ಎಲ್ಲ ವೈಫéಲ್ಯಗಳಿಗೂ ಮಹಿಳೆಯನ್ನೇ ಮುಂದೆ ಮಾಡುವ ಪುರುಷ ಸಮಾಜ, ಆ ವಿಫéಲತೆಗೆ ಅವಳನ್ನೇ ಹೊಣೆಗಾರಳನ್ನಾಗಿಸಿತು. ಇಲ್ಲಿ ಜಾತ್ಯಾತೀತವಾಗಿ, ಲಿಂಗಾತೀತವಾಗಿ, ಭಾಷಾತೀತವಾಗಿ ಶಾಂತಿಗಾಗಿ ಹಪಹಪಿಸುವ ಅಗತ್ಯವಿದೆ. ಜಾಗತಿಕ ಮಹಾಯುದ್ಧ ಘಟಿಸಿ ಅದಾಗಲೇ ಒಂದು ಶತಮಾನ ಕಳೆಯಿತು. ಆ 20 ನೇ ಶತಮಾನ ಕೊಲೆಗಡುಕ ಶತಮಾನ ಎಂದೇ ಗುರುತಿಸಿಕೊಂಡಿದೆ. ಮುಂಬರುವ ಶತಮಾನಗಳಾದರೂ ಶಾಂತಿಪ್ರಿಯ ಶತಮಾನಗಳೆಂದು ಕರೆಯಿಸಿಕೊಳ್ಳಲಿ. ಪ್ರೀತಿಗಿರುವ ತಾಕತ್ತು ಯುದ್ಧದ ಯಾವ ಶಸ್ತ್ರಾಶ್ತ್ರಗಳಿಗೂ ಇಲ್ಲ ಎನ್ನುವದನ್ನು ಸಾಬೀತು ಮಾಡುವ ಸಕಾಲವಿದು.






ಇಲ್ಲಿ ಜಾತ್ಯಾತೀತವಾಗಿ, ಲಿಂಗಾತೀತವಾಗಿ, ಭಾಷಾತೀತವಾಗಿ ಶಾಂತಿಗಾಗಿ ಹಪಹಪಿಸುವ ಅಗತ್ಯವಿದೆ. ಜಾಗತಿಕ ಮಹಾಯುದ್ಧ ಘಟಿಸಿ ಅದಾಗಲೇ ಒಂದು ಶತಮಾನ ಕಳೆಯಿತು. ಆ 20 ನೇ ಶತಮಾನ ಕೊಲೆಗಡುಕ ಶತಮಾನ ಎಂದೇ ಗುರುತಿಸಿಕೊಂಡಿದೆ. ಮುಂಬರುವ ಶತಮಾನಗಳಾದರೂ ಶಾಂತಿಪ್ರಿಯ ಶತಮಾನಗಳೆಂದು ಕರೆಯಿಸಿಕೊಳ್ಳಲಿ. ಪ್ರೀತಿಗಿರುವ ತಾಕತ್ತು ಯುದ್ಧದ ಯಾವ ಶಸ್ತ್ರಾಶ್ತ್ರಗಳಿಗೂ ಇಲ್ಲ ಎನ್ನುವದನ್ನು ಸಾಬೀತು ಮಾಡುವ ಸಕಾಲವಿದು…thought provoking…