ಗೆಳತಿಗೊಂದು ಪತ್ರ
– ನಳಿನ ಡಿ
ಭೃಂಗದ ಬೆನ್ನೇರಿ ಹೋಗಬಾರದು, ಹೀಗೆ ಹೋಗಿ ಹಾಗೆ ಬಂದರೂ ತಳಮಳಗಳ ಸಂತೆಯೊಳಗೆ ಸೋಲದೆ ಬೇರೇನು ಮಾಡಬಹುದೇಳು ಗೆಳತಿ. ಎಷ್ಟೇ ದೂರ ಬಂದರೂ ಕೆಲವೆಡೆ ಸಿಕ್ಕಿಹಾಕಿಕೊಂಡ ಮನಸ್ಸನ್ನು ಸುಧಾರಣೆ ಮಾಡೋದೇ ಕಷ್ಟಕರ. ಮುಂದಿಲ್ಲೊಂದು ದಿನ ಅದಕ್ಕೆ ಸರಿಪಡಿಸಲೇಬೇಕಾದ ದಾರಿ ಸಿಕ್ಕಿಕೊಳ್ಳಲೂಬಹುದಂದುಕೊಳ್ಳುವೆ.
ದೂರಕೆ ದೂರಕೆ ಮನಸು ಹಿನ್ನಡೆದಾಗ ಸರಿದ ನೂರು ದಾರಿಗಳಲ್ಲೂ ಸಹಿತ ಆ ಹುಡುಗನ ಬೆನ್ನ ಹಿಂದೆ ಹೆಜ್ಜೆಯಿಟ್ಟ ನೆನಪುಗಳೇ ನೆನಪುಗಳು. ಹೊಸ ಊರು ಕೇರಿ, ಮನೆಯ ಮುಂದಿನ ಸಾಲು ಸಾಲುಗಳಲಿ ಅಲ್ಲೊಬ್ಬ ಇಲ್ಲೊಬ್ಬ ಗೆಳತಿಯರು, ಎಲ್ಲೋ ಹೇಗೋ ನೆಟ್ಟ ಮನಸು ನೆಟ್ಟಗೆ ಅವನ ಬೆನ್ನ ಹಿಂದಿನ ಹೆಜ್ಜೆಗಳ ಹಿಡಿದು ನಡೆದುಬರಹತ್ತಿತ್ತು. ನಂದೇ ಕಾಲೇಜ್ ಹುಡ್ಗನಾದರೂ ಅಬ್ಬಬ್ಬಾ ಅವನನ್ನು ಒಂದು ದಿನಕಾದರೂ ಎದುರುಗೊಂಡು ಹಾಯ್, ಹಲೋ ಎಂತಾದರೂ ಹೇಳಿದ್ದರೆ ಸರಿಹೋಗಿರುತ್ತಿತ್ತು, ಏನೂ ಹೇಳದ ಮೊದ್ದು ಹುಡುಗಿಗೆ ಆ ಹುಡುಗ ನಗಲಾರನ್ಯಾಕೆ ಎಂಬುದೊಂದೇ ಕುತೂಹಲ, ನಗದೇ ಏನೂ ಮಾಡದ ನನ್ನ ಮನಸಿನ ಹಾಗಿರದ ಹುಡುಗ, ಏನು ಯೋಚಿಸುವ, ಏನು ಮಾತಾಡುವ, ಹೇಗೆ ನಗುವ? ಎಷ್ಟೊಂದು ಸೈಲೆಂಟು ಹುಡುಗಾ! ಹೀಗೆನೋ ಮೂರಲ್ಲಾ ನೂರು ಕುತೂಹಲಗಳು, ಕಣ್ಣ ಕೆಣಕಿ, ಕಣ್ಣ ಕಿಟಕಿಯ ಹಾರಿ ನೆಗೆದು ಅದೇ ಹುಡುಗನ ಗಲ್ಲಿ ಗಲ್ಲಿಯಲಿ ಲಜ್ಜೆಹೀನವಾಗಿ ಅಡ್ಡಾಡ ಹೊರಟವೋ.. ಹೆಜ್ಜೆಗಳಿಡುವಾಗಲೆಲ್ಲಾ ಭಲೇ ಆ ಹುಡುಗನ ಬೆನ್ನಹಿಂದೆ ಬಂದುದೇ ಘನವಾದ ನೆನಪು.

ಒಂದಿನಿತು ನಗುವಿಲ್ಲ, ಮಾತಿಲ್ಲ, ಮುನಿಸಿಲ್ಲ, ಸುಮ್ಮನೇ ಹೊರಟನೆಂದರೆ ಕಾಲೇಜಿನೊಳಗೆ ಸೇರುವವರೆಗೂ ನಡೆಯುವವ, ಕಾಲೇಜಿನಿಂದ ಮರಳಿ ಮನೆಯೊಳಗೆ ಸೇರಿಬಿಡುವವ, ಆ ಬೀದಿಯಲಿ ಸಿಕ್ಕರೂ, ಸಿಗದಿದ್ದರೂ ನಾನವನ ಕಂಡರೆ ತಲೆ ತಗ್ಗಿಸಿ ಹೊರಡುವುದು ಖಾತರಿ. ಮಹಾಮೌನಿಯಂತೆ, ಬುದ್ಧಿಜೀವಿಯಂತೆ, ಸಾಧ್ವಿಮಣಿಯಂತೆ, ಒಮ್ಮೊಮ್ಮೆ ಕೋಪದ ಕಿಡಿಯಂತೆ, ಜಂಬದ ಕೋಳಿಯಂತೆ, ಅಹಂಕಾರದ ಚಿಗರೆಯಂತೆ ಹೇಗೇಗೋ ಕಾಣಿಸುತ್ತಿದ್ದ. ತುಟಿಕ್ ಪಿಟಿಕ್ಕೆನ್ನದೆ ಮನಸು ಮತ್ತೆ ತನ್ನ ಪಾಡಿಗೆ ತನ್ನ ವತರ್ುಲದೊಳಗೆ ಪವಡಿಸುತ್ತಿತ್ತು. ಮೆಲ್ಲಮೆಲ್ಲನೆ ಬೇಸಗೆ ಮರೆತು ಮಳೆಗೆ ಮೈಯ್ಯೊಡ್ಡುವ ಕಾಲದಲ್ಲೂ ಅವನು ಛತ್ರಿಯಿಲ್ಲದೆಯೋ, ಜೊತೆಗೆ ಛತ್ರಿ ಹಿಡಿದೋ ಕೈಯೆಲ್ಲೆರಡು ಪುಸ್ತಕ ಹಿಡಿದು ನಡೆದು ಹೋಗುವ, ನಾನವನ ಹಿಂದಿಯೋ, ಮುಂದೆಯೋ ಅವನ ಬೀದಿಯಲ್ಲೇ ಕುತೂಹಲದ ಮುದ್ದೆಯಾಗಿ ಮುದುಡಿದರೂ ಮಣಿಯದೆ ಕಣ್ಣರಳಿಸಿ ನೋಡುತ್ತಲೇ ಹೋಗುತ್ತಿದ್ದೆ, ಎದುರಾದರಂತೂ ಇಲ್ಲ, ಹಿಂದುಗಡೆಯೇ ಎಲ್ಲಾ.
ದಿನಗಳನೇಕ ಉರುಳುರುಳಿ ಸರಿದರೂ, ಏನೋ ಬದಲಾವಣೆ ಕಾಣದ ಮನಸಿನ ಹುಡುಗ, ವ್ಯಾಲೆಂಟೈನ್ಸ್ ಡೇಗೂ, ರಂಜಾನ್ ಹಬ್ಬಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೇ ಇದ್ದ ಹಾಗೆಯೇ ಇದ್ದನೆಂದು ಅನಿಸಿಕೆ. ಅವನೇಕೆ ನಗಲಾರ? ಮತ್ತೇಕೆ ಮುಗುಳ್ನಗಲಾರ? ಪ್ರಶ್ನೆ ಮೇಲೆ ಪ್ರಶ್ನೆ, ಉತ್ತರಿಸಲು ಆ ಹುಡುಗ ತಿರುಗಿ ನಿಲ್ಲಲೇ ಇಲ್ಲ. ಕಲ ಕಲ ಕಲಕಿ ನನ್ನ ಕಿಲ ಕಿಲ ನಗುವ, ಬಿಡಿಸಲಾರದ ಪ್ರಶ್ನೆಗಳ ಮನಸ್ಸಿಗಂಟಿಸಿದ ಹುಡುಗ ಕಾಲೇಜು ಮುಗಿಸಿ ದೂರದೂರಲಿ ಘಟಿಸಿಹೋದ. ಅದೇ ಉದ್ದನೆಯ ತೆಳುವಾದ ಆಕಾರದ ಹುಡುಗ, ಅವನ ಕ್ರಾಪ್ ಬಾಚಿದ ಕೂದಲು, ಮಾಮೂಲಿ ನೀಲಿ ಬಣ್ಣದ ಯೂನಿಫಾರಂನಲ್ಲಿ ಕಂಗೊಳಿಸುತ್ತಿದ್ದ ಠೀವಿ ಹೀಗೆ ಹೇಗೇಗೋ ಅತ್ತ ಇತ್ತಲೂ ನೋಡದೆ ಮನೆಸೇರಿಕೊಂಡಿರುತ್ತಿದ್ದ ಸೈಲೆಂಟ್ ಹುಡುಗ.. ಮರೆತುಹೋಗದೆ ಮನಸ್ಸಿನಲ್ಲೇ ಉಳಿದ. ಅವನೇಕೆ ನಗುತ್ತಿರಲಿಲ್ಲ ಅನ್ನುವ ಪ್ರಶ್ನೆಯೊಂದಿಗೆ ಉಳಿದುಕೊಂಡ ಅದೇ ನೆನಪುಗಳ ನಡುವೆ, ಆ ಹಳ್ಳಿ ಹುಡುಗ.
ಎಷ್ಟು ಚಂದದ ಊರ ದಿನಗಳವು, ಸಾಬರ ಬೀದಿಯಲಿದ್ದ ಹಿಂದೂಗಳು ಕೆಲವರೇ ಆದರೂ ಬಾಂಧವ್ಯದೊಡನಾಡುತ್ತಿದ್ದ ಭವ್ಯ ದಿನಗಳ ನಡುವೆ, ಬಾಲ್ಯದ ಬೆಳ್ಳಿಮೋಡವ ತಳ್ಳಿ ಕೌಮಾರ್ಯದ ಹೊಸ್ತಿಲಲ್ಲಿ ನಿಂತು ಎಲ್ಲವಕ್ಕೂ ಭಾವನಾತ್ಮಕ ಬೆಸುಗಿಯಿಡುತ್ತಿದ್ದ ಕಾಲಘಟ್ಟಗಳಲಿ ದುಡಿಮೆ ಅಪ್ಪನ ಭಾಗ್ಯ, ಅಡುಗೆ ಅಮ್ಮನ ಸೌಭಾಗ್ಯವಾಗಿ ಹೋದ ಗಟ್ಟಿ ಸುಖದ ದಿನಗಳವು. ಒಮ್ಮೆಯೂ ಹೆಗಲ ಮೇಲೆ ಬಿಸಿಲು ಬೀಳದ ದಿನಗಳಲ್ಲಿ ಪ್ರೀತಿಯ ಆಹಾಕಾರಕ್ಕೆ ಹುಟ್ಟಿಕೊಂಡ ಪುಟ್ಟ ಕುತೂಹಲ ಮರೆತೇ ಹೋದಹಾಗಿರುವಾಗ ಎದುರು ಬಂದ ಹುಡುಗನೆದುದು ನಾನೇ ಮಾತನಾಡಲಿಲ್ಲ. ಅವನ ಕಣ್ತುಂಬ ನಗು ನನ್ನನ್ನು ನಗಿಸಿ ನಾಚಿಸಿದೆಯಲ್ಲಾ ಎಂದು ಕಣ್ತೆರೆದರೆ ಅದೊಂದು ಶುದ್ಧ ಕನಸು.
ವಿಶೇಷವಾಗಿ ಆವರಿಸಿದ್ದು ಏತಕ್ಕೋ? ತುಂಬಾ ದಿನಗಳಾದರೂ ಹೊಳೆಯುತ್ತಿಲ್ಲ, ಆ ಹುಡುಗ ಎಲ್ಲಿದ್ದಾನೋ? ಈ ನೆನಪುಗಳಲ್ಲಂತೂ ಖಾಯಂ ಇದ್ದೇ ಇರುತ್ತಾನೆ.






ನೆನಪು ಮಧರ,ಕನಸು ,ಮತ್ತದರೊಳಗಿನ ಮನಸು,ಬರಹ ಸುಂದರ.