ಆ ಸಮ್ಮೇಳನ..

ಮೈಸೂರು ವಿಶ್ವ ಕನ್ನಡ ಸಮ್ಮೇಳನ: ಒಂದು ಮೆಲುಕು

– ನಾಡೋಜ ಪ್ರೊ ಹಂಪನಾ

ಮೈಸೂರಲ್ಲಿ ಡಿಸೆಂಬರ್ ೧೫, ೧೯೮೫ ರಿಂದ ನಡೆದ ಮೊತ್ತ ಮೊದಲನೆಯ ‘ವಿಶ್ವ ಕನ್ನಡ ಸಮ್ಮೇಳನ’ದ ನೆನಪು ಇನ್ನೂ ಹಚ್ಚ ಹಸಿರಾಗಿ ಉಸಿರಾಡುತ್ತಿದೆ. ಮರೆಯಬಾರದ ಮುಖ್ಯಮಂತ್ರಿ ಡಿ ದೇವರಾಜ ಅರಸು ಕಾಲದಲ್ಲಿ ಬಿತ್ತನೆಯಾದ ಈ ಪರಿಕಲ್ಪನೆಯ ಕಾಳುಗಳು ಧೀಮಂತ ಮುಖ್ಯಮಂತ್ರಿ ಆರ್. ಗುಂಡೂರಾವ್ ಕಾಲದಲ್ಲಿ ಕೊನರಿ ಪಲ್ಲವಿಸಿತು. ನಾನು ೧೯೭೮ ರಿಂದ ೧೯೮೬ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದು ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಕರ್ನಾಟಕ ಸರ್ಕಾರ ಏರ್ಪಡಿಸಬೇಕಾದ ಜರೂರನ್ನು ಪ್ರಸ್ತಾಪಿಸಿದ್ದೆ. ತಿಪಟೂರಲ್ಲಿ ಪ್ರೊ. ಕೆ. ವೆಂಕಟರಾಮಪ್ಪನವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಡಿಸೆಂಬರ್ ೧೯೮೦ರಲ್ಲಿ ನಡೆಯಿತು. ಅದರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಗುಂಡೂರಾಯರ ಗಮನಕ್ಕೆ ತಮಿಳು ವಿಶ್ವ ಸಮ್ಮೇಳನ, ವಿಶ್ವ ತೆಲುಗು ಸಮ್ಮೇಳನ, ವಿಶ್ವ ಮಲೆಯಾಳ ಸಮ್ಮೇಳನಗಳನ್ನು ನೆನಪಿಸಿದೆ. ಅವರು ಸ್ಫೂರ್ತಿಗೊಂಡು ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ತಿಪಟೂರು ವೇದಿಕೆಯಿಂದ ಅಧಿಕೃತವಾಗಿ ಪ್ರಕಟಿಸಿದರು.

ಅನಂತರ ಪೂರ್ವಸಿದ್ಧತೆಗೆ ಏರ್ಪಾಟುಗಳಾದುವು. ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕೆಂಬ ಸಲಹೆಗೆ ಕೆಲವರು ವಿರೋಧಿಸಿದರು. ಬೆಂಗಳೂರಲ್ಲೇ ಅರಮನೆ ಆವರಣದಲ್ಲಿ ನಡೆಯಬೇಕೆಂಬ ಅಭಿಪ್ರಾಯ ಮುಖ್ಯಮಂತ್ರಿಗಳು ೨೦-೦೫-೧೯೮೧ ರಂದು ಕರೆದಿದ್ದ ಸಭೆಯೊಂದರಲ್ಲಿ ವ್ಯಕ್ತವಾಯಿತು. ಆದರೆ ಅಂತಿಮವಾಗಿ ಮೈಸೂರು ಆಯ್ಕೆಯಾಯಿತು. ೨೭-೧೧-೧೯೮೧ ರಂದು ಮೈಸೂರಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಮುಖ್ಯ ಗೊತ್ತುವಳಿ ಅಂಗೀಕೃತವಾದುವು. ಮೊದಲನೆಯದು, ಗೋಕಾಕ್ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುವುದು. ಎರಡನೆಯದು, ವಿಶ್ವ ಕನ್ನಡ ಸಮ್ಮೇಳನಕ್ಕೆಂದು ಆರು ಕೋಟಿ ರುಪಾಯಿ ವೆಚ್ಚ ಮಾಡಲು ಮಂತ್ರಿಮಂಡಲ ಒಪ್ಪಿಗೆ ನೀಡಿದ್ದು. ಈ ಎರಡು ಮಹತ್ವದ ನಿರ್ಣಯಗಳನ್ನು ೨೮-೧೧-೧೯೮೧ ರಂದು ಬೆಳಗ್ಗೆ ಮಡಿಕೇರಿಯಲ್ಲಿ ೫೪ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಗುಂಡೂರಾಯರು ಪ್ರಕಟಿಸಿದರು. ಇಪ್ಪತ್ತು ಸಾವಿರ ಜನರಿಂದ ತುಂಬಿ ತುಳುಕುತ್ತಿದ್ದ ಸಭೆಯಲ್ಲಿ ಹೊಸ ಹರ್ಷದ ಹೊನಲು ಹರಿಸಿದರು!.

 

 

ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಗಳು ಮುಂದುವರೆದವು. ಶಿಕ್ಷಣ ಸಚಿವ ಜಿ ಬಿ ಶಂಕರ ರಾಯರ ಮೇಲಾಳಿಕೆಯ ಸಮಿತಿಯಲ್ಲಿ ನೂರಾ ಐದು ಕನ್ನಡ ಪುಸ್ತಕಗಳನ್ನು ಆಯ್ಕೆ ಮಾಡಿದೆವು. ಪ್ರತೀ ಶೀರ್ಷಿಕೆಯ ಆಯ್ದ ಸಾವಿರ ಪ್ರತಿ ಮತ್ತು ಪ್ರತೀ ಲೇಖಕರಿಗೆ ಐದು ಸಾವಿರ ಸಂಭಾವನೆಯೆಂದು ಒಪ್ಪಲಾಯಿತು. ಶಾಶ್ವತ ಸ್ಮಾರಕವಾಗಿ ಮೈಸೂರಲ್ಲಿ ಭವ್ಯ ಕಲಾಭವನ ಕಟ್ಟಲು ನಿರ್ಧಾರವಾಯಿತು.ನಾನಾ ಗೋಷ್ಠಿಗಳು, ಆಹ್ವಾನಿಸಬೇಕಾದ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಕುಶಲ ಶಿಲ್ಪಿಗಳ ಪ್ರಾತ್ಯಕ್ಷಿಕೆ, ಬೃಹತ್ ಪುಸ್ತಕ ಪ್ರದರ್ಶನ- ಈ ಎಲ್ಲಾ ಏರ್ಪಾಟುಗಳಿಗೆ ನನ್ನನ್ನು ಮುಖ್ಯ ಸಲಹೆಗಾರನನ್ನಾಗಿ ಸರಕಾರ ನೇಮಿಸಿತ್ತು.

ಇನ್ನೇನು ವಿಶ್ವ ಕನ್ನಡ ಸಮ್ಮೇಳನಕ್ಕೆ ಮೂರು ತಿಂಗಳಿದೆ ಎಂಬಷ್ಟರಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾದರು. ಆದರೆ ಸಾಹಿತ್ಯ-ಸಂಸ್ಕೃತಿ ಪ್ರೇಮವಿದ್ದ ಹೆಗಡೆ ಅವರು ವಿಶ್ವ ಕನ್ನಡ ಸಮ್ಮೇಳನದ ಎಲ್ಲಾ ಏರ್ಪಾಟುಗಳೂ ಪೂರ್ವ ನಿರ್ಧಾರದಂತೆಯೇ ನಡೆಯಲು ನೆರವಾದರು. ಅದರಂತೆ ೧೫-೧೨-೧೯೮೫ ರಂದು ಬೆಳಗ್ಗೆ ಮೈಸೂರು ಅರಮನೆಯ ಮುಂದುಗಡೆ ವಿಶ್ವ ಕನ್ನಡ ಸಮ್ಮೇಳನ ಆರಂಭವಾಯಿತು. ರಾಷ್ಟ್ರ ಕವಿ ಕುವೆಂಪು ಉದ್ಘಾಟಿಸಿದರು. ಶಿವರಾಮ ಕಾರಂತರು ಅಧ್ಯಕ್ಷ ಭಾಷಣ ಮಾಡಿದರು. ವೇದಿಕೆಯ ಮೇಲೆ ವರನಟ ರಾಜಕುಮಾರ್, ಮಾಜಿ ಮುಖ್ಯ ಮಂತ್ರಿಗಳಾದ ಗುಂಡೂರಾವ್ ಮತ್ತು ಎಸ್ ನಿಜಲಿಂಗಪ್ಪ, ಬಿ ಡಿ ಜತ್ತಿ, ರಾಮಕೃಷ್ಣ ಹೆಗಡೆ ಬಿ ರಾಚಯ್ಯ ಮತ್ತು ನಾನು ಉಪಸ್ಥಿತರಿದ್ದೆವು. ಮೊದಲ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಬರಗಾಲ ಇರುವುದರಿಂದ ಮುಂದೂಡಬೇಕೆಂಬ ವಿರೋಧವಿತ್ತು. ಕಾರಂತರನ್ನು ‘ಮಸಾಲೆ ದೋಸೆ ಕಾರಂತ’ ಎಂದು ಟೀಕಿಸಲಾಯಿತು. ಇವು ಪ್ರತೀ ಬೃಹತ್ ಸಮ್ಮೇಳನಗಳ ಅವಿಭಾಜ್ಯ ಅಂಗ!. ಆದರೆ ಕನ್ನಡದ ವೈಭವ, ಪರಂಪರೆ ಮತ್ತು ಸಿದ್ಧಿ ಸಾಧನೆಗಳನ್ನು ಜಾಗತಿಕ ವೇದಿಕೆಯಲ್ಲಿ ಬಿಂಬಿಸುವ ಕೆಲಸಗಳು ನಿರಂತರವಾಗಿ, ನಿರ್ವಿಘ್ನವಾಗಿ ನಡೆಯುತ್ತಿರಬೇಕು

‍ಲೇಖಕರು G

March 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: