
ಎಂ.ಆರ್.ಕಮಲ
ನಿಮ್ಮ ಮನೆಯಂಗಳದಿ ಬೆಳೆದ ಹೂವಿನ ಕಂಪ
ಈ ಮನೆಗೆ ತುಂಬಿಸಿ ಹೊರಟು ಬಿಟ್ಟಿರಿ
ನಿಮ್ಮ ಮನೆಯಷ್ಟೇ ಬೆಳಗಿದರೆ ಸಾಲದೆಂದು
ಆ ಮನೆಯ ದೀಪವನೆ ಇಲ್ಲಿ ತಂದಿಟ್ಟಿರಿ
ನಿಮ್ಮ ಮಗಳಿವಳು, ಮರೆ ಮೋಸ ಅರಿವಳೆ,
ಕೊಂಕು, ಬಿಂಕಗಳಂತು ದೂರದ ಮಾತು.
ಕಷ್ಟಗಳು ಕಾಣದ ಹಾಗೆ ಬೆಳೆಸಿದಿರಿ, ನಿಜ.
ಕೆಂಡ ಕಟ್ಟಿಕೊಂಡಿದ್ದ ನಿಮ್ಮ ಕಂಡಿಲ್ಲವೇನು?
ಹಿರಿ ಮಂಜು ಬಿದ್ದರು, ಉರಿ ಬಿಸಿಲೆ ತಾಗಿದರು
ಬಾಡದ, ನೋಯದ ಋತುಮಾನ ಚೆಲುವೆ
ಬೆಚ್ಚದಿರಿ, ಬೆದರಿದರಿ, ಉದುರಿ ಬೀಳುವಳಲ್ಲ,
ಉರಿದೇಳುವಳಲ್ಲ, ನೀವಂದಷ್ಟು ಮೆದುವಲ್ಲ.
ನೀವಂದ ಮಾತು ನನಗೆ ಪೂರ್ಣ ಒಪ್ಪಿತವಲ್ಲ
ಹಾಲು ಹಣ್ಣುಗಳ ಸವಿಯು ಬರಿ ಈ ಮನೆಗೆ ಅಲ್ಲ.
ನೀವು ಬೆಳೆಸಿದ ಬಗೆಯೆಂದು ಇಷ್ಟು ಸೀಮಿತವಲ್ಲ
ಆ ಮನೆ- ಈ ಮನೆ ಮೀರಿ ಹರಿಯುತಿದೆಯಲ್ಲ!
ಮಡದಿಯೋ ಸೋದರಿಯೋ,ಅತ್ತಿಗೆ ನಾದಿನಿಯೋ
ಎದೆಯೊಳಗಿರುವುದು ತಾಯ ಕರುಣೆ ತಾನೇ
ಸೌಜನ್ಯದ ದಾರಿಯಲಿ ನೆರಳಲ್ಲದೆ ಬಿಸಿಲುಂಟೆ
ನಿಮ್ಮ ಮಾತು-ನೀತಿಯು ಸದಾ ಪರಿಮಳಿಸುತಿರಲಿ.
ಆ ಮನೆಯ ಪ್ರೀತಿ ಬಳ್ಳಿ ಇಲ್ಲಿ ಹಬ್ಬುವುದಷ್ಟೇ
ಹೆತ್ತವರ ಮನೆಗೆಂದು ಮಗಳು ಹೊರಗಲ್ಲ.
ತಾಯಿ, ತಂದೆ, ಸಖರ ಲೋಕ ಬೆಳೆ ಬೆಳೆದು
ದೇವರನು ಕಾಂಬ ದೃಷ್ಟಿ ಬದಲಾಗುವುದಲ್ಲ!
ಕಳೆದುಕೊಳ್ಳದೆ ಅಳುವುದಾದರು ಹೇಗೆ?
ನೀವೆಂದು ನನ್ನ ಬಿಟ್ಟು ಹೋಗುವುದೇ ಇಲ್ಲ.
ನಿಮ್ಮ ಹರಕೆ-ಹಾರೈಕೆ ತುಂಬಿ ಹರಿವಾಗ
ತುಂಬಿದಾಯುಷ್ಯವೆಂದು,ತುಂಬು ಬದುಕು!
ಒಂದಿಷ್ಟು ಹಿನ್ನೆಲೆ: ವಿ. ಸೀತಾರಾಮಯ್ಯನವರ ‘ಮನೆ ತುಂಬಿಸುವುದು’ ಕವನವನ್ನು ಹೆಣ್ಣನ್ನು ಒಪ್ಪಿಸುವ ಸಂದರ್ಭದಲ್ಲಿ ಹಾಡುವ ಸಂಪ್ರದಾಯವಿದೆ. ಬೇರೆಯವರ ಮದುವೆಯಲ್ಲಿ ಈ ಹಾಡನ್ನು ಕೇಳಿದಾಗೆಲ್ಲ ಅತ್ತಿದ್ದೇನೆ. ನನ್ನ ಮದುವೆಯಲ್ಲಿ ಈ ಹಾಡನ್ನು ಅದ್ಭುತ ಕಂಠದಲ್ಲಿ ನನ್ನ ಅತ್ತಿಗೆಯ ಅಕ್ಕ ರಮಾ ಹಾಡಿದರು. ಆದರೆ ನನಗೆ ಅಳು ಬರಲಿಲ್ಲ! ತಂದೆ-ತಾಯಿಯನ್ನು ಬಿಟ್ಟು ಹೋಗುತ್ತಿರುವೆ ಎಂದು ಅನ್ನಿಸಲು ಇಲ್ಲ. ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿದ ತಂದೆ-ತಾಯಿಯರ ಜೊತೆ ಮಗಳು ಮಾತಾಡುವ ರೀತಿಯಲ್ಲಿ ಈ ಕವಿತೆ ಬರೆದಿದ್ದೇನೆ.
ನನ್ನ ಮಗಳು ಹೀಗೆ ಯೋಚಿಸುತ್ತಿರಬಹುದೇ?





S.p.Vijaya lakshmi
Chandada kavithe. Ee shathamaanada hennumakkalu khandithaa aluvashtu adhairyavantharalla. …yochane sukthavaagide….
Beautiful lines. ಮನಸು ಮಣಿಯಿತು. ನೀವು ಮಾತ್ರ ಹೀಗೆ ಬರೆಯಲು ಸಾಧ್ಯ.