ಆ ಕಾಮಾಟಿಪುರದಲ್ಲಿ ನಾನೇ ‘ಡ್ರೈನೇಜು’

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಅಗಾಧ ಕತ್ತಲು… ಗಬ್ಬೆಂದು ಆವರಿಸಿದ ದುರ್ವಾಸನೆ… ಕಾಲಿಟ್ಟಲ್ಲಿ ಪಾಚಿಗಟ್ಟಿದ ಜಾರು… ದುಪ್ಪಟ ತೆಗೆದು ಮೂಗಿಗೆ ಮುಖಕ್ಕೆ ಭದ್ರವಾಗಿ ಕಟ್ಟಿಕೊಂಡೆ. ವೃತ್ತಾಕಾರದ ದೊಡ್ಡ ಪೈಪಿನಲ್ಲಿ ಸಾವರಿಸಿ ನಿಲ್ಲಲೂ ಆಗದೆ, ಆಸರೆಗೆ ಏನೂ ಸಿಗದೆ ತಟ್ಟಾಡಿದೆ.

ಹಾದಿಯೇ ತಿಳಿಯದ ದುರ್ಗಮದಲ್ಲಿ ಹೆಜ್ಜೆಗಳನ್ನು ಮುಂದಿಡಲೇ ಅಥವಾ ಒಮ್ಮೆ ಹಿಂದೆ ಹೋಗಿಬಿಡಲೇ ಅನ್ನೋ ಆಲೋಚನೆ ಬಂತು. ಪ್ರಾಣಭಯ ಒಮ್ಮಿಂದೊಮ್ಮೆಲೆ ದಬ್ಬಿದಂತಾಯಿತು. ಆದರೆ ವಾಪಸಾದರೆ ಸಣ್ಣ ಕಿಂಡಿಯ, ಮಬ್ಬು ಬೆಳಕಿನ, ಕಮಟು ವಾಸನೆಯ ಕೊಠಡಿಗಿಂತ ಈ ದುಸ್ಸಾಹಸವೇ ಸರಿ ಎನ್ನಿಸಿತ್ತು. ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೆ.

ಹಾಗೆಯೇ ಸಾವರಿಸಿಕೊಂಡು ಮೆಲ್ಲಮೆಲ್ಲಗೆ ಹೆಜ್ಜೆಗಳನ್ನಿಡುತ್ತಾ ಮುಂದೆ ನಡೆದೆ. ಇದ್ದಕ್ಕಿದ್ದಂತೆ ಕಿಟಾರನೆ ಕಿರುಚಿದೆ, ಕಾಲ ಮೇಲೆ ಪಣ್ಣಂತ ನೆಗೆದು ನಾನು ಕಿರುಚಿದ ಶಬ್ದಕ್ಕೆ ಗಾಬರಿಯಾಗಿ ಓಡಿಹೋಯಿತು. ಹೆಗ್ಗಣ ಇರಬೇಕು ಎಂದುಕೊಂಡೆ. ಮುಂಬಯಿಯ ಕಾಮಾಟಿಪುರದ ಕೊಳಕಿನ ಬೇಸಿಗೆಯೆಲ್ಲಾ ಇಲ್ಲೇ ಹರಿಯುತ್ತಿದೆ ಎಂದು ನೆನೆದು ವಾಂತಿ ಬಂದಂತಾಯಿತು.

ಹುಳ ಉಪ್ಪಟೆಗಳು, ಕಸಕಡ್ಡಿಗಳು, ಬಟ್ಟೆಗಳ ಉಂಡೆಗಳು ಮೆತ್ತನೆಯ, ಒರಟಾದ ಏನೇನೋ ಕಾಲಿಗೆ ಸುತ್ತಿಕೊಳ್ಳುತ್ತಲೇ ಇದ್ದವು. ಕೊಚ್ಚೆ ಗುಂಡಿಯ ಆ ವಾಸನೆ ಕುಡಿಯುತ್ತಾ ತಲೆಸುತ್ತು ಬಂದಂತಾಯಿತು. ಇನ್ನೇನು ಸಾವು ನನ್ನ ಹತ್ತಿರ ಬಂದೇಬಿಡ್ತು ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ದೂರದಲ್ಲೆಲ್ಲೋ ಚೂರು ಬೆಳಕು ಕಂಡಿತ್ತು.

ಹಾಗೇ ಹಾಗೇ ನಡೆದೆ, ತೆವಳಿದೆ, ನಡೆದೆ… ಮಬ್ಬಾದ ಬೆಳಕು ದಟ್ಟವಾಗುತ್ತಾ ಬಂತು. ಒಳಹೊಕ್ಕ ಡ್ರೈನೇಜಿನ ಪೈಪಿನ ಇನ್ನೊಂದು ಬಾಯಲ್ಲಿ ನಾನಿದ್ದೆ.
ಅದೆಷ್ಟು ದೂರವೋ ತಿಳಿಯದು ಪಯಣವೇ ದೂರವಾಯಿತೋ ಅಥವಾ ಭಾರವಾದ ಮನಸ್ಸು ದೇಹ ದಣಿವಾಗಿ ಹಾಗೆ ಭಾಸವಾಯಿತೋ… ನರಕದ ಬಾಗಿಲಿಗೆ ಹೋಗಿ ಬಂದಂತಾಯ್ತು.

ಹೊರಗೆ ಬಂದವಳೇ ಹಿಂತಿರುಗಿ ನೋಡಿದೆ, ಯಾರಾದರೂ ಹಿಂಬಾಲಿಸಿರಬಹುದೇನೋ ಎಂದು, ಯಾರೂ ಕಾಣಲಿಲ್ಲ ಕಟ್ಟಿದ್ದ ದುಪ್ಪಟವನ್ನು ಬಿಚ್ಚಿ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡೆ. ಉಸಿರಾಡಿ ಎಷ್ಟೋ ದಿನಗಳಾದಂತೆ ಭಾಸವಾಯಿತು. ಮೈಯೆಲ್ಲಾ ಉಚ್ಚೆ, ಕೊಚ್ಚೆಯ ವಾಸನೆ ಬಡಿಯುತ್ತಿತ್ತು. ನಾನೇ ಡ್ರೈನೇಜ್ ಆಗಿದ್ದೆ.

ಅಲ್ಲೇ ಹತ್ತಿರದಲ್ಲಿದ್ದ ಕೊಳಾಯಿಗೆ ಮೈಯೊಡ್ಡಿದೆ. ದೇಹದ ಹೊರಗಿನ ಮಲಿನವೆಲ್ಲ ಮತ್ತೆ ಆ ಚರಂಡಿಯ ಕಡೆಗೇ ಹರಿದಿತ್ತು. ಸ್ವಲ್ಪ ಹಗುರಾದಂತೆ ಅನ್ನಿಸಿತು. ಎದೆಯ ಕಿಸೆಗೆ ಕೈಹಾಕಿ ತಡಕಿದೆ, 10 ರೂಪಾಯಿಯ ನೋಟೊಂದಿತ್ತು, ತೆಗೆದು ಒಣಗಿಸಿದೆ. ಬಿಸಿಬಿಸಿಯಾದ ಚಾ ಕುಡಿದೆ. ಆಗ ನನ್ನ ಇರುವು ನನಗೆ ಅರಿವಾಯಿತು.

ಇಷ್ಟೊತ್ತಿಗೆ ಅಲ್ಲಿ ಏನಾಗಿರಬಹುದೆಂದು ಯೋಚಿಸಿದೆ

ಆ ದಿನ ಆ ದಢೂತಿ ಗಂಡಸು ಮತ್ತು ಒಂದು ಹೆಂಗಸು ನನ್ನನ್ನು ತಂದು ಆ ಸರೋಜಳ ಮಂಚದ ಮುಂದೆ ನಿಲ್ಲಿಸಿದ್ರು. ಅದೇನು ವ್ಯವಹಾರ ಮುಗಿಸಿದರೋ… ಅವರನ್ನು ಕಳಿಸಿ ನನ್ನ ಹತ್ತಿರ ಬಂದವಳೇ ತಲೆ ನೇವರಿಸಿ, “ರೂಮಿನಲ್ಲಿ ನಿನ್ನಂತೆಯೇ ಹುಡುಗಿಯರಿದ್ದಾರೆ, ಅವರೆಲ್ಲ ನಿನ್ನ ತಯಾರಿ ಮಾಡ್ತಾರೆ ಯಾವುದಕ್ಕೂ ಯೋಚಿಸಬೇಡ ನಿನಗೆ ಅನುಕೂಲವಾಗುತ್ತದೆ” ಅಂದಳು.

ನಂತರ ನನಗೆ ಇದು ಬಾಂಬೆಯ ಕಾಮಾಟಿಪುರ ಅಂತ ತಿಳಿದು ಭೂಮಿಯೇ ಬಾಯಿ ತೆರೆದಂತಾಯ್ತು. ಕಕ್ಕಾಬಿಕ್ಕಿಯಾದೆ. ದುಃಖದ ಕಟ್ಟೆ ಒಡೆಯಿತು. ಕಣ್ಣಿನ ನೀರು ಇಂಗುವವರೆಗೂ ಅಳುತ್ತಿದ್ದೆ. ನನ್ನ ಬದುಕಿನ ಚಿತ್ತಾರದ ಕನ್ನಡಿ ಒಡೆದು ಕನ್ನಡಿ ಒಡೆದು ಚೂರು ಚೂರಾಗಿತ್ತು.

ದಿನಕಳೆದಂತೆ ಅಲ್ಲಿದ್ದ ಹುಡುಗಿಯರು ಟ್ರೈನಿಂಗ್ ಪಡೆದವರಂತೆ ನನ್ನ ಬಟ್ಟೆ ನನ್ನ ಹೇರ್ ಸ್ಟೈಲ್ ನನ್ನ ಅಲಂಕಾರ ಎಲ್ಲವನ್ನೂ ಬದಲಿಸಿದರು. ಗಿಲೀಟಿನ ಗೊಂಬೆಯಂತೆ, ನನ್ನ ಹೆಸರನ್ನು ಕೂಡ!

ದಿನವೂ ಹಿಂಸೆ. ಯಾರ್ಯಾರೊ ಅಪರಿಚಿತರು, ಕುಡಿದು ಬಂದವರು, ವಿಕೃತ ಕಾಮಿಗಳು, ಮುದುಕರು, ದಾಂಡಿಗರು, ಕಡ್ಡಿ ಪೈಲ್ವಾನಗಳು, ಬಾಯಿ ವಾಸನೆಯವರು, ಜರ್ದಾ, ಗುಟ್ಕಾ ತಿನ್ಕೊಂಡು ಬಂದವರು, ರೋಗ ರುಜಿನಗಳಿಂದ ನರಳುತ್ತಿದ್ದವರು, ಪಡ್ಡೆಗಳು, ನಿಲ್ಲಲು ತಾಕತ್ತಿಲ್ಲದವರು ಬಂದು ಮೇಲೆರಗುತ್ತಿದ್ದರು. ದಿನವೂ ಹತ್ತಾರು ಬಾರಿ ಅತ್ಯಾಚಾರವಾಗುತ್ತದೆ ಅನ್ನಿಸುತ್ತಿತ್ತು. ನನಗಾಗುತ್ತಿದ್ದ ಹಿಂಸೆ ಆಕಾಶ ಭೂಮಿಗಳಿಗೆ ಹಾಸಿ ಹೊದಿಸುವಷ್ಟಾಗಿತ್ತು. ಆ ಹಿಂಸೆಯನ್ನು ತಾಳಲಾರದೆ ಅಲ್ಲಿಂದ ತಪ್ಪಿಸಿಕೊಳ್ಳುವ ಯೋಚನೆ ಮಾಡುತ್ತಲೇ ಇದ್ದೆ.

ನಿಶ್ಯಬ್ದವಾಗಿತ್ತು. ನಾನು ಬಂದಾಗಿನಿಂದಲೂ ಆಪ್ತತೆಯಿಂದ ನೋಡಿಕೊಳ್ಳುತ್ತಿದ್ದ (ಆ ಮನೆಯ ಪರಿಚಾರಕಿ) ಮೀರಾ ಒಳಬಂದಳು. “ಹೇ ಬ್ರೆಡ್ಡು, ಚಾ ಇಟ್ಟಿದ್ದೀನಿ ತೊಗೋ” ಅಂದಳು. ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದ ಏಕೈಕ ಹಿತೈಷಿ ಅವಳು. ಅವಳನ್ನು ನೋಡಿದ ಕೂಡಲೇ ಬಾಗಿಲು ಹಾಕಿದೆ, ಕಾಲುಗಳನ್ನು ಗಟ್ಟಿಯಾಗಿ ಹಿಡ್ಕೊಂಡೆ, “ಅಕ್ಕ ನನಗೆ ಹಿಂಸೆ ತಡಿಯೋಕೆ ಆಗ್ತಿಲ್ಲ, ಗಂಡಸರೆಲ್ಲ ನನ್ನನ್ನು ಹಿಡಿಹಿಡಿಯಾಗಿ ಹೊಸಕಿ ಹಾಕಿ ಬಿಡುತ್ತಾರೆ, ನಾನು ಊರಿಗೆ ಹೋಗಬೇಕು ಸಹಾಯ ಮಾಡಕ್ಕ” ಅಂತ ಗೋಗರೆದೆ. ಅವಳು ಒಬ್ಬಳೆ ಸಿಕ್ಕಿದಾಗೆಲ್ಲ ನನ್ನ ಅಸಹನೀಯವಾದ ದುಂಬಾಲು ಇದೇ ಆಗಿತ್ತು.

ಅದೇನು ಹೊಳೀತೋ ಅವಳ ಮನಸ್ಸಿಗೆ ಅವಳ ಹೃದಯ ತೆರೆಯಿತು, ನನ್ನನ್ನು ಬರಸೆಳೆದು ಗಟ್ಟಿಯಾಗಿ ಹಿಡಿದುಕೊಂಡು “ರಾಕ್ಷಸಿಗೆ ಗೊತ್ತಾದರೆ ನನ್ನನ್ನು ಹೂತು ಹಾಕುತ್ತಾಳೆ, ಈ ದಿನ ಒಂದು ಉಪಾಯವಿದೆ, ಡ್ರೈನೇಜ್ ರಿಪೇರಿಗೆ ಅಂತ ಮುಚ್ಚಳ ತೆಗೆದು ಹೋಗಿದ್ದಾರೆ, ನಿನಗೆ ಧೈರ್ಯ ಇದ್ದರೆ ಅದೊಂದೇ ದಾರಿ ಇರೋದು, ಏನಾದ್ರೂ ಸಿಕ್ಕಿ ಬಿದ್ದೆಯೋ ನಿನ್ನ ಸರ್ವನಾಶ ಅಂದ್ಕೋ” ಅಂತ ಅವಳು ಹೇಳಿದ್ದೆ ತಡ ಹಿಂಸೆಯ ಕೊಳಕಿನ ಈ ಚರಂಡಿಗಿಂತ ಅದೇ ಲೇಸು, ಪ್ರಾಣ ಉಳಿದರೆ ಹೊಸಬದುಕು ಬದುಕ್ತೀನಿ, ಸತ್ತರೆ ಇದಕ್ಕಿಂತ ಮೇಲು ಅಂದ್ಕೊಳ್ತೀನಿ ಅಂತ ಮೀರಾಳಿಗೆ ಹೇಳಿದೆ.

ಅವಳ ಸಲಹೆಯಂತೆ ಒಂದು ಬಕೆಟ್ ನೀರು ತೊಗೊಂಡು ಟಾಯ್ಲೆಟ್ ಗೆ ಹೋಗುವ ಹಾಗೆ ಆಚೆ ಹೋದೆ. ಅಲ್ಲಿಗೆ ಬಂದ ಮೀರಾ ಗಾಬರಿಯಿಂದ 10 ರೂಪಾಯಿಯ ನೋಟನ್ನು ನನ್ನ ಎದೆಯೊಳಗೆ ತುರುಕಿ, “ಜೋಪಾನ ಕನ್ನಡದವಳು ಅಂತ ಇಷ್ಟು ಮುಂದುವರಿದೆ, ಬೇಗ ಹೊರಡು, ಸ್ವಲ್ಪ ಮುಂದಕ್ಕೆ ಒಂದು ತಿರುವಿದೆ ಅಲ್ಲಿಯೇ ಚರಂಡಿ ರಿಪೇರಿಗೆಂದು ಮುಚ್ಚಳ ತೆಗೆದಿದ್ದಾರೆ ಅದರೊಳಗೆ ಇಳಿದು ಹೋಗು, ಅದೊಂದು ಸುರಂಗ ಥರಾ ಇದೆ ಅಂತ ಎಲ್ಲಾ ಹೇಳ್ತಾರೆ, ಆದ್ರೆ ಯಾರೂ ಮಾಡದ ಸಾಹಸ ನೀನು ಮಾಡುತ್ತಿದ್ದೀಯಾ” ಅಂತ ಹೇಳಿ ದಡಬಡಾಯಿಸಿ ಹೋದಳು.

ಅಬ್ಬಾ… ನನ್ನ ಭಾಷೆ ನನ್ನಮ್ಮನ ಥರಾ ಕಾಪಾಡಿತು ಅಂದ್ಕೊಂಡೆ. ಬಕೆಟ್ ಅಲ್ಲಿ ಇಟ್ಟು ಮೆಲ್ಲಗೆ ನಡೆದೆ. ಸಿಮೆಂಟಿನ ದೊಡ್ಡ ಗುಂಡಗಿನ ಬಾಯಿ ತೆರೆದಿತ್ತು. ಅಲ್ಲಿ ಹೊಕ್ಕವಳು ಹಿಂದೆ ಹೆಜ್ಜೆ ಇಡಲೇ ಇಲ್ಲ ಹಿಂದೆ ಯಾರು ಹಿಂಬಾಲಿಸಿ ಇಲ್ಲ ಅನ್ನೋದು ಖಾತ್ರಿಯಾಯಿತು ಖಂಡಿತವಾಗಿಯೂ ನನ್ನದು ಸಾಹಸ ಯಾರು ಮಾಡಲ್ಲ ಅಂತ ಒಳಗೊಳಗೇ ಅಳು-ನಗು ಒಟ್ಟಿಗೆ ಬಂದ್ವು. ಸ್ವಲ್ಪ ಮುಂದೆ ಹೋದೆ ಅಲ್ಲೊಂದು ಆಟೋ ಸ್ಟ್ಯಾಂಡ್ ಕಾಣಿಸಿತು. ಆಟೋ ಚಾಲಕನೊಬ್ಬ ನನ್ನು ಹರಕುಮುರುಕು ಹಿಂದಿಯಲ್ಲೇ ರೈಲ್ವೆ ಸ್ಟೇಷನ್ ಗೆ ಕರೆದೊಯ್ಯಲು ಕೈಮುಗಿದು ವಿನಂತಿಸಿದೆ.

ಒಪ್ಪಿದ ಅವನು ನನ್ನನ್ನು ಕುಳ್ಳಿರಿಸಿಕೊಂಡ. ಸ್ವಲ್ಪ ದೂರ ಹೋಗುತ್ತಾ ನನಗೆ ಅನುಮಾನ ಬಂತು, ಹಿಂದಕ್ಕೆ ಕರ್ಕೊಂಡ್ ಹೋಗುತ್ತಿದ್ದಾನೆ ಅಂದರೆ ಅದೇ ಜಾಗಕ್ಕೆ ಹೋಗುತ್ತಿರಬಹುದು ಅಂತ ಗಾಬರಿಯಾಗಿ ಆಟೋ ನಿಲ್ಲಿಸುವಂತೆ ನನಗೆ ಗೊತ್ತಿದ್ದ ಕನ್ನಡದಲ್ಲೇ ಕಿರುಚಾಡಿದೆ, ಅವನು ನನ್ನ ಮಾತು ಕೇಳಲೇ ಇಲ್ಲ ನನಗೆ ಆಗ ಖಾತ್ರಿಯಾಯಿತು ಜೋರಾಗಿ ಕೂಗಿಕೊಂಡೆ, ಅಲ್ಲೇ ಪಕ್ಕದಲ್ಲಿ ಹೋಗುತ್ತಿದ್ದ ಆಟೋಡ್ರೈವರ್ ನನ್ನ ನೋಡಿ ಆಟೋ ನಿಲ್ಲಿಸಿದ. ನಾನು ಕನ್ನಡದಲ್ಲೇ ಒದರ್ತಾ ಇದ್ದೆ.

ಕಾಕತಾಳಿಯವೆಂಬಂತೆ ಇಲ್ಲಿಯೂ ನನ್ನಮ್ಮನ ಭಾಷೆಯು ಪ್ರಯೋಜನಕ್ಕೆ ಬಂತು, ಅವನಿಗೆ ಕನ್ನಡ ಗೊತ್ತಿತ್ತು ಅಲ್ಲಿ ಕನ್ನಡ ಗೊತ್ತಿದ್ದವರು ತುಂಬಾ ಜನ ಇದ್ದರು. ಅವನಿಗೆ ಕನ್ನಡ ಗೊತ್ತಿತ್ತು ಅವನ ಆಟೋ ಹತ್ತಿದೆ ರೈಲ್ವೆ ಸ್ಟೇಷನ್ ಬಳಿ ಬಂದು ಆಟೋ ನಿಲ್ಲಿಸಿದ ಅಲ್ಲೇ ಸಮೀಪವಿದ್ದ ಹೋಟೆಲ್ನಲ್ಲಿ ತಿಂಡಿ ಕೊಡಿಸಿದ ಎಲ್ಲವನ್ನೂ ಪಾರಾಗಿ ಬಂದ‌ ಉತ್ಸಾಹದಲ್ಲಿ ಅವನಿಗೆ ನನ್ನ ಕಥೆಯನ್ನೆಲ್ಲ ಹೇಳಿಕೊಂಡೆ ಬೆಂಗಳೂರಿಗೆ ಟಿಕೆಟ್ ತೆಗೆದು ಕೈಬೀಸಿ ನನ್ನ ಕಳಿಸಿಕೊಟ್ಟ.

ಎಷ್ಟು ಒಳ್ಳೆಯ ಮನುಷ್ಯ, ಜಗತ್ತಿನಲ್ಲಿ ಎಲ್ಲರೂ ಕೆಟ್ಟವರೇ ಇರುವುದಿಲ್ಲ ಅನ್ನೋದಕ್ಕೆ ಇವನೇ ಸಾಕ್ಷಿ ಅಂತ ಅವನನ್ನು ನೆನೆಯುತ್ತ ಹಾಗೆ ಕಣ್ಮುಚ್ಚಿದೆ. ಬೆಳಗ್ಗಿನಿಂದ ರೈಲಲ್ಲಿ ಕುಳಿತು ಕೊಳ್ಳುವವರೆಗೂ ಹೈರಾಣಾದ ದಿನ ಅದಾಗಿತ್ತು. ಆಯಾಸವಾಗಿತ್ತು, ಗಾಢ ನಿದ್ರೆಗೆ ಜಾರಿದೆ.

ಮಸುಕು ಮಸುಕಾದ ಬೆಳಗು ರಾತ್ರಿಯನ್ನು ಕಳುಹಿಸಿ ಕೊಡುವುದರಲ್ಲಿತ್ತು, ಚಾಯ್ ಚಾಯ್, ಕಾಫಿ ಕಾಫಿ ಅಂತ ಕೂಗಿದ ಸದ್ದಿನಿಂದ ಎಚ್ಚೆತ್ತೆ. ಯಾವುದಪ್ಪ ಸ್ಟೇಷನ್ ಎಂದೆ, ‘ಬೆಂಗಳೂರು’ ಎಂದ ಹುಡುಗ.

ತಡಬಡಾಯಿಸಿ ಎದ್ದೆ, ರೈಲು ಇಳಿದು ಹೊರಹೋಗುವ ಬಾಗಿಲನ್ನು ತಡಕಾಡುತ್ತಿದ್ದೆ. ಅಷ್ಟರಲ್ಲಿ “ಈಕಡೆ ಬಾ” ಅಂದ್ಹಂಗೆ ಆಯ್ತು… ಕೇಳಿದಂತಿತ್ತು ಆ ಧ್ವನಿ! ನಿಜವಾಗಿಯೂ ಈಗ ನಿದ್ರೆಯ ಮಂಪರು ಜಾಡಿಸಿ ಎದ್ದೆ, ಅದೇ ಗಂಡಸು ಮತ್ತು ಅದೇ ಪೋಷಾಕಿನ ಹೆಂಗಸು ನನ್ನನ್ನು ಸ್ವಾಗತಿಸಲು ನಿಂತಿದ್ರು!!

ಹೋ… ದೋಸೆ ಕೊಡಿಸಿ ಕಥೆಕೇಳಿ ಬೆಂಗಳೂರಿಗೆ ಟಿಕೆಟ್ ಮಾಡಿ ಕಳುಹಿಸಿದ ಆ ಮನುಷ್ಯ ಒಮ್ಮೆಲೆ ಯಮಧರ್ಮನಂತೆ ಕಂಡ. ಅಬ್ಬಾ; ಏನಿದು ಇವರ ಜಾಲ ಅಂದ್ಕೊಂಡೆ. “ಬಾ ಹೋಗಲಿ, ನಿನಗೆ ಬಾಂಬೆ ಹಿಡಿಸದಿದ್ದರೆ ಇಲ್ಲಿಯೇ ಬೆಂಗಳೂರಲ್ಲಿ ಇರುವಿಯಂತೆ ಎಂದ. ತಪ್ಪಿಸಿಕೊಳ್ಳುವ ಆಲೋಚನೆಗೆ ಅವಕಾಶವಿರಲಿಲ್ಲ, ಒಂದೂ ಮಾತಾಡಲಿಲ್ಲ. ಅವರನ್ನೇ ಹಿಂಬಾಲಿಸಿದೆ ತಲೆಯಲ್ಲಿ ಪ್ರಪಂಚವೆಲ್ಲಾ ಸುತ್ತುತ್ತಿತ್ತು.

ಅದೇ ಕಾರು… ಮತ್ತೆ ಪಯಣ, ಆದರೆ ತಲುಪಿದ್ದು ಅದೇ ಬಂಗಲೆಯಲ್ಲ, ಅದು ಯಾವುದೋ ಬೇರೊಂದು ಮನೆ ಅನ್ನಿಸಿತು. ಇಳಿದು ಹಿಂದೆಯೇ ನಡೆದು ಆ ಮನೆಯ ಹಾಲ್ ಹೊಕ್ಕಿದ ಕೂಡಲೇ ತಿಳಿಯಿತು, ಅದು ಒಂದು ಬ್ರಾಥೆಲ್ ಅಂತ. “ಬಾಂಬೆಯಲ್ಲಿ ಇರೋಕೆ ಆಗದಿದ್ದರೆ ಇಲ್ಲೇ ಬಿದ್ದಿರು, ಏನಾದರೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಜೀವಸಹಿತ ಉಳಿಸುವುದಿಲ್ಲ” ಕಿರುಚಾಡಿದ. ಅಷ್ಟೆಲ್ಲ ಸಾಹಸ ಮಾಡಿ ಬಂದ ನಾನು ಹುಲಿ ಬಾಯಿಗೆ ಸಿಕ್ಕ ಹರಿಣಿಯಂತೆ ಬೆದರಿಹೋದೆ. ಮುಂದಿನ ಬದುಕಿನ ಘನಘೋರ ಅಧ್ಯಾಯಗಳು ನನ್ನ ಎದೆಯಲ್ಲಿ ಗೋಚರಿಸತೊಡಗಿದವು.

ಹೋ… ಇಷ್ಟೆಲ್ಲಾ ನಿಮ್ಮಲ್ಲಿ ನನ್ನ ಬದುಕ ಪುಟಗಳ ತೆರೆದಿಟ್ಟ ನಾನು ಯಾರೆಂದು ಪರಿಚಯಿಸಿಕೊಳ್ಳಲೇ ಇಲ್ಲ. ನನಗೆ ಒಂದೇ ಹೆಸರಿಲ್ಲ, ನನ್ನ ಹುಟ್ಟು ಹೆಸರು, ಊರು ಹೇಳುವ ಹಾಗಿಲ್ಲ. ಹಾಗಂತ ನಾನೇನು ಆಕಾಶದಿಂದ ಇಳಿದವಳೇನಲ್ಲ; ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ನಿಮ್ಮ ಮುಂದೆ!!

ನನ್ನ ಅಪ್ಪ ರೈತ. ನಾವು ನಾಲ್ಕು ಮಕ್ಕಳು, ಅಣ್ಣಂದಿರು ಇಬ್ಬರು, ಒಬ್ಬ ತಮ್ಮ. ಅಪ್ಪ ಅಮ್ಮ ಕೃಷಿಯಿಂದಲೇ ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದರು. ಅಣ್ಣಂದಿರಿಬ್ಬರೂ ಅಪ್ಪನ ಜೊತೆ ವ್ಯವಸಾಯ ಮಾಡುತ್ತಿದ್ದರು. ಬೇರೆಯವರ ಜಮೀನಿಗೂ ಕೆಲಸ ಮಾಡಲು ಹೋಗಿ ಸಂಸಾರವನ್ನು ಸರಿದೂಗಿಸುತ್ತಿದ್ದರು.

ತಮ್ಮ ಶಾಲೆಗೆ ಹೋಗುತ್ತಿದ್ದ. ನಾನು ಆರನೇ ತರಗತಿವರೆಗೂ ಹೋದೆ, ಆಮೇಲೆ ಮನೆ ಕೆಲಸ ಮಾಡಿಕೊಂಡು ಇದ್ದುಬಿಟ್ಟೆ. ಒಪ್ಪವಾಗಿ ಅಡುಗೆಮನೆಯನ್ನು ನಿಭಾಯಿಸುವುದನ್ನು ನೋಡಿ ನನ್ನ ಅಮ್ಮ ಅಪ್ಪ ಮುದ್ದು ಮುದ್ದಾಗಿದ್ದ ಮಗಳ ಬಗ್ಗೆ ಬೀಗುತ್ತಿದ್ದರು.

ನನ್ನ ಊರಿನಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರು ವಾಸವಾಗಿದ್ದರು. ಅವರಿಗೆ ಕೇಶವನೆಂಬ ಮಗ ಇದ್ದ. ಅವನು ಬೆಂಗಳೂರಿನಲ್ಲಿ ಓದುತ್ತಿದ್ದ. ಆಗಾಗ್ಗೆ ಊರಿಗೆ ಬಂದಾಗ ನಮ್ಮ ಮನೆಗೂ ಬರುತ್ತಿದ್ದ, ಅಣ್ಣಂದಿರ ಜೊತೆ ಹರಡುತ್ತಿದ್ದ. ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವಷ್ಟು ಸ್ಪುರದ್ರೂಪಿಯಾಗಿದ್ದ. ದಿನಕಳೆದಂತೆ ನಾವಿಬ್ಬರೂ ಪ್ರೀತಿಸ ತೊಡಗಿದೆವು. ಅವನನ್ನು ಬಿಟ್ಟಿರಲಾರದಷ್ಟು ನನ್ನ ಪ್ರೀತಿ ಗಟ್ಟಿಯಾಗುತ್ತಿತ್ತು. ಕದ್ದು ಮುಚ್ಚಿ ಸಾಕಾಗಿತ್ತು. ರಜೆಗೆಂದು ಬಂದಿದ್ದ ಕೇಶವ ಒಂದು ತಿಂಗಳು ಊರಿನಲ್ಲಿ ಉಳಿದುಕೊಂಡ. ಮನೆಯವರು ನಮ್ಮ ಮದುವೆಗೆ ಒಪ್ಪಿಗೆ ಕೊಡೋಲ್ಲ, ನನ್ನೊಂದಿಗೆ ಬಂದುಬಿಡು ಮದುವೆಯಾಗೋಣ, ಎಲ್ಲಿಯಾದರೂ ದುಡಿದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದ. ಸರಿ ಹದಿನೇಳರ ಹುಚ್ಚು ಮನಸ್ಸಿನ ಕೋಡಿ ಒಡೆದಿತ್ತು

ಮೊದ ಮೊದಲು ಭಯವಾಯಿತು. ಪ್ರೀತಿಯ ಮುಂದೆ ಸೋತು ಹೋದೆ. ಅವನೊಂದಿಗೆ ಓಡಿಹೋಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದೆ. ಅಮ್ಮನಿಗೆ ಅವರ ಮನೆಯಿಂದ ಕೊಟ್ಟಿದ್ದ ಒಡವೆಗಳನ್ನು ನನ್ನ ಮದುವೆಗೆ ಅಂತ ಎಷ್ಟೇ ಕಷ್ಟ ಬಂದಾಗಲೂ ಕೊಡದೆ ಜೋಪಾನ ಮಾಡಿ ಇಟ್ಟಿದ್ದರು. ಉಪಾಯದಿಂದ ಅವುಗಳನ್ನು ಗಂಟುಕಟ್ಟಿಕೊಂಡೆ. ಇದ್ದಬದ್ದ ಹಣವನ್ನು ತೆಗೆದುಕೊಂಡೆ. ಅಂದು ಭಾನುವಾರ ರಾತ್ರಿ 8 ಗಂಟೆಯಾಗಿತ್ತು. ಮನೆಯವರೆಲ್ಲಾ ಹೊಲದಲ್ಲಿ ಕೊಯ್ದಿದ್ದ ರಾಗಿ ತರಲು ಹೋಗಿದ್ದರು. ಅವರೆಲ್ಲ ವಾಪಸ್ ಬರುವುದರೊಳಗೆ ನಾನು ಕೇಶವನ ಜೊತೆ ಬಸ್ ಹತ್ತಿದೆ.

ಇಡೀ ದೇಹ ನಡುಗುತ್ತಿತ್ತು. ಮನೆಗೆ ಹಿಂತಿರುಗಿದ ಅಪ್ಪ-ಅಮ್ಮ ಅಣ್ಣಂದಿರ ಸ್ಥಿತಿಯ ಬಗ್ಗೆ ಯೋಚಿಸಿದೆ, ಕಣ್ಣು ಕತ್ತಲಿಟ್ಟಂತಾಯ್ತು. ಸಾವರಿಸಿಕೊಂಡೆ. ಬಸ್ಸು ಬೆಂಗಳೂರು ಕಡೆಗೆ ಚಲಿಸುತ್ತಿತ್ತು. ಬೆಂಗಳೂರು ತಲುಪಿದೆವು. ಹೋಟೆಲೊಂದರಲ್ಲಿ ಪಕ್ಕಾ ಗಂಡ ಹೆಂಡತಿಯಂತೆ ನಟಿಸಿ ರೂಮು ಗಿಟ್ಟಿಸಿಕೊಂಡೆವು. ಕೂಡಲೇ ನನ್ನ ಜಗತ್ತಿನ ದಿಕ್ಕೆ ಬದಲಿಸಿತ್ತು. ಕೇಶವ ನನ್ನನ್ನು ಅದೆಷ್ಟು ಪ್ರೀತಿಸುತ್ತಾನೆ ಅನ್ನೋದು ಅವನ ಮೊದಲ ಅಪ್ಪುಗೆಯಲ್ಲಿ ತಿಳೀತು. ಅವನ ಆಲಿಂಗನದ ಉನ್ಮಾದದಲ್ಲಿ ಓಡಿಬಂದ ಘಳಿಗೆಯನ್ನೇ ಮರೆತೆ.

ಇಬ್ಬರೂ ಕ್ಷಣಕ್ಷಣಕ್ಕೂ ದೈಹಿಕವಾಗಿ ಮಾನಸಿಕವಾಗಿ ನಗ್ನವಾಗತೊಡಗಿದೆವು. ಸತತವಾಗಿ ಮೂರು ದಿನಗಳು ಅವನು ನನ್ನದೆಲ್ಲವನ್ನೂ ಸೂರೆಗೊಂಡಿದ್ದ. ಮಧ್ಯೆ ಮಧ್ಯೆ ಊಟ-ತಿಂಡಿ ತರುತ್ತಿದ್ದ ಮಧ್ಯವಯಸ್ಸಿನ ಆ ವ್ಯಕ್ತಿಯು ನಮ್ಮನ್ನು ನೋಡಿ ತುಂಟ ನಗು ಬೀರುತ್ತಿದ್ದ. ಆಗ ತಾನೇ ಮದುವೆಯಾಗಿ ಬಂದಿರುವ ಜೋಡಿ ಅಂತ ವಿಶ್ವಾಸ ತೋರಿದ.

ತಂದಿದ್ದ ಹಣವೆಲ್ಲ ಖಾಲಿಯಾಗುತ್ತ ಬಂತು ನನ್ನನ್ನು ರಮಿಸುತ್ತಲೇ ಕೇಶವ ಪುಸಲಾಯಿಸಿದ, ನೀನು ತಂದಿರುವ ಒಡವೆಗಳನ್ನು ಕೊಡು ಅವುಗಳನ್ನು ಮಾರಿ ಒಂದು ಪುಟ್ಟ ಮನೆ ಬಾಡಿಗೆ ಹಿಡಿಯೋಣ, ನಾನು ಯಾವುದಾದರೂ ಕೆಲಸಕ್ಕೆ ಸೇರುತ್ತೇನೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಬಯಕೆ, ಮುಂದೊಂದು ದಿನ ಈ ಒಡವೆಗಳ ಎರಡರಷ್ಟು ಒಡವೆ ಮಾಡಿಸ್ತೀನಿ… ಅವನು ಪಿಸುಗುಡುತ್ತಲೇ ಇದ್ದ.

ಅಜ್ಜಿ ಮನೆಯಿಂದ ಅಮ್ಮನಿಗೆ ಕೊಟ್ಟಿದ್ದ ಈ ಒಡವೆಯನ್ನು, ಮತ್ತು ನನ್ನನ್ನು ಅಮ್ಮ ಅದೆಷ್ಟು ಜೋಪಾನ ಮಾಡಿದ್ದಳು. ಎರಡನ್ನೂ ಕಳೆದುಕೊಂಡಳು! ನಾನು ಹೇಗೆ ಆ ಒಡವೆಯಿಂದ ಮನೆ ಮಾಡಿ ಕೊಳ್ಳುವುದು ಅಂತ ಅನ್ನಿಸಿದರೂ, ನನ್ನ ಬದುಕೇ ಕೇಶವನ ಹೃದಯದಲ್ಲಿ ಬೆರೆತು‌ ಹೋಗಿರುವಾಗ ಈ ಒಡವೆಗಳ ಬಗ್ಗೆ ಯೋಚಿಸುವುದು ಸರಿಯಲ್ಲ ಅಂತ ಗಟ್ಟಿ ಮನಸ್ಸು ಮಾಡಿ ಎಲ್ಲಾ ಒಡವೆಗಳನ್ನೂ ಕಟ್ಟಿದ್ದ ಆ ಮೆತ್ತನೆಯ ಬಟ್ಟೆಯ ಗಂಟನ್ನು ಅವನ ಕೈಗಿತ್ತೆ. ಕಣ್ಣಾಲಿಗಳು ಒದ್ದೆಯಾದವು.

ಪುಟ್ಟ ಮನೆ, ಕೇಶವ ನೊಂದಿಗಿನ ಬಣ್ಣದ ಬದುಕು, ಕಣ್ಣಮುಂದೆ ಹಾದು ಹೋದ ಕನಸುಗಳು ನನ್ನನ್ನು ಸಮಾಧಾನಿಸಿ ನೇವರಿಸಿದವು. ಅವನೂ ಬೇಸರ ಮಾಡಿಕೊಂಡಂತೆ ಕಂಡ. ಅವನ ಮನಸ್ಸೂ ಭಾರವಾಗಿತ್ತು. ನನ್ನನ್ನೊಮ್ಮೆ ಅಪ್ಪಿಕೊಂಡ. ಜೋಪಾನ ಬಾಗಿಲು ಹಾಕಿಕೋ ಅಂತ ಹೇಳಿ ಹೊರಟ. ನಾನು ಬಾಗಿಲು ಹಾಕಿಕೊಂಡೆ…

ಹೊಟ್ಟೆ ಚುರುಗುಟ್ಟುತ್ತಿತ್ತು. ಮಧ್ಯಾಹ್ನವಾಯಿತು, ಸಂಜೆಯಾಯ್ತು, ರಾತ್ರಿ ಆಯ್ತು , ಕೇಶವನ ಸುಳಿವಿಲ್ಲ ಎದೆಬಡಿತ ಹೆಚ್ಚಾಯಿತು. ಆತಂಕ ಶುರುವಾಯಿತು. ಏನೇನೋ ಕೆಟ್ಟ ಆಲೋಚನೆಗಳು ಒಂದೊಂದೇ ಮುತ್ತಿಕ್ಕಿದವು. ಅವನ ನಿರೀಕ್ಷೆಯಲ್ಲಿ ಒಂದು ದಿನ ಒಂದು ವರ್ಷವಾದಂತೆ ಭಾಸವಾಯಿತು. ಕೇ…ಶವ ಬರಲೇ… ಇಲ್ಲ!

ರಾತ್ರಿ ಏಳು ಎಂಟು ಗಂಟೆ ಇರಬಹುದು, ಬಾಗಿಲು ಬಡಿದ ಸದ್ದಾಯ್ತು, ಕೊನೆಗೂ ಬಂದನಲ್ಲ ಅಂತ ಚೈತನ್ಯ ತುಂಬಿಕೊಂಡು ಬಾಗಿಲು ತೆಗೆದೆ. ತಬ್ಬಿಬ್ಬಾದೆ, ಹೃದಯವೇ ಬಾಯಿಗೆ ಬಂದಂತಾಗಿತ್ತು… ಏನಾದರೂ ಕೆಟ್ಟ ಸುದ್ದಿ ಬಂತು? ಕೇಶವನಿಗೆ ಏನಾದರೂ ಆಯ್ತಾ? ಅಯ್ಯೋ ಹಾಗಾಗದಿರಲಿ ದೇವರೇ, ಇಡೀ ಬದುಕನ್ನೇ ಅವನ ಜೊತೆಗೆ ಕನಸು ಕಟ್ಟಿ ಬಂದಿದ್ದೇನೆ. ಅವನಿಲ್ಲದ ಬದುಕಿನ ಕಲ್ಪನೆಯೂ ಸಾಧ್ಯವಿಲ್ಲ ಅಂತ ಸಾವರಿಸಿಕೊಂಡೆ.

ಬಾಗಿಲಲ್ಲಿ ಒಬ್ಬ ಹುಡುಗ ನಿಂತಿದ್ದ, ‘ನಿಮ್ಮ ಗಂಡ ಕರೆಯುತ್ತಾರೆ ಬಾ’ ಅಂದ. ನನ್ನ ಮಾತನ್ನು ಲೆಕ್ಕಿಸದಾದ. ದಡಬಡ ಅಂತ ನನ್ನ ಬ್ಯಾಗ್ ತೊಗೊಂಡು ಅವನನ್ನು ಅನುಸರಿಸಿದೆ. ನನ್ನ ಗಂಡ ಎಲ್ಲಿ? ನೀನು ಯಾರು? ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆ, ಅವನಿಂದ ಒಂದು ಶಬ್ದವೂ ಬರಲಿಲ್ಲ. ಕೆಳಗಿಳಿದಿಳಿದು ಹೋದೆವು, ಒಂದು ವರಾಂಡದ ಬಾಗಿಲು ತೆರೆದಿತ್ತು, ಒಳಹೊಕ್ಕೆವು. ಎದುರಿಗೆ ಒಬ್ಬ ಧಡೂತಿ ಮನುಷ್ಯ ಕುಳಿತಿದ್ದ. ‘ಬಾ, ನಿನ್ನ ಹೆಸರೇನು’ ಅಂದ, ನನಗೆ ದಿಕ್ಕೇ ತೋಚಲಿಲ್ಲ, ಇವನ್ಯಾರು? ಕೇಶವನೆಲ್ಲಿ? ದಿಗಿಲಾಯ್ತು, ನನ್ನ ಗಂಡ ಎಲ್ಲಿ? ಮರು ಪ್ರಶ್ನಿಸಿದೆ.

ಕೇಕೆ ಹಾಕಿಕೊಂಡು ನಕ್ಕ, ಮತ್ತೆ ಮತ್ತೆ ನನ್ನ ಪ್ರಶ್ನೆಯನ್ನು ಪುನರುಚ್ಚರಿಸಿದ, ಗಂಡ ಅಂತೆ ಗಂಡ ಅಂತ ಒಂದು ವಿಚಿತ್ರವಾದ ವಕ್ರ ನಗುನಗುತ್ತಲೇ ಇದ್ದ. ಸಪ್ತಪದಿ ತುಳಿದು ಮಾಂಗಲ್ಯಧಾರಣೆ ಮಾಡಿಕೊಂಡು ಬಂದಿದ್ದೀಯ ಅಲ್ವಾ? ಅಂತ ಕೇಳಿದ. ಸ್ವಲ್ಪ ಗಂಭೀರವಾಗಿ, ‘ನಿನ್ನ ಗಂಡ ನಿನ್ನನ್ನು ಹತ್ತು ಸಾವಿರಕ್ಕೆ ನನಗೆ ಮಾರಿ ಹೋದ’ ಏನು ಚೌಕಾಶಿ ಮಾಡ್ತಾನೆ ಚಾಂಡಾಲ… ಅಂತ ಅದೇನೇನೋ ಹೇಳ್ತಾನೇ ಇದ್ದ…

ನನಗೆ ಕಣ್ಣುಕತ್ತಲಿಟ್ಟಿತು. ನೆಲವೇ ಬಿರಿದಂತಾಯ್ತು. ಭೂಮಿ ಆಕಾಶಗಳು ತಲೆಕೆಳಗಾದವು. ಇದೇನಿದು ನನ್ನ ಬದುಕಿನ ಅಚಾನಕ್!! ಇದೇನು ಮಾರಿ ಹೋಗುವುದು ಅಂದರೆ?? ಏನೂ ಅರ್ಥವಾಗಲಿಲ್ಲ. ಮನಸ್ಸು ಛಿದ್ರ ಛಿದ್ರವಾದ ನೋವನ್ನು ಅನುಭವಿಸುತ್ತಿತ್ತು. ಕನಸುಗಳ ಮೂಟೆ ಒಡೆದು ಅದರೊಳಗಿನ ಚಿಂದಿಗಳೆಲ್ಲಾ ನನ್ನ ಸುತ್ತ ನರ್ತನ ಮಾಡತೊಡಗಿದವು. ಅಯ್ಯೋ, ನಾನು ಮೋಸ ಹೋದೆನಾ ಅಂತ ಕುಸಿದು ಕುಳಿತೆ. ಕೇಶವನ ಮುಖ ಕಣ್ಣೆದುರು ಬಂತು, ಅವನು ಹಾಗೆ ಮಾಡಿರಲಾರ, ಇದರಲ್ಲಿ ಏನೋ ಮೋಸವಿದೆ ಅಂತ ಮನಸ್ಸು ರೋದಿಸಿತು.

ಆ ಹುಡುಗನನ್ನು ಕೇಳಿದೆ, ನನ್ನ ಗಂಡನನ್ನು ನೋಡಿದೆಯಾ? ಅಂತ. ಪಾಪ, ಮುಗ್ದವಾಗಿ ಹೇಳಿದ, ‘ಸಂಜೆ ಬಂದು ಬಾಸ್ ಹತ್ರ ಮಾತಾಡಿ ಹೋದ,’ ಅಂದ.
ಕಳೆದ ಮೂರ್ನಾಲ್ಕು ದಿನಗಳಲ್ಲಿ ಜನ್ಮದಿಂದ ಜೊತೆಗಿದ್ದವನಂತೆ ನಟಿಸಿ ನನ್ನ ಕೊಂದೇ ಬಿಟ್ಟ..! ಎಷ್ಟು ಯೋಚಿಸಿದರೂ ಯಾವ ಸುಳಿವೂ ಇಲ್ಲ. ದಾರಿಗಳೂ ಇಲ್ಲ. ಕಗ್ಗತ್ತಲ ಕಾಡಿನಲ್ಲಿ ಕಳೆದುಹೋದ ಮಗುವಿನಂತಾಯ್ತು ನನ್ನ ಸ್ಥಿತಿ. ಅವರೊಂದಿಗೆ ನಡೆದು ಹೋದೆ. ಅಲ್ಲೇ ಬಾಗಿಲಲ್ಲಿ ನಿಂತಿದ್ದ ಕಾರಿನಲ್ಲಿ ಹೊರಟೆವು.

ಬೆಂಗಳೂರಿನ ಹೊರವಲಯದ ಕಾಲೋನಿಯೊಂದರ ದೊಡ್ಡ ಮನೆಗೆ ನನ್ನ ಕರೆದೊಯ್ದರು. ಅಲ್ಲಿ ಮೂರು ದಿನಗಳು ನನ್ನನ್ನು ಕೂಡಿ ಹಾಕಿದ್ದರು. ಊಟ ತಿಂಡಿ ಕೊಡುವಾಗ ಮಾತ್ರ ಬಾಗಿಲು ತೆರೆಯುತ್ತಿತ್ತು. ಒಂಟಿಯಾಗಿ ಕುಳಿತು ಆ ದಿನ ರಾತ್ರಿ ಕೇಶವನ ಜೊತೆ ಬಂದಾಗಿನಿಂದ ಇಲ್ಲಿಯವರೆಗೂ ನಡೆದ ಎಲ್ಲವನ್ನೂ ನೆನೆದು ನೆನೆದು ಅಳುತ್ತಿದ್ದೆ. ಅಳುವುದು ಒಂದು ಬಿಟ್ಟು ಏನೂ ತೋಚುತ್ತಿರಲಿಲ್ಲ. ನನ್ನ ಬದುಕಿನ ಎಲ್ಲ ದಾರಿಗಳೂ ಬಂದ್ ಆಗಿದ್ದವು.

ತುಂಬು ಕುಟುಂಬದಲ್ಲಿ ಎಲ್ಲರ ಪ್ರೀತಿ ಪಡೆದು ಅರಳಿದ್ದ ನನ್ನ ಬದುಕನ್ನು ಕೇಶವ ಹೊಸಕಿ ಹಾಕಿದ್ದ. ಅವನೊಳಗೆ ಇಷ್ಟೊಂದು ಕ್ರೌರ್ಯ ಇರಬಹುದೆಂದು ನನ್ನ ಮನಸ್ಸಿಗೆ ಎಂದೂ ಅನ್ನಿಸಿರಲಿಲ್ಲ. ಹದಿಹರೆಯದ ಮನಸ್ಸು ಅವನ ಗಿಲೀಟಿನ ನಡವಳಿಕೆಗೆ ಸೋತು ಹೋಗಿತ್ತು. ಅವನೇ ಸರ್ವಸ್ವ ಎಂದು ಎಲ್ಲ ತೊರೆದು ಬಂದ ನನಗೆ ಅವನು ಮಾಡಿದ ಮೋಸದಿಂದಾಗಿ ನನ್ನ ಮನಸ್ಸು ಇನ್ನೆಂದೂ ಕನಸುಗಳೇ ಕಾಣದ ಶವದಂತೆ ಆಗಿತ್ತು.

ಮೂರು ದಿನ ಕಳೆದಾಗ ಅದೇ ಕಾರಿನಲ್ಲಿ, ಅದೇ

ಜನ ನನ್ನನ್ನು ರೈಲ್ವೇ ಸ್ಟೇಷನ್ನಿಗೆ ಕರೆತಂದಿದ್ದರು. ಅವರೊಂದಿಗೆ ಆ ಮನೆಯಲ್ಲಿದ್ದ ಹೆಂಗಸು ಜೊತೆಯಲ್ಲಿತ್ತು. ದಾರಿಯಲ್ಲಿ ನನ್ನನ್ನು ಎಲ್ಲಿಗೆ ಕರ್ಕೊಂಡು ಹೋಗ್ತಿದ್ದೀರ ಅಂತ ಎಷ್ಟು ಕೇಳಿದರೂ ಆ ಹೆಂಗಸು ಕೇಳದವಳಂತೆ ನಟಿಸುತ್ತಿದ್ದಳು. ಪ್ರಯಾಣ ಮುಗಿದು ಕಡೇ ಸ್ಟೇಷನ್ ನಲ್ಲಿ ಇಳಿದಾಗ ‘ಬಾಂಬೆ ರೈಲ್ವೆ ಸ್ಟೇಷನ್’ ಅಂತ ಗೊತ್ತಾಗಿತ್ತು. ಮೂಕವಾಗಿ ಅವರನ್ನು ಹಿಂಬಾಲಿಸಿದ್ದೆ. ಅವರು ಆಟೋವೊಂದನ್ನು ನಿಲ್ಲಿಸಿ ಕಾಮಾಟಿಪುರ ಎಂದರು…

‍ಲೇಖಕರು ಲೀಲಾ ಸಂಪಿಗೆ

August 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಎಷ್ಟೊಂದು ಹೆಣ್ಣುಗಳ ಕಣ್ಣೀರ ಕಥನಗಳಿವೆಯೋ ಕೆಂಪು ದೀಪದ ಕೂಪದೊಳಗೆ

    ಪ್ರತಿಕ್ರಿಯೆ
  2. Vasudeva Sharma

    ಸತ್ಯ ಕತೆಗಳನ್ನು ಬರೆಯಲೂ ಎಂಟೆದೆ ಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: