ಬದುಕಿನ ಗತಿ ಬದಲಿಸಿದ ಫೋನ್ ಕಾಲ್
**********************************
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ತನ್ನ ಸಾಧನೆಯ ಹಿಂದಿನ
ಹೋರಾಟದ ಕತೆ ನನ್ನ ಬದುಕಿನ ತಿರುವಿನ ಕತೆ ನೆನಪಿಸಿತು.

ಸಿ ಮಂಜುನಾಥ್ ನೆಟ್ಕಲ್
1994 ರಲ್ಲಿ ನಾನು ಬಿಕಾಂ ನಪಾಸಾಗಿ ಯಾವ ಕೆಲಸಕ್ಕೂ ನಾಲಾಯಕ್ಕು ಅನಿಸಿಕೊಂಡೆ. ಮನೆಯಲ್ಲಿ ಪ್ರತಿದಿನ ಕೂಳಿಗೆ ದಂಡ ಎಂಬ ನಿಂದನೆ ತಾಳಲಾಗದೆ ನನ್ನ ಫೇಲ್ ಮಾರ್ಕ್ಸ್ ಕಾರ್ಡ್ ಅನ್ನು ಒಂದು ದೊಡ್ಡ ಕವರ್ ನಲ್ಲಿ ಹಾಕಿಕೊಂಡು, ಜೇಬಿನಲ್ಲಿ ಯಾವುದೋ ಪುಡಿ ಕೆಲಸ ಮಾಡಿದ ಮುನ್ನೂರು ರುಪಾಯಿ ಜೊತೆ ಮನೆಬಿಟ್ಟೆ.
ಎಲ್ಲಿಗೆ ಹೋಗೋದು ಗೊತ್ತಿಲ್ಲ. ಹೊರಟಾಗ ಸಂಜೆ. ರಾತ್ರಿ ಉಳಿಯೋದು ಎಲ್ಲಿ ? ಗೊತ್ತಿಲ್ಲ .!! ಯೋಚಿಸಿದೆ ಹತ್ತಿರದ ಮದುವೆ ಛತ್ರದಲ್ಲಿ ಮದುವೆ ನಡೆಯುತ್ತಿತ್ತು. ಬೆಳಗ್ಗೆ ಹಲ್ಲು ಉಜ್ಜಲು ಬ್ರಷ್ ಪೇಸ್ಟ್ ತಗೊಂಡೆ. ರಾತ್ರಿ ಊಟ, ನಿದ್ದೆ , ಬೆಳಗಿನ ತಿಂಡಿ ಅಲ್ಲೇ ಮುಗಿಯಿತು. ಮಧ್ಯಾಹ್ನದವರೆಗೆ ಪಾರ್ಕನಲ್ಲಿ ಕಾಲ ಕಳೆದೆ. ಮಧ್ಯಾಹ್ನ ಇನ್ನೊಂದು ಛತ್ರದಲ್ಲಿ ಹಸಿವು ಇಂಗಿತು. ಇನ್ನೂ ಎಷ್ಟು ಛತ್ರ ಹುಡುಕುವುದು. ಸಾಕು ಜೀವನ ಅನಿಸಿಬಿಟ್ಟಿತು.
ಅಲ್ಲಿಂದ ವಿಜಯನಗರದ ಸಮೀಪದ ಉದ್ಯಾನವೊಂದರಲ್ಲಿ ಕುಳಿತು ಹೇಗೆ ಸಾಯೋದು ಅಂತಾ ಯೋಚಿಸುತ್ತಾ ಕುಳಿತೆ. ಲಾರಿ ಬೆಸ್ಟ್ ಅನಿಸಿತು. ಕೇಸ್ ಆಗಲ್ಲ. ಯಾರಿಗೂ ತೊಂದರೆ ಆಗಲ್ಲ ಅಂದುಕೊಂಡೆ. ಇನ್ನೇನು ಹೊರಡಬೇಕು ಅಷ್ಟರಲ್ಲಿ ನನ್ನ ಕಾಲೇಜಿನ ಸಹಪಾಠಿ ಭಾಸ್ಕರ್ ನೆನಪಾದ . ನನ್ನ ಆತ್ಮೀಯ ಗೆಳೆಯರಲ್ಲಿ ಅವನೊಬ್ಬನ ಮನೆಯಲ್ಲಿ ಫೋನ್ ಇತ್ತು . ಒಂದು ರೂಪಾಯಿ ನಾಣ್ಯ ಹಾಕಿ ಕಾಲ್ ಮಾಡಿದೆ. ಅವನು ಮನೆಗೆ ಬರಲು ಹೇಳಿದ. ಹೊರಟೆ.
ಅಷ್ಟರಲ್ಲಿ ನನ್ನ ಹುಡುಕಾಟ ಶುರುವಾಗಿ ಅವನ ಮನೆಗೆ ನನ್ನ ಗೆಳೆಯನೊಬ್ಬ ಬಂದು ನನಗಾಗಿ ಕಾದಿದ್ದ . ನಾನು ಖಂಡಿತಾ ಭಾಸ್ಕರ್ ಗೆ ಫೋನ್ ಮಾಡುತ್ತೇನೆಂದು ಮೊದಲೇ ಊಹಿಸಿ ಅವನಿಗೆ ಮುಂಚಿತವಾಗಿ ತಿಳಿಸಿ ನನ್ನನ್ನು ಟ್ರಾಪ್ ಮಾಡಲು ಖೆಡ್ಡಾ ತಯಾರಾಗಿತ್ತು. ಭಾಸ್ಕರ್ ಮನೆಗೆ ಬಂದೆ ನನ್ನ ಜೀವ ಉಳಿಯಿತು. ಗೆಳೆಯ ಚೆನ್ನಾಗಿ ಬೈದ. ಬುದ್ದಿ ಹೇಳಿದ. ಸಾಯುವ ಆಸೆ ಕೈ ಬಿಟ್ಟು ಬದುಕುವ ದಾರಿ ಹುಡುಕಲು ತಿಳಿಸಿದ. ನನ್ನ ಹೊಸ ಹೋರಾಟ ಆರಂಭವಾಯಿತು. 1997 ರಲ್ಲಿ ಬಿಕಾಂ ಯಾತ್ರೆ ಮುಗಿಯಿತು. 1998ಕ್ಕೆ ಎಂಎ ಸೇರಿದೆ.
ಎಂಎ ನಲ್ಲಿ ಮೂರು ಚಿನ್ನದ ಪದಕಗಳನ್ನು ರಾಜ್ಯಪಾಲರಿಂದ ಪಡೆವ ಅದೃಷ್ಟ ನನ್ನದಾಯಿತು. ಪ್ರತಿಷ್ಟಿತ ಕಾಲೇಜಿನಲ್ಲಿ ಪಾಠ ಮಾಡತ್ತಾ, ಆಕಾಶವಾಣಿ, ದೂರದರ್ಶನದಲ್ಲಿ ವಾರ್ತೆಗಳನ್ನು ಓದಿದೆ , ಸಾಹಿತ್ಯ , ಸಂಗೀತ, ನಾಟಕ,ಫೋಟೋಗ್ರಫಿ ಹೀ ಗೆ ನೂರಾರು ಹುಚ್ಚುಚ್ಚು ಹವ್ಯಾಸಗಳ ಜೊತೆ ಇಂದು ನೆಮ್ಮದಿ ಪಡೆದಿದ್ದೇನೆ,
ಆ ಕತೆಯನ್ನು ಬರೆಯಲು ಇಲ್ಲಿದ್ದೇನೆ. ಸಾವಿಗಿಂತ ಬದುಕು ದೊಡ್ಡದು ಎಂಬುದು ಅರಿವಾಗಿದೆ. ಇಪ್ಪತ್ತರ ಹರೆಯದ ಹುಚ್ಚು ಆವೇಶಕ್ಕೆ ಬಲಿಯಾಗದೆ ನಿರ್ಧಾರ ಬದಲಿಸಿದ್ದು ಫಲ ನೀಡಿದೆ. ಬದುಕಲು ಹೊರಟರೆ ನೂರಾರು ದಾರಿಗಳು ತೆರೆಯುತ್ತವೆ. ಸಾವಿಗೆ ಸ್ಮಶಾನವೊಂದೇ ದಾರಿ. ಯಾರೂ ಇಂತಹ ಸಾಹಸ ಮಾಡದಿರಿ. ಯಾವುದೇ ಕಾರಣಕ್ಕೆ ಜೀವನ ಬೇಡ ಅನಿಸಿದ ಗಳಿಗೆ ನಿಮ್ಮ ಆತ್ಮೀಯ ಮಿತ್ರನಿಗೆ ಒಂದು ಕರೆ ಮಾಡಿ ಇಲ್ಲ . ಮೆಸೇಜ್ ಕಳಿಸಿ..ಅದೊಂದು ಕರೆ ನಿಮ್ಮ ಬದುಕಿನ ಗತಿಯನ್ನೇ ಬದಲಿಸಿಬಿಡಬಹುದು.
ಅವತ್ತು ನಾನು ಮಾಡಿದ ಆ ಒಂದು ಫೋನ್ ಕಾಲ್ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ
ಆ ಕ್ಷಣದ ನನ್ನ ನಿರ್ಧಾರಕ್ಕೆ ಇವತ್ತಿಗೂ ಹೆಮ್ಮೆ ಇದೆ.





ಸಾವಿಗಿಂತ ಬದುಕು ದೊಡ್ಡದು
ಎಂಥ ಮಾತು…
ಶಮಾ ಮತ್ತು ಕೀರ್ತಿ ಗೌಡ ರವರೆ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಜೀವನದ ಕಷ್ಟಗಳಿಗೆ ಅಂಜುವ ಯುವ ಜನತೆಗೆ ಜೀವನ ಉತ್ಸಾಹ ತುಂಬುವ ಲೇಖನ