ಸ.ರಘುನಾಥ
ಉಡುಗೊರೆರೆ
ಏನು ಉಡುಗೊರೆ
ತಂದೆ?
ನಕ್ಕು ನೋಡಿದ ನನ್ನ
ಎಡೆ
ಏನು ಉಡುಗೊರೆ ತಂದೆ ಎಂದೆ
ಮತ್ತೆ.
ನಕ್ಕು ನೋಡಿದ ನನ್ನ
ಎದೆ.
ಗೆಳತಿ, ನಾಚಿ ಸುಮ್ಮನೆ
ನಿಂತೆ
ಗಲ್ಲ ಹಿಡಿದು ಹೇಳಿದ
ಕಣೆ
ಕನಸಿಗೆ ತಂದಿರುವೆ ಬಾ-
ನನ್ನೆ!

ನಿನಗಾ ದಿನ ಬರಲಿ ಬೇಗ
ಹಸಿರು ಬಳೆಗಳ ನಡುವೆ
ಕೆಂಪಿನವನು ತೊಡಿಸುತ್ತಲಿರುವಾಗ
ಹಾ…
ಎಂದ ಸೋಮಲಿ
ಬಳೆ ಹತ್ತೊ ನೋವೆ,
ಉಣುತ ಕೂಸು ಕಚ್ಚಿತ್ತೆ?
ಕೇಳಲು ಹೇಳಿದಳು ಅಮ್ಮ
ನಿನಗಾ ದಿನ ಬರಲಿ ಬೇಗ
ಮೈನೆರೆದಿರಬೇಕು
ಕೊಯಿಲಾದ ಹೊಲ ಚೆಂದವಲ್ಲ
ಅಂದವಲ್ಲ
ಅಂದವರು ಯಾರಮ್ಮ?
ಚೆಲುವಿರದೆ ಮತ್ತೆ ಬಿತ್ತನೆ
ಆದೀತೆ
ಮೈನೆರೆದವಳು ಕಾಣಮ್ಮ.
ಹಡೆಸಲು ಹಡೆಯಲು
ಗೆಳತಿ
ಮೈನೆರೆದಿರಬೇಕು ಕೇಳಮ್ಮ.
ಇದಾವ ಸೀಮೆ ಸರಸ ಗೆಳತಿ?
ಸುತ್ತ ನರಪಿಳ್ಳೆ ಇಲ್ಲ
ಹೊಲದಲ್ಲಿ ಇಬ್ಬರೇ
ಕಣ್ಣಿನಲ್ಲೆ ನನ್ನ ಮೈಯ ಮಾತನಾಡಿಸುತ್ತಲಿದ್ದ
ಅವನು ಸರಸಕಿಳಿವನೆಂದು ಗೆಳತಿ
ಅರಳುತಿದ್ದೆ ಮನಸಿನಲ್ಲೆ.
ಹತ್ತಿರಕ್ಕೆ ಬಂದು ಕಣ್ಗೆ ಕಣ್ಣು ನೆಟ್ಟು
ಹೆಣ್ಣಿನ ಲಾಂಛನವು ಗೊತ್ತೆ
ಹಣ್ಣೆ ಅಂದ,

ಇದಾವ ಸೀಮೆ ಸರಸವೆಂದು ಮಿಕಿಮಿಕಿ
ನೋಡುತಿರಲು ಮೀಸೆ ಕುಣಿಸಿ
ಜಡೆಯೆ ಎಂದ
ಜಿಂಕೆ ಹಿಂದೆ ಅಟ್ಟಿಸಿದ್ದು, ಅವನ ಎದೆಗೆ ಒದೆಸಿದ್ದು
ಜಡೆಯೆ ಎಂದು ಜಡೆಯ ಹಿಡಿದು
ಕೊಟ್ಟ ಮುತ್ತು.
ಅವನ ಸೊಕ್ಕಲ್ಲವೇನೆ?
ಸೀರೆ ರವಿಕೆ ಒಪ್ಪದು
ಪಂಚೆ ಅಂಗಿ ತೊಡು
ಬಳೆಯ ಕಳಚು
ಗಂಡಸಿನಂತೆ ಕಾಣು
ಅಂದನೆಂದು
ತಾರದಿರು ವ್ಯಂಗ್ಯನಗೆ
ಉತ್ತು ಬಿತ್ತಿ ಬೆಳೆಯ ತೆಗೆಯೆ
ಈ ದಿರಿಸು ಧರಿಸು
ಅಂದುದೆಷ್ಟು ಸರಿಯೆ?
ಹೆಣ್ಣು ಬೇಸಾಯಕಿಳಿಯೆ
ಗಂಡಸಿನಂತೆ ಕಾಣಬೇಕೆ
ಅವನ ಸೊಕ್ಕಲ್ಲವೇನೆ?
ಸೊಕ್ಕು ಅಳೆವ ಗೆಳತಿ
ಗಂಡಸಿನ ಸೊಕ್ಕು ಅಳೆವ ಗೆಳತಿ
ಅಂದ ಚಂದ್ರಮಲ್ಲಿಯ ಮಾತು ಕೇಳಿ,
ಅಡಕೆಮರ ಈಚಲಮರ ತಾಳೆಮರ
ತೆಂಗಿನಮರ ಯಾವಿದಿರಲಿ?
ಉಳುವಹಗ್ಗ ನೀರಿನಹಗ್ಗ ಬಂಡಿಹಗ್ಗ
ಸಾಕಾದೀತ, ಮತ್ತಾವುದಾದರೂ ಬೇಕಾದೀತ?
ಅಯ್ಯೋ ಪೆದ್ದೆ, ಕಣ್ಣನೋಟ
ಸೊಂಟದ ಬಳುಕು ಜಡೆಯ ಬೀಸು
ತೋಳಬಂಧ ತುಟಿಯ ಕೊಂಕು
ಸೆರಗಿನ ಗಾಳಿಗವು ಸಮವೆ?

ಗಿಳಿಯ ಮುತ್ತು
ಚಂದ್ರಮಲ್ಲಿಯ ರಾತ್ರಿಗಳ ಗುಟ್ಟುಗಳ
ಗುಟ್ಟು ಮಾಡಿರಲು ಸೀರೆ ರವಿಕೆ
ಅವಳ ಹಿಂಗೈಯಲಿದ್ದ ಹಚ್ಚೆಗಿಳಿ
ನಾಚುತ್ತ ಮೆಲ್ಲಗೆ
ಅಂಗಳದ ಸೀಬೆಮರದಲ್ಲಿ ಇದ್ದ ಗಿಳಿಗೆ
ತನ್ನ ಭಾಷೆಯಲಿ ಹೇಳಿದ್ದು ಕೇಳಿ
ಮೈನವಿರೆದ್ದು ಹಾರಿ ಚಂದ್ರಮಲ್ಲಿಯ ಮುಂಗೈಲಿ ಕುಳಿತು
ಹಚ್ಚೆಗಿಳಿಗೆ ಕೊಟ್ಟಿತು ಮುತ್ತು.
ಆ ರಾತ್ರಿಯಂತೆಯೇ
ಜಳಕಕಿಳಿದು, ನೆರಿಗೆಗಟ್ಟಿದವನು ನೋಡಿ
ಚೆಂದ ಕುಂದುದಿಲ್ಲವೆನಿಸಿ
ಅಲ್ಲಿ ಅವನ ಮೊದಲ ಸ್ಪರ್ಶ
ಪುಳಕ ಹುಟ್ಟಿ
ಆ ರಾತ್ರಿಯಂತೆ ಈ ರಾತ್ರಿ
ಕೂಡ….
ಚಂದ್ರಮಲ್ಲಿ ಎದೆಯಲಿ
ನಿಟ್ಟುಸಿರು
ಅವನು ಬದುಕಿದ್ದರೆ.






ಚಂದದ ಕವಿತೆಗಳು