ಆಹಾ ಬದುಕೆಂಬುದು ಸಾವ ಕುಸುರಿ..’ ಎಂದು ಉದ್ಘರಿಸಿದ ಎನ್ ಕೆ ಹನುಮಂತಯ್ಯ ಸಾವಿಗೆ ಶರಣಾಗಿದ್ದಾರೆ. ‘ಚಿತ್ರದ ಬೆನ್ನು’ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಗಳಿಸಿದ ಹನುಮಂತಯ್ಯ ಬದುಕೆಂಬ ಚಿತ್ರಕ್ಕೆ ಬೆನ್ನು ಹಾಕಿ ಬಹು ದೂರ ನಡೆದು ಹೋಗಿದ್ದಾರೆ. ಹನುಮಂತಯ್ಯ ಸಾವಿಗೆ ‘ಅವಧಿ’ ಸಂತಾಪ ಸಲ್ಲಿಸುತ್ತದೆ…
ಸಾವ ಕುಸುರಿ
ಒಳಗೂ ಹೊರಗೂ
ಧಗೆ
ಮೇಲೆ ಸಾಯದ
ಸೂರ್ಯ
ಆಗಾಗ ಹಾರುವ ಹದ್ದಿನ ನೆರಳೆ
ಮಳೆಹನಿ
ನಡೆದಷ್ಟೂ ದೂರ ಕಣ್ಣೊಳಗಿನ ತೀರ
ಬಿರುಗಾಳಿಗೆ ಬಿದ್ದ ಬಾಗಿಲ ಮುಂದೆ
ಮಾಲಿಕನ ಹೆಣ ತಿನ್ನುತ್ತಿದೆ
ಸಾಕುನಾಯಿ
ಆ ನಾಯ ಬಾಯಲ್ಲಿ ಕೋವಿಯೆಲುಬಿನ ಸದ್ದು
ಹೆಪ್ಪುಗಟ್ಟಿದ ನೆತ್ತರ ಬಯಲಲಿ
ನೀರ ಹುಡುಕುವ ಮೂಢ ನಾನು
ಅಳುತ ನಿಂತೆ
ಹತ್ತಿರದಿ ಕಂಡಿತು
ಕಾಲದ ಚಿಗುರಂತೆ ಹೊಳೆವ ಪಾಳು ದೇಗುಲ
ಭೋಗಿಸಿದರೆ ಬಸಿರಾಗುವೆನೆಂದು ಕೂಗುವ
ಶಿಲಾಬಾಲೆ
ನೋಟ ಮೀಟಲು ಉಲಿವ ಕಲ್ಲುವೀಣೆ
ಮೈಮರೆತು ಎವೆಮುಚ್ಚಿದೆ
ಕಂಡೆ;
ಒಳಗಣ್ಣ ತಳದ ಕುದಿವ ಕಣ್ಣೀರಿನಲಿ
ಈಜುವ ಸಾವ ಮೀನ
ಶಿಶುವಾಗಿ ಇಳಿದೆ ಇಳಿದೆ
ಹಿಡಿದೆ ಹಿಡಿದೆ ಏರಿದೆ ಏರಿದೆ
ಮೀನ ಬೆನ್ನನು ಏರಿ ಗಾಳಿಗೆ ಹಾರಿದೆ ಹಾರಿದೆ
ಆದಿ ಅಂತ್ಯದ ಅಗ್ನಿಹಿಮಗಡಿದಾಟಿ
ಭುವಿಯಾಗಿ ಬಾನಾಗಿ ನಾನಾಗಿ
ತೇಲುತ್ತ… ತೇಲುತ್ತ…
ಆ… ಶಿಲಾಬಾಲೆ, ಕಲ್ಲುವೀಣೆ
ಗುಡಿ, ಗೋಪುರ, ಅಕ್ಷರ
ಆ… ಕುಕ್ಕೆ ಕಂಬಳಿ, ಕುಡಿಕೆ
ಆಹಾ… ಬದುಕೆಂಬುದು
ಸಾವಕುಸುರಿ.
–ಎನ್ ಕೆ ಹನುಮಂತಯ್ಯ
ಕೃಪೆ: ಕೆಂಡಸಂಪಿಗೆ






no a poet should not think death, may has its pressure taken him away from all of his fans n friends? I am sorry.
‘ಹಿಮದ ಹೆಜ್ಜೆ’ಯ ಗೆಳೆಯ, ಕಾಲೇಜಿನ ಸಹಪಾಠಿಯೊಬ್ಬನನ್ನು ಕಳೆದುಕೊಂಡ ವಿಷಾದ . ಹನುಮಂತನ ಆತ್ಮಕ್ಕೆ ಶಾಂತಿ ಸಿಗಲಿ.