ಅರೆಕಾಲಿಕ ಮೊಡವೆ
ಹೇಮಲತಾ
ತುಂಬುಗೆನ್ನೆಯ ಮಧ್ಯದಿಂದ
ಟಂಗ್ಎಂದು ಪುಟಿದೆದ್ದ
ದುಂಡುದುಂಡು ಮೊಡವೆ
ರಾತ್ರಿ ಕಳೆದು
ಬೆಳಗಾಗೋಷ್ಟರಲ್ಲಿ ಹೀಗೆಲ್ಲ ಮೂಡಬಹುದೇ ?
ಒಂದೆರಡು ಕನಸುಗಳು
ಹೀಗೆ ನಡುರಾತ್ರಿಯಲ್ಲಿ ಬಿದ್ದು
ಬೆಳಗಾದ ಮೇಲೂ ನೆನಪಿನೆಂದೆದ್ದು
ಸುಪ್ತಬಯಕೆಗಳಿಗೆ ಬಾಯಿಬಂದಂತೆ
ಮಾತಾಡಿ ದಬಾಯಿಸಿ ಬೆಚ್ಚಿಬೀಳಿಸಿ ಬಿಟ್ಟವು !
ಪಿಕ್ಚರಿನ ಹೀರೋಯಿನ್ನು ‘ಅವನಿಗೆ’
ಕಣ್ಣು ಹೊಡೆಯುವಂತೆ
ಕನ್ನಡಿ ಎದುರುನಿಂತು ಒಂಟಿ ಕಣ್ಣುಮುಚ್ಚಿ
ವಯಾರದಲಿ ಮೂತಿ ತಿರುಪಿದಾಗ
ಮತ್ತಷ್ಟು ದೊಡ್ದದ್ದಾಗಿ ಗೋಚಾರ
ಮತ್ತದರ ಪಕ್ಕ
ಗತಕಾಲದ ನೆನಪುಗಳ ಸಾಲು ಸಾಲು ಮೆರವಣಿಗೆ !
ಬೇಡ ಬೇಡವೆಂದರೂ,
ತಿಂಗಳಿಗೆ ಪಾಳಯದಲ್ಲಿ ಬರುವ ಹುಣ್ಣಿಮೆ ಅಮವಾಸ್ಯೆಗಳಂತೆ
ತಪ್ಪದೆ ಮೊಳಕೆಯೊಡೆದು ಹಾಜಾರಾಕ್ಕುತ್ತಿದ್ದವು
ಹಳೆ ಫೋಟೋಗಳ ತುಂಬೆಲ್ಲಾ
ಎಳೆ ಹರೆಯದ ಕುರುಹುಗಳು

ಹೆಣ್ಮಕ್ಕಳ ಸೂಕ್ಷ್ಮ ಮನಸಿಗೆ ನೋವಾಗದಿರಲೆಂದೇ
ಯಾರೋ ಸೃಷ್ಟಿಸಿದ ನಲ್ಗಾದಂಬರಿಯ ಕತೆಯಿರಬೇಕು ಅದು
ಮೊಡವೆ ಎಂದರೆ ಯಾರೋ ಎಲ್ಲೋ ನಿಂತು
ಗೊತ್ತಾಗದಂತೆ ಹೆಚ್ಚೆಚ್ಚೆ ನೋಡಿ ನೆನೆಸಿಕೊಳ್ತಿದಾರಂತೆ
ಅರೇ ಹೌದ ?
ತಲೆ ಎತ್ತಿದ ಅಣಬೆಗಳಿಗೆ
ರಕ್ತ ಸಂಚಾರವಾಗಿ ಮತ್ತಷ್ಟು ಕಡುಗೆಂಪು !
ಯಾಕೆ ಹುಟ್ಟಿತು ಕಾರಣ ಬೇಡುವ ಅಪ್ಪನ ಪ್ರಶ್ನೆ
ಅಮ್ಮನಿಗೆ ಕಲೆ ಉಳಿದುಹೋಗುವ ಚಿಂತೆ
ಲೆಕ್ಕ ಎಣಿಸುವುದರಲ್ಲಿ ಗೆಳತಿಯರ ಗಮನ
ಜಾಹಿರಾತಿನ ಕ್ರೀಮು ಆಯ್ಕೆ ಮಾಡಿಕೊಳ್ಳುವುದರಲ್ಲಿ
ನಾನು ಮಗ್ನ..
ಈಗ್ಯಾರೋ ಹೆಂಗಸು ಎಚ್ಚರಿಸಿದಳು
ಟೊಮೇಟೊ ಹಚ್ಚು ಜೊತೆಗೆ ತುಳಸಿ ನಿಂಬೆ
ಇವಾಗೆಲ್ಲ ಒತ್ತರಿಸಿ ಬರಬಾರದು ಹಿಂದಿಂದೆ
ಅಮ್ಮನ ಸಿಡುಕು ನಿನಗೆ ನಿನ್ನ್ಮೇಲೆ ಕಬರಿಲ್ಲ ಇತ್ತೀಚೆಗೆ,
ಅಕ್ಕನ ಸೈಂಟಿಫಿಕ್ ರೀಸನ್ನಿಂಗು ಬದಲಾದ ಸೋಪು ಎಣ್ಣೆ
ಊಹೂಂ … ಏನು ಮಾಡಲ್ಲ ನಾನು
ಮುಖದಲಿ ಮೂಡಿದ ಮೊಡವೆ
ನನಗಿಲ್ಲ ಈಗ ನಿನ್ನ ಗೊಡವೆ
ಮನಸಲಿ ನೋವಿಲ್ಲ ಬಾವು ಇಲ್ಲ ..
ಒಂಥರಾ ವಿಚಿತ್ರ ಖುಷಿ
ಆಷಾಡಕ್ಕೆ ಮಳೆ ಅಕಾಲಿಕವಲ್ಲ
ಅರೆ ಹೌದಲ್ಲ !
ನನ್ನ ಕಾಲ ನಾನಂದುಕೊಂಡಷ್ಟು ಇನ್ನು
ಕೈ ಮೀರಿಲ್ಲ






Artapoornacvada kavan ree
tumba chennaagide..
meccchidakke Thanks Renuka and mmshaik