ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾದೋಪಾಸಕನ ನಿರ್ಮಾಣ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

6

ಭಾವದೀಪ್ತಿಗೆ ಪರಿಸರದ ಪ್ರೇರಣೆ

1942ರಲ್ಲಿ ವೆಂಕಟರಾಮಾಶಾಸ್ತ್ರಿಗಳು ಮದ್ರಾಸಿನ ರೇಡಿಯೋ ಕಾರ್ಪೊರೇಶನ್ ನಲ್ಲಿ ಸ್ಥಳೀಯ ಕಲಾವಿದರಾಗಿ ನಿಯುಕ್ತರಾದರು. ಶ್ರೀಕಂಠನ್ ರವರಿಗೆ ಮದ್ರಾಸಿಗೆ ಹೋಗಿ ಹಲವು ವಿದ್ವಾಂಸರನ್ನು ಪದೇಪದೇ ಭೇಟಿಯಾಗುವ ಹೆಚ್ಚಿನ ಅವಕಾಶಗಳು ಒದಗಿಬಂದವು. ಅಲ್ಲಿ ಡಿಸೆಂಬರ್ ನಲ್ಲಿ ನಡೆಯುವ ಸಂಗೀತಕಚೇರಿ ಸರಣಿಗಳಲ್ಲಿ ಪಾಲ್ಗೊಂಡು, ಅಲ್ಲಿನ ಗಾನಶೈಲಿಯಲ್ಲಿನ ಹಲವು ಸೂಕ್ಷ್ಮತೆಗಳನ್ನು ಗ್ರಹಿಸಲು ಇವರಿಗೆ ಅನುವಾಯಿತು. ಪ್ರತಿ ಸಂಗೀತೋತ್ಸವದಲ್ಲೂ ವಿದ್ವಾಂಸರುಗಳ ಪ್ರಸ್ತುತಿಯಿಂದ ನೇರವಾಗಿಯೇ ಅದೆಷ್ಟೋ ಕಲಿತರು. ಅದಾಗಲೇ ಸಂಗೀತದಲ್ಲಿ ಖ್ಯಾತರಾಗಿದ್ದು ಹಲವು ದಿಗ್ಗಜರಿಗೆ ಪಕ್ಕವಾದ್ಯ ನುಡಿಸುತ್ತಿದ್ದ ವೆಂಕಟರಾಮಾಶಾಸ್ತ್ರಿಗಳು ತಮ್ಮ ಕಲಾವೃತ್ತಿಗಾಗಿ ಇನ್ನೂ ವಿಸ್ತೃತವಾದ ವೇದಿಕೆಯನ್ನು ಇದಿರು ನೋಡುತ್ತಿದ್ದರು. ರೇಡಿಯೋ ಕಾರ್ಪೊರೇಶನ್ನ ಉದ್ಯೋಗವು ಅವರಿಗೆ ಸಮಯಕ್ಕೆ ಸರಿಯಾಗಿ ಒದಗಿದ್ದು ವರವಾಯಿತು. ಅವರಿಗೂ ಅವರ ತಮ್ಮಂದಿರೆಲ್ಲರಿಗೂ ಸಂಗೀತದಲ್ಲೇ ಹೆಚ್ಚಿನ ನಂಟನ್ನು ಬೆಳೆಸಿಕೊಂಡು ಮುಂದುವರಿಸಲು ಅನುಕೂಲವಾಯಿತು.

ಶ್ರೀಕಂಠನ್ ರವರು ತಮಗೊದಗಿದ ಈ ಎಲ್ಲ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರು. ರಜೆಗಳಲ್ಲಿ ಮದ್ರಾಸಿಗೆ ಧಾವಿಸುತ್ತಿದ್ದರು. ಅಣ್ಣನೊಂದಿಗೆ ಓಡಾಡಿಕೊಂಡು ಮಹಾನ್ ಕಲಾವಿದರುಗಳಾದ ಅರಿಯ್ಯಾಕುಡಿ ರಾಮಾನುಜ ಐಯ್ಯಂಗಾರ್, ಮಹಾರಾಜಪುರಂ ವಿಶ್ವನಾಥ ಐಯ್ಯರ್, ಮುಸಿರಿ ಸುಬ್ರಹ್ಮಣ್ಯ ಐಯ್ಯರ್ ಹಾಗೂ ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್ ರಂತಹವರ ಒಡನಾಟದಲ್ಲಿ ಆನಂದಿಸುತ್ತಿದ್ದರು. ಅತ್ಯಂತ ಕಿರಿಯನಾಗಿದ್ದ ಇವರಿಗೆ ಆ ಮಹಾತ್ಮರೆಲ್ಲರೂ ಅವರವರ ಸಮಯಾನುಸಾರ ಮತ್ತು ಇಷ್ಟಾನುಸಾರ ಜ್ಞಾನವನ್ನಿತ್ತರು.

“ನಮ್ಮ ತಂದೆ ಹಾಗೂ ಅಣ್ಣಂದಿರಿಂದ ಪ್ರಾಥಮಿಕ ಪಾಠಗಳನ್ನು ಪಡೆದಮೇಲೆ, ಸಂಗೀತಕಲಿಕೆ ನನ್ನೊಳಗೆ ತಾನಾಗಿ ನಡೆಯುವ ನಿರಂತರ ಕ್ರಿಯೆಯಾಗಿಬಿಟ್ಟಿತು. ನನ್ನ ಜಿಜ್ಞಾಸೆ ಬೆಳೆಯುತ್ತಲೇ ಹೋಯಿತು. ಹಲವು ವಿದ್ವಾಂಸರುಗಳಿಂದ ನಾನು ಆಲಿಸಿದ ಹಾಗೂ ಕಲಿತ ಶೈಲಿಗಳನ್ನು ಅಧ್ಯಯನಗೈಯ್ಯುತ್ತಿದ್ದೆ. ರಾಗ-ಕೃತಿ-ಸ್ವರಪ್ರಸ್ತಾರ-ನೆರವಲ್ ಮುಂತಾದ ಯಾವುದೇ ವಿವರವಾಗಲಿ- ಕೇಳುತ್ತಿರುವುದು, ಕಲಿಯುತ್ತಿರುವುದು- ಇದೇ ನನ್ನ ಜೀವನಶೈಲಿ ಆಗಿಬಿಟ್ಟಿತ್ತು. ನಾನು ಅವುಗಳನ್ನೆಲ್ಲ ಯಥಾವತ್ತಾಗಿ ಗ್ರಹಿಸಿ ಅಭ್ಯಸಿಸುತ್ತಿದ್ದೆ, ಅದರ ಆಳಕ್ಕಿಳಿದು ಸೂಕ್ಷ್ಮಗಳನ್ನೆಲ್ಲ ಮೈಗೂಡಿಸಿಕೊಳ್ಳುತ್ತಿದ್ದೆ, ತಮ್ಮದೇ ಕಲಾತ್ಮಿಕ ವೈಶಿಷ್ಟ್ಯಗಳನ್ನು ಅಭಿವ್ಯಂಜಿಸುತ್ತಿದ್ದ ವಿದ್ವಾಂಸರುಗಳ ಪೈಕಿ ಒಬ್ಬೊಬ್ಬರ ಶೈಲಿಯನ್ನು ಗ್ರಹಿಸುವುದೂ ಒಂದೊಂದು ಸವಾಲೇ ಆಗಿತ್ತು!” ಎನ್ನುತ್ತಾರೆ ಶ್ರೀಕಂಠನ್. 

“ಹಲವು ಬಗೆಯ ಶೈಲಿಗಳಲ್ಲಿ ಮಿಂದೆದ್ದು, ತಾನೇತಾನಾಗಿ ಅವುಗಳಲ್ಲಿನ ಹಲವು ಅಂಶಗಳನ್ನು ಮೈಗೂಡಿಸಿಕೊಳ್ಳುತ್ತ ನನ್ನ ಗಾಯನದಲ್ಲಿ ಅಳವಡಿಸಿಕೊಳ್ಳುತ್ತ ಹೋದೆ. ನನ್ನದೇ ಶೈಲಿಯನ್ನು ಬೆಳೆಸಿಕೊಂಡು ಇನ್ನೂ ಹೆಚ್ಚು ಮನಕ್ಕೊಪ್ಪುವಂತೆ ಅವುಗಳನ್ನು ಹಾಡಲಾರಂಭಿಸಿದೆ. ನನ್ನ ಸಂಗೀತದ ಸೀಮೆಗಳನ್ನು ಅನಂತವಾಗಿ ವಿಸ್ತರಿಸಿಕೊಳ್ಳುವುದೇ ಆಗ ನನ್ನ ಏಕೈಕ ಲಕ್ಷ್ಯವಾಗಿತ್ತು. ‘ಸಾಧನಾಪಥದಲ್ಲಿ  ಸಂಚರಿಸುವ’ ನಾದೋಪಾಸಕನಾಗತೊಡಗಿದ್ದೆ. ಇನ್ನಷ್ಟು ಮತ್ತಷ್ಟು ಕಲಿಯುವ ಆ ನನ್ನ ಹುಚ್ಚನ್ನು ಎಂದಿಗೂ ಮರೆಯಲಾರೆ. ಸಂಗೀತವನ್ನು ಧ್ಯಾನಿಸುವುದರ ಹೊರತು ಬೇರೇನೂ ನನಗೆ ಬೇಕಾಗಿಯೇ ಇರಲಿಲ್ಲ. ಅದು ನನ್ನ ಪಾಲಿಗೆ ಸಹಜ ಪ್ರಕ್ರಿಯೆಯಾಗಬೇಕು ಎಂಬುದಿತ್ತು- ಹಾಲು ಮೊಸರಾಗಿ, ಮಜ್ಜಿಗೆಯಾಗಿ, ಬೆಣ್ಣೆಯಾಗಿ, ಆ ಬಳಿಕ ಕಾದು ತುಪ್ಪವಾಗಬೇಕಲ್ಲವೆ? ಈ ವಿಕಾಸವು ಸಹಜವೂ ಆಂತರಿಕವೂ ಆಗಿರಬೇಕು ಎಂಬುದನ್ನೂ ನಾನು ಅರ್ಥಮಾಡಿಕೊಂಡಿದ್ದೆ. ಒಮ್ಮೆಲೆ ಕೀರ್ತಿಶಿಖರವನ್ನೇರಿಬಿಡಬೇಕೆಂಬ ಅವಸರ ನನಗೆ ರುಚಿಸುತ್ತಿರಲಿಲ್ಲ. ಕ್ರಮಶಃ ಆಗುವ ವಿಕಾಸವೇ ನಿಜಕ್ಕೂ ಫಲಕಾರಿ” ಎನ್ನುತ್ತಾರೆ ಶ್ರೀಕಂಠನ್ ರವರು.

ಈ ತರುಣ ಗಾನಯೋಗಿಯು ಲೆಕ್ಕವಿಲ್ಲದಷ್ಟು ಕೃತಿಗಳನ್ನು ಸಂಗ್ರಹಿಸುತ್ತ ಹೋದರು. ಅವಕಾಶ ಸಿಕ್ಕಷ್ಟು ಮಹಾಕಲಾವಿದರನ್ನು ಹಾಡಿಸಿ. ಅಲ್ಲೇ ಸ್ವರಸಾಹಿತ್ಯಾದಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಮನೆಗೆ ಹಿಂದಿರುಗಿದ ಮೇಲೆ ಅನೇಕ ಬಾರಿ ಅಭ್ಯಾಸಮಾಡಿ, ಅದೇ ಕಲಾವಿದರ ಮುಂದೆ ಹಾಡಿ, ಒಪ್ಪಿಸಿ ಅವರ ಮೆಚ್ಚುಗೆಯನ್ನು ಪಡೆಯುತ್ತಿದ್ದರು. “ಚಿಕ್ಕವನಾಗಿದ್ದ ನನಗೆ ಕೇವಲ ಸಂಗ್ರಹವೊಂದೇ ಉದ್ದೇಶವಾಗಿರಲಿಲ್ಲ. ಆದರೆ ಈ ಮಹಾನ್ ವಿದ್ವಾಂಸರುಗಳ ಅನನುಕರಣೀಯ  ಶೈಲಿಯನ್ನು ಆಲಿಸುತ್ತ ರಾಗ ಹಾಗೂ ಕೃತಿಗಳ ನಿರೂಪಣೆಗೆ ಸಂಬಂಧಪಟ್ಟ ಅದೆಷ್ಟೋ ಸೂಕ್ಷ್ಮಗಳನ್ನು ಗ್ರಹಿಸಲು ಸಾಧ್ಯವಾಯಿತು. ಮದ್ರಾಸು, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಹಾಡುತ್ತಿದ್ದ ಆ ಕಾಲದ ದಿಗ್ಗಜರೆನಿಸಿದ ಜಿ.ಎನ್.ಬಾಲಸುಬ್ರಹ್ಮಣ್ಯಂ, ಮಧುರೈ ಮಣಿ ಐಯ್ಯರ್ ಹಾಗೂ ಟಿ.ಎನ್.ರಾಜರತ್ನಂ ಮುಂತಾದವರ ಪ್ರಸ್ತುತಿಗಳಂತೂ ನನ್ನ ಪಾಲಿಗೆ ಬಹಳ ಬೋಧಪ್ರದವಾಗಿದ್ದವು” ಎನ್ನುತ್ತಾರೆ.

ಉತ್ಸವಗಳ ವೈಭವ

ಪ್ರತಿ ವರ್ಷವೂ ಗಣೇಶೋತ್ಸವದ ಸಂದರ್ಭದಲ್ಲಿ ತಮ್ಮ ತಂದೆಯವರು ತಾವೇ ವರ್ಣಮಯವಾದ ಮಂಟಪವನ್ನು ನಿರ್ಮಿಸಿ, ಮನೆಯಲ್ಲಿ ಹಲವು ಪೂಜೆಗಳನ್ನು ಮಾಡಿಸುತ್ತಿದ್ದುದನ್ನೂ, ಅರಮನೆಯಲ್ಲಿನ ವೈಭವದ ಸಂಗೀತ, ನೃತ್ಯ ಹಾಗೂ ಹರಿಕಥೆಗಳ ಕಾರ್ಯಕ್ರಮಗಳನ್ನೂ ಮನದುಂಬಿ ನೆನೆಯುತ್ತಾರೆ ಶ್ರೀಕಂಠನ್ ರವರು. ವೀಣಾ ಸುಬ್ಬಣ್ಣನವರೊಡನೆ ಖ್ಯಾತ ವಿದ್ವಾಂಸರಾದ ಮೈಸೂರು ವಾಸುದೇವಾಚಾರ್ಯರ ಘನ ಉಪಸ್ಥಿತಿಯನ್ನೂ ನೆನೆಯುತ್ತಾರೆ. “ಆ ಸಂದರ್ಭಗಳಲ್ಲೇ ನಾನು ಫಯ್ಯಾಜ್ ಖಾನ್, ಕೃಷ್ಣರಾವ್ ಪಂಡಿತ್, ಕೇಸರ್ಬಾಯಿ ಕೇರ್ಕರ್, ಗೌಹರ್ ಜಾನ್ ಮುಂತಾದವರ ಸಂಗೀತವನ್ನು ಆಲಿಸಿದ್ದು. ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತನಾಮರಾದ ಮಧುರೈ ಪೊನ್ನುಸ್ವಾಮಿ ಪಿಳ್ಳೈ, ಮಹಾರಾಜಪುರಂ ವಿಶ್ವನಾಥ ಐಯ್ಯರ್, ಅರಿಯ್ಯಾಕುಡಿ ರಾಮಾನುಜ ಐಯ್ಯಂಗಾರ್, ಜಿ.ಎನ್.ಬಾಲಸುಬ್ರಹ್ಮಣ್ಯಂ ಹಾಗೂ ಆಲತ್ತೂರ್ ಸೋದರರ ಕಛೇರಿಗಳು ನಡೆಯುತ್ತಿದ್ದವು. ಇವರುಗಳೆಲ್ಲ ಕೃಷ್ಣಶಾಸ್ತ್ರಿಗಳ ಅತಿಥಿಗಳಾಗಿರುತ್ತಿದ್ದರು. ನನಗೂ ಏನದರೂ ಕಲಿಸುವಂತೆ ಅಣ್ಣ (ನಾವು ಅಪ್ಪನನ್ನು ಹಾಗೇ ಕರೆಯುತ್ತಿದ್ದದ್ದು) ಆ ವಿದ್ವಾಂಸರನ್ನು ವಿನಂತಿಸಿಕೊಳ್ಳುತ್ತಿದ್ದರು. ಅವರುಗಳೂ ಸಂತೋಷವಾಗಿ ಒಪ್ಪುತ್ತಿದ್ದರು. ಅವರುಗಳು ನನಗೆ ಹಲವು ವಿಚಾರಗಳನ್ನೂ ತಿಳಿಸಿ ನನ್ನದೇ ನವೀನ ಶೈಲಿಯನ್ನೂ ರೂಪಿಸಿಕೊಳ್ಳಲು ಪ್ರೋತ್ಸಾಹಿಸಿದರು. ಹೀಗಾಗಿಯೇ ನನ್ನ ಅಪ್ಪಟ ಮೈಸೂರು ಗಾಯನಶೈಲಿಯು ತಂಜಾವೂರಿನ ಹಲವು ವೈಶಿಷ್ಟ್ಯಗಳನ್ನು ಕೂಡಿಸಿಕೊಂಡು ಸಾಗಲು ಸಾಧ್ಯವಾಯಿತು. ರಾಗದ ಸೂಕ್ತ ಜಾಗದಲ್ಲೂ ಸಾಹಿತ್ಯದ ಸಮುಚಿತ ಸಂದರ್ಭದಲ್ಲೂ ಕೂಡಿಸುವ ನಿರ್ದಿಷ್ಟ ಗಮಕಗಳು ಸಂಗೀತವಿನಿಕೆಗೆ ಅತ್ಯಂತ ಪ್ರಮುಖವೆನ್ನುವುದನ್ನು ಕಲಿಯುತ್ತ ಹೋದೆ. ಅದರಲ್ಲೂ ಭಕ್ತಿಪರವಾದ ಸಾಹಿತ್ಯದಲ್ಲಂತೂ ಸರಿಯಾದ ಕಾಕು ಹಾಗೂ ಸ್ವರಧಾರೆಯು ಭಾವವನ್ನೇ ತೀವ್ರಗೊಳಿಸುವುದುಂಟು. ಆದರೆ ಮೈಸೂರಿನ ಅಪ್ಪಟ ಶೈಲಿಯನ್ನು ನಾನು ಉಳಿಸಿಕೊಂಡೆ. ಏಕೆಂದರೆ ಅನಗತ್ಯವಾದ ಗಮಕಗಳೂ ವಿಸ್ತಾರವೂ ಸಾಹಿತ್ಯದ ಭಾವವನ್ನು ಹಾಳುಗೆಡವುವುದುಂಟು.ಆಕಾಶವಾಣಿಯಲ್ಲಿ ನನ್ನ ಹಿರಿಯ ಸಹೋದ್ಯೋಗಿಗಳೂ ನನ್ನ ಈ ದೃಷ್ಟಿಕೋನವನ್ನೂ ಗಾಯನಶೈಲಿಯನ್ನೂ “Simply Srikantan” (ಅಪ್ಪಟ ಶ್ರೀಕಂಠನ್ ಶೈಲಿ) ಎಂದು ಗುರುತಿಸಿ ಹೆಸರಿಸಿದ್ದು ನನಗೆ ಸಂತೋಷ ತಂದಿತು”. 

ಶ್ರೀಕಂಠನ್ ರವರು ಮೈಗೂಡಿಸಿಕೊಂಡ ಈ ಪ್ರಭಾವಗಳೆಲ್ಲ ಅವರ ಶಿಷ್ಯರಲ್ಲಿ ಫಲಿಸಿವೆ. ಅವರು ತರಬೇತುಗೊಳಿಸಿರುವ ನೂರಾರು ಶಿಷ್ಯರುಗಳು ಇಂದು ಪ್ರತಿಷ್ಠಿತ ಕಲಾವಿದರಾಗಿದ್ದು ಅವರ ಜ್ಞಾನ-ಶೈಲಿಗಳನ್ನು ಭವಿಷ್ಯಕ್ಕೊಯ್ಯುತ್ತಿದ್ದಾರೆ. ಸುದೀರ್ಘಕಾಲದ ಶ್ರೀಕಂಠನ್ ರವರ ಈ ಪಾಠಗಳೂ, ಅಧ್ಯಯನಗಳೂ ಸಂಶೋಧನೆಗಳೂ ವೈಯಕ್ತಿಕ ಛಾಪನ್ನು ಮೂಡಿಸಿವೆ.

ಹಲವು ಶೈಲಿಗಳ ಅಧ್ಯಯನ-ಸಂಶೋಧನೆಗಳ ಬಳಿಕ ಅತ್ಯಂತ ಎಚ್ಚರದಿಂದಲೂ ನೈಪುಣ್ಯದಿಂದಲೂ ಪಾಠಾಂತರಗಳನ್ನು ಉದಾತ್ತೀಕರಿಸಿ, ಪರಿಷ್ಕರಿಸಿ, ಶ್ರೀಕಂಠನ್ರವರು ತಮ್ಮದೇ ಶೈಲಿಯನ್ನು ರೂಪಿಸಿಕೊಂಡರು. ಇದೇ ಅವರ ವಿಶಿಷ್ಟ ಲಕ್ಷಣವೂ ಆಯಿತು. ಹೀಗೆ ವಿವಿಧ ವಿದ್ವತ್ ಪರಂಪರೆಗಳು ಶ್ರೀಕಂಠನ್ ರವರಿಂದ ಉಗಮಿಸಿದ ಹೊಸ ಪರಂಪರೆಗೆ ನಾಂದಿ ಹಾಡಿದವೆನ್ನಬಹುದು.

ಈ ಹಲವು ಶೈಲಿಗಳಲ್ಲಿ ಶ್ರೀಕಂಠನ್ ರವರು ಗಮನಿಸಿದ ಸೂಕ್ಷ್ಮ ಏರಿಳಿತಗಳು, ಕಂಪನಗಳ ವ್ಯತ್ಯಾಸಗಳಾದರೂ ಯಾವುವು? “ಮಹಾರಾಜಪುರಂ ವೈದ್ಯನಾಥ ಐಯ್ಯರ್ ರವರು ತಮ್ಮ ಧ್ವನಿಯಲ್ಲಿನ ಹಲವು ಬೆಡಗಿನ ಬಣ್ಣಗಳನ್ನೇ ತೋರಬಲ್ಲವರಾಗಿದ್ದರು. ಅಭೋಗಿ ಅಥವಾ ಷಣ್ಮುಖಪ್ರಿಯ ರಾಗಗಳನ್ನೂ ರಕ್ತಿರಾಗಗಳಂತೆ ಮೆರೆಸಬಲ್ಲವರಾಗಿದ್ದರು. ಶೆಮ್ಮಂಗುಡಿಯವರಂತೂ ಒಮ್ಮೆ ನಾಟ್ಟ ರಾಗದಲ್ಲಿ ಸರಸೀರುಹಾಸನಪ್ರಿಯೆ ಅಂಬ ಕೃತಿಯನ್ನು ಹಾಡುತ್ತಿದ್ದರು. ಪಿಟೀಲಿನಲ್ಲಿ ಚೌಡಯ್ಯನವರೂ ಮೃದಂಗದಲ್ಲಿ ಕೋದಂಡರಾಮ ಐಯ್ಯರರು ಇದ್ದರು. ಅವರು ಹಾಡಲಾರಂಭಿಸಿದ ಕೇವಲ 25 ನಿಮಿಷಗಳಲ್ಲಿ ಮಳೆಯೇ ಬಂದುಬಿಟ್ಟಿತು!ಅತ್ಯಂತ ಧೃತಲಯದಲ್ಲಿ ಮೂಡಿಬಂದ ಆ ಸ್ವರಗಳ ಸ್ವಾರಸ್ಯಧಾರೆಯನ್ನು ನಾನು ಯಾವ ವಿಶೇಷಣದಿಂದ ಪದಗಳಲ್ಲಿ ವಿವರಿಸಲಿ?”

ಆದರೂ ಮುಸಿರಿ ಸುಬ್ರಹ್ಮಣ್ಯ ಐಯ್ಯರರಿಗೆ ಶ್ರೀಕಂಠನ್ ರವರ ವಿಶೇಷ ಮೆಚ್ಚುಗೆ ಮೀಸಲು! ಏಕೆ? “ಅವರ ಸಂಗೀತವೆಲ್ಲ ಒಂದು ಪರಿಪೂರ್ಣ ಚಿತ್ರದಂತಿತ್ತು. ಅವರ ಕುಂಚವೇ ತುಂಬ ವಿಶೇಷ. ಅವರ ಗಮಕಗಳಂತೂ ತುಂಬ ಅಸಾಧಾರಣ. ಜನರ ಕರತಡನಕ್ಕಾಗಿ ಅವರು ಅವುಗಳನ್ನು ಹೊರಡಿಸುತ್ತಿರಲಿಲ್ಲ. ಅವರ ನೆರವಲ್ ಒಂದು ಬೆಡಗು. ಅವರ ಉಚ್ಚಾರವೋ ಅತ್ಯಂತ ಶುದ್ಧ. ಅದನ್ನು ಮರೆಯುವಂತೆಯೇ ಇಲ್ಲ. ಅವರ ಹಾಡಿಕೆಗಳಲ್ಲಿ ಮೂಡಿಬಂದ “ಎಂತವೇಡು…”, “ಎವರನಿ…” ಹಾಗೂ “ರಾಗಸುಧಾರಸ….” ಕೃತಿಗಳಂತೂ ನನ್ನ ಮನದಲ್ಲಿ ಸ್ಥಿರವಾಗಿ ನಿಂತುಬಿಟ್ಟಿವೆ. ಆ ಶುದ್ಧ ಪರಂಪರೆಯನ್ನು ಜೀವಂತವಾಗಿರಿಸುವ ಸಲುವಾಗಿಯೂ, ಆ ಪ್ರಾಚೀನ ಕೃತಿಗಳನ್ನು ಶುದ್ಧರೂಪದಲ್ಲಿ ಉಳಿಸಿ, ಬೆಳೆಸುವ ಸಲುವಾಗಿಯೂ ಎಲ್ಲ ಸಂಗೀತಗಾರರೂ ವಿದ್ಯಾರ್ಥಿಗಳೂ ರಸಿಕರೂಆ ಸಂಗೀತನಿಧಿಗಳನ್ನು ಆಲಿಸುತ್ತಲೇ ಇರಬೇಕು. ಇದು ಬಹುಮುಖ್ಯವಾದ ವಿಷಯ” ಎನ್ನುತ್ತಾರೆ ಶ್ರೀಕಂಠನ್ ರವರು. 

ಮುಸಿರಿ ಅವರಿಂದ ತಾವು 10 ಕೃತಿಗಳನ್ನು ಕಲಿತೆ ವಿಷಯವನ್ನು ಹೇಳುವಾಗ ಶ್ರಿಕಂಠನ್ ರವರು ಒಬ್ಬ ಒಂಬತ್ತು ವರ್ಷದ ಬಾಲಕನೇ ಆಗಬಿಡುತ್ತಾರೆ. 

ಇಷ್ಟೆಲ್ಲ ಶೈಲಿಗಳನ್ನು ಮೈಗೂಡಿಸಿಕೊಂಡ ಮೇಲೂ ತನ್ನದೇ ಸ್ವತಂತ್ರಶೈಲಿಯನ್ನು ರೂಪಿಸಿಕೊಳ್ಳುವುದು ಸುಲಭವಾಯಿತೆ? ಐದಾರು ಗಂಟೆಗಳ ಸತತ ಅಭ್ಯಾಸವನ್ನು ಇವರು ಮಾಡುತ್ತಿದ್ದ ಕಥೆಗಳನ್ನು ಮೈಸೂರಿನ ಮನೆಯ ಕಂಬಗಳೇ ಸಾರುತ್ತವೆ.  ಆಗ ಇವರ ಪರಿವಾರವು ರಾಮವಿಕಾಸ ಅಗ್ರಹಾರದಲ್ಲಿ ವಾಸಮಾಡುತ್ತಿತ್ತು. ತನ್ನ ಅಭ್ಯಾಸವನ್ನು ಮುಗಿಸಿಕೊಂಡು ಶ್ರೀಕಂಠನ್ ಕೋಣೆಯಿಂದಾಚೆ ಬಂದಾಗ ಅವರ ಶಿಖೆಯು ಚದುರಿ ತಲೆಯ ಮೇಲೆಲ್ಲ ಹರಡಿರುತ್ತಿತ್ತು! ಹತ್ತಿರದಲ್ಲೇ ವಾಸಿಸುತ್ತಿದ್ದ ತಿಟ್ಟೆ ಶ್ರೀನಿವಾಸ ಐಯ್ಯಂಗಾರರು ಸ್ವತಃ ಉತ್ತಮ ಗಾಯಕರಾಗಿದ್ದು, ಸಾಯಂಕಾಲದ ವಾಯುವಿಹಾರಕ್ಕೆ ಹೋಗುವಾಗ, ಶ್ರೀಕಂಠನ್ರ ಸುಶ್ರಾವ್ಯಗಾನವನ್ನು ಕುತೂಹಲದಿಂದ ಆಲಿಸುತ್ತ ನಿಲ್ಲುತ್ತಿದ್ದರು. “ಅದೆಂತಹ ದೈತ್ಯ ಅಭ್ಯಾಸವಪ್ಪ” ಎಂದು ಉದ್ಗರಿಸಿಯೂ ಇದ್ದರಂತೆ!

ವ್ಯರ್ಥವಾಗಲಿಲ್ಲ

ತಾವು ಅಂದು ಮಾಡಿದ ಸತತ ಅಭ್ಯಾಸವು ವ್ಯರ್ಥವಾಗಲಿಲ್ಲ ಎನ್ನುವುದನ್ನು ತಮ್ಮ 94ರ ವಯಸ್ಸಿನಲ್ಲೂ ಶ್ರೀಕಂಠನ್ ರವರು ಸಾಬೀತು ಮಾಡಿದರು.

ಕಳೆದ ನವದಶಕಗಳೇ ಅದಕ್ಕೆ ಸಾಕ್ಷಿ. ತನ್ನ ದೈನಂದಿನ ಅಭ್ಯಾಸದಲ್ಲಿ ತ್ರಿಕಾಲದಲ್ಲಿ ಅಕಾರಸಾಧನೆಯನ್ನು ಮಾಡುತ್ತಿದ್ದರಲ್ಲದೆ ಕಂಠ-ಸಂಸ್ಕಾರಕ್ಕೆ ಸಂಬಂಧಿಸಿದ ಕೆಲವು ವಿಶೇಷ ಅಭ್ಯಾಸಗಳನ್ನೂ ಗೈಯ್ಯುತ್ತಿದ್ದರು. ಶ್ರುತ್ತಿಶುದ್ಧಿ, ಲಯಶುದ್ಧಿ, ಸಾಹಿತ್ಯಶುದ್ಧಿ ಹಾಗೂ ರಾಗಶುದ್ಧಿಯು ಅವರ ನಿತ್ಯದ ಮಂತ್ರಗಳೇ ಆಗಿಬಿಟ್ಟಿದ್ದವು.

“ಹಿಂದೂಸ್ಥಾನಿ ಗಾಯಕರ ಅದ್ಭುತ ಅಭ್ಯಾಸವನ್ನೂ ಸ್ವರಸಾಧನೆಯನ್ನೂ ಕೇಳಿ ಬೆರಗಾದ ನಾನು ಹಾಗೇ ಮಾಡುವ ಸ್ಫೂರ್ತಿಯನ್ನು ಪಡೆದಿದ್ದೆ.ಅವರ ಶೈಲಿಗೆ ಹೊರಳುವಂತಾಗಬಾರದು, ಆದರೆ ಅತ್ಯಂತ ವೇಗದಲ್ಲೂ ಸ್ವರಶುದ್ಧಿಯು ಅತ್ಯಂತ ಖಚಿತವಾಗಿ ಸಿದ್ಧಿಸಬೇಕು ಎನ್ನುವುದು ನನ್ನ ಆಶಯವಾಗಿತ್ತು. ಒಂದೊಂದು ರಾಗವನ್ನೂ ತಿಂಗಳಾದರೂ ಹಿಡಿದುಹಾಡುತ್ತಿದ್ದೆ. ಅದರ ಒಂದೊಂದು ಸ್ವರವೂ ಗಮಕವೂ ಖಚಿತವಾಗಿಯೂ ಶುದ್ಧವಾಗಿಯೂ ಒದಗುವತನಕ ಹಿಡಿದು ಅಭ್ಯಾಸ ಮಾಡುತ್ತಿದ್ದೆ. ಅಭ್ಯಾಸಕ್ಕೆ ಪರ್ಯಾಯವೂ ಇಲ್ಲ.” ಎನ್ನುತ್ತಾರೆ ಶ್ರೀಕಂಠನ್. 

“ಸಂಗೀತಸಾಗರದಲ್ಲಿ ಕಲಿಯುವುದಕ್ಕೆ ಸೀಮೆ ಎಂಬುದೇ ಇಲ್ಲ, ಅದರಲ್ಲಿ ವ್ಯಾಪಕವಾಗಿ ಈಜಾಡಲು ಹಾಗೂ ಅದರ ಆಳಕ್ಕಿಳಿಯಲು ಶಕ್ತಿ, ಸಹನೆ ಹಾಗೂ ಕೌಶಲಗಳಿರಬೇಕು, ಅದೊಂದು ಕೊನೆಯಿಲ್ಲದ ಪ್ರಯತ್ನ. ನಾವೆಷ್ಟೇ ಕಲಿತರೂ ಅದು ಕೇವಲ ಅಣು ಮಾತ್ರವೇ!ಈ ನಿಧಿಯ ಪೂರ್ಣದರ್ಶನ ಮಾಡುವುದಕ್ಕೆ ಇನ್ನೂ ಅದೆಷ್ಟು ಜನ್ಮಗಳು ಬೇಕೋ ಏನೋ! ಭಗವಂತನು ನನ್ನನ್ನು ತುಂಬ ಸ್ವಾರ್ಥಿ ಎಂದುಕೊಳ್ಳುತ್ತಾನೇನೋ!”

ಹದಿಹರೆಯದಲ್ಲಿ ಶ್ರೀಕಂಠನ್ ರವರು ಚಿಕ್ಕಪುಟ್ಟ ಸಂಗೀತ-ಕಚೇರಿಗಳನ್ನು ನೀಡುವಾಗ, ಅವರಿಗೆ ಸಂಭಾವನೆಯೇ ಸಿಗುತ್ತಿರಲಿಲ್ಲ. ಆದರೆ ಈ ಪುಟ್ಟ ಕಲಾವಿದನಿಗೆ ಅದೆಲ್ಲ ಮುಖ್ಯವಾಗಿರಲಿಲ್ಲ. ಗಾಯನಕ್ಕೆ ಸಂಗೀತ-ಕಚೇರಿಯು ಅತ್ಯುತ್ತಮ ಅಭ್ಯಾಸ-ವೇದಿಕೆ ಎಂದಷ್ಟೇ ಅವರು ಭಾವಿಸಿದ್ದರು. ಅವರು ಚಿಕ್ಕವಯಸ್ಸಿನಲ್ಲಿ ನೀಡುತ್ತಿದ್ದ ಸಂಗೀತ-ಕಚೇರಿಗಳ ಬಗ್ಗೆ ಅವರು ನಕ್ಕು ಇಂತೆನ್ನುತ್ತಾರೆ- “ನಾನು ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಒಮ್ಮೆ ಅರಮನೆಯ ಒಂದು ಕಾರ್ಯಕ್ರಮಕ್ಕಾಗಿ   ಧ್ವನಿಪರೀಕ್ಷೆಗೆ ಹೋಗಿದ್ದೆ. ಆಗ ಅಲ್ಲಿದ್ದ ವಿದ್ವಾನ್ ಮುತ್ತಯ್ಯ ಭಾಗವತರು ’ನೀನು  ಚೆನ್ನಾಗಿ ಹಾಡುತ್ತೀಯೆ. ಧ್ವನಿಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಸಿಕೊಳ್ಳುವ ಸಾಮರ್ಥ್ಯ ನಿನ್ನಲ್ಲಿದೆ. ಆದರೆ ನೀನು ತುಂಬ ಚಿಕ್ಕವನಾದ್ದರಿಂದ ಈಗಲೇ ನಿನ್ನನ್ನು ಅರಮನೆಯ ದರ್ಬಾರ್ ಕಚೇರಿಗೆ ಆಯ್ಕೆ ಮಾಡಲಾರೆ. ಕೆಲವು ವರ್ಷಗಳ ಬಳಿಕ ಮತ್ತೆ ಬಾ’ ಎಂದರು”.

ಮೈಸೂರು ಅರಮನೆಯು ಆ ಕಾಲದಲ್ಲಂತೂ ಸಂಗೀತ-ಪ್ರಪಂಚದ ಜೀವನಾಡಿಯೇ ಆಗಿತ್ತು. ರಾಜವಂಶದವರು ಉತ್ತಮ ರಸಜ್ಞರೂ, ಪ್ರಾಯೋಜಕರೂ ಅಲ್ಲದೆ ಸ್ವತಃ ಸಂಗೀತಜ್ಞರೂ ಸಂಗೀತಶಾಸ್ತ್ರಜ್ಞರೂ ಆಗಿದ್ದರು. ದೊರೆಗಳು ಉತ್ತಮ ಸಂಗೀತ-ಕಲಾವಿದರನ್ನು ಬರಮಾಡಿಕೊಂಡು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿದ್ದರಲ್ಲದೆ ಸಮ್ಮಾನಿಸುತ್ತಿದ್ದರು. ಅತ್ತ ಈ ಕಾರ್ಯಕ್ರಮಗಳಿಂದ ಜನಸಾಮಾನ್ಯರಿಗೂ, ಪರಸ್ಥಳಗಳಿಂದ ಬಂದ ಸಂಗೀತದ ವಿದ್ವಾಂಸರುಗಳ ಕಲೆಯನ್ನು ಆಸ್ವಾದಿಸಲು ಅನುವಾಗುತ್ತಿತ್ತು. ಇದಲ್ಲದೆ ಮೈಸೂರು ವಾಸುದೇವಚಾರ್ಯರು, ವೀಣೆ ಸುಬ್ಬಣ್ಣ ಹಾಗೂ ಮುತ್ತಯ್ಯ ಭಾಗವತರ್ ಮುಂತಾದ ವಿದ್ವಾಂಸರುಗಳ ಮನೆಯಂಗಳದಲ್ಲೂ ಈ ವಿದ್ವಾಂಸರ ಅನೌಪಚಾರಿಕ ಕಚೇರಿಗಳು ಜರುಗುತ್ತಿದ್ದವು. ಚೌಡಯ್ಯ, ಶೇಷಣ್ಣ, ಸುಬ್ಬಣ್ಣ ಮುಂತಾದವಂತಹವರನ್ನು ಬಿಟ್ಟು ಮಿಕ್ಕ ಸ್ಥಳೀಯ ವಿದ್ವಾಂಸರುಗಳಿಗೆ ಸಂಭಾವನೆಯೂ ಅಷ್ಟಾಗಿ ಸಿಗುತ್ತಿರಲಿಲ್ಲ. ಆದರೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳಂತೂ ಸಿಗುತ್ತಿದ್ದವು. ಮೈಸೂರಿನಲ್ಲಿ ಹಲವು ಸಂಗೀತ-ವೇದಿಕೆಗಳೇ ನಿರ್ಮಾಣಗೊಂಡಿದ್ದು ಒಂದಷ್ಟು ಸಂಭಾವನೆಯನ್ನು ನೀಡಲಾರಂಭಿಸಿದ್ದರು. ಇನ್ನು ಕೆಲವು ಸಂಸ್ಥೆಗಳಲ್ಲಿ ಉದ್ದದ ಭಾಷಣಗಳನ್ನು ಮಾಡಿ ಕಲಾವಿದರನ್ನು ಚೆನ್ನಾಗಿ ಹೊಗಳಿ ಬರಿಗೈಯಲ್ಲಿ ಕಳುಹಿಸಿಬಿಡುತ್ತಿದ್ದದ್ದೂ ಉಂಟು” ಎಂದು ಸ್ಮರಿಸುತ್ತ ನಗುತ್ತಾರೆ ಶ್ರೀಕಂಠನ್. “ಕಚೇರಿಗಳಲ್ಲಂತೂ ಹಣ ದಕ್ಕುವುದಿಲ್ಲವೆಂದು ಸಂಗೀತಪಾಠಗಳ ಮೂಲಕವಾದರೂ ಒಂದಿಷ್ಟು ಸಂಪಾದಿಸಲೆಳಸುತ್ತಿದ್ದರು ಸ್ಥಳೀಯ ವಿದ್ವಾಂಸರುಗಳು. ಆದರೆ ತಾವು ಗೈಯ್ಯುವ ಪರಿಶ್ರಮಕ್ಕೆ ಅಲ್ಲಿ ಸಿಗುತ್ತಿದ್ದದ್ದೂ ಅತ್ಯಲ್ಪ ಎಂಬುದು ವಿದ್ವಾಂಸರುಗಳ ಭಾವನೆಯಾಗಿತ್ತು” ಎನ್ನುತ್ತಾರೆ.

ಉದ್ಯೋಗವಲಯಕ್ಕೆ ಪದಾರ್ಪಣೆ

ತನ್ನ ಸಂಗೀತ ಸಾಧನೆಯ ನಡುವೆಯೇ ಶ್ರೀಕಂಠನ್ ರವರು 1955ರಲ್ಲಿ ಮಹಾರಾಜಾಸ್ ಕಾಲೇಜಿನಲ್ಲಿ ರಾಜನೀತಿ ಹಾಗೂ ಮನಶ್ಶಾಸ್ತ್ರಗಳ ವಿಷಯದಲ್ಲಿ ಬಿ.ಎ.ಪದವಿಯ ವ್ಯಾಸಂಗವನ್ನು ಮುಗಿಸಿದರು. ಮನಶ್ಶಾಸ್ತ್ರಜ್ಞರಾಗಿದ್ದ ಎಂ. ವಿ. ಗೋಪಾಲಸ್ವಾಮಿರವರು ಪ್ರಾರಂಭಿಸಿದ ಮೈಸೂರು ಆಕಾಶವಾಣಿಯಲ್ಲಿ 1949ರಲ್ಲಿ ಉದ್ಯೋಗವಹಿಸಿದರು. ಈಗ ಆಕಾಶವಾಣಿಗೆ ಎಪ್ಪತ್ತೈದರ ಹರೆಯ. ಮೈಸೂರು ಆಕಾಶವಾಣಿಯಲ್ಲಿ ಶ್ರೀಕಂಠನ್ ರವರಿಗೆ ಒಳ್ಳೆಯ ವರಮಾನ ಸಿಗುತ್ತಿತ್ತು. ಮುಂದೆ ಮಹಾರಾಜರ ಆಡಳಿತದ ಈ ಮೈಸೂರು ರಾಜ್ಯವು ಭಾರತದ ಗಣತಂತ್ರದಲ್ಲಿ ಸೇರ್ಪಡೆಯಾದಾಗ ಮೈಸೂರು ರಾಜ್ಯ ರೇಡಿಯೋ, ಆಲ್ ಇಂಡಿಯಾ ರೇಡಿಯೋದಲ್ಲಿ ಸೇರ್ಪಡೆಯಾಯಿತು. ಆಕಾಶವಾಣಿಯ ಕಲಾಪಗಳ ಕೇಂದ್ರವು ಬೆಂಗಳೂರಿಗೆ ಸ್ಥಳಂತರವಾಗುತ್ತಲೇ ಶ್ರೀಕಂಠನ್ ರವರೂ ಬೆಂಗಳೂರಿಗೆ ಬಂದು ನೆಲೆಸಿದರು. 

ಶ್ರೀಕಂಠನ್ ರವರ ಮುಂದಿನ 33 ವರ್ಷಗಳ ಸಂಗೀತ-ವೃತ್ತಿಜೀವನವನ್ನು ರೂಪಿಸಿದ ಆಕಾಶವಾಣಿಯ ಈ ಉದ್ಯೋಗದ ಹಿನ್ನಲೆ ಸ್ವಾರಸ್ಯಕರವಾಗಿದೆ. ತಮ್ಮ ಕಾಲೇಜಿನ ದಿನಗಳಿಂದಲೂ ಶ್ರೀಕಂಠನ್ ರವರು ತಮ್ಮ ಸೋದರರೊಂದಿಗೆ ವಾಸುದೇವಾಚಾರ್ಯರ ಮನೆಗೆ ಭೇಟಿಕೊಡುತ್ತಿದ್ದದ್ದುಂಟು. ಅಲ್ಲಿ ಅವರ ಮೊಮ್ಮಗನಾದ ಎಸ್.ಕೃಷ್ಣಮೂರ್ತಿರವರರೊಡನೆ ಸ್ನೇಹ ಬೆಳೆಯಿತು. ಅರಮನೆಯ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಕಲಾರಸಿಕರು, ಇಲ್ಲಿ ನಡೆಯುತ್ತಿದ್ದ ಚಿಕ್ಕಸಂಗೀತ-ಕೂಟಗಳಿಗೂ ದೊಡ್ಡಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. ಇಲ್ಲಿ ಭಜನೆ-ದಾಸರಪದಗಳ ಗಾಯನವು ನಿಯತವಾಗಿ ನಡೆಯುತ್ತಿತ್ತು. 

ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದ ಶ್ರೀಕಂಠನ್ ರವರಿಗೆ ಇಲ್ಲಿನ ಮುಖ್ಯವಾದ ಸಂದರ್ಭಗಳಲ್ಲಿ ಹಾಡಲು ಆಹ್ವಾನ ಸಿಗುತ್ತಿತ್ತು. ಹೀಗೆ ಕೆಲವು ಚಿಕ್ಕ ಕಾರ್ಯಕ್ರಮಗಳಲ್ಲೂ ಹಾಗೂ ಉತ್ಸವಗಳ ಕೆಲವು ದೊಡ್ಡ ಕಚೇರಿಗಳಲ್ಲೂ ಹಾಡುವ ಅವಕಾಶ ಇವರಿಗೆ ಒದಗಿಬರಲಾರಂಭಿಸಿತ್ತು. ಕೃಷ್ಣಮೂರ್ತಿಗಳು ಆಗತಾನೆ ಮೈಸೂರು ಆಕಾಶವಾಣಿಯಲ್ಲಿ ಉದ್ಯೋಗ ಹಿಡಿದಿದ್ದರು. ಶ್ರೀಕಂಠನ್ ರವರ ಸಂಗೀತಪ್ರೀತಿಯನ್ನು ಗುರುತಿಸಿ, ಇವರನ್ನೂ ಆಕಾಶವಾಣಿಯ ನಿಲಯದ ಕಲಾವಿದರ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವಂತೆ ಸಲಹೆ ಇತ್ತರು. “ದೇವರ ದಯೆಯಿಂದಾಗಿಯೇ ನನಗೆ ಈ ಉದ್ಯೋಗವು ಲಭಿಸಿದ್ದು, ಕೃಷ್ಣಮೂರ್ತಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಜೀವನದ ಮಹತ್ತರ ಘಟ್ಟವೇ ಆಯಿತು. ಸಂಗೀತದ ಕುರಿತಾದ ನನ್ನ ಉತ್ಕಟ ಪ್ರೀತಿಗೂ ಈ ಉದ್ಯೋಗವು ಅನುಕೂಲಕರವಾಗಿತ್ತು. ನನ್ನ ವೃತ್ತಿಜೀವನದ ಉತ್ತುಂಗದಲ್ಲಿ ನಾನು ತಿಂಗಳಿಗೆ 40 ರೂಪಾಯಿ ಸಂಬಳವನ್ನು ಪಡೆಯುತ್ತಿದ್ದೆ. ಈ ಉದ್ಯೋಗವು ನನಗೆ ಸಂಬಳವನ್ನೂ ಇತ್ತಿತಲ್ಲದೆ ಹಲವಾರು ಕಲಾವಿದರ ಒಡನಾಟವನ್ನೂ ಒದಗಿಸಿತು. ನನ್ನದೇ ಸಂಗೀತ-ನಿರ್ಮಾಣಗಳಿಗೂ ವೇದಿಕೆಯೊದಗಿಸಿತು. ಜೊತೆಗೆ ನನ್ನ ಸಂಗೀತಕಚೇರಿಗಳು ನಡೆಯುತ್ತಿದ್ದವು. ವೃತ್ತಿಜೀವನದ ಸಾಫಲ್ಯಕ್ಕೆ ಇದಕ್ಕಿಂತ ಹೆಚ್ಚಿನದನ್ನು ಬಯಸಲಾದೀತೆ?” ಇದು ಶ್ರೀಕಂಠನ್ ರವರ ಮನದಾಳದ ಮಾತು.  ತಂದೆ ಕೃಷ್ಣಶಾಸ್ತ್ರಿಗಳ ಶಿಸ್ತಿನ ಪೋಷಣೆಯಿಂದಾಗಿ ಈ ನಾಲ್ವರು ಪುತ್ರರೂ ಸುಶಿಕ್ಷಿತರೂ ಉದ್ಯೋಗಸ್ಥರೂ ಆಗಿ ತಮ್ಮ ಪ್ರವೃತ್ತಿಯ ಕಲೆಗಳನ್ನೂ ಹಿಡಿದು ಸಾಧಿಸಲು ಸಾಧ್ಯವಾಯಿತು. ತಮ್ಮ ತಂದೆಯ ಈ ಕೌಶಲದಿಂದ ಶ್ರೀಕಂಠನ್ ರವರು ಹಲವು ಅಂಶಗಳನ್ನು ಕಲಿತು ಮೈಗೂಡಿಸಿಕೊಂಡರು. ಜೀವನಶೈಲಿಯಲ್ಲಿ ಶಿಸ್ತುಬದ್ಧತೆ, ವೃತ್ತಿಜೀವನದ ಉಳಿವು-ಬೆಳೆವುಗಳಿಗಾಗಿ ಸದಾ ಪೂರ್ವಸಿದ್ಧತೆ, ತಮ್ಮ ಕಂಠಸೌಷ್ಠವವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರ, ಎಲ್ಲ ಸಂದರ್ಭಗಳಲ್ಲೂ ಮನಃಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಸಂಗೀತವೃತ್ತಿಗೆ ಬೇಕಾದ ಸರ್ವತೋಮುಖವಾದ ವ್ಯಕ್ತಿತ್ವದ ವರ್ಚಸ್ಸು ಇದೆಲ್ಲವನ್ನೂ ಶ್ರೀಕಂಠನ್ ರವರು ಕ್ರಮವರಿತು ರೂಢಿಸಿಕೊಂಡರು.

ಆಕಾಶವಾಣಿಇತಿಹಾಸದತ್ತ ಇಣುಕುನೋಟ

ಮೈಸೂರು ಆಕಾಶವಾಣಿಯು ಭಾರತದಲ್ಲೇ ಮೊಟ್ಟಮೊದಲು ಸ್ಥಾಪನೆಗೊಂಡ ಖಾಸಗಿ ರೇಡಿಯೋ ಪ್ರಸಾರ ಕೇಂದ್ರ. ಇದರ ಸಂಸ್ಥಾಪಕರು ಗೋಪಾಲಸ್ವಾಮಿರವರು. ಬೆಳಿಗ್ಗೆ 5.55 ರಿಂದ ರಾತ್ರಿ 11.05ರವರೆಗೂ ನಿರಂತರ ಪ್ರಸಾರಗೈಯುವ ಕರ್ನಾಟಕದ ಏಕೈಕ ಬಾನುಲಿ ಕೇಂದ್ರವಾಗಿ ಇದು ಅರಳಿತು.

ಇದನ್ನು ಪ್ರಾರಂಭಿಸಿದ್ದು ಗೋಪಾಲಸ್ವಾಮಿರವರ ಮೈಸೂರಿನ ಒಂಟಿಕೊಪ್ಪಲ್ ನಲ್ಲಿರುವ ಬಾಡಿಗೆಯ ಮನೆಯಲ್ಲೇ! ಮುಂಬಯಿ ಹಾಗೂ ಕಲ್ಕತ್ತೆಗಳಲ್ಲಿ ಪ್ರಾಯೋಗಿಕ ಆಕಾಶವಾಣಿ ಕೇಂದ್ರಗಳನ್ನು ಸ್ಥಾಪಿಸಿದ ಎರಡೇ ವರ್ಷಗಳ ಬಳಿಕ, ಅಖಿಲ ಭಾರತೀಯ ಆಕಾಶವಾಣಿಯ (AIR) ಸ್ಥಾಪನೆಗೆ ಒಂದು ವರ್ಷದ ಮುಂಚೆ, ಕೇವಲ 30 ವ್ಯಾಟ್ಗಳ ಫಿಲಿಪ್ಸ್ ಪ್ರಸಾರಕಗಳನ್ನು ಬಳಸಿ ಪ್ರಾಯೋಗಿಕ ರೇಡಿಯೋ ಕೇಂದ್ರವನ್ನು ಇಲ್ಲಿ ಸೆಪ್ಟೆಂಬರ್ 10, 1935ರಂದು ಪ್ರಾರಂಭಿಸಲಾಯಿತು. ಈ ಪ್ರಸಾರ ಚಿಕ್ಕಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿತ್ತು. 

ಹಲವರು ಒಟ್ಟಿಗೆ ಕುಳಿತು ಚಿಂತಿಸಿ ಆ ಪ್ರಾಯೋಗಿಕ ಪ್ರಸಾರಕೇಂದ್ರಕ್ಕೆ ‘ಆಕಾಶವಾಣಿ’ ಎನ್ನುವ ನಾಮಕರಣ ಮಾಡಿದರು. ಮುಂದೆ ಇದೇ ಭಾರತದ ಆಲ್ ಇಂಡಿಯಾ ರೇಡಿಯೋಗೆ ನಾಮಧೇಯವಾಗಿ ಮಾನ್ಯವಾಯಿತು. ಮುಂದೆ ಮೈಸೂರು ಆಕಾಶವಾಣಿ ಕೇಂದ್ರವೇ ಮೊಟ್ಟಮೊದಲು ಅಂಕೀಕೃತಗೊಂಡದ್ದು ಕೂಡ. ಈ ಕೇಂದ್ರವು ಪ್ರಸಾರಕ್ಕೆ ಬೇಕಾದ ವಿನ್ಯಾಸವನ್ನು ರೂಪಿಸಿಕೊಂಡ ಆ ಮನೆಯಲ್ಲೇ ನಡೆಯುತ್ತಿತ್ತು. ಮುಂದೆ 10 ಕೆ.ವಿ.ಯ ಪ್ರಸಾರಕವನ್ನು ಹೊಂದಿ, 100.6 ಮೆಗಾ ಹರ್ಟ್ಜ಼ನ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರಗೈಯಲಾರಂಭಿಸಿತು. ಸುಮಾರು 75 ವರ್ಷಗಳಿಗಿಂತಲೂ ಹಿಂದೆ ವಿಟ್ಠಲವಿಹಾರವೆಂಬ ಈ ಮನೆಯಲ್ಲಿ ಮೈಸೂರು ಆಕಾಶವಾಣಿ ಕೇಂದ್ರವು ಕಾರ್ಯವೆಸಗುತ್ತ ಬಂದಿತ್ತು. ಅಲ್ಲಿಂದ ಅನತಿದೂರದಲ್ಲೇ ಇಂದು ಆಕಾಶವಾಣಿ ಕೇಂದ್ರವು ನೆಲೆಗೊಂಡಿದೆ. 

ಮೈಸೂರು ಆಕಾಶವಾಣಿಯ ಕೇಂದ್ರ ನಿರ್ದೇಶಕರಾಗಿ ನಿವೃತ್ತರಾದ ಡಾ.ಎಂ.ಈ. ಎಸ್.ವಿಜಯಾಹರನ್ ರವರು ಹೇಳುತ್ತಾರೆ- 

“ಆಕಾಶವಾಣಿಯ ಸಂಸ್ಥಾಪಕರಾದ ಡಾ. ಗೋಪಾಲಸ್ವಾಮಿರವರು ಮಹಾರಾಜಾಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಭಾರತದಲ್ಲೇ ಇದು ಪ್ರಪ್ರಥಮ ಖಾಸಗೀ ರೇಡಿಯೋ ಕೇಂದ್ರ. ಇದು ಭಾರತೀಯ ಸಂಸ್ಕೃತಿಗೆ ಗೋಪಾಲಸ್ವಾಮಿರವರ ಯೋಗದಾನವೇ ಸರಿ. ಹತ್ತು ಜನರಿಗೆ ಒಳಿತನ್ನು ಮಾಡಬೇಕೆನ್ನುವ ಹಂಬಲವಿರುವ ಸಜ್ಜನರು ಎಷ್ಟು ಆಸ್ಥೆ ವಹಿಸಿ, ಅದೆಷ್ಟು ಹುರುಪು ಉತ್ಸಾಹಗಳಿಂದಲೂ ಪರಿಶ್ರಮದಿಂದಲೂ ದುಡಿಯುತ್ತಾರೆ ಎನ್ನುವುದಕ್ಕೆ ಇದು ನಿದರ್ಶನವೇ ಆಗಿದೆ.” 

ಆಕಾಶವಾಣಿಯ ಒಂದು ವಿಶೇಷಾಂಕದಲ್ಲಿ ವಿಜಯಾ ಹರನ್ ರವರು ಹೀಗೆ ಹೇಳುತ್ತಾರೆ- “ಗೋಪಾಲಸ್ವಾಮಿರವರು 6 ವರ್ಷಗಳಷ್ಟು ಸುದೀರ್ಘಕಾಲ, ಒಬ್ಬಂಟಿಗರಾಗಿ ಈ ಆಕಾಶವಾಣಿ ಕೇಂದ್ರವನ್ನು ನಡೆಸಿದರು. ತಮ್ಮದೇ ಸ್ವಂತ ಹಣದಿಂದ ಎಲ್ಲವನ್ನೂ ನಿರ್ವಹಿಸಿದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ಮುಂದುವರಿಸಲಾಗದೆ, ಕೊನೆಗೆ ಇದರ ಆಡಳಿತವನ್ನು ಮೈಸೂರು ನಗರಪಾಲಿಕೆಗೆ ಹಸ್ತಾಂತರಿಸಿದರು. ಮುಂದೆ 1942ರಲ್ಲಿ ಜನವರಿ 1 ನೆಯ ತಾರೀಖಿನಿಂದ ಮಹಾರಾಜರ ಸರ್ಕಾರವು ಈ ಕೇಂದ್ರವನ್ನು ವಶಕ್ಕೆ ತೆಗೆದುಕೊಂಡು ನಡೆಸಲಾರಂಭಿಸಿತು. (ಆಗಸ್ಟ್2, 1943 ರವರೆಗೂ) ಗೋಪಾಲಸ್ವಾಮಿರವರೇ ಇದರ ನಿರ್ದೇಶಕರಾಗಿ ಮುಂದುವರೆದರು. ಆ ಬಳಿಕ ಅವರ ಸಹೋದ್ಯೋಗಿಯಾದ ಪ್ರೊ.ನ.ಕಸ್ತೂರಿರವರು ಇದರ ಕೇಂದ್ರ ಸಹಾಯಕ ನಿರ್ವಾಹಕರಾಗಿ ನೇಮಕಗೊಂಡರು. 

‍ಲೇಖಕರು Admin

April 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: