ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣದಲ್ಲಿ ಉದಯಿಸಿದ ತಾರೆ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

4

ರುದ್ರಪಟ್ಣದಲ್ಲಿ ಉದಯಿಸಿದ ತಾರೆ

ಈ ಮನೆಯು ರುದ್ರಪಟ್ಣದ ನಾಲ್ಕು ಮುಖ್ಯಬೀದಿಗಳಗಳಲ್ಲೊಂದಾದ ಬ್ರಾಹ್ಮಣರ ಬೀದಿಯಲ್ಲಿದೆ. (ಆ ಕಾಲದಲ್ಲಿ ಬೀದಿಗಳು ಅಲ್ಲಿ ವಾಸಿಸುವವರ ವರ್ಣವೃತ್ತಿಗಳ ಹೆಸರನ್ನೇ ಪಡೆಯುತ್ತಿದ್ದವು) ನೋಡಲು ಇತರ ಸಾಮಾನ್ಯ ನಿವಾಸಗಳಂತೆ ತೋರಿದರೂ, ಪ್ರವೇಶಿಸುವಾಗ ನನ್ನ ಹೃದಯವನ್ನು ಸೆಳೆಯಿತು. ತೊಂಭತ್ತುನಾಲ್ಕು ವರ್ಷಗಳ ಹಿಂದೆ ಸಣ್ಣಕ್ಕ ಹಾಗೂ ಕೃಷ್ಣಶಾಸ್ತ್ರಿರವರಿಗೆ ಶ್ರೀಕಂಠನ್ ರವರು ಜನಿಸಿದ್ದು ಇಲ್ಲೇ ಅಲ್ಲವೆ? ಹೊರಗಡೆ ಮಾಸಿದ ನೀಲಿ-ಹಸಿರು ಬಣ್ಣಗಳ ಗೋಡೆ. ಚಿಕ್ಕ ಕಂಬಿಯೇರಿಸಿದ ಕಿಟಕಿಗಳು.  ಆಗಂತುಕರನ್ನು ಸ್ವಾಗತಿಸುವಂತಹ ನಿರಾಡಂಬರ ಆಕರ್ಷಣೆ. ಸೂರ್ಯನ ಬೆಳಕನ್ನು ತೋರುವಂತಹ ನಡುವಂಗಳದಲ್ಲಿ ಅಚ್ಚುಕಟ್ಟಾದ ಭಾವಿ. ಹಳೆಯ ಕಾಲದ ಮನೆಗಳ ವಾಸ್ತುಶಿಲ್ಪವನ್ನು ನೆನಪಿಗೆ ತರುತ್ತದೆ. ಒಟ್ಟಿನಲ್ಲಿ, ಶ್ರೀಕಂಠನ್ ರವರ ಬಾಲ್ಯಜೀವನವು ಎಲ್ಲಿ, ಹೇಗೆ ಅರಳಿರಬಹುದೆನ್ನುವುದನ್ನು ಸಾರುವಂತಹ ಪರಿಸರವಿದು! ಈ ಮನೆಯು ಇವರ ತಂದೆಯವರಾದ ಕೃಷ್ಣಶಾಸ್ತ್ರಿಗಳದ್ದು. ಅವರು ವೇದಪಂಡಿತರು. ಇವರ ಇಡೀ ಪರಿವಾರವೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಜ್ಞಾನವನ್ನು ಹೊಂದಿದೆಯೆಂಬ ಖ್ಯಾತಿಗೆ ಪಾತ್ರ. 

ಸಣ್ಣಕ್ಕನವರು ಅವರ ಕಾಲದ ಉತ್ತಮ ಗಾಯಕಿಯಾಗಿದ್ದರು. ಆದರೆ ವಿಧಿಯು ಅವರನ್ನು ಬೇಗನೆ ಕಸಿದುಕೊಂಡಿತು. ಶ್ರೀಕಂಠನ್ ರವರು ಕೇವಲ ಎರಡು ವರ್ಷದ ಕೂಸಾಗಿರುವಾಗಲೇ, 1922ರಲ್ಲಿ ಅವರ ತಾಯಿ ತೀರಿಕೊಂಡರು. ಹೀಗಾಗಿ ಶ್ರೀಕಂಠನ್ ರವರನ್ನು ಹೆಚ್ಚಾಗಿ ಬೆಳೆಸಿದ್ದು ಅವರ ಅಕ್ಕ. 1831ರಲ್ಲಿ ಕೃಷ್ಣಶಾಸ್ತ್ರಿಗಳು ಐತಿಹಾಸಿಕ ನಗರವಾದ ಮೈಸೂರಿನ ಸಂಸ್ಕೃತಪಾಠಶಾಲೆಯೊಂದರಲ್ಲಿ ಉದ್ಯೋಗವನ್ನು ಹಿಡಿದು, ಮೈಸೂರಿಗೆ ಸ್ಥಳಾಂತರಗೊಂಡರು. 

ಅದಾದ ದಶಕದ ಬಳಿಕ  ಕೃಷ್ಣಶಾಸ್ತ್ರಿಗಳು ತಮ್ಮ ರುದ್ರಪಟ್ಣದ ಮನೆಯನ್ನು ಕೃಷಿಕರೊಬ್ಬರಿಗೆ ಮಾರಾಟ ಮಾಡಿದರು. ಆ ಕೃಷಿಕರ ಮೊಮ್ಮಗ ನಮ್ಮನ್ನು ಈ 160 ವರ್ಷಗಳ ಮನೆಯೊಳಗೆ ಆತ್ಮೀಯವಾಗಿ ಸ್ವಾಗತಿಸಿದರು. ಆ ಮನೆಯೊಳಗೆ ನಸುಬೆಳಕಿನಲ್ಲಿ ಕುಳಿತು, ಆ ಮಣ್ಣಿನ ಗೋಡೆಗಳಲ್ಲಿ ಪ್ರತಿಧ್ವನಿಸಿದ್ದ ಸಂಗೀತದ ಪರಿಸರವನ್ನು ಭಾವಿಸುತ್ತ ಕುಳಿತೆವು. ಆ ನೀರವತೆ-ನಿಶ್ಚಲತೆಗಳು ನಮ್ಮಲ್ಲಿ ಅನಿರ್ವಚನೀಯ ಭಾವವನ್ನು ಮೂಡಿಸಿದವು. ಆ ಗ್ರಾಮದ ಸಂಕೇತಿ ಸಂಗೀತಗಾರರ ವೃತ್ತಾಂತಗಳನ್ನು ಆಲಿಸುವ ಉತ್ಸಾಹ ನಮ್ಮಲ್ಲಿ! ಬೆಂಗಳೂರಿನಿಂದ  ಬಂದಿಳಿದ ನಮ್ಮ ತಂಡವನ್ನು ಸೇರಲು ಬರಬೇಕಿದ್ದ ಕೆಲವು ಗ್ರಾಮಸ್ಥರನ್ನು ಕಾಯುತ್ತ ಕುಳಿತೆವು.

ಸೂರ್ಯ ಮುಳುಗುವ ಹೊತ್ತು. ಇದೇ ಮನೆ ಹಿಂದೆ ಪ್ರತಿ ಸಾಯಂಕಾಲವೂ ಸಂಧ್ಯಾವಂದನಮಂತ್ರಗಳಿಂದಲೂ, ವೇದಘೋಷಗಳಿಂದಲೂ, ಸಂಗೀತದ ತರಂಗಗಳಿಂದಲೂ ನಿನದಿಸುತ್ತಿತ್ತು. ಇಕ್ಕೆಲಗಳಲ್ಲೂ ಜನ ನೆರೆದು, ಸುದೀರ್ಘ ಸಂಗೀತಸಭೆಗಳೇ ಜರುಗುತ್ತಿದ್ದವು. ಕೃಷ್ಣಶಾಸ್ತ್ರಿಗಳ ಮಕ್ಕಳೂ, ವಿದ್ವಾಂಸರುಗಳ ಜೊತೆಜೊತೆಗೇ ಹಾಡುತ್ತ ನಾದಸಾಗರದಲ್ಲಿ ತೇಲಾಡುವುದನ್ನು ಕಲಿಯಲಾರಂಭಿಸಿದ್ದು ಇಲ್ಲೇ.

ನಾವಿದ್ದಲ್ಲಿಗೆ ಬಂದು ನೆರೆದ ಗ್ರಾಮಸ್ಥರು ಹಲವಾರು ಕಥೆ-ಪ್ರಸಂಗಗಳನ್ನೂ ವಿವರಿಸಿದ್ದಲ್ಲದೆ, ನಿದರ್ಶನವನ್ನೂ ಮಾಡಿ, ನಮ್ಮೊಂದಿಗೆ ಸವಿನೆನಪುಗಳನ್ನೆಲ್ಲ ಹಂಚಿಕೊಂಡರು. ಒಬ್ಬರಾದ ಮೇಲೊಬ್ಬರು ಅದನ್ನೆಲ್ಲ ಹೇಳುತ್ತಿದ್ದಂತೆ ನಾವು ಭಾವುಕರಾದೆವು. ಮೂರು ಘಂಟೆಗಳೇ ಕಳೆದುಹೋದವು. ಅಷ್ಟಾದ ಮೇಲೂ ಆ ಮನೆಯೊಡೆಯನಿಗೆ ಶಾಸ್ತ್ರಿಗಳ ಕುರಿತಾದ ತನ್ನ ನೆನಪುಗಳ ಕಥನವನ್ನು ಮುಗಿಸುವ ಮನಸ್ಸೇ ಇಲ್ಲ! ತಾನು ಅವರಿಂದ ‘ಅದೆಷ್ಟು ಕಲಿತೆ’ ಎನ್ನುವುದನ್ನು ನೆನೆನೆನೆಯುತ್ತ “ಶಾಸ್ತ್ರಿಗಳು ನೂರಾರು ಗ್ರಾಮಸ್ಥರಲ್ಲಿ ಶಿಕ್ಷಣ ಹಾಗೂ ಸಂಗೀತದ ಬಗ್ಗೆ ಆಸ್ಥೆಯನ್ನು ಹುಟ್ಟಿಸುತ್ತಿದ್ದರು. ಅವರು ಜನರನ್ನು ಕುಲಭೇದದಿಂದ ಕಂಡವರೇ ಅಲ್ಲ. ಕಲಿಯ ಬಯಸುವ ಎಲ್ಲರಿಗೂ ಅವರು ಹೃತ್ಪೂರ್ವಕವಾಗಿ ಕಲಿಸುತ್ತಿದ್ದರು.” ಎಂದು ವಿವರಿಸುತ್ತಾರೆ.

ಬಹುಮುಖಪ್ರತಿಭಾ-ಸಂಪನ್ನರಾದ ಕೃಷ್ಣಶಾಸ್ತ್ರಿಗಳು ಕೇರಳಾಪುರದಲ್ಲೂ ರಾಮನಾಥಪುರದಲ್ಲೂ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಶ್ರೀಕಂಠನ್ ರವರ ಮೊದಲ ಗುರುಗಳೂ ಇವರೇ. ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿನ ಅವರ ಪಾಂಡಿತ್ಯವು ಅವರನ್ನು ಉತ್ತಮ ಹರಿಕಥಾ-ಧುರೀಣರನ್ನಾಗಿಯೂ, ನಾಟಕ-ರಚನಾಕಾರರನ್ನಾಗಿಯೂ, ಕವಿಯನ್ನಾಗಿಯೂ ರೂಪಿಸಿತು. ಸಣ್ಣಕ್ಕನವರ ಸಂಗೀತಪ್ರತಿಭೆಯ ಬಗ್ಗೆ ಗೊತ್ತೇ ಇದೆ. ಶ್ರೀಕಂಠನ್ ರವರ ಅಣ್ಣಂದಿರೂ ಸಂಗೀತಕ್ಷೇತ್ರದಲ್ಲಿ ಕೃತಪರಿಶ್ರಮರಾದವರು. ಶ್ರೀಕಂಠನ್ ರವರ ದೊಡ್ಡ ಅಣ್ಣ ಆರ್.ಕೆ. ವೆಂಕಟರಾಮಾಶಾಸ್ತ್ರಿಗಳು ಮೈಸೂರಿನ ಚೌಡಯ್ಯನವರಿಂದ ಶಿಕ್ಷಣವನ್ನು ಪಡೆದ ಉತ್ತಮ ಪಿಟೀಲುವಾದಕರು. ಚಿಕ್ಕ ಅಣ್ಣ ಆರ್.ಕೆ. ನಾರಾಯಣಸ್ವಾಮಿರವರು ಮುಸಿರಿ ಸುಬ್ರಹ್ಮಣ್ಯ ಐಯ್ಯರರಿಂದ ಶಿಕ್ಷಣ ಪಡೆದ ಉತ್ತಮ ಗಾಯಕರು. ಮತ್ತೊಬ್ಬ ಅಣ್ಣ ಆರ್.ಕೆ.  ರಾಮನಾಥನ್ ರವರು ಗಾಯಕರೂ ಆಂಗ್ಲ ಉಪನ್ಯಾಸಕರೂ ಆಗಿದ್ದರು. ಸಂಪ್ರದಾಯಬದ್ಧ ಶೈಲಿಯಲ್ಲಿ ಕಲಿಯುತ್ತ ಬೆಳೆದ ಈ ಎಲ್ಲ ಸೋದರರೂ ಸಭಾಧರ್ಮಕ್ಕೆ ಮೆರೆಗು ನೀಡುವಂತಹ ಉತ್ತಮ ಕಲಾವಿದರಾಗಿ ಅರಳಿದರು.

ಸಿರಿಧಾರೆ

ಕೃಷಿಯೇ  ಮುಖ್ಯ ಉದ್ಯೋಗವಾಗಿರುವ ರುದ್ರಪಟ್ಣ ಗ್ರಾಮದಲ್ಲಿ ಅಡಕೆ ಉದ್ಯಮಿಯಾಗಿರುವ ಮಲ್ಲೇಶ ವಿಟ್ಠಲರವರು ಹೇಳುತ್ತಾರೆ- “ಕಾವೇರಿಯು ತುಂಬಿಹರಿಯುವಂತೆಯೇ ರುದ್ರಪಟ್ಣದಲ್ಲೂ ಮೇಧಾವಿಗಳು, ಸಂಗೀತಗಾರರು, ಚಿಂತಕರು, ವಕೀಲರು, ವಿಜ್ಞಾನಿಗಳು ಹಾಗೂ ಕೃಷಿನಿಪುಣರುಗಳ ಮಹಾಪೂರವೇ ಹೊಮ್ಮಿಬಂದಿದೆ”. ಕೃಷ್ಣಶಾಸ್ತ್ರಿಗಳ ಇಡೀ  ಕುಟುಂಬವೇ ಸಂಗೀತಕ್ಕಾಗಿ ಹೆಸರುವಾಸಿಯಾಯಿತಲ್ಲದೆ, ಅವರ ಅಣ್ಣತಮ್ಮಂದಿರ ಕುಟುಂಬಗಳಲ್ಲೂ ಸಂಗೀತಪ್ರತಿಭೆಯೂ, ಪ್ರೀತಿಯೂ, ರಾಸಿಕ್ಯವೂ ಅಷ್ಟೇ ಗಾಢವಾಗಿ ಆವರಿಸಿ ಬೆಳೆಯಿತು. ಹಗಲೂರಾತ್ರಿ ಸಂಗೀತದಲ್ಲೇ ಮಿಂದೆದ್ದ ಈ ಕುಟುಂಬಸ್ಥರ ಕುರಿತಾಗಿ ಕೇಳಿ ಮನತುಂಬಿಕೊಂಡ ನಾವು,ರುದ್ರಪಟ್ಣದಿಂದ ಹೊರಟೆವು. ಇಂಗ್ಲೆಂಡಿನ ‘ಪಾರಿವಾರಿಕ-ಸಂಗೀತ-ತಂಡಗಳು’ ಮಾಡುವಂತೆಯೇ ಈ ಸಂಗೀತಕುಲದವರೂ ತಮ್ಮನ್ನು ತಾವು ‘ಕರ್ನಾಟಕದ ಒಂದು ಪಾರಿವಾರಿಕ ಸಂಗೀತವೃಂದ’ವೆಂದೋ ‘ರುದ್ರಪಟ್ಣದ ಸಂಗೀತ ಪರಿವಾರ’ವೆಂದೋ ಘೋಷಿಸಿಕೊಂಡು ಮೆರೆಯಬಹುದಿತ್ತು!

ಮೈಸೂರು ವಾಸುದೇವಾಚಾರ್ಯರ ಮೊಮ್ಮಕ್ಕಳೂ ಸಂಗೀತಶಾಸ್ತ್ರಜ್ಞರೂ ಆದ ಎಸ್.ಕೃಷ್ಣಮೂರ್ತಿರವರು ತಮ್ಮ ‘ಸಂಗೀತ ಸಮಯ’ ಗ್ರಂಥದಲ್ಲಿ ಬರೆಯುವಂತೆ “ಸಂಕೇತಿ-ಗೃಹಗಾನ-ಮೇಳ’ ಎಂಬ ಹೆಸರಡಿಯಲ್ಲಿ ಸಂಕೇತಿ ವಂಶವೃಕ್ಷವನ್ನೇ ಒಂದೆಡೆ ಸೇರಿಸಬೇಕೆಂದು ಯಾರಿಗಾದರೂ ಅನಿಸುವುದು ಸಹಜವೇ!” ಆದರೂ ಈ ಕುಲದವರು ತಮ್ಮ ಪಾಡಿಗೆ ಪುಟ್ಟಗೊಂಚಲುಗಳಂತೆ ಅಲ್ಲಲ್ಲೇ ಉಳಿದು, ಸಂಗೀತದ ನೀತಿ-ರೀತಿ-ಪ್ರೀತಿಗಳಿಗೆ ಬದ್ಧರಾಗಿ ಸಾಧನೆಗೈಯುತ್ತ, ಸೇವೆಸಲ್ಲಿಸಿತ್ತ, ಸಡಗರವಿಲ್ಲದೆ ಇದ್ದುಬಿಟ್ಟಿದ್ದಾರೆ.

‘ಇಂತಹ ಸಮೃದ್ಧ ಸಂಗೀತಮಯ ಪರಿಸರದಲ್ಲಿ ಬೆಳೆದದ್ದೇ ಶ್ರೀಕಂಠನ್ ರವರ ಎಲ್ಲ ಪ್ರತಿಭೆಗೂ ಕಾರಣ’ ಎಂದು ಒಕ್ಕಣಿಸಿಬಿಡಬಹುದು. ಆದರೆ ಪ್ರತಿಭೆಯೆಲ್ಲವೂ ಕೇವಲ ವಂಶವಾಹಿನಿಗಳಿಂದಷ್ಟೇ ಬೆಳೆಯುವುದು ಎಂದು ತೀರ್ಮಾನಿಸಲಾದೀತೆ? ಬೆಂಗಳೂರು ಆಕಾಶವಾಣಿಯ ಸ್ಥಳೀಯ ನಿರ್ದೇಶಕರಾಗಿ ನಿವೃತ್ತರಾದ ಎನ್.ಎಸ್. ಕೃಷ್ಣಮೂರ್ತಿರವರು ಹೇಳುತ್ತಾರೆ- “ಶ್ರೀಕಂಠನ್ ರವರ ಮನೆಯಲ್ಲಿ ಸಂಗೀತಪರಿಸರವು ಆದ್ಯಂತವಾಗಿದ್ದದ್ದು ನಿಜವೇ 

ಆದರೂ, ಇವರು ಸ್ವತಃ ತಮ್ಮ ನಿಷ್ಠೆ,  ಪರಿಶ್ರಮ ಹಾಗೂ ಕೌಶಲಗಳಿಂದ ಆ ವಿದ್ಯೆಯನ್ನು ಸಿದ್ಧಿಸಿಕೊಂಡಿದ್ದಾರೆ, ಸಾಧನೆ ಮಾಡಿ ಪರಿಪೂರ್ಣತೆಯೆಡೆಗೆ ಸಾಗಿದ್ದಾರೆ ಎನ್ನುವುದನ್ನೂ ಮರೆಯಬಾರದು.” 20ನೆಯ ಶತಮಾನದ ಕರ್ನಾಟಕದ ಅತ್ಯುಚ್ಚ ಸಂಗೀತಗಾರರ ಸ್ಥಾನವನ್ನೇರಿದ ಇವರು 94ನೆಯ ವಯಸ್ಸಿನಲ್ಲೂ ಅತ್ಯುತ್ಕೃಷ್ಟ ಗುಣಮಟ್ಟವನ್ನೂ ಅಚ್ಚುಕಟ್ಟುತನವನ್ನೂ ವೃತ್ತಿಪರತೆಯನ್ನೂ ಕಾಪಾಡಿಕೊಂಡು ಬಂದ್ದದ್ದೇ ಅವರನ್ನು ವಿಶಿಷ್ಟ ಶಕ್ತಿಯನ್ನಾಗಿಸಿದೆ. ಇದರಿಂದಾಗಿಯೇ ಇವರು ಎಲ್ಲರ ನಡುವೆಯೂ ಎದ್ದುಕಾಣುವ ಕಲಾವಿದರಾಗಿದ್ದಾರೆ!”

ತಮ್ಮದು ತ್ಯಾಗರಾಜಸ್ವಾಮಿಗಳ ಪರಂಪರೆಯೇ ಎಂದು ಸ್ವತಃ ಶ್ರೀಕಂಠನ್ ರವರೇ ಹೇಳುವ ಮಾತು ಗಮನ ಸೆಳೆಯುತ್ತದೆ. ಆ ಗುರುಶಿಷ್ಯ ಪರಂಪರೆ ಹೀಗಿದೆ- ತ್ಯಾಗರಾಜರು-ವಾಲಾಜಪೇಟ್ ವೆಂಕಟರಮಣ ಭಾಗವತರ್- ಮೈಸೂರು ಸದಾಶಿವರಾಯರು- ವೀಣಾ ಸುಬ್ಬಣ್ಣ- ಆರ್.ಕೆ. ವೆಂಕಟರಾಮಾಶಾಸ್ತ್ರಿ- ಆರ್.ಕೆ.ಶ್ರೀಕಂಠನ್.

ಭಾವದೀಪ್ತಿಗೆ ಪರಿಸರದ ಪ್ರೇರಣೆ

ಮನೆಯ ಪರಿಸರವು ಶ್ರೀಕಂಠನ್ ರನ್ನು ಕಲಿಕೆಯಲ್ಲಿ ಸಹಜವಾಗಿಯೇ ತೊಡಗಿಸಿತು. ಶುಕ್ರವಾರ-ಶನಿವಾರಗಳು ಬಂದರೆ ಸಾಕು, ಕೃಷ್ಣಶಾಸ್ತ್ರಿಗಳ ಮನೆಯು ಭಜನೆ-ದಾಸರಪದಗಳ ಗಾನರಸದಿಂದ ತುಳುಕುತ್ತಿತ್ತು. ಶ್ರೀಕಂಠನ್ ರವರ ಅಣ್ಣಂದಿರಾದ ನಾರಾಯಣಸ್ವಾಮಿ ಹಾಗೂ ರಾಮನಾಥನ್ ರವರು ಹಾಡುತ್ತಿದ್ದರೆ ವೆಂಕಟರಾಮಾಶಾಸ್ತ್ರಿಗಳು ಪಿಟೀಲು ನುಡಿಸುತ್ತಿದ್ದರು. 

ಶ್ರೀಕಂಠನ್ ರವರು ಇದನ್ನು ನೆನೆಸಿಕೊಂಡು ಹೇಳುತ್ತಾರೆ- “ನಾನು ಕಣ್ಣೆವೆಯಿಕ್ಕದೆ ಅದನ್ನೆಲ್ಲ ನೋಡುತ್ತಿದ್ದೆ ಮತ್ತು ಆಲಿಸುತ್ತಿದ್ದೆ. ನನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ದಿನಗಳಲ್ಲಿ ನಾನು ಬಹಳಷ್ಟು ಸಂಗೀತಕಚೇರಿಗಳಿಗೆ ಹೋಗುತ್ತಿದ್ದೆ. ರಾಮೋತ್ಸವ ಹಾಗೂ ಇತರ ಉತ್ಸವಗಳ ಸಂದರ್ಭಗಳಲ್ಲಿ ಕರ್ನಾಟಕ ಹಾಗೂ ಹಿಂದೂಸ್ಥಾನಿ ಪದ್ಧತಿಯ ಹಿರಿಯ  ವಿದ್ವಾಂಸರೆಲ್ಲರೂ ಮೈಸೂರಿನಲ್ಲೇ ಇರುತ್ತಿದ್ದರು. ಆ ಕಾಲದಲ್ಲಿ ಮೈಸೂರಿನ ಒಡೆಯರು ದೇಶವಿದೇಶಗಳಿಂದ ವಿದ್ವಾಂಸರುಗಳನ್ನು ಬರಮಾಡಿಕೊಂಡು ಅವರ ಕಲೆಗೆ ವೇದಿಕೆಯನ್ನೊದಗಿಸುತ್ತಿದ್ದರು.”

ನಾದಲೋಕದಲ್ಲಿ ಶ್ರೀಕಂಠನ್ ರವರನ್ನು ಪದಾರ್ಪಣೆ ಮಾಡಿಸಿದ್ದು ಅವರ ತಂದೆಯೇ ಆದರೂ, ಅವರು 1946ರಲ್ಲಿ ದಿವಂಗತರಾದ ಮೇಲೆ, ಹಿರಿಯ ಅಣ್ಣ ವೆಂಕಟರಾಮಾಶಾಸ್ತ್ರಿಗಳೇ ಇವರಿಗೆ ಮಾರ್ಗದರ್ಶಕರಾಗಿ ನಿಂತರು. ಶ್ರೀಕಂಠನ್ ರವರಿಗಿಂತ 14 ವರ್ಷ ಹಿರಿಯರಾದ ವೆಂಕಟರಾಮಾಶಾಸ್ತ್ರಿಗಳು ಅದಾಗಲೇ ಸಾರ್ವಜನಿಕವಾಗಿ ಹೆಸರು ಮಾಡಿದ್ದರು. ಸಂಗೀತಕ್ಷೇತ್ರದ ದಿಗ್ಗಜರಿಗೆಲ್ಲ ಪಕ್ಕವಾದ್ಯ ನುಡಿಸುತ್ತಿದ್ದರು. ಶ್ರೀಕಂಠನ್ ರಿಗೆ ಮಾರ್ಗದರ್ಶನ ಮಾಡುವಂತೆ ಇವರನ್ನು ಇವರ ತಂದೆ ಮೊದಲೇ ನಿಯೋಜಿಸಿದ್ದರು.

ಹೀಗೆ ಶಾಸ್ತ್ರಿಗಳ ಕುಟುಂಬದಲ್ಲಿನ ಸಾರಸ್ವತ ಪರಿಸರವು ಸಂಗೀತದ ಅಭಿರುಚಿ-ಪರಿಜ್ಞಾನಗಳನ್ನೂ ವ್ಯಾಸಂಗದ ಒಲವನ್ನೂ ಮಕ್ಕಳಲ್ಲಿ ಬಲವಾಗಿ ಮೂಡಿಸಿತು. ಆದರೂ ಮಕ್ಕಳಲ್ಲೆಲ್ಲ ಉನ್ನತ ಮಟ್ಟದ ಪರಿಣತಿ ಬೆಳೆಯಲು ಸಾಧ್ಯವಾದದ್ದು ಅವರವರ ಅಭಿರುಚಿ ಹಾಗೂ ಪರಿಶ್ರಮಗಳಿಂದಾಗಿಯೇ ಎನ್ನುವುದೂ ಅಷ್ಟೇ ಸತ್ಯ.

ಶ್ರೀಕಂಠನ್ ರವರು ನೆನೆಯುತ್ತಾರೆ- “ನಮ್ಮ ತಂದೆಯವರು ಬಹುಮುಖ ಪ್ರತಿಭಾವಂತರಾಗಿದ್ದರು. ನಾವೂ ಹಾಗೆಯೇ ಆಗುವಂತೆ ಪ್ರೋತ್ಸಾಹಿಸುತ್ತಿದ್ದರು. ತಮ್ಮ ಭಾವನೆ, ವಿಚಾರಗಳನ್ನೆಲ್ಲ ಥಟ್ಟನೆ ಆಶುಕವಿತೆಯಲ್ಲಿ ಒಕ್ಕಣಿಸಿ ಹೇಳಬಲ್ಲವರಾಗಿದ್ದರು. ಪುರಾಣಗಳ ಯಾವುದೇ ಪ್ರಸಂಗವನ್ನು ಎತ್ತಿಕೊಂಡು ಅದಕ್ಕೆ ಅಲ್ಲೇ ರಾಗಸಂಯೋಜನೆ ಮಾಡಿ, ಹಾಡಿ, ವ್ಯಾಖ್ಯಾನಿಸಬಲ್ಲವರಾಗಿದ್ದರು. ನನ್ನ ಅಜ್ಜ (ತಾಯಿಯತಂದೆ) ಬೆಟ್ಟದಪುರದ ವೀಣಾ ನಾರಾಯಣಸ್ವಾಮಿ (ರೂಢ ನಾಮ: ಬೆಟ್ಟದಪುರದ ವೀಣಾ ನಾರಣಪ್ಪನವರು) ಮೈಸೂರಿನ ವೀಣಾ ಸುಬ್ಬಣ್ಣ ಹಾಗೂ ವೀಣಾ ಶೇಷಣ್ಣನವರ ಆತ್ಮೀಯರಾಗಿದ್ದರು. ಸಂಕೇತಿಗಳಿಗೆ ಸಂಗೀತವಿದ್ಯೆಯು ಒಲಿದೇ ಒಲಿಯುತ್ತದೆ ಎನ್ನುವುದನ್ನು ಇತಿಹಾಸಸಿದ್ಧವಾಗಿ ತರ್ಕಿಸಲಾದೀತೋ ಏನೋ ಗೊತ್ತಿಲ್ಲ, ಆದರೆ ನಮ್ಮ ಮನೆತನದ ಮಟ್ಟಿಗೆ ಹೇಳುವುದಾದರೆ, ನನ್ನ ಆಲೋಚನೆ ಹಾಗೂ ಸಂವೇದನೆಗಳ ಜೊತೆ ಅವಿನಾಭಾವವುಳ್ಳ ಸಂಗೀತವೂ ಅದರ ರಾಗಗಳು, ಕೃತಿಗಳು ನನ್ನ ಜೀವನಶೈಲಿ ಹಾಗೂ ಬೆಳವಣಿಗೆಯ ಅವಿಭಾಜ್ಯಅಂಗವೇ ಆಗಿ ಬಂದುಬಿಟ್ಟಿದೆ”.

ಇನ್ನೂ ಬಾಲಕನಾಗಿದ್ದಗಲೇ ವೀಣಾ ಸುಬ್ಬಣ್ಣ ಹಾಗೂ ಚೌಡಯ್ಯನವರಂತಹ ದಿಗ್ಗಜರಲ್ಲಿ ಪಾಠ ಕಲಿಯುವ ಚಿಕ್ಕಪುಟ್ಟ ಅವಕಾಶಗಳನ್ನು ಶ್ರೀಕಂಠನ್ ರವರು ದಕ್ಕಿಸಿಕೊಳ್ಳುತ್ತಿದ್ದರು. “ಜೀವನದಲ್ಲಿ ಶಿಕ್ಷಣವೂ ಸಂಗೀತವೂ ಜೊತೆಜೊತೆಯಾಗಿಯೇ ಸಾಗಬೇಕು” ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಶಾಲಾಕಾಲೇಜುಗಳ ಕಲಿಕೆಯ ವಿಚಾರದಲ್ಲಿ ನಾವು ಹಿಂದುಳಿಯಬಾರದೆಂಬುದೇ ಅವರ ಆಶಯವಾಗಿತ್ತು” ಎಂದು ನೆನೆಯುತ್ತಾರೆ ಶ್ರೀಕಂಠನ್. ಅವರು ಮುಂದೆ ಮೈಸೂರಿನ ಸದ್ವಿದ್ಯಾಪಾಠಶಾಲೆಯಲ್ಲೂ ಬನುಮಯ್ಯ ಪ್ರೌಢಶಾಲೆಯಲ್ಲೂ ಶಿಕ್ಷಣ ಪಡೆದರು.

“ನನ್ನ ಅಕ್ಕ ಹಾಗೂ ಣ್ಣಂದಿರೇ ನನ್ನ ಮೂಲಶಕ್ತಿ’  

“ನನಗೆ ನನ್ನ ಅಮ್ಮನ ನೆನಪೇ ಇಲ್ಲ. ಮೊದಮೊದಲು ನನ್ನ ಅಕ್ಕ ಅಮ್ಮಯ್ಯಮ್ಮ ನನ್ನನ್ನು ಸಾಕಿ ಬೆಳೆಸಿದರು. ಮುಂದೆ ನನ್ನ ಹಿರಿಯಣ್ಣ ವೆಂಕಟರಾಮಾಶಾಸ್ತ್ರಿಗಳೇ ನನಗೆ ಎಲ್ಲವೂ ಆದರು. ನನಗೂ ನನ್ನ ಅಣ್ಣಂದಿರಾದ ನಾರಾಯಣ ಸ್ವಾಮಿ ಹಾಗೂ ರಾಮನಾಥನ್ ರವರಿಗೂ ಅವರೇ ಅಪ್ಪ, ಅಮ್ಮ, ಅಣ್ಣ, ಮೇಷ್ಟ್ರು ಎಲ್ಲವೂ ಆದರು”ಎಂದು ಶ್ರೀಕಂಠನ್ ರವರು ಪದೇಪದೇ ನೆನೆಯುತ್ತಾರೆ.

1930ರ ಹೊತ್ತಿಗಾಗಲೇ ವೆಂಕಟರಾಮಾಶಾಸ್ತ್ರಿಗಳೇ ಸಂಗೀತವೃಂದಗಳಲ್ಲಿ ಹೆಸರುವಾಸಿಯಾಗಿದ್ದರು. ಮೈಸೂರಿನಲ್ಲಿನ ಸಂಗೀತವೇದಿಕೆಗಳಿಗೆ ಬರುತ್ತಿದ್ದ ಎಲ್ಲ ಹಿರಿಯ ವಿದ್ವಾಂಸರುಗಳ ಸಂಪರ್ಕ ಅವರಿಗಿತ್ತು. ಐತಿಹಾಸಿಕ ಕ್ಷೇತ್ರವಾದ ಮೈಸೂರಿನ ‘ಬಿಡಾರಂ ಕೃಷ್ಣಪ್ಪನವರ ರಾಮಮಂದಿರ’ದ ನೆನಪುಗಳು ಶ್ರೀಕಂಠನ್ ರವರಲ್ಲಿ ಹಸಿರಾಗಿವೆ- “ನಮ್ಮ ಹಿರಿಯಣ್ಣ ನನ್ನನ್ನೂ ನನ್ನ ಸೋದರರನ್ನು ಮುಂದಿನ ಸಾಲಿನಲ್ಲಿ ಕೂರಿಸಿ, ಹಿರಿಯ ವಿದ್ವಾಂಸರ ಸಂಗೀತವನ್ನೆಲ್ಲ ಆಲಿಸುವಂತೆ ಮಾಡುತ್ತಿದ್ದರು. ನಾವೆಲ್ಲ ಚಿಕ್ಕವರು, ಸಾಕಷ್ಟು ಹುರುಪಿನವರು. ಪುಟಾಣಿಗಳಾದ ನಾವು, ಚಡ್ಡಿ ಹಾಕಿಕೊಂಡು ತಲೆಗೆ ಟೋಪಿ ಧರಿಸಿಕೊಂಡು ಮುಂದಿನ ಸಾಲಲ್ಲಿ ಕುಳಿತು, ತಲೆಯಲ್ಲಾಡಿಸುತ್ತ, ಗಟ್ಟಿಯಾಗಿ ತಾಳ ಹಾಕುತ್ತ, ವಿದ್ವಾಂಸರುಗಳ ಸಂಗೀತವನ್ನು ಆಲಿಸುತ್ತಿದ್ದ ದೃಶ್ಯವನ್ನು ನೆನೆದರೆ ನಗು ಬರುತ್ತದೆ!”

“ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ವಿದ್ವಾಂಸರುಗಳು ನಮ್ಮ ಮನೆಯಲ್ಲಿ ಇಳಿದುಕೊಳ್ಳುತ್ತಿದ್ದರು. ಕರ್ನಾಟಕದ ಖಾದ್ಯಗಳನ್ನು ಮೆಲ್ಲುತ್ತ, ನಮಗೆ ಅಲ್ಲಲ್ಲೇ ಸಂಗೀತರಸವನ್ನು ಉಣಿಸುತ್ತಿದ್ದರು. ಮೈಸೂರುಪಾಕು, ಮೈಸೂರು ಬೆಣ್ಣೆದೋಸೆ, ಸೆಟ್ ದೋಸೆ ಅಥವಾ ಮೈಸೂರಿನ ಫಿಲ್ಟರ್ ಕಾಫಿ ಮುಂತಾದ, ಬಾಯಲ್ಲಿ ನೀರಿಳಿಸುವಂತಹ ಮೈಸೂರಿನ ಬಗೆಬಗೆಯ ಸ್ವಾದಗಳನ್ನು ಅವರೆಲ್ಲ ಆನಂದಿಸುತ್ತಿದ್ದರು. ಬಿಡಾರಂ ಕೃಷ್ಣಪ್ಪ, ಮೈಸೂರು ವಾಸುದೇವಾಚಾರ್ಯರು ಹಾಗೂ ಪಿಟೀಲು ಚೌಡಯ್ಯನವರು ಆತಿಥ್ಯಕ್ಕೆ ಹೆಸರುವಾಸಿಯಾದವರು. ಅತ್ಯುತ್ತಮ ಆತಿಥೇಯರಾಗಿದ್ದ ಮೈಸೂರು ಒಡೆಯರ ಗುಣವೇ ಈ ಎಲ್ಲ ವಿದ್ವಾಂಸರುಗಳಲ್ಲೂ ನೇರವಾಗಿ ಇಳಿದು ಬಂದಿತೆನ್ನಬಹುದು. ನಾಡಹಬ್ಬಗಳಲ್ಲೂ ಅರಮನೆಯ ಕಾರ್ಯಕ್ರಮಗಳಲ್ಲೂ ಸಂಗೀತ ಕಚೇರಿ ನೀಡಲು ನಿಯತವಾಗಿ ಬರುತ್ತಿದ್ದ ವಿದ್ವಾಂಸರುಗಳ ಪೈಕಿ ಅರಿಯ್ಯಾಕುಡಿ ರಾಮಾನುಜ ಐಯ್ಯಂಗಾರ್, ಟೈಗರ್ ವರದಾಚಾರ್, ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್, ಮುಸಿರಿ ಸುಬ್ರಹ್ಮಣ್ಯ ಐಯ್ಯರ್, ಮಹಾರಾಜಪುರಂ ವಿಶ್ವನಾಥ ಐಯ್ಯರ್, ಪಲ್ಲವಿ ಶೇಷಯ್ಯರ್, ಪಾಲಘಾಟ್ ರಾಮಭಾಗವತರ್ ಇರುತ್ತಿದ್ದರು.”

14 ವರ್ಷದ ಬಾಲಕನಾಗಿದ್ದಾಗಲೇ ಅನೌಪಚಾರಿಕ ಸಭೆಗಳಲ್ಲಿ ಶ್ರೀಕಂಠನ್ ರವರು ಹಾಡಲಾರಂಭಿಸಿದ್ದರು. ಬೇಸಿಗೆರಜೆಯಲ್ಲಿ ರುದ್ರಪಟ್ಣಕ್ಕೆ ಹೋಗುತ್ತಿದ್ದರು. ಸಂಗೀತ ತರಗತಿಗಳಲ್ಲಿ ಹೆಚ್ಚುಹೆಚ್ಚು ಆಸಕ್ತಿ ಬೆಳೆಯುತ್ತಿದ್ದಂತೆ, ಜೀವನದಲ್ಲಿ ಮುಂದೆ ಸಂಗೀತವನ್ನೇ ಮುಖ್ಯವಾಗಿ ಹಿಡಿಯುವ ನಿರ್ಧಾರವನ್ನೂ ಮಾಡಿಬಿಟ್ಟರು. ವ್ಯಾಸಂಗ ಮುಂದುವರಿದಂತೆಲ್ಲ, ಅದರಲ್ಲೂ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ವ್ಯಾಸಂಗ ಮಾಡುವಾಗಲಂತೂ, ಎಲ್ಲ ಸಂಗೀತಸ್ಪರ್ಧೆಗಳಲ್ಲೂ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು.  

“ನಾನು ಬಹಳ ಕುತೂಹಲಿಯಾಗಿದ್ದೆ. ಸಂಗೀತಕ್ಷೇತ್ರದಲ್ಲಿ ನನ್ನ ಭವಿಷ್ಯದ ಪಥವನ್ನು ನನ್ನ ಕಲಿಕೆಯ ವಿಧಾನವೇ ದಾರಿದೀಪವಾಗಿ ಪ್ರೇರೇಪಿಸುತ್ತಿತ್ತು. ಮೈಸೂರಿಗೆ ಬಂದುಹೋಗುತ್ತಿದ್ದ ವಿದ್ವಾಂಸರುಗಳ ಸತತ ಒಡನಾಟವು ನನ್ನ ಪಾಲಿಗೆ ಜ್ಞಾನಕೂಟಗಳೇ ಆಗಿದ್ದವು. ನನ್ನ ಕಾಲದ ಎಲ್ಲ ಮಹಾನ್ ಕಲಾವಿದರ ಸಂಗೀತವನ್ನು ಆಲಿಸುವ ಭಾಗ್ಯ ನನ್ನದಾಗಿತ್ತು. ಆ ಕಾಲದ ನಾಗಸ್ವರ ವಿದ್ವಾಂಸರ ಪ್ರತಿಭೆಯನ್ನಂತೂ ಮರೆಯಲಾರೆ. ಈಗಲೂ ನನ್ನ ಕಿವಿಗಳಲ್ಲಿ ಅನುರಣಿಸುತ್ತವೆ. ಇವರುಗಳ ನಾಗಸ್ವರವು ಮೂಡಿಸುತ್ತಿದ್ದ ಶುದ್ಧಸ್ವರಗಳ ಮಾದರಿಯ ಪ್ರೇರಣೆಯಿಂದಲೇ ನಾನು ನನ್ನ ಗಾಯನದಲ್ಲಿ ಕೆಲವಂಶಗಳನ್ನು ರೂಢಿಸಿಕೊಂಡು ಬದಲಾವಣೆಗಳನ್ನು ತಂದದ್ದು. ರಾಜರತ್ನಂ ಪಿಳ್ಳೈ, ಅಂಗಪ್ಪ ಪಿಳ್ಳೈ, ವೀರುಸ್ವಾಮಿ ಪಿಳ್ಳೈ, ತಿರುವೇಂಗಡ ಸುಬ್ರಹ್ಮಣ್ಯ ಪಿಳ್ಳೈ ಅವರುಗಳ ನಾಗಸ್ವರಕ್ಕೆ ತವಿಲ್ ನುಡಿಸುತ್ತಿದ್ದ ಮೀನಾಕ್ಷೀ ಸುಬ್ರಹ್ಮಣ್ಯ ಪಿಳ್ಳೈ, ನಾಚಿಯಾರ್ ಕೋವಿಲ್ ರಾಘವ ಪಿಳ್ಳೈ ಇತ್ಯಾದಿ ವಿದ್ವಾಂಸರುಗಳು ಅವಿಸ್ಮರಣೀಯರು” ಹೀಗೆ ತನ್ನ ಎಳೆಯ ದಿನಗಳ ಸಂಗೀತಾಸ್ವಾದದ ಆನಂದವನ್ನು ಮೆಲುಕು ಹಾಕುತ್ತಾರೆ ಶ್ರೀಕಂಠನ್ ರವರು.

‍ಲೇಖಕರು Admin

April 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: