ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮದುವೆ, ಮೈತ್ರೇಯಿ ಮತ್ತು ಮಾಧುರ್ಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

14

70 ವರ್ಷಗಳ ತಮ್ಮ ಮಧುರ ಬಾಂಧವ್ಯದ ಮತ್ತು 1944ರಲ್ಲಿ ತಾವಿಬ್ಬರೂ ಪರಸ್ಪರರನ್ನು ಸಂಧಿಸಿ ವಿವಾಹಕ್ಕೆ ಒಪ್ಪಿಗೆ ನೀಡಿದ ಮುಗ್ಧ ಕ್ಷಣಗಳ ಕುರಿತು ಆರ.ಕೆ.ಎಸ್. ದಂಪತಿ ಮಾತನಾಡುವುದನ್ನು ಕೇಳುವುದು ತುಂಬ ಆಪ್ಯಾಯಮಾನವೆನಿಸುತ್ತದೆ. ಅಥವಾ ಈ ಮದುವೆಗೆ ಒಪ್ಪಿಗೆ ನೀಡಿದ್ದು, ಅಂದಿನ ಪದ್ಧತಿಯಂತೆ ಅವರ ಎರಡು ಕುಟುಂಬಗಳೋ?

“ನನ್ನ ಸಂಗೀತ ಸುಧೆಗೆ ತಂಬೂರಿ ಹೇಗೆ ಶುದ್ಧವಾದ ಶ್ರುತಿಯನ್ನು ಬೆಂಬಲವಾಗಿ ನೀಡಿತೋ ಹಾಗೆಯೇ ನನ್ನ ಮಧುರವಾದ ಸಂಸಾರಕ್ಕೆ ಹೆಂಡತಿ ಮೈತ್ರೇಯಿ ಇಂಬು ಕೊಟ್ಟಳು” ಎನ್ನುತ್ತಾರೆ ಶ್ರೀಕಂಠನ್. “ನಾನು 24 ವರ್ಷದವನಿದ್ದಾಗ ಮೈಸೂರಿನಲ್ಲಿ ಬಿ. ಎ ಮುಗಿಸಿ ನಾನು ಸಂಗೀತದೊಳಗೆ ಮುಳುಗಿಹೋಗಿದ್ದೆ. ಆಗ ಮನೆಯಲ್ಲಿನ ಹಿರಿಯರು ನಾನು ವಿವಾಹ ಮಾಡಿಕೊಳ್ಳಲೇಬೇಕು ಎಂದು ತೀರ್ಮಾನಿಸಿದರು. ಅದರಂತೆ ನನ್ನ ತಂದೆ ಮತ್ತು ಸೋದರ ಮಾವ ಹೋಗಿ (ಆಗತಾನೆ ಕೌಮಾರ್ಯಕ್ಕೆ ಕಾಲಿರಿಸಿದ್ದ ) ಮೈತ್ರೇಯಿಯನ್ನು ನೋಡಿಕೊಂಡು ಬಂದರು,

ತಂದೆ ಕೃಷ್ಣಶಾಸ್ತ್ರಿಗಳು, “ಹೋಗಿ ಹುಡುಗಿಯನ್ನು ನೋಡಿಕೊಂಡು ಬಾ. ನೀನು ಒಪ್ಪಿಗೆ ಸೂಚಿಸಿದರೆ ನಾವು ಮುಂದುವರೆಯುತ್ತೇವೆ” ಎಂದು ಹೇಳಿದರು. “13ರ ಬಾಲೆ ಮೈತ್ರೇಯಿ ತುಂಬ ಲಕ್ಷಣವಾಗಿದ್ದಳು. ನಾನು ಅವಳನ್ನು ಒಪ್ಪದಿರಲು ಕಾರಣವಾದರೂ ಏನಿತ್ತು?” ಎನ್ನುತ್ತಾರೆ ಶ್ರೀಕಂಠನ್.

ವಧೂ-ವರರು ಒಪ್ಪಿಗೆ ನೀಡಿದ ಕತೆಯ ಬಗ್ಗೆ ಮೈತ್ರೇಯಿಯವರನ್ನು ಕೇಳಿದರೆ, ಅವರು ಮುಸಿಮುಸಿ ನಗುತ್ತ ನೆನಪಿನಾಳಕ್ಕೆ ಇಳಿದು “ವರ ಸುಪ್ರಸಿದ್ಧ ವಿದ್ವಾಂಸರ ಕುಟುಂಬಕ್ಕೆ ಸೇರಿದವನು, ಎಲ್ಲಕ್ಕಿಂತ ಮುಖ್ಯವಾಗಿ ಅವನು ವಿದ್ಯಾವಂತ ಹಾಗೂ ಸುಸಂಸ್ಕøತ ರೀತಿಯಲ್ಲಿ ಬೆಳೆಸಲ್ಪಟ್ಟವನು” ಎಂದು ತಿಳಿದು ನನ್ನ ತಂದೆ ತಾಯಿಗಳು ಸಂತೋಷಪಟ್ಟರು. ಆದರೆ ನನ್ನ ತಾಯಿಗೆ ಮಾತ್ರ ಸ್ವಲ್ಪ ಹಿಂಜರಿಕೆ ಇದ್ದೇ ಇತ್ತು. “ನನ್ನ ಮಗಳು ಬಹಳ ಬೆಳ್ಳಗಿದ್ದಾಳೆ. ಆದರೆ ಹುಡುಗ ಅಷ್ಟು ಬೆಳ್ಳಗಿಲ್ಲ, ಅವರ ಜೋಡಿ ಹೇಗೆ ಕಂಡೀತು?” ಎಂದು. ಆದರೆ ನಮ್ಮ ತಂದೆ ತುಂಬ ದೃಢವಾಗಿದ್ದರು: “ಚರ್ಮದ ಬಣ್ಣ ಮುಖ್ಯ ಅಲ್ಲವೇ ಅಲ್ಲ. ಆತನ ಜಾತಕದಲ್ಲಿ ಅತ್ಯಂತ ಪ್ರಸಿದ್ದ ಸಂಗೀತ ವಿದ್ವಾಂಸನಾಗುತ್ತಾನೆ ಎಂದು ಬರೆದಿದೆ ಮತ್ತು ಅವನು ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂದು ಅವರು ಒತ್ತಿ ಹೇಳಿದರು.

ಮೈತ್ರೇಯಮ್ಮ ಹೇಳುತ್ತಾರೆ, “ನಿಜ, ಆ ಭವಿಷ್ಯವಾಣಿ ಸತ್ಯವಾಗಿ ಪರಿಣಮಿಸಿದೆ” ಎಂದು. ಹುಡುಗಿ ಮೈತ್ರೇಯಿಯ ತಂದೆ ಸುಬ್ರಹ್ಮಣ್ಯ ಹಾರ್ವೆಯವರು ಇಂದೂರಿನ ದೇವಾಸ್‍ನಲ್ಲಿ ರಾಜಾಸ್ಥಾನದ ಅಕೌಂಟೆಂಟ್ ಆಗಿದ್ದವರು ನಂತರ ಮೈಸೂರಿಗೆ ಬಂದರು. ಮೈತ್ರೇಯಮ್ಮ ಗಾಯನವನ್ನು ಮತ್ತು ಹಾರ್ಮೋನಿಯಂ ಅನ್ನು ವಿದ್ವಾನ್ ರಾಮಯ್ಯರ್ ಅವರಿಂದ ಕಲಿತದ್ದು ಅಲ್ಲಿಯೇ.

“ಆ ಕಾಲದಲ್ಲಿ ನಮ್ಮ ತಂದೆ ಅವರು ಸಂಗ್ರಹಿಸಿದ್ದ ಅನೇಕ ಗ್ರಾಮಾಫೋನ್ ರೆಕಾರ್ಡುಗಳಿಂದ ಹಿಂದಿನ ಹಲವಾರು ವಿದ್ವಾಂಸರ ಸಂಗೀತವನ್ನು ಆಲಿಸುತ್ತಿದ್ದರು. ನನ್ನ ವಿವಾಹ ನಿಶ್ಚಯವಾದಾಗ ನಾನು ಸಂಗೀತದ ಮನೆತನಕ್ಕೆ ಕಾಲಿಡುತ್ತಿದ್ದುದರಿಂದ ಅವೆಲ್ಲವನ್ನೂ ತೆಗೆದುಕೊಂಡು ಹೋಗುವಂತೆ ಹೇಳಿದರು. ಅವರು ಅವನ್ನೆಲ್ಲ ತೆಗೆದುಕೊಳ್ಳುವಂತೆ ನನ್ನ ಪತಿಗೂ ಹೇಳಿದರು.”

ಶ್ರೀಕಂಠನ್ ರವರು 1944ನೇ ಇಸವಿಯ ಮೇ 13ರಂದು ಮೈಸೂರಿನಲ್ಲಿ ವಿವಾಹವಾದಾಗ ಸಂಗೀತಪಾಠಗಳಿಂದ ಬರುತ್ತಿದ್ದ ಆದಾಯ ನಿಜಕ್ಕೂ ಅಲ್ಪವಾಗಿತ್ತು. “ಮುಂದಿನ ಕೆಲವು ವರ್ಷಗಳಲ್ಲಿ ರಮಾಕಾಂತ್ ಮತ್ತು ರತ್ನಮಾಲಾ ಜನಿಸಿದರು. ಶ್ರೀಕಂಠನ್ ರವರಿಗೆ ಆಕಾಶವಾಣಿಯಲ್ಲಿ 1947ರಲ್ಲಿ ಕೆಲಸಸಿಕ್ಕು, ಅವರ ಸಂಬಳ ತಿಂಗಳಿಗೆ ರೂ.40/- ಎಂದು ನಿಗದಿಯಾದಾಗಲೇ ನಾವು ಹೆಚ್ಚಿನ ಹಣವನ್ನು ಕಂಢದ್ದು. ಅವರಿಗೆ ಈ ಉದ್ಯೋಗ ದೊರೆತಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ” ಎನ್ನುತ್ತಾರೆ ಮೈತ್ರೇಯಮ್ಮ. “ಅದಿಲ್ಲದಿದ್ದರೂ, ನಮ್ಮದು ನಾಲ್ಕು ಜನ ಅಣ್ಣತಮ್ಮಂದಿರು ತಮ್ಮತಮ್ಮ ಪರಿವಾರಗಳೊಂದಿಗೆ ಒಂದೇ ಸೂರಿನಡಿ ಬದುಕುತ್ತಿದ್ದ ಬಹಳ ದೊಡ್ಡ ಒಟ್ಟು ಕುಟುಂಬವಾದ್ದರಿಂದ ಕೆಲಮಟ್ಟಿಗೆ ನಮ್ಮ ಅಗತ್ಯಗಳು ಪೂರೈಸುತ್ತಿದ್ದವು”.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಕಾಶವಾಣಿ ಕಾರ್ಯಾರಂಭ ಮಾಡಿದ ನಂತರ, 1957ರಲ್ಲಿ ಶ್ರೀಕಂಠನ್ ರವರು ಅಲ್ಲಿಗೆ ನಿಲಯದ ಕಲಾವಿದರಾಗಿ ವರ್ಗಾವಣೆಗೊಂಡರು. ಇಲ್ಲಿನ ಉದ್ಯೋಗ ಅವರನ್ನು ಸಂಗೀತದಲ್ಲಿ ಹೆಚ್ಚುಹೆಚ್ಚಾಗಿ ತೊಡಗಿಸಿದ್ದರಿಂದ ಈ ವರ್ಗಾವಣೆ ಅವರ ಪಾಲಿಗೆ ವರದಾನವಾಯಿತು. ಮೈತ್ರೇಯಮ್ಮ ಹೇಳುತ್ತಾರೆ, “ನಾವು ಶೇಷಾದ್ರಿಪುರದ ಲಿಂಕ್ ರಸ್ತೆಯಲ್ಲಿದ್ದ ಮನೆಗೆ ಅರವತ್ತು ರೂಪಾಯಿಗಳನ್ನು ಬಾಡಿಗೆಯಾಗಿ ಕಟ್ಟಬೇಕಾಗಿತ್ತು. ಇದರ ಜೊತೆಗೆ ಇತರ ಖರ್ಚುಗಳನ್ನೂ ನಿಭಾಯಿಸಬೇಕಾಗಿತ್ತು. ಕಾಲಕ್ರಮದಲ್ಲಿ ನಮ್ಮ ಪರಿವಾರವೇ ದೊಡ್ಡದಾಗಿ ಬೆಳೆಯಿತು. ನಮಗೆ ಐದು ಜನ ಹೆಣ್ಣಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಿದ್ದಾರೆ – ರಮಾಕಾಂತ್, ರತ್ನಮಾಲಾ, ಉಮಾ, ನಳಿನಿ, ವಿಜಯ, ಕುಮಾರ್ ಮತ್ತು ಚಂದ್ರಿಕಾ. ಇಂದು ನಮಗೆ ಮೊಮ್ಮಕ್ಕಳು ಮತ್ತು ಮರಿಮಕ್ಕಳೂ ಇದ್ದಾರೆ”.

ಆದರೆ ಅಷ್ಟು ಕಡಿಮೆ ಆದಾಯದಲ್ಲಿ ಈ ದಂಪತಿ ಹೇಗೆ ಬದುಕಿದರು? ಶ್ರೀಕಂಠನ್ ಹೇಳುತ್ತಾರೆ, “ಆಕಾಶವಾಣಿಯ ನಿಲಯದ ಕಲಾವಿದನ ಉದ್ಯೋಗದಲ್ಲಿ ನನಗೆ ಒಳ್ಳೆಯದಾಯಿತು. ಆಗ ಸುದ್ದಿ ಮತ್ತು ಪ್ರಸಾರ ಸಚಿವೆಯಾಗಿದ್ದ ಇಂದಿರಾಗಾಂಧಿಯವರು ಮಧ್ಯಸ್ಥಿಕೆ ವಹಿಸಿ ಆಕಾಶವಾಣಿಯ ಸಿಬ್ಬಂದಿಯ ಸಂಬಳವನ್ನು ಹೆಚ್ಚಿಸಿದರು. ನಾನು ಕಛೇರಿಗಳನ್ನು ನೀಡಲಾರಂಭಿಸಿದ ಮೇಲೆ ಮತ್ತು ಮನೆಯಲ್ಲಿ ನಿರಂತರ ಸಂಗೀತಪಾಠಗಳನ್ನು ಹೇಳಿಕೊಡಲು ಪ್ರಾರಂಭಿಸಿದ ನಂತರ ಪರಿಸ್ಥಿತಿ ಉತ್ತಮಗೊಂಡಿತು”.

ಸಂಸಾರದ ರಥವನ್ನು ಎಳೆಯುವ ಕೆಲಸ, “ಮಕ್ಕಳ ವಿದ್ಯಾಭ್ಯಾಸದಿಂದ ಅಡಿಗೆ ಮಾಡುವ ಮತ್ತು ಅವಿರತವಾಗಿ ಬರುತ್ತಿದ್ದ ಅತಿಥಿಗಳನ್ನು ಸತ್ಕರಿಸುವವರೆಗಿನ ಹೊಣೆಗಾರಿಕೆ ಸಂಪೂರ್ಣವಾಗಿ ಮೈತ್ರೇಯಿಯದಾಗಿತ್ತು” ಎನ್ನುತ್ತಾರೆ ಶ್ರೀಕಂಠನ್. ಎಳೆಯ ವಯಸ್ಸಿನ ಮೈತ್ರೇಯಿಗೆ ಸಂಸಾರ ಸಾಗಿಸುವ ಕೆಲಸ ಸುಲಭವಾಗಿತ್ತೆ? “ನಿಜ ಹೇಳಬೇಕೆಂದರೆ, ನಮ್ಮ ಅಗತ್ಯಗಳು, ಮೂಲಭೂತ ಆವಶ್ಯಕಗಳಿಗೆ ಮಾತ್ರ ಸೀಮಿತಗೊಂಡು ಅತ್ಯಲ್ಪವಾಗಿದ್ದವು. 1950 ಮತ್ತು 60ರ ದಶಕದಲ್ಲೂ ನನ್ನ ಬಳಿ ಇದ್ದದ್ದು ಎರಡೇ ಸೀರೆಗಳು – ಒಂದನ್ನು ಉಟ್ಟರೆ, ಮತ್ತೊಂದನ್ನು ಒಗೆದು ಒಣಗಲು ಹಾಕಿರುತ್ತಿದ್ದೆ! ನೀವಿದನ್ನು ನಂಬುತ್ತೀರಾ? ಆದರೆ ನಾವು ಸಂತೋಷದಿಂದಿದ್ದೆವು. ಜೀವನ ಯಾವುದೇ ಅಸಮಾಧಾನ-ದೂರುಗಳಿಲ್ಲದೆ ತೃಪ್ತಿಯಿಂದ ಸಾಗುತ್ತಿತ್ತು. ಒಂದು ಲೀಟರ್ ಎಣ್ಣೆಗೆ ನಾನು ಐದು ರೂಪಾಯಿಯನ್ನು ತೆರುತ್ತಿದ್ದೆ. ಆಗ ಒಂದು ತೆಂಗಿನಕಾಯಿಯ ಬೆಲೆ ಇಪ್ಪತ್ತೈದು ಪೈಸೆ (ಆ ಕಾಲದಲ್ಲಿ ನಾಲ್ಕಾಣೆ), ಹನ್ನೆರಡು ಕೆ.ಜಿ.ಅಕ್ಕಿಯ ಬೆಲೆ ಒಂದು ರೂಪಾಯಿ ಮತ್ತು ನಾಲ್ಕು ಕೆ.ಜಿ ಬೆಣ್ಣೆಯ ದರ ಒಂದು ರೂಪಾಯಿ! ನನ್ನ ಪತಿ ಕೆಲಸಕ್ಕೆ ಸೇರಿದಾಗ ಅವರ ತಿಂಗಳ ಸಂಪಾದನೆ 40 ರೂಪಾಯಿಗಳಾಗಿತ್ತು. 1981ರಲ್ಲಿ ಆಕಾಶವಾಣಿಯ ಸಂಗೀತ ನಿರ್ಮಾಪಕರ ಹುದ್ದೆಯಿಂದ ಅವರು ನಿವೃತ್ತಿ ಹೊಂದಿದಾಗ ಮಾಸಿಕ ವೇತನವಾಗಿ ರೂ.2500/- ದೊರೆಯುತ್ತಿತ್ತು”.

ಶ್ರೀಕಂಠನ್ ಹೇಳುತ್ತಾರೆ, “ಪ್ರತಿಯೊಂದು ಬಗೆಯ ತುರ್ತು ಅಗತ್ಯಗಳನ್ನು ಮತ್ತು ಖರ್ಚುವೆಚ್ಚಗಳನ್ನು ನಿರ್ವಹಿಸುವ ವಿಷಯದಲ್ಲಿ ನಮ್ಮ ದೊಡ್ಡ ಸಂಸಾರವನ್ನು ಕಾಪಾಡಿದ್ದು ಮೈತ್ರೇಯಿಯ ಚಾತುರ್ಯ ಮತ್ತು ವಿವೇಕಯುತ ರೀತಿನೀತಿಗಳು. ನನ್ನ ಕಛೇರಿಗಳಿಂದ ದೊರೆಯುತ್ತಿದ್ದ ಅಲ್ಪ ಸಂಭಾವನೆಯಲ್ಲಿ ಅವಳು ನಮ್ಮ ಐದು ಜನ ಹೆಣ್ಣುಮಕ್ಕಳಿಗಾಗಿ ಚಿನ್ನಬೆಳ್ಳಿಯ ವಸ್ತುಗಳನ್ನು ಖರೀದಿಸುತ್ತಿದ್ದಳು. ಅವಳು ಯಾವ ವಿಷಯದಲ್ಲೂ ಉದಾಸೀನಳಾಗಿರಲಿಲ್ಲ, ಮಾತ್ರವಲ್ಲ, ಯುಕ್ತಾಯುಕ್ತ ಪರಿಜ್ಞಾನವುಳ್ಳ ಅವಳು ನನ್ನ ಕಂಠಮತ್ತು ಮಕ್ಕಳ ಆರೋಗ್ಯಗಳೆರಡೂ ಉತ್ತಮಗೊಳ್ಳುವಂತೆ ಜಾಣ್ಮೆಯಿಂದ ಮನೆಮದ್ದುಗಳನ್ನು ಮತ್ತು ಅಡಿಗೆಗಳನ್ನು ಕಂಡುಹಿಡಿಯುತ್ತಿದ್ದಳು” ಎಂದು.

ಶ್ರೀಕಂಠನ್ ತಮ್ಮ ಮಾತನ್ನು ಮುಂದುವರಿಸುತ್ತಾರೆ: “ನಮ್ಮ ಮಕ್ಕಳೆಲ್ಲರನ್ನೂ ಮೈತ್ರೇಯಿ ಪ್ರತಿ ದಿನ ಸಂಗೀತ ಪಾಠಗಳಿಗಾಗಿ ಕೂರಿಸುತ್ತಿದ್ದಳು. ಕೊನೆಗೆ, ರಮಾಕಾಂತ್ ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಪ್ರತಿಭೆಯನ್ನು ತೋರಿದ ಮತ್ತು ರತ್ನಮಾಲಾ ಕೂಡ ತನ್ನ ಗಾಯನದಿಂದ ನಮ್ಮಲ್ಲಿ ಭರವಸೆ ಮೂಡಿಸಿದಳು. ನಮ್ಮೆಲ್ಲ ಮಕ್ಕಳಿಗೂ ಸಂಗೀತದ ಕುರಿತು ಒಳ್ಳೆಯ ಅಭಿರುಚಿ ಇದೆ. ಗೋಕುಲಾಷ್ಟಮಿ, ರಾಮನವಮಿ, ಗಣೇಶಚತುರ್ಥಿ, ನವರಾತ್ರಿ ಮತ್ತು ಸಂಕ್ರಾಂತಿಗಳಂಥ ಹಬ್ಬದ ದಿನಗಳಲ್ಲಿ ನಮ್ಮ ಮನೆಯಲ್ಲಿ ದೇವರಿಗೆ ಮತ್ತು ನಮ್ಮ ಉದರಗಳಿಗೆ ಉತ್ಸವ! ತಕ್ಕಮಟ್ಟಿಗೆ ನಮ್ಮದು ಧಾರ್ಮಿಕ ಮನೋಭಾವವಾದ ಕಾರಣ, ನಾವು ಮಕ್ಕಳಿಗೆ ಪೂಜೆಗಳು, ಶ್ಲೋಕಗಳು ಮತ್ತು ಸಾಂಪ್ರದಾಯಿಕ ಪಾರಿವಾರಿಕ ಸಮ್ಮಿಲನಗಳ ಪರಿಚಯ ಮಾಡಿಸಿದೆವು. ಬಾದಾಮಿಯಿಂದ ತಯಾರಿಸಲ್ಪಟ್ಟ ಸಿಹಿತಿನಿಸುಗಳೇ ಇರಲಿ ಅಥವಾ ನನ್ನ ಮನಸ್ಸನ್ನು ಗೆದ್ದ ಬಿಸಿ ಸಾರೇ ಇರಲಿ, ಮೈತ್ರೇಯಿ ಅದನ್ನು ತನ್ನ ಕೈಯಾರೆ ಬೆಳ್ಳಿ ತಟ್ಟೆಯ ಮೇಲೆ ಬಡಿಸಿದಾಗ, ಅದರ ರುಚಿ ದ್ವಿಗುಣಗೊಳ್ಳುತ್ತದೆ!” ಶ್ರೀಕಂಠನ್ ತಮ್ಮ ಪತ್ನಿಯ ಪ್ರಶಂಸೆಯನ್ನು ಮುಕ್ತಕಂಠದಿಂದ ಮಾಡುತ್ತಾರೆ, “ನೀವೇ ಹೇಳಿ, ಈ ವಯಸ್ಸಿನಲ್ಲಿ ನನ್ನ ಆರೋಗ್ಯ ಮತ್ತು ಶಾರೀರ ನೀವು ನೋಡುತ್ತಿರುವಂತೆ ಇಷ್ಟು ಸುಸ್ಥಿತಿಯಲ್ಲಿದ್ದರೆ, ಅದರ ಶ್ರೇಯಸ್ಸು ಅವಳಿಗೆ ಸಲ್ಲುವುದಿಲ್ಲವೆ? ನಾನು ಅವಳ ಋಣವನ್ನು ಹೇಗೆ ತೀರಿಸುತ್ತೇನೋ ತಿಳಿಯದು”.

ಶ್ರೀಕಂಠನ್ ರವರು ಸ್ವಲ್ಪ ಭಾವುಕರಾದುದನ್ನು ನಾನು ಇದೇ ಮೊದಲ ಬಾರಿಗೆ ನೋಡಿದೆ.

ತಮ್ಮ ಖರ್ಚಿನ ವಿಷಯಕ್ಕೆ ಬಂದಾಗ ಮಾತ್ರ ಶ್ರೀಕಂಠನ್ ಅತ್ಯಂತ ಮಿತವ್ಯಯಿಗಳು. “ಸಂಗೀತವನ್ನು ಹೊರತುಪಡಿಸಿದರೆ ಇನ್ನಾವುದೂ ನನ್ನಲ್ಲಿ ಆಸಕ್ತಿ ಮೂಡಿಸಲಿಲ್ಲ. ಮೈತ್ರೀಯಿಯನ್ನು ಮೈಸೂರು ರೇಷ್ಮೆ ಸೀರೆಯುಟ್ಟು ತನ್ನ ನೀಳವಾದ ಜಡೆಗೆ ಮಲ್ಲಿಗೆ ಮುಡಿದಿರುವುದನ್ನು ನೋಡಲು ನಾನು ಬಯಸಿದಂತೆ, ನಾನು ಜರಿಯ ಶಲ್ಯ ಮತ್ತು ರೇಷ್ಮೆ ಧೋತಿ ಧರಿಸುವುದನ್ನು ಅವಳು ಇಷ್ಟಪಡುತ್ತಾಳೆ. ಮಕ್ಕಳು ಚಿಕ್ಕವರಿದ್ದಾಗ ನನ್ನ ಜೊತೆಯಲ್ಲಿ ಎಲ್ಲಾ ಸಂಗೀತ ಕಛೇರಿಗಳಿಗೂ ಅವಳು ಬರಲಾಗುತ್ತಿರಲ್ಲಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ಆಕೆಯನ್ನು ನಾನು ಕಛೇರಿಗೆ ಕರೆದೊಯ್ಯದೆ ಬಿಡುತ್ತಿರಲಿಲ್ಲ” ಎಂದು ಶ್ರೀಕಂಠನ್ ದಿಟ್ಟತನದಿಂದ ನುಡಿಯುತ್ತಾರೆ. “ನನ್ನನ್ನು ಹಲವು ದಶಕಗಳಿಂದ ನೋಡಿರುವ ನನ್ನ ಅಳಿಯ ಪ್ರಕಾಶ್, ‘ನಿಮಗಿಂತ ಹೆಚ್ಚು ರೋಮ್ಯಾಂಟಿಕ್ ಆದ ದಂಪತಿಗಳನ್ನು ನಾನು ನೋಡಿಯೇ ಇಲ್ಲ! ಸದ್ಯ, ನೀವು ಸೇವೆಯಲ್ಲಿದ್ದಾಗ ದಿನವೂ ಅವರನ್ನು ನಿಮ್ಮೊಡನೆ ಆಕಾಶವಾಣಿ ಕಛೇರಿಗೆ ಕರೆದೊಯ್ಯಲಿಲ್ಲವಲ್ಲ” ಎಂದು ನಗೆ ಚಾಟಾಕಿ ಹಾರಿಸುತ್ತಿದ್ದರು”.

ಸಂಗೀತದ ವಿಷಯಕ್ಕೆ ಬಂದಾಗ, ಮೈತ್ರೇಯಿ ಶ್ರೀಕಂಠನ್ ರವರ ಸಂಗೀತದ ವಿಮರ್ಶಕರು ಕೂಡ. “ತಿಲ್ಲಾನವಿಲ್ಲದೆ ಕಛೇರಿಯನ್ನೇಕೆ ಮುಗಿಸಿದಿರಿ? ಕಛೇರಿ ಹಠಾತ್ತಾಗಿ ಮುಕ್ತಾಯಗೊಂಡಂತೆ ಕಂಡಿತು” ಎಂದೋ ಅಥವಾ “ಇಂದಿನ ಕಛೇರಿಯಲ್ಲಿ ರಾಗಗಳೇನೋ ಚೆನ್ನಾಗಿ ಮೂಡಿಬಂದವು. ಆದರೆ ಸ್ವರಪ್ರಸ್ತಾರ ಎಂದಿನ ಗುಣಮಟ್ಟದ್ದಾಗಿರಲಿಲ್ಲ, ಏಕೆ?” ಎಂದೋ ಮೈತ್ರೇಯಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.“ಅವಳ ಪ್ರಶ್ನೆಗಳು ಪ್ರತಿ ಕಛೇರಿಯ ನಂತರ ನಡೆಯುವ ಪುನರವಲೋಕನದ ಭಾಗ” ಎನ್ನುತ್ತಾರೆ ಶ್ರೀಕಂಠನ್. ಆದರೆ ಮೈತ್ರೇಯಮ್ಮನವರಿಗೆ ಬಹಳ ಇಷ್ಟವಾದ ಕೃತಿಗಳು ಯಾವುವು? ಶ್ರೀಕಂಠನ್ ತಿಳಿಸುವಂತೆ “ಆಕೆ ತಾರುಣ್ಯದಲ್ಲಿ ಕಲಿತುಕೊಂಡಿದ್ದ ಅಭೇರಿಯ ನಗುಮೋಮು, ಆಂದೋಳಿಕಾ ರಾಗದ ರಾಗಸುಧಾ ರಸ ಇವು ಮೈತ್ರೇಯಿಗೆ ಪ್ರಿಯವಾದ ಕೆಲವು ಕೃತಿಗಳು”.

ತಮ್ಮ ಮಕ್ಕಳಲ್ಲಿ ಇಬ್ಬರು ಸಂಗೀತವನ್ನು ಗಂಭೀರವಾಗಿ ಸ್ವೀಕರಿಸಿ ಪ್ರಗತಿ ಸಾಧಿಸಿರುವ ಕುರಿತು ಮೈತ್ರೇಯಮ್ಮನವರಿಗೆ ಸಂತಸ ಇದೆಯೆ? “ರಮಾಕಂತ್ ಮತ್ತು ರತ್ನಮಾಲಾ ಸಂಗೀತದಲ್ಲಿ ಹಿರಿಯ ಸಾಧನೆ ಮಾಡಿರುವುದರ ಬಗ್ಗೆ ನನಗೆ ಸಂತೃಪ್ತಿ ಇದೆ. ಕುಮಾರನ ಮಗ ಅಚಿಂತ್ಯ ನಮ್ಮ ಕುಟುಂಬದ ಗಾಯಕ ವರ್ಗಕ್ಕೆ ಸೇರುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿರುವುದರ ಕುರಿತೂ ನಮಗೆ ಅತ್ಯಂತ ಸಂತೋಷವಿದೆ”.

“ಜೊತೆಗೆ, ಕುಮಾರನ ಮಗಳು ಜಯಶ್ರೀ ಓರ್ವ ಉತ್ತಮ ಪಿಟೀಲುವಾದಕಿಯಾಗಿ ರೂಪುಗೊಳ್ಳುತ್ತಿದ್ದಾಳೆ. ನಮ್ಮ ಪರಿವಾರದವರು ತಮ್ಮತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಸಂಗೀತದೊಂದಿಗೆ ಶ್ರುತಿಗೂಡಿರುವಂತೆ ಮಾಡಲು ನನ್ನಿಂದ ಸಾಧ್ಯವಾದದ್ದು ಹೆಚ್ಚೆಂದರೆ ಇಷ್ಟು.ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಸಹಾಯಕಳಾಗಿದ್ದೆನಾದರೆ, ಅದೇ ನನ್ನ ಜೀವನದ ಅತಿ ದೊಡ್ಡ ಸಮಾಧಾನ” ಎನ್ನುತ್ತಾರೆ ಮೈತ್ರೇಯಮ್ಮ.

ಉತ್ತಮ ಆತಿಥೇಯರ ಕುಟುಂಬ ಮತ್ತು ಕೆಲವು ಸವಿ ನೆನಪುಗಳು……………
ಶ್ರೀಕಂಠನ್ ರವರ ಪುತ್ರಿಯರಾದ ರತ್ನಮಾಲಾ, ಉಮಾ, ನಳಿನಿ, ವಿಜಯಾ ಮತ್ತು ಚಂದ್ರಿಕಾರವರೇ ಆಗಲಿ, ಅಥವಾ ಸೊಸೆ ಮಂಜುಳಾ ಕುಮಾರ್ ಅವರೇ ಆಗಲಿ, ಎಲ್ಲರೂ ಸಂಕೇತಿಗಳ ಪದ್ಧತಿಯಂತೆ ಅತ್ಯುತ್ತಮ ಆತಿಥೇಯರು! ನಾನು ಸಂದರ್ಶನಕ್ಕಾಗಿ ಎಷ್ಟು ಬಾರಿ ಭೇಟಿ ನೀಡಿದರೂ ಅವರೆಲ್ಲರ ನಗೆಮೊಗದ ಸ್ವಾಗತ ನನ್ನನ್ನು ಕಾದಿರುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಬಿಸಿಬಿಸಿ ಕಾಫಿ ಅಥವಾ ಸಂಕೇತಿಗಳ ವಿಶೇಷ ತಿಂಡಿಯಾದ ಶಾವಿಗೆಭಾತ್‍ನ ಹಲವು ಸುತ್ತುಗಳ ಸಮಾರಾಧನೆ, ಕೆಲವು ಸಾರಿ ಅತ್ಯಂತ ರುಚಿಕರವಾದ ಬಾದಾಮಿ ಪಾಯಸ ಅಥವಾ ಹಲ್ವಾದ ಆತಿಥ್ಯದ ಸವಿ ಇಂದಿಗೂ ನನ್ನ ಮನದಲ್ಲಿ ಹೊಸತಾಗಿದೆ. ಆಗಾಗ ಮೈತ್ರೇಯಮ್ಮನವರು “ಇವತ್ತು ನೀವು ನಮ್ಮ ಜೊತೆ ತಿಳಿಸಾರನ್ನ ಊಟಮಾಡದೆ ಹೊರಡುವಂತಿಲ್ಲ” ಎಂದು ಆಗ್ರಹಪಡಿಸುತ್ತಿದ್ದರು. ಮೇ, ಜೂನ್ ತಿಂಗಳು ಬಂದರೆ, ಹಲವು ಸಾರಿ ಮಾವಿನಹಣ್ಣಿನ ಶೀಕರಣೆಯನ್ನು ಬಡಿಸದೆ ಇರುತ್ತಿರಲಿಲ್ಲ.

ರಮಾಕಾಂತ್ ಮತ್ತು ಕುಮಾರ್ ತಮ್ಮ ‘ಅಣ್ಣ’ನಿಗೆ ಬಾದಾಮಿ ಮತ್ತು ಕೇಸರಿಗಳ ಕುರಿತು ಇರುವ ಮೋಹದ ಬಗ್ಗೆ ವಿವರಿಸುತ್ತಾರೆ: “1985-86ರಲ್ಲಿ ಪಿಟ್ಸ್‍ಬರ್ಗ್‍ನ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೇಸಿಗೆಯಲ್ಲಿ ಸಂಗೀತ ತರಗತಿಗಳನ್ನು ನಡೆಸಿಕೊಡಲು ‘ಅಣ್ಣ’ನನ್ನು ಆಹ್ವಾನಿಸಲಾಗಿತ್ತು. ಆಗಅಲ್ಲಿನ ಅರ್ಚಕರಾಗಿದ್ದ ಶ್ರೀ.ವೆಂಕಾಚಾರ್ ಅವರು ನಮ್ಮ ತಂದೆಯವರನ್ನು ‘ಬಾದಾಮಿ-ಕೇಸರಿ ಪ್ರಿಯ’ ಎಂದು ಹಾಸ್ಯವಾಗಿ ಕರೆಯುತ್ತಿದ್ದರು. ಇಲ್ಲಿ ಒಮ್ಮೆ ಅವರು ದೀರ್ಘಕಾಲದ ಕಾಯಿಲೆಯಿಂದ ಚೇತರಿಸಿಕೊಂಡ ಸಂದರ್ಭದಲ್ಲಿ ಒಬ್ಬ ವೈದ್ಯರು ಬೆಂಗಳೂರಿನ ಹವೆ ಆಗಾಗ ತಂದೊಡ್ಡುವ ಉಪದ್ರವಗಳನ್ನು ನಿವಾರಿಸಿ ಅವರ ಝೇಂಕರಿಸುವ ಕಂಠವನ್ನು ಮತ್ತು ಶ್ರುತಿಶುದ್ಧಿಯನ್ನು ಮರಳಿಸುವಲ್ಲಿ ಬಾದಾಮಿ ಬಹಳ ಸಹಾಯ ಮಾಡುತ್ತದೆ ಎಂದು ಹೇಳಿದ್ದರು” ಎಂದು.

ಅಭ್ಯಾಸದ ಅವಧಿ………
1970 ಮತ್ತು 1080ರ ದಶಕಗಳಲ್ಲೂ ಶ್ರೀಕಂಠನ್ ರವರು ಸಂಗೀತಾಭ್ಯಾಸಕ್ಕಾಗಿ ಹೇಗೆ ತಮ್ಮನ್ನು ತಾವು ಐದಾರು ಗಂಟೆಗಳ ಕಾಲ ಕೋಣೆಯೊಳಗೆ ಕೂಡಿಹಾಕಿಕೊಳ್ಳುತ್ತಿದ್ದರು, ಹೇಗೆ ಕೆಲವೊಮ್ಮೆ ಅವರ ಶಿಷ್ಯರೂ ಗಾಯಕರೂ ಆದ ಹೆಚ್.ಕೆ.ನಾರಾಯಣ ಕೂಡ ಅವರೊಂದಿಗೆ ಸೇರಿಕೊಳ್ಳುತ್ತಿದ್ದರು ಎನ್ನುವುದನ್ನು ಮನೆಯವರು ಈಗಲೂ ನೆನಪಿಸಿಕೊಳ್ಳುತ್ತಾರೆ. “ನಾವು ಹಾಲ್‍ನಲ್ಲಿ ಕುಳಿತು ಈ ಅಸಾಧ್ಯ ಸಾಧನೆಯನ್ನು ಆಲಿಸುತ್ತಿದ್ದೆವು. ಅವರ ಅಕಾರ ಸಾಧನೆ ಚಿಕ್ಕವರನ್ನೂ ನಾಚಿಸುವಂತಿರುತ್ತಿತ್ತು” ಎಂದು ಕುಮಾರ್ ಜ್ಞಾಪಿಸಿಕೊಳ್ಳುತ್ತಾರೆ.

“ಈ ಆರು ದಶಕಗಳಲ್ಲಿ ನಾನು ನನ್ನ ತಂದೆಯವರನ್ನು ಕಂಡಂತೆ, ಅವರು ತಮ್ಮ ಅಭ್ಯಾಸಗಳಲ್ಲಿ ಇಂದಿಗೂ ಕಿಂಚಿತ್ತೂ ಬದಲಾಗಿಲ್ಲ. ಅವರ ನಿಷ್ಠೆ ಮತ್ತು ಕಾರ್ಯಶ್ರದ್ಧೆಗಳು ಅನುಸರಣಯೋಗ್ಯವಾದವು. ಅವರು ‘ಸಾಧಕ’ ಎನ್ನುವ ಶಬ್ದಕ್ಕೆ ಸಮಾನಾರ್ಥಕರಾಗಿರುವವರು ಎನ್ನುವದಕ್ಕೆ ನಾನೇ ಸಾಕ್ಷಿ” ಎನ್ನುವುದು ರಮಾಕಾಂತ್ ರವರ ನುಡಿ.

ಚಿಕ್ಕ ವಯಸ್ಸಿನಿಂದಲೂ ಅಸಂಖ್ಯ ಕೃತಿಗಳನ್ನು ಸಂಗ್ರಹಿಸುವ ವಿಷಯದಲ್ಲಿ ಶ್ರೀಕಂಠನ್ ರವರಿಗೆ ಅತೀವ ಒಲವು ಎನ್ನಲಾಗುತ್ತದೆ. “ಹೊಸದೊಂದು ಕೃತಿ ಅವರ ಕೈಸೇರಿದೊಡನೆ ಅವರು ಅದನ್ನು ಅಧ್ಯಯನ ಮಾಡಿ ಕಲಿತುಕೊಳ್ಳಲು ಹೊರಡುತ್ತಾರೆ. ಇಲ್ಲದಿದ್ದರೆ ಆ ದಿನ ಅವರ ಪಾಲಿಗೆ ಆಹಾರ ಮತ್ತು ನಿದ್ರೆಗಳೂ ಇಲ್ಲವಾಗುತ್ತವೆ” ಎನ್ನುತ್ತಾರೆ ರಮಾಕಾಂತ್.

ಮೈತ್ರೇಯಮ್ಮ, “ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಐಯ್ಯಂಗಾರರು ನನ್ನ ಪತಿಗೆ ಒಮ್ಮೆ ‘ನನ್ನ ಹೆಣ್ಣುಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಯುವುದರಲ್ಲಿ ಆಸಕ್ತಿ ಇದೆ. ನಾನು ನಿಮ್ಮೊಬ್ಬರನ್ನೇ ‘ಅತ್ಯುತ್ತಮ ಶಿಕ್ಷಕರು’ ಎಂದು ಪರಿಗಣಿಸಿರುವುದು’ ಎಂದು ಹೇಳಿದ್ದು ನಮಗೆ ಬಹಳ ಹೆಮ್ಮೆ ಎನಿಸಿತು” ಎಂದು ಹೇಳಿದರು. ಮಾಸ್ತಿಯವರ ಪುತ್ರಿಯರು ಶ್ರೀಕಂಠನ್ ರವರ ಬಳಿ ಕೆಲವು ವರ್ಷಗಳ ಕಾಲ ಸಂಗೀತ ಶಿಕ್ಷಣ ಪಡೆದರು.

2011ರಲ್ಲಿ ಶ್ರೀಕಂಠನ್ ಮತ್ತು ಪಿಟೀಲು ವಿದ್ವಾಂಸ ಎಂ.ಎಸ್.ಗೋಪಾಲಕೃಷ್ಣನ್ ಇವರಿಬ್ಬರಿಗೂ ಪದ್ಮಭೂಷಣ ಪ್ರಶಸ್ತಿ ಲಭಿಸಿತು. ಆ ಸಂದರ್ಭದಲ್ಲಿ ಮೃದಂಗ ವಿದ್ವಾಂಸರೂ ಗಾಯಕರೂ ಆದ ಟಿ.ವಿ.ಗೋಪಾಲಕೃಷ್ಣನ್ ರವರು ಮಾಧ್ಯಮಗಳಲ್ಲಿ ಬರೆದರು, “ಈ ವರಿಷ್ಠ ವಿದ್ವಾಂಸರು ಕಛೇರಿ ನೀಡುವುದನ್ನು ನೋಡಿದ ಮೇಲೆ ‘ಸಂಗೀತಕ್ಕೆ ವಯಸ್ಸಿನ ನಿರ್ಬಂಧವಿಲ್ಲ’ ಎನ್ನುವ ಮಾತು ಅರ್ಥವಾಗುತ್ತದೆ’ “ ಎಂದು.

ಕುಮಾರ್ ಹೇಳುತ್ತಾರೆ, “2012ರಲ್ಲಿ ಮೈಸೂರಿನ ಸುತ್ತೂರು ಮಠ, ಅಲ್ಲಿನ ಇನ್ನಿತರ ಸಭೆಗಳ ಸಹಭಾಗಿತ್ವದಲ್ಲಿ ನಮ್ಮ ತಂದೆಯವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತುದಕ್ಕಾಗಿ ಅವರಿಗೆ ಸನ್ಮಾನ ಮಾಡಿದರು. ನಮ್ಮ ತಂದೆಯವರ ಕಛೇರಿಯ ನಂತರ ಮಠದ ದೇಶಿಕೇಂದ್ರ ಸ್ವಾಮೀಜಿಯವರು ಮಾತನಾಡಿ, ತಮ್ಮ ಮಠದ ಹಿರಿಯರು ಶ್ರೀಕಂಠನ್ ರವರ ಕುರಿತು ಆಗಾಗ ಹೇಳುತ್ತಿದ್ದ ವಿಷಯಗಳನ್ನು ಸ್ಮರಿಸಿಕೊಂಡರು”.

“ 1930ರ ದಶಕದ ಉತ್ತರಾರ್ಧದಲ್ಲಿ ಮತ್ತು 1940ರ ಆದಿಭಾಗದಲ್ಲಿ ಬಿಡಾರಾಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ಅತ್ಯುತ್ತಮ ಕಛೇರಿಗಳನ್ನು ಏರ್ಪಡಿಸುತ್ತಿದ್ದರು. ಕಛೇರಿಯ ಸಮಯದಲ್ಲಿ ರಸಿಕರಿಗೆ ಸೀಟುಗಳನ್ನು ಹಂಚುವ ವಿಷಯದಲ್ಲಿ ಮಂದಿರ ಬಹಳ ಕಟ್ಟುನಿಟ್ಟಾಗಿದ್ದ ಕಾರಣ, ಯುವಕ ಶ್ರೀಕಂಠನ್ ವಿನೂತನ ಉಪಾಯಗಳನ್ನು ಹೂಡಿ, ಬಹುತೇಕ ಕಛೇರಿಗಳನ್ನು ಆಲಿಸಿ ಆಸ್ವಾದಿಸುತ್ತಿದ್ದರು. ಪಕ್ಕದಲ್ಲೇ ಇದ್ದ ದೇವಾಲಯದ ಅರ್ಚಕರೊಡನೆ ಸ್ನೇಹ ಬೆಳೆಸಿ, ಅವರ ಪೂಜೆಯ ಸಿದ್ಧತೆಗಳಲ್ಲಿ ತಾನು ಸಹಾಯ ಮಾಡುವುದಾಗಿ ಹೇಳಿ, ಕಛೇರಿ ಪ್ರಾರಂಭವಾಗಲು ಹಲವು ಗಂಟೆಗಳ ಮೊದಲೇ ಅಲ್ಲಿ ಕುಳಿತುಬಿಡುತ್ತಿದ್ದರು. ಹೀಗೆ ಅವರು ಮೊದಲ ಸಾಲಿನಲ್ಲಿ ಕುಳಿತು ಇಡೀ ಕಛೇರಿಯನ್ನು ಕೇಳುವ ಅವಕಾಶವನ್ನು ತಪ್ಪದೆ ಕಲ್ಪಿಸಿಕೊಳ್ಳುತ್ತಿದ್ದರು!” ಎಂದು.

ಸಂಗೀತ ಕಛೇರಿಗಳನ್ನು ಏರ್ಪಡಿಸಲು ಸದಾ ಹಣದ ಕೊರತೆಯಿಂದ ಕಷ್ಟಪಡುತ್ತಿದ್ದ ಸಣ್ಣಪುಟ್ಟ ಸಭೆಗಳಿಗಾಗಿ ಹಣ ಸಂಗ್ರಹಣೆ ಮಾಡಲು ಶ್ರೀಕಂಠನ್ ಪರಮ ಉತ್ಸಾಹದಿಂದ ಹೊರಡುತ್ತಿದ್ದುದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ. ಶ್ರೀಕಂಠನ್ ರವರ ಮಾತುಗಳಲ್ಲೇ ಹೇಳುವುದಾದರೆ, “ನನ್ನ ಅಳಿಲು ಸೇವೆ ಸಲ್ಲಿಸಲು 1940ರ ದಶಕದಲ್ಲಿ ರಾಮದೇವರ ಫೋಟೋ ಒಂದನ್ನು ಹಿಡಿದುಕೊಂಡು, ಮೈಸೂರಿನ ಚಿಕ್ಕ ಬೀದಿಗಳಲ್ಲಿ ಅಲ್ಲಲ್ಲಿ ಕೆಲವು ಸಾಲುಗಳನ್ನು ಹಾಡುತ್ತಿದ್ದೆ. ಅಲ್ಲಿ ಸಂಗ್ರಹವಾದ ಹಣವನ್ನು ರಾಮೋತ್ಸವದ ಸಂದರ್ಭದಲ್ಲಿ ಕಛೇರಿಗಳನ್ನು ಏರ್ಪಡಿಸಲು ಅಷ್ಟು ಪ್ರಸಿದ್ಧವಲ್ಲದ ಸಭೆಗಳಿಗೆ ನೀಡುತ್ತಿದ್ದೆ!”.

2012ರ ಚೆನ್ನೈನಲ್ಲಿ ನಡೆಯುತ್ತಿದ್ದ ಚಾತುರ್ಮಾಸ್ಯ ನವರಾತ್ರಿ ಉತ್ಸವದಲ್ಲಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿಯವರು ಶ್ರೀಕಂಠನ್ ರವರ ಸಂಗೀತ ಕಛೇರಿಯುದ್ದಕ್ಕೂ ಉಪವಿಷ್ಟರಾಗಿದ್ದು, ನಂತರ ಅವರನ್ನು ಕೇಳಿದರು: “ನಿಮ್ಮ ವಯಸ್ಸೆಷ್ಟು?” ಎಂದು. ಶ್ರೀಕಂಠನ್ ತಮ್ಮ ವಯಸ್ಸು 93 ವರ್ಷಗಳು ಎಂದು ಉತ್ತರಿಸಿದಾಗ, ಸ್ವಾಮೀಜಿಯವರು ಹೀಗೆ ನುಡಿದರು: “ಈ ವಯಸ್ಸಿನಲ್ಲಿ ನೀವು ಸಂಗೀತದ ಕುರಿತು ಇಂತಹ ದೃಢನಿಷ್ಠೆ ಹೊಂದಿರುವುದನ್ನು ಕಂಡು ಆನಂದವಾಗುತ್ತದೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ನೀವು ನಿಜಕ್ಕೂ ಸಂಗೀತ ಪಿತಾಮಹರು!” ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: