ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಸ್ವಶಿಕ್ಷಿತನ ಪ್ರಗತಿ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

11


ಭಾರತದ ಸಾಂಪ್ರದಾಯಿಕ ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಭ್ರಮಣಪಥದಲ್ಲಿ ಮಕರರಾಶಿಯನ್ನು ಪ್ರವೇಶಿಸುತ್ತಾನೆ. ಇದು ದಕ್ಷಿಣಭಾರತದಲ್ಲಿ ಸುಗ್ಗಿಹಬ್ಬವನ್ನು ಮತ್ತು ಈಶಾನ್ಯದಿಂದ ಬರುವ ಮುಂಗಾರು ಮಳೆಯ ನಿಲುಗಡೆಯನ್ನು ದ್ಯೋತಿಸುತ್ತದೆ. ಸಂಸ್ಕøತದಲ್ಲಿ ‘ಮಕರ’ ಶಬ್ದಕ್ಕೆ ಮೊಸಳೆ ಮತ್ತು ‘ಸಂಕ್ರಮಣ’ ಶಬ್ದಕ್ಕೆ ಪರಿವರ್ತನೆ ಎಂಬ ಅರ್ಥವಿದೆ. ಭಾರತದ ಮುಖ್ಯ ಪರ್ವವಾದ ಮತ್ತು ಜನವರಿ ತಿಂಗಳ ಮಧ್ಯಭಾಗದಲ್ಲಿ ಬರುವ ಸಂಕ್ರಾಂತಿ ಹಬ್ಬದಂದು ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಬೇರೆಬೇರೆ ಹೆಸರುಗಳಿಂದ ಆಚರಿಸಲ್ಪಡುತ್ತದೆ.

ಈ ಕಾಲಘಟ್ಟದಿಂದ ಚಳಿಯ ಕೊರೆತ ಇಳಿಮುಖಗೊಂಡು, ದಿನಗಳು ಹೆಚ್ಚು ದೀರ್ಘವಾಗಿಯೂ ಶಾಖಪೂರ್ಣವಾಗಿಯೂ ಮಾರ್ಪಡುತ್ತವೆ. ಜ್ಯೋತಿಷ್ಯ ಮತ್ತು ಪೌರಾಣಿಕ ಉಲ್ಲೇಖಗಳಲ್ಲಿ ಈ ಹಬ್ಬದ ಸಾಂಸ್ಕೃತಿಕ ಮಹತ್ವ ವರ್ಣನೆ ಕಂಡುಬರುತ್ತದೆ.
ಹಿಂದೂ ಶಾಸ್ತ್ರಗಳ ರೀತ್ಯಾ ಶ್ರೀಕೃಷ್ಣನ ವಾಣಿ ಎಂದು ಪರಿಗಣಿಸಲ್ಪಟ್ಟ ಭಗವದ್ಗೀತೆಯಲ್ಲಿ ಉತ್ತರಾಯಣದ ಆರು ತಿಂಗಳು ವರ್ಷದ ಉಜ್ವಲ ಪ್ರಭಾತವೆಂದೂ ದಕ್ಷಿಣಾಯನ ನಿಶೆ ಎಂದೂ ನಿರೂಪಿಸಲ್ಪಟ್ಟಿದೆ. ಮಹಾಭಾರತದಲ್ಲಿ ದಕ್ಷಿಣಾಯಣ ಕಾಲದಲ್ಲಿ ಶರಶಯ್ಯೆಯಲ್ಲಿದ್ದ ಭೀಷ್ಮಪಿತಾಮಹ ತನ್ನ ಜೀವನವನ್ನು ಅಂತ್ಯಗೊಳಿಸಲು ಮಕರಸಂಕ್ರಾಂತಿಯಂದು ಸೂರ್ಯ ಉತ್ತರಾಯಣ ಪುಣ್ಯಕಾಲವನ್ನು ಪ್ರವೇಶಿಸುವುದಕ್ಕಾಗಿ ಕಾದಿದ್ದ ಎಂದು ತಿಳಿದುಬರುತ್ತದೆ.

ಮಕರ ರಾಶಿಯ ಅಧಿಪತಿಯೂ ತನ್ನ ಪುತ್ರನೂ ಆದ ಶನಿಯ ಮನೆಯನ್ನು ಸೂರ್ಯ ಸಂಕ್ರಾಂತಿಯಂದು ಪ್ರವೇಶಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಈ ದಿನ, ತಂದೆ ಮತ್ತು ಪುತ್ರನ ನಡುವಿನ ಉತ್ತಮ ಬಾಂಧವ್ಯದ ಪ್ರತೀಕವಾಗಿದ್ದು, ಪುತ್ರ ಮನೆತನದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ ಎಂದು ವೇದಪಂಡಿತರು ವಿವರಿಸುತ್ತಾರೆ.
ಈ ದಿನ ಮಹಾವಿಷ್ಣು ಮಂದರ ಪರ್ವತದಲ್ಲಿ ಅಸುರರ ಹಿಂಸೆಯನ್ನು ಕೊನೆಗಾಣಿಸಿದನೆಂದೂ ಹೇಳಲಾಗುತ್ತದೆ. ಆದ್ದರಿಂದ ಈ ಸಂದರ್ಭ ಎಲ್ಲ ನಕಾರಾತ್ಮಕ ಅಂಶಗಳ ಅಂತ್ಯವನ್ನೂ, ಪುಣ್ಯಕರವಾದ ಜೀವನದ ಶುಭಾರಂಭವನ್ನೂ ಸೂಚಿಸುತ್ತದೆ.

ಮಹತ್ವ
ವಾಗ್ಗೇಯಕಾರರೂ, ವಿದ್ವಾಂಸರೂ, ರುದ್ರಪಟ್ಣಕ್ಕೆ ಸೇರಿದವರೂ ಆದ ದಿವಂಗತ ಆರ್.ಎನ್.ದೊರೆಸ್ವಾಮಿಯವರು ಶ್ರೀಕಂಠನ್ ರವರ ಸಹವರ್ತಿಗಳು. ಶ್ರೀಕಂಠನ್ ಅವರ 75ನೇ ಜಯಂತಿಯ ಸಂದರ್ಭದಲ್ಲಿ ಹೊರತರಲಾದ ‘ಶ್ರೀಕಂಠ’ ಶಿರೋನಾಮೆಯ ಸ್ಮರಣ ಸಂಚಿಕೆಯಲ್ಲಿ ದೊರೆಸ್ವಾಮಿಯವರು ಬರೆದ ಲೇಖನದಲ್ಲಿ, ಶ್ರೀಕಂಠನ್ ಸಂಕ್ರಾಂತಿಯ ಪರ್ವದಿನದಂದು ಜನ್ಮ ತಳೆದದ್ದು ಮಹತ್ವಪೂರ್ಣವೆನಿಸುವುದು, ಅವರಿಂದ ಹೊರಹೊಮ್ಮುವ ಪ್ರಖರ ತೇಜಸ್ಸು ಮತ್ತು ಕಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುವಷ್ಟು ಶಕ್ತಿಯುತವಾಗಿರುವುದರಿಂದ ಎಂದಿದ್ದಾರೆ.

ಈ ಮಾತನ್ನು ಶ್ರೀಕಂಠನ್ ರವರ ಬಳಿ ಉಲ್ಲೇಖಿಸಿದರೆ, ಅವರ ವಿನೀತ ಪ್ರತಿಕ್ರಿಯೆ ಇಷ್ಟೆ- “ದೈವೇಚ್ಛೆ” ಎಂದು.
ನುರಿತ ಪಿಟೀಲುವಾದಕರೂ ಆಕಾಶವಾಣಿ ಕಲಾವಿದರೂ ಆದ ಟಿ.ಎಸ್.ತಾತಾಚಾರ್ ತಮ್ಮ ಹಲವು ಬರಹಗಳಲ್ಲಿ ಶ್ರೀಕಂಠನ್ ರವರಂತೆ ದೈನಂದಿನ ಅಭ್ಯಾಸಕ್ಕೆ ಪ್ರಾಮುಖ್ಯತೆ ನೀಡುವ ಕಲಾವಿದರು ದುರ್ಲಭ ಎಂದಿದ್ದಾರೆ-“ಆಕಾಶವಾಣಿಯಲ್ಲಿ ತಮ್ಮ ಪ್ರಾರಂಭದ ವರ್ಷಗಳಲ್ಲಿ ಶ್ರೀಕಂಠನ್ ಸಂಗೀತ ಪ್ರಸ್ತುತಿಯ ಸೂಕ್ಷ್ಮಗಳನ್ನು ಮಸಿ ಹೀರುವ ಕಾಗದದಂತೆ ಸಮಗ್ರವಾಗಿ ಗ್ರಹಿಸಿದರು.

ಕೃತಿಗಳಿಗೆ ರಾಗಸಂಯೋಜನೆ ಮಾಡುವ ಕಲೆಯ ಪರಿಚಯವೂ ಅವರಿಗೆ ಶೀಘ್ರವಾಗಿಯೇ ಲಭಿಸಿತು. ಅವರು ನಾರಾಯಣ ತೀರ್ಥರ ‘ಕೃಷ್ಣಲೀಲಾ ತರಂಗಿಣಿ’ಯ ಕೆಲವು ಸ್ತೋತ್ರಗಳಿಗೆ ಅಲ್ಪಕಾಲದಲ್ಲಿ ಹೃದಯಸ್ಪರ್ಶಿಯಾದ ರಾಗಸಂಯೋಜನೆ ಮಾಡಿದ್ದು ಮತ್ತು ಅವುಗಳಿಗೆ ಕೂಡಲೇ ದೊರಕಿದ ಅನುಮೋದನೆ ನನ್ನ ನೆನಪಿನಲ್ಲಿನ್ನೂ ಹಸಿರಾಗಿದೆ”.
ದೊರೆಸ್ವಾಮಿ ತಮ್ಮ ಲೇಖನದಲ್ಲಿ ಮತ್ತೂ ಸ್ಮರಿಸಿಕೊಳ್ಳುತ್ತಾರೆ- “ಆಗ ಶ್ರೀಕಂಠ ಶಾಲೆಯಲ್ಲಿ ಓದುತ್ತಿದ್ದ. ಆ ದಿನಗಳಲ್ಲಿ ನಮ್ಮ ಊರಿಗೆ ಇನ್ನೂ ರೇಡಿಯೋ ಬಂದಿರಲಿಲ್ಲ ಮತ್ತು ನಮ್ಮ ಬಳಿ ಗ್ರಾಮಾಫೋನ್ ಇರಲಿಲ್ಲ. ಆದರೆ ಮನೆಗಳ ಮತ್ತು ಸಾರ್ವಜನಿಕ ಸ್ಥಳಗಳ ಪರಿಸರದಲ್ಲಿ ತುಂಬಿರುತ್ತಿದ್ದ ಸಂಗೀತದಿಂದ, ಹಾಡುವುದರಲ್ಲೇ ಪ್ರಾಣ ಇರಿಸಿಕೊಂಡಿದ್ದ ಆರ್.ಕೆ.ಎಸ್ ಅಂಥವರಿಗೆ ಸ್ಫೂರ್ತಿಪ್ರದವಾದ ಪರಿಸರವಿತ್ತು.”
ಬಲವಾದ ನಂಬಿಕೆಗಳುಳ್ಳ ಶ್ರೀಕಂಠನ್ ಹೇಳುತ್ತಾರೆ-“ಸಂಗೀತವನ್ನೇ ವೃತ್ತಿಯಾಗಿ ಆರಿಸಿಕೊಳ್ಳುವಂತೆ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ರವರೂ ನನ್ನ ಮೇಲೆ ಪ್ರಭಾವ ಬೀರಿದರು. ನೆನಪಿನಂಗಳಕ್ಕಿಳಿದರೆ, ತೋಡಿ ರಾಗದಲ್ಲಿ ಅವರು ಹಾಡಿದ “ಅಂಬ ನನ್ನು ಬ್ರೋವ” ಕೃತಿ ನನ್ನ ಮೇಲೆ ಗಾಢವಾದ ಪರಿಣಾಮವನ್ನುಂಟುಮಾಡಿತು ಎನ್ನಬಲ್ಲೆ.

ಮೈಸೂರಿನ ನಮ್ಮ ಮನೆಯಲ್ಲಿ ಅರಿಯಾಕ್ಕುಡಿಯವರು ಅಥವಾ ಮಹಾರಾಜಪುರಂ ವಿಶ್ವನಾಥಯ್ಯರ್ ರವರು ಉಳಿದುಕೊಂಡಾಗ ನಮಗೆ ಅತ್ಯದ್ಭುತವಾದ ಸಂಗೀತವನ್ನು ಆಲಿಸುವ ಅವಕಾಶ ಆಗಾಗ ದೊರೆಯುತ್ತಿತ್ತು. ಒಮ್ಮೆ ವಿಶ್ವನಾಥಯ್ಯರ್ ಅವರು ನನಗೆ ದರ್ಬಾರ್ ರಾಗವನ್ನು ಹಾಡುವಂತೆ ಹೇಳಿದರು. ನಾನು ಆ ರಾಗವನ್ನು ಹಾಡುತ್ತಿದ್ದಾಗ, ಅವರು ರಾಗದ ವಿಶ್ರಾಂತಿ ಸ್ಥಾನಗಳಲ್ಲಿ ದನಿಗೂಡಿಸಿ, ರಾಗದ ಪ್ರಯೋಗಗಳನ್ನು ಎತ್ತಿತೋರಿಸಲು ನಾನು ಹಾಡಬಹುದಾಗಿದ್ದ ಮೋಹಕ ಸಂಚಾರಗಳನ್ನು ಹಾಡಿ ತೋರಿಸಿದರು.ನಮ್ಮ ಜ್ಞಾನದ ಬಹುದೊಡ್ಡ ಭಾಗ ಕೇಳ್ಮೆಯಿಂದ ಬರುತ್ತದೆ ಎಂದು ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು. ಬಿಡಾರಾಂ ಕೃಷ್ಣಪ್ಪನವರು ನನಗೆ “ಭೇಷ್, ಭೇಷ್, ಈ ತರಹ ಕೇಳ್ತಾ ಇದ್ರೇನೆ ಸಂಗೀತದ ಸಂಸ್ಕಾರ ಬೆಳೆಯೋದು” ಎಂದು ಹೇಳಿದ್ದು ನನಗೆ ನೆನಪಿನಲ್ಲಿದೆ.

ಬಹಳ ವರ್ಷಗಳ ನಂತರ ಹದಿಹರೆಯದ ಶ್ರೀಕಂಠನ್ ಶಾಲೆಯಿಂದ ಮನೆಗೆ ಹಿಂದಿರುಗಿ ರೇಡಿಯೋ (ಮದ್ರಾಸ್ ಪ್ರಸಾರ ಮಾಡುತ್ತಿದ್ದ ಕಾರ್ಪೊರೇಷನ್ ರೇಡಿಯೋ) ಆನ್ ಮಾಡಿ, ಪೊನ್ನಯ್ಯ ಪಿಳ್ಳೈಯವರು ಹಾಡುತ್ತಿದ್ದ ದೇವಗಾಂಧಾರಿ ರಾಗದ ತ್ಯಾಗರಾಜರ ‘ವಿನರಾದ ನಾ ಮನವಿ’ ಕೃತಿಯನ್ನು ಆಲಿಸಿ, ಎಷ್ಟು ಮಂತ್ರಮುಗ್ಧರಾದರೆಂದರೆ, ಆ ಗಾಯನ ಎಂದಿಗೂ ಅವರ ಮನಃಪಟಲದಿಂದ ಅಳಿಸಿಹೋಗಲಿಲ್ಲ. ಎ.ಐ.ಆರ್‍ನಲ್ಲಿ ಮುತ್ತಯ್ಯಭಾಗವತರು ಘನರಾಗ ಪಂಚಕದಲ್ಲಿ ಒಂದಾದ ಎಂದರೋ ಮಹಾನುಭಾವುಲು ಕೃತಿಯಲ್ಲಿನ ಗಹನವಾದ ವಿಷಯಗಳನ್ನು ವಿವರಿಸುತ್ತಿದ್ದುದು ಶ್ರೀಕಂಠನ್ ರವರನ್ನು ರೇಡಿಯೋಗೆ ಅಂಟಿಕೊಂಡು ಕುಳಿತುಬಿಡುವಂತೆ ಮಾಡಿತು. ಮುಂದೆ ತನ್ನ ವೃತ್ತಿಜೀವನವೂ ಆಕಾಶವಾಣಿಯಲ್ಲಿ ಕಳೆಯುತ್ತದೆ ಎನ್ನುವ ಅರಿವು ಆಗ ಆ ಬಾಲಕನಿಗೆ ಬರುವುದಾದರೂ ಹೇಗೆ! ಅನೇಕ ವರ್ಷಗಳ ತರುವಾಯ, 1937ರಿಂದ ಮೊದಲುಗೊಂಡು ಶ್ರೀಕಂಠನ್ ಮದ್ರಾಸಿನ ಕಾರ್ಪೊರೇಷನ್ ರೇಡಿಯೋಗೆ ಭೇಟಿ ನೀಡಿ ಹಾಡಲು ಅವಕಾಶಗಳನ್ನು ಗಳಿಸಿಕೊಳ್ಳುತ್ತಿದ್ದರು ಮತ್ತು ಪ್ರತಿ ಸಾರಿ ಹಾಡಿದಾಗಲೂ ಅವರ ಸಂಭಾವನೆ 75 ರೂಪಾಯಿಗಳಾಗಿರುತ್ತಿತ್ತು! ಅದು ಆ ಕಾಲಕ್ಕೆ ದೊಡ್ಡ ಮೊತ್ತ!
ಗಾಯಕರೂ, ವಾಗ್ಗೇಯಕಾರರೂ ಮತ್ತು ಆಕಾಶವಾಣಿಯಲ್ಲಿ ಶ್ರೀಕಂಠನ್ ರವರ ಸಹೋದ್ಯೋಗಿಗಳೂ ಆಗಿದ್ದ ಎಂ.ಎ.ನರಸಿಂಹಾಚಾರ್, ಶ್ರೀಕಂಠನ್ ಅವರ 75ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟದ್ದು ಹೀಗೆ-“ನಾನು ಶ್ರೀಕಂಠನ್ ರವರನ್ನು 50 ವರ್ಷಗಳಿಂದ ಬಲ್ಲೆ ಮತ್ತು ಅವರು ಗೌರೀಶಂಕರದ ಎತ್ತರಕ್ಕೆ ಸ್ಥಿರಗತಿಯಿಂದ ಏರಿದ್ದನ್ನು ನಾನು ಕಂಡಿದ್ದೇನೆ. ಅವರಿನ್ನೂ ಉದಯೋನ್ಮುಖ ಕಲಾವಿದರಾಗಿದ್ದಾಗ ನಾನೊಮ್ಮೆ ಅವರನ್ನು ತಿರುವಯ್ಯಾರಿನ ತ್ಯಾಗರಾಜ ಆರಾಧನೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವರ ಹಾಡಿಕೆಯನ್ನು ಆಲಿಸಿದ ಪಳನಿ ಸುಬ್ರಹ್ಮಣ್ಯ ಪಿಳ್ಳೆಯವರು ‘ಈ ಹುಡುಗನ ಸಂಗೀತ ಉನ್ನತ ಮಟ್ಟದ್ದು. ಇವನು ಉತ್ತುಂಗಕ್ಕೇರುತ್ತಾನೆ” ಎಂದು ಭವಿಷ್ಯ ನುಡಿದಿದ್ದರು”.

ತಾವು ನಾಲ್ಕು ದಶಕಗಳ ಹಿಂದೆ ತಿರುವನಂತಪುರದ ನವರಾತ್ರಿ ಮಂಟಪದಲ್ಲಿ ಲಾಲ್ಗುಡಿ ಜಯರಾಮನ್ ರವರ ಪಿಟೀಲು ಪಕ್ಕವಾದ್ಯದೊಂದಿಗೆ ನೀಡಿದ ಕಛೇರಿಯ ಬಗ್ಗೆ ಪ್ರಖ್ಯಾತ ಮೃದಂಗ ವಿದ್ವಾಂಸರಾದ ಟಿ.ಎಸ್.ಮಣಿ ಐಯ್ಯರ್ ಆಡಿದ ಮಾತುಗಳು ತಮ್ಮನ್ನು ಮತ್ತಷ್ಟು ವಿನೀತರನ್ನಾಗಿ ಮಾಡಿತು ಎನ್ನುತ್ತಾರೆ ಶ್ರೀಕಂಠನ್. “ “ಸರ್ ಹೇಗಿತ್ತು?” ಎನ್ನುವ ನನ್ನ ಪ್ರಶ್ನೆಗೆ ಮಣಿ ಐಯ್ಯರ್ ಹೀಗೆಂದರು, ‘ಬ್ರಹ್ಮಾನಂದವಾಯಿತು! ನಿನ್ನ ಸಂಗೀತ ಚಿರಕಾಲ ಉಳಿಯುತ್ತದೆ. ಏಕೆಂದರೆ ನಿನ್ನೊಳಗಿರುವ ಸರಕು ಅಂಥದ್ದು’ ಎಂದು”. ದುರದೃಷ್ಟವಶಾತ್ ಮಣಿ ಐಯ್ಯರ್ ರವರೊಂದಿಗೆ ಶ್ರೀಕಂಠನ್ ನೀಡಿದ ಕಟ್ಟಕಡೆಯ ಕಛೇರಿ ಅದಾಗಿತ್ತು!

ಅನುಕೂಲಕರ ಘಟನೆಗಳು:
ಶ್ರೀಕಂಠನ್ ರವರ ಕಛೇರಿಗಳಂತೆಯೇ ಅವರ ವೃತ್ತಿಜೀವನವೂ ಮಂಗಳಕರವಾಗಿ ಆರಂಭಗೊಂಡಿತ್ತು. 1947ರಲ್ಲೇ, ಎಂದರೆ ಅವರು 27 ವರ್ಷದ ಯುವಕನಾಗಿರುವಾಗಲೇ ಮೈಸೂರಿನ ಅನ್ನವಸತಿ ಸಂಘ, ಟೈಗರ್ ವರದಾಚಾರ್ಯರ ಉಪಸ್ಥಿತಿಯಲ್ಲಿ ಅವರಿಗೆ ‘ಗಾನಭಾಸ್ಕರ’ ಪ್ರಶಸ್ತಿಯನ್ನು ನೀಡಿತ್ತು. ಮುಂದಿನ ಎರಡು ದಶಕಗಳ ಕಾಲ ಅವರು ನಾದಸಾಗರದಲ್ಲಿ ಮುಳುಗಿದ್ದರಾದರೂ ಅವರಿಗೆ ಯಾವ ಪ್ರಶಸ್ತಿಯೂ ದೊರಕಲಿಲ್ಲ. ಇದರಿಂದ ಅವರಿಗೆ ಬೇಸರವಾಯಿತು ಎಂದೇನೂ ಅಲ್ಲ. ಏಕೆಂದರೆ ಮೊದಲ ಪ್ರಶಸ್ತಿ ಲಭಿಸಿದಾಗಲೇ ಅವರು ಆನಂದವಿಸ್ಮಿತರಾಗಿದ್ದರು. “ನನ್ನಿಂದ ಸಾಧ್ಯವಾಗುವ ಗರಿಷ್ಠ ಪ್ರಯತ್ನವನ್ನು ಮಾಡುವಂತೆ ಅದು ನನಗೆ ಪ್ರೇರಣೆ ನೀಡಿದುದರ ಜೊತೆಗೆ ಆನಂದಾಶ್ಚರ್ಯವನ್ನೂ ಉಂಟುಮಾಡಿತು”.

ಶ್ರೀಕಂಠನ್ ಸ್ವ-ನಿರ್ಮಿತ ಗಾಯಕರಾಗಿ ಹೊರಹೊಮ್ಮಿದರು. 1950ರ ದಶಕದ ಅಂತ್ಯಭಾಗದಲ್ಲಿ ಅವರು ತಮ್ಮ ಶೈಲಿಯೊಳಗೆ ಅಂತರ್ಗತಗೊಳಿಸಿಕೊಂಡ ಹೆಚ್ಚುವರಿಯಾದ ಗುಣಾತ್ಮಕ ಅಂಶಗಳೆಲ್ಲ, ವಿಭಿನ್ನ ರಾಗಗಳಲ್ಲಿದ್ದ ಸುಪರಿಚಿತ ಮತ್ತು ಅಪರಿಚಿತ ಕೃತಿಗಳ ಕುರಿತು ಅವರು ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮಗಳ ನಿರ್ಮಾಣದಲ್ಲಿ ತೊಡಗಿದಾಗ ನೆರವಿಗೆ ಬಂದವು. ಈಗ ಅವರ ವೃತ್ತಿಜೀವನದ ಪೂರ್ವಾಗತ್ಯಗಳಾಗಿದ್ದ ವಿಷಯಗಳೆಂದರೆ ಶಾಸ್ತ್ರಭಾಗದ ಮತ್ತು ಕೌಶಲ್ಯಗಳ ಕುರಿತ ಜ್ಞಾನ ಹಾಗೂ ಶಾಸ್ತ್ರಭಾಗವನ್ನೂ ತಂತ್ರಗಳನ್ನೂ ಮಾತುಗಳಲ್ಲಿ ತಿಳಿಸಿಕೊಡುವ ಸಾಮಥ್ರ್ಯ. ಆದ್ದರಿಂದ ಅವರು ‘ಲಕ್ಷಣ’ದ ಕುರಿತ ಅರಿವನ್ನು ನಿಶಿತಗೊಳಿಸಿಕೊಳ್ಳುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅವರ ಸೋದಾಹರಣ-ಉಪನ್ಯಾಸಗಳು ಪ್ರಾರಂಭಗೊಂಡದ್ದು ಈ ಸಮಯದಲ್ಲೇ. “ಸಂಗೀತ ಸಮ್ಮೇಳನಗಳಲ್ಲಿ ಶ್ರೀಕಂಠನ್ ತಮ್ಮ ಅರ್ಥಗರ್ಭಿತವಾದ ಸೋದಾಹರಣ-ಭಾಷಣಗಳನ್ನು ಮಾಡುತ್ತ ಅಥವಾ ಆಯ್ದ ಕೃತಿಗಳ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತ ಉಪಸ್ಥಿತರಾಗಿರುತ್ತಿದ್ದರು” ಎಂದು ಮೃದಂಗ ವಿದ್ವಾಂಸರಾದ ಎಂ.ಎಲ್.ವೀರಭದ್ರಯ್ಯನವರು ಹೇಳುತ್ತಾರೆ. ಇದಕ್ಕೆ ನರಸಿಂಹಾಚಾರ್ ದನಿ ಸೇರಿಸುತ್ತಾರೆ: “ಅವೆಲ್ಲ ಅವರ ಆಳವಾದ ಜ್ಞಾನ ಮತ್ತು ವಿಸ್ತಾರವಾದ ಅನುಭವವನ್ನು ಬಿಂಬಿಸುವ ಘನವಾದ ಸೋದಾಹರಣ-ಭಾಷಣಗಳಾಗಿರುತ್ತಿದ್ದವು. ಕೇರಳರಾಜ್ಯದ ಪಾಲ್ಕಕಾಡಿನಲ್ಲಿರುವ ಸ್ವಾತಿ ತಿರುನಾಳ್ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಸಂಗೀತ ಶಿಕ್ಷಣದ ಹೊಣೆಯನ್ನು ವಹಿಸಲ್ಪಟ್ಟ ಕರ್ನಾಟಕದ ಏಕಮಾತ್ರ ಕಲಾವಿದರಾಗಿದ್ದರು ಶ್ರೀಕಂಠನ್” ಎಂದು.

ಈರ್ವರು ಮಹಾನ್ ಗಾಯಕರಾದ ಜಿ.ಎನ್.ಬಾಲಸುಬ್ರಹ್ಮಣ್ಯಂ (ಮದ್ರಾಸಿನ ಎ.ಐ.ಆರ್.ನ ಉಪಸಂಗೀತ ನಿರ್ಮಾಪಕರು) ಮತ್ತು ಸಂಧ್ಯಾವಂದನಂ ಶ್ರೀನಿವಾಸ ರಾವ್ ರವರು ಚೆನ್ನೈ ಆಕಾಶವಾಣಿಯ ರೆಕಾರ್ಡಿಂಗ್ ಕೋಣೆಯಿಂದ ಆರ್.ಕೆ.ಎಸ್ ರವರ ಶುಕ್ರವಾರದ ಆಕರ್ಷಕವಾದ ಕಚೇರಿಯನ್ನು ಆಲಿಸಿದರು.ಅತ್ಯಾನಂದಿತರಾದ ಈ ಇಬ್ಬರು ದಿಗ್ಗಜರು ಆರ್.ಕೆ.ಎಸ್ ರವರ ಅಣ್ಣ ವೆಂಕಟರಾಮಾ ಶಾಸ್ತ್ರಿಗಳಿಗೆ ಹೇಳಿದರು: “ನಿಮ್ಮ ಸೋದರ ಮಹತ್ತರವಾದ ಸಾಧನೆ ಮಾಡುತ್ತಾನೆ” ಎಂದು.

ಆಮಿಷಕ್ಕೆ ಸಿಲುಕಿ………..
1950ರ ದಶಕದಲ್ಲಿ ಬೆಂಗಳೂರಿನ ಸಂಗೀತೋತ್ಸವಗಳಲ್ಲಿ ತಪ್ಪದೆ ಕಾರ್ಯಕ್ರಮ ನೀಡುತ್ತಿದ್ದ ಶ್ರೀಕಂಠನ್ 50 ರೂಪಾಯಿ ಸಂಭಾವನೆಗೆ ಕಛೇರಿಗಳನ್ನು ಒಪ್ಪಿಕೊಳ್ಳುತ್ತಿದ್ದರು. 1995ರಲ್ಲಿ ಆರ್.ಕೆ.ಎಸ್ ‘ಸಂಗೀತ ಕಲಾನಿಧಿ’ ಪ್ರಶಸ್ತಿ ಸ್ವೀಕರಿಸುವ ಮುನ್ನ ಶ್ರೇಷ್ಠ ವಿಮರ್ಶಕರಾದ ದಿವಂಗತ ಬಿ.ವಿ.ಕೆ.ಶಾಸ್ತ್ರಿಗಳು ಶ್ರುತಿ ಪತ್ರಿಕೆಯಲ್ಲಿ ಶ್ಲಾಘಿಸಿ ಬರೆದರು: “ನಾನು ಶ್ರೀಕಂಠನ್ ರವರು ವೃತ್ತಿಪರ ವೇದಿಕೆಗೆ ಬರುವ ಮೊದಲೇ, ಎಂದರೆ 1940ರ ದಶಕದಲ್ಲೇ ಅವರ ಗಾಯನವನ್ನು ಕೇಳಿದ್ದೇನೆ. ನಾನು ರಾಮನಾಥನ (ಆರ್.ಕೆ.ಎಸ್ ಅವರ ಸೋದರ) ಸ್ನೇಹಿತನಾಗಿದ್ದುದರಿಂದ ಮೈಸೂರಿನ ರಾಮವಿಲಾಸ ಅಗ್ರಹಾರದಲ್ಲಿದ್ದ ಶಾಸ್ತ್ರಿಗಳ ಮನೆಗೆ ಆಗಾಗ ಹೋಗುತ್ತಿದ್ದೆ. ಒಂದಲ್ಲ ಒಂದು ಕೋಣೆಯಿಂದ ಸೋದರರಾದ ನಾರಾಯಣ ಸ್ವಾಮಿಯವರ ಅಥವಾ ಶ್ರೀಕಂಠನ್ ರವರ ಅತ್ಯಂತ ಭಿನ್ನ ಶಾರೀರ ಮತ್ತು ಶೈಲಿಗಳ ಹಾಡಿಕೆ ಕಿವಿಗೆ ಬೀಳುತ್ತಿತ್ತು.

ನಾರಾಯಣ ಸ್ವಾಮಿಯವರ ಗಾಯನ ಅವರ ಗುರು ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರದರಂತೆ ವಿಳಂಬ ಗತಿಯಲ್ಲಿ ಬಾಗಿ ಬಳುಕುತ್ತ ಸಾಗಿದರೆ, ಶ್ರೀಕಂಠನ್ ರವರ ಸಿರಿಕಂಠದ ಉಲ್ಲಾಸಪೂರ್ಣ ಸಂಗೀತ ಸ್ವಚ್ಛಂದವಾಗಿ ಹರಿದು ಬರುತ್ತಿತ್ತು. ವಾಸ್ತವದಲ್ಲಿ, ಪ್ರಾರಂಭಿಕ ವರ್ಷಗಳ ತಮ್ಮ ಕಛೇರಿಗಳಲ್ಲಿ ಶ್ರೀಕಂಠನ್ ರವರ ಸುದೃಢ ಗಾಯನ ಪ್ರದರ್ಶನಪ್ರಿಯತೆಯ ಆಮಿಷಕ್ಕೆ ಸಿಲುಕುತ್ತಿತ್ತು. ಕೃತಿಗಳು ದ್ರುತಗತಿಯಲ್ಲಿ ಹಾಡಲ್ಪಟ್ಟರೆ, ರಾಗಗಳ ನಿರೂಪಣೆಯಲ್ಲಿ ಅಸಮತೋಲನ ಕಂಡುಬರುತ್ತಿತ್ತು ಮತ್ತು ಸ್ವರಪ್ರಸ್ತಾರ ಕೊನೆಯಿಲ್ಲದ ಲೆಕ್ಕಾಚಾರದ ವಿನ್ಯಾಸಗಳಿಂದ ಕೂಡಿರುತ್ತಿತ್ತು. ಅವರು ಸಂಗೀತ ಸ್ವರೂಪದಲ್ಲಿ ನಿರ್ದುಷ್ಟತೆಯನ್ನು ಉಳಿಸಿಕೊಂಡರೂ ಅದರಲ್ಲಿ ಉತ್ಸಾಹದ ಕೊರತೆ ಕಾಣುತ್ತಿತ್ತು. ಆದರೆ ಇವೆಲ್ಲವನ್ನೂ ಅವರು ಅನುರಣನಶೀಲವಾದ ತಮ್ಮ ಕಂಠಸಿರಿಯಿಂದ ತೂಗಿಸಿಕೊಂಡುಬರುತ್ತಿದ್ದರು.

ಈ ಕ್ರಿಯಾಶೀಲ ಗುಣ ಶ್ರೋತೃಗಳನ್ನು ತನ್ಮಯಗೊಳಿಸುವಂತೆ ಕಾಣುತ್ತಿತ್ತು”.
ಬಿ.ವಿ.ಕೆ ಲೇಖನವನ್ನು ಮುಂದುವರಿಸುತ್ತ ಬರೆಯುತ್ತಾರೆ- “ವರ್ಷಗಳು ಉರುಳಿದಂತೆ, ಅವರು ಬೇರೆಬೇರೆ ಶಿಕ್ಷಣ ಪದ್ಧತಿಗಳ ಪರಿಚಯ ಮಾಡಿಕೊಂಡರು. ಆ ಕಾಲದ ಶ್ರೇಷ್ಠ ವಿದ್ವಾಂಸರ ಸಂಗೀತವನ್ನು ಅಧ್ಯಯನ ಮಾಡಿದರು ಮತ್ತು ಪ್ರಸ್ತುತಿಯ ವಿಭಿನ್ನ ಆಯಾಮಗಳನ್ನು ಅರಿತುಕೊಂಡರು. ಇದರ ಪರಿಣಾಮ ಸ್ಪಷ್ಟವಾಗಿ ಗೋಚರಿಸಿತು. ಅವರು ಹಾಡುತ್ತಿದ್ದ ಕೃತಿಗಳು, ವಿಶೇಷವಾಗಿ ಜಿ.ಎನ್.ಬಿ ಜನಪ್ರಿಯಗೊಳಿಸಿದ ದುರ್ಗಾ ರಾಗದಲ್ಲಿನ ‘ಧರ್ಮಶ್ರವಣವಿದೇತಕೆ’ ಎಂಬ ಹರಿದಾಸರ ಪದ ಇನ್ನೂ ನನ್ನ ನೆನಪಿನಲ್ಲಿದೆ. ಶ್ರೀಕಂಠನ್ ಬಿರ್ಖಾಗಳನ್ನು ಹಾಡುವಾಗ ಸ್ವ-ಕಲ್ಪನಾಪ್ರಸೂತವಾದುದನ್ನೂ ಬೆರೆಸಿ ಜಿಎನ್‍ಬಿ ರವರನ್ನು ಅನುಕರಿಸುತ್ತಿದ್ದರು. ಆದರೆ ಅವರು ಸುಮಾರು ಮೂವತ್ತೈದು ವರ್ಷದವರಾಗುವ ವೇಳೆಗೆ ಅವರದೇ ಆದ ನಿಶ್ಚಯಾತ್ಮಕ ಶೈಲಿಯೊಂದು ರೂಪುದಳೆಯಿತು. ಅವರ ಶೈಲಿಯ ಛಾಪು ಎನ್ನಬಹುದಾದ ಶಕ್ತಿ ಮತ್ತು ರಭಸದೊಡನೆ ಈಗ ಅವರ ಗಾಯನದಲ್ಲಿ ನೈಜವಾದ ಆತ್ಮನಿರೀಕ್ಷಣೆಯ ನಂತರ ಹೆಚ್ಚು ಶಿಸ್ತು ಕಂಡುಬರುತ್ತಿತ್ತು. ಗಾಯನದಲ್ಲಿ ಹೆಚ್ಚು ನಿಯಂತ್ರಣ ಕಾಣಿಸಿತು. ಶ್ರೀಕಂಠನ್ ಸುಚಿಂತಿತವಾಗಿ ಮತ್ತು ಸುಯೋಜಿತವಾಗಿ ಸಾಲುಗೂಡಿಸಿದ ಕೃತಿಗಳನ್ನು ಕಛೇರಿಯಲ್ಲಿ ಹಾಡತೊಡಗಿದರು”.

1954ರಲ್ಲಿ ಮದ್ರಾಸ್ ಮೂಸಿಕ್ ಅಕಾಡೆಮಿಯಲ್ಲಿ ಶ್ರೀಕಂಠನ್ ನೀಡಿದ ಮೊಟ್ಟಮೊದಲ ಕಛೇರಿಯ ಕುರಿತು ಪ್ರಶಂಸೆಯ ಸುರಿಮಳೆಯೇ ಆಯಿತು. ಆ ಕಾಲದಲ್ಲಿ ಶ್ರೀಕಂಠನ್ ರವರ ಸಂಗೀತವನ್ನು ನಿಯಮಿತವಾಗಿ ಆಲಿಸುತ್ತಿದ್ದ ಬಿ.ವಿ.ಕೆ, ಅವರ ಕಛೇರಿಗಳ ಗತಿ ಅನೂಹ್ಯವಾಗಿರುವುದನ್ನು, ಗಾಯನದಲ್ಲಿ ಸ್ವಯಂಪ್ರೇರಿತ ಶೈಲಿ ಸ್ವಾಭಾವಿಕವಾಗಿ ನುಸುಳಿರುವುದನ್ನು ಗಮನಿಸಿದರು. ಅಸಂಖ್ಯ ಕೃತಿಗಳನ್ನು ಸಂಗ್ರಹಿಸುವ ತೀವ್ರ ಆಸಕ್ತಿಯ ಜೊತೆಗೆ ಅವರು ಕಛೇರಿಗಳಲ್ಲಿ ಅದೇ ಕೃತಿಗಳನ್ನು ಮತ್ತೆಮತ್ತೆ ಹಾಡದಿರುವ ಮೂಲಕ ತಮ್ಮಲ್ಲಿದ್ದ ಕೃತಿ ಸಂಪತ್ತಿಗೆ ನ್ಯಾಯ ಒದಗಿಸಿದರು. ಒಮ್ಮೆ ಮಧ್ಯಮಾವತಿಯ ವಿಸ್ತಾರವಾದ ಆಲಾಪನೆಯ ನಂತರ ತ್ಯಾಗರಾಜರ ನಾದುಪೈ ಬಲಿಕೇರು ಕೃತಿಯನ್ನು ಹಾಡಿದರೆ, ಇನ್ನೊಂದು ಸಾರಿ ಅದೇ ರಾಗದಲ್ಲಿ ಅವರು (ಮುಂದಿನ ವಾರ ನಡೆಯುತ್ತಿದ್ದ ಕಛೇರಿಯಲ್ಲಿರಬಹುದು) ದೀಕ್ಷಿತರ ಅಪರೂಪದ ಧರ್ಮಸಂವರ್ಧನಿ ಕೃತಿಯನ್ನು ಹಾಡುತ್ತಿದ್ದರು.

ಶಾಸ್ತ್ರಿಗಳು ಬರಹವನ್ನು ಮುಂದುವರಿಸುತ್ತಾರೆ- “ಕಛೇರಿಯಲ್ಲಿ ಅವರು ತರುತ್ತಿದ್ದ ಈ ಬಗೆಯ ವೈವಿಧ್ಯ ಮತ್ತು ನಾವೀನ್ಯ ಅವರನ್ನು ಇತರರಿಗಿಂತ ಭಿನ್ನರನ್ನಾಗಿಸಿತು. ಇದು ಸಂಪುರ್ಣವಾಗಿ ಅವರದೇ ಗುರುತು ಎನಿಸಿತು ಕೂಡ! ಅವರಲ್ಲಿದ್ದ ಸುಪರಿಚಿತ ಮತ್ತು ಅಪರಿಚಿತ ಕೃತಿಗಳ ವಿಶಾಲ ಸಂಗ್ರಹ, ಪರಿಶ್ರಮಪೂರ್ವಕ ಅಭ್ಯಾಸದಿಂದ ನಿರ್ಮಾಣಗೊಂಡ ಆಸ್ತಿ ಎನಿಸಿತು. ಈಗ ಅವರ ಸ್ವರಪ್ರಸ್ತಾರ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲ್ಪಡದ ಕಾರಣ, ಸಾಂಪ್ರದಾಯಿಕತೆಯ ಚೌಕಟ್ಟು ಮತ್ತು ಎಲ್ಲೆಗಳೊಳಗೇ ಹರಿಯುತ್ತಿದ್ದ ಅವರ ಸಂಗೀತ ಬಹಳ ಬೇಗ ಆಧಿಕಾರಿಕತೆಯ ಲಕ್ಷಣವನ್ನು ಗಳಿಸತೊಡಗಿತು.”

ಪ್ರಸಿದ್ಧ ವಿಮರ್ಶಕರಾದ ಶ್ರೀ ಕೆ ಎಸ್ ಮಹಾದೇವನ್ ರವರೂ ಕೂಡ ತಮ್ಮ ಲೇಖನಗಳಲ್ಲಿ ವಿಶ್ಲೇಷಿಸಿದ್ದರು- “ಆಲಾಪನೆ ಮತ್ತು ನೆರವಲ್‍ಗಳ ಮರ್ಮವನ್ನು ಶ್ರೀಕಂಠನ್ ಶೆಮ್ಮಂಗುಡಿ ಅವರಿಂದ ಪಡೆದುಕೊಂಡಿದ್ದರೂ, ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ರವರ ಪರಿಣತಿಯ ಮೂಸೆಯೊಳಗೆ ಕೃತಿಗಳು ಪಡೆದುಕೊಳ್ಳುವ ರೂಪವೇ ತಮಗಿಷ್ಟ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಸಂಗೀತ ಪದ್ಧತಿಯೊಂದರಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ, ಚಿರಸ್ಮರಣೀಯ ಎನಿಸುವಂತೆ ತೊಡಗಿಕೊಂಡಿರುವ ಶ್ರೇಯಸ್ಸಿಗೆ ನಮ್ಮವರೇ ಆದ ‘ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್’ ಆರ್.ಕೆ.ಎಸ್ ಪೂರ್ಣ ರೀತಿಯಿಂದ ಅರ್ಹರಾಗಿದ್ದಾರೆ ಮತ್ತು ಮುಂದಿನ ತಲೆಮಾರಿಗೆ ಕೊಡುಗೆ ನೀಡುವವರು ಅವರಂಥವರು ಮಾತ್ರವೇ”.

“ಸಂಕ್ಷಿಪ್ತ ಪರಿಮಾಣಗಳಲ್ಲಿ ಮತ್ತು ಮೆರುಗುಗೊಳಿಸಿದ ಕಲಾಚಾತುರ್ಯದಲ್ಲಿ ಅವರ ಪರಿಷ್ಕøತ ಅಭಿವ್ಯಕ್ತಿಗಳು ಅಡಕಗೊಂಡಿವೆ. ಒಂದು ಕಛೇರಿಗೆ ಅಥವಾ ಪ್ರಾತ್ಯಕ್ಷಿಕೆಗೆ ಯಾವುದು ಸಮುಚಿತವಾದುದು ಎನ್ನುವ ಕುರಿತು ಅವರಿಗಿರುವ ವಿವೇಚನೆ, ಅವರು ತಮ್ಮನ್ನು ತಾವು ನಿರಂತರವಾಗಿ ಉತ್ತಮಗೊಳಿಸಿಕೊಂಡಿರುವುದರ ಪ್ರತಿಫಲನ.ಅದೂ ಅಲ್ಲದೆ, ಅತಿಪ್ರಸಿದ್ಧ ಕಲಾವಿದರಲ್ಲಿ ತುಂಬಿ ತುಳುಕುವ ‘ಅಹಂ’ನ ಛಾಯೆ ಶ್ರೀಕಂಠನ್ ರವರ ವಿದ್ವತ್ತಿನಲ್ಲಿ ಕಿಂಚಿತ್ತೂ ಇಲ್ಲ.”

ಶ್ರೀಕಂಠನ್ ರವರ ಕಛೇರಿಯೊಂದು ಪೂರ್ಣಗೊಂಡ ನಂತರ ಶ್ರೇಷ್ಠ ವಿಮರ್ಶಕರಾದ ಎಸ್.ಎನ್.ಚಂದ್ರಶೇಖರ್ ಹೇಳಿದ್ದಿತ್ತು- “ಶ್ರೀಕಂಠನ್ ರವರಲ್ಲಿ ನಯವಾದ ಅಚ್ಚುಕಟ್ಟುತನವೊಂದಿದೆ. ನಮ್ರತೆಯೇ ಮೈದಳೆದಿರುವಂತಿರುವ ಅವರು ಸರ್ವತ್ರ ಪ್ರಚಲಿತವಿರುವ ಸಾಹಸ ಪ್ರದರ್ಶನ ಮತ್ತು ವೇದಿಕೆಗೆ ಸಂಬಂಧಪಟ್ಟ ಸೌಂದರ್ಯಪ್ರಜ್ಞೆಗೆ ಮಾರಕವಾದ ಮುಖ ತಿರಿಚುವಿಕೆಯಲ್ಲಿ ತೊಡಗುವುದಿಲ್ಲ. ಕೃತಿಗಳನ್ನು ಕಛೇರಿಗಳಿಗಾಗಿ ಆಯ್ಕೆ ಮಾಡಿ ರಂಜನೀಯವಾಗಿ ಜೋಡಿಸುವ ರೀತಿ ಹಾಗೂ ಶಾರೀರವನ್ನು ತೋರ್ಪಡಿಸುವ ಕಲೆಗಳಲ್ಲಿ ಶ್ರೀಕಂಠನ್ ರವರ ಕಛೇರಿಗಳು ಉದಯೋನ್ಮುಖ ಸಂಗೀತಗಾರರಿಗೆ ಪರಿಣಾಮಕಾರಿಯಾದ ಪಾಠಗಳಾಗಿವೆ.”

ಹೊಸ ಕರೆ….
ಡಾ.ಹೆಚ್.ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದಾಗ, ಅಲ್ಲಿ ಸಂಗೀತ ವಿಭಾಗ ಸ್ಥಾಪನೆಗೊಂಡಿತು. ಕೂಡಲೇ ಬೆಂಗಳೂರಿನ ಸಂಗೀತ ವಲಯದೊಂದಿಗೆ ಸಂಪರ್ಕ ಹೊಂದಿದ್ದ ಗಣ್ಯರು ಶ್ರೀಕಂಠನ್ ರವರನ್ನು ಸಂಗೀತ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಶ್ರೀಕಂಠನ್ ರವರ ವಿದ್ಯಾರ್ಹತೆ, ಆಕಾಶವಾಣಿಯಲ್ಲಿ ಮತ್ತು ಸಂಗೀತಪಾಠ ಮಾಡುವುದರಲ್ಲಿ ಅವರಿಗಿದ್ದ ಅನುಭವ ಹಾಗೂ ಸಂಗೀತದ ಕುರಿತು ಅವರು ರಚಿಸಿದ ಅಸಂಖ್ಯ ಶೈಕ್ಷಣಿಕ ಲೇಖನಗಳು ಯಥೇಷ್ಟವೆನಿಸಿದವು. ಆದರೆ ಪ್ರಕ್ರಿಯಾತ್ಮಕ ಔಪಚಾರಿಕತೆಗಳ ಸರಮಾಲೆ, ಶ್ರೀಕಂಠನ್ ರವರಿಗೆ ಉದ್ಯೋಗ ನೀಡಿದ್ದ ಆಕಾಶವಾಣಿಯಲ್ಲಿ ವಿಶ್ವವಿದ್ಯಾಲಯಕ್ಕೆ ನಿಯೋಜನೆಗೊಳ್ಳಲು ಇದ್ದ ನಿರ್ಬಂಧಗಳು ಹಾಗೂ ವೇತನಶ್ರೇಣಿಗೆ ಸಂಬಂಧಪಟ್ಟಂತೆ ಅವರು ವಿಧಿಸಿದ ಷರತ್ತುಗಳು ಅನುಕೂಲಕರವಾಗಿ ಫಲಿಸದೆ ಹೋದದ್ದರಿಂದ ಶ್ರೀಕಂಠನ್ ಆ ಹುದ್ದೆ ಪಡೆದುಕೊಳ್ಳಲು ಹೆಚ್ಚು ಪ್ರಯತ್ನವನ್ನೇನೂ ಮಾಡಲಿಲ್ಲ. “ನಾನು ಅಲ್ಲಿಗೆ ಹೋಗಿ ಪಾಠ ಮಾಡಬೇಕು ಎಂದೇನೂ ತವಕಿಸುತ್ತಿರಲಿಲ್ಲ. ನಾನು ಬೇರೊಂದು ವಿಧಾನದಿಂದ ಪಾಠ ಮಾಡುತ್ತಿದ್ದೆ” ಎನ್ನುತ್ತಾರೆ ಸಮಾಹಿತ ಚಿತ್ತದ ಶ್ರೀಕಂಠನ್. ಆದರೆ ಬಿ.ವಿ.ಕೆ.ಶಾಸ್ತ್ರಿಗಳು ಬರೆದಂತೆ “ಅದು ನಿಜವಾಗಿಯೂ ವಿಶ್ವವಿದ್ಯಾಲಯಕ್ಕಾದ ನಷ್ಟ”ವಾಗಿತ್ತು.

ಶ್ರೀಕಂಠನ್ ರವರ ಕಿರಿಯ ಪುತ್ರ ಆರ್.ಎಸ್.ಕುಮಾರ್ ಅವರ ಸ್ಮøತಿಕೋಶದಲ್ಲಿ ತಮ್ಮ ತಂದೆಯ ಜೀವನದ ಕುರಿತು ಅನೇಕ ಸ್ವಾರಸ್ಯಕರ ಘಟನೆಗಳಿವೆ. “ಅಣ್ಣ (ಶ್ರೀಕಂಠನ್ ರವರ ಮಕ್ಕಳು ಅವರನ್ನು ಸಂಬೋಧಿಸುತ್ತಿದ್ದುದು ಹೀಗೆಯೇ) ನಂಬಲಾಗದ ಒಂದು ಘಟನೆಯ ಬಗ್ಗೆ ಹೇಳುತ್ತಿದ್ದುದು ನನಗೆ ನೆನಪಿದೆ. ಅವರು ರೈಲಿನಲ್ಲಿ ತಿರುವನಂತಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ, ತಮ್ಮನ್ನು ತಾವು ಅಂಬಾ ಪ್ರಸಾದ್ ಎಂದು ಪರಿಚಯಿಸಿಕೊಂಡ ಸ್ವಾಮೀಜಿಯೊಬ್ಬರು ಕೆಲಹೊತ್ತು ಅವರೊಡನೆ ಮಾತನಾಡುತ್ತಿದ್ದರು. ನಂತರ ಅವರು ತುಂಬ ಪ್ರೀತಿಯಿಂದ ‘ಅದೃಷ್ಟ’ದ ಶಿಲೆಯೊಂದನ್ನು ಶ್ರೀಕಂಠನ್‍ಗೆ ಕೊಟ್ಟು ಹೇಳಿದರು: ‘ನೀವು ಮನೆ ತಲುಪಿದಾಗ ಶುಭ ಸಮಾಚಾರವೊಂದನ್ನು ಕೇಳುತ್ತೀರಿ’ ಎಂದು. ಆಹ್! ಅಂದು ರಾತ್ರಿಯೇ ತಮಗೆ ‘ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’ ದೊರಕಿದೆ ಎನ್ನುವ ಸುದ್ದಿ ಶ್ರೀಕಂಠನ್ ರವರಿಗೆ ತಲುಪಿತು. ಈ ಘಟನೆ ನಡೆದದ್ದು 1978ರಲ್ಲಿ”.

ಗಾಯಕಿ ಎಂ.ಎಸ್.ಶೀಲಾ ಹೇಳುತ್ತಾರೆ- “ನಾನು ಹೊಸದಾಗಿ ಅವರಲ್ಲಿ ಶಿಷ್ಯವೃತ್ತಿಯನ್ನು ಕೈಗೊಂಡಾಗ ಅವರು ಸ್ವಲ್ಪ ಮುಂಗೋಪಿಗಳಾಗಿದ್ದರು. ಸಮಯನಿಷ್ಠೆ ಹಾಗೂ ನಿಖರವಾಗಿ ಕಲಿತುಕೊಳ್ಳುವ ವಿಷಯದಲ್ಲಿ ಅವರು ಯಾರಿಗೂ ವಿನಾಯತಿ ನೀಡುತ್ತಿರಲಿಲ್ಲ. ಒಂದೇ ಭಾಗವನ್ನು ಅವರು ಎಷ್ಟು ಸಾರಿ ಬೇಕಾದರೂ ಹೇಳಿಕೊಡುತ್ತಿದ್ದರು. ಆದರೆ ಒಮ್ಮೆ ಅದನ್ನು ಕಲಿತ ನಂತರ ನಾವು ಅದನ್ನು ಪುನಃ ತದ್ವತ್ತಾಗಿ ಹಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಈ ವಿಷಯದಲ್ಲಿ ಅವರು ಸುತರಾಂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ! ತಾವು ಹೇಳಿಕೊಟ್ಟಂತೆ ನಾನು ಹಾಡಲಿಲ್ಲ ಎಂದು ಅವರು ನನ್ನನ್ನು ಮನೆಗೆ ಕಳುಹಿಸಿದ ದಿನ ನನಗಿನ್ನೂ ನೆನಪಿನಲ್ಲಿದೆ!”

ಆ ಕಾಲದಲ್ಲಿ ಮೈಸೂರಿನಲ್ಲಿ ಹಲವು ಅಗ್ರಹಾರಗಳಿದ್ದವು. ಮೈಸೂರಿನ ತಮ್ಮ ಹಳೆಯ ಕೋಟೆ ಮನೆಯಲ್ಲಿ ಶ್ರೀಕಂಠನ್ ಮತ್ತು ಅವರ ಸೋದರರು ಕೋಣೆಯೊಂದರ ಬಾಗಿಲು ಹಾಕಿಕೊಂಡು ಐದಾರು ಗಂಟೆಗಳ ಕಾಲ ಕಠಿಣ ಸಾಧನೆ ಮಾಡುತ್ತಿದ್ದುದರ ಕುರಿತು ಅನೇಕ ಕತೆಗಳಿವೆ. ಸಾಧನೆ ಮುಗಿಸಿಕೊಂಡು ಶ್ರೀಕಂಠನ್ ಕೋಣೆಯಿಂದ ಹೊರಬಂದಾಗ ಅವರ ಶಿಖೆ ಬಿಚ್ಚಿಹೋಗಿ ಕೂದಲು ತಲೆಯ ಸುತ್ತ ಪ್ರಭಾವಳಿಯಂತೆ ಕೆದರಿಕೊಂಡಿರುತ್ತಿತ್ತು. ಆ ಕಾಲದ ಗಾಯಕರಲ್ಲಿ ಒಬ್ಬರಾದ ತಿಟ್ಟೆ ಕೃಷ್ಣಯ್ಯಂಗಾರರು ಶ್ರೀಕಂಠನ್ ಮನೆಯ ಹತ್ತಿರದಲ್ಲಿ ವಾಸಿಸುತ್ತಿದ್ದರು. ಅವರು ಈ ಸೋದರರ ಗಾಯನಾಭ್ಯಾಸವನ್ನು ಅನೇಕ ಸಾರಿ ಆಲಿಸಿದ್ದರು. ಈ ಕುರಿತು ಒಮ್ಮೆ ಅವರು ಉದ್ಗರಿಸಿದರು, ‘ಇದು ಯಮಸಾಧನೆ’ ಎಂದು.

‍ಲೇಖಕರು Admin

June 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: