ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರೂ ಇಲ್ಲ ಮೂರೂ ಇಲ್ಲ..

ಶ್ರೀಧರ ಪಿಸ್ಸೆ

ಇಂದು ನನ್ನ ಕಿರಿಯ ಮಗ ಅರವಿಂದ ಇಪ್ಪತ್ತನಾಲ್ಕು ವರುಷಗಳನ್ನು ಪೂರೈಸಿ ಇಪ್ಪತ್ತೈದನೇ ವರುಷಕ್ಕೆ ಕಾಲಿಟ್ಟಿದ್ದಾನೆ. ಹೆತ್ತವರು ತಮ್ಮ ಮಕ್ಕಳ ಕುರಿತು ಸಂಭ್ರಮ ಆನಂದ ಕಟ್ಟಿಕೊಳ್ಳಲು ಸಣ್ಣಮಕ್ಕಳ ಹುಟ್ಟಿದ ದಿನದಂದು ಹಬ್ಬದ ವಾತಾವರಣ ಹುಟ್ಟುಹಾಕುವುದು ಒಂದು ಬಗೆಯ ಹಿತಕರವಾದ ಮನಸ್ಥಿತಿ.

ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತನ್ನ ಸಮಾಜದ ಗತಿಶೀಲತೆಯಲ್ಲಿ ಪಾಲುದಾರನಾಗಿ ಮುಂದಿನ ಪೀಳಿಗೆಗೆ ಕೈಮರವಾಗಿ ಉಳಿದಿದ್ದಲ್ಲಿ ಅಂಥವನು ಅಳಿದ ಮೇಲೂ ಅವನು ಹುಟ್ಟಿದ ಅಥವಾ ಗತಿಸಿದ ದಿನದಂದು ನೆನಪಿಸಿಕೊಳ್ಳುವಂಥ ಆಚರಣೆ ಮಾಡುವುದು ಕೂಡ ಸೂಕ್ತ. ಆದರೆ ಪ್ರತಿಯೊಬ್ಬನೂ ಜೀವನದಲ್ಲಿ ಅಪ್ರಯತ್ನಪೂರ್ವಕವಾಗಿ ಸಂಭವಿಸುವ ಹುಟ್ಟಿನಂಥ ಸಂಗತಿಯನ್ನು ಕಾಲನಿಯಮಾನುಸಾರ ತನ್ನ ಜೀವಿತದಲ್ಲಿ ಮರುಕೊಳಿಸಿದಾಗೆಲ್ಲ ಸುಖಾಸುಮ್ಮನೆ ಮಹತೀಕರಿಸಿಕೊಳ್ಳುವ ವೈಭವೀಕರಣದ ಮನಸ್ಥಿತಿ ಮನುಷ್ಯನ ಅತಿರೇಕ ಅಹಂಕಾರದ ಪ್ರತೀಕವೆಂದೇ ತೋರುತ್ತದೆ.

ಈ ಜಗತ್ತಿನಲ್ಲಿ ಕೋಟ್ಯಾನುಕೋಟಿ ಜೀವಿಗಳು ಮೈತಳೆಯುತ್ತವೆ ತಮ್ಮ ಉದ್ದೇಶಿತ ಕಾರ್ಯ ಸಾಧಿತವಾದ ನಂತರ ಮರಳಿ ಮಣ್ಣಿಗೆ ಸೇರುತ್ತವೆ. ಅವಲ್ಲಿ ಮಾನವ ಜೀವಿಯೂ ಒಂದು. ತನ್ನ ಸ್ವಕೇಂದ್ರಿತ ಪ್ರಜ್ಞೆಯನ್ನು ಬ್ರಹ್ಮಾಂಡ ಕೇಂದ್ರ ಪ್ರಜ್ಞೆಯಂತೆ ಬಿಂಬಿಸಿಕೊಳ್ಳುತ್ತ ತನ್ನ ಜೀವಿತದ ಸಣ್ಣ ಸಂಗತಿಯನ್ನೂ ವೈಭವೀಕರಿಸಿಕೊಳ್ಳುವ ಮನಸ್ಥಿತಿ ಇದೆಯಲ್ಲ, ಇದು ಅತಿರೇಕದ ಅಹಂಕಾರದಿಂದ ಕೂಡಿದ್ದು ಮಾನವನನ್ನು ಅಹಂಕಾರ ಜೀವಿಯನ್ನಾಗಿ ರೂಪಿಸಿದೆ. ಈ ಮನಸ್ಥಿತಿ ಪ್ರಕೃತಿಯೊಂದಿಗೆ ಒಂದಾಗಿರುವಂತೆ ಗುರುತಿಸಿಕೊಳ್ಳುವ ಬದಲು ಅನ್ಯನಾಗಿ ವಿಶೇಷ ಜೀವಿಯೆಂಬಂತೆ ಬಿಂಬಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಹುಟ್ಟು ಸಹಜವಾದುದು ಅದನ್ನು ಆಚರಿಸಿಕೊಳ್ಳುವ ಮೂಲಕ ಆತ್ಮರತಿಗೆ ಮೂಲವಾದ ಅಹಂಕಾರದ ವಿಜೃಂಭಣೆ ಮಾಡಬಾರದಲ್ಲವೇ?

ಒಂದು ಗಿಡದ ಜೀವನದಂತೆಯೇ ಅಲ್ಲವೆ ಮಾನವನ ಜೀವನ ಕೂಡ?

ತೊಗರಿ ಹೊಲದ ಗಿಡಗಳೇ
ಹುಟ್ಟುವುದು ಬೆಳೆವುದು
ಹೂವು ಕಾಯಿ ಬಿಡುವುದು
ಒಣಗಿ ಉರುವಲಾಗುವುದು
ವರುಷ ವರುಷವೂ ಇಷ್ಟೇ
ದುಡಿದು ಮಣ್ಣು ಸೇರುವುದು

ತೊಗರಿ ಹೊಲದ ಗಿಡಗಳೇ
ಬೆಳೆಸಿದವನೆ ಬಿಡಿಸುವನು
ಮನೆಯ ಮಂದಿ ಸಾಕುವನು
ಮರಿ ಮಕ್ಕಳು ಮಾಡುವನು
ವರುಷ ವರುಷವೂ ಇಷ್ಟೇ
ಇಡೀ ಸಂತತಿ ಮೀಸಲವನಿಗೆ

ತೊಗರಿ ಹೊಲದ ಗಿಡಗಳೇ
ಹಸಿಕಾಳು ಒಣ ಬೇಳೆ ಕಾಳು
ತೂಗಿ ತೂಗಿ ಮಾರುವವನು
ಬ್ಯಾಂಕಿನಲ್ಲಿ ಗಂಟಿಡುವನು
ವರುಷ ವರುಷವೂ ಇಷ್ಟೇ
ನಿನ್ನ ಬದುಕನವನುಣ್ಣುವನು

ತೊಗರಿ ಹೊಲದ ಗಿಡಗಳೇ
ಹುಟ್ಟುವುದು ಬೆಳೆಸುವುದು
ಕೈಗೆ ಬಂದ ಫಸಲನೆಲ್ಲ
ದಾನ ಮಾಡಿ ಬಿಡುವುದು
ಆಗಲಿ ಹೊರಟುಬಿಡುವುದು
ವರುಷ ವರುಷವೂ ಇಷ್ಟೇ
ಆರೂ ಇಲ್ಲ ಮೂರೂ ಇಲ್ಲ

ವರುಷ ವರುಷವೂ ಹುಟ್ಟಿ ಸತತ ಬೆಳೆಸು ತೆಗೆವುದು
ಬೆಳೆಸಿದವಗೆ ಬಿಡುವುದು
ವಂಶವಿಡೀ ಬೆಳೆಸಿದವಗೆ ಮೀಸಲಿಟ್ಟು ದುಡಿವುದು
ವರುಷ ವರುಷವೂ ಇಷ್ಟೇ
ಏರಿಳಿತವೇನೇನೂ ಕಾಣೆ
ತೊಗರಿಹೊಲದ ಗಿಡಗಳೇ

‍ಲೇಖಕರು avadhi

5 November, 2019

1 Comment

  1. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading