ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!

ಆರತಿ ಎಚ್ ಎನ್

ನನ್ನೊಳಗಿನ ವೇದಿಕೆಯ ಮೇಲೆ
ರಾಕ್ಷಸಿ ತಲೆಗೆದರಿ ಕುಣಿಯುವಾಗ
ನನ್ನ ಬುದ್ಧಿ ಥೇಟ್
ರಸ್ತೆ ನಾಯಿಯ ಹಾಗೆ
ಹುಚ್ಚು ಹತ್ತಿ ಓಡುತ್ತದೆ.

ಏಕಾಏಕಿ ನೆತ್ತಿಗೆ ಪಿಸ್ತೂಲು ಹಿಡಿದಂತೆ
ಚಡಪಡಿಸುತ್ತಾ ಉಸಿರು,
ಅಂಕೆಗೆ ಬಾರದೆ ಬೇಕಾಬಿಟ್ಟಿ
ಚೆಲ್ಲಾಡಿ ತುಳುಕುತ್ತದೆ.

ಬಣ್ಣದ ಬಾಟಲಿನಲ್ಲಿ
ತುಂಬಿಟ್ಟ ಪೆಟ್ರೋಲು ಬಾಂಬಿನಂತೆ
ನೋಟಗಳ ಹಸಿವು
ಭಗ್ಗನೆ ಕಣ್ಣೆದುರೇ ಉರಿದು
ಬೂದಿಯಾಗುತ್ತದೆ.

ಬಿಸಿಲು ತುಂಡುಗಳೆಲ್ಲಾ
ಕನ್ನಡಿ ತುಣುಕುಗಳಷ್ಟೆ.
ಕನಸಿನ ಬೀಜವು ಮೊಳೆತು,
ಮುತ್ತಿಡಲು ಮುಂಚಾಚಿದ ತುಟಿಗಳಲ್ಲಿ ಎತ್ತರದ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಂತಿದೆ.

ಝೀರೋ ಕ್ಯಾಂಡ್ಲ್ ಬಲ್ಬ್ ನಲ್ಲೂ
ನಿನ್ನ ಬೆಳಕು ಸಹಸ್ರಸೂರ್ಯನಂತೆ
ಕಣ್ಣು ಚುಚ್ಚುವಾಗ
ಹಠಾತ್ತನೆ ಸಿಡಿಲು ಬಡಿಯುತ್ತದೆ.

ಅಂಗ ನುಂಗಿದ ಹಕ್ಕಿಯಂತೆ
ಉಡಿಗೆ ಅನುಮಾನ
ಕಟ್ಟಿಕೊಂಡವರ ಮಧ್ಯೆ
ಈ ಕ್ರೂರಜಗತ್ತಿಗೆ,
ಪ್ರೀತಿಯ ಕರುಣಾಳು ಬೆಳಕು ಒಳ ಬರಲಾಗದೆ
ಹೊಸಿಲಲ್ಲೇ
ಬೆವೆತು ಬಳಲಿ ಹೋಗುತ್ತದೆ…

‍ಲೇಖಕರು Avadhi

3 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading