ಆಮ್ಲಜನಕ ಎಂಬ ಪ್ರಾಣವಾಯುವಿನ ಸುತ್ತ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ʻನೋಡು ಎಂಥಾ ದುರವಸ್ಥೆ ಬಂತು ನೋಡು ಮನುಷ್ಯಂದು. ಹೀಗೆ ಮನೆಯೊಳಗೇ ಕೂತು ಆಕ್ಸಿಜನ್‌ ಲೆವಲ್‌ ಪದೇ ಪದೇ ಚೆಕ್‌ ಮಾಡಿಕೊಳ್ಳುವ ಪರಿಸ್ಥಿತಿ ಬಂತಲ್ಲಾʼ ಎಂದೆ. ಮಹೇಶ ಪ್ರತಿ ಎರಡ್ಮೂರು ಗಂಟೆಗೊಮ್ಮೆ ಕೋಣೆಯ ಹೊರಗಡೆ ನಿಂತು ʻಎಷ್ಟಿದೆ?ʼ ಅಂತ ಕೇಳುತ್ತಿದ್ದ.  ಒಂದು ಕಡೆ ನೆಲೆ ನಿಲ್ಲದ ಮೇಲೆ ಕೆಳಗೆ ಓಡುತ್ತಿದ್ದ ನನ್ನ ಈ ನಂಬರನ್ನು ಹೇಳೋದು ಹೇಗಪ್ಪಾ ಎಂದು ನಾನು ತಲೆ ಕೆಡಿಸಿಕೊಳ್ಳುತ್ತಿದ್ದೆ. ಸುಸ್ತಾಗಿ ಮಲಗಿ ಉಸಿರು ಬಿಟ್ಟುಕೊಂಡು, ʻಈ ಆಕ್ಸಿಮೀಟರ್‌ಗೇ ಏನೋ ಪ್ರಾಬ್ಲಂ ಕಣೋ. ಒಂದು ಕಡೆ ನಿಲ್ಲೋದೇ ಇಲ್ಲ ಇದುʼ ಎನ್ನುತ್ತಿದ್ದೆ.

೯೫ರಿಂದ ಶುರುವಾಗಿ ಒಂದೊಂದೇ ನಂಬರು ರಪರಪನೆ ಕೆಳಗಿಳಿದು ಮತ್ತೆ ಮೇಲೇರಿ ವಿಚಿತ್ರವಾಗಿ ಕುಣಿಯುತ್ತಿತ್ತು. ಇಲ್ಲಿ ನನ್ನ ಆಮ್ಲಜನಕ ಮಟ್ಟ ಕೆಳಗಿಳಿಯುವುದಕ್ಕೂ, ಆ ಕಡೆ ಮಹೇಶನ ಪಲ್ಸ್‌ ಮೇಲೇರಿ ಕೆಂಪುದೀಪ ಬೆಳಗುವುದಕ್ಕೂ ಸರಿಹೋಗುತ್ತಿತ್ತು. ಅದೊಂದು ವಿಚಿತ್ರ ಸಂಕಟ. ಹೊರಗಡೆ ಎಲ್ಲೂ ಆಸ್ಪತ್ರೆ, ಬೆಡ್‌ ಖಾಲಿ ಇಲ್ಲವೇ ಇಲ್ಲ ಎಂಬ ಆ ಪರಿಸ್ಥಿತಿಯಲ್ಲಿ ಕೋವಿಡ್‌ ಪಾಸಿಟಿವ್‌ ಆದವರ ಮಾನಸಿಕ ಸ್ಥೈರ್ಯವನ್ನು ನಿಜಕ್ಕೂ ಪರೀಕ್ಷಿಸುವಂತಿತ್ತು.

ಅಂತೂ ಇಂತೂ ಹೇಗೋ ಒಂದು ಸಿಲಿಂಡರ್‌ ಬಂತು ಎಂಬಲ್ಲಿಗೆ ಮನೆಯಲ್ಲಿರುವವರಿಗೆ ಕೊಂಚ ನಿರಾಳವಾಯಿತು. ಆ ಕ್ಷಣಕ್ಕೆ ಮಾಡುವಂಥ ದಾರಿ ಇದ್ದದ್ದು ಅದೊಂದೇ. ಅದೂ ಸಿಗುವುದು ಸುಲಭವಲ್ಲ ಎಂಬಂಥ ಸ್ಥಿತಿಯಲ್ಲಿದ್ದಾಗ ಮನೆಯವರೆಗೂ ತಂದುಕೊಟ್ಟು ಹೋದವರನ್ನು ಅದಕ್ಕಾಗಿ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ಇರಲಿ. ʻಮನೆಯೊಳಗೇ ಸಿಲಿಂಡರ್‌ ಬಂತು ಮಾರಾಯಾ, ಬಾ ಎವರೆಸ್ಟ್‌ ಹತ್ತುವʼ ಎಂದು ತಮಾಷೆ ಮಾಡಿದೆ. ಇಬ್ಬರೂ ನಕ್ಕೆವು. ʻತೀರಾ ಎವರೆಸ್ಟ್‌ ಅಲ್ಲದಿದ್ದರೂ ಬೇಸ್‌ ಕ್ಯಾಂಪ್‌ ಫೀಲಿಂಗ್‌ ಅಂತೂ ಇದೆ ಕಣೋʼ ಎಂದೆ. ʻನೀ ಸುಮ್ಮನೆ ಮಲಕ್ಕೋʼ ಎಂದ. ಹೀಗೆ ಹೇಳಿ ಎರಡು ದಿನಕ್ಕೆ ಅವನೂ ಜ್ವರ ಅಂಟಿಸಿಕೊಂಡು ಬಿಟ್ಟಿದ್ದ.

ಅಂಥ ಕ್ಷಣದಲ್ಲಿ, ಇಂಥ ನಗು, ಕನಸು ಎರಡೂ ಅಷ್ಟೇ ಮುಖ್ಯವಿತ್ತು. ಎಷ್ಟೋ ಮಂದಿ ಇದಕ್ಕಿಂತ ಅತೀ ಕೆಟ್ಟ ಪರಿಸ್ಥಿತಿಯಲ್ಲಿ ಆಸ್ಪತ್ರೆ ಅಲೆಯುವುದು, ಸಣ್ಣ ಸಣ್ಣ ವಯಸ್ಸಿನವರೆಲ್ಲ ಉಸಿರಾಟದ ತೊಂದರೆ ಅನುಭವಿಸಿ ಪ್ರಾಣಬಿಡುವುದು, ಈಗ ಸರಿ ಇದ್ದವರು ಮಾರನೇ ದಿನ ಇಲ್ಲ ಎಂದಾಗುವುದು, ಹತ್ತಿರದ ಯಾರ್ಯಾರೋ ಆಸ್ಪತ್ರೆ ಒದ್ದಾಡುವುದು… ಇದನ್ನೆಲ್ಲ ನೋಡ್ತಾ ಇದ್ರೆ, ಛೇ ಎಂಥಾ ಅವಸ್ಥೆ ಬಂತಪ್ಪಾ ಇದು ಎಂದು ಆರೋಗ್ಯವಾಗಿ ಮನೆಯಲ್ಲಿ ಕೂತಿದ್ದೋರಿಗೂ ಅನಿಸಿರುತ್ತದೆ. ಇನ್ನು ಉಳಿದವರ ಮಾತು ಯಾಕೆ? ಇನ್ನು ಕೆಲವು ಕರುಳು ಹಿಂಡುವ ವಿಡಿಯೋಗಳನ್ನು ನೋಡಿದರಂತೂ… ಹೇಳುವುದಕ್ಕೇ ಕಷ್ಟವಾಗುತ್ತದೆ. ನೋಡೋದಕ್ಕೇ ಆಗಲ್ಲ ಎಂದು ಅರ್ಧದಲ್ಲೇ ನಿಲ್ಲಿಸಿಬಿಡುತ್ತಿದ್ದೆ. ಅದು ಆಗ ಮಾಡಿದ ಬೆಸ್ಟ್‌ ಕೆಲಸ.

ಈ ಆಕ್ಸಿಮೀಟರ್‌ ಎಂಬ ಉಪಕರಣ, ಕೋವಿಡ್‌ ಹೆಸರಿನಲ್ಲಿ ಮನೆಮನೆಗೂ ಬಂದು ವರ್ಷವಾಗುತ್ತಾ ಬಂತು.‌ ರುಪಿನ್‌ ಪಾಸ್‌, ಚಾದರ್‌, ಸ್ಟಾಕ್‌ ಕಂಗ್ರಿ ಮತ್ತಿತರ ಹೈ ಆಲ್ಟಿಟ್ಯೂಡ್‌ ಹಿಮಾಲಯನ್ ಚಾರಣಗಳ ಕನಸು ಕಾಣುವಾಗಲೆಲ್ಲ ಈ ಆಕ್ಸಿಮೀಟರ್‌ ಹೆಸರು ಕೇಳಿ ಸುಮ್ಮನಾಗುತ್ತಿದ್ದೆ. ಸಾಧಾರಣವಾಗಿ, ಎಎಂಎಸ್‌ (ಅಕ್ಯೂಟ್‌ ಮೌಂಟೆನ್‌ ಸಿಕ್‌ನೆಸ್‌) ಎಂಬ ಹೆಸರು ಚಾರಣಿಗರಿಗೆ, ಇಂಥ ಜಾಗಗಳಿಗೆ ಹೋಗುವ ಪ್ರವಾಸಿಗರಿಗೆ ಕೇಳಿ ಗೊತ್ತಿರುತ್ತದೆ. ಸಮುದ್ರ ಮಟ್ಟದಿಂದ ಒಂದು ನಿರ್ಧಿಷ್ಟ (೮೦೦೦ ಅಡಿ ಎತ್ತರಕ್ಕೂ ಮೇಲೆ) ಎತ್ತರಕ್ಕಿಂತ ಹೆಚ್ಚು ಮೇಲೇರುತ್ತಾ ಹೋದಂತೆ, ವಾತಾವರಣದಲ್ಲಿ ಕಡಿಮೆಯಾಗುತ್ತಾ ಹೋಗುವ ಆಮ್ಲಜನಕದ ಪ್ರಮಾಣ, ಗಾಳಿಯಲ್ಲಿ ಕಡಿಮೆಯಾಗುವ ಒತ್ತಡದಿಂದಾಗಿ ದೇಹದ ಮೇಲಾಗುವ ಪರಿಣಾಮ ದೊಡ್ಡದು.

ಆಗ ನಮ್ಮ ದೇಹ ಕ್ಷಮತೆ ಪರಿಕ್ಷಿಸಿಕೊಳ್ಳಲು ಬಳಸುವ ಒಂದು ಉಪಕರಣವೆಂದಷ್ಟೆ ಗೊತ್ತಿತ್ತು. ಈ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಬಂದಂತೆಲ್ಲ, ತಲೆಸುತ್ತು, ಸುಸ್ತು, ಒಂದು ಹೆಜ್ಜೆ ಮುಂದಿಡಲಾಗದಂಥ ಸ್ಥಿತಿ ಮುಂದುವರಿದರೆ, ಪ್ರಾಣಕ್ಕೂ ಕುತ್ತು ಬರುತ್ತದೆ. ಆಗ ಎತ್ತರ ಪ್ರದೇಶದಿಂದ ಕೆಳಗಿಳಿಯುವುದೊಂದೇ ದಾರಿ. ಎಂಥ ಅನುಭವಿ ಚಾರಣಿಗರಿಗೂ ಇದೊಂದು ವಿಚಾರದ ಬಗ್ಗೆ ಸದಾ ಎಚ್ಚರ ಇದ್ದೇ ಇರುತ್ತದೆ. ʻನನಗೆ ಇಂತಹ ಎತ್ತರಗಳನ್ನೆಲ್ಲ ಹಲವು ಬಾರಿ ಏರಿ ಗೊತ್ತು, ಹಾಗಾಗಿ ಸಮಸ್ಯೆಯೇ ಇಲ್ಲ ಎಂದು ತನ್ನ ಬಗ್ಗೆ ಅತಿಯಾದ ಆತ್ಮ ವಿಶ್ವಾಸವೂ ಇಲ್ಲಿ ಸಲ್ಲ. ಎಷ್ಟೋ ಬಾರಿ ಅನುಭವಿಗಳೂ ಇಂಥದ್ದರಲ್ಲೇ ಸೋತಿದ್ದಕ್ಕೆ ನಿದರ್ಶನಗಳಿವೆ. ಏರೋದಕ್ಕೆ ಸವಾಲಾಗಿ ನಿಲ್ಲುವ ಈ ಎಎಂಎಸ್‌ ಮಾತ್ರ, ಈ ಕೋವಿಡ್‌ ಕಾಲದಲ್ಲಿ, ಇದೇ ಆಕ್ಸಿಮೀಟರ್‌ ಬೆರಳಿಗೆ ಸಿಕ್ಕಿಸುವಾಗಲೆಲ್ಲ ಹಲವಾರು ಘಟನೆಗಳ ಮೂಲಕ ಒಂದೊಂದಾಗಿ ನೆನಪಾದವು.

****

ಸುಮಾರು ವರ್ಷಗಳ ಕೆಳಗೆ. ಅದು ನಮ್ಮ ಪಕ್ಕಾ ಬ್ಯಾಕ್‌ಪ್ಯಾಕಿಂಗ್‌ ಟ್ರಿಪ್ಪು. ನಮ್ಮ ಕರ್ನಾಟಕದ ಬಸ್ಸುಗಳು, ಸಾರಿಗೆ ಎಷ್ಟು ಅದ್ಭುತವಾಗಿವೆ ಎಂದು ತಿಳಿಯಬೇಕಾದರೆ ನಾವು ನಮ್ಮ ದೇಶದ ಉತ್ತರದ ನಾಲ್ಕೈದು ರಾಜ್ಯ ಸುತ್ತಿದರೆ ಸಾಕು. ಯಾಕೆ ಉತ್ತರದ ಮಂದಿ ಬೆಂಗಳೂರಿಗೆ ಮುಗಿಬೀಳುತ್ತಾರೆ ಅಂತ ಗೊತ್ತಾಗಲೂ ಇದು ಸಾಕು. ಇದು ವಿಷಯಾಂತರವಾಯಿತು. ಈಗ ಹೇಳಹೊರಟಿರುವ ವಿಷಯ ಬೇರೆ. ಹಾಗೂ ಈ ಸಾರಿಗೆ ವಿಷಯ ಇನ್ನೊಮ್ಮೆ ಮಾತಾಡಿದರೂ ನಡೆದೀತು. ಇರಲಿ.

ನಮ್ಮ ಊರಿನ ದಿನನಿತ್ಯ ಓಡಾಡುವ ಪಕ್ಕಾ ಲೋಕಲ್‌ ಸರ್ಕಾರಿ ಬಸ್ಸಿಗಿಂತ ಕೆಟ್ಟದಾಗಿತ್ತು ನಾವು ಬುಕ್‌ ಮಾಡಿದ ಹಿಮಾಚಲದ ಲಕ್ಷುರಿ ಬಸ್ಸು. ಸೀಟೇ ತೂತು. ತೂತಿನೊಂದಿಗೆ ರಾಜಿ ಮಾಡಿಕೊಂಡು ಕೂತಿದ್ದೇ ಹೆಚ್ಚು. ಇಂತಹ ಬಸ್ಸಿನಲ್ಲಿ ಜುಜುಬಿ ೨೦೦ ಪ್ಲಸ್‌ ಕಿಮೀಯನ್ನು ನಾವು ದಿನವಿಡೀ ಅಂದರೆ ಸುಮಾರು ೧೫ ಗಂಟೆ ಕ್ರಮಿಸಬೇಕಿತ್ತು. ಯಾಕೆಂದರೆ, ಆ ರಸ್ತೆಯೇ ಹಾಗಿತ್ತು. ಬೆಟ್ಟ ಹತ್ತಿಳಿದು ಕಣಿವೆ ದಾಟಿಸಿಕೊಂಡು ಬಸ್ಸು ಓಡಿಸುವುದೇ ದೊಡ್ಡ ಸಾಧನೆ ಇಲ್ಲಿ. ಇಂತಹ ಬಸ್ಸಿನಲ್ಲಿ ಜೀವ ಹಿಡಿದುಕೊಂಡು ಕೂತಿದ್ದೆವು. ಮಧ್ಯಾಹ್ನ ದಾಟಿ ಸಂಜೆಯಾಗುತ್ತಾ ಬಂದಿತ್ತು.

ಬಹುಶಃ ಕುಂಝುಂ ಪಾಸ್‌ ಎಂಬ ಜಾಗ ಇರಬೇಕು. ಸಮುದ್ರ ಮಟ್ಟದಿಂದ ಬಸ್ಸು ಬಹುಶಃ ೧೩,೫೦೦ ಅಡಿ ಎತ್ತರದಲ್ಲಿತ್ತು. ಇಲ್ಲಿ ಯಾವ ಸ್ಟೇಷನ್ನು ಇಲ್ಲದಿದ್ದರೂ, ಬಸ್ಸೊಮ್ಮೆ ನಿಲ್ಲುತ್ತದೆ. ಪರ್ವತ ದೇವಿಗೊಮ್ಮೆ ಹರಕೆ ಸಂದಾಯ ಮಾಡಿಕೊಂಡು ಭಕ್ತಿಯಿಂದ ಕೈಮುಗಿದು ನಾಣ್ಯ ಅಂಟಿಸಿ ಹೋಗುವುದು ಈ ದಾರಿಯಾಗಿ ಹೋಗುವ ಎಲ್ಲ ವಾಹನಗಳ ಚಾಲಕರಿಗೂ ಅಭ್ಯಾಸ. ಇಲ್ಲಿ ಜೀವ ನಮ್ಮ ಕೈಯಲ್ಲಿರೋದಿಲ್ಲ ಎಂಬ ಸತ್ಯ ಎಲ್ಲರಿಗೂ ಅರಿವಿರುತ್ತದೆ.

ಇಂತಹ ಜಾಗದಲ್ಲಿ ಬಸ್ಸು ನಿಲ್ಲಿಸಿದ್ದಕ್ಕೂ ನನಗೆ ತಲೆ ಸುತ್ತಿ ಸುತ್ತಿ ನಿತ್ರಾಣ ಶುರುವಾಗಿದ್ದಕ್ಕೂ ಸರಿಯಾಗಿತ್ತು. ಉಸಿರಾಟ ಕಷ್ಟವೆನಿಸುವಂತೆ ಅನಿಸದಿದ್ದರೂ ಏನಾಗುತ್ತಿದೆ ಎಂದು ಹೇಳಲಾಗದ ಪರಿಸ್ಥಿತಿಯದು. ಫೋಟೋ ತೆಗೆವ ಮಾತು ಹಾಗಿರಲಿ, ಕತ್ತಿನಲ್ಲಿ ನೇತಾಡಿಸಿಕೊಂಡ ಕ್ಯಾಮರಾ ಎತ್ತಲೂ ಶಕ್ತಿ ಇರಲಿಲ್ಲ. ಬಸ್ಸಿಳಿದು ಆ ಗುಡಿಯ ಕಟ್ಟೆಯ ಮೇಲೆ ನಿತ್ರಾಣಿಯಾಗಿ ಕೂತಿದ್ದೆ. ಕಂಡಕ್ಟರು ಆ ಗುಡಿಗೆ ಸುತ್ತಿ ನಾಣ್ಯ ಅಂಟಿಸುತ್ತಿದ್ದಾತ ನನ್ನ ನೋಡಿ ಏನಾಯಿತು ಎಂದು ಹತ್ತಿರ ಬಂದ. ʻಬಹುತ್‌ ಊಪರ್‌ ಆಯೇಂ ಹೆ ನಾ! ಲೆಹ್ಸನ್‌ ಖಾಯಿಯೇ. ಸಬ್‌ ಠೀಕ್‌ ಹೋ ಜಾಯೇಗಾʼ ಎಂದ.

ʻಹೌದಲ್ವಾ! ನೆನಪೇ ಆಗಲಿಲ್ಲʼ ಎಂದುಕೊಂಡು, ಬ್ಯಾಗು ತೆಗೆದುಕೊಂಡು ಹಸಿ ಬೆಳ್ಳುಳ್ಳಿಯೆಂಬ ಆ ಕೆಟ್ಟ ವಾಸನೆಯನ್ನು ಜಗಿಜಗಿದು ನುಂಗಿದೆ. ಹೊರಡುವ ಮೊದಲೇ, ಈ ಅಕ್ಯೂಟ್‌ ಮೌಂಟೆನ್‌ ಸಿಕ್‌ನೆಸ್‌ಗೆ ಮನೆಮದ್ದುಗಳೇನು ಎಂದು ನೆಟ್ಟಿನಲ್ಲಿ ತಡಕಾಡಿ, ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಸುಮ್ಮನೆ ಇರಲಿ ಎಂದು ಬ್ಯಾಗಿನಲ್ಲಿ ಹಾಕಿಕೊಂಡಿದ್ದೆ. ಆತ ಹೇಳಿದ್ದರಿಂದ ನೆನಪಾಗಿ ಬಾಯೊಳಗೆ ಹಾಗೆಯೇ ಬಹಳ ಹೊತ್ತು ಇಟ್ಟುಕೊಂಡಿದ್ದೆ.  ಬಸ್ಸು ಸಂಜೆ ಆರರ ಹೊತ್ತಿಗೆ ಸ್ಪಿತಿಯ ಕಾಝಾ ತಲುಪುವಷ್ಟರಲ್ಲಿ ನನಗೆ ಸರಿಯಾಗಿತ್ತು.

****

ಇದು ಇನ್ನೊಂದು ಚಾರಣದ ಕಥೆ. ಚಾರಣದ ಮೊದಲ ದಿನ. ಸಮ್ಮಿಟ್‌ ಎಷ್ಟು ಎತ್ತರದಲ್ಲಿದೆ ಎಂದೆಲ್ಲ ಲೆಕ್ಕಾಚಾರ ಹಾಕಿ ಖಂಡಿತ ಈ ಜಾಗದಲ್ಲಿ ಎಎಂಎಸ್‌ ಸಮಸ್ಯೆ ಬರಬಹುದು ಎಂದುಕೊಂಡು ಹೊರಡುವ ಮೊದಲು ವೈದ್ಯರನ್ನೂ ಸಂಪರ್ಕಿಸಿ, ಪರ್ವತದಲ್ಲಿ ಇಂತಿಂಥ ಸಮಸ್ಯೆಯಾದರೆ ಏನೇನು ಔಷಧಿಗಳಲೆಲ್ಲ ತೆಗೆದುಕೊಳ್ಳಬೇಕು ಎಂದು ಒಂದು ಲಿಸ್ಟನ್ನೇ ಮಾಡಿ, ಅದರ ಪ್ರಕಾರ ಔಷಧಿಗಳನ್ನೂ ಹೊತ್ತುಕೊಂಡು ಬಹಳ ತಯಾರಿ ಮಾಡಿಕೊಂಡು ಹೊರಟಿದ್ದೆವು.

ಮೊದಲ ದಿನದ ಕ್ಯಾಂಪಿಂಗ್‌ ಸೈಟಿನಲ್ಲಿ, ದೂರದಲ್ಲೇನೋ ಕಪ್ಪಗೆ ಬಿದ್ದುಕೊಂಡಿರುವುದು ಕಾಣಿಸಿತು. ಏನದು ಎಂದು ಸ್ವಲ್ಪ ಹತ್ತಿರ ಹೋಗಿ ನೋಡಿದರೆ ಒಂದು ಹಸು, ಏಳಲು ಶಕ್ತಿಯಿಲ್ಲದೆ ಬಿದ್ದಿತ್ತು. ನಮ್ಮ ಜೊತೆ ಬಂದಿದ್ದ ಗೈಡ್‌ ಪಶುವೈದ್ಯ ಬೇರೆ. ಅದೇನು ಅಂತ ನೋಡುವೆ ಎಂದು ಹತ್ತಿರ ಹೋಗಿ ನೋಡಿ ಮುಟ್ಟಿ, ನೀರು ಕುಡಿಸಿ ಬಂದರು. ಹಸು ತುಂಬಾ ಸೋತಿದೆ, ಬದುಕಿ ಉಳಿಯುವುದು ಕಷ್ಟ. ಇಲ್ಲಿಂದ ಮೈಲಿಗಟ್ಟಲೆ ಎತ್ತಿಕೊಂಡು ಹೋಗಿ ಅಲ್ಲಿಗೆ ತಲುಪುವಷ್ಟೂ ಸಮಯ ಇಲ್ಲ. ಹೆಚ್ಚೆಂದರೆ ಒಂದೆರಡು ಗಂಟೆ ಎಂದು ಕೈಚೆಲ್ಲಿದರು. ದೂರದಿಂದ ದನದ ಹೊಟ್ಟೆ ಉಬ್ಬರಿಸಿ ಉಬ್ಬರಿಸಿ ಮೇಲೇರಿ ಇಳಿಯುವುದು ಕಾಣುತ್ತಿತ್ತು.

ಕತ್ತಲಾಯಿತು. ಅದ್ಯಾಕೋ ಆ ದಿನ ನನಗೂ ಅತೀ ಕೆಟ್ಟ ದಿನವಾಗಿತ್ತು. ಏನಾಗುತ್ತಿದೆ ಎಂದು ಹೇಳಲಾಗದ ವಿಚಿತ್ರ ಸ್ಥಿತಿಯಲ್ಲಿದ್ದೆ. ತಲೆ ಸುತ್ತು, ನಿತ್ರಾಣ. ಬಹುಶಃ ಎಎಂಎಸ್‌ ಇರಬಹುದೇ ಎಂದು ಡೌಟಾಗಿ, ಮೊದಲೇ ತಂದಿದ್ದ ಮಾತ್ರೆ ನುಂಗಿದೆ. ಕಣ್ಣೆದುರು ಅಲ್ಲೇ  ನಮ್ಮ ಟೆಂಟಿನಿಂದ ಕಣ್ಣಳತೆಯಲ್ಲಿ ಬಿದ್ದಿದ್ದ ಹಸುವೇ ಕಣ್ಣ ಮುಂದೆ ಬರುತ್ತಿತ್ತು. ನಿದ್ದೆಯೇ ಬರದ ಕಟುಚಳಿಯ ಕೆಟ್ಟ ರಾತ್ರಿಯದು. ನನಗೂ ಆ ಹಸುವಿಗೂ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸವೇ ಇಲ್ಲವೇನೋ ಅನಿಸುವಂಥ ಯೋಚನೆಗಳು.. ಮಧ್ಯರಾತ್ರಿಯಷ್ಟರಲ್ಲಿ ಸ್ವಲ್ಪ ಚೈತನ್ಯ ಬಂತು. ಎದ್ದು ನಡೆಯಬಲ್ಲೆ ಅನಿಸಿತು. ಟೆಂಟಿನ ಪರದೆ ಸರಿಸಿ ನೋಡುವ ಧೈರ್ಯವೇ ಆಗಲಿಲ್ಲ. ಕತ್ತಲೋ ಕತ್ತಲು. ಹಸು ಉಸಿರಾಡುತ್ತಿರಬಹುದೇ ಎಂಬ ಪ್ರಶ್ನೆಗಳು… ಹೇಗೋ ರಾತ್ರಿ ಕಳೆದು ಬೆಳಕು ಹರಿಯಿತು. ಕಣ್ಣು ಪರದೆಯಾಚೆಗೆ ಕಾಣುತ್ತಿದ್ದ ಕಪ್ಪಗೆ ಬಿದ್ದ ದೇಹದಾಚೆಗೇ ಹೋಗುತ್ತಿತ್ತು.

ಆ ದೇಹದಲ್ಲಿ ಎತ್ತರಕ್ಕಿದ್ದ ಹೊಟ್ಟೆ ಮೇಲೇರಿ ಇಳಿಯುವುದು ನಿಂತಿತ್ತು. ಅದಾಗಲೇ ಅಲ್ಲಿ ಹೋಗಿ ನೋಡಿಕೊಂಡು ಬಂದ ಗೈಡ್‌, ಜೀವ ಹೋಗಿದೆ ಎಂಬಂತೆ ಸನ್ನೆ ಮಾಡಿ ತೋರಿಸಿದರು. ಯಾಕೋ ಅತೀವ ವೇದನೆಯಿಂದ ಹೊಟ್ಟೆ ತೊಳಸುವಂತಾಯ್ತು. ಆ ಹಸುವಿನ ಜಾಗದಲ್ಲೊಬ್ಬ ಮನುಷ್ಯ ಇದ್ದಿದ್ದರೆ ಎಂಬ ಯೋಚನೆಯಾಯಿತು. ಎವರೆಸ್ಟ್‌ ಏರಿದವರ ಇಂತಹ ಸನ್ನಿವೇಶದ ಕಥೆಗಳೆಲ್ಲ ನೆನಪಾಗಿಬಿಟ್ಟವು.

****

ಅದೊಂದು ದಿನ ಒಂದೆರಡು ವರ್ಷದ ಹಿಂದೆ ದೆಹಲಿಯಲ್ಲೊಂದು ಚಾರಣಿಗ ಸಮಾನ ಮನಸ್ಕರ ಭೇಟಿ ಕಾರ್ಯಕ್ರಮವಿತ್ತು. ಎಷ್ಟೆಷ್ಟೋ ಹಿಮಾಲಯ ಚಾರಣ ಮಾಡಿ ಬಂದವರಿದ್ದವರು. ಸಣ್ಣಪುಟ್ಟ ಚಾರಣ ಮಾಡಿದವರೂ ಇದ್ದರು. ಮೊದಲ ಭೇಟಿ ಕಾರ್ಯಕ್ರಮವಿದು. ವಾಟ್ಸಾಪ್‌ ಗುಂಪೊಂದು ಹುಟ್ಟಿಕೊಂಡು, ಒಂದೇ ವಿಚಾರದಲ್ಲಿ ಆಸಕ್ತಿ ಇರುವ, ಒಬ್ಬರಿಗೊಬ್ಬರು ಇಂಥ ಸಂದರ್ಭದಲ್ಲಿ ಸಹಾಯ ಮಾಡಿಕೊಳ್ಳುವ ಪ್ರಯತ್ನವಾಗಿತ್ತದು. ನಾವೂ ಮೂರೂ ಜನ ಹೋಗಿದ್ದೆವು, ಪುಟಾಣಿ ಮಗನೂ ಸೇರಿ. ಆಗವನಿಗೆ ೬ ದಾಟಿಯೂ ಇರಲಿಲ್ಲ.

ಎಂಟ್ಹತ್ತು ಹಿಮಾಲಯ ಸುತ್ತಮುತ್ತಲ ಸಣ್ಣಪುಟ್ಟ ಚಾರಣಗಳೂ ಸೇರಿದಂತೆ, ಒಂದೆರಡು ಅವನ ಪ್ರಾಯಕ್ಕೆ ತುಸು ದೊಡ್ಡದೇ ಎನಿಸುವ ನಾಲ್ಕೈದು ದಿನಗಳ ಚಾರಣಗಳನ್ನು ಮಾಡಿದ್ದ ಅವನಿಗೆ ಚಾರಣ ಎಂದರೆ ಪುಟಿದೇಳುವ ಹುಮ್ಮಸ್ಸು. ಆಗಷ್ಟೇ ಐದು ದಿನಗಳ ಸುಮಾರು ೫೦ ಕಿಮೀಗಳ ಚಾರಣವೊಂದನ್ನು ಈ ಪುಟಾಣಿಯ ಜೊತೆಗೆ ಮಾಡಿಕೊಂಡು ಬಂದಿದ್ದೆವು. ಹೀಗಾಗಿ ನಮಗೂ ಅನುಭವಿಗಳಿಂದ ಕೇಳುವ, ನಮ್ಮದನ್ನೂ ಹಂಚಿಕೊಳ್ಳಲು ಸಾಕಷ್ಟು ವಿಚಾರಗಳಿತ್ತು.

ಆತ ಹೇಳುತ್ತಲೇ ಇದ್ದ. ನನ್ನ ಕಣ್ಣೆದುರಲ್ಲೇ ಒಬ್ಬಾತ ಏದುಸಿರು ಬಿಡುತ್ತಾ ಮೇಲೇರುತ್ತಿದ್ದ. ಆತನ ಕೈಯಲ್ಲಿ ಆಗುತ್ತಿಲ್ಲ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ನಾವೆಲ್ಲ ಕೆಲವು ಮಂದಿ ಆ ದಿನ ಅಲ್ಲೇ ನಿಲ್ಲುವ ಪ್ಲಾನಿತ್ತು. ನಿಂತೆವು. ಆತನ ಗುಂಪು ಆತನಿಂದ ಮುಂದೆ ಹೋಗಿತ್ತು ಎಂಬ ಒತ್ತಡದಲ್ಲೇ ಆತ ಮೇಲೇರುತ್ತಿರುವುದು ಗೊತ್ತಾಗುತ್ತಿತ್ತು. ಮರುದಿನ ನಾವು ನಮ್ಮ ಚಾರಣ ಶುರುಮಾಡಿ ಹೆಚ್ಚು ಸಮಯವಾಗಿರಲಿಲ್ಲ.

ನಾಲ್ಕೈದು ಮಂದಿ ಆತನನ್ನು ಹೊತ್ತೊಕೊಂಡು ಕೆಳಗಿಳಿಯುತ್ತಿದ್ದರು. ಆತನ ಸ್ಥಿತಿ ಗಂಭೀರವಾಗಿತ್ತು. ನಾವು ಚಾರಣ ಮುಗಿಸಿ ಕೆಳಗೆ ಬರುವಷ್ಟರಲ್ಲಿ ಗೊತ್ತಾಯಿತು, ಆತನಿಲ್ಲ ಎಂದುʼ ಎಂದಾತ ಹೇಳುತ್ತಲೇ ಹೋದರು. ಎತ್ತರದ ಪ್ರದೇಶಕ್ಕೆ ಹೋದ ಮೇಲೆ ನಮ್ಮ ದೇಹ ಆ ಪರಿಸರಕ್ಕೆ ಹೊಂದಿಕೊಳ್ಳಲು (ಅಕ್ಲಮಟೈಸ್) ಒಂದೆರಡು ದಿನದ ಸಮಯ ಕೊಡದೆ ಅವಸರ ಮಾಡಿದರೆ ಆಗುವ ಅನಾಹುತಗಳಿವು.

****

ಪರ್ವತಗಳು ಎಷ್ಟು ಸುಂದರವೋ, ಇವುಗಳು ಎಷ್ಟು ಅಯಸ್ಕಾಂತೀಯವೋ, ಅಷ್ಟೇ ನಿಗೂಢವೂ ನಿಜವೇ. ಕೋವಿಡ್‌ ಕಾಲದಲ್ಲಿ ಪ್ರೋನಿಂಗ್‌ ಎಂದು ಕವುಚಿ ಬಿದ್ದುಕೊಂಡಾಗಲೆಲ್ಲ ಇಂಥ ಕಥೆಗಳು ನೆನಪಿಗೆ ಬರುತ್ತಿದ್ದವು. ನಮ್ಮ ಸದ್ಯದ ಪರಿಸ್ಥಿತಿಗೂ ಇವುಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ನನಗೇನಾಗಲಿಕ್ಕಿಲ್ಲ ಎಂಬ ಹುಂಬ ಧೈರ್ಯ ಇಲ್ಲಿ ಕೆಲಸ ಮಾಡೋದಿಲ್ಲ. ಹೇಗೇ ಇದ್ದರೂ ಎಲ್ಲ ಮಾರ್ಗಸೂಚಿಗಳ ಪಾಲನೆಯೂ ಅಷ್ಟೇ ಮುಖ್ಯ.

ಎಲ್ಲ ಮುಗಿಸಿಕೊಂಡು ಹೊರಬಂದಾಗ ಇನ್ನೂ ಏಳರ ಮಗ ಹೇಳಿದ, ʻಅಮ್ಮಾ ನೀನು ಆವತ್ತು ಟ್ರೆಕ್ಕಿಂಗ್‌ನಲ್ಲೇ ಇದಕ್ಕಿಂತ ಬೆಟರ್‌ ಇದ್ದೆ. ಕೊರೋನಾದಿಂದ ಜನ ಸಾಯ್ತಾ ಇರೋದು ನೋಡಿ ನಂಗೆ ನಿಜವಾಗಿಯೂ  ಭಯ ಆಗಿಬಿಟ್ಟಿತ್ತು. ನೀ ಹೋಗಿಬಿಟ್ಟರೆ ಅಂತ ಯೋಚನೆಯೂ ಬಂದಿತ್ತು. ಈಗ ನೆಮ್ಮದಿ ಆಯ್ತುʼ ಎಂದ. ಅವನಿಗೆ ಮಾತಾಡಿದಷ್ಟೂ ಕಥೆಗಳು ಮುಗಿಯುತ್ತಿರಲಿಲ್ಲ. ಇದೇ ಹುಡುಗ, ಅಷ್ಟೂ ದಿನ ಕೋಣೆಯ ಹೊರಗಡೆಯಿಂದ ಒಮ್ಮೆಯೂ ಇಂಥ ಮಾತನಾಡಲಿಲ್ಲ! ʻಅಮ್ಮಾ, ಏನೂ ಆಗಲ್ಲ ನಿಂಗೆʼ ಎನ್ನುತ್ತಾ ದಿನಕ್ಕೊಂದು ರಟ್ಟು ಕತ್ತರಿಸಿ ಏನಾದರೊಂದು ಚಿತ್ರ ಬಿಡಿಸಿ, ಬರೆದು, ತಗೋ ನಿಂಗೆ ಅಂತ ಕ್ಯಾಚ್‌ ಎಸೆಯುತ್ತಿದ್ದ.

ಯಾಕೋ ಸಂಯುಕ್ತಾ ಪುಲಿಗಲ್‌ ಅನುವಾದದ ʻಪರ್ವತದಲ್ಲಿ ಪವಾಡʼ (ಮೂಲ ಕೃತಿ ನ್ಯಾಂಡೋ ಪೆರಾಂಡೋರ ಮಿರಾಕಲ್‌ ಇನ್‌ ದಿ ಆಂಡೀಸ್) ಪುಸ್ತಕ ಮತ್ತೆ ಮತ್ತೆ ನೆನಪಾಗುತ್ತಿದೆ. ಲೈಫು ಇಷ್ಟೇನಾ?…

…ಅಲ್ಲ!

‍ಲೇಖಕರು ರಾಧಿಕ ವಿಟ್ಲ

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ಬಹಳ ವಾಸ್ತವ ಚಿತ್ರಣ…
    ಮೇಲೆ ಹತ್ತಿ ಹೋದಂತೆ ಆಗುವ ಆಮ್ಲಜನಕ ಕೊರತೆ ಇಂದು ಭೂಮಿಯ ಮೇಲೆ ಅನುಭವಕ್ಕೆ ಬರುತ್ತಿದೆ. ನೀವು ಕೋವಿಡ್‌ ಗೆದ್ದಿರುವುದು ಸಂತೋಷ. ಚಾರಣದ ಕತೆಗಳು ಇನ್ನಷ್ಟು ಬರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: