ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಮೂರರ ದುಃಖತಪ್ತ ಮೊಮ್ಮಕ್ಕಳು ನಾವು..

ರಾಜಕುಮಾರ ಮಡಿವಾಳರ

ಸೃಜನಶೀಲತೆ-ಸಹೃದಯತೆ-ಸ್ಪಂದನೆ..

ಇವು ಮೂರು
ಕೂಡಿ ಮೂರ್ತಗೊಂಡದ್ದೆ ಜಿ.ಎಸ್.ಆಮೂರು!

ನಾನು ಒಂದ್ಸಲ ಗಿರಡ್ಡಿಯವರ ಜೊತೆ ಮಾತಾಡುವಾಗ ಸರ್ ಇಲ್ಲಿ ಕೆಲಸ ಬ್ಯಾಸರಾಗೈತಿ, ಬೆಂಗಳೂರಾಗ ಆಫರ್ ಭಾಳ ಅದಾವು ಹೊಕ್ಕೇನಿ ಅಂದ, ಏಯ್ ಹುಚ್ಚಾ ಬ್ಯಾಡಪಾ ರಾಜಕುಮಾರಾ ಬೆಂಗಳೂರಿಗೆ ಹೋಗಬ್ಯಾಡ್ರಿ, ನಮಗ ಅದನ್ನಮೋನಿ ಸುಡುಗಾಡಿದ್ದಂಗ ಹೋದಾವ್ರು ಹೊಳ್ಳಿ ಬರೂದಾ ಇಲ್ಲ! ಅಂದಿದ್ರು.. ಅದು ಅವರಿಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇಲ್ಲ ಅಂತಲ್ಲ, ಇಲ್ಲಿಂದ ಕೆಲಸ ಅಂತ ಬೆಂಗಳೂರಿಗೆ ಹೋದವರು, ವಾಪಸ್ ಇಲ್ಲಿ ಬಂದು ಹಾಲಿ ವಸ್ತಿ ಆಗಿಲ್ಲ ಅನ್ನುವುದರ ಸಣ್ಣ ಸಿಟ್ಟು.

ಅವತ್ತು…

ವಯಸ್ಸು, ಪತ್ನಿವಿಯೋಗ, ಇವೆರೆಡರ ನಡುವೆ ಮುರಿದ ಕಾಲು, ಆಮೂರರು ಬೆಂಗಳೂರು ಮನೆಗೆ ಹೊರಡಬೇಕಾಯ್ತು. ಅವರು ಹೊರಟ ದಿನ, ನನಗೆ ಗಿರಡ್ಡಿಯವರ ಮಾತು ಕವಿಯಲ್ಲಿ ಕಡ್ಡಿ ಗೀರಿದಷ್ಟು ಚರ್ ಅಂತ ಸ್ಪಷ್ಟ ಕೇಳಿಸಿ, ಎದೆಗೆ ಕೆಂಡ ಸುರುವಿತು.

ಅವರು ನೂರರ ಹತ್ತಿತ್ತರಕ್ಕೆ ಬಂದಿದ್ದರು, ವಯೋಸಹಜ ಸಾವು ಎಂದು ಬುದ್ಧಿ ಸಮಜಾಯಿಷಿ ಕೊಡುತ್ತಲೇ ಇದೆ, ಆದರೆ ಮೊನ್ನೆಯಷ್ಟೆ Prajna Mattihalli ಅವರ ಮನೆಯಲ್ಲಿ ಆಮೂರರ ಕುರಿತಾಗಿ ತುಂಬ ಹೊತ್ತು ಮಾತಾಡಿದೆವು, ಅವರು ಕೊನೆ ಕ್ಷಣದ ತನಕ ಸುಮ್ಮನೆ ಕೂತವರಲ್ಲ, ಇತ್ತಿಚೆಗೆ ಭಗವದ್ಗೀತೆ ಕುರಿತು ಮತ್ತು ಸುಮಾರು 1400 ಪುಟ ಬೃಹದ್ಗ್ರಂಥವನ್ನ ಅನುವಾದ ಕೂಡ ಮಾಡಿ ಮುಗಿಸಿದರು.

ಆಮೂರ…

ಬರೆದದ್ದು ಎಷ್ಟೋ ಅದರ ಸಾವಿರಪಟ್ಟು ಓದಿದವರು, ಒಂದು ಪದ ಕೂಡ ತೂಕ ತಪ್ಪದ ಹಾಗೆ, ಅದರ ಮೂಲ ಹುಡುಕಿ, ಅದ ಪ್ರಯೋಗಿಸಿದ ಆ ಕ್ಷಣದ ಕವಿಭಾವ ಕಂಡುಹಿಡಿದು ಆ ಕುರಿತು ಬರೆಯುತ್ತಿದ್ದರು, ಆಮೂರ ನನ್ನ ತಲೆಮಾರಿನ ಬೇಂದ್ರೆಯವರ ಸಾಕ್ಷಾತ್ಕಾರ ಮಾಡಿಸಿದವರು, ಇಡಿ ಒಂದು ಜನ್ಮ ಸುಮ್ಮನೆ ಅವರ ಎದ್ದು ಚಕ್ಕಂಬಕ್ಕಳ ಕೂತು ಅವರ ಮಾತು ಕೇಳಬೇಕು, ಅನ್ನಿಸುವಷ್ಟು ಜ್ಞಾನ ಧುಮ್ಮಿಕ್ಕು ಅವರು.

ಗುರುಗಳೆ…

ತಮ್ಮ ವಿದಾಯ ಸಂಕಟ ತಂದಿದೆ, ಹುಟ್ಟಿದವರು ಹೋಗಲೇ ಬೇಕು ನಿಜ, ನೀವು ಇಲ್ಲಿ ಈ ಧಾರವಾಡದಿಂದ ಹೋಗಬೇಕಿತ್ತು, ಇದು ನಿಮ್ಮ ಕರ್ಮ ಭೂಮಿ, ಇಲ್ಲಿ ತೆರೆದೆದೆ-ಬಿಟ್ಟ ಕಣ್ಣಲ್ಲಿ ನಿಮ್ಮನ್ನು ತುಂಬಿಕೊಳ್ಳುವ ನಾವೆಲ್ಲ ಇದಿವಿ. Hanumant V Kakhandiki ಅವರಿಗೆ ಫೋನ್ ಮಾಡಿದೆ, ಅವರು ಅಳು ನನ್ನನ್ನು ಅಳಿಸಿತು, ನಿಮ್ಮನ್ನ ಗಳಿಸಿಕೊಂಡ ನಾವು ಇಲ್ಲಿ ಉಳಿಸಿಕೊಳ್ಳದಷ್ಟು ಅಸಹಾಯಕರಾದೆವು, ಬೇಂದ್ರೆ ಕೂಡ ಹೀಗೆ ಇಲ್ಲಿ ಬದುಕಿ, ಎಲ್ಲೋ ಉಸಿರು ನಿಲ್ಲಿಸಿದರು, ತಾವು ಅವರನ್ನೇ ಬದುಕಿದವರಲ್ಲವೆ?

ನಿಮ್ಮ…

ಬಂದಾಗಲೆಲ್ಲ ನೀವು ಮನೆಯ ಗೇಟಿನ ತನಕ ಬಂದು ಬೀಳ್ಕೊಡುತ್ತಿದ್ದರಿ, ಇದು ನಿಮ್ಮ ಅಂತಿಮ ನಿರ್ಗಮನ, ನಮ್ಮದು ಗೇಟಿನ ತನಕ ಬರಲೂ ಆಗದ ದೌರ್ಭಾಗ್ಯ. ನೀವು ತುಂಬಿದ ಕೊಡ, ತುಂಬಿಕೊಳ್ಳುತ್ತಲೇ ಬದುಕಬೇಕಾದವರು ನಾವು, ಹೋಗಿ ಬನ್ನಿ, ಗಿರಡ್ಡಿ-ಕೀರ್ತಿ ಪ್ರಾಯಶಃ ತಮ್ಮ ಸ್ವಾಗತಕ್ಕೆ ಅಮೋಘ ಸಿದ್ಧತೆ ಮಾಡಿಕೊಂಡಿರಬೇಕು! ಅಲ್ಲಿ ಬೇಂದ್ರೆಯವರು, ನಿಮ್ಮ ಪ್ರೀತಿಯ ಶ್ರೀರಂಗರು, ಇಡಿ ಧಾರವಾಡವೆ ಕಾಯುತ್ತಿರಬಹುದು….

ಬೆಲೆಯಿಂದಕ್ಕುಮೆ ಕೃತಿ ಗಾ-ವಿಲ ಭುವನದಭಾಗ್ಯದಿಂದಕ್ಕುಂ.

ಯಾಕೋ ಧಾರವಾಡ ಭೂಮಿ ಸಕಲ ಭಾಗ್ಯ ಕಳಕೊಂಡಂತನಿಸುತ್ತಿದೆ.

ನಿಮ್ಮ ದುಃಖತಪ್ತ ಮೊಮ್ಮಕ್ಕಳು ನಾವು, ದುಃಖವೊಂದೆ ಕೊನೆವರೆಗೆ ಅನಿಸುತ್ತದೆ. ಹೋಗಿಬನ್ನಿ ಗುರುಗಳೆ ಹೋಗಿ ಬನ್ನಿ.

‍ಲೇಖಕರು Avadhi

28 September, 2020

1 Comment

  1. ಲಲಿತಾ ಸಿದ್ಧಬಸವಯ್ಯ

    ಎಷ್ಟು ಆರ್ದ್ರವಾಗಿದೆ ವಿದಾಯ ಲೇಖನ, ಕಲಕುತ್ತದೆ, ಅವರ ದುಃಖವನ್ನು ಓದುಗರಿಗೆ ನಾಟಿಸುತ್ತದೆ.

    ಅಗಲಿದ ಹಿರಿಯರಿಗೆ ಅಗೋಚರ ಚೈತನ್ಯವು ಸದ್ಗತಿಯನ್ನೀಯಲಿ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading