ನನಗೆ ಪ್ರಧಾನಿ ಹುದ್ದೆಯೇ ಬೇಡ ಅಂತ ದೇವೇಗೌಡರು ಗುಡುಗಿದ್ದರು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ದೇವೇಗೌಡರು ಈ ದೇಶದ ಪ್ರಧಾನಿಯಾದ ಕತೆ ನಿಮಗೆ ಗೊತ್ತು. ಆದರೆ ಇದೇ ದೇವೇಗೌಡರು ಒಂದು ಬೆಳವಣಿಗೆಯಿಂದ ಬೇಸತ್ತು: ನನಗೆ ಪ್ರಧಾನಿ ಹುದ್ದೆಯೇ ಬೇಕಿಲ್ಲ ಎಂದು ಅಬ್ಬರಿಸಿದ್ದ ಘಟನೆ ಗೊತ್ತಾ?

ಪಕ್ಕದಲ್ಲೇ ಕಾಣುತ್ತಿದ್ದ ಆ ಆಳದ ಕಣಿವೆಯನ್ನೇ ನೋಡುತ್ತಾ ಅವರು ಕೇಳಿದರು. ನಾನು ಬೆಕ್ಕಸ ಬೆರಗಾಗಿ ಅವರನ್ನೇ ಮೌನವಾಗಿ ನೋಡತೊಡಗಿದೆ.

ಅತ್ತ ಕಣ್ಣಿಗೆ ಕಾಣುತ್ತಿದ್ದ ಆಳದ ಪ್ರಪಾತ, ಇತ್ತ ಆ ಪ್ರಪಾತದಷ್ಟೇ ನಿಬ್ಬೆರಗು ಮೂಡಿಸುವ ನಿಗೂಢ ವಿಷಯ. ಆದರೆ ಎರಡೂ ನನ್ನಳವಿಗೆ ಮೀರಿದವು. ಹಾಗೆಂದೇ ಮೌನವಾಗಿ ನೋಡುತ್ತಿದ್ದ  ನನ್ನನ್ನು ಗಮನಿಸಿ ಅವರು ಹೇಳತೊಡಗಿದರು.

ವಿಠ್ಠಲಮೂರ್ತಿ, ಇದು ನಡೆದಿದ್ದು ೧೯೯೬ ರಲ್ಲಿ. ಅಷ್ಟೊತ್ತಿಗಾಗಲೇ ಲೋಕಸಭೆ ಚುನಾವಣೆ ನಡೆದು ಕರ್ನಾಟಕದಲ್ಲಿ ಜನತಾದಳ ಹದಿನಾರು ಸೀಟುಗಳನ್ನು ಗೆದ್ದಿತ್ತು. ಅದೇ ಕಾಲಕ್ಕೆ ರಾಷ್ಟ್ರ ರಾಜಕಾರಣದ ತಲ್ಲಣಗಳ ನಡುವೆ ಒಂದು ಅಭೂತಪೂರ್ವ ಬೆಳವಣಿಗೆ ನಡೆದಿತ್ತು ವಿಠ್ಠಲಮೂರ್ತಿ.

ಅದೆಂದರೆ ಈ ದೇಶದ ಪ್ರಧಾನಿ ಹುದ್ದೆಗೆ ತೃತೀಯ ಶಕ್ತಿಗಳ ಒಮ್ಮತದ ಅಭ್ಯರ್ಥಿಯಾಗಿ ದೇವೇಗೌಡರು ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ವಾಜಪೇಯಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಬಹುಮತ ಸಾಬೀತುಪಡಿಸಲಾಗದೆ ಅದು ಕುಸಿದು ಬಿದ್ದಿದ್ದು ದೊಡ್ಡ ಕತೆ.

ಮುಂದೆ ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ ತೃತೀಯ ಶಕ್ತಿ ಸರ್ಕಾರ ರಚಿಸುವುದು ನಿಕ್ಕಿಯಾದಾಗ ಕಮ್ಯೂನಿಸ್ಟ್‌ ನಾಯಕ ಜ್ಯೋತಿ ಬಸು ಅವರಿಗೆ ಪ್ರಧಾನಿಯಾಗುವ ಲಕ್ಕು ಕುದುರಿತ್ತು.

ಆದರೆ ಸ್ಪಷ್ಟ ಬಹುಮತವಿಲ್ಲದೆ ಪ್ರಧಾನಿ ಹುದ್ದೆ ಪಡೆಯುವುದು ಬೇಡ ಎಂದು ದೇಶದ ಹಿರಿಯ ಕಮ್ಯೂನಿಸ್ಟ್‌ ನಾಯಕ ಇ.ಎಂ.ಎಸ್.ನಂಬೂದಿರಿ ಪಾದ್‌ ಪಟ್ಟು ಹಿಡಿದಾಗ ಅವರ ಪಕ್ಷದ ಪಾಲಿಟ್‌ ಬ್ಯೂರೋ ಆ ಮಾತಿಗೇ ಅಂಟಿಕೊಂಡಿತು.

ಇದಾದ ನಂತರ ಲಕ್ಕು ತಿರುಗಿದ್ದು ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರ ಕಡೆ. ಆದರೆ ಹಿಂದಿನ ಅನುಭವಗಳಿಂದಲೋ ಏನೋ? ಪ್ರಧಾನಿಯಾಗಲು ಅವರು ಶತಾಯ ಗತಾಯ ಒಪ್ಪಲಿಲ್ಲ.

ಈ ಹಂತದಲ್ಲಿ ಮುಖ್ಯ ಪಾತ್ರ ವಹಿಸಿದವರು ಬಿಹಾರದ ಲಲ್ಲೂ ಪ್ರಸಾದ್‌ ಯಾದವ್. ಅವರು ದೇವೇಗೌಡರ ಹೆಸರನ್ನು ಮುಂದೆ ತಂದಾಗ ತೃತೀಯ ಶಕ್ತಿಗಳ ನಾಯಕರಿಂದ ಹಿಡಿದು, ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ತನಕ ಎಲ್ಲರೂ ಒಪ್ಪಿದರು.

ಮುಂದೆ ದೆಹಲಿಯ ಬಿಹಾರ ಭವನದಲ್ಲಿ ನಡೆದ ಮಾತುಕತೆ ದೇವೇಗೌಡರ ಹೆಸರನ್ನು ಪ್ರಧಾನಿ ಗದ್ದುಗೆಗೆ ನಿಕ್ಕಿ ಮಾಡಿದ ಮೇಲೆ ಮೊಟ್ಟ ಮೊದಲ ಬಾರಿ ಕರ್ನಾಟಕಕ್ಕೆ ಪ್ರಧಾನಿ ಹುದ್ದೆಯ ಭಾಗ್ಯ ದಕ್ಕುವುದು ಗ್ಯಾರಂಟಿಯಾಯಿತು.

ಯಾವಾಗ ಇದು ನಿಕ್ಕಿಯಾಯಿತೋ? ಆಗ ದೇವೇಗೌಡರು ಕರ್ನಾಟಕಕ್ಕೆ ಬಂದರು. ಅಷ್ಟೊತ್ತಿಗಾಗಲೇ ಅವರು ಇಲ್ಲಿ ಮುಖ್ಯಮಂತ್ರಿಯಾಗಿ ಹಲ ಕಾಲ ಕಳೆದಿತ್ತಲ್ಲ? ಹೀಗಾಗಿ ಪ್ರಧಾನಿಯಾಗುವ ಮುನ್ನ ಅವರು ಹಲವು ಕೆಲಸಗಳನ್ನು ಮಾಡಿ ಮುಗಿಸಬೇಕಿತ್ತು.

ಅದರಲ್ಲಿ ಮುಖ್ಯವಾಗಿದ್ದುದು ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಯಾರಿಗೆ ದಕ್ಕಬೇಕು? ಎಂಬುದು. ಹೀಗಾಗಿ ಬಂದವರು ಅದನ್ನೇ ಆದ್ಯತೆಯ ವಿಷಯವನ್ನಾಗಿ ಮುಂದಿಟ್ಟುಕೊಂಡರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?ಎಂಬುದನ್ನು ನಿರ್ಧರಿಸಲು ದೇವೇಗೌಡರು ಕರ್ನಾಟಕಕ್ಕೆ ಬಂದರೋ? ಆ ಹೊತ್ತಿಗೆ ಸರಿಯಾಗಿ ಸಿಎಂ ಹುದ್ದೆಗೇರಲು ಇಬ್ಬರು ನಾಯಕರು ಪೈಪೋಟಿಯಿಂದ ಮೇಲೆದ್ದು ನಿಂತಿದ್ದರು.

ಒಬ್ಬರು ಜೆ.ಹೆಚ್.ಪಟೇಲ್‌,ಮತ್ತೊಬ್ಬರು ಸಿದ್ಧರಾಮಯ್ಯ. ಅಂದ ಹಾಗೆ ದೇವೇಗೌಡರು ಸಿಎಂ ಆಗಿ ಇಲ್ಲಿ ಅಧಿಕಾರ ನಡೆಸಿದರಲ್ಲ? ಆ ಕಾಲದಲ್ಲಿ ಪಟೇಲರು ಉಪಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು.

ಹೇಗಿದ್ದರೂ ನಾನು ಡಿಸಿಎಂ ಆಗಿದ್ದವನು. ಜತೆಗೆ ಪಕ್ಷದಲ್ಲಿ ಸೀನಿಯರ್. ಹೀಗಾಗಿ ನಾನೇ ಸಿಎಂ ಆಗಬೇಕು ಎಂಬುದು ಪಟೇಲರ ವಾದವಾದರೆ, ಸರ್ಕಾರವನ್ನು ಅತ್ಯಂತ ದಕ್ಷವಾಗಿ ಮುನ್ನಡೆಸುವ ಶಕ್ತಿ ನನಗಿದೆ. ಜನನಾಯಕನಾಗಿಯೂ ಹೊರಹೊಮ್ಮಿದ್ದೇನೆ. ಹೀಗಾಗಿ ನಾನೇ ಸಿಎಂ ಆಗಬೇಕು ಎಂಬುದು ಸಿದ್ಧರಾಮಯ್ಯ ಅವರ ಪಟ್ಟು.

ಸರಿ, ಶಾಸಕಾಂಗ ಸಭೆಯಲ್ಲಿ ಈ ವಿಷಯ ತೀರ್ಮಾನವಾಗಬೇಕು ಎಂದಾಯಿತು. ಇದರಿಂದ ಪಟೇಲರಿಗೆ ಎಷ್ಟು ಸಿಟ್ಟು ಬಂತೆಂದರೆ: ಅರೇ, ಇದಕ್ಕೆ ವಾದ, ವಿವಾದ ಏಕೆ? ನಾನು ಸೀನಿಯರ್. ಡಿಸಿಎಂ ಆಗಿದ್ದವನು. ಹೀಗಾಗಿ ಕೊಡುವುದಿದ್ದರೆ ನನಗೆ ಅಧಿಕಾರ ಕೊಡಿ. ಇಲ್ಲದಿದ್ದರೆ ನಿಮಗೇನು ಬೇಕೋ?ಅದನ್ನು ಮಾಡಿಕೊಳ್ಳಿ ಎಂದವರೇ ಸೀದಾ ಮನೆಗೆ ಹೋಗಿ ಬಿಟ್ಟರು.

ಪಟೇಲರ ಗೈರು ಹಾಜರಿಯ ನಡುವೆಯೇ ಶಾಸಕಾಂಗ ಸಭೆ ಶುರುವಾಯಿತು. ಒಂದು ಗುಂಪು ಪಟೇಲರ ಪರವಾಗಿ ನಿಂತರೆ, ಮತ್ತೊಂದು ಗುಂಪು ಸಿದ್ಧರಾಮಯ್ಯ ಅವರ ಬೆನ್ನಿಗೆ ನಿಂತಿತ್ತು. ಅಂದ ಹಾಗೆ ಆ ಹೊತ್ತಿಗಾಗಲೇ ದೇವೇಗೌಡ ಹಾಗೂ ಹೆಗಡೆ ನಡುವೆ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿತ್ತಲ್ಲ?

ಹೀಗಾಗಿ ಹೆಗಡೆ ಬೆಂಬಲಿಗರು ಪಟೇಲರಿಗೆ ಸಪೋರ್ಟು ನೀಡಿದರೆ, ದೇವೇಗೌಡರ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಸಿದ್ಧರಾಮಯ್ಯ ಅವರ ಜತೆ ನಿಂತರು. ಆದರೆ ಈ ಬೆಳವಣಿಗೆ ದೇವೇಗೌಡರಿಗೆ ಇರಿಸು ಮುರಿಸಿನ ವಿಷಯವಾಗಿ ಹೋಯಿತು.

ಸಿದ್ಧರಾಮಯ್ಯ ಅವರ ವಿಷಯದಲ್ಲಿ ಅವರ ಪ್ರೀತಿ ಹೆಚ್ಚಿತ್ತಾದರೂ, ಸೀನಿಯಾರಿಟಿ ವಿಷಯದಲ್ಲಿ ಪಟೇಲರನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಗೊತ್ತಿತ್ತು. ಎಷ್ಟೇ ಆದರೂ ಪಟೇಲರು ತಮ್ಮ ಸರ್ಕಾರದಲ್ಲಿ ಡಿಸಿಎಂ ಬೇರೆ ಆಗಿದ್ದರಲ್ಲ?

ಹೀಗಾಗಿ ಅವರು ಪಟೇಲರೇ ಸಿಎಂ ಆಗಲಿ ಎಂದು ಬಯಸಿದ್ದರು. ತುಂಬ ಜನ ಪಟೇಲರು ಸಿಎಂ ಆಗಲು ಹೆಗಡೆ ಅವರೇ ಕಾರಣ ಎಂದು ಭಾವಿಸಿದ್ದಾರೆ. ಆದರೆ ವಸ್ತುಸ್ಥಿತಿ ಎಂದರೆ ಪಟೇಲರು ಸಿಎಂ ಆಗಬೇಕು ಅಂತ ದೇವೇಗೌಡರೂ ಬಯಸಿದ್ದರು.

ಆದರೆ ಸಿಎಂ ಹುದ್ದೆಯ ಪೈಪೋಟಿ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಯಿತು. ಆದರೆ ಈಗಲೇ ನಾನು ಸಿಎಂ ಆಗಬೇಕು. ಹೀಗಾಗಿ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಸಿದ್ದರಾಮಯ್ಯ, ನಾನಲ್ಲದೆ ಬೇರೆ ಯಾರೂ ಸೀನಿಯರ್‌ ಅಲ್ಲ ಅಂತ ಮನೆಗೆ ಹೋಗಿ ಕುಳಿತ ಪಟೇಲರು.

ಸಿದ್ಧರಾಮಯ್ಯ ಕೂಡಾ ಎಷ್ಟು ಟಫ್‌ ಆಗಿ ಕುಳಿತಿದ್ದರೆಂದರೆ ಒಂದು ಹಂತದಲ್ಲಿ,ಪಟೇಲರು ಸಿಎಂ ಆಗಲಿ,ನೀವು ಡಿಸಿಎಂ ಆಗಿ ಎಂದು ದೇವೇಗೌಡರು ಸಂದೇಶ ನೀಡಿದರೂ ಸಿದ್ಧರಾಮಯ್ಯ ಸುತಾರಾಂ ಒಪ್ಪಲಿಲ್ಲ. ಆದರೆ ಸಿಎಂ ಆಗುತ್ತೇನೆ. ಇಲ್ಲದಿದ್ದರೆ ಶಾಸಕನಾಗಿ ಉಳಿಯುತ್ತೇನೆ. ಡಿಸಿಎಂ ಹುದ್ದೆ ಮಾತ್ರ ಬೇಡವೇ ಬೇಡ ಅಂತ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿ ದೇವೇಗೌಡರಿಗೆ ಎಷ್ಟು ಬೇಸರವಾಯಿತೆಂದರೆ ಅವತ್ತು ವಿಧಾನಸೌಧದ ಮೂರನೇ ಅಂತಸ್ತಿನಲ್ಲಿರುವ ಸಿಎಂ ಕಛೇರಿಯ ANTI CHAMBER ಗೆ ಹೋಗಿ ಅವರು ಹಣೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟರು.

ದೇವೇಗೌಡರು ಹೋಗಿ ಅಲ್ಲಿ ಕುಳಿತರಲ್ಲ? ಆಗ ಅವರನ್ನು ಹಿಂಬಾಲಿಸಿದ ಆರ್.ಎಲ್.ಜಾಲಪ್ಪ,ಎಂ.ಪಿ.ಪ್ರಕಾಶ್‌,ಎಂ.ಸಿ.ನಾಣಯ್ಯ ಅವರಂತಹ ನಾಯಕರಿಗೆ ಚಿಂತೆ. ಮುಂದೇನು?ಎಂಬ ಧಾವಂತ. ಎಲ್ಲರೂ ಆ ಆತಂಕದಲ್ಲಿದ್ದಾಗಲೇ ದೇವೇಗೌಡರು ನೋವಿನಿಂದ ಹೇಳತೊಡಗಿದರು.

ಈ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದವನು ನಾನು. ದೆಹಲಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಬೇಕು. ಆದರೆ ಇಲ್ಲಿ,ನನ್ನದೇ ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆಯನ್ನು ಬಗೆಹರಿಸಲು ನನಗೆ ಆಗುತ್ತಿಲ್ಲ ಎಂದರೆ ದೇಶದ ಜನ ಏನೆಂದುಕೊಳ್ಳಬೇಡ. ಹೀಗಾಗಿ ನಾನೊಂದು ತೀರ್ಮಾನ ಮಾಡಿದ್ದೇನೆ.

ನಾನು ಪ್ರಧಾನಿಯಾದರೆ ತಾನೇ ಈ ಸಮಸ್ಯೆ. ಹೀಗಾಗಿ ವಾಪಸು ದಿಲ್ಲಿಗೂ ಹೋಗುವುದಿಲ್ಲ. ಪ್ರಧಾನಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸುವುದಿಲ್ಲ.

ಅವತ್ತು ದೇವೇಗೌಡರ ಮಾತು ಕೇಳಿ ಅಲ್ಲಿದ್ದ ಎಲ್ಲರಿಗೂ ಧಿಗ್ಭ್ರಮೆ. ಅಂದ ಹಾಗೆ ಅವರು ಆ ಮಾತು ಹೇಳಿದರು ಎಂಬ ಕಾರಣಕ್ಕೆ ಎಲ್ಲವೂ ಮುಗಿದು ಹೋಗಿತ್ತು ಎಂದಲ್ಲ. ಆದರೆ ಅವರ ಮನಸ್ಸಿನ ಬೇರುಗಳಿಗೆ ಯಾವ ಮಟ್ಟದ ನೋವು ಇಳಿದಿರಬೇಕು? ಅನ್ನುವುದನ್ನು ಮುಖ್ಯವಾಗಿ ಪರಿಗಣಿಸಬೇಕು ವಿಠ್ಠಲಮೂರ್ತಿ.

ಅವತ್ತು ದೇವೇಗೌಡರಾಡಿದ ಆ ಮಾತು ಕೇಳಿ ಎಲ್ಲ ನಾಯಕರ ಬಾಯಿ ಕಟ್ಟಿ ಹೋಯಿತು. ಕೊನೆಗೊಮ್ಮೆ ದೇವೇಗೌಡರೇ ಪಕ್ಕ ತಿರುಗಿ: ನಾಣಯ್ಯನವರೇ ಒಂದು ಕೆಲಸ ಮಾಡುತ್ತೀರಾ? ಪಟೇಲರ ಮನೆಗೆ ಹೋಗಿ ಅವರ ಮನ ಒಲಿಸಿ ಕರೆದುಕೊಂಡು ಬರುತ್ತೀರಾ? ಎಂದರು.

ಸರಿ,ದೇವೇಗೌಡರ ಮಾತು ಕೇಳಿದ್ದೇ ನಾಣಯ್ಯ ಮೇಲೆದ್ದು ನಿಂತರು. ಎಲರಿಗೂ ಮುಂದೇನು?ಎಂಬ ಆತಂಕ. ಈ ಮಧ್ಯೆಯೇ ಪಟೇಲರ ಮನೆಗೆ ನಾಣಯ್ಯ ಹೋದರು. ಒಬ್ಬಂಟಿಯಾಗಿ ಮಹಡಿಯ ಮೇಲೆ ಕುಳಿತಿದ್ದ ಪಟೇಲರ ಬಳಿ ಮಾತನಾಡಿದರು.

ಅರೇ,ಸಿಎಂ ಹುದ್ದೆಯ ಮೇಲೆ ಸಿದ್ದರಾಮಯ್ಯ ಅವರನ್ನು ತಂದು ಕೂರಿಸುವುದೇ ಅವರಿಚ್ಚೆಯಾಗಿದ್ದರೆ ಮಾಡಿಕೊಳ್ಳಲಿ ಬಿಡಿ ನಾಣಯ್ಯ ಅಂದುಬಿಟ್ಟರು. ಆದರೆ ನಾಣಯ್ಯ ಅವರು ಪಟ್ಟು ಬಿಡದೆ: ಸಾರ್‌,ಈ ಹಂತದಲ್ಲಿ ಸಂಘರ್ಷ ಬೇಡ.ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ. ದೇವೇಗೌಡರೂ ಒಂದು ತೀರ್ಮಾನಕ್ಕೆ ಬಂದಂತಿದೆ ಎಂದರು.

ಸರಿ, ಮನೆಗೆ ಹೋಗಿ ಕುಳಿತಿದ್ದ ಮುಂಗೋಪಿ ಪಟೇಲರು ಮನ ಬದಲಿಸಿ ನಾಣಯ್ಯ ಅವರ ಜತೆ ವಿಧಾನಸೌಧಕ್ಕೆ ಬಂದರು. ಆದರೆ ಇಲ್ಲಿ ನೋಡಿದರೆ ಸಮಸ್ಯೆ ಬಗೆ ಹರಿದಿಲ್ಲ. ಯಾಕೆಂದರೆ ಡಿಸಿಎಂ ಪಟ್ಟವೇರಲು ಸಿದ್ಧರಾಮಯ್ಯ ಶತಾಯಗತಾಯ ಒಪ್ಪುತ್ತಿಲ್ಲ.

ಪರಿಸ್ಥಿತಿ ಹೀಗೇ ಮುಂದುವರಿದರೆ,ನಾಯಕತ್ವದ ವಿಷಯ ಇತ್ಯರ್ಥವಾಗದೆ ಹೋದರೆ ಅದು ಪಿಎಂ ಹುದ್ದೆಯ ಮೇಲೆ ಕುಳಿತುಕೊಳ್ಳಲು ಅಣಿಯಾಗುತ್ತಿದ್ದ ದೇವೇಗೌಡರು ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತಿತ್ತು.

ಇಂತಹ ಸಂದರ್ಭದಲ್ಲಿ ಮತ್ತೆ ಜಾಲಪ್ಪ,ಎಂ.ಪಿ.ಪ್ರಕಾಶ್‌,ಎಂ.ಸಿ.ನಾಣಯ್ಯ ಅವರೆಲ್ಲ ಕಸರತ್ತು ಆರಂಭಿಸಿದರು. ಸಿದ್ಧರಾಮಯ್ಯ ಅವರ ಬಳಿ ಹೋಗಿ: ನಾಯಕತ್ವದ ಪ್ರಶ್ನೆ ಇತ್ಯರ್ಥವಾಗದೆ ಹೋದರೆ ಸರ್ಕಾರದ ಭವಿಷ್ಯ ಗಂಡಾಂತರಕ್ಕೆ ಸಿಲುಕುತ್ತದೆ. ಹೀಗಾಗಿ ಒಂದು ಮಟ್ಟದ ಹೊಂದಾಣಿಕೆಗೆ ರೆಡಿಯಾಗಿ, ಡಿಸಿಎಂ ಹುದ್ದೆಯನ್ನು ಒಪ್ಪಿಕೊಳ್ಳಿ ಎಂದು ಪಟ್ಟುಹಿಡಿದರು.

ಫೈನಲಿ, ಇವರೆಲ್ಲರ ಮಾತಿಗೆ ಸಿದ್ದರಾಮಯ್ಯ ಮಣಿದರು.ಪಟೇಲರು ಸಿಎಂ,ಸಿದ್ಧರಾಮಯ್ಯ ಡಿಸಿಎಂ ಎಂಬುದು ನಿಕ್ಕಿಯಾಯಿತು. ಇದಾದ ಮೇಲೇ ದೇವೇಗೌಡರು ಸಮಾಧಾನದಿಂದ ದೆಹಲಿಗೆ ಹೋಗಿದ್ದು ವಿಠ್ಠಲಮೂರ್ತಿ…..

ಹೀಗೆ ಪಟೇಲರು ಸಿಎಂ ಆದ ಸಂದರ್ಭವನ್ನು ವಿವರವಾಗಿ ಹೇಳಿದ ಅವರು ಮತ್ತೆ ಆ ಆಳದ ಕಣಿವೆಯತ್ತ ನೋಡಿದರು. ಇಡೀ ಎಪಿಸೋಡಿನ ವಿವರ ದಕ್ಕಿದ ನೆಮ್ಮದಿಯಿಂದ ನಾನು ಕಣಿವೆಯ ಭಾಗದಿಂದ ಸುರಿಯುತ್ತಿದ್ದ ಗಾಳಿಯ ಹಿತ ಅನುಭವಿಸತೊಡಗಿದೆ.

September 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: