ಆಪರೇಷನ್ ಥಿಯೇಟರ್ ಹೊರಗೆ ಕಾಯುವುದು ಬಹಳವೇ ಕಷ್ಟ..

ಮುಕುಂದಾ ಬೃಂದಾ

ಸಾರ್ ಡಾಕ್ಟರ್ ಕರೀತಿದ್ದಾರೆ…. ನರ್ಸ್ ಹೇಳಿದೊಡನೆ ದಡಬಡನೆ ಎದ್ದು ಹೊರಟೆ ವಾರ್ಡ್ ನಿಂದ. ಮಣಿಪಾಲ್ ಆಸ್ಪತ್ರೆಯ ಹನ್ನೊಂದನೇ ಮಹಡಿ ಸರಿರಾತ್ರಿಯಲ್ಲಿ ನಿಸ್ತೇಜವಾಗಿ ಮಲಗಿದಂತಿತ್ತು. ಅಲ್ಲೊಬರು ಇಲ್ಲೊಬರ ಓಡಾಟ.. ಅದೇ ವಾಸನೆ.. ಅದೇ ನರಳುವಿಕೆಯ ಮೆಲುಧ್ವನಿ ಅಲ್ಲಲ್ಲಿ.

ಲಿಫ್ಟ್ ಒಳಹೊಕ್ಕು ICU ಅಂದೆ. ಹೆಚ್ಚುಕಡಿಮೆ ಖಾಲಿ ಇದ್ದ ಲಿಫ್ಟ್ ದಡಬಡ ಎನ್ನುತ್ತಾ ಕೆಳಗಿಳಿಯಹತ್ತಿತು .

ತಲೆಯೊಳಗೆ ಹತ್ತಾರು ಯೋಚನೆ… ಡಾಕ್ಟರ್ ಏನು ಹೇಳಬಹುದು… ಮುಂದೆ ಹೇಗೆ ಏನು.. ಗೊತ್ತಿಲ್ಲದಂತೆ ನಿಟ್ಟುಸಿರೊಂದು ಹೊರಬಿತ್ತು… ಅಷ್ಟರಲ್ಲೇ ಲಿಫ್ಟ್ ನಿಂತು ಬಾಗಿಲು ತೆಗೆಯಿತು. ಹೊರಬಂದೆ.. ಅವರು ಕೊಟ್ಟ ಕಾಲಿನ, ತಲೆಯ ಕ್ಯಾಪ್ ಹಾಕಿ ಒಳ ನಡೆದೆ. ಮೊದಲು ಪೇಶಂಟ್ ನೋಡಿಬನ್ನಿ ಮಾತಾಡೋಣ ಅಂದ್ರು ಡಾಕ್ಟರ್ ಹೆಗಡೆ. ನರ್ಸ್ ಜೊತೆ ಮತ್ತೆರಡು ಬಾಗಿಲಿನ ಭದ್ರ ಕೋಟೆ ದಾಟಿ ಸಾಗಿದೆ ಮೈ ನಡುಗುವ ತಣ್ಣನೆ ಏಸಿ.. ಸೂಜಿ ಬಿದ್ದರೂ ಕೇಳಿಸುವ ನಿಶ್ಯಬ್ದ .

ಬೆಡ್ ಮುಂದೆ ನಿಂತಿದ್ದೆ. ಏನಿದೆ ಸುಮ್ಮನೆ ನೋಡುವುದಷ್ಟೇ.. ಎಚ್ಚರವಿಲ್ಲದೆ ಮಲಗಿದ್ದಳು.. ಮೈತುಂಬ ನಳಿಕೆ, ವೈರ್ ಗಳು.. ಮಾನಿಟರ್ ತುಂಬಾ ಏನೇನೂ ಅರ್ಥವಾಗದ ಗ್ರಾಫ್, ಅಂಕಿ ಅಂಶಗಳು.

ನಿನ್ನೆ ರಾತ್ರಿ ಸಹಾ ಊಟ ಮಾಡಿಸಿ, ಎಷ್ಟೋ ಹೊತ್ತು ಚುಕ್ಕೆ ಆಟವಾಡುತ್ತ ಕುಳಿತಿದ್ದೆವು. ಧೈರ್ಯದಿಂದಲೇ ಎದುರಿಸಿ ಅಲ್ಲಿಗೆ ಬಂದವಳು ಆಗಮಾತ್ರ ಸ್ವಲ್ಪ ಮೆತ್ತಗೆ ಕೇಳಿದಳು.. ಜೀ ಎಲ್ಲಾ ಸರಿಹೋಗುತ್ತೆ ತಾನೇ… ಹೌದು ಬೀ ಡಾಕ್ಟರ್ ಹೇಳಿದ್ದಾರೆ ಸಣ್ಣ ಆಪರೇಷನ್ ಅಷ್ಟೇ ಅಂದಿದ್ದೆ ಕೈ ಅದುಮಿ. ನನಗೇ ಗೊತ್ತಿಲ್ಲದೇ ಸುಳ್ಳು ಸರಾಗವಾಗಿ ಹೊರಬಿದ್ದಿತ್ತು.

ಹಿಂದಿನ ದಿನ ನಾನು ಅದೇ ಪ್ರಶ್ನೆ ಯನ್ನು ಡಾಕ್ಟರ್ ಭೂಪಯ್ಯಗೆ ಕೇಳಿದ್ದೆ.. ಅವರು ನನ್ನನ್ನು ಮೇಲಿಂದ ಕೆಳವರೆಗೆ ನೋಡಿ.. ಅಲ್ರಿ ನಾವು ಮಾಡ್ತಾ ಇರೋದು ಬ್ರೈನ್ ಆಪರೇಷನ್.. ಅದರಲ್ಲೂ ಸಿಸ್ಟ್ ಇರೋದು ಮಿಡ್ ಬ್ರೈನ್ ನಲ್ಲಿ.. ದಿಸ್ ಐಸ್ ಮೋಸ್ಟ್ ಕಾಂಪ್ಲಿಕೇಟೆಡ್ ಮೇಜರ್ ಆಪರೇಷನ್. ಬುರುಡೆಗೆ ಸಣ್ಣ ರಂದ್ರ ಕೊರೆದು ಮೆದುಳಿಂದ ಸಿಸ್ಟ್ ತೆಗೆದು ಮುಚ್ಚಬೇಕು. ಮೆದುಳಿನ ಸ್ಟ್ರಕ್ಚರ್ ಈಸ್ ವೆರಿ ಕಾಂಪ್ಲಿಕೇಟೆಡ್. ಏನಾದರೂ ಆಗಬಹುದು. ಜೀವ ಉಳಿದರೆ ಭಾಗ್ಯ ..ಸಾಮಾನ್ಯವಾಗಿ ಒಂದಿಲ್ಲಾ ಒಂದು ಭಾಗ ಊನವಾಗುವ ಸಾಧ್ಯತೆ ಹೆಚ್ಚು.. ಕಣ್ಣು, ಪ್ಯಾರಲೈಜ್, ಮೂರ್ಛೆ…ಇನ್ನೇನನ್ನು ಕೇಳಲಾಗದೆ ಅಲ್ಲಿಂದ ಕಾಲ್ಕಿತ್ತಿದ್ದೆ .

ಸರಿ ಹಾಗೆ ಒಮ್ಮೆ ಮಲಗಿದವಳ ಕೈ ಸವರಿ ನರ್ಸ್ ಜೊತೆ ಹೊರ ನಡೆದೆ. ಡಾಕ್ಟರ್ ಹೆಗಡೆ ಖುಷಿಯಾಗೇ ಇದ್ದರು, ಆಪರೇಷನ್ ಸಕ್ಸಸ್ ಆಗಿದೆ.. ಇನ್ನೆರಡು ದಿನ icuನಲ್ಲಿರಬೇಕಾಗಬಹುದು, ಆಮೇಲೆ ವಾರ್ಡ್ ಗೆ ಶಿಫ್ಟ್ ಮಾಡೋಣ …
ಸಿಸ್ಟ್ ಅನ್ನು ಬ್ರೇಕ್ ಮಾಡಿ ಹೊರ ತೆಗೆದದ್ದಾಗಿದೆ. ಲ್ಯಾಬ್ ಗೆ ಕಳಿಸುತ್ತೇವೆ.. ಅಂತೆಲ್ಲ ಹೇಳುತ್ತಿದ್ದರು…

ಕಣ್ಣಿಗೆ ಕಂಡೂಕಾಣದ ಆ ಸಣ್ಣ ಸಿಸ್ಟ್ ಮೇಲೆ ಎಲ್ಲಿಲ್ಲದ ಕೋಪ ಬಂದಿತ್ತು. ನನ್ನ ಬೀ ಯ ಬಲಾಢ್ಯ ದೇಹವನ್ನೇ ಅಲುಗಿಸಿತ್ತು. ನಮ್ಮ ಈ ದಷ್ಟಪುಷ್ಟ ದೇಹವನ್ನು ತಿಂದುಹಾಕಲು ಸಣ್ಣ ಮೈಕ್ರೋ ಆರ್ಗ್ಯಾನಿಸಂ ಸಾಕು…

ಆ ಕ್ಷಣದಲ್ಲಿ ಅನಿಸಿದ್ದು ನಾವೆಷ್ಟು ಹುಂಬರು, ಜಗತ್ತನ್ನೇ ಗೆಲ್ಲುವೆವೆಂದು ಕುಣಿದಾಡುತ್ತೇವೆ ಆದರೆ ಒಂದು ಸಣ್ಣ ಮೈಕ್ರೋ ಕ್ರಿಮಿ ಸಾಕು ದೇಹವನ್ನು ಛಿದ್ರಮಾಡಿ ಮಲಗಿಸೋಕ್ಕೆ. ಯಾವುದೂ ನಮ್ಮ ಕೈಲಿಲ್ಲ… ಎಲ್ಲವೂ ಅನಿಶ್ಚಿತ… ಇದೊಂದೇ ಸತ್ಯ.

*****************

ಎರಡು ದಶಕಗಳ ನಂತರ ಮತ್ತೆ ಅದೇ ಮಣಿಪಾಲ್ ವಾರ್ಡಿನೊಳಗೆ ಧ್ಯಾನಸ್ಥನಾಗಿ ಶ್ರೀಪೂರ್ಣಭೋದ… ಹೇಳುತ್ತಾ ಡಾಕ್ಟರ್ ಕರೆಗೆ ಕಾಯುತ್ತಿದ್ದೆ. ಮೊಬೈಲ್ ರಿಂಗಾದೊಡೆ ಥಟ್ ಅಂತ ಎತ್ತಿದೆ.. ಡಾಕ್ಟರ್ ಕರೀತಿದ್ದಾರೆ ಬನ್ನಿ ಎಂದರು ಆಪರೇಷನ್ ಥಿಯೇಟರ್ ಸಿಬ್ಬಂದಿ. ಚಪ್ಪಲಿ ಏರಿಸಿ ದಡಬಡನೆ ನಡೆದೆ.

ಚಪ್ಪಲಿ ಹೊರಬಿಟ್ಟು ಕಾಲಿಗೆ, ತಲೆಗೆ ಚೀಲ ಏರಿಸಿ ಒಳನಡೆದೆ. ಸ್ವಲ್ಪ ಕಾಯಿರಿ ಡಾಕ್ಟರ್ ಬರುತ್ತಾರೆ ಎಂದರು. ನೀವೇನಾಗಬೇಕು ಪೇಶಂಟಿಗೆ…ಗಂಡ… ಒಬ್ಬರೇ ಇದ್ದೀರಾ ಜೊತೆಗೆ ಯಾರಾದರೂ.. ಇಲ್ಲ ಸದ್ಯ ಒಬ್ಬನೇ… ನೋಡಲು ಹೆದರಿಕೆ ಇಲ್ಲವೇ.. ಇಲ್ಲ ಪರವಾಗಿಲ್ಲ… ಕೆಲವರಿಗೆ ನೋಡಿ ತಡೆಯಲಾಗುವುದಿಲ್ಲ ಅದಕ್ಕೆ ಕೇಳಿದೆ ಅಂದ ಮೇಲ್ ನರ್ಸ್.

ಅಷ್ಟರಲ್ಲೇ ಡಾಕ್ಟರ್ ಸೋಮಶೇಖರ್ ಹೊರಬಂದರು… ಆಪರೇಷನ್ ಸಕ್ಸಸ್ ಆಗಿದೆ.. ನಾನು ಅಂದುಕೊಂಡಿದ್ದಕ್ಕಿಂತ ಬಹಳ ದೂರ ಹಬ್ಬಿತ್ತು. ತುಂಬಾ ಸಮಯ ಹಿಡಿತು ಎಲ್ಲಾ ತೆಗೆಯಲು. ಅದು ಹೇಗೆ ಮಾಡಿದೆನೋ ನನಗೇ ಆಶ್ಚರ್ಯ.. ಬಟ್ ಐ ವಾಸ್ ಏಬಲ್ ಟು ಡು ಇಟ್.. ಸುಮಾರು ಒಂದು ಸಾವಿರ ಸ್ಟಿಚ್ ಹಾಕಿದ್ದೀನಿ… ತೆಗೆದ ಹೊಟ್ಟೆಯನ್ನು ನೋಡುತ್ತೀರಾ ಹೆದರುವುದಿಲವ ಅಂದರು. ಇಲ್ಲಾ ಡಾಕ್ಟರ್ ತೋರಿಸಿ ಎಂದೆ. ನರ್ಸ್ ದೊಡ್ಡ ಟ್ರೇ ತಂದು ಹಿಡಿದ.. ಮುಚ್ಚಿದ್ದ ಹಸಿರು ಬಟ್ಟೆಯನ್ನು ತೆಗೆದರು. ಬರೇ ಚಿತ್ರದಲ್ಲಷ್ಟೇ ನೋಡಿದ್ದ ಇಡೀ ಹೊಟ್ಟೆ ಟ್ರೇ ನಲ್ಲಿ.. ಅಲ್ಲಲ್ಲಿ ಪಾಯಿಂಟ್ ಮಾಡಿ ನೋಡಿ ಈ ಕಂದುಬಣ್ಣ ಉಬ್ಬಿದ್ದು ಇವೆಲ್ಲ ಕ್ಯಾನ್ಸೆರ್ ಸೆಲ್ ಗಳು.. ನೋಡಿ ಇಲ್ಲೆಲ್ಲಾ ಅಂತ ತೋರಿಸುತ್ತಲೇ ಇದ್ದರು… ನನ್ನ ಹೊಟ್ಟೆ ಕಿವಿಚಿತ್ತು.. ಹಿರಣ್ಯ ಕಶುಪುವಿನ ಹೊಟ್ಟೆ ಬಗೆದು ಕರುಳು ಕಿತ್ತಿ ಹಿಡಿದ ಉಗ್ರ ನರಸಿಂಹನ ಚಿತ್ರ ಕಣ್ಮುಂದೆ ಹಾದುಹೋಯಿತು.. ದೇವರೇ ಇದೇನು ನೀನು ಈ ರಕ್ತ ಬೀಜಾಸುರನನ್ನು ಸಂಹರಿಸಿರುವೆ ನಿಜ.. ನನ್ನ ಬೀ ಜೀವ ದಾನ ಮಾಡಿದ್ದೀತಾನೆ ಎಂದೆ… ಇದರ ಕೆಲವು ಭಾಗಗಳನ್ನು ಲ್ಯಾಬ್ ಗೆ ಕಳಿಸುತ್ತೇವೆ. ಮುಂದಿನದು ನೋಡೋಣ.. ಡೋಂಟ್ ವರಿ ಅಂತ ಭುಜ ಮುಟ್ಟಿ ಒಳನಡೆದು ಬಿಟ್ಟರು…

ಜೀ… ಹೊಟ್ಟೆಯೆಲ್ಲ ಹೌರ ಆದಂತನಿಸುತ್ತಿದೆ.. ಏನೇನ್ ಮಾಡಿದ್ರು… ಅಫೆಕ್ಟ್ ಪಾರ್ಟ್ ತೆಗೆದು ಹೊಸ ಹೊಟ್ಟೆ ಹಾಕಿದ್ದಾರೆ ಎಲ್ಲ ಸರಿಹೋಗುತ್ತೆ… ನಾ ಅದನ್ನು ನೋಡಬೇಕು.. ಫೋಟೋ ತಕ್ಕೊಂಡು ತೋರಿಸಬೇಕಿತ್ತು ಅಂತ ಹಠ… ಸುಮ್ನಿರು ನನಗೇ ನೋಡ್ಲಕ್ಕ ಆಗಿಲ್ಲ .. ಮುಗುಳ್ನಕ್ಕು ಕೈ ಒತ್ತಿದಳು.. ಎಂದಿಗೂ ಯಾವುದಕ್ಕೂ ಹೆದರಿದವಳೇ ಅಲ್ಲ.. ನಾನು ಏನನ್ನೂ ಮುಚ್ಚಿಡುವುದಿಲ್ಲ ತನ್ನಿಂದ ಅನ್ನುವ ಅಪಾರ ನಂಬಿಕೆ. ಹೌದು ಎಲ್ಲವನ್ನೂ ಅವಳಿಗೆ ಹೇಳುತ್ತಿದ್ದೆ ಆದರೆ ನಯವಾಗಿ ವಿಶ್ವಾಸದ ಹೊದಿಕೆಯೊಡನೆ…ನನಗೆ ಮೆಡಿಕಲ್ ಫೆಟರ್ನಿಟಿ ತಿಳಿಸಿದಷ್ಟು ಖಾರವಾಗಿಯಲ್ಲ. ಅದು ಅವರ ತಪ್ಪಲ್ಲ.. ವಾಸ್ತವವನ್ನು ಹೇಳುವುದು ಅವರ ಕರ್ತವ್ಯ .
***************

ಈ ಆಪರೇಷನ್ ಥಿಯೇಟರ್ ಹೊರಗೆ ಸುದ್ದಿಗಾಗಿ ಕಾಯುವುದು ಬಹಳವೇ ಕಷ್ಟ… ತಾಸುಗಟ್ಟಲೆ ಒಳಗೇನು ನಡೆಯುತ್ತಿದೆಯೋ ಅನ್ನುವ ಅಳುಕು ತಿಂದು ಹಾಕುತ್ತದೆ. ಡಾಕ್ಟರ್ ಕರೆದಾಗಂತೂ ಜಂಘಾಬಲವೇ ಉಡುಗಿಹೋದಂತೆ.. ಸುದ್ದಿ ಏನಾದರೂ ಆಗಿರಬಹುದು.. ಅದನ್ನು ಸ್ವೀಕರಿಸುವ ತಾಳ್ಮೆ.. ಎದುರಿಸುವ ಗಟ್ಟಿಗತನ ಬೇಕು…

ಇಂತಹ ಸಂದರ್ಭ ಬದುಕಿನ ಬಗೆಗಿನ ನೋಟವನ್ನೇ ಬದಲಿಸಿಬಿಡುತ್ತದೆ. ಅನಿಶ್ಚಿತ ಬದುಕಿನ ಸಾಕ್ಷಿ ಕಣ್ಣಮುಂದೆ ತೆರೆದುಕೊಂಡಾಗ.. ಇಷ್ಟೇನಾ ಬದುಕು ಅನಿಸುತ್ತೆ. ಶಾಶ್ವತವಲ್ಲ ಎಂದು ತಿಳಿದಿದ್ದರೂ ಇಷ್ಟು ಅನಿಶ್ಚಿತ ಎಂಬ ಅರಿವು ಬರೆ ಎಳೆಯುತ್ತದೆ.  ಪ್ರತಿಬಾರಿಯೂ ಸಮಯ ನಮ್ಮ ಕೈ ಹಿಡಿಯುವುದಿಲ್ಲ ಎನ್ನುವುದು ಕಟು ಸತ್ಯ…

ಹೊರಗೆ ಕತ್ತಲುಕವಿದು ಮಳೆ ಸುರಿಯುತ್ತಿದೆ… ಕೈಯಲ್ಲಿ ಕಾಫಿ ಹಿಡಿದು ಕುಡಿಯುವುದರಲ್ಲೇ ಏನೆಲ್ಲಾ ನೆನಪುಗಳನ್ನು ಮರೆಯಬೇಕೆಂದೆನೂ ಅವೆಲ್ಲ ಮಳೆಯಂತೆ ರಭಸದಿಂದ ಸುರಿಯುತ್ತಿದೆ….

‍ಲೇಖಕರು avadhi

October 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: