ಆಧ್ಯಾತ್ಮ- ಅಪರಾಧಗಳ ಅಪಾಯಕಾರಿ ಕಾಕ್ ಟೇಲ್

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅಕ್ಟೋಬರ್ 02, 2019.

ದಿಲ್ಲಿಯಲ್ಲಿರುವ ಛತರ್ ಪುರ್ ಪ್ರದೇಶ. ಅಲ್ಲಿ ‘ಝೋರ್ಬಾ ದ ಬುದ್ಧ’ ಎಂಬ ವಿಶಿಷ್ಟ ಹೆಸರಿನ, ಸುತ್ತ ಹಸಿರನ್ನೇ ಹೊದ್ದಿರುವ ವಿಹಂಗಮ ಧ್ಯಾನಕೇಂದ್ರ.

ದಿಲ್ಲಿಯ ಛತರ್ ಪುರ್ ಎಂಬುದು ಒಂದು ರೀತಿಯಲ್ಲಿ ಶ್ರೀಮಂತರ ಪ್ರದೇಶ. ಮುಖ್ಯ ರಸ್ತೆಯ ಇಬ್ಬದಿಯಲ್ಲೂ ಸಾಕಷ್ಟು ಭವ್ಯ ಬಂಗಲೆಗಳನ್ನು ಹೊಂದಿರುವ ಈ ವಿಲಾಸಿ ಫಾರ್ಮ್ ಹೌಸ್ ಗಳನ್ನು ಸುರುಳಿ ಮುಳ್ಳಿನ ಕಿರೀಟವುಳ್ಳ ಆಳೆತ್ತರದ ಆವರಣಗಳು ಮತ್ತು ದೈತ್ಯ ಗೇಟುಗಳು ಭದ್ರವಾಗಿ ಮುಚ್ಚಿವೆ. ಈ ಗೇಟುಗಳ ಹಿಂದಿರುವ ಐಷಾರಾಮಿ ಫಾರ್ಮ್ ಹೌಸ್ ಗಳು ಜನಸಾಮಾನ್ಯರಿಗೆ ಪಕ್ಷಿನೋಟದಲ್ಲಿ ಒಂದಷ್ಟು ಕಾಣುವುದು ಮೆಟ್ರೋದಲ್ಲಿ ಪ್ರಯಾಣಿಸುವಾಗ ಮಾತ್ರ. ಅಂದಹಾಗೆ ಇಲ್ಲಿ ಸಾಮಾನ್ಯವಾಗಿ ಆಯೋಜಿಸಲಾಗುವ ಶ್ರೀಮಂತರ ಅದ್ದೂರಿ, ವಿಲಾಸಿ ‘ಪೇಜ್ ತ್ರೀ’ ಪಾರ್ಟಿಗಳು ಇಡೀ ಶಹರವು ಮಾತಾಡಿಕೊಳ್ಳುವ ಓಪನ್ ಸೀಕ್ರೆಟ್ ಗಳಲ್ಲೊಂದು.  

ನಾವು ಸುಮಾರು ಐವತ್ತರಿಂದ ಅರವತ್ತರಷ್ಟು ಮಂದಿ ಅಂದು ಝೋರ್ಬಾ ಧ್ಯಾನಕೇಂದ್ರದಲ್ಲಿ ಸೇರಿದ್ದೆವು. ಎಲ್ಲರ ಕಣ್ಣುಗಳಲ್ಲೂ ಸಾಕಷ್ಟು ನಿರೀಕ್ಷೆಗಳು. ಏನೋ ವಿಚಿತ್ರ ಕುತೂಹಲ. ನಾನು ಸ್ವತಃ ದುಬಾರಿ ಟಿಕೆಟ್ ತೆತ್ತು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾತರನಾಗಿ ಬಂದಿದ್ದೆ. ಹೀಗಾಗಿ ಬಹಳ ಜನವೇನೂ ಸೇರಲಿಕ್ಕಿಲ್ಲ ಎಂಬ ಲೆಕ್ಕಾಚಾರ ನನ್ನದಾಗಿತ್ತು. ಆದರೆ ನನ್ನ ಲೆಕ್ಕಾಚಾರವು ತಲೆಕೆಳಗಾಗಲು ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ. ಕಾರ್ಯಕ್ರಮವು ಆರಂಭವಾಗಲು ಇನ್ನೂ ಒಂದೂವರೆ ತಾಸು ಇರುವಂತೆಯೇ ಐವತ್ತಕ್ಕೂ ಹೆಚ್ಚಿನ ಜನಸಮೂಹವು ಅಲ್ಲಿ ಸೇರಿಯಾಗಿತ್ತು. ಇನ್ನು ಬಂದವರಲ್ಲಿ ಹೆಚ್ಚಿನವರು ಹದಿನೆಂಟರಿಂದ ಮೂವತ್ತೈದರ ನಡುವಿನ ಯುವಕ-ಯುವತಿಯರೇ ಆಗಿದ್ದರು ಎಂಬುದು ವಿಶೇಷ.

ಸಾಕಷ್ಟು ಹೊತ್ತು ಎಲ್ಲವೂ ಸರಿಯಾಗಿಯೇ ಇತ್ತು. ನಂತರ ಹೊಸದೊಂದು ಗುಸುಗುಸು ಅದೆಲ್ಲಿಂದ ಶುರುವಾಯಿತೋ ಏನೋ. ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಒಡೆತನದ ಧರ್ಮಾಟಿಕ್ ಎಂಟರ್ಟೈನ್ಮೆಂಟ್ ಸಂಸ್ಥೆಯ ತಂಡವು ನೆಟ್ ಫ್ಲಿಕ್ಸ್ ವಾಹಿನಿಗಾಗಿ ನಮ್ಮ ಚಟುವಟಿಕೆಗಳನ್ನು ರಹಸ್ಯವಾಗಿ ಚಿತ್ರೀಕರಣ ನಡೆಸುತ್ತಿದೆ ಎಂದು ಹರಿದಾಡುತ್ತಿತ್ತು ಆ ಗಾಸಿಪ್.

ಈ ಗಾಳಿಮಾತು ಹುಟ್ಟಿಕೊಂಡಿದ್ದೇ ತಡ. ಅಷ್ಟು ಹೊತ್ತು ಅಲ್ಲಿದ್ದ ದೈವಿಕ ವಾತಾವರಣವು ಏಕಾಏಕಿ ಕದಡಿಹೋಗಿ ಬಹಳಷ್ಟು ಮಂದಿ ಚಿಂತೆಗೀಡಾದವರಂತೆ ಕಂಡುಬಂದರು. ಶೂಟಿಂಗ್ ಮಾಡುವುದಾದರೆ ನಮ್ಮನ್ನು ಕೇಳಿ ಮಾಡಬೇಕಲ್ವಾ, ನಮ್ಮ ಖಾಸಗಿತನಕ್ಕೆ ಧಕ್ಕೆ ತರುವುದ್ಯಾಕೆ ಅಂತೆಲ್ಲಾ ಕೊಂಚ ಜೋರಾಗಿಯೇ ಆಯೋಜಕರ ವಿರುದ್ಧ ಅಬ್ಬರಿಸಿದರು. ಅಂತೂ ಧರ್ಮಾಟಿಕ್ ತಂಡವು ಇಲ್ಲಿಲ್ಲ ಮತ್ತು ನಿಮ್ಮನ್ನು ಯಾರೂ ಇಲ್ಲಿ ರಹಸ್ಯವಾಗಿ ಚಿತ್ರೀಕರಣ ಮಾಡುತ್ತಿಲ್ಲ ಎಂಬುದನ್ನು ಬಂದವರಿಗೆ ಅರ್ಥ ಮಾಡಿಸುವಷ್ಟರಲ್ಲಿ ಆಯೋಜಕರಿಗೆ ಸಾಕುಸಾಕಾಗಿದ್ದಂತೂ ಹೌದು.   

ಅಷ್ಟಕ್ಕೂ ‘ಧರ್ಮ’ ತಂಡವು ಆ ದಿನ ನಮ್ಮ ಚಿತ್ರೀಕರಣ ನಡೆಸಿದ್ದರೆ ಕಳೆದುಕೊಳ್ಳುವಂತದ್ದೇನೂ ಇರಲಿಲ್ಲ. ಹೆಚ್ಚೆಂದರೆ ವೀಡಿಯೋದಲ್ಲಿ ನಾಲ್ಕು ಮಂದಿಯ ಮುಂದೆ ನಾವು ಪೆದ್ದುಮಂಕೆಗಳಂತೆ ಕಾಣಿಸಿಕೊಳ್ಳುತ್ತಿದ್ದೆವು ಅಷ್ಟೇ. ಓಶೋರ ಹಲವು ಧ್ಯಾನಪ್ರಕಾರಗಳಲ್ಲಿ ಡೈನಮಿಕ್ ಮೆಡಿಟೇಷನ್ ಕೂಡ ಒಂದು. ಡೈನಮಿಕ್ ಮೆಡಿಟೇಷನ್ನಿನಲ್ಲಿ ಕೈಕಾಲುಗಳನ್ನು ವಿಚಿತ್ರವಾಗಿ ಅಲ್ಲಾಡಿಸುತ್ತಾ ತೀರಾ ಬೆವರಿಹೋಗುವಷ್ಟು ದೇಹವನ್ನು ಅಲುಗಾಡಿಸುವ ಒಂದು ಹಂತವಿದೆ. ಹೀಗಾಗಿ ಈ ಧ್ಯಾನಪ್ರಕ್ರಿಯೆಯನ್ನು ಹೊಸದಾಗಿ ನೋಡುವ ವ್ಯಕ್ತಿಯೊಬ್ಬನಿಗೆ ಧ್ಯಾನ ಮಾಡಲೆಂದು ಹೋದವರಿಗೆ ಇದೇನು ದೆವ್ವ ಬಡಿದುಕೊಂಡಿತೇನೋ ಎಂದನ್ನಿಸಿ ಗಾಬರಿಯಾದರೆ ಅಚ್ಚರಿಯಿಲ್ಲ. 

ಹಾಗೆಯೇ ಇಲ್ಲಿ ನನಗೆ ಹೊಸದಾಗಿ ಪರಿಚಯಿಸಲ್ಪಟ್ಟ ಮತ್ತೊಂದು ಸಂಗತಿಯೆಂದರೆ ‘ಗಿಬರಿಷ್’ ಭಾಷೆ. ಗಿಬರಿಷ್ ಎಂದರೆ ಪುಟ್ಟ ಮಕ್ಕಳ ಶೈಲಿಯಲ್ಲಿ, ನಾಲಗೆಯನ್ನು ಸುಮ್ಮನೆ ತಮ್ಮಿಷ್ಟಕ್ಕೆ ವಾಲಿಸುತ್ತಾ ಸದ್ದನ್ನು ಹೊರಡಿಸುವುದು. ಇಲ್ಲಿ ಬ್ಲಾಬ್ಲಾ ಎಂದರೂ ಓಕೆ, ಡುರ್ರ್ ಡುರ್ರ್ ಎಂದರೂ ಸರಿ. ಗಿಬರಿಷ್ ನಲ್ಲಿ ಶುದ್ಧ ಭಾಷೆಯನ್ನು ಮಾತನಾಡುವ ಅವಕಾಶವಿಲ್ಲದ ಕಾರಣ ತಲೆ, ಭುಜ, ಕೈಕಾಲುಗಳನ್ನಾಡಿಸುತ್ತಾ ಹೇಳಬೇಕಾಗಿರುವ ಸಂಗತಿಗಳನ್ನು ಇನ್ನೊಬ್ಬರಿಗೆ ಅರ್ಥಮಾಡಿಸಲು ಅವಕಾಶವಿದೆ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಗಿಬರಿಷ್ ಶೈಲಿಯನ್ನು ಮಾತನಾಡುವುದು ಎನ್ನುವುದಕ್ಕಿಂತಲೂ ಬಡಬಡಿಸುವುದು ಎಂದರೆ ತಪ್ಪಾಗಲಾರದು. 

ಅಂದು ಝೋರ್ಬಾ ಆಶ್ರಮಕ್ಕೆ ಬಂದಿದ್ದವರು ಅಷ್ಟು ಹೊತ್ತು ಇದೆಲ್ಲವನ್ನು ಖುಷಿಖುಷಿಯಾಗಿಯೇ ಮಾಡುತ್ತಿದ್ದರು. ಆದರೆ ತಮ್ಮ ಚೇಷ್ಟೆಗಳು ಕ್ಯಾಮೆರಾದಲ್ಲಿ ಸೆರೆಯಾಗಲಿವೆ ಎಂಬುದನ್ನು ಆಕಸ್ಮಿಕವಾಗಿ ಕೇಳಿ ತಿಳಿದಾಗ ಮಾತ್ರ ಗಾಬರಿಯಾಗಿ, ಹಾವು ತುಳಿದವರಂತೆ ಜಿದ್ದಿಗೆ ಬಿದ್ದಿದ್ದರು. ಕ್ಯಾಮೆರಾ ಫ್ರೇಮಿನಲ್ಲಿ ತಮ್ಮೊಳಗಿನ ವಿದೂಷಕನನ್ನು ಕಾಣಲು ಬಹುಷಃ ಅಲ್ಲಿದ್ದ ಬಹುತೇಕರು ತಯಾರಿರಲಿಲ್ಲ. ಪ್ರೈವಸಿ, ಸರಿತಪ್ಪುಗಳ ಮಾತು ಬೇರೆ. ಆದರೆ ಒಂದಂತೂ ಸತ್ಯ. ಅಂದು ಓಶೋ ನಮ್ಮೊಂದಿಗಿದ್ದರೆ ನೆರೆದಿದ್ದ ಮಂದಿಯ ಈ ಆಷಾಢಭೂತಿತನವನ್ನು ಕಂಡು ಖಂಡಿತ ನಗುತ್ತಿದ್ದರು.

ಅಷ್ಟಕ್ಕೂ ಅಂದು ‘ಝೋರ್ಬಾ ದ ಬುದ್ಧ’ ಧ್ಯಾನಕೇಂದ್ರದಲ್ಲಿ ನನ್ನನ್ನೂ ಸೇರಿದಂತೆ ಹಲವಾರು ಮಂದಿ ಸೇರಿದ್ದು ಕೈಕಾಲುಗಳನ್ನಾಡಿಸುತ್ತಾ ಡೈನಮಿಕ್ ಮೆಡಿಟೇಷನ್ ಮಾಡುವುದಕ್ಕಲ್ಲ. ಬಂದಿದ್ದ ಆಗಂತುಕರೊಂದಿಗೆ ಗಿಬರಿಷ್ ಶೈಲಿಯಲ್ಲಿ ಸುಖಾಸುಮ್ಮನೆ ಬಡಬಡಿಸುವುದಕ್ಕಷ್ಟೂ ಅಲ್ಲ. ನಾವಂದು ಸೇರಿದ್ದು ಒಂದು ಕಾಲದಲ್ಲಿ ಜಗತ್ತಿನೆಲ್ಲೆಡೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದ್ದ, ಅಪರಾಧ-ಆಧ್ಯಾತ್ಮಗಳ ವಿಚಿತ್ರ ಕಾಕ್ ಟೇಲ್ ಉಣಬಡಿಸಿದ್ದ ಓರ್ವ ಮಹಿಳೆಯನ್ನು ಕಾಣಲು. ಅಮೆರಿಕನ್ ಭದ್ರತಾ ಇಲಾಖೆಯ, ಅಮೆರಿಕನ್ ಸರಕಾರದ ದೊಡ್ಡ ತಲೆನೋವಾಗಿ ಭಾರೀ ಕುಖ್ಯಾತಿಯನ್ನು ಗಳಿಸಿದ್ದ ಓರ್ವ ಗುಜರಾತಿ ಮೂಲದ ವಿವಾದಾತ್ಮಕ ಮಹಿಳೆಯನ್ನು ಕಾಣಲು.

ಆಕೆ ಇನ್ಯಾರೂ ಅಲ್ಲ. ಮಾ ಆನಂದ್ ಶೀಲಾ!

*********

ಫ್ಲ್ಯಾಷ್ ಬ್ಯಾಕ್:

ನೆಟ್ ಫ್ಲಿಕ್ಸ್ ವಾಹಿನಿಯ ‘ವೈಲ್ಡ್ ವೈಲ್ಡ್ ಕಂಟ್ರಿ’ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದವರಿಗೆ ಮಾ ಆನಂದ್ ಶೀಲಾ ಯಾರೆಂದು ಈಗಾಗಲೇ ಗೊತ್ತಿರುತ್ತದೆ. ಸಾಕ್ಷ್ಯಚಿತ್ರವನ್ನು ನೋಡಿಲ್ಲದ ಓದುಗರಿಗೆ ಮಾತ್ರ ಶೀಲಾರ ಒಂದು ಚಿಕ್ಕ ಪರಿಚಯವನ್ನು ಈ ಹಂತದಲ್ಲಿ ನೀಡುವುದು ಅನಿವಾರ್ಯ.

ಮರಣಾನಂತರ ‘ಓಶೋ’ ಎಂಬ ಹೆಸರಿನಲ್ಲಿ ಖ್ಯಾತರಾದ ಆಚಾರ್ಯ ರಜನೀಶರ ಪರ್ಸನಲ್ ಸೆಕ್ರೆಟರಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದವರು ಮಾ ಆನಂದ್ ಶೀಲಾ. ಗುಜರಾತ್ ಮೂಲದ ಶೀಲಾ ಅಂಬಾಲಾಲ್ ಪಟೇಲ್ ತನ್ನ ಬಾಲ್ಯದ ಹಲವು ವರ್ಷಗಳನ್ನು ಅಮೆರಿಕಾದಲ್ಲಿ ಕಳೆದವರು. ಒಮ್ಮೆ ತನ್ನಪ್ಪನೊಂದಿಗೆ ರಜನೀಶರ ಆಶ್ರಮಕ್ಕೆ ಬರುವ ಶೀಲಾ, ನಂತರ ರಜನೀಶರನ್ನು ಕಂಡು ಆಕರ್ಷಿತರಾಗಿ ಅಲ್ಲೇ ಉಳಿಯುತ್ತಾರೆ. ಆಗ ಶೀಲಾ ಇಪ್ಪತ್ತೊಂದರ ತರುಣಿ.

ಸ್ವಭಾವತಃ ಬುದ್ಧಿವಂತೆ ಮತ್ತು ಚೂಟಿಯಾಗಿದ್ದ ಶೀಲಾ ಪೂನಾ ಆಶ್ರಮದಲ್ಲಿ ಸನ್ಯಾಸಿನಿಯಾಗಿ, ಕ್ರಮೇಣ ರಜನೀಶರ ಅತ್ಯಾಪ್ತ ಶಿಷ್ಯೆಯಾಗಲು ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ. ಆಗ ರಜನೀಶರ ಪರ್ಸನಲ್ ಸೆಕ್ರೆಟರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಾ ಯೋಗಲಕ್ಷ್ಮಿ ಎಂಬಾಕೆಯನ್ನು ನಿಧಾನವಾಗಿ ಬದಿಗೊತ್ತಿ, ಮುಂದೆ ತಾನು ಆ ಮುಖ್ಯ ಹುದ್ದೆಗೇರುವುದರಲ್ಲೂ ಶೀಲಾ ಬಹುಬೇಗ ಯಶಸ್ವಿಯಾಗುತ್ತಾರೆ. ತನ್ನಲ್ಲಿದ್ದ ಅಸಾಮಾನ್ಯ ನಾಯಕತ್ವದ ಗುಣದಿಂದಾಗಿ ಓಶೋ ಕನಸಾದ ‘ಕಮ್ಯೂನ್’ (ಓಶೋ ಅನುಯಾಯಿಗಳ ಗುಂಪು) ಅನ್ನು ಮತ್ತಷ್ಟು ಬಲಪಡಿಸುವ ಶೀಲಾ, ರಜನೀಶರನ್ನು ಪುಣೆಯ ಮುಗಿಯದ ವಿವಾದ, ಜಂಜಾಟಗಳಿಂದಲೂ ಮುಕ್ತರನ್ನಾಗಿಸಿ ಅಮೆರಿಕಾದ ಒರೆಗಾನ್ ಪ್ರದೇಶಕ್ಕೆ ರಹಸ್ಯವಾಗಿ ಕರೆದೊಯ್ಯುವಲ್ಲಿ ಯಶಸ್ಸನ್ನು ಕಾಣುತ್ತಾರೆ. 

ಈ ಅವಧಿಯಲ್ಲಿ, ಅಂದರೆ 1981 ರಿಂದ 1985 ರ ಮಧ್ಯೆ ಅಮೆರಿಕಾದಲ್ಲಾಗುವ ಬಹುದೊಡ್ಡ ಹಗರಣವೇ ಶೀಲಾರನ್ನು ಆ ಕಾಲದಲ್ಲಿ ಕುಖ್ಯಾತಿಯ ಉತ್ತುಂಗಕ್ಕೆ ಕರೆದೊಯ್ದಿದ್ದು. ಆಚಾರ್ಯ ರಜನೀಶರ ಕಮ್ಯೂನ್ ಕನಸನ್ನು ಅಮೆರಿಕಾದಲ್ಲಿ ನನಸು ಮಾಡಲು ಹೊರಡುವ ಶೀಲಾ, ಒರೆಗಾನ್ ಪ್ರದೇಶದ ಬಳಿಯಿದ್ದ ಆಂಟೆಲೋಪ್ ಎಂಬ ಹಳ್ಳಿಯಲ್ಲಿ ರಜನೀಶರ ಸಾವಿರಾರು ಅನುಯಾಯಿಗಳ ನೆರವಿನೊಂದಿಗೆ ಪುಟ್ಟ ನಗರಿಯನ್ನೇ ಸೃಷ್ಟಿಸುತ್ತಾರೆ.

ಅದು ವಸತಿ ಸಂಕೀರ್ಣಗಳು, ರೆಸ್ಟೊರೆಂಟ್, ಅತಿಥಿಗೃಹಗಳು, ಧ್ಯಾನ ಕೇಂದ್ರಗಳು, ಥೆರಪಿ ಕೇಂದ್ರಗಳು, ಗೋದಾಮುಗಳು, ಉಪನ್ಯಾಸದ ಸಭಾಂಗಣ, ಕೃಷಿಭೂಮಿ, ಸೇತುವೆ, ಕೊಳ, ರಸ್ತೆ, ಏರ್ ಪೋರ್ಟ್, ಖಾಸಗಿ ವಿಮಾನಗಳು, ವಿಲಾಸಿ ಕಾರುಗಳು, ಔಷಧಾಲಯ, ವಾಣಿಜ್ಯ ಸಂಕೀರ್ಣ, ರಹಸ್ಯ ಕೋಣೆಗಳು, ಸುರಂಗಗಳು… ಹೀಗೆ ಬಹುತೇಕ ಎಲ್ಲವನ್ನೂ ಹೊಂದಿದ್ದ ಸುಸಜ್ಜಿತ ನಗರಿ. ಆ ಕಾಲದಲ್ಲೇ ಅಂದಾಜು ಒಂದು ಮಿಲಿಯನ್ ಡಾಲರಿನ ದುಬಾರಿ ದರದಲ್ಲಿ ಖರೀದಿಸಲಾಗಿದ್ದ, 64000 ಎಕರೆ ವಿಸ್ತೀರ್ಣದ ಈ ವಿಶಾಲವಾದ ಪ್ರದೇಶಕ್ಕೆ “ರಜನೀಶಪುರಂ” ಎಂದು ಹೊಸದಾಗಿ ನಾಮಕರಣವನ್ನು ಬೇರೆ ಮಾಡಲಾಗಿತ್ತು.

ಹೇಳಹೊರಟರೆ ‘ರಜನೀಶಪುರಂ’ ಪಟ್ಟಣದ ನಿರ್ಮಾಣದಲ್ಲಿ ನಡೆದ ನೂರಾರು ಅಕ್ರಮಗಳದ್ದೇ ಒಂದು ದೊಡ್ಡ ಕತೆ. ಆಚಾರ್ಯ ರಜನೀಶ್ ಆ ಅವಧಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ, ಎಲ್ಲದಕ್ಕೂ ರಜನೀಶರ ಪರ್ಸನಲ್ ಸೆಕ್ರೆಟರಿಯಾಗಿದ್ದ ಶೀಲಾರದ್ದೇ ನಾಯಕತ್ವ. ಮಾಧ್ಯಮಗಳಿಗೂ ಆಕೆ ರಜನೀಶರ ಮುಖವಾಣಿ.

ಆದರೆ ರಜನೀಶಪುರಂ ನಿರ್ಮಾಣವು ಕೆಲ ಸನ್ಯಾಸಿಗಳ ಸಂಶಯಾಸ್ಪದ ಸಾವು, ಕೊಲೆ ಯತ್ನಗಳು, ನಗರವಾಸಿಗಳನ್ನು ಸಾಮೂಹಿಕವಾಗಿ ಅನಾರೋಗ್ಯಕ್ಕೀಡುಮಾಡುವ ಭಾರೀ ಅಪಾಯಕಾರಿ ಷಡ್ಯಂತ್ರ, ಅಮೆರಿಕನ್ ಸರಕಾರಿ ಆಫೀಸೊಂದರ ಮೇಲೆ ಬಾಂಬ್ ದಾಳಿ ಯತ್ನ, ಅಮೆರಿಕನ್ ಸರಕಾರಿ ಅಧಿಕಾರಿಗಳ ಕೊಲೆ ಯತ್ನ, ನಕಲಿ ವಿವಾಹಗಳು, ಅಕ್ರಮ ವಲಸೆ, ತೆರಿಗೆ ವಂಚನೆ, ನಕಲಿ ಬೆಂಕಿ ಅವಘಡ, ಈ ಮೂಲಕ ದಾಖಲೆಗಳ ನಾಶ, ಟೆಲಿಫೋನ್ ಕದ್ದಾಲಿಕೆ, ಆಯುಧ-ಮದ್ದುಗುಂಡುಗಳ ಅಕ್ರಮ ದಾಸ್ತಾನು… ಹೀಗೆ ಹತ್ತಾರು ಗಂಭೀರ ಆರೋಪಗಳಿಗೆ ಬಲಿಯಾಗಿ ಗಬ್ಬೆದ್ದುಹೋಯಿತು. ರಜನೀಶರ ಅಧಿಕೃತ ಮುಖವಾಣಿಯಾಗಿದ್ದ ಆನಂದ್ ಶೀಲಾ ಈ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿ, ಮಾಧ್ಯಮಗಳಲ್ಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಬೇಡದ ಕಾರಣಗಳಿಂದ ಮನೆಮಾತಾಗಿದ್ದು ಹೀಗೆ.

ಒರೆಗಾನ್ ಪ್ರಕರಣವು ಮುಂದೆ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವಾಗಿ ಓಶೋರನ್ನು ಬಂಧಿಸಿದ ಅಮೆರಿಕನ್ ಭದ್ರತಾ ಇಲಾಖೆಯು, ಅವರನ್ನು ಭಾರತಕ್ಕೆ ಗಡೀಪಾರು ಮಾಡಿತು. ಇಪ್ಪತ್ತು ವರ್ಷ ಜೈಲು ಶಿಕ್ಷೆಗೊಳಗಾದ ಮಾ ಆನಂದ್ ಶೀಲಾ ಮೂವತ್ತೊಂಭತ್ತು ತಿಂಗಳುಗಳ ಕಾಲ ಜೈಲಿನಲ್ಲಿದ್ದು, ನಂತರ ಬಿಡುಗಡೆಯಾದರು. ಸದ್ಯ ಶೀಲಾ ಸ್ವಿಟ್ಝಲ್ರ್ಯಾಂಡ್ ದೇಶದ ನಿವಾಸಿ. ಅಲ್ಲಿ ತನ್ನ ತಾಯಿ ಮತ್ತು ತಂದೆಯ ಗೌರವಾರ್ಥ ಕ್ರಮವಾಗಿ ‘ಮಾ ಸದನ್’ ಮತ್ತು ‘ಬಾಪೂ ಸದನ್’ ಎಂಬ ಹೆಸರಿನಲ್ಲಿ ವಯಸ್ಕ ಮಾನಸಿಕ ರೋಗಿಗಳಿಗಾಗಿ ಆರೈಕೆಯ ಕೇಂದ್ರವನ್ನೂ ಕೂಡ ಆಕೆ ನಡೆಸುತ್ತಿದ್ದಾರೆ.

*********

ಇಂತಿಪ್ಪ ಶೀಲಾರನ್ನು ಕಾಣಲು ದುಬಾರಿ ಟಿಕೆಟ್ ತೆತ್ತು ಬಂದಿದ್ದ ಅಲ್ಲಿದ್ದ ಯುವಜನರನ್ನು ಕಂಡಾಗ ಇದು ನೆಟ್ ಫ್ಲಿಕ್ಸ್ ವಾಹಿನಿಯು ಹುಟ್ಟಿಸಿದ ಸಂಚಲನವೇ ಎಂಬುದನ್ನು ಅರಿಯಲು ಮಹಾಬುದ್ಧಿವಂತಿಕೆಯೇನೂ ಬೇಕಿರಲಿಲ್ಲ.

ಎಂಭತ್ತರ ದಶಕದ ಅವಧಿಯಲ್ಲಿ ಧಾರ್ಮಿಕ ಗುಂಪೊಂದರ ನಾಯಕಿಯೆಂದು ಹೇಳಿಕೊಳ್ಳುವ ಭಾರತೀಯ ಮೂಲದ ಮಹಿಳೆಯೊಬ್ಬಳು ಪತ್ರಿಕಾಗೋಷ್ಠಿಯಲ್ಲಿ ಮಧ್ಯದ ಬೆರಳು ತೋರಿಸಿ ಎದುರಾಳಿಗಳನ್ನು ಲೇವಡಿ ಮಾಡುವುದು, ‘ಟಫ್ ಟಿಟ್ಟೀಸ್’ ಎಂದು ತನ್ನನ್ನು ತಾನೇ ಕರೆದುಕೊಳ್ಳುವುದು, ಖಾರದ ಪ್ರಶ್ನೆ ಕೇಳಿದ ಟಿವಿ ನಿರೂಪಕನೊಬ್ಬನನ್ನು ನೇರಪ್ರಸಾರದ ಕಾರ್ಯಕ್ರಮದಲ್ಲೇ ‘ಪಿಂಪ್’ ಎಂದು ಜರೆಯುವುದು… ಹೀಗೆ ಒಂದು ಕಾಲದಲ್ಲಿ ರೆಬೆಲ್ ರಾಣಿಯಂತೆ ಮೆರೆದಿದ್ದ ಶೀಲಾರನ್ನು, ಈ ಒಂದು ಡಾಕ್ಯುಮೆಂಟರಿಯು ಮತ್ತೊಮ್ಮೆ ಯುವಜನರ ಮಧ್ಯೆ ‘ಪಾಪ್ ಸೆನ್ಸೇಶನ್’ ಆಗಿ ಪ್ರಸ್ತುತಪಡಿಸಿತ್ತು. ಹೀಗಾಗಿ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಶೀಲಾರ ಬಗ್ಗೆ ವಿಚಿತ್ರ ಕುತೂಹಲವೊಂದು ಹುಟ್ಟಿಕೊಂಡಿದ್ದು ಸಹಜವೇ ಆಗಿತ್ತನ್ನಿ. 

ಏಕೆಂದರೆ ತೊಂಭತ್ತರ ದಶಕದಲ್ಲಿ ಹುಟ್ಟಿದ್ದ ನನ್ನಂಥಾ ಬಹುತೇಕರು ಹಿಪ್ಪಿ ಚಳುವಳಿಯ ಬಗ್ಗೆ ಅಲ್ಲಲ್ಲಿ ಓದಿ, ಕೇಳಿ ತಿಳಿದುಕೊಂಡಿದ್ದೇ ಹೆಚ್ಚು. ಉದಾಹರಣೆಗೆ ನಮ್ಮಲ್ಲಿ ಬಹುತೇಕರಿಗೆ ಮಹರ್ಷಿ ಮಹೇಶ ಯೋಗಿ ಗೊತ್ತಿರುವಷ್ಟು ಜಿಮ್ ಜೋನ್ಸ್ ಗೊತ್ತಿಲ್ಲ. ಹಲವು ವಿವಾದಗಳಿಂದಾಗಿ ಓಶೋ ಬಗ್ಗೆ ಒಂದಷ್ಟು ಓದಿ ತಿಳಿದಿದ್ದೆನಾದರೂ ಮಾ ಆನಂದ್ ಶೀಲಾರ ಪರಿಚಯವು ಹಿಂದೆಂದೂ ನನಗಾಗಿರಲಿಲ್ಲ. ಹೀಗಿರುವಾಗ ಜಗತ್ತಿಗೆ ಯಾವತ್ತೋ ಮರೆತುಹೋಗಿದ್ದ ಹಳೆಯ ಒರೆಗಾನ್ ಪ್ರಕರಣವನ್ನು ನೆನಪಿಸಿ, ಆನಂದ್ ಶೀಲಾರನ್ನು ಮತ್ತೆ ಮುಖ್ಯವಾಹಿನಿಗೆ ತಂದಿದ್ದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾದ ‘ವೈಲ್ಡ್ ವೈಲ್ಡ್ ಕಂಟ್ರಿ’ ಸಾಕ್ಷ್ಯಚಿತ್ರ. ಆಧ್ಯಾತ್ಮದ ಹೆಸರಿನಲ್ಲಿ ಅಪರಾಧಗಳ ಸರಣಿಯನ್ನೇ ಹೊಂದಿದ್ದ ಈ ಕಾರ್ಯಕ್ರಮವನ್ನು ವೀಕ್ಷಿಸಿ ಎಲ್ಲರಂತೆ ನಾನೂ ಹೌಹಾರಿದ್ದೆ. ನನ್ನನ್ನು ಝೋರ್ಬಾ ಧ್ಯಾನಕೇಂದ್ರದ ಈ ಕಾರ್ಯಕ್ರಮದತ್ತ ಕರೆತಂದ ಅಂಶವೂ ಕೂಡ ಇದೇ.    

ಇನ್ನುಸ್ಥಳೀಯರಿಗೆ ಶೀಲಾರ ಈ ಕಾರ್ಯಕ್ರಮದ ಬಗೆಗಿದ್ದ ಕುತೂಹಲಕ್ಕೆ ಮತ್ತೊಂದು ಕಾರಣವೆಂದರೆ ಬರೋಬ್ಬರಿ ಮೂವತ್ತೈದು ವರ್ಷಗಳ ನಂತರ ಶೀಲಾ ಭಾರತಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಸೆನ್ಸೇಷನ್ ದೊಡ್ಡ ಮಟ್ಟದಲ್ಲಿರುವುದು ಸಹಜವೇ ಆಗಿತ್ತು. ಅದರಲ್ಲೂ ಟಿ.ಆರ್.ಪಿ ಹುಟ್ಟಿಸುವ ಸ್ಕೂಪ್ ಗಳಿಗಾಗಿ ಕಾಯುವ ಟಿವಿ ಚಾನೆಲ್ಲುಗಳಿಗೆ ಶೀಲಾ ಎಂಬ ಹೆಸರು ಯಾವತ್ತೂ ವಿಫಲವಾಗದ ರೆಸಿಪಿ. ಶೀಲಾರ ಈ ಇಂಡಿಯಾ ಟೂರಿನಲ್ಲಿ ಭಾರತೀಯ ಮಾಧ್ಯಮಲೋಕದ ಘಟಾನುಘಟಿಗಳಲ್ಲೊಬ್ಬರಾದ ಬರ್ಖಾ ದತ್ ಕೂಡ ಆಕೆಯ ಸಂದರ್ಶನವನ್ನು ತೆಗೆದುಕೊಂಡಿದ್ದು ಶೀಲಾರ ಭಾರತ ಪ್ರವಾಸವು ಹುಟ್ಟುಹಾಕಿದ್ದ ಸಂಚಲನಕ್ಕೆ ಸಾಕ್ಷಿ.

ಒಟ್ಟಿನಲ್ಲಿ ಝೋರ್ಬಾ ಧ್ಯಾನಕೇಂದ್ರದಲ್ಲುಂಟಾದ ಪುಟ್ಟ ಗೊಂದಲಗಳ ನಂತರ, ನಮ್ಮೆಲ್ಲರ ನಿರೀಕ್ಷೆಯಂತೆ ತಮ್ಮ ಸಂಗಡಿಗರು ಮತ್ತು ಆಯೋಜಕರ ಅದ್ದೂರಿ ಸ್ವಾಗತದೊಂದಿಗೆ ಮಾ ಆನಂದ್ ಶೀಲಾ ಮೆಲ್ಲಗೆ ವೇದಿಕೆಯತ್ತ ನಡೆದುಬಂದರು. ‘ಭಗವಾನ್ ರಜನೀಶ್ ಎಂಬ ಆಕರ್ಷಕ ವ್ಯಕ್ತಿಯೊಂದಿಗೆ ನಾನು ಪ್ರೀತಿಯಲ್ಲಿ ಬಿದ್ದಿದ್ದೆ’, ಎಂದು ಮುಗುಳ್ನಗುತ್ತಾ ಕಳೆದುಹೋದ ದಿನಗಳನ್ನು ನೆನಪಿಸಿಕೊಂಡರು. ಜೊತೆಗೇ ವಯಸ್ಸು ಅರವತ್ತೊಂಬತ್ತಾದರೂ ತಾನು ಹತ್ತೊಂಬತ್ತರ ತರುಣಿ ಎಂಬಂತೆ, ತನ್ನ ಹಳೆಯ ಬೋಲ್ಡ್ ಶೈಲಿಯ ಲೇಪವಿದ್ದ ಘನತೆಯ ಮಾತನಾಡಿ ಚಪ್ಪಾಳೆಗಳನ್ನೂ ಗಿಟ್ಟಿಸಿಕೊಂಡರು. 

ಇನ್ನು ಸಭಾ ಸಂದರ್ಶನದ ತರುವಾಯ ನಡೆದ ಸಂವಾದ, ಆಟೋಗ್ರಾಫ್-ಸೆಲ್ಫೀ ಕಾರ್ಯಕ್ರಮಗಳ ಜೊತೆ, ಕೊನೆಯಲ್ಲಿ ಒಂದೊಳ್ಳೆಯ ಭೋಜನ. ಹೀಗೆ ದಿಲ್ಲಿಯ ಛತರ್ ಪುರ್ ಭಾಗದಲ್ಲಿ ಆಯೋಜಿಸಲಾಗಿದ್ದ ಮಾ ಆನಂದ್ ಶೀಲಾರ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನಾನು ಇದರ ಬಗ್ಗೆ ವಿಶೇಷ ವರದಿಯೊಂದನ್ನು ಓದುಗರಿಗಾಗಿ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದೆ. ಈ ನಿಟ್ಟಿನಲ್ಲಿ ಬರೆದಿದ್ದ ಮಿನಿ ಸರಣಿಯೊಂದು ಮುಂದೆ ಅವಧಿ ಜಾಲತಾಣದಲ್ಲಿ ಪ್ರಕಟವೂ ಆಯಿತು.

2021 ರ ಎಪ್ರಿಲ್ 22 ರಂದು ಶೀಲಾರ ಬಗೆಗಿನ ಎರಡನೇ ಸಾಕ್ಷ್ಯಚಿತ್ರವಾದ ‘ಸರ್ಚಿಂಗ್ ಫಾರ್ ಶೀಲಾ’ ನೆಟ್ ಫ್ಲಿಕ್ಸ್ ವಾಹಿನಿಯಲ್ಲಿ ಪ್ರಸಾರವಾಯಿತು. ಸ್ವಿಟ್ಝಲ್ರ್ಯಾಂಡಿನಿಂದ ದಿಲ್ಲಿಗೆ ಬಂದಿಳಿಯುವ ಶೀಲಾ, ದಿಲ್ಲಿಯ ಛತರ್ ಪುರ್ ಫಾರ್ಮ್ ಹೌಸಿನಲ್ಲಿ ಕಳೆದ ಕೆಲ ಕ್ಷಣಗಳನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ. ಇತ್ತ ಕಾರ್ಯಕ್ರಮದ ಆಯೋಜಕರು ಅಂದು ನಮಗೆ ನೀಡಿದ್ದ ಮಾತನ್ನು ಉಳಿಸಿಕೊಂಡರು ಎಂಬ ಸತ್ಯವನ್ನು ಡಾಕ್ಯುಮೆಂಟರಿಯಲ್ಲಿ ನಾನು ಕಂಡುಕೊಂಡೆ. 

‘ಸರ್ಚಿಂಗ್ ಫಾರ್ ಶೀಲ’ ಸಾಕ್ಷ್ಯಚಿತ್ರವು ಕೊನೆಗೂ ನಮ್ಮಲ್ಲಿ ಉಳಿಸಿಹೋಗುವ ಏಕೈಕ ಪ್ರಶ್ನೆಯೆಂದರೆ ಶೀಲಾರ ಭಾರತ ಪ್ರವಾಸದ ಅಸಲಿ ಉದ್ದೇಶವು ಏನಾಗಿತ್ತು ಎಂಬುದು. ಇದರ ಜೊತೆಗೇ ‘ಸೆಲೆಬ್ರಿಟಿ’ಗಳು ಏನು ಮಾಡಿದರೂ ಚಂದ ಎಂಬ ಹೆಸರಿನಲ್ಲಿ ಹುಟ್ಟುತ್ತಿರುವ, ಹೊಸ ತಳಿಯ ಸೆಲೆಬ್ರಿಟಿಗಳನ್ನು ಸೃಷ್ಟಿಸುತ್ತಿರುವ ಅಪಾಯಕಾರಿ ಟ್ರೆಂಡ್ ಒಂದರ ಬಗ್ಗೆ!

| ಮುಂದಿನ ಸಂಚಿಕೆಯಲ್ಲಿ |

May 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: