ಎಡ, ಬಲ, ಮಧ್ಯಮ ಪಂಥ ಏಕೆ ಬೇಕು..?

 ಡಾ. ಸಂಗಮೇಶ ಎಸ್. ಗಣಿ 

ಕಾವ್ಯವು ಬದುಕಿನಂತೆ ವ್ಯಾಖ್ಯಾನಕ್ಕೆ ಒಳಪಡದ ಅಸೀಮ ಸಂಗತಿ. ಅದನ್ನು ಅರ್ಥದ ಚೌಕಟ್ಟಿನಲ್ಲಿ ಬಂಧಿಸಿಟ್ಟು ಅದರ ಸ್ವರೂಪವನ್ನು ಪರಿಭಾವಿಸುವುದು ಕಷ್ಟವೂ, ಸಾಹಸವೂ ಆದ ಕಾರ್ಯ. ಬದುಕು, ಕಾವ್ಯ ಆಗುವ ಮತ್ತು ಮಾಗುವ ಮಾರ್ಪಾಡಿಗೆ ಮೈ ಒಡ್ಡಿಕೊಂಡಿರುತ್ತವೆ. ಇದು ಬದುಕಿನ ಚಲನಶೀಲತೆ ಜೊತೆಗೆ ಕಾವ್ಯದ ನೈರಂತರತೆಯ ದ್ಯೋತಕವೂ ಆಗಿದೆ. ಬದುಕನ್ನು ಅಂತರ್ಗತಗೊಳಿಸಿಕೊಂಡ ಕಾವ್ಯ, ಕಾವ್ಯವನ್ನು ಆಳದಲ್ಲಿ ಜೀವಿಸುವ ಬದುಕು ಚೋದ್ಯವೂ ಹೌದು, ಚಿಂತನೆಯ ಆಕರವೂ ಹೌದು.

ಆಧುನಿಕ ಕನ್ನಡ ಕಾವ್ಯದ ಆಶಯವನ್ನು ಕುರಿತು ಪ್ರಸ್ತಾಪಿಸುವ ಪೂರ್ವದಲ್ಲಿ ಕಾವ್ಯದ ಪಾರಂಪರಿಕ ನಡಿಗೆಯನ್ನೊಮ್ಮೆ ಸಂಕ್ಷಿಪ್ತವಾಗಿ ಅವಲೋಕಿಸುವುದು ಉಚಿತವೆನಿಸುತ್ತದೆ. ಆಗ ಮಾತ್ರ ಇಂದಿನ ಕಾವ್ಯದ ಒಟ್ಟು ಆಶಯದ ಹೊಳಹುಗಳು ಸ್ಪಷ್ಟವಾಗಿ ಕಾಣಿಸಬಲ್ಲವು. ಯಾವ ಕಾಲಕ್ಕೂ ಕವಿಯನ್ನು ಪ್ರಭಾವಿಸುವುದು ಆಯಾಯ ಕಾಲ ಧರ್ಮ. ಕಾಲದ ಕನ್ನಡಿಯಾಗಿ ಕಾವ್ಯ ಕಾಣಿಸಿಕೊಂಡಿದೆ ಎಂಬುದು ಕಾವ್ಯಾಧ್ಯಯನದಿಂದ ಕಂಡುಬಂದ ವೇದ್ಯ ಸಂಗತಿ.

ಧರ್ಮಶ್ರದ್ಧೆ ಮತ್ತು ರಾಜನಿಷ್ಠೆ ಈ ಎರಡು ಶಕ್ತಿಗಳು ಕನ್ನಡ ಕಾವ್ಯವನ್ನು ಅನೂಚಾನವಾಗಿ ನಿಯಂತ್ರಿಸಿಕೊಂಡೇ ಬಂದಿವೆ. ರಾಜಾಶ್ರಯದಲ್ಲಿ ಬೆಳೆದ ಅಂದಿನ ಪಂಪ, ರನ್ನ, ಜನ್ನ, ಪೊನ್ನ ಮುಂತಾದ ಕವಿಗಳು ರಾಜನಿಷ್ಠೆಯನ್ನು ತೋರಿದ್ದು ನಿಜ. ಇದಕ್ಕೆ ಕಾರಣ ಅಂದಿನ ರಾಜಕೀಯ ವ್ಯವಸ್ಥೆ, ಆಡಳಿತ ವ್ಯವಸ್ಥೆ. ಇದು ಅಂದಿನ ಕವಿಗಳಿಗೆ ಅನಿವಾರ್ಯವೂ ಆಗಿತ್ತು. ಕಾವ್ಯನಿರ್ಮಿತಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವುದರ ಜೊತೆಗೆ ಕಾವ್ಯ ಪೋಷಕ ಸಂಸ್ಥೆಯಾಗಿ ರಾಜಕೀಯ ವ್ಯವಸ್ಥೆ ಕೆಲಸ ಮಾಡುತ್ತಿತ್ತು.

ಈ ನಡುವೆಯೂ ಕವಿಗಳು ಧರ್ಮಶ್ರದ್ಧೆಯ ಮೂಲಕವೇ ರಾಜಾಶ್ರಯದ ಹಂಗು ಹರಿದುಕೊಂಡು ಸ್ವಪಜ್ಞತೆಯನ್ನು ಮೆರೆದುದು ಗಮನಾರ್ಹ ಸಂಗತಿ. ಧರ್ಮವನ್ನೂ ಕಾವ್ಯಧರ್ಮವನ್ನೂ ಒಟ್ಟೊಟ್ಟಿಗೇ ಪ್ರತಿಪಾದಿಸಿದ ಕವಿಗಳು ಒಳಗೊಳಗೇ ರಾಜವಿರೋಧಿ ಧೋರಣೆಯನ್ನು ಅನುಸರಿಸಿದರು. ಆನಂತರ ಕನ್ನಡ ಕಾವ್ಯವು ಸಂಪೂರ್ಣ ರಾಜಾಶ್ರಯದ ಬಂಧನದಿಂದ ಬಿಡಿಸಿಕೊಂಡು ಭಕ್ತಿ ಮತ್ತು ಅನುಭಾವದ ನೆಲೆಯಲ್ಲಿ ಅಭಿವ್ಯಕ್ತಿ ಪಡೆದು, ಜನಮುಖಿಯಾಗಿ ರೂಪು ಪಡೆದುಕೊಂಡಿತು.

ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಇತ್ಯಾದಿ ಯಾಂತ್ರಿಕ ವಿಂಗಡಣಾ ಕ್ರಮಗಳನ್ನು ಅನುಸರಿಸಿಕೊಂಡು ಸಾಹಿತ್ಯ ಪರಂಪರೆಯನ್ನು ಅಧ್ಯಯನಿಸುವ ಕ್ರಮವು ಜಾರಿಯಲ್ಲಿ ಬಂತು. ಆಧುನಿಕ ಕನ್ನಡ ಕಾವ್ಯವನ್ನು ನವೋದಯ, ನವ್ಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ, ಸ್ತ್ರೀವಾದಿ ಹೀಗೆ ಅನೇಕ ವಿಭಜಕ ನೋಟಕ್ರಮವನ್ನು ರೂಪಿಸಿಕೊಂಡು ನೋಡಲು ಯತ್ನಿಸಲಾಯಿತು. ಇದರ ಫಲ ಅಷ್ಟೇನೂ ಪರಿಣಾಮಕಾರಿಯೂ, ಪ್ರಯೋಜನಕಾರಿಯೂ ಆಗಲಿಲ್ಲ. ಕಾಲಧರ್ಮವೇ ಕಾವ್ಯದ ಮುಖ್ಯ ಕಾಳಜಿಗಳಲ್ಲೊಂದು ಎಂದಾಗ ಆಯಾಯ ಕಾಲದ ಜೀವನಕ್ರಮ, ಲೋಕವ್ಯಾವಹಾರಗಳು, ಚಿತ್ತವೃತ್ತಿ ಇತ್ಯಾದಿ ಅಂಶಗಳು ಕಾವ್ಯನಿರ್ಮಿತಿಗೆ ಮುಖ್ಯ ಪ್ರೇರಕಾಂಶಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಒಟ್ಟು ಕಾವ್ಯದ ಕುರಿತು ವಿವೇಚಿಸಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಕಾವ್ಯದ ಸ್ವರೂಪವನ್ನು ಕುರಿತು ಅರಿತುಕೊಳ್ಳುವುದೂ ಮುಖ್ಯವೇ. ‘ವಸಂತ ವನದಲ್ಲಿ ಕೂಗುವ ಕೋಗಿಲೆ ರಾಜನ ಬಿರುದನು ಬಯಸುವುದಿಲ್ಲ’ ಎಂಬ ಕುವೆಂಪು ಅವರ ಮಾತು ಸ್ವಾತಂತ್ರ್ಯ ಪೂರ್ವ ಕಾಲದ ಕಾವ್ಯದ ಸ್ವರೂಪವನ್ನು ಸೂಚಿಸುತ್ತದೆ. ಕವಿಯಾದವನಿಗೆ ಯಾವ ರಾಜಾಶ್ರಯದ ಹಂಗೂ ಇರಕೂಡದು ಎಂಬುದನ್ನು ಬಲವಾಗಿ ಪ್ರತಿಪಾದಿಸಿದ ಕವಿ ಕುವೆಂಪು ‘ಚಕ್ರವರ್ತಿಯ ವಿಫುಲ ಸಂಪತ್ತು ಕವಿಯ ಕಾಲ್ಗಳಡಿ’ ಎಂದು ಪ್ರಭುತ್ವ ವಿರೋಧಿ ನಿಲುವನ್ನು ಪ್ರತಿಪಾದಿಸಿದರು.

ರಾಷ್ಟ್ರೀಯ ಪ್ರಜ್ಞೆಯು ಸಹ ಕನ್ನಡ ಕಾವ್ಯವನ್ನು ತೀವ್ರವಾಗಿ ಪ್ರಭಾವಿಸಿದೆ. ಪ್ರಭುತ್ವ ವಿರೋಧಿ ಧೋರಣೆ, ಸ್ವಾತಂತ್ರ್ಯದ ಹಂಬಲುಗಳು ಅನಂತರದ ಕನ್ನಡ ಸಾಹಿತ್ಯದ ಬಹುತೇಕ ಪ್ರಕಾರಗಳು ಹಾಗೂ ಚಳವಳಿಗಳಲ್ಲೂ ಗುಪ್ತಗಾಮಿನಿಯಾಗಿ ಪ್ರವಹಿಸಿವೆ. ಈ ಹಿನ್ನೆಲೆಯಲ್ಲಿ ಕಾವ್ಯವು ಅಂದಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಗತಿಗಳ ಪ್ರಭಾವ ಮತ್ತು ಪ್ರೇರಣೆಗಳಿಂದ ಹೊರತಾಗಿರುವುದಿಲ್ಲ ಎಂಬುದು ತಿಳಿಯುತ್ತದೆ.

ಯಾವ ಕಾಲದ ಬರಹಗಾರನೂ ಕೂಡ ಅಂದಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆಯಿಂದ ವಿಮುಖವಾಗಿ ಬರೆಯಲಾರ. ಹಾಗೆ ಬರೆದರೂ ಕೂಡ ಅದು ವಿಶಿಷ್ಟ ಪರಿಣಾಮ ಉಂಟು ಮಾಡುವುದಿಲ್ಲ. ಅಂಥ ಕಾವ್ಯಕ್ಕೆ ಆಯಸ್ಸು ಸಹ ಕಡಿಮೆಯೇ. ಅಲ್ಲದೇ ಕಾವ್ಯ ಸ್ಥಿರೀಕರಣಗೊಳ್ಳುವಲ್ಲಿ ಸೋಲುತ್ತದೆ.

ಕವಿ ವಡ್ಸ್ ವರ್ತ ‘The Rainbow’ ಎಂಬ ಕವಿತೆಯಲ್ಲಿ ‘My heart leaps up when I behold a rainbow in the sky’. ‘ಕಾಮನಬಿಲ್ಲನ್ನು ಕಂಡಾಗ ನನ್ನ ಮನಸ್ಸು ನೆಗೆದು ಪುಟಿಯುತ್ತದಲ್ಲ’ ಎಂಬ ವಿಸ್ಮಯವನ್ನು ಗುರುತಿಸಿದ ಕವಿ, ಲೋಕ ವ್ಯಾಪಾರಗಳಿಗೆ ಹೀಗೆ ಸಂತೋಷ-ಸಂಭ್ರಮಗಳಿಂದ ಸ್ಪಂದಿಸುವ ಈ ಒಂದು ಲಕ್ಷಣ ತನಗೆ ಹುಟ್ಟಿನೊಡನೆಯೇ ಬಂದದ್ದು ಎಂಬುದನ್ನು ಪ್ರಸ್ತಾಪಿಸುತ್ತಾನೆ. ಅದು ತನಗೆ ಹೇಗೋ ತನ್ನ ಹುಟ್ಟಿನಿಂದಲೇ ಬಂದ ಗುಣವಾದುದರಿಂದ ‘ನನ್ನ ಎಳೆಯಂದಿನಲ್ಲಿ ಹೀಗೇ ಆಗುತ್ತಿತ್ತು, ನಾನು ಯುವಕನಾಗಿರುವಾಗಲೂ ಹೀಗೇ ಆಗುತ್ತಿದೆ ಮತ್ತು ನಾನು ವೃದ್ಧನಾದಾಗಲೂ ಹೀಗೇಯೇ ಆಗಲಿ; ಒಂದು ವೇಳೆ ಹೀಗೆ ಆಗದಿದ್ದರೆ, ನಾನು ಸಾಯುವುದೇ ವಾಸಿ’ ಎನ್ನುತ್ತಾನೆ.

ಅಂದರೆ ಕವಿಯಾಗುವುದು ಎಂದರೆ ಸುತ್ತಣ ಜಗತ್ತಿನೊಂದಿಗೆ ನಿರಂತರವಾದ ಸಂವಾದವನ್ನು ಏರ್ಪಡಿಸಿಕೊಳ್ಳುವುದು. ಅದೇ ನಿಜವಾದ ಕವಿಯ ಲಕ್ಷಣ. ಹೀಗೇ ಸಂವಾದವನ್ನು ಏರ್ಪಡಿಸಿಕೊಳ್ಳುವ ತೀವ್ರವಾದ ಸಂವೇದನಾಶೀಲತೆಯನ್ನು ಕಳೆದುಕೊಳ್ಳುವುದೆಂದರೆ, ಕವಿಯ ಪಾಲಿಗೆ ಜೀವನ್‌ಮೃತಾವಸ್ಥೆಯೇ ಸರಿ. (ಕನ್ನಡ ಕಾವ್ಯ ಚಿಂತನೆ: ಜಿಎಸ್‌ಎಸ್ ಪು-೧೪೯) ಲೋಕದ ಜೊತೆಗಿನ ಸಂವಾದವನ್ನು ಸಾಧ್ಯವಾಗಿಸೋದು ಕಾವ್ಯದ ಪ್ರಮುಖ ಪ್ರಮೇಯಗಳಲ್ಲೊಂದು.

ಇದು ಕವಿಯ ಅಂತರ್ಗತ ಆಶಯವೂ ಆಗಿರುತ್ತದೆ. ಆಳದಲ್ಲಿ ಕವಿಯಾದವನು ತನ್ನೊಂದಿಗೆ ಮಾತನಾಡುತ್ತ ಲೋಕದೊಂದಿಗೆ ಮಾತಿಗಿಳಿಯುತ್ತಾನೆ. ಇದು ಅಗತ್ಯವೂ ಕೂಡಾ ಹೌದು. ಕವಿಯಾದವನು ಪ್ರಜ್ಞಾಪೂರ್ವಕವಾಗಿ, ವೈಚಾರಿಕವಾಗಿ, ಆಧುನಿಕಗೊಳ್ಳದ ಹೊರತು ಏನನ್ನೂ ಹೊಸದನ್ನು ಹೊಸೆಯಲಾರ.

‘ಮೂಲ ಕತ್ತಲಿನಲ್ಲಿ
ಮುಳುಗಿ ಹೋಗುತ್ತಿರುವ ಪರಂಪಾರಗತ ತಿಳಿವ
ನೆತ್ತುವುದು; ಎತ್ತಿ ಪುರಾತನ ಮಗುವ
ಇತ್ತಕಡೆ ಕರೆತಂದು ಅಂತರಂಗದಲ್ಲಿಟ್ಟು ಕಾಪಿಟ್ಟು
ಹೊಸ ಗಾಳಿಯಲ್ಲು ಸುರುಬಿಟ್ಟು ನಡೆಯವ ಹಾಗೆ
ಆಧುನಿಕಗೊಳಿಸುವುದು’ ಎಂದು ಗೋಪಾಲಕೃಷ್ಣ ಅಡಿಗರ ಅಭಿಪ್ರಾಯ ಇಲ್ಲಿ ಉಲ್ಲೆಖಾರ್ಹ.

ನವೋದಯದ ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಪ್ರಾದೇಶಿಕತೆಯನ್ನೂ, ನವ್ಯದ ವ್ಯಕ್ತಿನಿಷ್ಠ ನೆಲೆಯೊಂದಿಗೆ ಸಮಷ್ಟಿ ಆಶಯವನ್ನೂ, ಪ್ರಗತಿಶೀಲದ ಸಾಮಾಜಿಕ ಪ್ರಜ್ಞೆಯೊಂದಿಗೆ ಸಂಕೀರ್ಣತೆಯನ್ನೂ, ದಲಿತದ ಬಿಸುಪಿನೊಂದಿಗೆ ತಣ್ಣನೆಯ ನಿಲುವನ್ನೂ, ಬಂಡಾಯದ ಕಾವಿನೊಂದಿಗೆ ತಣ್ಣನೆಯ ಕನಸುಗಳನ್ನೂ, ಸ್ತ್ರೀವಾದಿ ಸಂವೇದನಗಳೊಂದಿಗೆ ಪುರುಷ ಕೇಂದ್ರಿತ ದೃಷ್ಟಿಕೋನಗಳ ಸಮನ್ವಯವನ್ನೂ ಸದ್ಯದ ಕಾವ್ಯವು ಬಹಳ ವಿಶಿಷ್ಟವಾಗಿ, ತೀರ ಭಿನ್ನವಾಗಿ ಪ್ರಕಟಪಡಿಸುತ್ತಿದೆ.

ಇಂದಿನ ಬಹುತೇಕ ಕವಿಗಳು ತಮ್ಮ ಕಾವ್ಯವನ್ನು ವರ್ತಮಾನದ ಅಭಿಪ್ಸೆಯಾಗಿ ಅಭಿವ್ಯಕ್ತಿಗೊಳಿಸುತ್ತಿರುವುದು ಆಶಾದಾಯಕ ಸಂಗತಿ. ಈ ಪ್ರಜ್ಞೆಯೇ ಇಂದಿನ ಕವಿಗಳ ಕಾವ್ಯಕಸೂತಿ ಕಾರ್ಯದ ಹಿಂದಿನ ಪ್ರೇರಕ ಅಂಶ.

ಕಾವ್ಯದ ಪಾರಂಪರಿಕ ಮೀಮಾಂಸೆಯ ಮೇರೆಯನ್ನು ಮೀರಿ, ವಿನೂತನವಾದ ಕಾವ್ಯಪರಿಭಾಷೆಯನ್ನೆ ಮಂಡಿಸುತ್ತಿದ್ದಾರೆ. ಅಲಂಕಾರ, ಪ್ರಾಸ, ಬಂಧ, ಶಿಲ್ಪ, ಛಂದಸ್ಸು ಇತ್ಯಾದಿ ಸಿದ್ಧ ಮಾದರಿಗಳಿಂದ ಬಿಡಿಸಿಕೊಂಡು ಕಾವ್ಯಕ್ಕೆ ಹೊಸ ಭಾಷೆ, ಶೈಲಿ, ರೀತಿ, ರೂಪಕ, ಉಪಮೆಗಳನ್ನು ಜೋಡಿಸುತ್ತಿರುವುದು ಸದ್ಯದ ಕನ್ನಡ ಕಾವ್ಯದ ಶಕ್ತತೆಯ ಸಾಧ್ಯತೆ ಎಂದೇ ಭಾವಿಸಬೇಕಾಗುತ್ತದೆ.

ಎಡ, ಬಲ, ಮಧ್ಯಮ ಎಂಬ ಯಾವುದೇ ನಿರ್ದಿಷ್ಟ ಪಾಂಥಿಕ ನಿಲುವುಗಳಿಗೆ ಆತುಕೊಳ್ಳದೇ ತಮ್ಮದೇ ಆದ ವಿಶಿಷ್ಟ ಪಂಥವೊಂದನ್ನು ಹುಟ್ಟುಹಾಕುತ್ತಿರುವುದು ಇಂದಿನ ಕಾವ್ಯದ ಬಹುದೊಡ್ಡ ಆಶಯ.
ಸದ್ಯದ ಕಾವ್ಯವು ಅರಾಜಕತೆ, ಅನಾಗರಿಕ ವ್ಯವಸ್ಥೆಯ ಬೀಭತ್ಸತೆ, ವಿಷಣ್ಣತೆ, ವಿಕಾರ, ವಿಕೃತಿಗಳನ್ನು ಕಾಣಿಸುವ ತುಡಿತದಲ್ಲಿ ಇದೆ; ರಾಜಕೀಯ ವ್ಯವಸ್ಥೆಯ ಕ್ರೌರ್ಯ, ಶೋಷಣೆ, ದಮನಿತರನ್ನು ಇನ್ನೂ ದಯನೀಯಗೊಳಿಸುವ ನೀಚತನದ ಅಧಿಕಾರಶಾಹಿ ವಿರುದ್ಧ ಇಂದೂಧರ ಹೊನ್ನಾಪುರರು;
‘ನಿನ್ನ ಚರಿತ್ರೆಯ ಪುಟಗಳಿಗೆ ಬೆಂಕಿ ಇಡುವೆ
ನನ್ನೊಡಲ ನೆತ್ತರಿನಿಂದ ಹೊಸ ಚರಿತ್ರೆ ಬರೆಯುವೆ
ನಿನಗೆ ಧಿಕ್ಕಾರ, ನಿನ್ನ ವ್ಯವಸ್ಥೆಗೆ ಧಿಕ್ಕಾರ
ನಿನ್ನ ಪರಂಪರೆ ಪುರಾಣಗಳಿಗೆ ಧಿಕ್ಕಾರ…’ ಎಂದು ನೇರವಾಗಿಯೇ ಕಾವ್ಯಖಡ್ಗವನ್ನು ಝಳಪಿಸುತ್ತಾರೆ. ಅವರ ಈ ನಿಲುವು ಈಗಿನ ಕವಿಗಳಲ್ಲಿ ಸ್ವಲ್ಪ ಗೌಣವಾದಂತೆ ಭಾಸವಾಗುತ್ತದೆ.

ಇಂದೂಧರ ಹೊನ್ನಾಪುರ

ವ್ಯವಸ್ಥೆಯ ಕೆಡುಕುಗಳನ್ನು ಕಾಣುತ್ತಲೇ ತಣ್ಣನೆಯ ಪ್ರತಿರೋಧವನ್ನು ಒಡ್ಡುತ್ತ ಸದ್ಯದ ಕಾವ್ಯವು ಹೊಸ ಚರಿತ್ರೆಯನ್ನು ದಾಖಲಿಸುವತ್ತ ವಾಲುತ್ತಿರುವುದನ್ನು ಇಲ್ಲಿಯೇ ಗಮನಿಸಬೇಕಾಗುತ್ತದೆ. ಕೊಳ್ಳುಬಾಕ ಸಂಸ್ಕೃತಿ, ಮಾರುಕಟ್ಟೆ ಪ್ರಣೀತ ಚಿಂತನೆಗಳು ನಮ್ಮನ್ನು ತೀವ್ರವಾಗಿ ಅಲುಗಾಡಿಸುತ್ತಿವೆ. ಆಘಾತಕಾರಿಯೂ ಆಗಿವೆ. ಮನುಷ್ಯ ಯಂತ್ರದಂತೆ ತನ್ನ ಬುದ್ಧಿಶಕ್ತಿಯನ್ನು ಹುರಿಗೊಳಿಸುತ್ತ ಭ್ರಮಾತ್ಮಕ ವಲಯದೊಳಗೆ ಬಂಧಿಯಾಗುತ್ತಿದ್ದಾನೆ.

ಶ್ರಮಸಂಸ್ಕೃತಿಯ ವಿಸ್ಮೃತಿಗೆ ಒಳಗಾಗುತ್ತ ನಡೆದಿರುವುದರಿಂದ ಮನುಷ್ಯ ಕ್ರೂರಿಯಾಗುತ್ತಿರುವುದು ದುರಂತ. ಆಧುನಿಕ ಮನುಷ್ಯಬದುಕು ಧಾವಂತದ ಕುದುರೆಯನೇರಿ ಹೊರಟು ಸಾವಧಾನವನ್ನು ಮರೆತಂತಿದೆ. ಈ ಸಾವಧಾನವನ್ನು, ಸಮಾಧಾನವನ್ನು ಅರಸಿಹೊರಟಂತೆ ಜೊತೆಗೆ ಸದ್ಯದ ಸಂಕೀರ್ಣತೆಯನ್ನೂ ಕಾವ್ಯ ಕಾಣಿಸುತ್ತಿದೆ. ಪರಂಪರೆಯ ಪ್ರಜ್ಞೆಯೊಂದು ಪ್ರವಹಿಸಿ, ಇಂದಿನ ಕಾವ್ಯವನ್ನು ಪೋಷಿಸುತ್ತಿದೆ. ಫ್ಯಾಂಟಸಿಯನ್ನೇ ತನ್ನ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡು ಕಾವ್ಯಸೃಜನೆಯಲ್ಲಿ ತೊಡಗಿದ ಇಂದಿನ ಕವಿಗಳಲ್ಲಿ ಹೊಸ ಕಲ್ಪನೆಯ ಅನೂಹ್ಯ ಜಗತ್ತನ್ನು ನಿರ್ಮಾಣ ಮಾಡುವ ಆಶಯವೂ ಅಂತರ್ಗತವಾಗಿದೆ.

ವರ್ತಮಾನದ ಸಮಾಜದಲ್ಲಿ ಎದುರುಗೊಳ್ಳಬೇಕಾದ ಹಲವು ಮಿಶ್ರ ವಾಸ್ತವಗಳಿಗೆ ಮುಖಾಮುಖಿಯಾಗುವತ್ತ ಇಂದಿನ ಕಾವ್ಯ ತುಡಿಯಲು ಯತ್ನಿಸುತ್ತಿದೆ. ಇಂದಿನ ಎಲ್ಲ ದುರಂತಗಳಿಗೆ ದನಿ ನೀಡುತ್ತಲೇ, ಆಳದಲ್ಲಿ ಮಾನವೀಯಗೊಳ್ಳುತ್ತಲೇ, ಹೊಸಭರವಸೆಯ ಕಾವ್ಯ ವ್ಯವಸಾಯದಲ್ಲಿ ತೊಡಗಿಕೊಂಡ ಕವಿಗಳ ದಂಡೇ ಕನ್ನಡದಲ್ಲಿ ಇದೆ.

ಆರೀಫ್ ರಾಜಾ, ವೀರಣ್ಣ ಮಡಿವಾಳರ, ಚಿದಾನಂದ ಸಾಲಿ, ಅನಿಲ್ ಗುನ್ನಾಪುರ, ಎಂ.ವಿ. ಮಂಜುನಾಥ್, ಹನಮಂತ ಹಾಲಿಗೇರಿ, ಅಕ್ಬರ್ ಕಾಲಿಮಿರ್ಚಿ, ವಿಠ್ಠಲ ದಳವಾಯಿ, ಅಕ್ಷತಾ ಹುಂಚದಕಟ್ಟೆ, ವಿ.ಆರ್. ಕಾರ್ಪೆಂಟರ್, ಮಂಜುನಾಥ ನಾಯ್ಕ, ರಮೇಶ್ ಅರೋಲಿ, ಮೌನೇಶ ಬಡಿಗೇರ, ಕೃಷ್ಣ ದೇವಾಂಗಮಠ, ಶ್ರೀಹರಿ ಧೂಪದ, ವಿ.ಎಂ. ಮಂಜುನಾಥ್, ವಿದ್ಯಾಹೆಗಡೆ, ಕಿರಸೂರ ಗಿರಯಪ್ಪ, ಮುಂತಾದ ಕವಿಗಳು ಕನ್ನಡ ಕಾವ್ಯದ ಭರವಸೆಯ ವ್ಯವಸಾಯದಲ್ಲಿ ತೊಡಗಿಕೊಂಡಿರುವುದು ಆಶಾದಾಯಕವಾಗಿದೆ.

ಕೂಡುಬಾಳಿಗೆ ಅನೇಕ ಕೊಂಡಿಗಳಿದ್ದವು. ಬಣ, ಬೆಡಗು, ಜಾತಿ, ಮತ, ಪಂಥ, ಪಂಗಡ, ಧರ್ಮ, ವರ್ಣ ಇವುಗಳ ಜೊತೆಗೆ ಕೈಗಾರಿಕೀಕರಣ, ನಗರೀಕರಣಗಳ ನಿಷ್ಕರುಣೀ ತರ್ಕಗಳು ಕೂಡು ಬಾಳಿನ ಕೊಂಡಿಗಳನ್ನು ಕಳಚುವಂತೆ ಮಾಡುತ್ತಿವೆ. ಕಳಚುತ್ತಿರುವ ಕೊಂಡಿಗಳನ್ನು ಕಾಪಿಟ್ಟುಕೊಳ್ಳುವ ಶಕ್ತಿ ಭಾಷೆಗೆ ಮಾತ್ರ ಇದೆ. ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮವಾಗಿ ಭಾಷೆಯೂ ತನ್ನ ರೂಪಕಶಕ್ತಿಯನ್ನು ಕುಗ್ಗಿಸಿಕೊಂಡು ಶುಷ್ಕವಾಗುತ್ತಿರುವ ಭೀತಿಯಲ್ಲಿ ನಾವಿದ್ದೇವೆ.

ಭಾಷೆಯ ಮುಖ್ಯ ಜೀವಜೀವಾಳದ ಗುಣವೇ ರೂಪಕಶಕ್ತಿಯನ್ನು ಹಿಗ್ಗಿಸಿಕೊಂಡು ತನ್ಮೂಲಕ ಭಾಷೆಯೂ ವಿಸ್ತರಣೆಗೊಳ್ಳುವುದೇ ಆಗಿದೆ. ಇಂದಿನ ಸಂದಿಗ್ಧತೆಯಲ್ಲಿ ಭಾಷೆ ಮೆಟಾಫರ್ ಆಗಿ ಹೊಸ ಅಭಿವ್ಯಕ್ತಿ ಸಾಧ್ಯತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಹೊಸ ಆಶಯವೇ ಸರಿ!.

ಪರಂಪರೆಯೊಂದಿಗೆ ಸಂವಾದಿಸಿ, ವರ್ತಮಾನದ ಸಂಕೀರ್ಣತೆಗಳಿಗೆ ಕಣ್ಣಾಗುವ, ಕಿವಿಯಾಗುವ, ಬಾಯಿಯಾಗುವ ತೆರದ ಮನಸ್ಸಿನ ಸಂವೇದನಾಶೀಲ ಬರಹಗಾರನಿಗೆ ಮಾತ್ರ ಕಾವ್ಯ ದಕ್ಕುತ್ತದೆ. ಕಾವ್ಯದ ಆಶಯವೂ ಸ್ಪಷ್ಟಗೊಳ್ಳುತ್ತವೆ. ಪ್ರಜ್ಞಾಪೂರ್ವಕವೋ ಅಪ್ರಜ್ಞಾಪೂರ್ವಕವೋ ಕವಿಯಾದವನು ಆಳದೊಳದನಿಗೆ ಕಿವಿಗೊಡುತ್ತಲೇ ತನ್ನದೇ ಅನೂಹ್ಯ ಲೋಕವನ್ನು ಅನಾವರಣಗೊಳಿಸುತ್ತಾನೆ. ಜೊತೆಗೆ ತನ್ನೊಳಗಿನ ಆಲೋಚನೆ, ವಿಚಾರಗಳನ್ನು ವಾಚ್ಯವಾಗಿಸದೇ ಮೆಟಾಫರ್‌ಗಳ ಮೊರೆ ಹೋಗಲು ಯತ್ನಿಸುತ್ತಾನೆ.

ಪ್ರಭುತ್ವ, ಅಧಿಕಾರ, ಅನ್ಯಾಯ, ಶೋಷಣೆ, ಲಿಂಗತಾರತಮ್ಯ, ಬಂಡವಾಳಶಾಹಿ ಧೋರಣೆಗಳನ್ನು ವಿರೋಧಿಸುವಾಗ, ಪ್ರತಿಭಟಿಸುವಾಗ ಕಾವ್ಯವು ರೂಪಕ ಮತ್ತು ಪ್ರತಿಮೆಗಳ ಮೊರೆ ಹೋಗುವುದು ಸಹಜವೇ ಆಗಿದೆ. ಇದು ಕಾವ್ಯದ ಶಕ್ತಿಯೂ, ಮಿತಿಯೂ ಆಗಿ ಕಾಣಿಸುತ್ತದೆ.

‘ಕವಿತೆ ನನ್ನೊಳಗಿನ ಕಲ್ಮಶವನ್ನು ಕಾರಿಕೊಳ್ಳುವುದಲ್ಲ. ಬದಲು, ಸುತ್ತಲಿನ ಲೋಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ನನ್ನ ಅಂತರಂಗ, ಮನುಷ್ಯತ್ವ ಹೇಗೆ ಪ್ರತಿಕ್ರಿಯೆ ನೀಡುತ್ತಿದೆ ಎನ್ನುವುದನ್ನು ಕಣ್ಣುಮುಚ್ಚಿ ಮೌನದೊಳಗೆ ಕಂಡುಕೊಳ್ಳುವ ನೋಟವೇ’ ಎಂದು ಕವಿಯತ್ರಿ ವಿದ್ಯಾ ಹೆಗಡೆ ಅವರ ಅಭಿಪ್ರಾಯ ಹಾಗೂ ‘ಮಾನವೀಯ ಬದುಕು ನನ್ನ ಮೊದಲ ಆದ್ಯತೆ. ಬರೆಹ ಅನಂತರದ ಆಯ್ಕೆ. ಕಾವ್ಯದ ಕಡುಮೋಹಿ ನಾನು’ ಎಂದು ಹೇಳುವ ವೀರಣ್ಣ ಮಡಿವಾಳರ ಮಾತುಗಳು ಇಂದಿನ ಬಹುತೇಕ ಎಲ್ಲ ಕನ್ನಡ ಕವಿಗಳ ಒಟ್ಟು ಆಶಯದಂತೆ ಭಾಸವಾಗುತ್ತದೆ.

ಈ ತಾತ್ವಿಕತೆ ಇಂದಿನ ಕವಿಗಳನ್ನು ಪೊರೆದು ಪೋಷಿಸುತ್ತಿದೆ. ಕವಿಗಳು ತಮ್ಮನ್ನು ತಾವು ಅಂತರಂಗದ ನಿರೀಕ್ಷಣೆಯೊಂದಿಗೆ ಸುತ್ತಣ ಸಮಾಜದ ನಕಾರಾತ್ಮಕ ಮತ್ತು ನೇತ್ಯಾತ್ಮಕ ನೆಲೆಗಳನ್ನು ಧೇನಿಸುತ್ತ ಹೊಸ ನೋಟಕ್ರಮವನ್ನು ರೂಪಿಸುತ್ತಿರುವುದು ಆಧುನಿಕ ಕನ್ನಡದ ಕಾವ್ಯಕಡಲಿಗೆ ಹೊಸ ತೊರೆಗಳನ್ನು ಸೇರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

‍ಲೇಖಕರು avadhi

September 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: