ಸೋನಿಯಾ ಆರ್.ಸಿ.
ಜಾತ್ರೆಯ ಗದ್ದಲದಲ್ಲಿ ಕಳೆದುಹೋಗದಂತೆ
ಗಟ್ಟಿಯಾಗಿ ಕೈಹಿಡಿದು ನಡೆಸಲು
ಅವನು ಬರುತ್ತಾನೆ ಅಂದುಕೊಂಡಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…
ಸಂತೆಯನು ಬಹು ಎತ್ತರದಿಂದ
ಕಾಣಲು ಅವನ ಹೆಗಲಿಗಾಗಿ
ಇನ್ನಿಲ್ಲದಂತೆ ಹಂಬಲಿಸಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…
ಸ್ಪರ್ಧೆಯಲ್ಲಿ ಬಂದ ಪ್ರಥಮ ಸ್ಥಾನದ
ಬಹುಮಾನ ಕೈಗಿಟ್ಟು ಅವನ ಖುಷಿ
ಕಣ್ತುಂಬಿಕೊಳ್ಳಲು ಬಯಸಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…

ಹುಟ್ಟುಹಬ್ಬಕ್ಕೆ ಅವನ ಮೊದಲ
ಶುಭಾಶಯ , ಉಡುಗೊರೆಗಾಗಿ
ಕಾತುರದಿಂದ ಕಾದಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…
ಪಾಲಕರ ಸಭೆಗೆ ಅವನ
ತೋರುಬೆರಳಿಡಿದು ಗತ್ತಿನಿಂದ
ಶಾಲೆಗೆ ಹೋಗುವಾ ಅಂದುಕೊಂಡಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…
ನನ್ನ ಎಲ್ಲ ಮೊದಲುಗಳಲ್ಲಿ
ಅವನು ಜೊತೆಗಿರುತ್ತಾನೆಂದು
ಅತೀವವಾಗಿ ಕನಸ ಕಂಡಿದ್ದೆ
ಆದರೆ, ಅಪ್ಪ ಬರಲೇ ಇಲ್ಲ…
ಅಪ್ಪ ಕಾಲವಾದ ದಿನದಿಂದಲೂ
ಕಾಯುತ್ತಲೇ ಇದ್ದೇನೆ
ಇಂದಿಗೂ, ಅಪ್ಪ…..






0 Comments