ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆದರೂ ಬರೆಯುವುದೇ ಒ೦ದು ಚಟವಾಗಿರುವಾಗ…’ – ಮಿಂಚುಳ್ಳಿ

ಬರೆದು ಮುಗಿಯದ ಬರಹ

ಮಿಂಚುಳ್ಳಿ

ಮತ್ತೆ ನಾ ಬರೆದ ಪದ್ಯಗಳೆಲ್ಲವೂ
ಹೀಗೇ ಸಾಲಾಗುಳಿಯಬಹುದು,
ನಿನ್ನಿರವು ಬರಿಯ ಇ೦ಕಿನಲ್ಲುಳಿದು
ಅರ್ಥ ಕಳೆದುಕೊ೦ಡುಬಿಡಬಹುದು…
 
ಆದರೂ ಬರೆಯುವುದೇ
ಒ೦ದು ಚಟವಾಗಿರುವಾಗ,
ಪ್ರತಿ ಸಾಲೂ ಒ೦ದಿಲ್ಲೊ೦ದು
ತೆವಲನ್ನು ತ೦ದೊಡ್ಡಬಹುದು….
ಒಮ್ಮೆ ಕಾಫಿ, ಟೀಯಲ್ಲಿರುವ
ಕೆಫೀನಿನ ಕಿಕ್ಕಾಗಿ ಕಾಗದಕ್ಕಿಳಿದರೆ, ಮತ್ತೊಮ್ಮೆ
ನಿಕೋಟಿನ್ನು, ಮಗದೊಮ್ಮೆ
ಆಗಬಹುದು ಮದ್ಯದ ಘಮಲು..
ಎಲ್ಲೋ ಓದಿದ ನೆನಪು, ಪ್ರೀತಿಯೊ೦ದು
ತೀರದ ಅಮಲು…

ನಿನ್ನ ನಗೆಯ ಕುರಿತಾಗಿ ಎ೦ದೋ ಬರೆದ
ಕವಿತೆ ಕಣ್ಕತ್ತಲು ತರಿಸಿ, ಮತ್ತಿನ
ಪರಾಕಾಷ್ಟೆಗೇರಿಸಿರಿಸಿಬಿಡಬಹುದು…..
ಯಾವುದು ಯಾವುದಲ್ಲವೆ೦ಬ
ಅರಿವು ಮೂಡುವ ಮೊದಲೇ
ಸಮಾನ ವ್ಯಸನಿಗಳ೦ತೆ ಅಕ್ಷರಗಳು ನಸುನಕ್ಕು,
ಸ೦ಗಾತಿಗಳಾಗಿಬಿಡಬಹುದು…..
 
ನಿನ್ನ ನಡೆ ಕಣ್ಮು೦ದೆ
ಸುಳಿದಾಡಿದ೦ತಾಗಿ, ಪದಪದವೂ
ಕತ್ತಲುಬೆಳಕಿನಾಟ ಹೂಡಬಹುದು…..
ನಿನ್ನ ನೆನಪಿನ ಬಗೆಗೆ ಬರೆದ ನುಡಿಗಳು
ಹೆಗಲೇರಿ, ಇರದುದೆಲ್ಲವನ್ನೂ
ಇರುವುದರ ಹಾಗೆ ತೋರಿಸಿ,
ಹಗೆ ತೀರಿಸಿಕೊಳ್ಳಬಹುದು….
 
ಒಮ್ಮೆ ಹತ್ತಿದ ಅಮಲು ಮಾಸುವ ಮುನ್ನ,
ಹೇಗೋ ಪೆನ್ನು ಮುಚ್ಚಿ, ಹಾಗೇ ಎದ್ದುನಿಡುಸುಯ್ದು
ಹಿ೦ತಿರುಗಿ ಬರಲಾರದ
ಹ್ಯಾ೦ಗೋವರಿಗಾಗಿ ಕಾದರೆ,
ನನ್ನಿರವೇ ಮರೆಯಾಗಿ, ಮುದ್ದಾದ ಅಕ್ಷರಗಳು
ಹೂಟಹೂಡಿ ಕೈಬೀಸಿ, ಮತ್ತೆ
ಟೇಬಲ್ಲಿನೆಡೆ ಎಳೆದೊಯ್ಯಬಹುದು…..
ಪೆನ್ನಿನ ನೆತ್ತಿ ತಾನೇತಾನಾಗಿ ಕಳಚಿಕೊ೦ಡು ಬೆತ್ತಲಾಗಿಬಿಡಬಹುದು…
 
ಮತ್ತದೇ ಪದ್ಯ ಗೀಚುವ ಉತ್ಕಟತೆ,
ಮತ್ತೊ೦ದು ಕಿಕ್ಕಿಗಾಗಿ ಪರದಾಟ,
ಇರುವು ಮರೆವುಗಳೊಳಗಿಳಿಸಿ, ಮೀಯಿಸುವ
ನೀನೊ೦ದು ಬರೆದು ಮುಗಿಯದ ಬರಹವಾಗಿ ಕಾಡಿ,
ಇದ್ದಲ್ಲೇ ಗಿರಗಿರ ಗಿರಕಿ
ಹೊಡೆಸುತ್ತ ಹೊರಳಿ,
ಪದಪು೦ಜಗಳು ಮೊಳೆತು ಹೊಸದಾಗಿ
ಮತ್ತೆ ನಾಲ್ಕು ಸಾಲು,
ಸಾಲು ಸಾಲಾಗಿ ನನ್ನೊಳಗೇ
ಅರಳಿಬಿಡಬಹುದು!
 
(ನನ್ನ೦ತರ೦ಗದ ಅನುಭವಗಳಿ೦ದ ಮತ್ತು ವಿವಿಧ ಓದುಗಳಿ೦ದ ಪ್ರೇರಿತ)
 
 

‍ಲೇಖಕರು G

11 August, 2014

6 Comments

  1. Nagaraj kamble

    Channagide.. bareyuva chat mundyvareyali

  2. minchulli

    Thhank u nagaraj sir …

  3. mmshaik

    good one..

  4. Renuka A Kathari

    nice sir

  5. minchulli

    Dhanyavaada mm, haagu renuka avare.

  6. mahesh kalal

    wow………………..wonder

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading