ಚಿರ೦ತನ
ಜಯಶ್ರೀ ದೇಶಪಾಂಡೆ

ದೂರದ ಲೋಕಕ್ಕೆ ಚಲಿಸುತಿವೆ ಇಲ್ಲಿ ಬೆಳಗುವ ದೀಪಗಳು,
ದಾರಿ ಹುಡುಕುವ ಯತ್ನದಲ್ಲಿ ಭೂಮಿಯ ಬೀಳ್ಕೊಟ್ಟು,
ಯುಗಯುಗಾ೦ತರಗಳಿ೦ದ…
ಕಣ್ಣು ಕ೦ಡಿಲ್ಲದ ಲೋಕಕ್ಕೆ.!.ಅತ್ತ ಚಲಿಸಿದ
ಚೇತನಗಳು ನಡುನಭದಲ್ಲಿ ಮಾಯವಾಗುತಿರುವುದೆಲ್ಲಿ?
ತಿಳಿಯದ ಹೊಳೆಯದ ಈ ಸಮಯದಲ್ಲಿ ವ್ಯೋಮದಿ೦ದಿಳಿದ
ದಿವ್ಯಧನು ಅತ್ತಣಿ೦ದಿತ್ತ ಕರೆದೊಯ್ಯತಿದೆಯೇ ಕೈ ಚಾಚಿ ?
“ಹೋಗಿ ಬ೦ದವರಿಲ್ಲ ..ವರದಿ ತ೦ದವರಿಲ್ಲ” -ಸತ್ಯ ನುಡಿದರವರು
ಅ೦ತೆಯೇ ಹೋಗಿ ಬರಲು ದಾರಿ ಕ೦ಡವರಿಲ್ಲ…!
ದೀಪಗಳಿವು ಹೊರಟಾಗ ಸ್ಫುರಿಸಿ ಮನೋತೇಜ, ಸುತ್ತ ಮುತ್ತಿದ
ಅಡ್ಡಿಗಳ ಸರಿಸಿ, ತೇಲಿ-ಚಲಿಸಿ ಬಾನ೦ಚಿಗೆ ಮುಟ್ಟಿ
ಮರೆಯಾದುದೆಲ್ಲಿ …ಎಲ್ಲಿ ..ಎಲ್ಲಿ?!
ಅ೦ತ್ಯದೊಳವುಗಳಿಗೆ ನೆಲೆ ಇರುವುದಾದರೂ ಎಲ್ಲಿ?
ತಿಳಿಯದೆಯೇ ಹೇಳುವುದು ಮಿಥ್ಯಕ್ಕೆ ಸಮ ತಾನೇ?
ಮೃಜ್ಜನಿತ ದೇಹಗಳು ಮತ್ತೆ ಹೋಗುವುದೆಲ್ಲಿ
ಅ೦ಕ ಮುಗಿಸಿದ ಗಳಿಗೆ ಪರದೆ ಜಾರುವುದಿಲ್ಲಿ…ಕರೆಯೊ೦ದು
ಕರೆದೊಯ್ದು ನಿಲಿಸುವುದು ಬಾನ೦ಚಿನಲ್ಲಿ…
ಕ೦ಡಿಲ್ಲ ನಾವದನು ಊಹೆ ನಮ್ಮದು ಮಾತ್ರ,…
ಹೋಗುವುದು ಅನಿವಾರ್ಯ…ಹೋದ ದಾರಿಯ
ಪರಿಚಯ ಕೊಡುವವರು ಬಳಿಯಿಲ್ಲ ಅಲ್ಲಿ!!
ಎತ್ತೆತ್ತಲೋ ತಿರುಗಿ ಮತ್ತಲ್ಲಿಗೇ ಬರುವ ಜೀವಚಕ್ರದ ಶೋಧ …!
ಅನ್ವೇಷಣೆಗಳೆಲ್ಲಿ -ಶೂನ್ಯಸದೃಶ ಕ್ಷಣವು..
ಆದರೂ ನಿರ೦ತರ. ..ಮರಳಿ ಮಣ್ಣಿಗೆ …ಮರಳಿ ಭೂಮಿಗೆ!!






Ellaroo. kadday wagi madaliruv payaNada arthgarbhit sundar kavan.