ಕೆ ಪುಟ್ಟಸ್ವಾಮಿ
ಜಗತ್ತಿನ ಎಲ್ಲ ತಂಡದ ಆಟಗಳಿಗಿಂತ ಫುಟ್ಬಾಲ್ ಅಥವಾ ಸಾಕ್ಕರ್ ಆಟ ತರುವ ರೋಮಾಂಚನವೇ ಭಿನ್ನ. ಫುಟ್ಬಾಲ್ ಆಟಗಾರರು ಗಳಿಸುವ ವರ್ಚಸ್ಸು ಮತ್ತು ಯಶಸ್ಸು ಬೇರೆ ಆಟಗಾರರಿಗಿಂತಲು ಭಿನ್ನ.
ಈ ಆಟ ಮತ್ತು ಆಟಗಾರರ ಮಧ್ಯೆ ಮುಖ್ಯವಾದ ವ್ಯಕ್ತಿಯೊಬ್ಬನಿದ್ದಾನೆ ಆತನೇ ಫುಟ್ಬಾಲ್ ತಂಡದ ತರಬೇತುದಾರ ಅಥವಾ ಕೋಚ್. ಆತನಿಲ್ಲದ ಸಾಕರ್ ತಂಡವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ತನ್ನದೇ ಆದ ವಿಶಿಷ್ಟ ಗತ್ತು-ಗೈರತ್ತು ಮತ್ತು ಕೌಶಲ್ಯಗಳಿಂದ ಪ್ರಸಿದ್ಧನಾದ ಆತ ಒಂದು ತಂಡದ ಬೆನ್ನೆಲುಬು.
ಸಾಕರ್ ತಂಡಗಳಲ್ಲಿ ತಂಡದ ಕ್ಲಬ್ ಗಳಲ್ಲಿ ಕೋಚ್ ಗಳಿಗೆ ವಿಶೇಷ ಮನ್ನಣೆ ಮತ್ತು ಗೌರವ ಕೆಲವು ಕೋಚ್ ಗಳ ಸಂಭಾವನೆ ಆಟಗಾರರ ಮೊತ್ತವನ್ನು ಮೀರುತ್ತದೆ. ಹಲವು ಕೋಚ್ ಗಳು ದಂತಕಥೆಯಾಗಿ ಹೋಗಿದ್ದಾರೆ ತಾವು ಆಟವಾಡುವಾಗ ಗಳಿಸದ ಪ್ರಸಿದ್ಧಿ ಹಣ ಮತ್ತು ಯಜಮಾನಿಕೆಯನ್ನು ಕೋಚ್ ಆದಾಗ ಅವರು ಗಳಿಸುತ್ತಾರೆ
ಜಗತ್ತಿನ ಸಾಕರ್ ಆಟದ ವಿಧಾನಕ್ಕೆ ಹೊಸ ರೂಪ ತರುತ್ತಾರೆ. ಸಾಕರ್ ಚರಿತ್ರೆಯನ್ನೇ ಬದಲಿಸುತ್ತಾರೆ. ಪೆಲೆ, ಮರಡೋನ, ಜಿಡಾನೆ, ರೊನಾಲ್ಡೋ, ಮೆಸ್ಸಿ ಮುಂತಾದವರು ಸಾಕರ್ ಆಟದ ತಾರೆಗಳಾಗಿ ಮೆರೆದಿರಬಹುದು. ಆದರೆ ಆಟದ ತಂತ್ರಗಾರಿಕೆಯನ್ನು ಹೆಣೆಯುವುದರಲ್ಲಿ ಮತ್ತು ಆಟಗಾರರನ್ನು ಪ್ರೇರೇಪಿಸುವ ಹೊಣೆಯಲ್ಲಿ ಹಾಗೂ ಭಿನ್ನ ಪ್ರತಿಭೆಯ, ವಿಭಿನ್ನ ಸಾಮರ್ಥ್ಯದ, ಬೇರೆ ಬೇರೆ ಮನೋವೃತ್ತಿ ,ವರ್ತನೆ ,ಮತ್ತು ಭಾವಾವೇಶದ ಆಟಗಾರರನ್ನು ತಂಡವಾಗಿ ಒಂದು ಎರಕದಲ್ಲಿ ರೂಪಿಸುವುದರಲ್ಲಿ ಕೋಚ್ ಗಳ ಪಾತ್ರ ದೊಡ್ಡದು.
‘ಚಕ್ ದೇ’ ಚಿತ್ರದ ಕಬೀರ್ ಖಾನ್ ಪಾತ್ರವನ್ನು ನೆನಪಿಸಿಕೊಳ್ಳಿ. ಮೇಲಿನ ಎಲ್ಲಾ ಅಂಶಗಳು ಆ ಪಾತ್ರಕ್ಕೆ ಅನ್ವಯವಾಗುತ್ತವೆ. ಭಾರತದ ಮಹಿಳಾ ಆಟಗಾರರ ಸಂಕಲ್ಪ ಶಕ್ತಿಗೆ ಅರ್ಪಿಸಿದ ಗೌರವವೆಂದು ಆ ಚಿತ್ರ ಪ್ರಸಿದ್ಧಿ ಆಗಿದ್ದರು ಸಹ ಅದು ನಿಜವಾಗಲೂ ಆರಾಧಿಸಿದ್ದು ಕೋಚ್ ನ ಸೈರಣೆ, ಸಾಮರ್ಥ್ಯ, ಮತ್ತು ಅರ್ಪಣಾ ಮನೋಭಾವವನ್ನು.
ಈ ಬಾರಿಯ ವಿಶ್ವಕಪ್ ಫೈನಲ್ ಫುಟ್ಬಾಲ್ ನಲ್ಲಿ ವಿವಿಧ ದೇಶದ ತಂಡಗಳ ಕೋಚ್ ಗಳನ್ನು ನೋಡಿದ್ದೇನೆ. dugout ಹತ್ತಿರ ಕುಳಿತು ಆಟಗಾರರಿಗೆ ಕೂಗು ಹಾಕಿ ಸೂಚನೆ ನೀಡುವ, ಇಲ್ಲವೇ substitute ಆಟಗಾರರ ಕಿವಿಗಳಲ್ಲಿ ಆಟದ ಮುಂದಿನ ತಂತ್ರಗಳನ್ನು ಆವೇಶದಿಂದ ಉಸುರುವ ಕೋಚ್ ಗಳ ವರ್ತನೆ ಸಹ ಆಟದ ಭಾಗವಾಗಿ ಪ್ರಸಾರವಾಗಿದೆ.
ಸ್ವಲ್ಪ ಹೆಚ್ಚೇ ಭಾವಾವೇಶಕ್ಕೆ ಒಳಗಾಗಿರುವಂತೆ ಕಾಣುತ್ತಿದ್ದ ಜರ್ಮನಿಯ ಕೋಚ್ ಒಮ್ಮೆ ತಂಡ ಗೋಲ್ ಹೊಡೆದಾಗ ಆಟಗಾರರತ್ತ ನುಗ್ಗಿದವನು ಮುಗ್ಗರಿಸಿ ಬಿದ್ದ. ಗೆದ್ದಾಗ ಅರಚುತ್ತಾ ಸಂಭ್ರಮಿಸುವ, ಗೋಲು ಹೊಡೆಯಲು ವಿಫಲವಾದಾಗ ಹತಾಶೆಯಿಂದ ಕೈಚೆಲ್ಲಿ ಕೂರುವ, ಸೋತಾಗ ತಮ್ಮ ನಿರಾಸೆಯನ್ನು ನಾನಾ ರೂಪದಲ್ಲಿ ವ್ಯಕ್ತಪಡಿಸುವ ಅವರ ಹಾವಭಾವ ನೋಡುವುದೇ ಚಂದ. ಆಟದಲ್ಲಿ ತಲ್ಲೀನವಾಗಿ ಹೋಗುವ ಅವರು ಸದಾ ಕುದಿಯುವ ಮನಸ್ಸಿನವ ರಂತೆ ಕಾಣುತ್ತಾರೆ.
ಆದರೆ ಇವರೆಲ್ಲರಿಗಿಂತ ವಿಭಿನ್ನವಾಗಿ ಕಂಡವರು ಕ್ರೊವೇಶಿಯಾ ತಂಡದ ಮ್ಯಾನೇಜರ್ ಕಂ ಕೋಚ್ ಜ್ಲಾಟ್ಕೋ ಡ್ಯಾನಿಷ್. ಮೈದಾನದ ಹೊರಗೆ ನಿಂತು ಬಿಳಿ ಶರ್ಟು ತೊಟ್ಟು, ಪ್ಯಾಂಟಿನ ಜೇಬಿನಲ್ಲಿ ಎರಡು ಕೈಗಳನ್ನು ಬಿಟ್ಟು ಸ್ಥಿರವಾಗಿ ನಿಲ್ಲುವ ಆತನ ಮುಖದಲ್ಲಿ ಹುಡುಕಿದರೂ ಭಾವನೆಗಳು ಸಿಗುವುದಿಲ್ಲ.
ಎದುರಾಳಿ ಗೋಲ್ ಹೊಡೆದರೆ ಹತಾಶರಾಗದೆ, ತನ್ನ ತಂಡ ಗೋಲು ಗಳಿಸಿದಾಗ ಸಹ ಒಂದು ಸಣ್ಣ ಭಾವ ವ್ಯಕ್ತಪಡಿಸದ ಆತ ಮೈದಾನದ ಅಂಚಿನಲ್ಲಿ ನಿಂತ ಸಂತನಂತೆ ಕಾಣುತ್ತಾರೆ. ತನ್ನ ತಂಡದ ಬಗ್ಗೆ ಅಪ್ರತಿಮ ವಿಶ್ವಾಸ ಹೊಂದಿದವನಂತೆ ಕಾಣುವ ಆತ ಮೊನ್ನೆ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡ ಮೊದಲು ಗೋಲುಗಳಿಸಿದಾಗ ಸ್ವಲ್ಪವೂ ವಿಚಲಿತನಾಗಲಿಲ್ಲ ಆಟಗಾರರಿಗೆ ಸೂಚನೆಯನ್ನು ಕೊಡಲಿಲ್ಲ ಅಂತಿಮವಾಗಿ ತಂಡ ಗೆದ್ದಾಗ ಒಂದು ಮುಗುಳ್ನಗೆ ಬಿಟ್ಟರೆ ಬಿಟ್ಟರೆ ಅತಿಯಾದ ಸಂಭ್ರಮ ತೋರಲಿಲ್ಲ..
ಜಯಶಾಲಿಗಳಾಗಿ ಹತ್ತಿರ ಬಂದ ಆಟಗಾರರನ್ನು ಕೈಕುಲುಕಿ ಸ್ವಾಗತಿಸಿದ್ದು ಅದೇ ನಿರ್ಲಿಪ್ತ ಮನೋಭಾವದಿಂದಲೇ! ನಡೆದರೆ ಘನತೆಯೇ ಮೂರ್ತ ರೂಪ ತಾಳಿದ ನಡು ಸಾಗರದ ಮಂದ ಅಲೆಯಂತೆ ಕಾಣುತ್ತಿದ್ದ ಆತನ ಹಿನ್ನೆಲೆ ಕೆಣಕಿದಾಗ ಅವನ ವಿಶಿಷ್ಟ ವ್ಯಕ್ತಿತ್ವ ಪರಿಚಯವಾಯಿತು
ಯುಗೋಸ್ಲಾವಿಯಾ ಒಕ್ಕೂಟದ ಬೋಸ್ನಿಯಾ ಮತ್ತು ಹರ್ಜೆಗೋವಿನಾ ದಲ್ಲಿ ಜನಿಸಿದ ಆತ ಈಗ ಕ್ರೋವೇಶಿಯಾ ನಿವಾಸಿ. ಒಂದು ಕಾಲದಲ್ಲಿ ಅಷ್ಟೇನೂ ಯಶಸ್ಸು ಕಾಣದ ಮಿಡ್ ಫೀಲ್ಡರ್ ಆಟಗಾರ ಆಗಿದ್ದವನು. 1983 ರಿಂದ 2000 ವರೆಗೆ ವೃತ್ತಿಪರ ಆಟಗಾರನಾಗಿ ಆಡಿ ನಿವೃತ್ತಿ ಪಡೆದ ನಂತರ ವಿವಿಧ ತಂಡಗಳ ತರಬೇತುದಾರನಾಗಿ ಯಶಸ್ಸು ಕಂಡ. ತನ್ನ ವಿಶಿಷ್ಟ ತರಬೇತಿಯ ವಿಧಾನಗಳಿಂದ ಜನಪ್ರಿಯನಾದ ಆತ 2017ರಲ್ಲಿ ಕ್ರೊವೇಶಿಯಾ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸಲು ಆಹ್ವಾನ ಪಡೆದ.
ಆಗ ಆತನ ಶರತ್ತು ಒಂದೇ- ವಿಶ್ವಕಪ್ ಗೆ ರಾಷ್ಟ್ರೀಯ ತಂಡ ಅರ್ಹತೆ ಪಡೆದರೆ ಮಾತ್ರ ತಾನು ಕೋಚ್ ಆಗಿ ಮುಂದುವರೆಯುವುದು: ಇಲ್ಲದಿದ್ದರೆ ಕ್ಲಬ್ ಗಳಿಗೆ ಹಿಂದಿರುವುದು. ಆನಂತರ ಕ್ರೋವೇಶಿಯಾದ ಹಿಂದಿನ ಕೋಚ್ ನ ಅವಾಂತರದಿಂದ ಹೊಂದಾಣಿಕೆಯ ಕೊರತೆಯಿಂದ ಚಿಂದಿಯಾಗಿದ್ದ ಕ್ರೊವೇಶಿಯಾ ತಂಡವನ್ನು ಬೆಸೆಯುವ ಹೊಣೆಗಾರಿಕೆ ಆತನ ಮೇಲೆ ಬಿತ್ತು.
ಆಟಗಾರರ ಕೌಶಲ್ಯಗಳಿಗೆ ಸಾಣೆ ಹಿಡಿದು ಓರೆಕೋರೆಗಳನ್ನು ತಿದ್ದಿ ತೀಡಿದ ಡ್ಯಾಲಿಷ್, ಆಟಗಾರರು ಹೊಂದಾಣಿಕೆಯಿಂದ ಆಡುವ ರೀತಿಯನ್ನು ಬದಲಿಸಿದ. ಸಂದರ್ಭಕ್ಕೆ ತಕ್ಕಂತೆ ಬದಲಿಸಬೇಕಾದ ತಂತ್ರಗಾರಿಕೆಯನ್ನು ರೂಪಿಸಿದ. ವಿಶ್ವಕಪ್ ಫುಟ್ಬಾಲ್ ನ ಮೊದಲ ಅರ್ಹತಾ ಪಂದ್ಯದಲ್ಲಿ ಕ್ರೊವೇಶಿಯಾ ತಂಡ ಉಕ್ರೇನ್ ತಂಡದ ಮೇಲೆ 2-1 ಗೋಲುಗಳಿಂದ ಗೆದ್ದು, ಗ್ರೀಸ್ ತಂಡದ.ವಿರುದ್ಧ 4-1 ಗೋಲುಗಳ ಬಾರಿ ಅಂತರದಿಂದ ಬಾರಿ ಜಯಗಳಿಸಿ ವಿಶ್ವಕಪ್ ಫೈನಲ್ಸ್ ನಲ್ಲಿ ಆಡುವ ಅವಕಾಶವನ್ನು ಖಚಿತ ಪಡಿಸಿಕೊಂಡಿತ್ತು
ಆನಂತರ ನಡೆದದ್ದು ಇತಿಹಾಸ.
ವಿಶ್ವಕಪ್ ಫೈನಲ್ಸ್ ನ ಗ್ರೂಪ್ ಪಂದ್ಯಗಳಲ್ಲಿ ನೈಜೀರೀಯಾ ಮೇಲೆ 2-1 ಗೋಲುಗಳಿಂದ ಗೆದ್ದು ಜಯದ ಖಾತೆ ತೆರೆಯಿತು. ಪ್ರಬಲ ಅರ್ಜೆಂಟೀನಾ ತಂಡವನ್ನು 3 -0 ಗೋಲುಗಳಿಂದ ಮಣಿಸಿ ಸರಿ ಅಚ್ಚರಿ ಮೂಡಿಸಿ ನಾಕೌಟ್ ಪ್ರವೇಶ ಖಚಿತ ಪಡಿಸಿಕೊಂಡಿತು
ಮತ್ತೆ ಐಸ್ಲ್ಯಾಂಡಿನ ಮೇಲೆ 2-1 ಗೋಲುಗಳಿಂದ ಜಯ ಗಳಿಸಿ ಗ್ರೂಪ್ ನಲ್ಲಿ ಅಗ್ರಸ್ಥಾನಕ್ಕೇರಿತು. ಕ್ವಾರ್ಟರ್ ಫೈನಲ್ ನಲ್ಲಿ ಅತಿಥೇಯ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಗೆದ್ದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡದ ಆಸೆಗೆ ಫೈನಲ್ ಕನಸನ್ನು ಭಗ್ನಗೊಳಿಸಿತು.
ಈ ಎಲ್ಲಾ ಸಾಧನೆಯ ಹಿಂದೆ ನಿಂತವರು ಡ್ಯಾಲಿಷ್. ಗ್ರೂಪ್ ಪಂದ್ಯಾವಳಿಯಲ್ಲಿ ನೈಜೀರಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ರತಿಭಾವಂತ ಆಟಗಾರ ನಿಕೋಲ ಕಾಲಿನಿಷ್, ಬೆನ್ನು ನೋವಿನ ನೆಪ ಹೇಳಿ substitute ಆಗಿ ಕಣಕ್ಕೆ ಇಳಿಯಲು ನಿರಾಕರಿಸಿದ ಮಾರನೆಯ ದಿನವೇ ಮನೆಗೆ ಕಳಿಸಿದ ಡ್ಯಾಲಿಷ್, ಪ್ರತಿಭೆಗಿಂತ ಆಟದಲ್ಲಿ ಶಿಸ್ತು ಮುಖ್ಯ ಎಂಬ ಸಂದೇಶವನ್ನು ಆಟಗಾರರಿಗೆ ಮುಟ್ಟಿಸಿದರು. ಅವರ ದೃಢ ನಿರ್ಧಾರಗಳು ಈಗ ಕ್ರೊವೇಶಿಯಾ ತಂಡವನ್ನು ಚರಿತ್ರೆಯನ್ನು ಬರೆಯುವ ಹಂತಕ್ಕೆ ತಂದು ನಿಲ್ಲಿಸಿದೆ.
ಇಂಥ ಸಂತನಿಗೆ ಯಶಸ್ಸು ಸಿಗಲಿ






0 Comments