ಶ್ರೀವಿಭಾವನ
1
ಬೆಳಗೊಳದ ದಾರಿಗಳಲ್ಲಿ
ಅಲೆಯುತ್ತಿದ್ದೆ…ಅಲ್ಲೊಬ್ಬ ಸಿಕ್ಕಿದ ಮಹಾತ್ಮ.
ಬೊಂಬೈ ಮಿಠಾಯಿ ಮಾರುತ್ತಿದ್ದವ,
ಊರು, ಕೇರಿ ಯಾವುದೂ ಇಲ್ಲದೆ,
ಜಾತ್ರೆಗಳ ದಿನಪಟ್ಟಿ ಪ್ರಕಾರ,
ಜಗದ ಸಂಚಾರದಲ್ಲಿದ್ದ.

2
ಒಂದೇ ಬಂಡೆಯ ಮೇಲೆ ಒರಗಿದ್ದೆವು.
ನನಗೋ ಊರ ತುಂಬೆಲ್ಲಾ ತಿರುಗಿದ
ಸುಸ್ತು…ಆತನಿಗೋ ಇನ್ನೂ ಖರ್ಚಾಗದ
ಬೊಂಬೈ ಮಿಠಾಯಿ ಪಾಕೇಟ್‍ಗಳದ್ದೇ ಚಿಂತೆ
ಸಿಹಿಕೊಟ್ಟರೂ ಬೇಡವೆನ್ನುವವರ
ಮೇಲೆ ಮುನಿಸಿಕೊಂಡಂತಿತ್ತು
3
ಆತನಿಗೊಂದು ಹೆಸರಿರಲಿಲ್ಲ.
ಹೆಸರೊಂದರ ಹಿಂದು ಮುಂದಿನ ಭಾರಗಳು
ಆತನಿಗಿರಲಿಲ್ಲ…ಅವರವರ ಭಾವಕ್ಕೆ ತೋಚಿದ್ದೆ
ಆತನ ಹೆಸರು…ಅಂಕಲ್ ಎಂದು ಯಾರು ಎಲ್ಲೇ ಕರೆದರೂ
ಆತನ ಸುಪ್ತ ಪ್ರಜ್ಞೆ ಎಚ್ಚರಗೊಳ್ಳುತ್ತಿತ್ತು.
ಆತನ ಆಸ್ತಿತ್ವಕ್ಕೆ ಅದೊಂದೇ ಕುರುಹು.
4
ಹುಟ್ಟಿದೂರು, ಬೆಳೆದ ನೆಲಗಳೆಲ್ಲವೂ
ಅಪರಿಚಿತ ಆತನಿಗೆ…ನೆನಪಿರುವುದೊಂದೇ
ಬೊಂಬೈ ಮಿಠಾಯಿ ಮಾರುತ್ತಾ ತಿರುಗಾಡಿದ
ಊರುಗಳು, ಅಪ್ಪ-ಅಮ್ಮನಲ್ಲಿ ರಚ್ಚೆ ಹಿಡಿದು
ತನಗೆ ನಾಲ್ಕು ಕಾಸುಕೊಟ್ಟ ಮುದ್ದುಮುಖಗಳು,
ಮತ್ತೆಲ್ಲವೂ ಆತನ ನೆನಪಿನ ಪರಿಧಿಗೆ ನಿಲುಕದ್ದು
5
ಆತನ ಪಯಣ ಎಂದೂ ನಿಂತಂತಿರಲಿಲ್ಲ
ಅಲೆಮಾರಿ-ಎಲ್ಲೋ ಒಂದೂರಿನ ಸಣ್ಣಜಾತ್ರೆ,
ಯಾವುದೋ ಸ್ವಾಮಿಯೊಬ್ಬನ ಪಟ್ಟಾಭಿಷೇಕ,
ದೇವರ ಜಾತ್ರೆ ಹೀಗೆ ಎಲ್ಲೆಡೆ ಆತ ಸಲ್ಲುವವ
ಕೇಳಿದೆಲ್ಲಾ ಊರುಗಳು ಆತನ
ನಾಲಗೆಯ ತುದಿಯಲ್ಲೇ ಕುಣಿಯುತ್ತಿದ್ದವು.
6
ಎಷ್ಟೇ ಬೊಂಬೈ ಮಿಠಾಯಿ ಮಾರಿದರೂ
ಆತನ ಕೈತುಂಬಾ ದುಡ್ಡು ನೋಡಿದವರಿಲ್ಲ
ಖರ್ಚಿಗೆ ಮಿಕ್ಕ ಚಿಲ್ಲರೆಯನ್ನು ಯಾರಿಗೋ
ದಾನಧರ್ಮ ಮಾಡಿ, ರಾತ್ರಿ ಮಲಗುವ
ಹೊತ್ತಿಗೆ ಖಾಲಿ ಕೈಯ ಬಿಕಾರಿಯಂತೆ.
ಅಷ್ಟೊತ್ತಿಗೆ ಇನ್ನೊಂದೂರಿನ ಹಾದಿ ಸಿಕ್ಕಿರುತ್ತದೆ.
7
ಯಾವುದೇ ಹಂಗುಗಳ ಭಾರವಿಲ್ಲ
ಆಸೆ-ಲೋಭ ಆತನ ಹತ್ತಿರ ಸುಳಿದಂತಿರಲಿಲ್ಲ
ಆಸ್ತಿಪಾಸ್ತಿ-ತನ್ನವರು ಎಂಬುದರ
ಪರಿವೆ ಇಲ್ಲದೆ ಜಗದ
ಸಂಚಾರದಲ್ಲಿ ಮಗ್ನನಾಗಿದ್ದ
ಎಲ್ಲವನ್ನೂ ತೊರೆದ ವೈರಾಗಿಯಂತೆ






ಯಾಕೋ ನೆನಪು ಬಿಡುತ್ತಿಲ್ಲ
ಆತ ಸಂತನೂ ಅಲ್ಲ ಸಾಧುವೂ ಅಲ್ಲ
ಆ ಸಂಜೆ
ಹೊತ್ತು ಮುಳುಗಿ
ಇರುಳ ಕತ್ತಲು
ಬೆಳಕ ನುಂಗಿ
ಸಾಗಿತ್ತು
ಮಂದಗತಿಯಲಿ
ಬೆಂದಕಾಳೂರ ಬೀದಿಯುದ್ದಕ್ಕೂ
ಸೂರು ಸೇರುವ ಹಪಹಪಿಯ
ಜೀವಗಳ ಸಾಲು ಸಾಲು
ಆತ ಅಲ್ಲಿಯೇ ಮಲಗಿದ್ದ
ಆಗಸವನೇ ಹೊದ್ದು
ರಸ್ತೆಯ ಬದಿಯಲ್ಲೇ
ಗಡಚಿಕ್ಕುವ ಸಾಲುಗಳ
ಸದ್ದುಗಳ ದಿಕ್ಕರಿಸಿ
ನಿರ್ಲಿಪ್ತ, ನಿರ್ಮೋಹಿ
ಇದ್ದೂ ಇಲ್ಲದಂತೆ
ಅಂದಿನಿಂದ ಕಾಡುತ್ತಿದೆ ಪ್ರಶ್ನೆ
ಏನಿರಬಹುದು –
ಅವನ ಬದುಕಿನ
ಸಿದ್ದಾಂತ
ವೇದಾಂತ ?