ಬರಹಗಾರನ ಸಾವು
ಶ್ರೀವಿಭಾವನ
ಅಕ್ಷರಗಳ ಜತೆ ಆಟವಾಡುತ್ತಲೆ ಆತ ಸತ್ತುಹೋದ
ಆತ ಟೈಪಿಸಿದ ಅಕ್ಷರಗಳೀಗ ಅನಾಥ…
ಪೈಸೆಗಳ ಲೆಕ್ಕಾಚಾರದ ಬದುಕು ಆತನದ್ದು
ದಿನವಿಡೀ ಆತ ಟೈಪಿಸುತ್ತಿದ್ದ.
ಶಬ್ದಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಏನೋ ಖುಷಿ.
ಶಬ್ದ-ಶಬ್ದಗಳ ಲೆಕ್ಕಾಚಾರದಲ್ಲಿ ಆತ ಬದುಕು ಸಾಗಿಸುತ್ತಿದ್ದ
ಟೈಪಿಸಿದ ಅಕ್ಷರಗಳೆಲ್ಲಾ ಚಿಲ್ಲರೆ ನಾಣ್ಯದಂತೆ ಆತನ
ಕಣ್ಣೆದುರು ಕುಣಿಯುತ್ತಿದ್ದವು…
ಎಲ್ಲವೂ ಪೈಸೆಗಳ ಲೆಕ್ಕಾಚಾರದಲ್ಲೇ ನಡೆಯುತ್ತಿದ್ದವು
ಪ್ರತಿ ಇರುಳುಗಳೂ ಆತನ ಪಾಲಿಗೆ ಸುದೀರ್ಘ ಪಯಣದಂತೆ
ಅವೇ ಶಬ್ದಗಳ ರಾಶಿ- ಬೆಲೆ ಮಾತ್ರ ಭಿನ್ನ
ಎಲ್ಲಾ ಕ್ಷಣವೂ ಆತನಿಗೆ ಅಕ್ಷರ ನಿರ್ಲಿಪ್ತತೆ
ತುತ್ತು ಅನ್ನಕ್ಕಾಗಿ ಆತ ಅಕ್ಷರದ ಮಾರಾಟಕ್ಕಿಳಿದಿದ್ದ.
ದಿನಾ ಜೋಡಿಸಿ-ಅಳಿಸಿ, ಹೊಸ ಹೊಸ ಶಬ್ದಾಲಂಕಾರಗಳನ್ನು ಆತ ಮಾರುತ್ತಿದ್ದ
ಕಳ್ಳನಿಗೂ-ಸುಳ್ಳನಿಗೂ-ಸುಭಗನಿಗೂ ಒಂದೇ ರೀತಿ
ಸಂತೆಯಲಿ ನಿಂತು ಅಕ್ಷರಗಳ ಬುಟ್ಟಿ ಹಿಡಿಯುತ್ತಿದ್ದ.
ಆತನ ಶವದ ಎದುರು ತೂಗುಹಾಕಿದ್ದ ಕ್ಯಾಲೆಂಡರನ್ನು ಒಮ್ಮೆ ದಿಟ್ಟಿಸಿದೆ.
ಪ್ರತಿ ತಾರೀಖಿನೆದರು ಬರೀ ಲೆಕ್ಕಾಚಾರದ್ದೆ ಗೀಟುಗಳು
ಸಿಕ್ಕಿದ್ದಕ್ಕಿಂತ ಬಾಕಿ ಬರುವುದೇ ಹೆಚ್ಚಿದ್ದಂತಿತ್ತು.
ಆತನ ಸೋತ ಬದುಕಿನ ಲೆಕ್ಕಾಚಾರದಂತೆ.
ಆತ ಟೈಪಿಸಿದ ಅಕ್ಷರಗಳೀಗ ಅನಾಥ…
ನಿಮಗೆ ಇವೂ ಇಷ್ಟವಾಗಬಹುದು…





0 Comments