ಆತ್ಮೀಯ ಗೆಳತಿಯ ಒಂದು ಪತ್ರ ಬಂತು..

ಕನಸು

       ಹೆಚ್.ಆರ್. ಸುಜಾತಾ

letterಆತ್ಮೀಯ ಗೆಳತಿಯ ಒಂದು ಪತ್ರ ಬಂತು.

ಅವಳ ಪತ್ರವನ್ನು ನಿಮಗೆ ನೇರವಾಗಿ ಓದಲು ಕೊಡುತ್ತಿದ್ದೇನೆ. ನೀವೆ ಓದಿಕೊಳ್ಳಿ.

ನನಗೆ ತಾಕಿದ ಆ ಪತ್ರ ತಮಗೂ ತಾಕುವುದು ಎಂದೇ ನನ್ನ ನಂಬಿಕೆ. ಅವಳ ಸಮಸ್ಯೆಯನ್ನು ಈ ಪತ್ರದಲ್ಲಿ ಹಂಚಿಕೊಂಡು ಅವಳು ಹಗುರಾಗಲು ಪ್ರಯತ್ನಪಟ್ಟಿದ್ದಾಳೆಯೇ ಹೊರತು ಅವಳೇನೂ ನನ್ನಿಂದ ಪರಿಹಾರ ಕೇಳಿಲ್ಲ.

ಈ ಪ್ರಕೃತಿಯ ಶಿಶುವಾಗಿ ಹುಟ್ಟಿ, ಸಮಾಜದ ಚೌಕಟ್ಟಿನೊಳಗೆ ಬೆಳೆದು ಅದರಿಂದಾಚೆಗೆ ಪ್ರಕೃತಿದತ್ತ ಕನಸುಗಳಿಗೆ ಪಯಣಿಸುವ ಮನಸುಗಳು, ತಂತಮ್ಮ ಪ್ರಶ್ನೆಗಳಿಗೆ ಆ ಕ್ಷಣಕ್ಕೆ ಏನೂ ನಿರ್ಧಾರಗಳನ್ನು ತೆಗೆದುಕೊಳ್ಳಲಾರದೆ ಒದ್ದಾಡುತ್ತವೆ. ನೋಯುತ್ತವೆ ಎಂಬುದೂ ಸುಳ್ಳಲ್ಲ.

ಹಾಗೆಯೇ ಕಾಲಾನುಕಾಲದಲ್ಲಿ ವಾಸ್ತವದಲ್ಲಿ ಈ ಭ್ರಮೆಯ ಗುಳ್ಳೆಗಳು ಮಾಯವಾದರೂ ಅದು ಉಳಿಸಿಹೋದ ವಿಭ್ರಮೆಯ ಗುರುತು ಹೊತ್ತುಕೊಂಡೇ ಜೀವಗಳು ತಿರುಗುವುದು ನಿಜ. ಈ ಸುಳ್ಳು ನಿಜದ ಕೊಂಡಿಯಾಗಿದ್ದ ಒಂದು ಕನಸು ನಿಮ್ಮ ಮುಂದಿದೆ. ಇದು ನಮ್ಮ ನಿಮ್ಮ ಕನಸೂ ಆಗಿರಬಹುದು.

ತಿರುವಿನಲ್ಲಿ ಕಾರು ಚಲಿಸುತ್ತಿತ್ತು.

ಪಕ್ಕದಲ್ಲಿ ನಮ್ಮವರು ಯಾರೋ

ಕುಳಿತಿದ್ದಂತೆ ನೆನಪು .

ಗಂಡನೇ ಇರಬೇಕು.

ಕಣ್ಣಳತೆಯಲ್ಲಿ ಕಾಣುವಂತೆ

ಇನ್ನೊಂದು ತಿರುವಿನ ರಸ್ತೆಯಲಿ

ನನ್ನ ಮುಂದೆ ಹೋಗುವ

ಬಸ್ಸು ತಿರುಗಿಕೊಂಡಿತು.

ರಭಸದಲ್ಲಿದ ಬಸ್ಸು,

ನೋಡನೋಡುತ್ತಿದ್ದಂತೆಯೆ

ಅಲ್ಲೇ ರಸ್ತೆಯಲ್ಲಿ, ಯಾರನ್ನೋ,

ಕಾಯತ್ತಲೋ ನೋಡುತ್ತಲೋ,

ನಿಂತಿದ್ದ ಹುಡುಗನ ಕಾಲೇರಿ,

ಮುಂದೋಡಿತು. ನೋವಿನಿಂದ

ಮುಖಕಿವುಚಿದ, ಆ ಹುಡುಗ.

 

ಅವನ ಕಣ್ಣಲ್ಲಿದ್ದ ನೋವು,

ಎಷ್ಟು ತೀವ್ರವಾಗಿತ್ತು ಎಂದರೆ

ಆ ಹುಡುಗ ನನ್ನದೇ ಒಂದು

ಭಾಗವೇನೋ ಅನ್ನಿಸುವಂತೆ,

ಆ ನೋವು ನನಗೆ ತಾಕಿತು.

ನನ್ನ ಮುಖವೂ ಅಷ್ಟೇ

ನೋವಿನಿಂದ ಹಿಂಡಿತು.

love-pendantಹೊಟ್ಟೆಯ ನಾಭಿಯಲ್ಲಿ

ಸಂಕಟವೆದ್ದಿತು. ಆದರೆ

ಅಷ್ಟರಲ್ಲಿ ರಸ್ತೆಗಳೆರೆಡು

ಬೇರೆ ಬೇರೆಯಾಗಿದ್ದವು.

ಕಣ್ಣಿಗೆ ಕಾಣಿಸಿದ ಸಂಕಟ,

ಹೊಟ್ಟೆಯೊಳಗೆ ಉಂಡ

ಸಂಕಟವೆರಡೂ ಒಂದೇ

ಆಗಿ ತಟ್ಟನೆ ಎಚ್ಚರವಾಯಿತು.

 

ಕನಸು! ಓ ಇದು

ಕನಸೆಂದು ತಿಳಿದರೂ

ಕಣ್ಣೀರು ಹರಿಯುತ್ತಲೇ ಇತ್ತು.

ಎದೆಯ ಭಾಗದಲ್ಲಿ ಛಳುಕು,

ಕಾಣುತ್ತಲೇ ಇತ್ತು.

 

ನಾನು ನೋಯಿಸಿದೆನೇ?

ಅವನು ನೊಂದನೇ?

ಇಬ್ಬರೊಳಗೂ ಹರಿದಾಡಿದ್ದು

ಯಾವ ನೋವು ? ಅಲೆಗಳು

ಕೇಳುತ್ತ, ಅಲೆಯುತ್ತಲೆ ಇವೆ.

 

ಇಬ್ಬರೂ ಇಷ್ಟಪಟ್ಟಿದ್ದು

ಹತ್ತು ವರ್ಷಗಳ ಹಿಂದೆ.

ಅದು, ನಿಧನಿಧಾನವಾಗಿ,

ಇಬ್ಬರಿಗೂ ಹರಡಿ ನೆರಳು

ದಟ್ಟವಾಗಿ ಹಬ್ಬಿಕೊಂಡಿದೆ.

ಹುಣ್ಣಿಮೆಯ ದಿನ ಚಂದ್ರನನ್ನು

ನೋಡಿ ನಾನು ಕಳೆದುಹೋದೆ.

ಆ ಕ್ಷಣಗಳು ಅವನಿಗೂ

ತಾಗಿ, ಅವನೂ ಕಳೆದುಹೋದ.

 

ಹಿಮವೊಂದೇ ನಿಜವಾದ,

ಮಬ್ಬುನಸುಕಿನಲ್ಲಿ ದಾರಿಗುಂಟ

ಕಪ್ಪು ಟಾರು ರಸ್ತೆಯ ಮೇಲೆ,

ದೋಣಿಯಂತೆ ಮೇಲೇರುತ್ತಾ,

ಅಷ್ಟಗಲ ಬಿಳಿ ಬಿಳಿ ರೆಕ್ಕೆಗಳನ್ನು ಹರಡಿ

ಪುಷ್ಪಕ ವಿಮಾನದಂತಾಗಿ

ಹಿಂಡಿಂಡು ಬೆಳ್ಳಕ್ಕಿಗಳು

ಹಾರಿಹೋದ ಅನನ್ಯದ್ರಶ್ಯ

ಇಬ್ಬರಲ್ಲೂ ಎಂದಿಗೂ

ಮಾಸದಂತೆ ನೆಲೆಯಾಯಿತು.

 

ಕಣ್ಣಮುಂದೆಯೇ ಅಷ್ಟುದ್ದ

ಬಾಲವನ್ನು ಎಳೆಯತ್ತಾ,

ಚಿತ್ತಾರದ ನವಿಲು ಕಣ್ಣೆಳೆವಂತೆ

ಸರಿದುಹೋದದ್ದನ್ನು ಕಂಡು

ಇಬ್ಬರೆದೆಯು ಆ ಗುಡ್ಡದ ಮೇಲಿನ

ಜಾಗರಾಡುವ ನವಿಲಂತಾಗಿತ್ತು.

ಕಡಿದ ಮಾವಿನಕಾಯಿಯನ್ನು

ಉಪ್ಪು ನಂಚಿಕೊಂಡು

ತಿಂದಂತೆ ಚಪ್ಪರಿಸಿದ್ದೆವು ಅಂದು.

 

ಸಂಜೆ ಮೂಡುವ ಬೆಳ್ಳಿಯ ನಕ್ಷತ್ರ

ಅವನಕಣ್ಣಂತೆ ನನಗನ್ನಿಸುತ್ತಿತ್ತು.

ದುಂಡು ಮೊಗದ ನಾನು

ಅವನ ಬಾಯಲ್ಲಿ ಚಂದ್ರಮುಖಿಯಾದೆ.

lovers

ಕಾಡುಪ್ರಾಣಿಗಳ ಕೂಗು

ಹಾರುಹಕ್ಕಿಗಳ ಗೂಡು,

ತಬ್ಬಿ ಮೊರೆವ ಪ್ರಾಣಿಗಳ ಮೈಥುನ

ಎಲ್ಲದಕ್ಕೂ ಸಾಕ್ಷಿಯಾಗಿ ನಿಂತೆವು.

ನಡುನಡುವೆ ಬಿಟ್ಟುಹೋಗುವಾಗ,

ಮುನಿದೆವು ಮತ್ತೆ ಸೇರಿದೆವು.

ವರುಷಗಳು ಉರುಳಿದವು.

ಕಷ್ಟಸುಖಗಳ ನಡುವೆ

ನನ್ನದೆಂಬ ಭಾವ,

ಕೈಗೆ ಸಿಗಲಾರದೆ ನೊಂದೆವು.

 

ಇಂದು ಆದದ್ದೂ ಅದೆ.

ಬೆಳಿಗ್ಗೆ ಊರು ತಲುಪಿದವರೇ

ಕೊಟ್ಟ ಮುತ್ತಿನ ನಡುವೆ

ಬಿಟ್ಟುಬಿಡು ನನ್ನ ಎಂದನವನು.

ಬಿಟ್ಟುಹೋಗು ಎಂದು

ನಾನೂ ಅಂದೆ.

ಇಬ್ಬರಲ್ಲೂ ಕುದಿತ,ಮೊರೆತ.

ಮಾತುಮಾತಿಗೆ ಮಾತು ಬೆಳೆದು

ಸಾವಿರದೊಂದನೆಯ ಬಾರಿ ಆಡಿದ

ಆರೋಪ ಮತ್ತೆ ಗರಿಗೆದರಿತು.

ಹೀಗೆ ಹಿಂಸಿಸುವ ಬದಲು

ನನ್ನನ್ನು ಬಿಟ್ಟುಬಿಡು.

ಅವನದ್ದು

ಆಣೆಪ್ರಮಾಣದ ಭಾಷೆ.

ನಾನೂ ಸರಿಸಾಟಿಯೆ.

ನನ್ನಾಣೆ, ನಿನಗೆ ಹೋಗಬೇಕು

ಎನಿಸಿದರೆ ನಿನ್ನದೇ ತೀರ್ಮಾನ.

ಎಂದಾಗ ರಾಗ ಜೋರಾಗಿತ್ತು.

ಎದೆ ನೋವಾಗಿತ್ತು.

 

ಮನೆಗೆ ಬಂದವಳಿಗೆ

ಕಣ್ಣೆಳೆದು, ಕಣ್ಣತೇವದಲೇ

ಕಣ್ಮುಚ್ಚಿ ಮಲಗಿದವಳಿಗೆ

ಇಂಥ! ಕನಸು.

love pickles

ನಿಜ,ಅಪಘಾತವಾಗುವ ಮುಂಚೆ

ಆ ಮಗು ನಿರ್ವಂಚನೆಯಿಂದ

ಮುಗ್ಧನಂತೆ ಏನನ್ನೋ ಗಮನಿಸುತ್ತಿದ್ದ.

ನನಗೇಕೆ ಆ ಮಗುವಿನ ನೋವು

ನಾಭಿಯೊಳಗಿಳಿದು ಮಡುಗಟ್ಟಿತು.

 

ಅನುಭವದ ನೋವು,

ಕನಸಲ್ಲಿ ಕಂಡ ನೋವು

ಒಂದೇ ಆಗಿ ಹೋಯಿತು.

ಹುಡುಕಾಡಿದೆ.

ತುಂಬಿದ ಕಣ್ಣೀರಿನೊಳಗೆ,

ಏನೂ ಸ್ಪಷ್ಟವಿಲ್ಲ.

ನುಣುಪು ಗಾಜಿನ ಅಂಚೇ ಮೊನಚು.

‍ಲೇಖಕರು Admin

November 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Gayatri Badiger, Dharwad

    super mam.. higondu patra namagu barli .. really super .. thank you.,.

    ಪ್ರತಿಕ್ರಿಯೆ
  2. Vijay Hanakere

    ಯಾಕಿಂಗೆ ಎಲ್ಲ ನೆನಪು ಮಾಡ್ತೀರಾ .. ಸರಿಯಿಲ್ಲ ನೀವು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: