ಬಸವರಾಜ ಬೀಳಗಿ
ಇತಿಹಾಸದ ಮಣ್ಣು ಗೋಡೆಯನ್ನು ತೊಳೆಯುವವರು ತೊಳೆಯುತ್ತಲೇ ಇರಲಿ ಬಿಡು.
ಇತಿಹಾಸದ ಮಹಲಿನ ಗೋಡೆಗೆ ಮೂಲೆಗಲ್ಲಾಗುವುದು ನಿನ್ನಿಂದ ಮಾತ್ರ ಸಾಧ್ಯ ನೋಡು.
ಚರಿತ್ರೆಗೆ ಬಣ್ಣಗಳನ್ನು ಬಳೆದು ಸುಳ್ಳಾಡುವವರು ಇರುವರು ಬಿಡು
ನಿನಗೆ ಕುಹಕವನ್ನಾಡಿ ನಕ್ಕರೂ ನಗುತ್ತಲೇ ಉತ್ತರಿಸುವುದು ನಿನ್ನಿಂದ ಮಾತ್ರ ಸಾಧ್ಯ ನೋಡು.
ಧರ್ಮಗಳ ಹೆಸರಿನಲ್ಲಿ ಮನೆಗೆ ಬೆಂಕಿ ಇಟ್ಟು ಸಂಭ್ರಮಿಸುವವರು ಇರುವರು ಬಿಡು
ಮನಗಳನ್ನು ಬೆಸೆಯುವ ಸೇತುವೆಗಳನ್ನು ಕಟ್ಟುವುದು ನಿನ್ನಿಂದ ಮಾತ್ರ ಸಾಧ್ಯ ನೋಡು.

ಮೇಲು ಕೀಳೆಂಬ ಕೆಂಡದ ಮಳೆಯ ಸುರಿಸಿ ಬೇಯಿಸುವವರು ಇರುವರು ಬಿಡು
ಮಳೆಯ ಹನಿಯಂತೆ ಇಳೆಗೆ ತಂಪೆರೆಯುವುದು ನಿನ್ನಿಂದ ಮಾತ್ರ ಸಾಧ್ಯ ನೋಡು.
ಇತಿಹಾಸದ ಪುಟಗಳನ್ನು ತಿರುಚಿ ಸುಳ್ಳುಗಳ ಮಹಲನೇ ಕಟ್ಟುವವರು ಇರುವರು ಬಿಡು
ನೊಂದವರ ಮನಗಳನು ಜೋಡಿಸಲು ಹೊರಟು ನಿಲ್ಲುವುದು ನಿನ್ನಿಂದ ಮಾತ್ರ ಸಾಧ್ಯ ನೋಡು.






0 Comments