ಆಡು ಕಾಯೋ ಹುಡುಗನ ದಿನಚರಿ

ಪುನೀತ್ ಕುಮಾರ್

ಬಾಲ್ಯ ಅಂದರೇನೆ ಒಂದುರೀತಿ ಬೆರಗು. ಯಾರೇ ಆದರೂ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡಾಗ, ಮತ್ತೆಮತ್ತೆ ಮೆಲುಕು ಹಾಕುವಾಗ ಅನಾಯಾಸವಾಗಿ ಆನಂದದ ಹಾಲ್ಗಡಲಲ್ಲಿ ತೇಲಾಡುತ್ತಾರೆ. ಎಲ್ಲವನ್ನೂ ಅಚ್ಚರಿಗಣ್ಣುಗಳಿಂದ ನೋಡುತ್ತಾ, ಆಸ್ವಾದಿಸುತ್ತ, ಯಾವುದೇ ಪೂರ್ವಗ್ರಹವಿಲ್ಲದೆ, ನಿಷ್ಕಲ್ಮಷ ಮನದಿಂದ ಜಗತ್ತನ್ನು ಕಾಣುವುದು; ಜೀವನಕ್ಕೆ ತೆರೆದುಕೊಳ್ಳುವುದು ಮತ್ತು ಸಂತಸದಿಂದ ಜೀವನವನ್ನು ಸಂಭ್ರಮಿಸುವ ಘಟ್ಟವೆಂದರೆ ಅದು ಬಾಲ್ಯ. ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಬಾಲ್ಯವೇ ಸುಂದರ ಎನಿಸುತ್ತಿರುತ್ತದೆ ಮತ್ತು ಬಾಲ್ಯದ ದಿನಗಳೆಂದರೆ ವಿಶೇಷ ಅಕ್ಕರೆ, ಕಲ್ಲುಸಕ್ಕರೆ.

ಬಹುತೇಕ ಬರಹಗಾರರಿಗೆ, ಯಾವುದೇ ಬರಹದ ಪ್ರಕ್ರಿಯೆಯ ಹಂತದಲ್ಲಿ ನಡುನಡುವೆ ಸುಳಿದು ಎಡೆಬಿಡದೆ ಕಾಡುವ, ಅಕ್ಷರವಾಗಲು ಹವಣಿಸುವ ಅನೇಕ ಜೀವನದನುಭವಗಳಲ್ಲಿ ತಮ್ಮ ಬಾಲ್ಯದ ಅನುಭವಗಳೇ ಸದಾ ಒಂದು ಹೆಜ್ಜೆ ಮುಂದಿರುತ್ತವೆ. ಬಾಲ್ಯದಲ್ಲಿ ಸೆಳೆದ ವ್ಯಕ್ತಿ, ಊರು, ಜನ, ಅಲ್ಲಿನ ಪರಿಸರ, ನೋವು-ನಲಿವು, ಬದುಕು, ಬೆರಗು.. ಇತ್ಯಾದಿ; ಕತೆಯಾಗಿಯೋ, ಕವಿತೆಯಾಗಿಯೋ, ಲೇಖನವಾಗಿಯೋ, ಕಾದಂಬರಿಯಾಗಿಯೋ ರೂಪುಗೊಳ್ಳಲು ತುದಿಗಾಲಲ್ಲಿ ನಿಂತಿರುತ್ತವೆ. ಬರಹಗಾರನಿಗೆ ಬರೆಯುವಂತೆ ಪ್ರೇರಿಸುತ್ತವೆ, ಸವಾಲೊಡುತ್ತವೆ. ಆ ಮಟ್ಟಿಗೆ ಬಾಲ್ಯದ ದಿನಗಳು ತಲ್ಲಣಗೊಳಿಸುತ್ತವೆ.

ಆ ನಿಟ್ಟಿನಲ್ಲಿ, ತೀವ್ರವಾಗಿ ಕಾಡುವ ಬಾಲ್ಯದ ಅನುಭವಗಳನ್ನು ಅಕ್ಷರರೂಪಕ್ಕಿಳಿಸಿ ಅವುಗಳಿಗೆ ತಕ್ಕ ನ್ಯಾಯ ಒದಗಿಸಿ, ಕೊಂಚ ನಿರಾಳಗೊಳ್ಳಲು ಲೇಖಕ ಟಿ. ಎಸ್ ಗೊರವರ ಅವರು ‘ಆಡು ಕಾಯೋ ಹುಡುಗನ ದಿನಚರಿ’ ಪುಸ್ತಕವನ್ನು ಹೊರತಂದಿದ್ದಾರೆ. ತಮ್ಮ ನೆನೆಪಿನ ಬುತ್ತಿಯಲ್ಲಿ ಭದ್ರವಾಗಿ, ಬೆಚ್ಚಗೆ ಅಡಗಿ ಕುಳಿತಿರುವ ಅವರ ಸಮೃದ್ಧ ಬಾಲ್ಯ, ಇಲ್ಲಿ ಪ್ರಕಟವಾಗಿದೆ : ಅಪ್ಪ-ಅವ್ವ, ಮನೆ, ಗೆಳೆಯರು, ಊರು, ಜನ, ಜೀವನ ವಿಧಾನ, ಅಲ್ಲಿನ ಪರಿಸರ, ಹಬ್ಬಗಳು, ಜಾತ್ರೆ, ನಾಟಕ.. ಹೀಗೆ ಒಟ್ಟಾರೆ ಒಂದು ಹಳ್ಳಿಸೀಮೆಯ ಭವ್ಯ ಚಿತ್ರಣ ಇಲ್ಲಿನ ಅಧ್ಯಾಯಗಳಲ್ಲಿ ಹಾಸುಹೊಕ್ಕಾಗಿವೆ.

ಸಾಮಾನ್ಯವಾಗಿ ಆಗಿನ ಹಳ್ಳಿಯ ಮಕ್ಕಳ ಬಾಲ್ಯ ಕೊಂಚ ಭಿನ್ನ ಹಾಗೂ ವಿಶೇಷವೆಂದೇ ಹೇಳಬಹುದು. ಅದು ನಿಜವಾದ ಅರ್ಥದಲ್ಲಿ ಸಮೃದ್ಧವಾಗಿರುತ್ತದೆ. ಪ್ರಕೃತಿಯೊಂದಿಗೆ ನೇರವಾಗಿ ಬೆರೆಯುವ ಮುಕ್ತ ಅವಕಾಶ ಹಳ್ಳಿಯ ಮಕ್ಕಳ ಪಾಲಿಗಿರುತ್ತದೆ. ಅದು ಅವರ ಸೌಭಾಗ್ಯ. ಅಂತೆಯೇ ಲೇಖಕರೂ ಚಿಕ್ಕಂದಿನಲ್ಲಿ ಎಮ್ಮೆ ಮೇಯಿಸುತ್ತ, ಆಡು ಮೇಯಿಸುತ್ತ ಗೆಳೆಯರೊಂದಿಗೆ ಅಡ್ಡಾಡುವುದು, ಆಟಗಳನ್ನಾಡುವುದು, ಮರ ಹತ್ತಿ ಜೇನು ಬಿಡಿಸುವುದು, ಈಜಾಡುವುದು, ಏಡಿ ಸುಟ್ಟು ತಿನ್ನುವುದು.. ಹೀಗೆ ಅನೇಕ ವಿಶಿಷ್ಟ ಅನುಭವಗಳಿಗೆ ಸಾಕ್ಷಿಯಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಶಾಲೆಯನ್ನು ತಪ್ಪಿಸಿಕೊಂಡು ಗೆಳೆಯೊರಂದಿಗೆ ದಿನಗಳನ್ನು ಕಳೆಯುತ್ತಿರುತ್ತಾರೆ- ಅಪ್ಪ ಅವ್ವನಿಗೆ ಗೊತ್ತಾಗದ ಹಾಗೆ!

ಹಾಗಂತ ಬಡತನ, ಕಷ್ಟ, ನೋವು, ಬವಣೆಗಳು ಇರಲಿಲ್ಲವೆಂದಲ್ಲ. ಅಪ್ಪ-ಅವ್ವನ ಪ್ರೀತಿ, ಆರೈಕೆಗಳ ಮುಂದೆ; ಬಾಲ್ಯದ ತುಂಟತನ, ಗೆಳೆಯರ ಒಡನಾಟ, ಹಬ್ಬ, ಜಾತ್ರೆ, ಸಂಭ್ರಮಗಳ ಮುಂದೆ ಅವುಗಳೆಲ್ಲ ಗೌಣವಾಗಿಬಿಡುತ್ತವೆ. ಅಥವಾ ಬಾಲ್ಯದ ಕಣ್ಣಿಗೆ ಅವೆಲ್ಲ ಅಷ್ಟು ಲೆಕ್ಕಕ್ಕಿಲ್ಲ. ಎಷ್ಟೇ ತಾಪತ್ರಯಗಳಿದ್ದರೂ ಬದುಕು ಆಗ ಚೈತ್ರದ ಚಂದ್ರಮನಂತೆ. ಅದೇ ಬಾಲ್ಯದ ಬೆಡಗು. ಬಹುಶಃ ಅದು ಬಾಲ್ಯಕ್ಕಿರುವ ಶಕ್ತಿ.

ಪುಸ್ತಕ ಓದುತ್ತಾ ನನ್ನನ್ನು ಹಿಡಿದಿಟ್ಟ ವಿಚಾರವೆಂದರೆ ಅದು ಬದುಕಿನ ತಿರುವುಗಳು. ಬದುಕಲ್ಲಿ ಯಾವ ತಿರುವುಗಳು ಯಾವ ಸಮಯಕ್ಕೆ ಬರುತ್ತದೊ ಹೇಳಲಾಗದು. ಆದರೆ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಹಾಗೂ ಒಳ್ಳೆಯ ಬದಲಾವಣೆಗೆ ಕೇವಲ ಒಂದು ಚಿಕ್ಕ ತಿರುವು ಸಾಕು ಎಂಬುದಂತೂ ಸತ್ಯ. ಅದನ್ನು ಲೇಖಕರ ಬಾಳಿನಲ್ಲೂ ಕಾಣಬಹುದು.

ಆಡು ಕಾಯುತ್ತ, ಉಡಾಳತನ ಮಾಡುತ್ತ, ಬಡತನ, ಮನೆ ಜವಾಬ್ದಾರಿ ಎಂದು ಸುಲಭವಾಗಿ ಅಕ್ಷರದ ನಂಟನ್ನು ಕಡಿದುಕೊಳ್ಳಬಹುದಾಗಿದ್ದ, ಕಲಿಕೆಯಿಂದ ಜಾರಿಕೊಳ್ಳಬಹುದಾಗಿದ್ದ ಹುಡುಗ… ತಾನು ಜೀತಗಾರನಾದರೂ ಮಗ ಸಾಲಿ ಕಲಿಯಬೇಕು ಎಂಬ ತನ್ನ ತಂದೆಯ ದಿಟ್ಟ ನಿರ್ಧಾರದಿಂದ ಶಾಲೆಯಮೆಟ್ಟಲು ಹತ್ತಿದ್ದು ಮೊದಲ ತಿರುವು.

ತನ್ನ ಓಣಿಯ ಹಾಗೂ ತಾಂಡಾದವರು ಊರಹಬ್ಬದಕ್ಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ನಾಟಕದ ತಾಲೀಮು ನೋಡಲು ಹೋಗುತ್ತಿದ್ದವನು, ಮುಂದೆ ಒಂದು ದಿನ ತಾನು ನಾಟಕದಲ್ಲಿ ಅಕಸ್ಮಾತ್ ಭಾಗಿಯಾಗುವ ಸಂದರ್ಭ ಒದಗುವುದು ಮತ್ತೊಂದು ತಿರುವು. ಈ ಎರಡು ತಿರುವುಗಳು ಆ ಹುಡುಗನಿಗೆ ಊರಿನ ಸಹೃದಯಿ ಡಾಕ್ಟರನ್ನು ಪರಿಚಯಸಿದವು, ಅವರ ಮೂಲಕ ಮತ್ತೊಬ್ಬ ವ್ಯಕ್ತಿಯ ಪರಿಚಯವಾಗಿ ಅವರಿಂದ ಪುಸ್ತಕಗಳ ಒಡನಾಟ ದೊರೆಯುವಂತೆ, ಸಾಹಿತ್ಯದಲ್ಲಿ, ಬರಹದಲ್ಲಿ ಆಸಕ್ತನಾಗುವಂತೆ ಮಾಡಿದವು; ಈ ಪಯಣ ಮುಂದೆ ಪದವಿಗಳನ್ನು ಪಡೆದು, ಪತ್ರಿಕೆಯ ಸಂಪಾದಕನಾಗಿ, ಕಥೆಗಾರನಾಗಿ ನಿಲ್ಲುವಂತೆ ಮಾಡಿದ್ದು ನಿಜಕ್ಕೂ ಸೋಜಿಗ. ಈ ಬದುಕು ಎಷ್ಟು ಅನಿರೀಕ್ಷಿತ ಹಾಗೂ ಅನೂಹ್ಯ ಅಲ್ಲವೆ?

ಶಾಲೆಯನ್ನೇ ಮರೆಸುವ ಎಮ್ಮೆ ಟೀಮಿನ ಗೆಳೆಯರು; ಆಡು ಮೇಯಿಸುವ ದಿನಗಳು; ಚಿತ್ತ-ಬಕ್ಕ ಆಡಿ ಅಪ್ಪನ ಕೋಪಕ್ಕೆ ಗುರಿಯಾಗಿ ಏಟು ತಿನ್ನುವುದು, ಬನ್ನಿಗಿಡದಲ್ಲಿ ಚಿಟಜೇನು ಬಿಡಿಸಲು ಹೋಗಿ ಕಚ್ಚಿಸಿಕೊಳ್ಳುವುದು, ಗೆಳೆಯರೊಡನೆ ಕೂಡಿ ಮಾಡುವ ತಂಟೆ-ತರಲೆಗಳು.. ಹೀಗೆ ಇವೆಲ್ಲವೂ ಓದುಗರನ್ನು ಕಾಡುತ್ತವೆ ಮತ್ತು ಇವೆಲ್ಲದರಲ್ಲೂ, ಬಾಲ್ಯದಲ್ಲಿ ಲೇಖಕರಿಗಿದ್ದ ಮುಗ್ಧತೆ, ತುಂಟತನ, ಆಸೆ, ಉತ್ಸಾಹಗಳನ್ನು ನಾವು ಕಾಣಬಹುದು.

ದುಡಿಮೆಯ ದ್ಯೋತಕಗಳಂತಿರುವ ಸ್ವಾಭಿಮಾನಿ ಅಪ್ಪ-ಅವ್ವ ಬದುಕನ್ನು ಕಟ್ಟಿಕೊಂಡು ಮಕ್ಕಳಿಗಾಗಿ ಶ್ರಮಿಸುವ ರೀತಿಯಂತೂ ಬೆರಗು ಮೂಡಿಸುತ್ತದೆ. ಇಷ್ಟೆ ಅಲ್ಲದೇ ತಮ್ಮ ಊರಿನ ಹಿರಿಮೆಯಾದ ಅಲೈ ಹಬ್ಬ; ಕೂಲಿ ಮಾಡುವ ಹೆಣ್ಣುಮಕ್ಕಳ ಚಿತ್ರಣ ಹಾಗೂ ಕೊನೆಯ ಅಧ್ಯಾಯದಲ್ಲಿ ತಮ್ಮ ಧಾರವಾಡದ ದಿನಗಳನ್ನು ಕುರಿತೂ ಈ ಪುಸ್ತಕದಲ್ಲಿ ಗೊರವರ ಅವರು ಕಟ್ಟಿಕೊಟ್ಟಿದ್ದಾರೆ

ಇನ್ನು, ಇವರ ನಿರೂಪಣೆಯ ವಿಷಯ: ಯಾವುದೇ ಅನುಭವಗಳನ್ನು ಓದುಗನಿಗೆ ದಾಟಿಸಬೇಕಾದರೆ ಮುಖ್ಯಪಾತ್ರವಹಿಸುವುದು ಭಾಷಿಕ ವಿನ್ಯಾಸ ಹಾಗೂ ನಿರೂಪಣೆ. ಯಾವುದೇ ಅನುಭವವಾದರೂ ಅದು ವಾಸ್ತವಿಕವಾದರೂ ಪ್ರತಿಮೆ, ರೂಪಕಗಳ ಭಾಷೆಯಲ್ಲಿ ಅದನ್ನು ಕಟ್ಟಿಕೊಟ್ಟರೇನೆ ಅದಕ್ಕೊಂದು ಸೊಬಗು ಎಂದೆನಿಸುತ್ತದೆ. ಆಗಲೇ ಅದು ಓದುಗನ ಎದೆಗಿಳಿಯುವುದು. ಈ ವಿಷಯದಲ್ಲಿ ಗೊರವರ ಅವರು ಅತ್ಯಂತ ಯಶಸ್ವಿಯಾಗಿದ್ದಾರೆ. ಇವರ ಭಾಷೆ, ನಿರೂಪಣೆ ಶೈಲಿ ಮನಮುಟ್ಟುತ್ತದೆ.

ಶಾಲೆಗೆ ಹೋಗಲು ಇಷ್ಟವಿಲ್ಲದನ್ನು, ಆ ಯಾತನೆಯನ್ನು ಅವರು ಈ ಸಾಲುಗಳ ಮೂಲಕ ವ್ಯಕ್ತಪಡಿಸುತ್ತಾರೆ : ‘ನನಗೆ ಕ್ಲಾಸಿನಲ್ಲಿ ಕುಳಿತುಕೊಳ್ಳೋದು ಅಂದ್ರೆ ಅವ್ವ ಈಚಲು ಮರದ ಗರಿಗಳಿಂದ ಹಣೆದ ಬುಟ್ಟಿಯಲ್ಲಿ ಕೋಳಿ ಮುಚ್ಚಿದಂತೆ ಉಸಿರುಗಟ್ಟಿಸುತ್ತಿತ್ತು. ಚಿನ್ನಾಟವಾಡುವ ಆಕಳು ಕರುವನ್ನು ಗ್ವಾದಲಿಯ ಗೂಟಕ್ಕೆ ಕಟ್ಟಿದಂತೆ ಹಿಂಸೆ ಅನಿಸುತ್ತಿತ್ತು.’ ಇದನ್ನು ಓದುತ್ತಿದ್ದಂತಯೇ ನಮಗೆ ಆ ನೋವು ವೇದ್ಯವಾಗುತ್ತಲ್ಲವೆ? ‘ಎತ್ತು ಕಟ್ಟುವ ದಂದಾಕಿಗೆ ಬಂದರೆ ಅಲ್ಲಿ ಕತ್ತಲು ಆಲಸಿಯಾಗಿ ಇನ್ನೂ ಆಕಳಿಸುತ್ತ ಬಿದ್ದಿರುತ್ತಿತ್ತು’; ‘..ಆಗಲೇ ಸಂಜೆಗತ್ತಲು ಕಳ್ಳಹೆಜ್ಜೆ ಇಡತೊಡಗಿತ್ತು’.. ಹೀಗೆ ಅಲ್ಲಲ್ಲಿ ಇವರು ಬಳಸಿರುವ ನವಿರು ಭಾಷೆಯನ್ನು ಪುಸ್ತಕದಲ್ಲಿ ಓದಿ ಸವಿಯಬಹುದು.

ಪುಸ್ತಕಕ್ಕೆ ಬೆನ್ನುಡಿ ಬರೆದ ಕತೆಗಾರ ನಟರಾಜ್ ಹುಳಿಯಾರ್ ಅವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ : ‘ಈ ಸ್ವಂತದ ಹಾಗೂ ಸಮಾಜಿಕ ನೆನಪುಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪರಿಚಿತವಿಲ್ಲದ ಅನುಭವಲೋಕವೊಂದು ವೈವಿಧ್ಯಮಯ ವಿವರಗಳೊಂದಿಗೆ ಈ ಪುಸ್ತಕದ ಮೂಲಕ ಪ್ರವೇಶಿಸಿದೆ’. ನನಗೂ ಈ ಮಾತುಗಳು ನಿಜವೆನಿಸಿತು.

ಒಟ್ಟಾರೆಯಾಗಿ ಹೇಳಬೇಕಾದರೆ, ದಶಕಗಳ ಹಿಂದಿನ ಒಂದು ಹಳ್ಳಿಯ ಸ್ಪಷ್ಟ ಚಿತ್ರಣಗಳನ್ನು ಕಣ್ತುಂಬಿಕೊಳ್ಳಬೇಕಾದರೆ. ಆ ನೆನಪುಗಳ ಅಲೆಯಲ್ಲಿ ನೀವು ಮೀಯಬೇಕಾದರೆ ‘ಆಡು ಕಾಯೋ ಹುಡುಗನ ದಿನಚರಿ’ ಓದಿ. ನಿಜಕ್ಕೂ ಇದೊಂದು ವಿಶೇಷ ಅನುಭೂತಿ ನೀಡುತ್ತದೆ..

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: