ನಾಗರೀಕತೆಯ ದಾಳಿಗೆ ರಾಜೇಶ ಎಂಬ ಅಮಾಯಕನ ಅಂತ್ಯ…
ಉಷಾ ಹಿರೇಜಂಬೂರು
ಸುಮಾರು ಎರಡ್ಮೂರು ವರ್ಷಗಳಿರಬಹುದು. ರಾಜೇಶ ಎಂಬ ಅಮಾಯಕ ಹುಡುಗ ತನ್ನ ತುಂಬು ಗರ್ಬಿಣಿ ಮಡದಿಯನ್ನೂ ಬಿಟ್ಟು ಪ್ಯಾಟೆಗೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ! ನಾಗರಿಕತೆಯ ಜನರಿಗೆ ಮನರಂಜನೆ ನೀಡುವ ಸಲುವಾಗಿ ಅವನನ್ನು ಅವತ್ತೇ ಬಲಿತೆಗೆದುಕೊಂಡು ಆಗಿತ್ತು. ಆದರೆ ಅವನಿಗೆ ‘ನಾಗರೀಕತೆ’ಯ ಹೆಸರಲ್ಲಿ ಆಕ್ಸಿಜನ್ ಕೊಟ್ಟು ಬದುಕಿಸಲಾಗಿತ್ತು. ಇಡೀ ಕನ್ನಡ ನಾಡಿನಲ್ಲಿ ಅವನೊಬ್ಬ ಜೋಕರ್ ಆಗಿ ಕಾಣಿಸಿಕೊಳ್ಳತೊಡಗಿದ್ದ. ಮನರಂಜನೆಯ ವಸ್ತುವಾದ. ತನ್ನಪಾಡಿಗೆ ತಾನಿದ್ದ ಜೀವ ಅದು. ಅಲ್ಲಿದ್ದಿದ್ದರೇ ಹೇಗೋ ಬದುಕಿಕೊಳ್ಳುತ್ತಿದ್ದ. ಚಾಮರಾಜನಗರ ಜಿಲ್ಲೆಯ ದಟ್ಟ ಕಾನನದ ಪುಟ್ಟದೊಂದು ಹಾಡಿಯಲ್ಲಿದ್ದ ಅವನನ್ನು ನಾಗರಿಕ ಜಗತ್ತಿಗೆ ತಂದು ಬಿಟ್ಟಾಗಲೂ ಅವನ ಬೇಕು ಬೇಡಗಳೇನು ಎಂಬುದು ನಮಗ್ಯಾರಿಗೂ ಅರ್ಥವಾಗಲೇ ಇಲ್ಲ! ನಮ್ಮ ಕಣ್ಣಿಗೆ ಹುಚ್ಚನಂತೆ ಕಾಣುತ್ತಿದ್ದ ಆತ ಕೊನೆಗೂ ತನ್ನ ಬದುಕನ್ನು ಅಂತ್ಯಗೊಳಿಸಿಕೊಂಡಿದ್ದಾನೆ. ಅಲ್ಲ ನಾವೇ ಎಲ್ಲ ಸೇರಿ ಕೊಂದು ಹಾಕಿದ್ದೇವೆ…

ಪಶ್ಚಿಮ ಘಟ್ಟ ಸೇರಿದಂತೆ ರಾಜ್ಯ ಮಾತ್ರವಲ್ಲ ಬಹುತೇಕ ಅರಣ್ಯದೊಳಗಿನ ಆದಿವಾಸಿಗಳು, ಗಿರಿಜನರ ಪಾಡು ಇದೇನೆ. ಅವರಿಗೆ ಇಂದಿನ ನಾಗರೀಕ ಜಗತ್ತಿನೆಡೆಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಬದುಕು ಅವರಿಗೆ ಬಂದೀಖಾನೆ. ಸ್ವಚ್ಚಂದವಾಗಿ ಪ್ರಾಣಿ ಪಕ್ಷಿಗಳ ಜತೆಗೆ ತಮ್ಮನ್ನೂ ತೊಡಗಿಸಿಕೊಂಡು ಯಾವ ಜೀವಿಗೂ ಹಾನಿ ಮಾಡದಂತೆ ಬದುಕುವ ಜನ ಅವರು. ಆದರೆ ಸರ್ಕಾರಗಳು, ಕೆಲವು ಮಾಧ್ಯಮಗಳು ಅವರಿಗೆ ನಾಗರಿಕತೆಯ ಸ್ಪರ್ಶದ ಸೆಳವು ನೀಡಲು ಹೋಗುತ್ತಾರೆ. ಆ ಮೂಲಕ ಅವರನ್ನು, ಅವರ ಬದುಕನ್ನ ಕಿತ್ತುಕೊಳ್ಳಲು ಹವಣಿಸುತ್ತಾರೆ.
ನಾಗರೀಕತೆ ಹೆಚ್ಚಾದಂತೆ ಸಮಾಜ ರಾತ್ರೋರಾತ್ರಿ ಉದ್ಧಾರವಾಗಿಬಿಡುತ್ತೆ ಎನ್ನುವ ಭ್ರಮೆ ನಮ್ಮಲ್ಲಿ ಇನ್ನೂ ದೂರವಾಗಲೇ ಇಲ್ಲ. ಮನುಷ್ಯನಿಗೆ ನೆಮ್ಮದಿಯಿಂದ ಬದುಕಲು ಬೇಕಿರುವುದು ತುತ್ತುಕೂಳು, ಹಿಡಿ ನೀರು. ತಲೆ ಮೇಲೊಂದು ಸೂರು ಅಷ್ಟೇ. ಆದರೆ ನಾಗರಿಕತೆ ಹೆಚ್ಚಾದಂತೆ ದುರಾಸೆ, ದುರಾಚಾರ, ಅನೈತಿಕತೆ, ಅಪ್ರಾಮಾಣಿಕತೆಗಳು ಹೆಚ್ಚಾಗುತ್ತಲೇ ಇವೆ. ಕೆಲವರು ಮಾಧ್ಯಮಗಳ ಹೆಚ್ಚಾಗಿದ್ದರಿಂದ ಅವು ಬೆಳಕಿಗೆ ಬರುತ್ತಿವೆ. ಮೊದಲೂ ಕೂಡ ಇದ್ದವು ಎನ್ನುತ್ತಾರೆ. ಅದು ಶುದ್ಧ ಸುಳ್ಳು. ಹಿಂದೂ ಇತ್ತು ನಿಜ. ಆದರೆ ಇಂದು ಅವುಗಳ ಪ್ರಮಾಣ ಮಾತ್ರ ಎಲ್ಲೆ ಮೀರಿ ಹೋಗುತ್ತಿದೆ.
ಶೆಟ್ಟಿ ಹಳ್ಳಿ ಅಭಯಾರಣ್ಯ, ಶಿವಮೊಗ್ಗ, ಚಿಕ್ಕಮಗಳೂರು, ಸಕಲೇಶಪುರ, ಉಡುಪಿ ಹಾಗೂ ಮಂಗಳೂರಿನ ಕೆಲ ಭಾಗದಲ್ಲಿ ರಾಷ್ಟ್ರೀಯ ಉದ್ಯಾನ, ಕುದುರೆಮುಖ ಉದ್ಯಾನ ನಿರ್ಮಾಣದ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆದೇ ಇತ್ತು. ಇನ್ನೂ ಅದು ನಡೆಯುತ್ತಲೇ ಇದೆ. ಆದರೆ ಹಾಗೊಂದು ವೇಳೆ ಅವರನ್ನು ಒಕ್ಕಲೆಬ್ಬಿಸಿದರೆ ಆ ಎಲ್ಲ ಕುಟುಂಬಗಳ ಸ್ಥಿತಿ ರಾಜೇಶ ಎಂಬ ‘ಜಂಗ್ಲಿ ಜಾಕಿ’ಯ ಕಥೆಗಿಂತ ಭಿನ್ನವೇನೂ ಆಗುವುದಿಲ್ಲ. ಹಾಗಾದಾಗ ಅದೆಷ್ಟೋ ಕಥೆಗಳು ಬೆಳಕಿಗೆ ಬರುವುದೂ ಇಲ್ಲ. ಯಾಕೆಂದರೆ ಅವರು ಯಾರು ಸೆಲೆಬ್ರಿಟಿಗಳಾಗಿರುವುದಿಲ್ಲ!
ಇವತ್ತು ರಾಜ್ಯದ ರೈತರ ಸ್ಥಿತಿ ಕೂಡ ಅದೇ ಆಗಿದೆ. ಬಹಳಷ್ಟು ರೈತರನ್ನು ಅಭಿವೃದ್ಧಿಯ ಹೆಸರಿನಲ್ಲಿ, ಇಲ್ಲವೇ ರಿಯಲ್ ಎಸ್ಟೇಟ್ ಗೆ ಜಾಗ ಬೇಕಿರುವ ಕಾರಣಕ್ಕೆ ಹಣ ಮತ್ತಿತರ ಆಮಿಷಗಳನ್ನು ಒಡ್ಡಿ ರೈತರನ್ನು ಒಕ್ಕಲೆಬ್ಬಿಸುತ್ತಾರೆ. ಆನಂತರ ಐಶಾರಾಮಿ ಜೀವನದ ಸೋಗಿಗೆ ಬಿದ್ದು ಅಂಥ ಸಾವಿರಾರು ಕುಟುಂಬಗಳು ತಮ್ಮ ಹಾಗೂ ತಮ್ಮ ಕುಟುಂಬವನ್ನು ಅಂತ್ಯಗೊಳಿಸಿಕೊಂಡಿವೆ. ಇದು ನಮ್ಮ ನಾಗರೀಕತೆಗೆ ಬೇಕಾ? ರಾಜೇಶನಂತ ಅಮಾಯಕರು ನಾಗರಿಕ ಪ್ರಪಂಚಕ್ಕೆ ಬಂದು ಯಾವ ತಪ್ಪೂ ಮಾಡದೆ ಬೀದಿ ಹೆಣವಾಗಬೇಕಾ? ಇದು ಮನುಷ್ಯರಾಗಿ ನಾವು ಮಾಡುವ ಕೆಲಸವಾ? ಇಂಥ ಬಹುತೇಕ ಪ್ರಶ್ನೆಗಳಿಗೆ ಉತ್ತರವನ್ನು ನಾವೇ ನಮ್ಮೊಳಗೆ ಕಂಡುಕೊಳ್ಳಬೇಕಿದೆ.






Usha avaru ettiru prashnegalu arthpoorna.mugdhateyannu kapadi nagarika soulabhyagalannu kalpisuva margagalannu shodhisuva agatyavide.
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಉಶಾರವರೆ. ಇದು ಅತ್ಯ೦ತ ಕ್ರೂರವಾದ “ಪರಿವರ್ತನಾ ನಾಗರೀಕತೆ”
Heegina adunika vikrutha anaithika dharidra nagareekathe kelave dasakadhalli koneganuva shadeythe noorakke nooru sathya huliyuva sadyathe hiruvudu prakruthi jothe baluva saral mugdha bhudakattina jananga dinda mathra charitreyalli Halavaru nagarikathegalu vikrutha belavanigehinnd hantya kandive
vikrutha samajakke amayaka bali idu durantave sari…