ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗ ನಾನು ನಿನ್ನ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದೆ..

ಎಲ್ಲರಿಗೂ ಅವಳೇ ಬೇಕು!

ಚಿತ್ರಾ ಸಂತೋಷ್ 

“ಹೆಣ್ಣುಮಕ್ಕಳ ಪಡೆಯಲೂ ಪುಣ್ಯ ಮಾಡಿರ್ಬೇಕು” ನನ್ನ ಪಕ್ಕದಲ್ಲೇ ಕುಳಿತಿದ್ದ ತಾತ ಖುಷಿಯಿಂದ ಉಸುರಿದಾಗ ನಾನು ಖುಷಿ, ಹೆಮ್ಮೆಯ ಬುಗ್ಗೆಯಾಗಿದ್ದೆ. ಮನಸ್ಸು ಮತ್ತೆ ಮತ್ತೆ ಮರುಹುಟ್ಟನ್ನೂ ಬಯಸಿತ್ತು.

ಅಂದು ನಡುಮಧ್ಯಾಹ್ನ ಬಸ್ ಹತ್ತಿದಾಗ ಲೇಡಿಸ್ ಸೀಟಿನಲ್ಲೂ ಸೀನಿಯರ್ ಸಿಟಿಜನ್ಸ್ ಕುಳಿತಿದ್ದರು. ಖಾಲಿ ಇದ್ದ ಒಂದು ಸೀಟಿನಲ್ಲಿ ಆ ಎಂಬತ್ತರ ಹರೆಯದ ಯುವಕ ಕುಳಿತಿದ್ದ. ಗಟ್ಟಿಮುಟ್ಟು ದೇಹ, ವೀಳ್ಯ ಜಗಿದು ಬಾಯಿ ಕೆಂಪಾಗಿದ್ದರೂ ಮುಖದಲ್ಲಿ ಮುಖವಾಡ ಇರಲಿಲ್ಲ. ಆತನ ಪಕ್ಕ ಕುಳಿತ ನಾನು “ಯಾವೂರಿಂದ ಬಂದೆ ತಾತ?’ ಎಂದು ಕೇಳಿದೆ.

kid“ಮಂಡ್ಯದಿಂದ ಕಣವ್ವಾ. ಜಾಬ್ ಗೆ ಹೋಗ್ತೀಯಾ’

“ಹೌದು..ಪತ್ರಿಕೆ ಆಫೀಸು, ಅಲ್ಲಿ ರಿಪೋರ್ಟ್ ಮಾಡೋ ಕೆಲಸ’ ಎಂದೆ.

“ಅಂದ್ರೆ ಟೀವಿಲಿ ಎಲ್ಲಾ ಬರುತ್ತಾರಲ್ಲಾ…ಹಂಗ?’

“ಟೀವಿಲಿ ರಿಪೋರ್ಟ್ ಮಾಡೋರನ್ನು ನೋಡಕ್ಕಾಗುತ್ತೆ. ಪತ್ರಿಕೆಯಲ್ಲಿ ರಿಪೋರ್ಟ್ ಮಾಡ್ಕೊಂಡು ಬರೆದು ಕೊಡಬೇಕು. ನಾವು ಟೀವಿಲಿ ಕಾಣೊಲ್ಲ’

“ಓಹೋ ಹಾಗೇ..’ ಎಂದು ನಕ್ಕ ತಾತ ” ಮಕ್ಕಳೆಷ್ಟವ್ವಾ ನಿಂಗೆ?’ ಎಂದ

“ಒಂದೇ ಹೆಣ್ಣುಮಗು’..ಇನ್ನೂ ಎರಡು ವರ್ಷ ಆಗಿಲ್ಲ..”

“ತುಂಬಾ ಪುಣ್ಯ ಮಾಡಿದ್ದೆ ಕಣವ್ವಾ, ಹೆಣ್ಣುಮಕ್ಕಳು ಹುಟ್ಟಬೇಕಾದ್ರೆ ಹಣೇಲಿ ಬರ್ದಿರಬೇಕು. ಮನೆಯಲ್ಲಿ ಹೆಣ್ಣುಮಕ್ಕಳಿರಬೇಕು. ನಂಗೂ ಮೂರು ಹೆಣ್ಣುಗಳಿವೆ…’ ಎಂದು ತಾತ ಹೆಮ್ಮೆ, ಉತ್ಸಾಹದಿಂದ ಕಣ್ಣು ಅಗಲಿಸಿ ಹೇಳಿಕೊಂಡ.

ಮನಸ್ಸಲಿ ಖುಷಿಯ ಸರೆಗಮಪ. ನೆನಪುಗಳು ಮತ್ತೆ ಮಾತಿಗಿಳಿದವು.

ಮೂರು ದಶಕದ ಹಿಂದಿನ ಮಾತು. ಅಮ್ಮ ಆಗಾಗ ಹೇಳುತ್ತಿದ್ದಳು “ನೀನು ಹುಟ್ಟಿದಾಗ ನಿನ್ನಪ್ಪ ಮಗುನೇ ಬೇಡ ಅಂದಿದ್ದ….ಪೊದೆಗೆ ಬಿಸಾಕಿಬಿಡೋಣ ಎಂದು ಗಲಾಟೆ ಮಾಡಿದ್ದ. ಆಗ ನಾನು ನಿನ್ನ ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದೆ..”

**********

ದಿನಗಳು ಸರಿದಿದ್ದೇ ಗೊತ್ತಾಗಲಿಲ್ಲ, ಮುಟ್ಟು ನಿಂತ ಆ ದಿನ ಡಾಕ್ಟರ್ ಹತ್ರ ಹೋಗಿಬಂದ ಮೇಲೆ ದೇವರ ಕೋಣೆಗೆ ಹೋಗಿ “ದೇವರೇ, ನಮಗೆ ಹೆಣ್ಣುಮಗುನೇ ಹುಟ್ಟಲಿ. ನನಗೆ ಹೆಣ್ಣು ಮಗು ಹುಟ್ಟಿದೆ ಎಂದು ನನ್ನ ಮನೆ ಮಂದಿಗೆ, ಕಲೀಗ್ಸ್ ಗೆ…ಫ್ರೆಂಡ್ಸ್ ಗೆ ಎಲ್ಲರಿಗೂ ಹೆಮ್ಮೆಯಿಂದ ಹೇಳುವ ಅಪೂರ್ವ ಕ್ಷಣ ನನ್ನದಾಗಬೇಕು” ಎಂದು ಕಣ್ಣೀರಿಟ್ಟಿದ್ದೆ.

ದಿನ, ತಿಂಗಳುಗಳು ಸರಿದಂತೆ, ನನ್ನ ಹೊಟ್ಟೆಯೊಳಗೆ ಆಗಾಗ ಕೀಟಲೆ ಮಾಡುತ್ತಿದ್ದ ಅನುಭವ, ಕೈ ಕಾಲಿನಿಂದ ಒದ್ದಂತ ಖುಷಿಯ ಕ್ಷಣ.ವಿಪರೀತ ಓಡಾಟ. ಆಗೆಲ್ಲಾ ಅಜ್ಜಿ ಹೇಳುತ್ತಿದ್ದ ಮಾತು ನೆನಪಾಗುತ್ತಿತ್ತು “ಹೊಟ್ಟೆಯಲ್ಲಿ ಮಗು ತೀರಾ ಕೀಟಲೆ ಮಾಡುತ್ತಿದ್ರೆ ಅದು ಹೆಣ್ಣುಮಗು, ಸುಮ್ಮನಿರುತ್ತಿದ್ರೆ ಅದು ಗಂಡು ಮಗು’ ಎಂದು. ಅಜ್ಜಿಯ ಮಾತು ನನ್ನನ್ನು ಆಗಾಗ ಪುಳಕಗೊಳಿಸುತ್ತಿತ್ತು.

ಅಂದು 2014ರ ಆಗಸ್ಟ್ 30. ಡಾಕ್ಟ್ರುಹೊಟ್ಟೆ ಸೀಳಿ  “ಪುಟ್ಟ ಚಿತ್ರಾ…” ಎಂದು ಕಿವಿಯಲ್ಲಿ ಪಿಸುಗುಟ್ಟಿದಾಗ ನನಗೆ ಮಾತುಗಳು ಮೌನವಾಗಿದ್ದವು, ಕಣ್ಣುಗಳದ್ದಷ್ಟೇ ಮಾತು. ಅಮ್ಮಂಗೆ ಫೋನ್ ಮಾಡಿ ಹೇಳಿದಾಗ “ಪುಣ್ಯ ಮಾಡಿದ್ದೆ …” ಎಂದು ಹೆಮ್ಮೆಪಟ್ಟಿದ್ದಳು.

**********

ಇಂದು ಜಗತ್ತು ಬದಲಾಗಿದೆ. ಅಪ್ಪ-ಅಮ್ಮ, ಸಮಾಜ, ಅಜ್ಜ-ಅಜ್ಜಿ, ಅವರು-ಇವರು ಎಲ್ಲರೂ ಬದಲಾಗಿದ್ದಾರೆ. ಎಲ್ಲರಿಗೂ ಅವಳೇ ಬೇಕು. ಮನೆತುಂಬಾ ಪುಟ್ಟಿಯ ಕಾಲ್ಗೆಜ್ಜೆ, ಬಳೆಯ ಸಪ್ಪಳ ಕೇಳಬೇಕು, ಅವಳಿಗೆ ಜಡೆ ಕಟ್ಟಬೇಕು, ಹೂವ ಮುಡಿಸಬೇಕು. ಬಣ್ಣ-ಬಣ್ಣದ ಡ್ರೆಸ್ ಹಾಕಿಸಬೇಕು. ಎಲ್ಲರ ಮನೆ-ಮನಗಳಿಗೂ ಅವಳೇ ಬೇಕು.

‍ಲೇಖಕರು Admin

21 June, 2016

7 Comments

  1. ಶ್ವೇತಾ ಹೊಸಬಾಳೆ

    “ದೇವರೇ, ನಮಗೆ ಹೆಣ್ಣುಮಗುನೇ ಹುಟ್ಟಲಿ. ನನಗೆ ಹೆಣ್ಣು ಮಗು ಹುಟ್ಟಿದೆ ಎಂದು ನನ್ನ ಮನೆ ಮಂದಿಗೆ, ಕಲೀಗ್ಸ್ ಗೆ…ಫ್ರೆಂಡ್ಸ್ ಗೆ ಎಲ್ಲರಿಗೂ ಹೆಮ್ಮೆಯಿಂದ ಹೇಳುವ ಅಪೂರ್ವ ಕ್ಷಣ ನನ್ನದಾಗಬೇಕು” ಎಂದು ಕಣ್ಣೀರಿಟ್ಟಿದ್ದೆ” ವಾವ್ಹ್….ಎಷ್ಟೊಳ್ಳೆ ಮಾತು… ಎಲ್ಲರಿಗೂ ಹೆಣ್ಣುಮಗುವನ್ನು ಪಡೆಯುವ ಅದೃಷ್ಟ ಇರೋದಿಲ್ಲ 🙁 ಪಡೆದವರು ನಿಜವಾಗಿಯೂ ಧನ್ಯರು….

    • Anonymous

      Chennagide 🙂

  2. Anonymous

    Akka, Super.

  3. Sangeeta Kalmane

    ಎಂಟು ಮೊಮ್ಮಕ್ಕಳೂ ಗಂಡು,ನನ್ನ ಮಗಳು ಒಂಬತ್ತನೇ ಹೆಣ್ಣು. ಆಗ ಮಾವನವರದು ಇದೇ ಮಾತು ಮನಸೆಲ್ಲ ಖುಷಿ. ನೆನಪಿಸಿದಿರಿ ಅನನ್ಯ ಕ್ಷಣ. Thanks.

  4. Chitra Santhosh

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.
    -ಚಿತ್ರಾ

  5. ರಾದ

    ಹೆಣ್ಣು ಮಗುವೊಂದೇ ಅಲ್ಲ. ಬಾಳಿನಲ್ಲಿ ಎಲ್ಲಾ ಹಂತಗಳಲ್ಲೂ ಹೆಣ್ಣಿ ಪಾತ್ರ ಬಲು ದೊಡ್ಡದು. ಹೆಣ್ಣು ಸಹನಾ ಮೂರ್ತಿ ಎಂದು ಕೇಳಿದ್ದೆ. ನನ್ನ ತಾಯಿ ಮತ್ತು ನನ್ನ ಮಡದಿಯ ಸಹನೆಯ ಲಹರಿಯನ್ನು ನೋಡಿದಾಗ, ಇದು ಭ್ರಮೆಯೋ ಅಥವಾ ವಾಸ್ತವವೋ ಎಂಬ ಪ್ರಶ್ನೆ ಮೂಡುತ್ತೆ.
    ಇವರಿಬ್ಬರ ಜೊತೆ ನಮ್ಮ ಎಂಟು ತಿಂಗಳ ಮಗಳನ್ನು ನೋಡಿದಾಗ ಸಂತೋಷದ ಹನಿಗಳು ಕಾಣ್ಣಾಲೆಗಳ ಅಂಚಿನಲ್ಲಿ ಹರಿದಾಡುತ್ತವೆ.

  6. Pratibha hegde

    Very nice touched my feelings

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading