ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗಾಗ, ಹಸಿವಾದಾಗ ಭಯವಾಗುತ್ತದೆ…

ಇಲ್ಲಿ ಭಿಕ್ಷಾ ಪಾತ್ರೆಗೂ ರಕ್ತ ಬೀಳುತ್ತದೆ….

11885078_510840242403980_272876200319480127_n

ನಾಗರಾಜ್ ಹೆತ್ತೂರ್

111
ಪಂಜರದಲ್ಲಿ ತುಂಬಿ
ಹಸಿಯುಸಿರ ಹೊಗೆಯಾಡಿಸುವ
ಸಿರಿಯಾದಲ್ಲಿನ  ಐಸಿಸ್ ಉಗ್ರರು
ಪೇಷಾವರದ ಕಂದಮ್ಮಗಳ ಸಾವಿನ ಉರಿಗೆ
ತಾಲಿಬಾನಿಗಳ ಕೇಕೆ , ಲಿಬಿಯಾದ ಅಸ್ಥಿರತೆ
ಸುಡಾನ್ ನ ಭೀಕರತೆ
ನಾನು ಇಲ್ಲೇ ಎಲ್ಲೋ ಕಣ್ಣು ಬಿಟ್ಟು ನೋಡುತ್ತಿದ್ದೇನೆ
ನೋಟ ಹುಸಿ ನುಡಿಯಲೆಂದು ಕಾಯುತ್ತಿದ್ದೇನೆ
 
ತಲೆ ಮೇಲೆ ಹಾರಿದ ಗುಬ್ಬಚ್ಚಿಯ ಚಿಂವ್ ಚಿಂವ್
ತನ್ನ ಸಂತಾನದ ಅವನತಿಯದ್ದೋ
ಜೀವ ಜಗವ ದಿಕ್ಕರಿಸುವ ಕೂಗೋ
ಯಾವುದರ ಸೂಚನೆ ಗೊತ್ತಿಲ್ಲ
ನನಗೇನೂ ಅನ್ನಿಸುತ್ತಿಲ್ಲವಲ್ಲ….?
 
ನಿಂತ ನೆಲ ನೇಪಾಳದಲ್ಲಿ ಕುಸಿದರೂ
ಮರಗಟ್ಟದ ನನ್ನ ಪಾದ
ಮುಂಗಾರು ಮೈ ಬಿಚ್ಚದಿದ್ದರೇನು
ರೈತನ ಕಣ್ಣೀರು ನನಗಿಲ್ಲಿ ಮಾಮೂಲು
ಏನ ಸೃಜಿಸಬೇಕು ನಾನಿಲ್ಲಿ . ಅಷ್ಟಕ್ಕೂ ಯಾರಿಗಾಗಿ..?
ಉಳಿಸು ಧೈವವೇ ಬೇಡಿಕೊಳ್ಳ ಬಂದರೆ
ಬಾಗಿಲ ಜಡಿದು ಕೈ ಮುರಿಯುತ್ತೀರಿ
 
ಸತ್ಯದ ಚೆಲುವು
ಬಾಹುಬಲಿಯ ಭವ್ಯ ನಿಲುವ ಅಳೆದು
ನಿಮ್ಮೆದುರಿಡುವ ಹುಚ್ಚು ನನ್ನ ಹುಟ್ಟಿಗಿಲ್ಲ
ನಿಮಗೆ ಗೊತ್ತಾಗಲಿ
ನಾನು ನನ್ನನ್ನೇ ನುಂಗಿಕೊಳ್ಳುವ ಅಸಮ ಹಿಂದೂ ಭಾರತೀಯ
 
ಕಲಬುರ್ಗಿಯವರ ಹಣೆ ಕೊರೆದ
ಅಂಧತೆಯ ಗುಂಡುಗಳು ಎದೆಯ ಅಣಕಿಸುತ್ತಿವೆ
ಮಾಡಲು ಏನಿದೆಯಿಲ್ಲಿ
ಧರ್ಮಗಳು ಉಳಿಯಲು ರಕ್ತ ಬೇಕು ಅಷ್ಟೆ
ಹೌದಲ್ಲವೇ….. ಹೌದು
ಜಾತಿ ಮತಗಳು  ಬದುಕಲು
ಜೀವಗಳನ್ನು ಬಲಿ ಪಡೆಯುತ್ತಿರುವಾಗ
ನಾನು ಇಲ್ಲೇ ಎಲ್ಲೋ ನಿಮ್ಮಂತೆ
ಯಥಾ ಜೀವಂತವಾಗಿದ್ದೇನೆ ಸರದಿಯಲ್ಲಿ
 
ನಾನೆಂದರೆ
ಅದೇ ನಿಮಗೆ ಗೊತ್ತಲ್ಲ
ನಿಮ್ಮ ನಡುವೆ ಉಸಿರು ತಾಕಿಸದಂತೆ
ನಡೆದಾಡುತ್ತಿರುವ ಅಸ್ಪಷ್ಟ ಮಾನವರೂಪಿ
ಆಗಾಗ, ಹಸಿವಾದಾಗ ಭಯವಾಗುತ್ತದೆ
ಇಲ್ಲೇನಾದರೂ ಬೇಡಿದರೆ
ಭಿಕ್ಷಾ ಪಾತ್ರೆಗೂ ಜಾತಿ-ಧರ್ಮದ ರಕ್ತವೇ ಬಿಳುತ್ತದೆ…

‍ಲೇಖಕರು G

28 September, 2015

1 Comment

  1. archith.kg

    Fine.touchable

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading