‘ಆಗಸಕ್ಕೆ ಲಗ್ಗೆ ಹಾಕಿದವರು’

ಪ್ರಸಾದ್ ನಾಯ್ಕ್

ಬದುಕಿನಲ್ಲಿ ಬಹಳ ತಡವಾಗಿ ಸೈಕಲ್ ಕಲಿಯುವಾಗ, ತಾನು ಮುಂದೊಮ್ಮೆ ಇತಿಹಾಸ ನಿರ್ಮಿಸಲಿದ್ದೇನೆ ಎಂಬ ಸುಳಿವು ಬಹುಷಃ ಸರಳಾ ದತ್ ಎಂಬ ಹೆಸರಿನ ಆ ಹೆಣ್ಣುಮಗಳಿಗೆ ಇರಲಿಲ್ಲ. ಒಂದು ಪಕ್ಷ ಇದ್ದರೂ, ತನ್ನ ಸಾಧನೆಯು ಭಾರತದ ಬಹಳಷ್ಟು ಹೆಣ್ಣುಮಕ್ಕಳಿಗೆ ದೊಡ್ಡ ಕನಸು ಕಾಣಲೊಂದು ಪ್ರೇರಣೆ ನೀಡಬಹುದು ಎಂಬ ಚಿಕ್ಕ ಕಲ್ಪನೆಯಂತೂ ಖಂಡಿತ ಬಂದಿರಲಿಕ್ಕಿಲ್ಲ. 

1914 ರಲ್ಲಿ ಜನಿಸಿದ್ದ ಸರಳಾ ಶರ್ಮಾರಿಗೆ ವಿವಾಹವಾಗುವಾಗ 16 ರ ವಯಸ್ಸು. ಗಂಡ ಕ್ಯಾಪ್ಟನ್ ಪ್ರಭು ದತ್. ಏವಿಯೇಷನ್ ಇಂಡಸ್ಟ್ರಿಯಲ್ಲೇ ಇರುವ ಅತ್ಯುತ್ತಮ ಪೈಲಟ್ ಗಳಲ್ಲೊಬ್ಬರು ಎಂದು ಆ ಕಾಲದಲ್ಲಿ ಖ್ಯಾತಿಯನ್ನು ಗಳಿಸಿದ್ದವರು. ಇನ್ನು ಪ್ರಭು ದತ್ ರವರ ತಂದೆ ಸಿವಿಲ್ ಎಂಜಿನಿಯರ್ ಆಗಿದ್ದವರು. ಸರಳಾ ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಒತ್ತಾಸೆ ಗಂಡ ಮತ್ತು ಮಾವನದ್ದು. ಸರಳಾ ಕೂಡ ಪೈಲಟ್ ಆಗಬಹುದು ಎಂಬ ಯೋಚನೆಯೊಂದು ಇವರಲ್ಲಿ ಮೊಳಕೆಯೊಡೆದಿದ್ದು ಇದೇ ಅವಧಿಯಲ್ಲಿರಬಹುದು. ಈ ನಿಟ್ಟಿನಲ್ಲಿ ಪ್ರಭು ದತ್ ತನ್ನ ಪತ್ನಿಯ ತರಬೇತಿಯನ್ನು ಆರಂಭಿಸಿದ್ದು ಸೈಕಲ್ಲಿನೊಂದಿಗೆ. ಮೊದಲು ಅವಳು ಸೈಕಲ್ ಕಲಿಯಲಿ, ನಂತರದ್ದು ಮುಂದೆ ನೋಡೋಣ ಎಂದಿದ್ದರು ದತ್ ಸಾಹೇಬ್ರು. 

ಸರಳಾ ಈ ನೆಪದಲ್ಲಿ ಸೈಕಲ್ ಕಲಿತರು. ಸೈಕಲ್ ಪರವಾಗಿಲ್ಲ ಅನಿಸಿತು. ಪತಿಯಿಂದಾಗಿ ಕಾರು ಓಡಿಸುವುದನ್ನೂ ಕಲಿತರು. ಹೆಣ್ಣಾದರೇನಂತೆ? ಕಲಿಕೆಯೆನ್ನುವುದು ರಾಕೆಟ್ ಸೈನ್ಸ್ ಅಲ್ಲ ಎಂಬುದು ಅವರಿಗೀಗ ಖಾತ್ರಿಯಾಯಿತು. ಮುಂದೆ ಪ್ರಭು ದತ್ ಸರಳಾರನ್ನು ನಿಧಾನವಾಗಿ ವಿಮಾನಗಳ ಲೋಕಕ್ಕೂ ಪರಿಚಯಿಸಿದರು. ಈ ಹಂತದಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಶ್ರದ್ಧೆ, ಉತ್ಸಾಹಗಳೆಲ್ಲವೂ ಸರಳಾರಲ್ಲಿ ಗಟ್ಟಿಯಾಗಿ ಬೇರೂರಿದ್ದವು. ಸರಳಾ ವಿಮಾನದ ಕಾಕ್ ಪಿಟ್ ನಲ್ಲೂ ಸೈ ಎನಿಸಿಕೊಂಡರು. ಎಲ್ಲರ ನಿರೀಕ್ಷೆಗಳನ್ನು ಮೀರಿ, ಸತತ ತರಬೇತಿ-ಪರೀಕ್ಷೆಗಳನ್ನು ಜಯಿಸಿ ಲೈಸೆನ್ಸನ್ನೂ ಗಿಟ್ಟಿಸಿಕೊಂಡರು. 1935 ರಲ್ಲಿ ಭಾರತದ ಮೊದಲ ಮಹಿಳಾ ಪೈಲಟ್ ಎಂಬ ಅಪರೂಪದ ಮೈಲುಗಲ್ಲೊಂದನ್ನು ನೆಟ್ಟಾಗ ಸರಳಾರಿಗೆ ಕೇವಲ ಇಪ್ಪತ್ತೊಂದರ ವಯಸ್ಸು. ಮರುವರ್ಷವೇ ಕಮರ್ಷಿಯಲ್ ಪೈಲಟ್ ಗಳಿಗೆ ನೀಡಲಾಗುವ “ಎ-ಲೈಸೆನ್ಸ್” ಸರಳಾರವರ ಕೈಯಲ್ಲಿ ಭದ್ರವಾಗಿ ಕೂತಿತ್ತು. 

1939 ರಲ್ಲಿ ಸರಳಾರಿಗೊಂದು ಆಘಾತ ಕಾದಿತ್ತು. ಒಂದೇ ದಿನ ನಡೆದ, ಎರಡು ಪ್ರತ್ಯೇಕ ವಿಮಾನ ದುರ್ಘಟನೆಗಳಲ್ಲಿ ಸರಳಾರ ಪತಿ ಮತ್ತು ಮೈದುನ ಇಬ್ಬರೂ ನಿಗೂಢವಾಗಿ ದುರ್ಮರಣಕ್ಕೀಡಾಗಿದ್ದರು. ಇಪ್ಪತ್ತೈದನೇ ವಯಸ್ಸಿಗೇನೇ ವೈಧವ್ಯ! ಹಾಗಂತ ಬದುಕು ನಿಲ್ಲುವುದಿಲ್ಲವಲ್ಲ. ಹಾರಾಟ ಅವರನ್ನೀಗ ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಆ ದೊಡ್ಡ ಕನಸನ್ನೇ ಬೆನ್ನಟ್ಟಿ ಲಾಹೋರ್, ಜೋಧ್ ಪುರ್, ದಿಲ್ಲಿ ಎಂದು ಸರಳಾ ದತ್ ಹಲವೆಡೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದರು. ಆಗಸಕ್ಕೆ ಲಗ್ಗೆ ಹಾಕುವ ತನ್ನ ಕನಸನ್ನು ಜೀವಂತವಾಗಿಟ್ಟರು. ಮುಂದೆ ರಾಜಸ್ಥಾನದ ಅಲ್ವರ್ ನ ಮಹಾರಾಣಿಯವರ ಕಡೆಯಿಂದ ಪೈಲಟ್ ಹುದ್ದೆಗಾಗಿ ಜಾಹೀರಾತೊಂದು ಹೊರಬಿದ್ದಾಗ ಅದಕ್ಕೆ ಅರ್ಜಿ ಹಾಕಿ, ಆಯ್ಕೆಯೂ ಆದರು. ಸರಳಾ ಠುಕ್ರಾಲ್ ಅಲ್ವರ್ ನ ಬೀದಿಗಳಲ್ಲಿ ಓಡಾಡುತ್ತಿದ್ದರೆ “ಅಲ್ನೋಡಿ… ಲೇಡಿ ಪೈಲಟ್ ಬರುತ್ತಿದ್ದಾರೆ”, ಎಂದು ಜನರೆಲ್ಲ ಗುಂಪುಗಟ್ಟಿ ಕುತೂಹಲದಿಂದ ನೋಡುತ್ತಿದ್ದರಂತೆ.

ಅಲ್ವರ್ ಮಹಾರಾಣಿಯವರ ತಂಡಕ್ಕೆ ಇಷ್ಟಪಟ್ಟು ಸೇರಿದ್ದರೂ ಸರಳಾರಿಗೆ ಅಲ್ಲಿ ಹೆಚ್ಚು ಕಾಲ ಮುಂದುವರಿಯಲಾಗಲಿಲ್ಲ. ಮಹಾರಾಣಿಯವರು ವಿಮಾನಗಳ ಮೇಂಟೆನೆನ್ಸ್ ವ್ಯವಸ್ಥಿತವಾಗಿ ಮಾಡಿಸುತ್ತಿರಲಿಲ್ಲ ಎಂಬ ಬೇಸರದೊಂದಿಗೆ, ಕೆಲ ತಿಂಗಳುಗಳ ನಂತರ ಆ ಉದ್ಯೋಗಕ್ಕೆ ಮುಲಾಜಿಲ್ಲದೆ ಗುಡ್ ಬೈ ಹೇಳಿದರು. ತದನಂತರ ಸರಳಾ ಹೊರಳಿದ್ದು ಮತ್ತೊಮ್ಮೆ ಕಲಿಕೆಯತ್ತ. ಅವರು ತನ್ನಿಷ್ಟದ ಕಲಾವಿಭಾಗದಲ್ಲಿ ಹೆಚ್ಚಿನ ಅಧ್ಯಯನಕ್ಕೆಂದು ಸೇರಿಕೊಂಡರು. ಟೈಲರಿಂಗ್ ವೃತ್ತಿಯನ್ನು ಕೂಡ ನೆಚ್ಚಿಕೊಂಡರು. ಇದೇ ಅವಧಿಯಲ್ಲಿ ತನಗಿಂತ ನಾಲ್ಕು ವರ್ಷ ಚಿಕ್ಕವರಾಗಿದ್ದ ಆರ್. ಪಿ. ಠುಕ್ರಾಲ್ ರೊಂದಿಗೆ 1948 ರಲ್ಲಿ ಎರಡನೇ ವಿವಾಹವನ್ನೂ ಮಾಡಿಕೊಂಡರು. 

ವೈಮಾನಿಕ ಹಾರಾಟದಲ್ಲಾಗುವಂತೆ ಬದುಕಿನಲ್ಲೂ ರೋಚಕ ತಿರುವುಗಳು ಅವರ ಪಾಲಿಗೆ ಮುಗಿದಿರಲಿಲ್ಲ. ದುರಾದೃಷ್ಟವಶಾತ್ ಕೆಲ ವರ್ಷಗಳ ನಂತರ ಠುಕ್ರಾಲ್ ಹೃದಯಾಘಾತದಿಂದ ತೀರಿಕೊಂಡರು. ಸರಳಾ ಮತ್ತೊಮ್ಮೆ ಒಬ್ಬಂಟಿಯಾಗಿದ್ದರು. ಈ ಸಾವು ಅವರಿಗೆ ತಂದ ಆಘಾತ ಅಷ್ಟಿಷ್ಟಲ್ಲ. ಮುಂದೆ ಸರಳಾ ಠುಕ್ರಾಲ್ ತನ್ನ ಬದುಕನ್ನು ಸಂಪೂರ್ಣವಾಗಿ ತನ್ನಿಷ್ಟದ ಅಭಿರುಚಿಯಾದ ಕಲೆಗೆ ಮುಡಿಪಾಗಿಟ್ಟರು. ಟೈಲರಿಂಗ್ ಹೇಗೂ ಗೊತ್ತಿತ್ತಲ್ಲ! ಕಾಸ್ಟ್ಯೂಮ್ ಜ್ಯುವೆಲ್ಲರಿಯಲ್ಲಿ ಕೈಯಾಡಿಸಿದರು. ಹ್ಯಾಂಡ್ ಪ್ರಿಂಟೆಡ್ ಸೀರೆಗಳನ್ನೂ ವಿನ್ಯಾಸಗೊಳಿಸಿ ಅದರಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ದಿಲ್ಲಿಯಲ್ಲಿರುವ ಹಲವು ಕಾಟೇಜ್ ಉದ್ಯಮಗಳಿಗೆ ಸರಳಾರಿಂದ ಸ್ವತಃ ವಿನ್ಯಾಸಗೊಳಿಸಲ್ಪಟ್ಟ ಸೀರೆಗಳು ಸರಬರಾಜಾಗುತ್ತಿದ್ದವು. 

ಈ ಬಾರಿ ದಿಲ್ಲಿಯ ವಿಶ್ವ ಪುಸ್ತಕ ಮೇಳದಲ್ಲಿ ಲೇಖಕಿ ಮನೀಷಾ ಪುರಿಯವರು ನನಗೆ ಸಿಕ್ಕಾಗ ಸರಳಾರೊಂದಿಗಿನ ಅವರ ಭೇಟಿಯನ್ನು ಆಪ್ತವಾಗಿ ನೆನಪಿಸಿಕೊಂಡರು. 2008 ರಲ್ಲಿ ಸರಳಾರವರು ತೀರಿಕೊಂಡಾಗ ಅವರಿಗೆ ತೊಂಭತ್ತಮೂರು ವರ್ಷ ವಯಸ್ಸಾಗಿತ್ತು. “ತಾನು ಯಾವತ್ತೂ ರಿಟೈರ್ ಆಗುವ ಪ್ರಶ್ನೆಯೇ ಇಲ್ಲ”, ಎನ್ನುತ್ತಿದ್ದರಂತೆ ಗಟ್ಟಿಗಿತ್ತಿ ಸರಳಾ ಠುಕ್ರಾಲ್. ತೊಂಭತ್ತಮೂರರ ಇಳಿವಯಸ್ಸಿನಲ್ಲೂ ಅವರು ಮಧ್ಯಾಹ್ನದ ಊಟದ ನಂತರ ಮಲಗುತ್ತಿರಲಿಲ್ಲ ಮತ್ತು ಮನೆಕೆಲಸಗಳಿಗಾಗಿ ಯಾವುದೇ ಆಳುಗಳನ್ನು ಅವಲಂಬಿಸಿಕೊಂಡಿರಲಿಲ್ಲ ಎಂದು ಸರಳಾರ ಬಗ್ಗೆ “From Saree to Stripes” ಕೃತಿಯಲ್ಲಿ ಮನೀಷಾ ಪುರಿಯವರು ಬರೆದುಕೊಂಡಿದ್ದಾರೆ. “ಸರಳಾ ಠುಕ್ರಾಲ್ ತಾನು ಈವರೆಗೆ ಭೇಟಿ ಮಾಡಿರುವ ಅತ್ಯಂತ ಜೀವಂತಿಕೆಯ ವ್ಯಕ್ತಿಗಳಲ್ಲೊಬ್ಬರು”, ಎಂದು ಮನೀಷಾ ಪುರಿಯವರು ನನ್ನ ಬಳಿ ಹೇಳಿದಾಗ ಅವರ ಮಾತಿನಲ್ಲಿ ಉತ್ಪ್ರೇಕ್ಷೆಯಿರಲಿಲ್ಲ. ಸ್ವತಃ ಹೋರಾಟದ ಬದುಕನ್ನು ಸವೆಸಿರುವ ಮನೀಷಾ ಪುರಿಯವರು ಬರೋಬ್ಬರಿ ಎರಡು ದಶಕಗಳ ಕಾಲ ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿರುವುದಲ್ಲದೆ, ಈ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿರುವ ಅಷ್ಟೂ ಮಹಿಳಾ ಪೈಲಟ್ ಗಳ ಬಗ್ಗೆ ಅದ್ಭುತವಾದ ಪುಸ್ತಕವೊಂದನ್ನೂ ಬರೆದಿದ್ದಾರೆ. 

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಸಂಸ್ಕøತಿ-ಸಂಪ್ರದಾಯಗಳೆಂಬ ನೂರೆಂಟು ಅಡ್ಡಗೋಡೆಗಳನ್ನು ಕಟ್ಟಿ, ಮಹಿಳೆಯರನ್ನು ಮನೆಯ ಪ್ರಪಂಚಕ್ಕೆ ಸೀಮಿತಗೊಳಿಸಿದ್ದ 1935 ರ ಕಾಲಘಟ್ಟದಲ್ಲಿ ಸರಳಾ ದತ್ ಪೈಲಟ್ ಆಗಿ ರೂಪುಗೊಂಡಿದ್ದು ಯಾವ ಕ್ರಾಂತಿಗೂ ಕಮ್ಮಿಯಲ್ಲ. ಆ ಕಾಲದಲ್ಲಿ ಸರಳಾ ದತ್ ಸೀರೆಯ ದಿರಿಸಿನಲ್ಲೇ ವಿಮಾನ ಹತ್ತುತ್ತಿದ್ದರು. ಆಗಿನ ಕಾಲದ ವಿಮಾನಗಳಲ್ಲಿ ತೆರೆದ ಕಾಕ್-ಪಿಟ್ ಗಳು ಇದ್ದಿದ್ದರಿಂದ ತಲೆಗೆ ಹೆಡ್ ಸೆಟ್ ಗಳನ್ನು ಧರಿಸಿ, ಸಂವಹನವನ್ನು ನಿರ್ವಹಿಸಬೇಕಿತ್ತು. ಭೂಮಿಯಿಂದ ಅಷ್ಟು ಎತ್ತರದಲ್ಲಿ, ವಿಮಾನದ ಆ ರಾಕ್ಷಸವೇಗದಲ್ಲಿ, ಗಾಳಿಯ ರಭಸವನ್ನು ಸಂಭಾಳಿಸುತ್ತಾ ವಿಮಾನವನ್ನು ನಿಯಂತ್ರಿಸುವುದು ಹುಡುಗಾಟದ ಮಾತಾಗಿರಲಿಲ್ಲ. ಆಗೆಲ್ಲ ನಲವತ್ತು-ಐವತ್ತು ಪ್ರಯಾಣಗಳ ಅನುಭವದ ನಂತರವಷ್ಟೇ ಪೈಲಟ್ ಗಳಿಗೆ ಏಕಾಂಗಿಯಾಗಿ ವಿಮಾನಗಳನ್ನು ಚಲಾಯಿಸುವ ಅವಕಾಶ ನೀಡಲಾಗುತ್ತಿತ್ತಂತೆ. ಅಂಥಾ ಕಠಿಣ ತರಬೇತಿಯ ದಿನಗಳಲ್ಲೂ ಕೇವಲ ಹತ್ತು ಚಿಲ್ಲರೆ ಪ್ರಯಾಣಗಳ ಅನುಭವದೊಂದಿಗೆ ಸರಳಾ ದತ್ ಏಕಾಂಗಿಯಾಗಿ ವಿಮಾನವನ್ನು ತನ್ನ ನಿಯಂತ್ರಣಕ್ಕೆ ಒಗ್ಗಿಸಿಕೊಂಡಿದ್ದರು ಎಂದರೆ ವೈಮಾನಿಕ ಹಾರಾಟದಲ್ಲಿ ಅವರಿಗಿದ್ದ ಅಸಾಮಾನ್ಯ ಪರಿಣತಿಯನ್ನು ನಾವು ಊಹಿಸಿಕೊಳ್ಳಬಹುದು. 

ಮನೀಷಾ ಪುರಿಯವರ “From Saree to Stripes” ಪುಸ್ತಕವು ಈ ದೇಶ ಕಂಡಿರುವ ಇಂತಹ ಅಸಾಮಾನ್ಯ ಮಹಿಳಾ ಪೈಲಟ್ ಗಳ ಸತ್ಯಕತೆಗಳನ್ನೊಂಡ ಅಪರೂಪದ ಕೃತಿ. ಈ ಕತೆಗಳನ್ನೋದುತ್ತಾ ಹೋದರೆ ನೂರಾರು ಅಡೆತಡೆಗಳಿದ್ದರೂ ಪೈಲಟ್ ಆಗುವ ಕನಸನ್ನು ಕಂಡಿದ್ದ ಮತ್ತು ಭಗೀರಥ ಪ್ರಯತ್ನಗಳಿಂದ ಆ ದೈತ್ಯ ಕನಸನ್ನು ಸಾಕಾರಗೊಳಿಸಿಕೊಂಡಿರುವ ಈ ದೇಶದ ಕೆಲ ಹೆಣ್ಣುಮಕ್ಕಳು ಪಟ್ಟಿರುವ ಪಾಡು ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ಬಹಳಷ್ಟು ಮಂದಿ ತಾವು ವಿಮಾನಗಳಲ್ಲಿ ಪ್ರಯಾಣಿಸುವಾಗ ಕ್ಯಾಬಿನ್ ಕ್ರ್ಯೂಗಳು ಶಿಸ್ತಿನಿಂದ ಮಾಡುವ ಅನೌನ್ಸ್ ಮೆಂಟ್ ಗಳತ್ತ ಗಮನ ಹರಿಸುವುದಿಲ್ಲ. ಹಲವು ಬಾರಿ ನಮ್ಮನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿರುವ ಪೈಲಟ್ ಯಾರೆಂಬುದೂ ನಮಗೆ ಗೊತ್ತಿರುವುದಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೇನೆಂದರೆ ಮಹಿಳೆಯರು ಈ ಕ್ಷೇತ್ರಕ್ಕೆ ದಾಪುಗಾಲಿಕ್ಕಿ ಐವತ್ತಕ್ಕೂ ಹೆಚ್ಚು ವರ್ಷಗಳು ಕಳೆದಾಗಿವೆ. ಕ್ಯಾಪ್ಟನ್ ಮನೀಷಾ ಪುರಿಯವರನ್ನು ಭೇಟಿಯಾದ ನಂತರವೇ ನನಗೂ ಇಂತಹ ಅಪರೂಪದ ಸಂಗತಿಗಳು ದಕ್ಕಿದ್ದು.   

ಮನೀಷಾ ಪುರಿಯವರು ಇಲ್ಲಿ ದಾಖಲಿಸಿರುವ ಈ ಮಹಿಳೆಯರ ಬದುಕಿನ ಪಯಣಗಳು ಯಾವ ರೀತಿಯಲ್ಲೂ ಸುಲಭದ್ದಲ್ಲ. ಈ ಧೀರ ಮಹಿಳೆಯರಿಗೆ ಹಲವು ಬಾರಿ ತಮ್ಮ ಕುಟುಂಬಗಳಿಂದಲೇ ಹಿನ್ನಡೆಯಾಗಿದೆ. ಇದು ನಿನ್ನಿಂದಾಗುವುದಿಲ್ಲ ಬಿಡು ಎಂದು ಸಮಾಜ ಮೂದಲಿಸಿದೆ. ಕಠಿಣ ತರಬೇತಿ ಪಡೆದು ಉತ್ತೀರ್ಣರಾದ ನಂತರವೂ ಪ್ರತಿಷ್ಠಿತ ಏರ್ ಲೈನ್ಸ್ ಸಂಸ್ಥೆಗಳು ಉದ್ಯೋಗವನ್ನು ನೀಡದೆ ಇವರನ್ನು ವರ್ಷಗಟ್ಟಲೆ ಸತಾಯಿಸಿವೆ. ನಾಳೆ ಬನ್ನಿ, ನಾಡಿದ್ದು ನೋಡೋಣ ಅಂತೆಲ್ಲ ಕತೆ ಹೇಳಿವೆ. 

ಅಷ್ಟಿದ್ದರೂ ಈ ಮಹಿಳೆಯರು ತಮ್ಮ ಕನಸುಗಳನ್ನು ಜೋಪಾನವಾಗಿ ಕಾಪಿಟ್ಟುಕೊಂಡಿದ್ದಾರೆ. ಏರ್ ಲೈನ್ಸ್ ಸಂಸ್ಥೆಗಳ ವಿಭಾಗ ಮುಖ್ಯಸ್ಥರಿಂದ ಹಿಡಿದು, ಪ್ರಧಾನಮಂತ್ರಿಗಳವರೆಗೂ ಪತ್ರಗಳನ್ನು ಬರೆದಿದ್ದಾರೆ. ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ನಮಗೇನು ಸಾಮಥ್ರ್ಯವಿಲ್ಲವೇ ಎಂದು ದಿಟ್ಟವಾಗಿ, ಲಿಖಿತರೂಪದಲ್ಲಿ ಕೇಂದ್ರ ಸರಕಾರಿ ಮಂತ್ರಾಲಯಗಳನ್ನು ಪ್ರಶ್ನಿಸಿದ್ದಾರೆ. ತಮ್ಮ ನಿರಂತರ ಪ್ರಯತ್ನಗಳಿಂದ ಅವರಿಂದ ಉತ್ತರ ಬರೆಸುವಲ್ಲೂ ಯಶಸ್ವಿಯಾಗಿದ್ದಾರೆ. ಬ್ಯಾಚಿನಲ್ಲಿರುವ ಅಷ್ಟೂ ಪುರುಷ ಪೈಲಟ್ ಅಭ್ಯರ್ಥಿಗಳೆದುರು ನನ್ನ ಸಾಮಥ್ರ್ಯವನ್ನು ತುಲನೆ ಮಾಡಿದ ನಂತರವಷ್ಟೇ ತೀರ್ಪು ಕೊಡಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ. ಈ ಅಪರೂಪದ ಪತ್ರಗಳು ಇವರೆಲ್ಲರ ಹೋರಾಟದ ಹಾದಿಯ ಐತಿಹಾಸಿಕ ದಾಖಲೆಗಳಾಗಿ ಉಳಿಯಲಿವೆ. ಇಂದು ನಮ್ಮ ಪೀಳಿಗೆಯ ಹೆಣ್ಣುಮಕ್ಕಳು ಕಾಕ್-ಪಿಟ್ ನಲ್ಲಿ ಪೈಲಟ್ ಗಳಾಗಿ ಕೂತಿದ್ದಾರೆ ಎಂದಾದಲ್ಲಿ, ಅದು ಸರಳಾ ಠುಕ್ರಾಲ್ ಸೇರಿದಂತೆ ಇವಿಷ್ಟೂ ಧೀರ ಮಹಿಳೆಯರ ಅಸಾಮಾನ್ಯ ಪ್ರಯತ್ನಗಳ ಫಲವೇ ಸರಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. 

ಕಮರ್ಷಿಯಲ್ ಪೈಲಟ್ ಗಳ ಬದುಕು ಮತ್ತು ಸವಾಲುಗಳು ನನ್ನಂಥವರಿಗೆ ಹೊಸದು. ಓರ್ವ ಪೈಲಟ್ ಚಿಕ್ಕದೊಂದು ತಪ್ಪು ಮಾಡಿದರೂ ನೂರಾರು ಮಂದಿ ಪ್ರಯಾಣಿಕರ ಪ್ರಾಣಕ್ಕೆ ಆಪತ್ತು ತಪ್ಪಿದ್ದಲ್ಲ. ಸಂಕಷ್ಟದ ಸಂದರ್ಭಗಳಲ್ಲಂತೂ ಮಿಲಿ ಸೆಕೆಂಡುಗಳ ಅಂತರದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯರೂಪಕ್ಕಿಳಿಸಬೇಕು. ತಪ್ಪು ಚಿಕ್ಕದಾದರೂ, ತನ್ನದಲ್ಲದ ಬಾಬತ್ತಾದರೂ ತನಿಖೆಗಳು ಬೆನ್ನುಬೀಳುವುದು ಖಚಿತ. ಇಂತಹ ಪ್ರಸಂಗಗಳು ವ್ಯಕ್ತಿಯೊಬ್ಬನ ವೃತ್ತಿಬದುಕನ್ನೇ ಶಾಶ್ವತವಾಗಿ ಮುಗಿಸುವಷ್ಟು ಅಪಾಯಕಾರಿ ಕೂಡ. ಇಂತಹ ಅಪರೂಪದ ಔದ್ಯೋಗಿಕ ವಲಯಗಳತ್ತಲೂ ಇಷ್ಟಪಟ್ಟು ಸಾಗುವ ಮತ್ತು ತಮ್ಮ ಕ್ಷೇತ್ರದಲ್ಲಿ ಬೆಸ್ಟ್ ಅನ್ನಿಸಿಕೊಳ್ಳುವ ಇಂತಹ ಮಹನೀಯರಿಂದ ನಾವು ಕಲಿಯುವುದು ಸಾಕಷ್ಟಿದೆ. 

ಅಂದಹಾಗೆ ನನ್ನ ದೀರ್ಘಕಾಲದ ಸಹೋದ್ಯೋಗಿಯೊಬ್ಬರ ಮಗಳು ಪೈಲಟ್ ಆಗಲು ಹೊರಟಿದ್ದಾಳೆ. ಸದ್ಯ ಪ್ರತಿಷ್ಠಿತ ಅಕಾಡೆಮಿಯೊಂದರಲ್ಲಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಕ್ಯಾಪ್ಟನ್ ಪುರಿಯವರ ಪುಸ್ತಕವನ್ನು ಅವರಿಗೂ ಪರಿಚಯಿಸಿ, ನಿಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿ ಎಂದು ಅವರಲ್ಲಿ ಹೇಳಿಕೊಂಡೆ. ಮಗಳು ದಿಲ್ಲಿಗೆ ಬಂದ ನಂತರ ನಿಮ್ಮನ್ನು ಸಂಪರ್ಕಿಸಿ, ಪುರಿಯವರ ಬಳಿ ಮಾತಾಡಿಸುತ್ತೇನೆ ಎಂದರವರು. ಇತ್ತ ಮನೀಷಾ ಪುರಿಯವರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಾ, ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಾ ಕನಸುಗಳನ್ನು ಬಿತ್ತುತ್ತಲೇ ಇದ್ದಾರೆ. 

ಈ ಬಾರಿಯ ಮಹಿಳಾ ದಿನಾಚರಣೆಯನ್ನು ಸಾರ್ಥಕವಾಗಿಸಲು ನಿಸ್ಸಂದೇಹವಾಗಿ ಸರಳಾ ಠುಕ್ರಾಲ್ ಗಿಂತ ಉತ್ತಮ ವ್ಯಕ್ತಿ ಬೇರೊಬ್ಬರಿಲ್ಲ ಎಂದನಿಸಿತು.

‍ಲೇಖಕರು Admin

March 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: