ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕೆ ಈ ಗಳಿಗೆ ಹೇಳುತ್ತಿದ್ದಳು: ಮೊದಲು ಮ್ಯಾಕ್ ಬೆತ್, ಆಮೇಲೇ ಎಲ್ಲವೂ..

kanakaraju

ಕನಕರಾಜ್ ಆರನಕಟ್ಟೆ

Fair is Foul, Foul is Fair

 

ಅಜ್ಜಿ ಸತ್ತು ಇವತ್ತಿಗೆ ಹದಿನಾರು ದಿನ

ತುತ್ತ ನೀಡಿದ್ದ, ದುಡ್ಡು ಕೊಟ್ಟು ನನ್ನ ಓದಿಸಿದ್ದ

ನೆನೆಯಲೇ?

ladderನೋಡುವವರ ಕಣ್ಣಿಗೆ ಜಗಳಗಂಟಿಯಂತೆ ಕಂಡದ್ದ

ಇಲ್ಲಿ ಬರೆಯಲೇ?

ಅಥವ ತನಗಿಂತ ತನ್ನ ಕುಟುಂಬ, ತನ್ನ ಬಂಧು ಬಳಗವೇ ಮುಖ್ಯ

ಎಂದು ಆಕೆ ಬದುಕಿದ್ದ ಹೇಳಲೇ?

ಗೊತ್ತಾಗುತ್ತಿಲ್ಲ… ಯಾಕೆಂದರೆ

ಜಗತ್ತು ಬಯಸುವ ಹೆಣ್ಣಾಗಿರಲಿಲ್ಲ ಆಕೆ:

ಮಧುರೈಯುರಿಸಿದ ಕಣ್ಣಗಿ ಅವಳ

ಕಣ್ಣೊಳಗೆ ಗೂಡು ಕಟ್ಟಿ ಎರಡು

ಕಪ್ಪು ಮೊಟ್ಟೆಗಳ ಇಟ್ಟಿದ್ದಳೇನೊ!

ಸದಾ ಚಡಪಡಿಸುವ ಕಣ್ಣಗುಡ್ಡೆಗಳು.

ಯಾರಿಗೂ, ಯಾವುದಕ್ಕೂ ಅಂಜದವಳು

ಮನಸ್ಸಿಗೆ ಬಂದದ್ದ ಪಟ್ಟನೆ ಹೇಳುವವಳು

ತನ್ನ ನೋವಿಗಿಂತಲೂ ಹಸುಎಮ್ಮೆಗಳ ಕೂಗಿಗೆ ಓಡುವವಳು;

ಹೊತ್ತು ಹುಟ್ಟುವ ಮುಂಚೆಯೇ ಎದ್ದು ಮೈಗೆ ನೀರ ಹಾಕಿಕೊಂಡು

ತುಳಸಿ ಕಟ್ಟೆಯ ಸುತ್ತದೆ ಎಂದೂ ನೀರ ಕುಡಿಯದವಳು;

ತಿರುವಾಸಗಂ, ತಿರುಪ್ಪಾವೈ ಎರಡೂ ಆಕೆಯ

ಬಾಯಲ್ಲಿ ಬಸವಳಿದಿದ್ದವು; ಕತ್ತಲಿಗಂಟುವ ಬಾವಲಿಯಾಗಿ

ಸೈತಾನ್ ಗೂ ಸೆಡ್ಡು ಹೊಡೆದು ನನ್ನ ಬಾಲ್ಯವ ಬೆಚ್ಚಿಸಿದ್ದಳು.

ತನ್ನ ತಂದೆಯ ಜಮೀನ್ದಾರಿ ನಡೆಯ ಒಳಗೆಳೆದುಕೊಂಡು

ಯಾರೊ “ಉಳುವವನೆ ಒಡೆಯ” ಎಂದಾಗ

ಜೆ.ಪಿ ಹಿಂಬಾಲಕರಾದ ತನ್ನ ಗಂಡನ ಮನೆಯವರಿಗೆ ಪಾಠ ಹೇಳಿ

ನೂರು ಎಕೆರೆಯ ಹತ್ತಿಪ್ಪತ್ತು ಎಂದು ಒಡೆದು ಮಕ್ಕಳ ಹೆಸರಿಗೆ ಬರೆಸಿ

ಕೊಂಕು ಬೀರಿದವಳು;

ಉತ್ತು ಬಿತ್ತಿದವರ ದೂರ ಇಟ್ಟಿದ್ದರೂ

ಅತ್ತು ಕರೆದು ತುತ್ತ ನೀಡಿದವಳು,

ಮುಟ್ಟದಿದ್ದರೂ ಅವರ ಕಷ್ಟಗಳಿಗೆ ತುಡಿದು ಚೆಗುವಾರನನ್ನು ನನ್ನೊಳಗೆ ಬಿತ್ತಿದವಳು:

ಆಕೆ ಸತ್ತು ಮಲಗಿರುವಾಗ ನಾ ಓಯಸಿಸ್ ಊರಲ್ಲಿ ಪಾಠ ಮಾಡುತ್ತಿದ್ದೆ

ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ಒಳಗೆ ಇಳಿಯಲೂ ಆಗದೆ ಹೊರಗೆ

ಹೋಗಲೂ ಆಗದೆ ಚಡಪಡಿಸುತ್ತಿದ್ದ; ಅಡಗಿ ಕೂತಿದ್ದ ವಿಚಸ್ ಚಂಗನೆ ಎಗರಿ ಕಣ್ಮುಂದೆ ಬಂದರು, ಅಜ್ಜಿಯ ನೆನಪಿಸಿ ಕಿಲಕಿಲ ನಕ್ಕರು

– ಸತ್ತ ನಂತರವೂ ಮಾತಾಡುವಂತಿದ್ದಿದ್ದರೆ

ಆಕೆ ಈ ಗಳಿಗೆ ಹೇಳುತ್ತಿದ್ದಳು:

ಮೊದಲು ಮ್ಯಾಕ್ ಬೆತ್, ಆಮೇಲೇ ಎಲ್ಲವೂ.

‍ಲೇಖಕರು admin

11 December, 2015

1 Comment

  1. ಮುಗಿಯದ ಮೌನ- GKN

    ಅಜ್ಜಿಯೊಳಗಿನ ಮ್ಯಾಕ್ ಬೆತ್, ಬಾಳ ಚೆನ್ನಾಗಿ ಮೂಡಿ ಬಂದಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading