ಅಶೋಕ ಹೊಸಮನಿ ಕಾರಟಗಿ
—
ಮೈ ಮುರಿದಿಹ ಹೊತ್ತಲ್ಲಿ
ಮುಟ್ಟಿನ ದಿನಗಳು ಮಾತಾಗುತ್ತವೆ
ತಲೆತೂರಿಸುವ ಕನಸುಗಳ ನಡುವೆ
ಮೌನದ ಶಿಖರವೇರುತ್ತವೆ
ಮೈ ಮುರಿದಿಹ ಹೊತ್ತಲ್ಲಿ
ಉಸಿರುಗಟ್ಟಿಸೊ ಬರ್ಶನ್ ಕಟ್ಟೆಯ ಕಟ್ಟಳೆಗಳಲ್ಲಿ
ಫ್ರಿಡ್ಜಿನ ಹಾಳು ಹರಟೆಗಳಲ್ಲಿ
ತಾಜಾ ತರಕಾರಿ,ಸೊಪ್ಪು ಸದೆ
ಬಿರಿದಿಹ ಮೊಳಕೆಯಲ್ಲಿ
ತಣ್ಣನೆಯ ಕಾಫಿಯ ಘಮಲಿನಲ್ಲಿ
ಎಂಥದೋ ನೋವು ಎದೆಗಿಳಿಯುತ್ತದೆ
ಸದ್ದಿಲ್ಲದೇ ಸೆದಿಗಿಯ ಎದೆ ಬಿಗಿಯುತ್ತದೆ
ಮೈ ಮುರಿದಿಹ ಹೊತ್ತಲ್ಲಿ
ಜೋಡು ಜಡೆಗಳು
ಮಾತಿಗಿಳಿಯುತ್ತವೆ
ಮುನಿಸಿಕೊಳ್ಳುತ್ತವೆ
ಬೆರಳುಗಳ ಹೆಣಿಗೆಯಲ್ಲಿ
ಮಾತುಗಳು ಸುಡುತ್ತವೆ
ನೇಸರನ ಕಣ್ಣಾಲಿಗಳು ಒದ್ದೆಯಾಗುತ್ತವೆ

ಒಂಟಿ ಕೋಣೆಯ ಕತ್ತಲೆ
ಬೆಳಕಿನ ಮಾತಿನಲ್ಲಿ
ತಳಮಳಗೊಳ್ಳುತ್ತದೆ
ಮೈ ಮುರಿದಿಹ ಹೊತ್ತಲ್ಲಿ
ಮುಟ್ಟಿನ ನೆತ್ತರ ಮೂಸಿ
ಭ್ರೂಣದ ಕಣ್ಣೋಟವ ಸೋಸಿ
ಹೆಪ್ಪುಗಟ್ಟಿದ ಕನಸುಗಳನ್ನೂ
ಎದೆಬ್ಯಾನಿಯನ್ನೂ ಚಿಮ್ಮುತ್ತಾಳೆ
ಮೈ ಮುರಿದಿಹ ಹೊತ್ತಲ್ಲಿ
ನಿರುಮ್ಮಳ ಕವಿತೆಗೆ ತಲೆದೂಗುತ್ತಾಳೆ
ನಿರಾಳ ದಿನಗಳಲ್ಲಿ ಪುಳಕಗೊಳ್ಳುತ್ತಾಳೆ
ಚುಚ್ಚಿಸಿಕೊಂಡ ಮುಳ್ಳುಗಳನ್ನೆಲ್ಲಾ
ಒಂದೊಂದೇ ಕೀಳುತ್ತಾಳೆ
ಮುಳ್ಳುಗಳಿಗಿಲ್ಲದ ಹೃದಯಗಳನ್ನೆಲ್ಲ ಎದೆಯಲ್ಲಿ ಚಿತ್ರಿಸಿಕೊಳ್ಳುತ್ತಾಳೆ
ಮತ್ತದೇ ಕರುಣೆಯ ಹೊದಿಕೆ ಹೊದ್ದುಕೊಂಡು
ಬೀದಿಗಿಳಿಯುತ್ತಾಳೆ
ಮುಟ್ಟಿನ ದೀಪ ಹಚ್ಚುತ್ತಾಳೆ
ಮುಟ್ಟಿನ ಅನ್ನ ಉಣ್ಣದವರ
ಮುಟ್ಟಿನ ಅನ್ನ ಉಣ್ಣುವವರ
ಮುಟ್ಟಿನ ಸೂತಕಕ್ಕೆ
ಹುಬ್ಬೇರಿಸಿದವರ
ನೆನೆಯುತ್ತಾ






0 Comments