ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : ನನ್ನ ಗೆಳೆಯ ಬಸು…

ದುಬಾರಿ ನಿರ್ದೆಶಕನಿಂದ ಪುಕ್ಕಟೆ ನಾಟಕ ನಿರ್ದೇಶಿಸಿಕೊಂಡದ್ದು

ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಸಿ.ಬಸವಲಿಂಗಯ್ಯ ನಿರ್ದೇಶಿಸಿದ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗ ರೂಪಾಂತರದ ಪ್ರಯೋಗಗಳ ಕುರಿತು ಅಲ್ಲಿಲ್ಲಿ ಪ್ರಕಟವಾದದ್ದನ್ನು ಓದುತ್ತಿದ್ದೇನೆ. ಬಹುಪಾಲು ಅಭಿಪ್ರಾಯಗಳು ಒಂದು ವಿನೂತನ ಅನುಭವದ ಕುರಿತ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ಜೊತೆಗೇ ಕೆಲವು ಭ್ರಮನಿರಸನ, ನಿರಾಶೆಗಳನ್ನು ಹಂಚಿಕೊಂಡ ವಿಮರ್ಶೆಗಳೂ ಇವೆ. ಆ ನಾಟಕದ ಪ್ರೊಡಕ್ಷನ್ ಗೆ ತಗುಲಿದ ದುಬಾರಿ ವೆಚ್ಚದಿಂದ ಹಿಡಿದು ಕಾದಂಬರಿ ಓದುವಾಗ ನಮ್ಮ ಮನಸಿನಲ್ಲಿ ನಾವು ಸನ್ನಿವೇಶ ಮತ್ತು ಪಾತ್ರಗಳನ್ನು ನಮ್ಮದೇ ಆದ ರೀತಿಯಲ್ಲಿ ಕಲ್ಪಿಸಿಕೊಂಡು ಪಟ್ಟ ಸುಖಾನುಭವ ಈ ನಾಟಕ ನೋಡಿದಾಗ ಆಗಲಿಲ್ಲವಲ್ಲ ಯಾಕೆ? ಎನ್ನುವ ವರೆಗೆ ಚಾಚಿಕೊಂಡಿವೆ ಅಭಿಪ್ರಾಯಗಳು.
ಆದರೆ ಕನ್ನಡದಲ್ಲಿ ಹಲವು ವಿಭಿನ್ನ ನೆಲೆಗಳಲ್ಲಿ, ಇಷ್ಟು ವಿವಿಧ ರೀತಿಯಲ್ಲಿ ಇಷ್ಟೊಂದು ಚರ್ಚೆಯಾದ ನಾಟಕ ಬಹುಶ: ಇದೇ ಇರಬೇಕು. ಕೊನೆಕೊನೆಗೆ ಧಾರಾಕಾರ ಮಳೆಯೂ ಸುರಿದು ಮದುಮಗಳು ಮಳೆಮಗಳಾಗಿ ನಾಟಕವನ್ನು ಮುಂದೂಡಿದರೂ “ನಾವು ಆಕೆಯನ್ನು ನೋಡುವವರೇ” ಎಂದು ಪ್ರೇಕ್ಷಕರು ಪಟ್ಟು ಹಿಡಿದು ಅಂತೂ MMM ಎಂಬ ಸಂಕ್ಷೇಪ ನಾಮವನ್ನು ಪಡೆದುಕೊಂಡ ನಾಟಕ ರಂಗಪ್ರೇಮಿಗಳನ್ನು ತಣಿಸಿ ಬೆಂಗಳೂರಿಗೆ ವಿದಾಯ ಹೇಳಿದೆ. ಇಲ್ಲಿ ಈ ನಾಟಕದ ಕುರಿತು ನಾನು ಏನೂ ಹೇಳಬಯಸುವದಿಲ್ಲ, ಏಕೆಂದರೆ ನಾನು ಆ ನಾಟಕ ನೋಡಿಲ್ಲ. ನಾನಿಲ್ಲಿ ಹೇಳಹೊರಟಿರುವದು ಅದರ ನಿರ್ದೇಶಕರ ಬಗ್ಗೆ.
ಸಿ.ಬಸವಲಿಂಗಯ್ಯ ( ನನಗೆ ಬರೆಯುತ್ತಿದ್ದ ಪತ್ರಗಳಲ್ಲಿ ತನ್ನನ್ನು ನಮೂದಿಸಿಕೊಂಡಂತೆ, ಬಸೂ) ದೇವನೂರರ “ಕುಸುಮಬಾಲೆ” ಕೃತಿಯ ರಂಗರೂಪವನ್ನು ಕೆಲ ವರ್ಷಗಳ ಹಿಂದೆ ಮೈಸೂರಿನಲ್ಲಿ ಮೊದಲಸಲ ಪ್ರಯೋಗಿಸಿದ ಸಂದರ್ಭದಲ್ಲಿ ನಾನು ಮೈಸೂರಿಗೆ ಬಂದು ಅದನ್ನು ವೀಕ್ಷಿಸಬೇಕೆಂದು ಪತ್ರ ಬರೆದು ಆಹ್ವಾನಿಸಿ ನನಗೆ ಎರಡು ಮೂರು ದಿನಾಂಕಗಳ ಆಯ್ಕೆಯನ್ನು ಕೊಟ್ಟಿದ್ದರು. ನನಗೆ ಹೋಗಲಾಗಲಿಲ್ಲ. ಆಮೇಲೂ ಹಲವು ಸಲ ಅದು ಅಲ್ಲಿ ಪ್ರದರ್ಶಿತವಾಯಿತು. ನಾನು ಮೈಸೂರಿಗೆ ಹೋದಾಗ ಆ ನಾಟಕ ಇರುತ್ತಿರಲಿಲ್ಲ, ಅದು ಇದ್ದಾಗ ನಾನು ಮೈಸೂರಿಗೆ ಹೋಗುವ ಪ್ರಸಂಗ ಬರಲಿಲ್ಲ.
ಆದರೆ ಹಿಂದೊಮ್ಮೆ, ಬಹುಶ: ಇಪ್ಪತ್ತೆಂಟು ವರ್ಷಗಳ ಹಿಂದೆ, ಬಸೂ ತಾನು ರಾಯಚೂರಿನ ಕಲಾವಿದರಿಗೆ ನಿರ್ದೇಶಿಸಿದ್ದ “ಕೆರೆಗೆ ಹಾರ” ನಾಟಕದ ಟಿವಿ ರೆಕಾರ್ಡಿಂಗ್ ಹೈದರಾಬಾದ್ ನಲ್ಲಿ ಇಂತಿಂಥ ದಿನಾಂಕದಂದು ಇದೆ ಎಂದೂ ನಾನು ಖುದ್ದು ಟಿವಿ ಸ್ಟುಡಿಯೋದಲ್ಲಿ ಇದ್ದು ಅದನ್ನು ನೋಡಬೇಕೆಂದೂ ಪತ್ರ ಬರೆದಾಗ ನಾನು ದೆಹಲಿಯಿಂದ ರಜೆಗೆಂದು ಬಂದವನು ಧಾರವಾಡದಿಂದ ಹೈದರಾಬಾದಿಗೆ ಹೋಗಿದ್ದೆ. ರಾಯಚೂರಿನಿಂದ ಬಸೂ, ಶ್ರೀಕಾಂತ್ ಕಕ್ಕೇರಿ ಮತ್ತು ಶರಣ್ ಮಾಲೀಪಾಟೀಲ್ ಮೊದಲೇ ಹೈದರಾಬಾದಿಗೆ ಬಂದು ಅಲ್ಲಿ ಮೊಕ್ಕಾಂ ಹೂಡಿದ್ದರು. ಆಗ ಹೈದರಾಬಾದ್ ದೂರದರ್ಶನದಲ್ಲಿ ಕನ್ನಡದವರೊಬ್ಬರು ಇದ್ದರು. ಅವರು “ಕೆರೆಗೆ ಹಾರ” ವನ್ನು ಪ್ರಸಾರ ಮಾಡಲು ನಿರ್ಧರಿಸಿದ್ದರು. ಎರಡು ದಿನ ಹೈದರಾಬಾದ್ ನಲ್ಲಿ ಮಜವಾಗಿ ಕಳೆದು ಮರಳಿದ್ದೆವು. ಆಮೇಲೆ ನಾನು ಬಹುಶ: ವಾಡಿಯಿಂದಲೋ ಗುಲ್ಬರ್ಗದಿಂದಲೋ ರೈಲೇರಿ ದಿಲ್ಲಿಗೆ ಹೋದ ನೆನಪು.
ಈ ಮಧ್ಯೆ ಬಸೂ ಜೊತೆ ನನ್ನ ಭೇಟಿ ವಿರಳವಾಗಿವೆ. ಸಾಮಾನ್ಯವಾಗಿ ನಾನು ಮೈಸೂರಿಗೆ ಮೀಟಿಂಗಿಗೆ ಅಥವಾ ಮೌಲ್ಯಮಾಪನಕ್ಕೆ ಹೋದಾಗೆಲ್ಲ ಹಂಪಿ, ಮಂಗಳೂರು ಇಲ್ಲವೇ ಬೆಂಗಳೂರಿನ ವಿಶ್ವವಿದ್ಯಾಲಯಗಳಿಂದ ನನ್ನ ಇತರ ಅಧ್ಯಾಪಕ ಮಿತ್ರರೂ ಅಲ್ಲಿ ಬಂದಿರುತ್ತಾರಾದ್ದರಿಂದ ನಮ್ಮ ಕೆಲಸ ಮತ್ತು ಇತರೇ ಚಟುವಟಿಕೆಗಳಲ್ಲಿ ಸಮಯ ಸರಿದು ಹೋಗಿ ಮೈಸೂರಿನಲ್ಲಿ ಯಾರನ್ನೂ ಭೇಟಿಯಾಗಲಾಗುವದೇ ಇಲ್ಲ. ಪ್ರಸಂಗವಶಾತ್ ಮೈಸೂರಿನಲ್ಲಿ ನಾನೊಬ್ಬನೇ ಇರುವಾಗ ನಾನು ಸಮಯ ಕಳೆಯಬಯಸುವದು ಮಾತ್ರ ಬಸೂ ಜೊತೆಗೇ. ಒಮ್ಮೆ ಯೂನಿವರ್ಸಿಟಿ ಗೆಸ್ಟ್ ಹೌಸ್ ನಲ್ಲಿ ವ್ಯವಸ್ಥೆಯಾಗದೇ ಹೋದಾಗ ಗಂಗೋತ್ರಿಗೆ ಸಮೀಪವಿದ್ದ YMCA ಹಾಸ್ಟೆಲ್ ನಲ್ಲಿದ್ದೆ. ಒಂದು ಫೋನ್ ಮಾಡಿದೆ, ಬಂದರು.ಲೋಬೋಸ್ ನಲ್ಲಿ ಕೂತು ಸಮಯ ಕಳೆದೆವು. ಇನ್ನೊಮ್ಮೆ ರಂಗಾಯಣದಲ್ಲಿ ಏನೋ ರಂಗಪ್ರಯೋಗವಿತ್ತು. ತಮ್ಮ ಸೆಕೆಂಡ್ ಹ್ಯಾಂಡ್ ಮಾರುತಿ ಕಾರಲ್ಲಿ ಕರೆದುಕೊಂಡು ಹೋಗಿ ತೋರಿಸಿದರು.

ಅವರೊಂದಿಗೆ ನನ್ನ ಪ್ರಥಮ ಭೇಟಿ ಯಾವಾಗ ಆಯಿತೆಂದು ನನಗೆ ಸರಿಯಾಗಿ ನೆನಪಿಲ್ಲ. ದಿಲ್ಲಿಯ ಸಪ್ರು ಹೌಸ್ ಬಳಿ ನಮ್ಮ ವಿಶ್ವವಿದ್ಯಾಲಯದ (ಜೆ ಎನ್ ಯು) ಒಂದು ಗೆಸ್ಟ್ ಹೌಸ್ ಇತ್ತು. ಬಹುಶ: ಅಲ್ಲಿ ನಮ್ಮ ಭೇಟಿ ಆಯ್ತೆಂದು ನೆನಪು. ಅವರು ಆ ವರ್ಷ ಎನ್.ಎಸ್.ಡಿಯಲ್ಲಿ ಪ್ರವೇಶ ಪಡೆದಿದ್ದರು, ನಾನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವ್ಯಾಸಂಗಕ್ಕೆ ಸೇರಿದ್ದೆ. ಆ ಪರಿಚಯ ಆಮೇಲೆ ಸ್ನೇಹವಾಗಿ ಗಟ್ಟಿಗೊಳ್ಳುತ್ತಲೇ ಹೋಯಿತು. ಸಾಮಾನ್ಯವಾಗಿ ಭಾನುವಾರಗಳಲ್ಲಿ ಅಥವಾ ಯವುದಾದರೂ ನಾಟಕ ಎನ್ ಎಸ್ ಡಿ ಯಲ್ಲಿ ಅಥವಾ ಅದರ ಹತ್ತಿರದಲ್ಲೇ ಇರುವ ಶ್ರೀರಾಂ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ನಲ್ಲಿ ಇದ್ದ ದಿನಗಳಲ್ಲಿ ನಾನು ರಾಷ್ಟ್ರೀಯ ನಾಟಕ ಶಾಲೆಯ (ಎನ್.ಎಸ್.ಡಿ) ಮೆಸ್ ನಲ್ಲಿ ಊಟ ಮಾಡಿ ಅವರ ರೂಮ್ ನಲ್ಲೇ ಇದ್ದು ರಾತ್ರಿ ಕಳೆಯುತ್ತಿದ್ದೆ. ಇನ್ನೊಂದು ಭಾನುವಾರ ಅವರು ನಮ್ಮ ವಿಶ್ವವಿದ್ಯಾಲಯಕ್ಕೆ ಬಂದು ನಾನಿದ್ದ ಬ್ರಹ್ಮಪುತ್ರಾ ಹಾಸ್ಟೆಲ್ ನಲ್ಲಿ ನನ್ನ ಅತಿಥಿಯಾಗಿ ಒಂದು ದಿನ ಇರುತ್ತಿದ್ದರು.
ಇದು ನಾನು ಮತ್ತು ಬಸೂ ಜೊತೆಯಾಗಿ ದೆಹಲಿಯಲ್ಲಿದ್ದ ವರ್ಷಗಳುದ್ದಕ್ಕೂ ಇಟ್ಟುಕೊಂಡ ಪರಿಪಾಠವಾಗಿತ್ತು. ನಮ್ಮ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್ ನ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಪ್ರು ಹೌಸ್ ನಲ್ಲಿರುವ ಲೈಬ್ರರಿಗೆ ಹೋಗುತ್ತಿದ್ದರಾದ್ದರಿಂದ ನಮ್ಮ ವಿಶ್ವವಿದ್ಯಾಲಯದ ಒಂದು ಬಸ್ ನಿಯಮಿತವಾಗಿ ಅಲ್ಲಿಗೆ ಹೋಗಿ ಬಂದು ಮಾಡುತ್ತಿತ್ತು. ಸಪ್ರು ಹೌಸ್ ಎನ್.ಎಸ್.ಡಿ ಗೆ ಸಮೀಪವಿದ್ದುದರಿಂದ ನಮಗೆ ಅದು ಬರಲು ಹೋಗಲು ಅನುಕೂಲವಾಗಿತ್ತು.
ಎನ್.ಎಸ್.ಡಿ ಹಲವು ಚಟುವಟಿಕೆಗಳಿಂದ ಕೂಡಿದ ಸಂಸ್ಥೆ. ಆಗ ಪ್ರಸನ್ನ ಅವರೂ ಯಾವುದೋ ಅಸೈನಮೆಂಟ್ ಮೇಲೆ ಅಲ್ಲೇ ಇದ್ದರು.ಎಸ್.ಮಾಲತಿ, ರಘುನಂದನ್ ಅಲ್ಲಿ ವಿದ್ಯಾರ್ಥಿಗಳಾಗಿದ್ದರು. ಅವರಿಗೆ ಬಸೂ ಸ್ವಲ್ಪ ಜೂನಿಯರ್, ಆಮೇಲೆ ಸುರೇಶ್ ಆನಗಳ್ಳಿ, ಜನಾರ್ದನ (ಜೆನ್ನಿ) ಬಂದರು. ರಘುನಂದನ್ ದಿ ಟೆಂಪೆಸ್ಟ್ ಆಧರಿತ ತೂಫಾನ್ ಎಂಬ ಹಿಂದಿ ನಾಟಕ ನಿರ್ದೇಶಿಸಿದ್ದರು, ಬಸೂ ಆದಮ್ ಖೋರ್ ಎಂಬ ನಾಟಕವನ್ನು ನಿರ್ದೆಶಿಸಿದ್ದರು. ಇನ್ನ್ಯಾರೋ ಲೂ ಶೂನ್ ನ The True story of Ah Q ಆಧಾರಿತ ಹಿಂದಿ ನಾಟಕ ರೂಪಾಂತರ “ಚಂದ್ರಮಾಸಿಂಗ್ ಉರ್ಫ್ ಚಂಕು” ನಿರ್ದೇಶಿಸಿದ್ದರು. ಫ್ರಿಜ್ ಬೆನೆವಿಜ್ ಕೆಲ ಕಾಲ ಅಲ್ಲೇ ಇದ್ದು ಉಪನ್ಯಾಸಗಳನ್ನು ಕೊಟ್ಟಿದ್ದರು, ಒಂದು ನಾಟಕವನ್ನೂ ನಿರ್ದೇಶಿಸಿದ್ದರು. ಪ್ರಸನ್ನ “ಮಾಯಾಬಜಾರ್” ಎಂಬ ನಾಟಕವನ್ನು ನಿರ್ದೇಶಿಸಿದ್ದರು. ರಾಷ್ಟ್ರೀಯ ನಾಟಕೋತ್ಸವದಲ್ಲಿ ಕರ್ನಾಟಕದ ಎಂಟ್ರಿಯಾಗಿ ಪ್ರಸನ್ನರ “ದಂಗೆಯ ಮುಂಚಿನ ದಿನಗಳು” ಬೆಂಗಳೂರಿನಿಂದ ಬಂದು ಪ್ರದರ್ಶಿತವಾದಾಗ, ಚಂದ್ರಶೇಖರ ಕಂಬಾರರ “ಕರಿಮಾಯಿ” ನಾಟಕದ ಪ್ರದರ್ಶನವಿದ್ದಾಗ ಅವನ್ನೂ ನಾವಿಬ್ಬರೂ ನೋಡಿದ್ದೆವು.

ಹೀಗೇ ನಾಟಕ ನೋಡುವದು, ಅಲ್ಲೇ ಮೂಲೆಯಲ್ಲಿದ್ದ ಗೂಡಂಗಡಿಯಲ್ಲಿ “ಗಾಜಿನ ಗ್ಲಾಸ್” ನಲ್ಲಿ ಇಲಾಚಿ ಚಾಯ್ ಕುಡಿಯುವದು, ಬೆಂಗಾಲಿ ಮಾರ್ಕೆಟ್ ಗೆ ಹೋಗಿ ಸ್ವೀಟ್ ತಿನ್ನುವದು, ಸೋವಿಯೆಟ್ ಹೌಸ್ ಆಫ್ ಕಲ್ಚರ್ ಗೆ ಹೋಗಿ ಫಿಂಗರ್ ಚಿಪ್ಸ್ ತಿನ್ನುತ್ತ ಬಿಯರು ಕುಡಿಯುವದು, ಎನ್.ಎಸ್.ಡಿ ಆವರಣದ ಹತ್ತಿರವೇ ಇದ್ದ ಕಥಕ್ ಕೇಂದ್ರದ ಪುರುಷಪುಂಗವರು ಕಥಕ್ ನೃತ್ಯ ಮಾಡಿ ಮಾಡಿ ಹಾವಭಾವಗಳಲ್ಲಿ ಹೆಣ್ಣುಗಳಂತೆ ಮಾರ್ಪಟ್ಟು ವೈಯ್ಯಾರದಿಂದ ನಡೆಯುತ್ತ ನೋಡುತ್ತ ಹೋಗುವದನ್ನು ಸುಮ್ಮನೇ ಸದ್ದುಗದ್ದಲವಿಲ್ಲದೇ ಎಂಜಾಯ್ ಮಾಡುವದು…! ಹೀಗೆ ದಿನ ಉರುಳಿದವು.
ಬಸವಲಿಂಗಯ್ಯ ೧೯೮೫ರಲ್ಲಿ ತಮ್ಮ ಕೋರ್ಸ್ ಮುಗಿಸಿದರು. ನಾನು ಮತ್ತೊಂದು ವರ್ಷ ಅಲ್ಲಿ ಉಳಿದು ೧೯೮೬ರಲ್ಲಿ ಅಲ್ಲಿಂದ ಹೊರಬಿದ್ದೆ. ಉತ್ತರ ಕರ್ನಾಟಕದ ಮೂಡಲಪಾಯ ಎಂದು ಕರೆಯುವ ದೊಡ್ಡಾಟ, ಸಣ್ಣಾಟ, ದಪ್ಪಿನಾಟದಂಥ ಜಾನಪದ ಅಭಿನಯ ಕಲೆಗಳ ಕುರಿತು ತಾವು ಬರೆದ ಡಿಸರ್ಟೇಶನ್ ನ ಹಸ್ತಪ್ರತಿಯನ್ನು ನನ್ನ ಕೈಗಿತ್ತು ಅದನ್ನು ಟೈಪ್ ಹಾಗೂ ಬೈಂಡ್ ಮಾಡಿಸಿ ತಮ್ಮ ಸಂಸ್ಥೆಗೆ ಸಲ್ಲಿಸುವ ಅಂತಿಮ ಕೆಲಸದ ಹೊಣೆಯನ್ನು ನನ್ನ ಕೊರಳಿಗೆ ಹಾಕಿ ಬಸೂ ಬೆಂಗಳೂರಿಗೆ ಹೊರಟರು. ನಾನೂ ಅವರೂ ಕೂಡಿಯೇ ಬೆಂಗಳೂರಿಗೆ ಬಂದೆವು. ಅವರು ತಮ್ಮ ಮನೆಗೆ ಹೋಗಲಿಚ್ಛಿಸದೇ ಇಬ್ಬರೂ ಅಲ್ಲಿ ಇಲ್ಲಿ ಹುಡುಕಿ ರೂಂ ಸಿಗದೇ ಕೊನೆಗೆ ಚಿಕ್ಕ ಲಾಲ್ ಬಾಗ್ ಎಂದು ಕರೆಯಲ್ಪಡುವ ಸ್ಥಳದ ಸಮೀಪ ಒಂದು ಮಹಾದರಿದ್ರ ಲಾಡ್ಜ್ ನಲ್ಲಿ ಉಳಿದೆವು. ಮರುದಿನ ನಾನು ಅವರೊಂದಿಗೆ ಶ್ರೀರಾಂಪುರಕ್ಕೆ ಹೋದಾಗ ಅಲ್ಲಿ ದಲಿತ ಸಂಘಟಣೆಯ ಹಲವು ಯುವಕರು ತಮ್ಮ ಮೇಲಾದ ಹಲ್ಲೆಯಿಂದ ನರಳುತ್ತ ಮಲಗಿದ್ದ ನಾಲ್ಕಾರು ಮನೆಗಳಿಗೆ ನಾವು ಹೋದದ್ದೂ ಆ ಯುವಕರು ಮತ್ತು ಅವರ ಕುಟುಂಬಗಳ ಹೆಂಗಳೆಯರು ಆ ಹಲ್ಲೆಯ ವಿವರಗಳನ್ನು ಬಸವಲಿಂಗಯ್ಯನೊಂದಿಗೆ ನೋವಿನಿಂದ ಹಂಚಿಕೊಂಡದ್ದೂ ನೆನಪಿದೆ.
ನನ್ನ ಮದುವೆಯಾದ ವರ್ಷ (೧೯೮೮ರಲ್ಲಿ) ಅವರು ಧಾರವಾಡದಲ್ಲಿ ಸಮುದಾಯಕ್ಕಾಗಿ ಒಂದು ನಾಟಕವನ್ನು ಸಿದ್ಧ ಪಡಿಸಲು ತಿಂಗಳುಗಟ್ಟಲೇ ಇದ್ದರು. ನಾಟಕ ಮುಗಿಯಿತು. ಅಲ್ಲಿಯ ವರೆಗೆ ಸುಮ್ಮನಿದ್ದ ಎಲ್ಲರೂ ಒಂದು ಸಭೆ ನಡೆಯಬೇಕೆಂದೂ ಅದರಲ್ಲಿ ತಮ್ಮ ಅನುಭವ ಅಸಮಾಧಾನಗಳನ್ನು ಹಂಚಿಕೊಳ್ಳಲು ಅವಕಾಶವಾಗಬೇಕೆಂದೂ ಆಗ್ರಹಿಸಿದ್ದರಿಂದಾಗಿ ಸಭೆ ನಡೆಯಿತು, ಸಮುದಾಯದ ಸಿ.ಆರ್.ಭಟ್ ರ ಅಧ್ಯಕ್ಷತೆಯಲ್ಲಿ. ಎಲ್ಲರೂ ಬಸವಲಿಂಗಯ್ಯನ ಮೇಲೆ ಮುರಕೊಂಡು ಬಿದ್ದರು. ಕೆರೆಯ ತೂಬು ತೆಗೆದಂತೆ ಅವರ ಕಾಠಿಣ್ಯದ ಕುರಿತು ಶಿಸ್ತಿನ ಕುರಿತು ಟೀಕೆಯೋ ಟೀಕೆಗಳ ಪ್ರವಾಹ. ನಾಟ್ಕ ಮಾಡಿಸೋದು ಅಂದ್ರೆ ನಾಟ್ಕ ಮಾಡಿಸಬೇಕು. ಫಿಜಿಕಲ್ ಎಕ್ಸರಸೈಝ್ ಮಾಡಿಸಿ ಯಾಕೆ ನಮ್ಮನ್ನು ದಣಿಸಬೇಕು? ನಟನೆ ಸರಿ ಇಲ್ಲ ಅಂದರೆ ತಿಳಿಸಿ ಹೇಳಬೇಕು ಯಾಕೆ ಬೈಯ್ಯಬೇಕು? ಕತ್ತೆಗಳಾ ಅಂದದ್ಯಾಕೆ?ಇತ್ಯಾದಿ..!
“ಬಾ ನಿನಗಿದೆ ಫಜೀತಿ” ಎಂಬ ಅರ್ಥದಲ್ಲಿ “ಬಾ ಮಾಡ್ತೇನ್ ನಿನ್ ಮದಿವೀ” ಎನ್ನುತ್ತಾರೆ ನಮ್ಮ ಕಡೆ. ಹಾಗೆ ೧೯೮೮ರ ಅಗಸ್ಟ್ ಹದಿನೈದರಂದು ಎಂದು ತೋರುತ್ತದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಸಂಜೆ ಬಸೂನ ಮದುವೆಯನ್ನೂ ಮಾಡಿದೆವು, ಬಸೂ ತಾನೇ ಹುಡುಕಿಕೊಂಡಿದ್ದ ಹುಡುಗಿ ಅವಳು. ವಿದ್ಯಾರ್ಥಿದೆಸೆಯಲ್ಲಿ ಎಸ್.ಎಫ್.ಐ ಅಕ್ಟಿವಿಸ್ಟ್ ಆಗಿದ್ದಾಕೆ. ಒಬ್ಬರಿನ್ನೊಬ್ಬರಿಗೆ ಮಾಲೆಗಳನ್ನು ಹಾಕಿದರು. ಯೂನಿವರ್ಸಿಟಿಯಲ್ಲಿ ಫಿಜಿಕ್ಸ್ ಪಾಠ ಮಾಡುತ್ತಲೇ ಧಾರವಾಡದಲ್ಲಿ ಹವ್ಯಾಸಿ ರಂಗ ಚಟುವಟಿಕೆಗಳನ್ನು ಪೊರೆಯುತ್ತಿದ್ದ ಪ್ರೊಫೆಸರ್ ಸಂಪಿಗೆ ತೋಂಟದಾರ್ಯರು ವೈವಾಹಿಕ ಬದುಕಿನ ಹೊಣೆ ಮತ್ತು ಬದ್ಧತೆಯ ಕುರಿತು ವಧುವರರಿಗೆ ಪ್ರಮಾಣವಚನ ಬೋಧಿಸುವ ರೀತಿಯ ಪೌರೋಹಿತ್ಯವಲ್ಲದ ಪೌರೋಹಿತ್ಯ ನಿರ್ವಹಿಸಿದರು. ಶಹನಾಯಿ, ಗಟ್ಟಿಮೇಳ, ಸದ್ದು-ಗದ್ದಲ, ಸೀರೆ, ಬಂಗಾರ ಸುಗಂಧದ್ರವ್ಯ ಸಿಂಚನವ್ಯಾವುದೂ ಇಲ್ಲದ, ನಾನು ನೋಡಿದ ಸರಳಾತಿಸರಳವಾದ ಅಂತರ್ಜಾತಿ ಮದುವೆ ಅದು. ನಾನು ಮತ್ತು ಮೂರು ತಿಂಗಳ ಹಿಂದಷ್ಟೇ ನನ್ನ ಹೆಂಡತಿಯಾಗಿ ಬಂದಿದ್ದ ಶಾಂತಿ ನೂತನ ದಂಪತಿಗಳಿಗೆ ಶುಭ ಹಾರೈಸಿದೆವು.
ಆಮೇಲೆ ಎನ್.ಎಸ್.ಡಿ ಪ್ರಾದೇಶಿಕ ಸಂಪನ್ಮೂಲ ಕೇಂದ್ರದಿಂದ ಒಂದು ಸುದೀರ್ಘ ವರ್ಕ್ ಶಾಪ್ ಮತ್ತು ಅದರಲ್ಲಿ ಸಿದ್ಧವಾದ ನಾಟಕವನ್ನು ಪ್ರದರ್ಶಿಸುವ ಯೋಜನೆಯೊಂದಿಗೆ ಬಸೂ ಧಾರವಾಡಕ್ಕೆ ಬಂದರು. ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ವಾಲ್ಟರ್ ಡಿಸೋಜಾ, ಏಣಗಿ ನಟರಾಜ, ಪ್ರಮೋದ ಶಿಗ್ಗಾಂವ್ ಮುಂತಾದವರ ಸಹಕಾರದಲ್ಲಿ ತಿಂಗಳುಗಟ್ಟಲೆ ಆ ವರ್ಕ್ ಶಾಪ್ ನಡೆಯಿತು.ಜಯತೀರ್ಥ ಜೋಶಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಹೋದರು. ನಾನು ಮತ್ತು ಚಂದ್ರಶೇಖರ್ ಪಾಟೀಲರು ದಿನನಿತ್ಯ ನಿಯಮಿತವಾಗಿ ಸಂಜೆ ಅಲ್ಲಿ ಹೋಗುತ್ತಿದ್ದೆವು. ಶಿಬಿರಾರ್ಥಿಗಳಿಗೆ ಕೆಲವು ಲೆಕ್ಚರ್ಸ್ ಕೊಟ್ಟೆವು. ಆಗ ಬಸೂ ಮರಾಠಿ ದಲಿತ ಲೇಖಕ ಶರಣಕುಮಾರ್ ಲಿಂಬಾಳೆ ಬರೆದ “ಅಕ್ಕರಮಾಸಿ” (ಅಕ್ರಮ ಸಂತಾನ) ಎಂಬ ಆತ್ಮಕತೆಯನ್ನು ನಾಟಕರೂಪಕ್ಕಿಳಿಸಿದರು. ನಂತರ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ ಅನಿರುದ್ಧ (ಜತಕರ್) ಮತ್ತು ಅವನ ಸೋದರಿ ಆರುಂಧತಿ ಹಾಗೂ ಕಾಮಿಡಿ ಸೀರಿಯಲ್ ಗಳಲ್ಲಿ ನಟಿಸಿದ ಸಂಗಮೇಶ ಉಪಾಸೆ ಮುಂತಾದವರು ಶಿಬಿರಾರ್ಥಿಗಳಾಗಿದ್ದರು. ನಾಟಕ ಯಶಸ್ವಿಯಾಗಿ ನಡೆಯಿತು. ಈ ಪ್ರಯೋಗದಲ್ಲಿ ಬಸೂ ತಾವು ಎನ್.ಎಸ್.ಡಿಯಲ್ಲಿ ಕಲಿತ ಹಲವು ತಂತ್ರಗಳನ್ನು ಬಳಸಿಕೊಂಡಿದ್ದರು.
ಬಸವಲಿಂಗಯ್ಯನಲ್ಲಿ ನಾನು ಮೆಚ್ಚಿದ ಒಂದು ಅಂಶ ಹೀಗಿದೆ. ಅದು ರಂಗಕರ್ಮಿಯಾಗಿ ಅವರನ್ನು ಇಲ್ಲಿಯ ವರೆಗೆ ಕೈ ಹಿಡಿದು ನಡೆಸಿದೆ. ಭ್ರಷ್ಟಗೊಳ್ಳುವ ಆಮಿಷಕ್ಕೆ ಒಬ್ಬ ರಂಗಕರ್ಮಿ ಒಳಗಾಗುತ್ತಾನೆ ಎಂದು ಗೊತ್ತಾದರೆ ವ್ಯವಸ್ಥೆ ಎಷ್ಟು ಬೇಗ ಅವನನ್ನು ಭ್ರಷ್ಟಗೊಳಿಸಬಲ್ಲದು ಎಂಬುದನ್ನು ಬಸು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತಮ್ಮ ಪದವಿ ಮುಗಿಸಿ ಬಂದ ಹೊಸದರಲ್ಲೇ ಬಹು ಬೇಗ ಕಂಡುಕೊಂಡರು. ಎಲೀಟಿಜಂನ ಆಕರ್ಷಣೆಗೆ ಒಳಗಾಗಲು ಅವರು ನಿರಾಕರಿಸಿದರು. ಕರ್ನಾಟಕದ ಸಂಸ್ಕೃತಿಯ ಬೇರುಗಳು ಗ್ರಾಮಗಳಲ್ಲಿ, ಗ್ರಾಮೀಣ ಹಿನ್ನೆಲೆಯಿಂದ ಬಂದು ಸಣ್ಣ ಪುಟ್ಟ ನಗರ-ಪಟ್ಟಣಗಳಲ್ಲಿ ನೆಲೆಸಿದ ಜನರಲ್ಲಿ ಇವೆ ಎಂದು ಗ್ರಹಿಸಿದರು. ನಾಟಕ ಎಂಬುದು ಒಂದು ಸಾಂಘಿಕ ಚಟುವಟಿಕೆಯಾದ್ದರಿಂದ ಮೊದಲು ವಿಭಿನ್ನ ಹಿನ್ನೆಲೆಯ, ವಿಭಿನ್ನ ಟೆಂಪೆರಾಮೆಂಟಲ್ ಎಟ್ಟಿಟ್ಯೂಡ್ ಇರುವ ಜನರ ಜೊತೆ ಹೊಂದಿಕೊಂಡು ಅವರನ್ನು ತೊಡಗಿಸಿಕೊಂಡು ಅವರಿಂದ ಕಲಿಯುತ್ತ ಅವರಿಗೆ ಕಲಿಸುತ್ತ ಹೋಗುವದರಲ್ಲಿಯೆ ತಮ್ಮ ಭವಿಷ್ಯ ಇದೆ ಎಂದು ಅರ್ಥ ಮಾಡಿಕೊಂಡರು.
ಮುಖ್ಯವಾಗಿ ಪ್ರಾರಂಭದಲ್ಲೇ ಬೆಂಗಳೂರು ಮೈಸೂರುಗಳಂಥ ಮಹಾನಗರಿಗಳ ವ್ಯಾಮೋಹವನ್ನು ಮೈಮನಸುಗಳಿಗಂಟಿಸಿಕೊಳ್ಳದೇ ಸದ್ದುಗದ್ದಲವಿಲ್ಲದೇ ರಾಯಚೂರು ಗುಲ್ಬರ್ಗ, ಬೀದರ್, ಧಾರವಾಡಗಳತ್ತ ಹೋಗಿ ತಿಂಗಳುಗಟ್ಟಲೇ, ವರ್ಷಗಟ್ಟಲೇ ಇದ್ದು ಸಮುದಾಯ ಸಂಘಟಣೆಯ ಅಳಿದುಳಿದ ಬೇರುಗಳಲ್ಲಿ ಜೀವ ಹರಿಸಿ ಅಲಾಮನ ಅದ್ಭುತ ನ್ಯಾಯ, ಕೆರೆಗೆ ಹಾರ, ಮದಾರಿ ಮಾದಯ್ಯ, ಸಂತ್ಯಾಗ ನಿಂತಾನ ಕಬೀರಾ ಮುಂತಾದ ನಾಟಕಗಳನ್ನು ಸಿದ್ಧಪಡಿಸಿ ಪ್ರಯೋಗಿಸುತ್ತ ತಮ್ಮ ಸುತ್ತ ತಮ್ಮದೇ ಆದ ಒಂದು ಬಳಗವನ್ನು ಸೃಷ್ಟಿಸಿಕೊಂಡರು. ಸಮಾಜಕ್ಕೆ ಬದುಕಿಗೆ ಇದು ಎಷ್ಟು ಪ್ರಸ್ತುತ ಎಂಬುದು ಅವರು ನಿರ್ದೇಶನಕ್ಕಾಗಿ ಆಯ್ದುಕೊಳ್ಳುವ ನಾಟಕಗಳ ಮಾನದಂಡವಾಗಿತ್ತು. ಅವರು ಹಾಗೆ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ ನಾನು ಅವರಿರುವೆಡೆ ಹೋಗಿದ್ದೇನೆ. ಅವರ ಶ್ರದ್ಧೆ ಮತ್ತು ದುಡಿಮೆಯನ್ನು ನೋಡಿದ್ದೇನೆ. ಅವರ ನಾಟಕಗಳನ್ನು ಮೆಚ್ಚಿದ್ದೇನೆ, ವಿಮರ್ಶಿಸಿದ್ದೇನೆ.
“ಅಶೋಕ್, ನೀವೂ ಒಂದು ನಾಟಕ ಬರೀರಲಾ” ಎಂದು ಹಲವು ಸಲ ಬಸೂ ನನಗೆ ಹೇಳಿದ್ದುಂಟು.”ನನಗೆ ಒಂದು ನಾಟಕದ ಚೌಕಟ್ಟಿನ ಗ್ರಹಿಕೆಯೇ ಇಲ್ಲ” ಎನ್ನುತ್ತಿದ್ದೆ ನಾನು. “ನಿಮಗೆ ತಿಳಿದಂತೆ ಬರೆದುಕೊಡಿ,ಅದನ್ನು ನಾಟಕಾ ಹೇಗೆ ಮಾಡಬೇಕು ಎಂಬುದನ್ನು ನನಗೆ ಬಿಡಿ” ಎನ್ನುತ್ತಿದ್ದರು. ಅವರು ಪದ್ಯಗಳಿಗೆ ಧಾಟಿ ಕೂಡ್ರಿಸುತ್ತಿದ್ದುದು ನನಗೆ ತುಂಬ ಇಷ್ಟವಾಗುತ್ತಿತ್ತು. ಒಂದೆರಡಲ್ಲ ನೂರಾರು ಕವಿತೆಗಳಿಗೆ ಅವರು ಧಾಟಿ ಸಂಯೋಜಿಸಿದ್ದರು. ರಾಯಚೂರಿನಲ್ಲಿ ಶಾಂತಾ ಎಂಬ ಹುಡುಗಿ ಅವುಗಳನ್ನು ಹಾಡುತ್ತಿದ್ದರೆ ನಾನು ಮೈಮರೆತು ಕೇಳಿದ್ದೇನೆ. ಒಮ್ಮೆ ವಿಶ್ವಶಾಂತಿಯ ಉದ್ದೇಶದಿಂದ “ಸಮುದಾಯ” ರಾಜ್ಯಾದ್ಯಂತ ನೂರಿಪ್ಪತ್ತು ಅಡಿ ಉದ್ದದ ಒಂದು ವರ್ಣಚಿತ್ರದ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಧಾರವಾಡದಲ್ಲೂ ಅದು ನಡೆದು ನಮ್ಮ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರ ಸಂಘದವರು ಬಸೂ ಧಾಟಿ ಕೂಡ್ರಿಸಿದ ಶಾಂತಿಗೀತಗಳನ್ನು ಮನದುಂಬಿ ಹಾಡುತ್ತಿದ್ದರು. ಆ ಪೈಕಿ ಕೆಲವು ಹೆಣ್ಣುಮಕ್ಕಳು ಆ ಮೇಲೂ ಹಲವಾರು ವರ್ಷ ಅವುಗಳನ್ನು ನೆನೆಸಿಕೊಂಡರು.
ಒಂದೆರಡು ವರ್ಷಗಳ ಹಿಂದೆ ಮೈಸೂರಲ್ಲಿ ಲೋಬೋಸ್ ನಲ್ಲಿ ಕುಳಿತು ಮಾತನಾಡುತ್ತಿರಬೇಕಾದರೆ ಬಸವಲಿಂಗಯ್ಯ ನಾನೀಗ ತುಂಬ ದುಬಾರಿ ನಿರ್ದೇಶಕ ಎಂತಲೋ ಅಥವಾ ಕನ್ನಡದ ನಿರ್ದೇಶಕರ ಪೈಕಿ ಕಾಸ್ಟ್ಲಿ ನಿರ್ದೇಶಕ ಅಂತಲೋ ಹೇಳಿದರು. ಅದರಲ್ಲಿ ಹಮ್ಮು ಬಿಮ್ಮು ಹೆಗ್ಗಳಿಕೆ ಇರಲಿಲ್ಲ. ಒಂದು ವಾಸ್ತವ ವಿಷಯವನ್ನು ಸರಳವಾಗಿ ಎಂಬಂತೆ ಹೇಳಿದಂತಿತ್ತು ಅದು. ಇಂಥ ದುಬಾರಿ ನಿರ್ದೇಶಕನಿಂದ ನಾವು ಒಂದು ನಾಟಕವನ್ನು ಪುಕ್ಕಟೆಯಾಗಿ ನಿರ್ದೇಶಿಸಿಕೊಂಡ ಒಂದು ಕಥಾನಕದೊಂದಿಗೆ ಈ ಬರಹವನ್ನು ಮುಗಿಸಬಹುದು.
ದಿಲ್ಲಿಯಲ್ಲಿ ನಮ್ಮ ಜೆ.ಎನ್.ಯು ನಲ್ಲಿ “ಶರಾವತಿ ಕನ್ನಡ ಸಾಂಸ್ಕೃತಿಕ ಸಂಘ”ವೆಂಬುದೊಂದಿತ್ತು. ಇತ್ತು ಎಂದರೇನು? ಇರಲಿಲ್ಲ. ಮೊದಲೆಂದೋ ಇತ್ತು. ಅದನ್ನು ಪುನರುಜ್ಜೀವಿತಗೊಳಿಸುವ ಹೊಣೆ ನನ್ನ ಕೊರಳಿಗೆ ಬಿದ್ದು ಹಿಂದಿ ಪ್ರೊಫೆಸರ್ ಚಿಂತಾಮಣಿಯವರು ಅಧ್ಯಕ್ಷರಾಗಿಯೂ ನಾನು ಕಾರ್ಯದರ್ಶಿಯಾಗಿಯೂ ಆಯ್ಕೆಯಾದೆವು. ಅದರದೊಂದು ಮೊಳಕೈ ಉದ್ದದ ರಜಿಸ್ಟರ್ ನನ್ನ ಕೈಗೆ ಬಂತು. ಅದರಲ್ಲಿ ಅದು ಜೀವಂತವಾಗಿದ್ದಾಗ ಬಂದು ಹೋಗಿದ್ದ ಕೆ.ಎಸ್.ನಿಸಾರ್ ಅಹಮದ್ ಮುಂತಾದವರು ತಮ್ಮ ಮೆಚ್ಚುಗೆಗಳನ್ನು ದಾಖಲಿಸಿದ ಬರಹಗಳಿದ್ದವು. ಜೆ.ಎನ್.ಯುನಲ್ಲಿದ್ದ ಕನ್ನಡಿಗರಾದ ವೇಣುಗೋಪಾಲ್, ಜಯಶೇಖರ್, ಪಾನ್ ಮೂರ್ತಿ (PAN) ಎಂದು ಕರೆಯಲ್ಪಡುತ್ತಿದ್ದ ಪಿ.ಎ.ನರಸಿಂಹ ಮೂರ್ತಿ, ಹೆಬ್ಬಾರ್, ಶೈಲೇಶ್ ಸಸಾಲಟ್ಟಿ, ಸುಧಾ ರಾವ್, ರಮೇಶ್ ರಾವ್, ಚಿಂತಾಮಣಿ ದಂಪತಿಗಳು, ಹಿರಿಸಾವೆ ಪ್ರಭಾಕರ್, ಲೈಬ್ರೇರಿಯನ್ ಆಗಿದ್ದ ನಾರಾಯಣರಾವ್, “ದೆಹಲಿ ಕನ್ನಡಿಗ” ಎಂದು ಒಂದು ಪತ್ರಿಕೆ ಪ್ರಕಟಿಸುತ್ತ ನಮ್ಮ ಕ್ಯಾಂಪಸ್ ನಲ್ಲೇ ಸುಳಿದಾಡಿಕೊಂಡಿದ್ದ, ಒಂದೊಮ್ಮೆ ನಮ್ಮ ಹಿಸ್ಟರಿ ಸೆಂಟರ್ ನ ವಿದ್ಯಾರ್ಥಿಯಾಗಿದ್ದ ಬಾ. ಸಾಮಗ ಎಲ್ಲರನ್ನು ಸಂಪರ್ಕಿಸಿ ಎಲ್ಲರ ಸಹಕಾರ ಕೋರಿ ಸಣ್ಣದಾಗಿ ಏನೇನೋ ಶುರುವಿಟ್ಟುಕೊಂಡೆ. ಯಾವುದೋ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲು ದೆಹಲಿಗೆ ಬಂದ ಕನ್ನಡ ಸಿನಿಮಾಗಳ ರೀಲಿನ ಸುರುಳಿಗಳಿದ್ದ ಡಬ್ಬಗಳನ್ನು ಅವುಗಳ ನಿರ್ದೇಶಕರನ್ನು ವಿನಂತಿಸಿಕೊಂಡು ತಂದು ಪ್ರದರ್ಶಿಸುವದು, ಕನ್ನಡಿಗರನ್ನು ಸೂರಜ್ ಕುಂಡ್ ಗೆ ಪಿಕ್ ನಿಕ್ ಗೆ ಕರೆದೊಯ್ಯುವದು. ಇತ್ಯಾದಿ.
ಒಂದು ಸಲ ಒಂದೇ ಲಾಟ್ ನಲ್ಲಿ ಮಂಗಳೂರಿನಿಂದ ಆರೆಂಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಜೆ.ಎನ್.ಯು ಗೆ ಬಂದರು.ಹೀಗಾಗಿ ಕನ್ನಡದ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಜಂಪ್ ಆಯಿತು. ಸ್ವಲ್ಪ ದೊಡ್ಡ ಮಟ್ಟದ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ನಾವೇ ನಾಟಕ, ಪ್ರಹಸನ, ನೃತ್ಯ ಇಂಥದನ್ನು ಮಾಡಿ ಕನ್ನಡಿಗರನ್ನು ರಂಜಿಸುವದು ಎಂದಾಯಿತು. ಮಂಗಳೂರಿನ ಹುಡುಗಿ ಮಿತ್ರಾ ಪ್ರಭು ನೃತ್ಯಕ್ಕೆ ಒಪ್ಪಿದಳು. ಜ್ಯೋತ್ಸ್ನಾ ಕದ್ರಿ, ಹಿಮಾಕರ್,ಸಖಾರಾಮ್, ಸುಬ್ರಹ್ಮಣ್ಯ, ಅಂಟೋನಿ ಮತ್ತಿತರರು ನಾಟಕಕ್ಕೆ ಒಪ್ಪಿದರು. ಸಿದ್ದಲಿಂಗಯ್ಯ ಬರೆದ ಕವಿತೆ “ಕತ್ತೆ ಮತ್ತು ಬಡವ” ಹಾಗೂ ಆಂಟನ್ ಚೆಕಾವ್ ನ ಕತೆ “ಡೆಥ್ ಆಫ್ ಏ ಕ್ಲರ್ಕ್” ಇವುಗಳನ್ನು ದೃಶ್ಯ ರೂಪಕ್ಕೆ ಅಳವಡಿಸಿ ನಿರ್ದೇಸಿಸುವಂತೆ ನಾನು ಬಸವಲಿಂಗಯ್ಯನಲ್ಲಿ ಕೇಳಿದಾಗ ಅವರು ಒಪ್ಪಿದರು.
ರಿಹರ್ಸಲ್ ಮಾಡಲು ಸ್ಥಳ? ಅದು ಎಲ್ಲೂ ಇರಲಿಲ್ಲ. ನಮ್ಮ ರಿಹರ್ಸಲ್ ಜೆ.ಎನ್.ಯೂ ಲೈಬ್ರರಿಯ ಆಚೆಗೆ ತುಸು ದೂರದಲ್ಲಿ, ಸ್ಥಳೀಯವಾಗಿ “ಪಾರ್ಥಸಾರಥಿ ಪ್ಲಾಟೂ” ಎಂದು ಹೆಸರಾಗಿದ್ದ ಹಲವು ದೊಡ್ಡ ದೊಡ್ಡ ಬಂಡೆಗಲ್ಲುಗಳಿದ್ದ ದಿಬ್ಬವೊಂದಕ್ಕೆ ಹೋಗುವ ಬೀದಿಯ ಬದಿ ಬೆಳದಿಂಗಳ ರಾತ್ರಿಗಳಲ್ಲಿ ವಾರಗಟ್ಟಲೆ ನಡೆಯಿತು. ವೃತ್ತಿಪರ ರಂಗಕರ್ಮಿ ಬಸು ಪ್ರತಿದಿನ ಬಂದು ಪುಕ್ಕಟೆಯಾಗಿ ಬೀದಿಯ ಬದಿ ನಮ್ಮ ಈ ಕಿರುನಾಟಕಗಳನ್ನು ನಿರ್ದೇಶಿಸಿದರು. (ಆಗ ಬಸೂಗೆ ಮುಂದೆ ಅಪಾರ ವೆಚ್ಚದ ಮದುಮಗಳಂಥ ಪ್ರೊಡಕ್ಷನ್ ಮಾಡುವ ನಿರ್ದೇಶಕ ತಾನಾಗುತ್ತೇನೆಂದು ಗೊತ್ತಿರಲಿಲ್ಲ) ಕೊನೆಗೆ ಮೇಕಪ್ ಇಲ್ಲದ, ಪರಿಕರಗಳಿಲ್ಲದ, ಸರಳ ಕಾಸ್ಟ್ಯೂಮ್ಸ್ ಮಾತ್ರ ಇದ್ದ ಆ ಪ್ರದರ್ಶನ ನಡೆದಾಗ ಎಲ್ಲರೂ ಇಷ್ಟ ಪಟ್ಟರು.
ಆ ಪೈಕಿ ಒಬ್ಬ ಅಧ್ಯಾಪಕರು “ಕತ್ತೆ ಮತ್ತು ಬಡವ” ಬರೆದ ಕವಿಯ ಹೆಸರು ಸಿದ್ದಲಿಂಗಯ್ಯ, ನಿರ್ದೇಶಿಸಿದಾತನ ಹೆಸರು ಬಸವಲಿಂಗಯ್ಯ ಇವುಗಳನ್ನು ಸ್ವಲ್ಪ ಕನ್ ಫ್ಯೂಜ್ ಮಾಡಿಕೊಂಡು ಬಹುಶ: ಅವರು ಲಿಂಗಾಯತರಿರಬೇಕೆಂದು ಭಾವಿಸಿ ಬರುವ ಅಮಾವಾಸ್ಯೆಯಂದು ತಮ್ಮ ಮನೆಯಲ್ಲಿ ಗೋದಿ ಹುಗ್ಗಿ ಊಟಕ್ಕೆ ನಾನು ಬರಬೇಕೆಂದು ಹೇಳಿ, ಸ್ವಲ್ಪ ಮೆಲುದನಿಯಲ್ಲಿ, “ಜೊತೆಯಲ್ಲಿ ಬಸವಲಿಂಗಯ್ಯನವರನ್ನೂ ಕರೆತನ್ನಿ” ಎಂದು ಹೇಳಿದರು. ಅಮಾವಾಸ್ಯೆಯಂದು ಸದರಿ ಅಧ್ಯಾಪಕರ ಮನೆಗೆ ಹೋಗಿ ಹುಗ್ಗೀ ಊಟ ಉಂಡೆ, ನಾನೊಬ್ಬನೇ…!
 

‍ಲೇಖಕರು avadhi

5 June, 2013

8 Comments

  1. Gururaja kathriguppe

    When I first saw the drama ‘Gandhi vs Gandhi’ in kannada I came to know the name of C. Basavalingaiah well known as BASU. Generally as everybody thinks I too thought that this man might have come from north Karnataka. Later I learned that BASU is hailed from Bangalore’s ‘Srirampura’ and by born he is a ‘dalith’. During 80’s and 90’s having brand of ‘dalith’ with their name was a fashion,in the cultural circle, which brought them so many benefits more than they deserved. But BASU choose the option of ‘loosing caste Identity and proving the ability only through the talent and original thinking’. This decision made him to stand ‘tall’ among the contemporary directors ,who are suffering from so many diseases called ‘isms’. great BASU, THANKS TO shettar for introducing BASU to all, because BASU never talks obout his achivements.

  2. Gopaal Wajapeyi

    ಪ್ರಿಯ ಅಶೋಕ… ಹೈದರಾಬಾದಿನ ‘ದೂ.ದ.’ದಲ್ಲಿ ಆಗ ಇದ್ದ ಕನ್ನಡಿಗ ಪ್ರೊಡ್ಯುಸರ್ ಪಿ.ವಿ. ಸತೀಶ್. ಆಗ ಗುಲ್ಬರ್ಗಾ ಕೇಂದ್ರಕ್ಕಾಗಿ ಕನ್ನಡ ಕಾರ್ಯಕ್ರಮಗಳು ಸಿದ್ಧಗೊಳ್ಳುತ್ತಿದ್ದದ್ದು ಹೈದರಾಬಾದಿನ ‘ದೂ.ದ.’ದಲ್ಲಿಯೇ. ಅಲ್ಲಿಯೇ ಇನ್ನೊಬ್ಬ ಕನ್ನಡಿಗ ಪ್ರೊಡ್ಯುಸರ್ ಇದ್ದರು : ಪವನಕುಮಾರ್ ಮಾನ್ವಿ. ಅವರಿಬ್ಬರೂ ಮಹಾ ರಂಗಪ್ರೇಮಿಗಳು. ಅದರಲ್ಲೂ ಪವನಕುಮಾರ್ ಮಾನ್ವಿ (ಪುಣೆ ಫಿಲಂ ಇನ್ಸಟಿಟ್ಯೂಟಿನಲ್ಲಿ ಗಿರೀಶ್ ಕಾಸರವಳ್ಳಿ ಸಹಪಾಠಿ) ಸ್ವತಃ ರಂಗ ನಿರ್ದೇಶಕ. ಅವರು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ರಂಗ ವಿಭಾಗದ ಕಲಾವಿದರಿಗಾಗಿ 1981ರಷ್ಟು ಹಿಂದೆಯೇ ‘ಈ ಕೆಳಗಿನವರು’ ನಾಟಕವನ್ನು ನಿರ್ದೇಶಿಸಿದ್ದರು.
    ಅಂದ ಹಾಗೆ, 1988ರಲ್ಲಿ ಬಸು ಧಾರವಾಡದ ಸಮುದಾಯಕ್ಕೆ ನಿರ್ದೇಶಿಸಿದ್ದ ನಾಟಕ ನಾನು ಹಿಂದಿಯಿಂದ ಅನುವಾದಿಸಿದ (ಮೂಲ ಭೀಷ್ಮ ಸಾಹನಿ) ‘ಸಂತ್ಯಾಗ ನಿಂತಾನ ಕಬೀರ…’
    ಬಸೂ ಜತೆಗಿನ ನಿಮ್ಮ ಒಡನಾಟದ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಕಡೆದಿರಿಸಿದ್ದೀರಿ.

  3. bharathi b v

    bidade odabekenisthu modalinda konevarege …

  4. nagraj harapanahalli

    ಕನ್ನಡ ರಂಗಭೂಮಿ ಮತ್ತು ಕನ್ನಡದ ಮನಸ್ಸುಗಳ ಪರಿಚಯ , ಸ್ನೇಹದ ಝಲಕ್

  5. Anil Talikoti

    ಬಸವಲಿಂಗಯ್ಯ(ಬಸು) ಬಗ್ಗೆ ತುಂಬಾ ಆತ್ಮೀಯವಾಗಿ ಬರೆದ ಲೇಖನ ಇಷ್ಟವಾಯಿತು. ವ್ಯಕ್ತಿ ಪರಿಚಯ ಮಾಡಿಸುವ ನಿಮ್ಮ ಈ ಪರಿ ಅತ್ಯಂತ ಪರಿಣಾಮಕಾರಿಯಾಗಿದೆ – ಧನ್ಯವಾದಗಳು
    -ಅನಿಲ

  6. ಅಶೋಕ ಶೆಟ್ಟರ್

    ಧನ್ಯವಾದ ವಾಜಪೇಯಿಯವರೇ, ಹೈದರಾಬಾದ್ ದೂರದರ್ಶನದಲ್ಲಿ ಕನ್ನಡದ ನಾಟಕಗಳಿಗೆ ಅವಕಾಶ ಮಾಡಿಕೊಟ್ಟವರನ್ನು ಹೆಸರಿಸಬೇಕೆಂಬ ಇಚ್ಛೆ ಇದ್ದರೂ ನನಗೆ ಅವರು ಯಾರೆಂದು ಗೊತ್ತಿರಲಿಲ್ಲ. ಅದು ನಿಮ್ಮಿಂದ ಈಡೇರಿತು.

  7. CHANDRASHEKHAR VASTRAD

    ಅಶೋಕಾ, ಗದ್ಯಾನೂ ಎಷ್ಟ ಚಂದ ಬರಿತಿಯೋ. ಭಾಳ ಖುಷಿ ಆಯ್ತು.ಹೌದೂ ಧಾರವಾಡಕ್ಕ ಬಂದ ಮ್ಯಾಲೆ ಇನ್ನಷ್ಟು ರಭಸದಿಂದ ರಂಗಕ್ಷೇತ್ರಕ್ಕ ಧುಮಕಬೇಕಾಗಿತ್ತು ನೀ. ಯಾಕ ಹಂಗ ಮಾಡಲಿಲ್ಲ?! ಎಲ್ಲಾರು ನಿಜ ಜೀವನದಾಗನ… ನಾಟಕಾ ಮಾಡೋದು ನೋಡಿ ಸುಮ್ನಾದೇನ್ ಮತ್ತ…ಮುಂದಿನ ಕಂತಿನ ದಾರಿ ಕಾಯ್ತೀನಿ.

  8. basu.c

    ashok nimma artical nodiralilla, nanna bagge tumba atimiyateyinda nikharavaagi barediddiri thanks. charitre bagge ondu olle nataka barabekide ashoh!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading