ರಶ್ಮಿ ತೆಂಡುಲ್ಕರ್
ಈ ಹಿಂದೆ ರಾತ್ರಿ ನೈಟ್ ಶಿಫ್ಟ್ ಮುಗಿಸಿ ಪಿಜಿಗೆ ಹೋಗ್ತಿದ್ರೆ ಜಯನಗರ ರೂಟ್ ನಲ್ಲಿ ಬೆಳ್ ಬೆಳಗ್ಗೆ ಗಾಡಿಯಲ್ಲಿ ಹೆಂಡ್ತಿನ ಕೂರಿಸಿ ಗಾಡಿ ತಳ್ಳುತ್ತಾ ಮಾರ್ಕೆಟ್ ನತ್ತ ಸಾಗುವ ಗಂಡ. ಗಾಡಿಯಲ್ಲಿ ಕೂತು ಗಟ್ಟಿಯಾಗಿ ಮಾತಾಡುತ್ತಾ, ನಗುತ್ತಿರುವ ಹೆಂಡ್ತಿ, ಅವಳೊಂದಿಗೆ ದನಿ ಗೂಡಿಸುವ ಗಂಡ..ರೊಮ್ಯಾಂಟಿಕ್ ದೃಶ್ಯವೇ ಅದು.
ರಾತ್ರಿ ಹೊತ್ತು ಆಫೀಸು ಮುಗಿಸಿ ಬಸ್ಸಿಗೆ ಕಾಯುವಾಗ ಬಸ್ ಸ್ಟಾಪ್ ನ ಹಿಂದೆ ಕಡ್ಲೆ ಮಾರುವ ಗಂಡಸು, ಅವನ ಪಕ್ಕ ನಿಂತು ಕಡ್ಲೆ ಹುರಿಯುವ ಟಣ್ ಟಣ್ ಸದ್ದಿನೊಂದಿಗೆ ನಾನ್ ಸ್ಟಾಪ್ ಮಾತಾಡುವ ಆತನ ಹೆಂಡ್ತಿ… ಅವರ ಸಹಕಾರ, ಆಪ್ತತೆ ನೋಡಿದ್ರೆ ಖುಷಿಯಾಗುತ್ತದೆ.
ಇವತ್ತು ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಹತ್ತಿದಾಗ ನನ್ನ ಪಕ್ಕ ಕುಳಿತಿದ್ದ ಟೀನೇಜ್ ಹುಡುಗಿ.. ಕೆಳಗೆ ಫ್ಲಾಟ್ ಫಾರಂನಲ್ಲಿ ನಿಂತಿದ್ದ ಆಕೆಯ ಪ್ರಿಯಕರ. ಕಣ್ಣ ಸನ್ನೆಗಳು, ಕೈ ಸನ್ನೆಗಳು ಜೋರಾಗಿಯೇ ಇದ್ದವು. ಅವ ಫ್ಲೈಯಿಂಗ್ ಕಿಸ್ ಕೊಟ್ಟ, ಇವಳಿಗೆ ಕೊಡೋಕೆ ನಾಚಿಕೆ.. ಬಸ್ಸು ಹೊರಡ್ತಾ ಇದೆ.. ಅವನಿಗೆ ಆತುರ..
ಆಕೆ ನನ್ನತ್ತ ನೋಡಿ ನಕ್ಕಳು… ನಾನು ಆಚೆಗೆ ಮುಖ ಮಾಡಿದೆ. ಅಲ್ಲೇನು ನಡೆಯಿತೋ ಗೊತ್ತಿಲ್ಲ… ಹುಡುಗಿ ಖುಷ್… ಬಸ್ ಅಲ್ಲಿಂದ ಮೆಲ್ಲನೆ ಮೂವ್ ಆಗುತ್ತಿದ್ದಂತೆ ಅವ ಟಾಟಾ ಮಾಡ್ಕೊಂಡೇ ಇದ್ದ… ಇವಳು ನಾಚುತ್ತಳೇ ಇದ್ದಳು..
ಟ್ರಾಫಿಕ್ ಕಿರಿಕಿರಿ, ಬಸ್ಸಿನ ರಶ್ಶು ಎಂದು ಕಿರಿಕಿರಿ ಅನುಭವಿಸುವಾಗಲೆಲ್ಲಾ ಇಂಥಾ ಪುಟ್ಟ ಪುಟ್ಟ ಸಂಗತಿಗಳು ಖುಷಿ ಕೊಡುತ್ತವೆ.
ಈ ಗಡಿಬಿಡಿಗಳ ನಡುವಲ್ಲಿ ಕೆಲವೊಂದು ಮುಖಗಳು ಸದಾ ಕಾಡುತ್ತಲೇ ಇರುತ್ತವೆ. ಅವರ್ಯಾರು ಎಂದು ನಮಗೂ ಗೊತ್ತಿಲ್ಲ, ನಾವ್ಯಾರೆಂದು ಅವರಿಗೂ ಗೊತ್ತಿಲ್ಲ.. ಆದರೆ ಆ ಪ್ರೀತಿಯ ಮುಖಗಳು, ಹೊಳೆವ ಕಂಗಳು ಒಂದಷ್ಟು ಪಾಸಿಟಿವ್ ಎನರ್ಜಿ ತುಂಬುತ್ತವೆ ಎಂಬುದಂತೂ ನಿಜ.
ಜೀವನದಲ್ಲಿ ಇಂಥಾ ಪುಟ್ಟ ಪುಟ್ಟ ವಿಷಯಗಳೇ ಅಲ್ವಾ ಖುಷಿ ಕೊಡುವುದು…ಖುಷಿಗೆ ಕಾರಣರಾದ ಆ ಜೀವಗಳು ಸದಾ ಖುಷಿಯಾಗಿರಲಿ…





ಚಿಕ್ಕ ವಿಷಯಗಳ ದೊಡ್ದ ಪಾಟಗಳು, ಮನಮುಟ್ಟುವಂತಿದೆ