ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ತುಟಿಯಲ್ಲಿ, ಕಟಿಯಲ್ಲಿ ಬದುಕಾದವಳು ನಾನು..

ಬಿನ್ನಹಕೆ ಬಾಯಿಲ್ಲವಯ್ಯ

lakshman geetha

ಲಕ್ಷ್ಮಣ್

ಇದ್ದಕ್ಕಿದ್ದಂತೆ ಮೊನ್ನೆ ಹೀಗಾಯ್ತು;
ಅದೊಂದು ದೊಡ್ಡ ಸಭೆ, ವೇದಿಕೆ ಮೇಲೆ ನಾನು
ಹಾರ ತುರಾಯಿ  ಕಿರೀಟ
ದೊಡ್ಡ ಕವಿಯೆಂಬ ಬಿರುದು, ಸನ್ಮಾನ, ಭಾರ, ಭಾರ
ಮೂಗು ದಾರ ಇತ್ಯಾದಿ.

coupleಎಲ್ಲರ ಕವಿತೆಯೋದಿದ ಮೇಲೆ
ನನ್ನ ಸರದಿ
ಸೂಜಿ ಮೊನೆ ಸದ್ದಾಗುವ ಮೌನ
ಕವಿತೆ ಹಾಡಾಗುವ ಕವಿ ಸಮಯ
ಓದಲು ಹಾಳೆ ಬಿಚ್ಚಿದರೆ ಕವಿತೆಯೆಲ್ಲಿ!!?

ಸಭೆಯ ಚಪ್ಪಾಳೆಯ ಸದ್ದಿನ ಬಿಸಿಗೆ
ಆವಿಯಾಗಿ ಹಾರಿ ಹೋದ ಅಕ್ಷರಗಳು
ಬೆಚ್ಚಿ ಬಿದ್ದೆ!!…ಖಾಲಿ ಹಾಳೆ.
ಕಣ್ಣು ಮುಚ್ಚಿ ಬರೆದ ಸಾಲುಗಳ
ನೆನಪಿಸಿಕೊಂಡೆ…ಉಹುಂ
ಕೈ, ಕಾಲು ಕಂಪಿಸಿತು, ಖಾಲಿ ಹಾಳೆ ಕೂಡ.

ಉಪಾಯ ಮಾಡಿ
ಸಭೆಯ ದಿಕ್ಕು ತಪ್ಪಿಸಲು ನೋಡಿದೆ
ಏಕೆಂದರೆ
ಕವಿತೆ ನನ್ನ ದಾರಿ ತಪ್ಪಿಸಿದೆ.

ಶಿಸ್ತು, ಸಂಯಮ, ಬದ್ಧತೆ, ಜವಾಬ್ದಾರಿ, ಹಾಳು ಮೂಳು
ಮಣ್ಣು, ಮಸಿ…
ಅಂತ ಮಾತು ತೇಲಿಸಿ, ಪ್ಯಾಲಿ ನಗೆ ತೋರಿ
ಮೆಲ್ಲಗೆ ಜಾಗ ಖಾಲಿ ಮಾಡಿದೆ
ಸಭೆ ಒಕ್ಕೊರಲಿನಿಂದ “ಕವಿತೆ, ಕವಿತೆ” ಅಂತ ಕೂಗುವುದು
ತುಂಬ ದೂರದ ತನಕ ಕೇಳಿಸುತ್ತಲೇಯಿತ್ತು
ನಾನು ಓಡುತ್ತಲೇಯಿದ್ದೆ.

ತುಂಬಿದ ಸಭೆಯಲ್ಲಿ ಕವಿತೆ ಕೈ ಕೊಟ್ಟಿರುವುದು
ಇದೇ ಮೊದಲಲ್ಲ
ಹಿಂದೆ ಎಷ್ಟೋ ಬಾರಿ ಇದ್ದಕ್ಕಿದ್ದಂತೆ ಸಾಲುಗಳೇ
ಮಾಯವಾಗುತಿದ್ದವು ನಾನು ಜಾಣ್ಮೆಯಿಂದ
ನಿಂತ ಜಾಗದಲ್ಲೇ  ಹೊಸ ಪದ ಪೋಣಿಸಿ
ಆಭಾಸವಾಗದಂತೆ, ಲಯ ಹಿಡಿಯುತಿದ್ದೆ
ಅಷ್ಟೂ ಮಾಡದಿರೆ ಹೇಗೆ?  ಆಶು ಕವಿಯಲ್ಲವೇ?

ಎಲಾ ಕವಿತೆಯೇ ಇಲ್ಲಿ ಇದ್ದಕ್ಕಿದ್ದಂತೆ ಇಡಿಯಾಗಿ
ಮಾಯವಾದೆಯಾ? ಇರು ಮಾಡುವೆಯೆಂದು
ದಮ್ಮಡಿ ಕಚ್ಚಿ, ಉರಿ ಉರಿಯುತ್ತಾ
ಹಾರ, ತುರಾಯಿ, ಕಿರೀಟ, ಕಿತ್ತು ಬಿಸಾಡಿ
ಮನೆಗೆ ನಡೆದೆ. ಅಥವ ನಡೆಯುತ್ತ ಓಡಿದೆ.

ಮೇಷ್ಟ್ರು ಭಯಕೆ ಶಾಲೆ ತಪ್ಪಿಸಿಕೊಂಡ
ಮಗುವಿನಂತೆ ಕತ್ತಲ ಕೋಣೆಯಲಿ
ಕವಿತೆ ಬಿಕ್ಕುತಿತ್ತು.

couple2ಎಷ್ಟು ಸಲ ಹೇಳುವುದು ನಿನಗೆ
ಮೈ ಮರೆಯಬೇಡ
ಮಾತು ತಪ್ಪಬೇಡ ಹೀಗೆ ಇದ್ದಕ್ಕಿದ್ದಂತೆ
ಮಾಯವಾಗಬೇಡ!!….ನಾನು ಗದರುತ್ತಲೇಯಿದ್ದೆ.

ನಿಮ್ಮ ದಮ್ಮಯ್ಯ
ಎಂದು ಕವಿತೆ, ಕವಿಯ ಕಾಲು ಹಿಡಿಯಿತು
ದೊರೆಯೆ
ನನಗೆ ಲೋಕಾಂತದ ಭಯ, ವೇದಿಕೆಯ ಭಯ
ನಾನು ಹೀಗೆಲ್ಲಾ ಬದುಕಿದವಳೇ ಅಲ್ಲ

ಕಾಡು-ಮೇಡಿನಲಿ,
ಬೇಲಿ ಹೂವಿನಲಿ
ನಿನ್ನೂರಿನ ಒಂಟಿ ದಾರಿಯ ಮಣ್ಣ ಹಾಡಿನಲಿ
ಗೊಲ್ಲನ ಕೊಳಲ ದನಿಯಲಿ
ತಾಯ ಮೊಲೆ ಹಾಲಿನಲಿ
ಅಪ್ಪನ ಬೆವರ ಹನಿಯಲಿ
ನದಿಯ ಬಳಕುವ ಸೊಂಟದಲಿ

ಕಡಲ ಅಲೆಯ ವಿಷಾದದಲಿ
ನಿನ್ನ ನೆಚ್ಚಿನ ಸಖಿಯ ಕಣ್ಣ ಪಸೆಯಲ್ಲಿ
ಅವಳ ತುಟಿಯಲ್ಲಿ, ಕಟಿಯಲ್ಲಿ ಸದ್ದಿಲ್ಲದೆ ಬಾಳಿ ಬದುಕಾದವಳು ನಾನು
ಹೀಗೆ ನನ್ನ ವೇದಿಕೆಗೆ ಕರೆದು ಬಟ್ಟೆ ಕಳಚಬೇಡ
ನನಗೆ ಪ್ರಾಣ ಹೋಗುವ ಮುಜುಗರ.

ನೀನು ಓದಲೇಬೇಕೆ ?
ಬಾ ನಿನ್ನ ಕತ್ತಲ ಕೋಣೆಗೆ ಬೆತ್ತಲಾಗುವ ಇಬ್ಬರೂ
ಕಣ್ಣು ಮುಚ್ಚಿಕೊ ಧ್ಯಾನಿಸು
ಇರುಳೆಲ್ಲಾ ಕೊಳಲಾಗು ನಾನು ಕೊರಳಾಗುವೆ
ಇದು ಬೇಡವೆ?
ನೀನು ನಿನ್ನ ಮುದ್ದಿನ ಬೆಕ್ಕಿನ ಮುಂದೆ ಓದಿಕೊ
ನಿನಗಷ್ಟೇ ಕೇಳುವಂತೆ… ಕವಿತೆ ಬಿಕ್ಕುತಲೇಯಿತ್ತು

ಆ ಹೊತ್ತೇ ಕೊನೆ
ನಾನು ಕವಿತೆಯ ಹೊತ್ತು ವೇದಿಕೆ ಹತ್ತಿದ್ದು.

‍ಲೇಖಕರು admin

17 August, 2016

3 Comments

  1. Gubbachchi Sathish

    Wah! Super!

  2. Bhagyachikkanna

    first class kavithe ….

  3. S.p.vijaya Lakshmi

    Nice kavite

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading