
ಸತ್ಯಮಂಗಲ ಮಹಾದೇವ
ಅವಳು
ಈಗ ಹೆಚ್ಚು ಮೌನಿ
ನೆಲಕೆ ನೀರು ಹಬ್ಬಿದಂತೆ
ಅವಳು
ಈಗ ಮಾತಿನ ಕಸುವನ್ನು
ದುಡಿಯುವ ಕೈಗಳಿಗೆ
ದಾಟಿಸುತ್ತಿರುವ ಅಭಿಯಂತರೆ
ಅವಳು
ಈಗ ಹೂವಿನಿಂದ
ಕಾಯಾಗುವ ಪಲ್ಲಟಕೆ
ತನ್ನ ಒಡ್ಡಿಕೊಳ್ಳುವ ಶ್ರಮಜೀವಿ

ಅವಳು
ಈಗ ಬಿಸಿಲನ್ನು ಬೆಳದಿಂಗಳಾಗಿಸುವ
ರಸವಿಜ್ಞಾನಿ
ನೋವುಗಳಿಗೆ ನಲಿವಿನ ಚಿತ್ತಾರ ಬಿಡಿಸುವ
ಮಾಂತ್ರಿಕ ಕುಂಚ ಕಲಾವಿದೆ
ಅವಳು
ಈಗ ಸದಾ ನಗುವ ಹೂವಿನಂತೆ
ದುಃಖವನು ಹೊದ್ದವರಿಗೆ
ನಗುವನ್ನು ಹಂಚುತ್ತಾಳೆ
ಆಗಸದಲಿ ನಗುವ ಒಂಟಿ ಚಂದ್ರನಂತೆ.






0 Comments