ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ನೀಳ ಜಡೆಯ ಹುಡುಗಿ..

ಆನೆಕಟ್ಟೆ ವಿಶ್ವನಾಥ್ 

ಒಂದು ರೈಲಿನ ಅನುಭವ ತಪ್ಪದೇ ಓದಿರಿ. 😀:

ಆ ದಟ್ಟ ಅಡವಿಯಲ್ಲಿ ನಿರುಮ್ಮಳವಾಗಿ ಹರಿಯುತ್ತಿರುವ ನದಿಯಂತಹ ನೀಳ ಜಡೆಯ ಹುಡುಗಿ ಬಗ್ಗೆ ಬರೆಯಬೇಕು ಎನಿಸಿತು.

ಅವಳು ನಮ್ಮನ್ನು ರೈಲಿಗೆ ಹತ್ತಿಸಿದ್ದು ಕುತೂಹಲದಿಂದ ತುಂಬಿತ್ತು. ಅಹಮದಾಬಾದ್ ನಿಂದ ಬೆಂಗಳೂರು ಹೊರಡುವ ರೈಲು ನಂಬರ್ 16533 ಸರಿಯಾಗಿ ಮಧ್ಯಾನ 2.45ಕ್ಕೆ ಬಿಡುವುದಿತ್ತು. ನಾನು ಲೆಕ್ಕ ಹಾಕಿದ್ದೆ, ಐಐಎಂ ಅಹಮದಾಬಾದ್ ನಿಂದ ರೈಲು ನಿಲ್ದಾಣ ತಲುಪಲು ಒಂದು ಗಂಟೆ ಸಾಕೆಂದು. ಒಂದು ಗಂಟೆ ಖಂಡಿತವಾಗಿ ಸಾಕು. ಆದರೆ ಈ ಓಲಾ ವಾಲ ನಮ್ಮನ್ನು ಬಂದು ತಲುಪಲು ಹದಿನೈದು ನಿಮಿಷ ತಡ ಮಾಡಿದ. ಅವನು ಇನ್ನೂ ಚಿಗುರು ಮೀಸೆ ಹುಡುಗ. ಕಿವಿಗೆ ಹಾಕಿದ್ದ ಇಯರ್ ಫೋನ್ ತೆಗೆಯಲೆ ಇಲ್ಲ. ಮಾತಾಡುತ್ತಾ ಮಾತಾಡುತ್ತಾ ಐಐಎಂ ಮುಖ್ಯದ್ವಾರ ತಲುಪಲು ಸರ್ವೀಸ್ ರಸ್ತೆ ಗೆ ಬರಬೇಕಾದವನು, ಫ್ಲೈ ಓವರ್ ಮೇಲೆ ಸೀದಾ ಹೋಗಿದ್ದಾನೆ. ಮುಂದಿನ ಸರ್ಕಲ್ ಹೋಗಿ ಯೂ ಟರ್ನ್ ಮಾಡಿ ಬರುವಷ್ಟರಲ್ಲಿ ಕಾಲು ಗಂಟೆ ತಡ ಆಗಿತ್ತು. ಒಂದು ಕಾಲು ಗಂಟೆಗೆ ಓಲಾ ಹತ್ತಿದೆವು.ಆದರೂ ರೈಲು ನಿಲ್ದಾಣ ತಲುಪುವ ಭರವಸೆ ಇತ್ತು. ಅಲ್ಲಿಂದ ಜಿಎನ್ಎಫ್ ಸಿ ಟವರ್ ತಲುಪಿ ಅಲ್ಲಿ ಇದ್ದ ಲಗೇಜು ತುಂಬಿಕೊಂಡು ವಾಪಸ್ಸು ಓಡಬೇಕಿತ್ತು. ಆದರೆ ಜಿಎನ್ ಎಫ್ ಸಿ ಟವರ್ ತಲುಪುವ ಹೊತ್ತಿಗೆ ನಮ್ಮ ರೈಲು ನಿಲ್ದಾಣ ಸೇರುವ ಭರವಸೆಯ ಬಲೂನು ಗಾಳಿ ಇಳಿದಂತೆ ಸಣ್ಣದಾಗುತ್ತಾ ಬಂತು.

ಇದಕ್ಕೆ ಮುಖ್ಯ ಕಾರಣ, ಈ ಓಲಾ ಗಾಡಿ ಓಡಿಸುವ ಹುಡುಗ ಕಿವಿಗೆ ಹಾಕಿದ್ದ ಇಯರ್ ಫೋನ್ ತೆಗೆಯದೆ ಮಾತನಾಡುತ್ತಾ ನಿಧಾನವಾಗಿ ಓಡಿಸುತ್ತಾ ನಡೆದಿದ್ದ. ನಾವು ಜಿಎನ್ಎಫ್ ಸಿ ಟವರ್ ನಲ್ಲಿ ಇಳಿದು ದಡಬಡ ಒಳಹೋಗಿ ಲಗೇಜು ಬ್ಯಾಗುಗಳನ್ನು ತುಂಬಿಕೊಂಡು ಓಡೋಡಿ ಬಂದು ಕಾರಿಗೆ ಹಾಕಿ ‘ಉಸ್ ‘ ಎಂದು ಕುಳಿತಾಗ ಸಮಯ 1.50. ಅಲ್ಲಿಂದ ರೈಲು ನಿಲ್ದಾಣ ಸೇರಲು ಕೇವಲ 30 ನಿಮಿಷ ಸಾಕು. ಆದರೆ ಈ ವ್ಯಕ್ತಿ ಈ ಮೂವತ್ತು ನಿಮಿಷಗಳಲ್ಲಿ ನಮ್ಮನ್ನು ತಲುಪಿಸುವ ಭರವಸೆ ಕಾಣಲೆ ಇಲ್ಲ. ಆದರೆ ಇವನನ್ನು ಬಿಟ್ಟು ಬೇರೆ ಓಲಾ ಅಥವಾ ಆಟೋ ಹಿಡಿಯುವಷ್ಟು ಸಮಯವೂ ಇರಲಿಲ್ಲ. ಅನಿವಾರ್ಯವಾಗಿ ಈ ಚಿಗುರು ಮೀಸೆ ಹುಡುಗನ ಓಲಾ ಅನಿವಾರ್ಯವಾಗಿತ್ತು. ಅವನು ಯಾವಾಗಲೂ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಆಗೊಮ್ಮೆ ಈಗೊಮ್ಮೆ ‘ಹ್ಹಾಂ, ಹ್ಹೂ, ಎನ್ನುತ್ತಿದ್ದುದನ್ನು ನೋಡಿದರೆ, ಅವನು ಅವನ ಪ್ರೇಮಿಯ ಜೊತೆಯಲ್ಲಿ ಮಾತನಾಡುತ್ತಾ ಇದ್ದಂತೆ ಅನಿಸಿತು. ನಾವು ಇಷ್ಟೊಂದು ಆತಂಕದಲ್ಲಿ ಇದ್ದರು, ಅವನು ಮಾತ್ರ ಗಾಡಿ ಓಡಿಸಿ ನಮ್ಮನ್ನು ರೈಲು ನಿಲ್ದಾಣ ಸೇರಿಸುವ ಕಾಳಜಿ ಕಾಣಲಿಲ್ಲ.

ಸರಿ,ಗಾಡಿ ಹತ್ತಿ ಕುಳಿತು Location ಚೇಂಜ್ ಮಾಡಿದಿನಿ, ರೈಲ್ವೆ ನಿಲ್ದಾಣಕ್ಕೆ ಬಿಡಪ್ಪಾ ಅಂದರೆ, ‌ಅವನು ಕೇಳ್ತಿದಾನೆ ‘ಯಾವ ರೈಲ್ವೆ ನಿಲ್ದಾಣ’ ಅಂತ
ಅನೇಕ ರೈಲು ನಿಲ್ದಾಣ ಇವೆ ಎಂದು ನನಗೆ ಗೊತ್ತಿರಲಿಲ್ಲ. ಏನು ಕೇಳಿದರು ಅವನು ಗೊತ್ತಿಲ್ಲ ಎನ್ನುತ್ತಿದ್ದಾನೆ. ಯಾರನ್ನು ಕೇಳುವುದು ಎಂದು ಯೋಚಿಸುತ್ತಿದ್ದಾಗ ತಕ್ಷಣ ಈ ದಟ್ಟವಾದ ನೀಳ ಜಡೆಯ ಹುಡುಗಿ ನೆನಪಾದಳು.

ನಾವು ಬೆಂಗಳೂರಿಂದ ಅಹಮದಾಬಾದ್ ಹೋಗುವಾಗ ಪೂನಾದಲ್ಲಿ ಹುಡುಗಿಯೊಬ್ಬಳು ಹತ್ತಿ ನಾವಿದ್ದ ಕಂಪಾರ್ಟ್ ಮೆಂಟ್ ಗೆ ಬಂದಳು. ಅವಳ ಜೊತೆ ಎತ್ತರವಾದ ವ್ಯಕ್ತಿಯೊಬ್ಬ ಬಂದನು. ಅವಳು ಎಸಿ ಒನ್ ಕಂಪಾರ್ಟ್ ಮೆಂಟ್ ನಲ್ಲಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದಳು. ಅದು waiting ಇದ್ದು confirm ಆಗದೆ ಇದ್ದ ಕಾರಣದಿಂದ General ಟಿಕೆಟ್ ತೆಗೆದುಕೊಂಡು ಎಸಿ ಟು ಗೆ ಬಂದಿದ್ದಳು. ಹೀಗೆ ಮಾಡುವುದರಿಂದ, ಸೀಟುಗಳು ಖಾಲಿ ಇದ್ದರೆ ಟಿಸಿಗಳು General ಮತ್ತು ಎಸಿ ನಡುವಿನ ವ್ಯತ್ಯಾಸ ಮೊತ್ತವನ್ನು ಕಟ್ಟಿಸಿಕೊಂಡು ಸೀಟನ್ನು confirm ಮಾಡುತ್ತಾರೆ. ಈ ಹುಡುಗಿಯ ಜೊತೆ ಬಂದ ವ್ಯಕ್ತಿ ರೈಲ್ವೆ ಇಲಾಖೆಯವನು. ಅವನ ಸಹಾಯದಿಂದ ಎಸಿ ಟುಗೆ ಬಂದದ್ದಳು.

ಬೆಂಗಳೂರಿಂದ ಅಹಮದಾಬಾದ್ ಪಯಣದ ನಮ್ಮ ಎರಡನೇ ದಿನದ ಅಪರಾಹ್ನ ಬೋರ್ ಹೊಡೆಯುತ್ತಿದ್ದ ವೇಳೆ ಬಿಸಿಬಿಸಿ ಮಿರ್ಚಿ ಜೊತೆ ಘಮಘಮ ಮಂಡಕ್ಕಿ ಬಂದ ರೀತಿ ನಮ್ಮ ಕಂಪಾರ್ಟ್ ಮೆಂಟ್ ಗೆ ಬಂದಳು. ನನ್ನ ಜೊತೆ ಇದ್ದ ರೈತರನ್ನು ಮಾತನಾಡಿಸಲು ಶುರು ಮಾಡಿದಳು. ಅವರಿಗೆ ಅವರ ಊರಿನ ಕನ್ನಡ ಬಿಟ್ಟು ಬೇರೇನೂ ಬರದು. ಅವಳು ಹಿಂದಿಯಲ್ಲಿ ಕೇಳಿದ್ದಕ್ಕೆಲ್ಲಾ ಇವರು ಕನ್ನಡದಲ್ಲಿ ಉತ್ತರ ಕೊಡುತ್ತಿದ್ದರು. ಅವಳು ಅವರ ಮುಂಜಾನೆಯಂತ ಮುಗ್ದತೆಯನ್ನು Enjoy ಮಾಡುತ್ತಾ ಇನ್ನಷ್ಟು ಹತ್ತಿರವಾದಳು. ಅವರ ಜೊತೆ ಮಾತನಾಡಲು ಗೂಗಲ್ ಮೊರೆ ಹೋದಳು. ಇವರಿಗೆ ಕೇಳ ಬೇಕಾದ ಪ್ರಶ್ನೆಗಳನ್ನು ತಾನೇ ಗೂಗಲ್ ನಲ್ಲಿ ಅನುವಾದಿಸಿ ಮೋದಿ ಮತ್ತು ರಾಹುಲ್ ಚುನಾವಣಾ ಸಮಯದಲ್ಲಿ ಭಾಷಣ ಶುರು ಮಾಡುವಾಗ ಮಾತನಾಡುವ ಕನ್ನಡದಂತ ಕನ್ನಡದಲ್ಲಿ ಕೇಳುತ್ತಿದ್ದಳು. ಇದರಿಂದ ಮುಗ್ಧ ರೈತರು ಖುಷಿಯಾಗಿಯೆ ಸ್ವಚ್ಛ ಕನ್ನಡದಲ್ಲಿ ಉತ್ತರ ನೀಡುತ್ತಿದ್ದರು. ಉತ್ತರ ಕೇಳಿಸಿಕೊಂಡ ಮೇಲೆ ಅದೇ ಮುಗ್ದ ನಗು ಮುಗಿದ ಕೂಡಲೇ ನನ್ನ ಕಡೆ ನೋಡುತ್ತಿದ್ದಳು. ಅವರ ಉತ್ತರವನ್ನು ನಾನು ಇಂಗ್ಲಿಷ್ ಗೆ ಅನುವಾದಿಸುತ್ತಿದ್ದೆ.

ನಮ್ಮ ಚಂದ್ರಪ್ಪ ಒಂದು ಹೆಜ್ಜೆ ಮುಂದೆ ಹೋಗಿ ‘ನಿಮ್ಮ ಅಪ್ಪ ಅಮ್ಮ ಏನು ಕೆಲ್ಸ ಮಾಡ್ತಾರೆ’ ಅಂತ ಶುರುಮಾಡಿ ಅವಳು ಯಾಕೆ ಪೂನಾ ಬಂದಿದ್ದಳು. ಈಗ ಎಲ್ಲಿಗೆ ಹೋಗ್ತಾಳೆ, ಎಲ್ಲಾ ಮಾಹಿತಿಯನ್ನು ಜಾಲಾಡಿದ ಹೊತ್ತಿಗೆ ಕತ್ತಲಾಗೆ ಬಿಟ್ಟಿತ್ತು. ಊಟದ ಸಮಯಕ್ಕೆ ರೈಲಿನೊಳಗೆ ಊಟ ಬಂತು. ಅ ರೈಲ್ವೆ ಸಿಬ್ಬಂದಿ ತನ್ನ ಹೆಂಡತಿ ರುಚಿರುಚಿಯಾಗಿ ತಯಾರಿಸಿದ್ದ ಕೆಂಪು ಚಟ್ನಿ, ಕಡ್ಲೆ ಬೀಜದ ಚಟ್ನಿ ಪುಡಿ ಜೊತೆಗೆ ಚಪಾತಿ ತೆಗೆದು ಟೇಸ್ಟ್ ನೋಡಿ ಎಂದನು. ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ನಿರ್ಧಾರವಾಯ್ತು. ನಾವು ತರಿಸಿದ್ದ ವೆಜಿಟಬಲ್ ಫಲಾವ್, ಅವಳು ತರಿಸಿದ್ದ ಈ ಫಲಾವ್ ತರದಲ್ಲೆ ಇದ್ದ ಅನ್ನ. ಎಲ್ಲವನ್ನೂ ಐದು ಜನ ಒಟ್ಟಿಗೆ ಕುಳಿತು ಊಟ ಮಾಡಿದೆವು. ಇದೊಂದು ಅಪರೂಪದ ಅವಿಸ್ಮರಣೀಯ ಚೊಚ್ಚಲ ದಿನ ಎಂದು ಆ ದಟ್ಟ ಕೂದಲಿನ ನೀಳ ಜಡೆಯ ಹುಡುಗಿ ನನ್ನ ಕಣ್ಣು ನೋಡಿದಳು.

ಚಂದ್ರಪ್ಪ ಮತ್ತು ಶಾಂತ ಕುಮಾರ್ “ಅದೇನೆಂಬ”? ಪ್ರಶ್ನೆಯೊಂದಿಗೆ ನನ್ನ ಕಣ್ಣುಗಳನ್ನು ನೋಡಿದರು. ಅವಳ ಕಣ್ಣು ಈ ಹಿಂದಿನ ತುಂಟತನವನ್ನು ಹೇಳುತ್ತಿಲ್ಲ ಎಂದು ಅವರಿಗೆ ಖಾತ್ರಿಯಾಗಿತ್ತು. ಆ ಹುಡುಗಿ ರೈಲಿನಲ್ಲಿ ಯಾರೊಂದಿಗೂ ಎಂದೂ ಊಟವನ್ನು ಹಂಚಿಕೊಂಡಿರಲಿಲ್ಲ. ಯಾರಿಗೂ ಕಾಣದಂತೆ ಕದ್ದು ಮುಚ್ಚಿ ತಿಂದೆವೊ ಇಲ್ಲವೊ ಎಂಬಂತೆ ತಿಂದು ಮುಗಿಸಿ ಬಿಡುತ್ತೇವೆ.ಇಂದು ಬಹಳ ಖುಷಿಯಾಯ್ತು ಎಂದಳು ಹುಡುಗಿ. ಇಷ್ಟು ವರ್ಷಗಳ ರೈಲ್ವೆ ಇಲಾಖೆಯ ಅನುಭವದಲ್ಲಿ ಅವನಿಗೆ ಊಟವನ್ನು ಹಂಚಿ ಉಂಡದ್ದು ಇದೇ ಮೊದಲ ಅನುಭವ. ಎಲ್ಲರೂ ಖುಷಿಯಲ್ಲೆ ಹರಟುತ್ತಾ ಊಟ ಮುಗಿಸಿದೆವು.

ಚಂದ್ರಪ್ಪ ‘ನೀವು ಏನ್ ಕೆಲ್ಸ ಮಾಡ್ತೀರಾ’ ಎಂದು ಕೇಳಿ ಬಿಟ್ಟರು. ಇದನ್ನು ಕೇಳಲು ಮುಖ್ಯ ಕಾರಣ, ಆ ಹುಡುಗಿಯೂ ಎಲ್ಲಾ ವಿಚಾರವನ್ನು ಇವರ ಬಗ್ಗೆ ಕೇಳಿದ್ದಳು. ಅವರ ಪ್ರಶ್ನೆಗೆ ಅವಳು ನವಿರಾಗಿ business ಅಂದು ಬಿಟ್ಟಳು. ಈ ಚಂದ್ರಪ್ಪ ಬಿಡಲು ಒಲ್ಲ. ಏನು business ಎಂದು ಕೇಳಿಯೇ ಬಿಟ್ಟರು. ಅವಳು working partner in a company of woman inner wear ಎಂದಳು. ಉತ್ತರಕ್ಕಾಗಿ ಕಾದು ಕೂತಿದ್ದ ಚಂದ್ರಪ್ಪ ಕಿಸಕ್ ಅನ್ನುವುದು ಗ್ಯಾರಂಟಿ ಎಂದು ನನಗೆ ಗೊತ್ತಿತ್ತು. ನಾನು ನಗದೆ ಸಹಜವಾಗಿ ಅನುವಾದಿಸಿದೆ. ನಾನು ಅಂದುಕೊಂಡಂತೆ ಆಯಿತು.

ಮಾತುಕತೆ ಮುಗಿಸಿ ಮಲಗುವ ಹೊತ್ತಾಯಿತು. ಅಷ್ಟು ಹೊತ್ತಿಗೆ ಚಂದ್ರಪ್ಪ ಆ ದಟ್ಟ ಹಾಗೂ ಉದ್ದ ಕೂದಲ ಹುಡುಗಿಗೆ ಮಗಳ ಸ್ಥಾನ ಮಾನ ಕೊಟ್ಟಾಗಿತ್ತು. ನಮ್ಮದು lower birth ಇತ್ತು. ಆ ಹುಡುಗಿಯದ್ದು upper birth. ಮಗಳನ್ನು ಮಲಗಲು ಮೇಲೆ ಹತ್ತಿಸಲು ಒಪ್ಪದ ಚಂದ್ರಪ್ಪ ತಾನೆ ಮೇಲೆ ಹೋದರು. ಅಷ್ಟು ಹೊತ್ತಿಗೆ ನಮ್ಮ ನಡುವಿನ ಮುಲಾಜುಗಳು ಇಲ್ಲವಾಗಿದ್ದವು.

ಎಲ್ಲರೂ ಮಲಗಲು ಸಿದ್ಧವಾಗುತ್ತಿದ್ದೆವು. ಆ ಹುಡುಗಿ ಕಟ್ಟಿದ್ದ ಮುಡಿಯ ಬಿಚ್ಚಿದಳು.
ವಾವ್! ಅಷ್ಟು ದಟ್ಟ ಮತ್ತು ಉದ್ದನೆಯ ಕೂದಲು. ಅವಳು ಮುಡಿಯನ್ನು ಬಿಚ್ಚಿ ಮರು ಕಟ್ಟಲು ಸಿದ್ದತೆಗೊಳಿಸುತ್ತಿದ್ದುದು ನೋಡಲು ಕಾವ್ಯದಂತಿತ್ತು.

ಕೊರೆಯುವ ಚಳಿಗೆ ಉದುರಿದ ಎಲೆಗಳ ಮರ ಹೊಸ ಚಿಗುರು ಚಿಗುರಿಸಲು ಮದುವೆಗೆ ಮೊದಲು ಮೂರುದಿನ ಇರುವಾಗ ಸಿದ್ಧಗೊಳ್ಳುತ್ತಿರುವ ಹೆಣ್ಣಿನಂತೆ ಇರುವಾಗ, ನೆಲದ ಕಣ್ಣ ಕಾವಿಗೆ ಬೆಂದ ಭರವಸೆಯ ಹನಿಗಳೆಲ್ಲಾ ಆವಿಯಾಗಿ ಮುಗಿಲು ಸೇರಿ ಆ ಮರದ ಮೇಲೆ ಸುರಿಯಲು ಹೆಪ್ಪಾಗುತ್ತಿರುವ ಹನಿಗಳಂತೆ ಪ್ರತಿಯೊಂದು ಕೂದಲು ಕಂಡವು. ಅವು ಒಟ್ಟಾಗಿ ಸೇರಿ ಅವಳ ಜಡೆಯಾಗಿ ದಟ್ಟಡವಿಯಲ್ಲಿ ಹರಿವ ನದಿಯಂತೆ ಕಂಡವು.
ಆ ಕೂದಲನ್ನು ನಾನೊಮ್ಮೆ ಮುಟ್ಡಬೇಕೆಂದೆ. Oh, Sure ಎಂದು ತನ್ನ ಉದ್ದನೆಯ ಜಡೆಯ ನನ್ನ ಕೈಯ ಮೇಲಿಟ್ಟಳು. ನಯವಾಗಿ ಸ್ಪರ್ಷಿಸಿದೆ. ರೇಷ್ಮೆಯಂತೆ ಎಂದರೆ ಅವಳ ಕೂದಲಿಗೆ ಅವಮಾನವಾಗಬಹುದು.

ಹೀಗೆ .. ಮಲಗುವ ಹೊತ್ತಾಯಿತು. ಎಲ್ಲರೂ ಮಲಗಿದೆವು. ಮುಂಜಾನೆ ಆರು ಗಂಟೆಗೆ ಎದ್ದ ಚಂದ್ರಪ್ಪ ,” ಮೇಡಂರೆ, ಮೇಡಂರೆ” ಕೂಗಿ ಕರೆದನು. ಆರು ಮೂವತ್ತಕ್ಕೆ ರೈಲು ಅಹಮದಾಬಾದ್ ರೈಲ್ವೆ ನಿಲ್ದಾಣ ಕ್ಕೆ ಬಂದಿಳಿಯಿತು. ಅಷ್ಟು ಹೊತ್ತಿಗೆ ಆ ರೈಲ್ವೆ ಇಲಾಖೆಯ ಸಿಬ್ಬಂದಿ ಹಿಂದಿನ ನಿಲ್ದಾಣದಲ್ಲಿ ಇಳಿದು ಹೋಗಿದ್ದರು. ಆ ಹುಡುಗಿಯ ಜೊತೆ ಎಲ್ಲರೂ ಸೆಲ್ಫೆ ಕ್ಲಿಕ್ಕಿಸಿಕೊಂಡೆವು. ಅವಳು ತನ್ನ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಳು. ಅವಳೆ ಖುದ್ದಾಗಿ ಎಲ್ಲರ ಮೊಬೈಲ್ ಗಳಲ್ಲಿ ಅವಳ ನಂಬರ್ ಸೇವ್ ಮಾಡಿ.ಎಲ್ಲರ ನಂಬರ್ ಪಡೆದು, ನಮಗೆ ಜಿಎನ್ಎಫ್ ಸಿ ತಲುಪಲು ಆಟೊ ವ್ಯವಸ್ಥೆ ಮಾಡಿಕೊಟ್ಟು ಕಳುಹಿಸಿ ಕೊಟ್ಟಳು. ಅಹಮದಾಬಾದ್ ನಲ್ಲಿ ಏನಾದರೂ ತೊಂದರೆ ಆದರೆ ಕರೆ ಮಾಡಲು ತಿಳಿಸಿದ್ದಳು. ಅಷ್ಟೇ ಅಲ್ಲ, ಆ ಆಟೊದವನಿಗೆ ಇಷ್ಟೇ ಹಣ ಕೊಡಬೇಕು ಹೆಚ್ಚು ಕೇಳಿದರೆ ಪೋನ್ ಮಾಡಿ. ತಲುಪಿದಾಗ ಪೋನ್ ಮಾಡಿ ಎಂದೆಲ್ಲಾ ಕಾಳಜಿ ಮಾಡಿ ಕಳುಹಿಸಿ ಕೊಟ್ಟಿದ್ದಳು

ಈ ಓಲಾ ವಾಲಾ ಕೇಳಿದ ಪ್ರಶ್ನೆಗೆ ತಕ್ಷಣ ನೆನಪು ಮಾಡಿಕೊಂಡು. ಉದ್ಸ ಹಾಗೂ ದಪ್ಪ ಕೂದಲಿನ ಹುಡುಗಿಗೆ ಫೋನಾಯಿಸಿದೆ. ಔಪಚಾರಿಕವಾಗಿ ಮಾತಾಡಲು ತಾಳ್ಮೆ ಮತ್ತು ಸಮಯ ಎರಡೂ ಇರಲಿಲ್ಲ. ನಮ್ಮ ಮಧ್ಯೆ ಅದು ಅವಶ್ಯಕ ಎನಿಸಲೂ ಇಲ್ಲ. ತಕ್ಷಣವೇ? ಯಾವ ರೈಲು ನಿಲ್ದಾಣ ಎಂದು ಕೇಳಿದೆ. ತಕ್ಷಣವೇ ಅವಳು ಅದು ಕಾಲುಪುರ್ ರೈಲು ನಿಲ್ದಾಣ ಎಂದಳು. ಅವನಿಗೆ ಫೋನ್ ನೀಡಲು ತಿಳಿಸಿದಳು. ಫೋನ್ ಕೊಟ್ಟೆನು. ಅವನಿಗೆ ತಿಳಿಸಿ ಅಲ್ಲಿಂದ ಹೊರಡುವಾಗ ಎರಡು ಗಂಟೆ ತುಂಬಿತ್ತು.

ಓಲಾ ಆಪ್ ನಲ್ಲಿ ರೈಲು ನಿಲ್ದಾಣ ತಲುಪಲು ಅರ್ಧ ಗಂಟೆ ಸಮಯ ತೋರಿಸುತ್ತಿತ್ತು. ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಎರಡೂವರೆ ಗೆ ರೈಲು ನಿಲ್ದಾಣ ಸೇರುತ್ತೇವೆ. ಇನ್ನು ರೈಲು ಪ್ಲಾಟ್ ಫಾರಂ ವಿಚಾರಿಸಲು ಐದು ನಿಮಿಷ ಬೇಕು. ಅಲ್ಲಿಂದ ಪ್ಲಾಟ್ ಫಾರಂ ಸೇರಲು ಐದು ನಿಮಿಷ ಬೇಕು ಎಂದು ಮನಸ್ಸಿನಲ್ಲಿ ಶೆಡ್ಯೂಲ್ ಮಾಡಿಕೊಳ್ಳುತ್ತಿದ್ದೆ.

ಆದರೆ ಆ ಹುಡುಗ ನಾನು ಅಂದು ಕೊಂಡಿದ್ದು ಸಾಧ್ಯ ಮಾಡಿಸುವವನಂತೆ ಕಾಣಲೇ ಇಲ್ಲ. ನಿಮ್ಮನ್ನು ಸರಿಯಾದ ಸಮಯಕ್ಕೆ ಸೇರಿಸುವೆ ಎನ್ನುತ್ತಾನೆ. ಆದರೆ ಕ್ರಿಯೆಯಲ್ಲಿ ಅದ್ಯಾವುದೂ ಕಾಣುತ್ತಿಲ್ಲ. ಸಮಯ ಓಡುತ್ತಿದೆ. ಕಿ.ಮೀ. ಕಡಿಮೆ ಯಾಗುತ್ತಿಲ್ಲ. ಅವನು ಆರಾಮಾಗಿ ಓಡಿಸುತ್ತಿರುವುದನ್ನು ಕಂಡು ನನಗೆ ನಖಶಿಖಾಂತ ಉರಿದು ಹೋಯಿತು. ಅಲ್ಲಿ free left ಇದ್ದಾಗಲೂ ಸಿಗ್ನಲ್ ಸೇರಿ ಸಿಕ್ಕಿಕೊಂಡಾಗ ಇನ್ನೂ ಉರಿಯಿತು. ಗ್ರೀನ್ ಸಿಗ್ನಲ್ ಬಿದ್ದರೂ ಗಮನ ಕೊಡದೆ ಮತ್ತೆ ರೆಡ್ ಸಿಗ್ನಲ್ ಪುನಃ ಬಿದ್ದಾಗ ಇನ್ನೂ ಉರಿದು. ಫೋನ್ ನಲ್ಲಿ ಮಾತಾಡುವುದನ್ನು ನಿಲ್ಲಿಸಲು ತಿಳಿಸಿದೆ. ಅವನು ಸೌಮ್ಯವಾಗಿ ಯಾಕೆ ಎಂದು ಕೇಳಿದಾಗ, ಇದು ನಾನು ಸಿಟ್ಟಾಗುವ ಸಮಯವಲ್ಲವೆಂದು ಅರ್ಥ ಆಯ್ತು. ಕೂಲಾಗಿ help us to reach fast ಅಂದೆ.
ಅಂದುಕೊಂಡದ್ದು ಸುಳ್ಳಾಗುವ ಸಾಧ್ಯತೆಯೆ ಹೆಚ್ಚು ಎಂದೆನಿಸಿತು.ಏಕೆಂದರೆ 2.30ಆದರೂ ರೈಲ್ವೆ ನಿಲ್ದಾಣ ತಲುಪಲಿಲ್ಲ. ಇನ್ನೂ ಏಳುನೂರು ಮೀಟರ್ ಇದೆ. ಕಾರು ನಿಧಾನವಾಗಿ ಚಲಿಸುತ್ತಿದೆ. Slow moving traffic. ಇಂತಹ ಸಮಯದಲ್ಲಿ ಮತ್ತೆ ಆ ಹುಡುಗಿ ನೆನಪಾದಳು. ಸಂದರ್ಭ ಸಹಿತ ವಿವರಿಸಿ. ಪ್ಲಾಟ್ ಫಾರಂ ಪತ್ತೆ ಹಚ್ಚಲು ವಿನಂತಿಸಿದೆ. ಅದು ಅಲ್ಲೆ ವಿಚಾರಿಸಬೇಕು ಅದು ಬದಲಾಗುತ್ತಿರುತ್ತದೆ ಎಂದಳು. ಆದರೂ ಪ್ರಯತ್ನಿಸುವುದಾಗಿ ತಿಳಿಸಿದಳು.

ಕಾರು ರೈಲು ನಿಲ್ದಾಣ ತಲುಪಿದಾಗ 2.41. ನಮ್ಮ ಬಳಿ ಸಮಯ ಇದ್ದದ್ದು ಕೇವಲ ನಾಲ್ಕು ನಿಮಿಷ. ಮೊದಲೆ ರಡಿ ಇಟ್ಟು ಕೊಂಡಿದ್ದ ಲಗೇಜುಗಳ ನೇತಾಕಿಕೊಳ್ಳುವಾಗ, ಆ‌ ಹುಡುಗಿ ಕರಮಾಡಿ ಪ್ಲಾಟ್ ಫಯ ಸಿಕ್ಸ್ ಎಂದಳು. ತಕ್ಷಣವೇ ಕಟ್ ಮಾಡಿ ಓಡಿದ್ದೆ ಓಡಿದ್ದು. ಪ್ಲಾಟ್ ಫಾರಂ ತಲುಪಿದಾಗ 2.44. ನಮ್ಮ ಸೀಟಲ್ಲಿ ಕುಳಿತಾಗ ರೈಲು ಹೊರಟಿತು. ನಾನು ವಿಚಾರಣೆಗೆ ಹೋಗಿದ್ದರು ರೈಲು ತಪ್ಪುತ್ತಿತ್ತು.ಅವಳಿಗೆ I got train ಎಂದು ಮೆಸೇಜ್ ಕಳಿಸಿ. ಪ್ರಯಾಣ ಮುಂದುವರೆಸಿದೆ. ಚಂದ್ರಪ್ಪ ಶಾಂತ ಕುಮಾರ್ ಮಲಗಿದ್ದಾರೆ. ನಾನು ಇದನ್ನು ಬರೆದೆ. ಈ
ರೈಲ್ವೆ ಸಮಯ: 7.11
ಸ್ಥಳ : ಸೂರತ್,
ದಿನಾಂಕ: 30-01-19

‍ಲೇಖಕರು avadhi

31 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading