ಸಿಂಗ್ಲೀಷ್.. ಅಂದರೆ ಸಿಂಗಪುರ್ ಇಂಗ್ಲಿಷ್

ಕೇರಳದಲ್ಲಿ ಬಹುತೇಕರ ಇಂಗ್ಲೀಷ್ ಮಲಯಾಳಿ ಭಾಷೆಯ ಉಚ್ಚಾರಣೆಯ ಶೈಲಿಯಲ್ಲಿದ್ದರೆ, ಇತ್ತ ಆಂಧ್ರದವರದ್ದು ತೆಲುಗು ಭಾಷೆಯ ಸ್ವರ. ಇನ್ನೂ ತಮಿಳುನಾಡಿನವರದ್ದು ತಮಿಳು ಆಕ್ಸೆಂಟ್. ದೇಶದ ಆಯಾಯ ರಾಜ್ಯಗಳಲ್ಲಿ ಅಲ್ಲಿನ ಆಡು ಭಾಷೆಗೆ ಅನುಗುಣವಾಗಿ ಇಂಗ್ಲೀಷ್ ಭಾಷೆ ಬಗೆಬಗೆಯ ರೂಪ ಪಡೆದಿರುತ್ತವೆ. ಇನ್ನೂ ಗಡಿ ಪ್ರದೇಶಗಳಲ್ಲಿ ಕೇಳೋದೇ ಬೇಡ. ಅಕ್ಕ ಪಕ್ಕದ ರಾಜ್ಯಗಳ ಮಿಶ್ರಣದಿಂದ ಹೊಸದಾಗಿ ಸಮ್ಮಿಶ್ರ ಭಾಷೆಯೊಂದು ಉದಯವಾಗಿರುತ್ತದೆ. ಕೇಳಲು ಸೊಗಸಾಗಿರುತ್ತವೋ ಇಲ್ವೋ. ಅರ್ಥ ಮಾಡಿಕೊಳ್ಳಲು ಮಾತ್ರ ತಾಳ್ಮೆಯಂತೂ ಬೇಕೇ ಬೇಕು.

ನಮ್ಮ ಅಪಾರ್ಟ್ಮೆಂಟ್ ನ ಪಕ್ಕದಲ್ಲಿ ಒಂದು ಕ್ಲಿನಿಕ್.  ಅಲ್ಲಿ ಇರುವ ಎಲ್ಲಾ ವೈದ್ಯರು ಚೀನೀಯರು. ಭಾರತೀಯ ವೈದ್ಯರಲ್ಲೇ ಹೆಚ್ಚಿನ ನಂಬಿಕೆ. ಆದರೆ ಆರೋಗ್ಯ ತೀರಾ ಹದೆಗೆಟ್ಟಾಗ ಔಷಧಿ ಮಾತ್ರ ಟಾರ್ಗೆಟ್. ಹಾಗಾಗಿ ಯಾರಾದರೇನು ಶಿವ..! ಗುಣಮುಖರಾದರೆ ಸಾಕು ಅನ್ನುವ ಪರಿಸ್ಥಿತಿ ನಮ್ಮದು.

ನಮ್ಮ ಊರಿನ ತರಹ ಮೊದಲಿಗೆ ನೇಮಕಾತಿ ನಂತರ ವೈದ್ಯರ ಭೇಟಿ, ಖಾಯಿಲೆಯ ಬಗ್ಗೆ ಚರ್ಚೆ ಕೊನೆಗೆ ಔಷಧಿ. ಇಲ್ಲೂ ಅದೇ ವಿಧಾನ. ಆದರೆ ಎಲ್ಲವೂ ಇಂಗೀಷ್ ನಲ್ಲೇ ವ್ಯವಹಾರ. ಸರಿ, ಕಲಿತ ಅರೆಬರೆ ಇಂಗ್ಲೀಷ್ ನಲ್ಲಿ ಮಾತಾಡುವ ಅಂದ್ರೆ.  ಅದೂ ನಡಿಯೋದಿಲ್ಲ. ಹೋಗಲಿ, ನಮ್ಮ ಹಾಗೆ ಬಾಯಿಬಿಟ್ಟು ಸ್ಪಷ್ಟ ಉಚ್ಚಾರದಲ್ಲಿ ಮಾತಾಡ್ತಾರಾ ..! ರೋಗಿಗಳೇ ಬಾಯಿ ಬಿಟ್ಟು ಕೂರುವ ಸ್ಥಿತಿ.

ಇನ್ನೂ ಟ್ಯಾಕ್ಸೀ ಡ್ರೈವರ್ಸ್. ದೇವರಿಗೆ ಪ್ರೀತಿ ಇವರ ಇಂಗ್ಲೀಷ್. ಇಡೀ ದೇಹವನ್ನೇ ಕಿವಿಯನ್ನಾಗಿ ಮಾಡಿಕೊಂಡರೂ. ಏನು ಮಾತಾಡ್ತಾರೆ ಅನ್ನೋದೇ ಅರ್ಥ ಆಗೋದಿಲ್ಲ. ಅವರ ಬಾಯಿಂದ ಬೀಳುವ ಪದಗಳನ್ನು ಗ್ರಹಿಸಿ. ಓಹೋ..ಹೀಗೆ ಹೇಳಿರಬೇಕು ಎಂದು ಅಂದಾಜಿಸಿ ಉತ್ತರ ಕೊಡುವ ಸನ್ನಿವೇಶ.

ಇವರೇ ಜಾಣರು ತಿಳಿದರೆ, ಇಲ್ಲಿನ ಸಲೂನ್ ಅಂಗಡಿಯವರ ಅವಸ್ಥೆ ಕೇಳೋದೇ ಬೇಡ. ಹೆಚ್ಚಿನ ಸಂದರ್ಭ ಗಳಲ್ಲಿ ಅವರು ಏನು ಮಾತಾಡಿದರು ಅನ್ನುವುದು ಬಿಡಿ. ಯಾವ ಪದಗಳನ್ನು ಬಳಸಿದರೂ ಎಂಬುದು ಕೂಡ ಪವಾಡ. ಹೀಗಾದಾಗ ಏನೂಂತ ಉತ್ತರಿಸೋದು. ಕೊನೆಗೆ ಮುಖದ “ಈಮೋಜಿ” ಗಳಲ್ಲೇ ಮಂಗಳ ಹಾಡುವ ಗತಿ.

ಟ್ಯಾಕ್ಸೀ ಡ್ರೈವರ್, ಮಾರ್ಕೆಟ್, ಸಲೂನ್ ಗಳಲ್ಲಿ ಹೇಗಾದ್ರೂ ಬದುಕಿ ಬರಬಹುದು. ಆದರೆ ಕ್ಲಿನಿಕ್ ನಲ್ಲಿ ಭಾಷೆ, ಖಾಯಿಲೆ, ಔಷಧಿ ಬಗ್ಗೆ ಅರ್ಥವಾಗದೆ ಹೋದರೆ ಎಲ್ಲವೂ ಗೋವಿಂದ. ಬಂದು ೫ -೬ ವರ್ಷಗಳಾದ್ರೂ, ಕ್ಲಿನಿಕ್ ಗೆ ಒಬ್ಬಳೇ ಹೋಗಲು ಮಾತ್ರ ಅದೇನೋ ಭಯ.

ಯಾಕೆಂದ್ರೆ ಇವರೆಲ್ಲ ಮಾತಾಡೋದು ಸಿಂಗ್ಲೀಷ್. ಅಂದರೆ ಸಿಂಗಪುರ್ ಇಂಗ್ಲೀಷ್. ನೀವು ಬ್ರಿಟಿಷ್ ಇಂಗ್ಲೀಷ್ ಮಾತಾಡಿ, ಇಲ್ಲ ಅಮೆರಿಕನ್ ಇಂಗ್ಲೀಷ್ ಮಾತಾಡಿ. ರಸ್ತೆಗಿಳಿದ ಮೇಲೆ ಇದ್ಯಾವುದಕ್ಕೂ ಬೆಲೆ ಇಲ್ಲ. ಯಾಕೆಂದರೆ ಇಲ್ಲಿನ ಬಹುತೇಕರಿಗೆ ಹೈ – ಕ್ಲಾಸ್ ಇಂಗ್ಲೀಷ್ ಅರ್ಥನೇ ಆಗೋದಿಲ್ಲ. ಇನ್ನೂ ವ್ಯಾಕರಣವನ್ನೆಲ್ಲ ಸೇರಿಸಿ ಮಾತಾಡಿದರೋ ದೇವರೇ ಕಾಪಾಡಬೇಕು ನಿಮ್ಮನ್ನು..! ನಿಮಗೆ ಇಂಗ್ಲೀಷ್ ಬರುತ್ತದೆ ಎಂದು ಜಂಭ ಕೊಚ್ಚುಕೊಳ್ಳುವ ಹಾಗೇ ನೂ ಇಲ್ಲ. ಇದುವೇ ಸಿಂಗ್ಲಿಷ್ ಮಹಿಮೆ.

ಹಾಗಾದರೆ ಏನಿದು ಸಿಂಗ್ಲಿಷ್..? ಸಿಂಗಾಪುರ ಸಂಸ್ಕೃತಿಯ ಅತ್ಯಂತ ವಿಶಿಷ್ಟ ಭಾಗಗಳಲ್ಲಿ ಇದು ಒಂದು. ಸ್ಥಳೀಯರು ಹಂಚಿಕೊಳ್ಳುವ ಏಕೀಕೃತ ಭಾಷೆ. ಅನೌಪಚಾರಿಕ, ಆಡುಮಾತಿನ ಆವೃತ್ತಿಯೇ ಈ ಸಿಂಗ್ಲಿಷ್. ಬ್ರಿಟಿಷ್ ವಸಾಹತಿನ ಆಳ್ವಿಕೆಗೆ ಒಳಪಟ್ಟ ಕಾಲದಲ್ಲಿ ಅಂದರೆ ಸುಮಾರು 1824 ರಿಂದ 1963 ರ ಸಮಯದಲ್ಲಿ ಈ ಸಿಂಗ್ಲಿಷ್ ಭಾಷೆ ಜನ್ಮ ತಾಳಿತು. ಇಂಗ್ಲಿಷ್, ಮಲಯ, ಚೀನೀ, ತಮಿಳು ಮತ್ತು ಹೊಕ್ಕಿಯನ್ ಭಾಷೆಗಳ ಮಿಶ್ರಣ ಇದಾಗಿದೆ.

ಈ ಭಾಷೆ ತನ್ನದೇ ಆದ ವ್ಯಾಕರಣ ರಚನೆ ಮತ್ತು ಉಚ್ಚಾರಣೆಯನ್ನು ಹೊಂದಿದೆ.  ಸ್ವರ ಮತ್ತು ವಾಕ್ಯಗಳ ಶೈಲಿಯು ಹಾಕಿನ್, ಕ್ಯಾಂಟೋನೀಸ್ ಮತ್ತು ಟೆಯೋಚೆಯಂತಹ ಪ್ರಮುಖ ಚೀನೀ ಉಪಭಾಷೆಗಳಿಂದ ಪ್ರಭಾವಿತವಾಗಿದೆ. ಸಿಂಗಾಪುರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಶಾಲಾ – ಕಾಲೇಜು ಮೆಟ್ಟಿಲು ಹತ್ತದ ಮಂದಿ, ತಮ್ಮ ವ್ಯವಹಾರದಲ್ಲಿ ಸಿಕ್ಕ ಅಲ್ಪಸ್ವಲ್ಪ ಇಂಗ್ಲೀಷ್ ಪದಗಳನ್ನು ನಮ್ಮ ಮಾತೃ ಭಾಷೆಯ ಜೊತೆ ಸೇರಿಸಿ ಮಾತಾಡಿದ ಫಲವೇ ಇದಾಗಿದೆ. ಸಿಂಗಾಪುರದಲ್ಲಿ “ಇಂಗ್ಲಿಷ್” ಅಧಿಕೃತ ಭಾಷೆಯಾ ದರೆ, “ಸಿಂಗ್ಲಿಷ್” ಬೀದಿ ಭಾಷೆಯಾಗಿದೆ.

ಮೂಲ ಇಂಗ್ಲೀಷ್ ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಇದು ಅತ್ಯಂತ ಕಳಪೆ, ಕೆಟ್ಟ ಹಾಗೂ ಚೂರು ಚೂರಾದ ಭಾಷೆ ಎಂಬ ಹಣೆಪಟ್ಟಿಯನ್ನು ಹೊಂದಿದೆ. ಹಾಗಂತ ಇದರ ಬೇಡಿಕೆ ಏನು ತಗ್ಗಿಲ್ಲ. ಇಂಗ್ಲೀಷ್ ಮಾತಾಡುವವರ ಸಂಖ್ಯೆಯಷ್ಟೇ ಸಿಂಗ್ಲಿಷ್ ಮಾತಾಡುವವರು ಕೂಡ ಸಿಂಗಾಪುರದಲ್ಲಿ ಇದ್ದಾರೆ.  ಶಾಲಾ- ಕಾಲೇಜು, ಕಚೇರಿಗಳಲ್ಲಿ ಈ ಸಿಂಗ್ಲಿಷ್ ಭಾಷೆಗೆ ಎಂಟ್ರೀ ಇಲ್ಲ. ಇದನ್ನು ಮಟ್ಟ ಹಾಕುವ ನಿಟ್ಟಿನಲ್ಲೂ ಮೂಲ ಇಂಗ್ಲೀಷ್ ಕಲಿಸುವ ಹಾಗೂ ಅರಿವು ಮೂಡಿಸುವ ಅದೆಷ್ಟೋ ಕಾರ್ಯಕ್ರಮಗಳು ಸರ್ಕಾರಿ ವಲಯದಿಂದ ನಡೆಯುತ್ತಾ ಇರುತ್ತವೆ. ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ಳಲು ಜನ ಟೀ, ಕಾಫೀ ಅಥವಾ ಸಿಗರೇಟ್ ಗೆ ಮೊರೆ ಹೋಗುವಂತೆ ಸಿಂಗಾಪುರದಲ್ಲಿ ಸಿಂಗ್ಲಿಷ್ ಮಾತಾಡೋದು ಕೂಡ ಒಂದು ಹವ್ಯಾಸ ಆಗಿ ಬಿಟ್ಟಿದೆ. ಇಂಗ್ಲೀಷ್ ಬಾರದ ಜನರಿಗೆ ಸಿಂಗ್ಲಿಷ್ ಅನಿವಾರ್ಯವಾದರೆ, ಉಳಿದವರಿಗೆ ಇದು ಒಂಥರಾ ಟೈಮ್ ಪಾಸ್. ಇನ್ನೂ ಇವುಗಳ ಮಧ್ಯೆ ಸಿಕ್ಕಿ ಬಿಳೋರು ಮಾತ್ರ ಇತ್ತ ಇಂಗ್ಲೀಷ್ ಸರಿಯಾಗಿ ಬಾರದ ಅತ್ತ ಸಿಂಗ್ಲಿಷ್ ಗೂ ಒಗ್ಗಿಕೊಳ್ಳದ “ವಿಂಗ್ಲಿಷ್” ಗುಂಪು.

ಅಂದ ಹಾಗೆ, ಈ ಸಿಂಗ್ಲಿಷ್ ಭಾಷೆಯು ಅತ್ಯುತ್ತಮ ಮತ್ತು ಅತ್ಯಂತ ರೋಮ್ಯಾಂಟಿಕ್ ಭಾಷೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಗಾಪುರದಲ್ಲಿ ಇಂಗ್ಲೀಷ್ ಭಾಷೆಯು ಒಂದು ಸಾಮಾಜಿಕ ಮನೋರಂಜನೆಯಾಗಿ ಪರಿವರ್ತನೆಗೊಂಡಿದೆ. ಒಟ್ಟಾರೆ ೩ ವಿಧಗಳಲ್ಲಿ ಇಂಗ್ಲೀಷ್ ವಿಭಜನೆಗೊಂಡಿವೆ.

1.  ಬೆಸಿಲೆಕ್ಟ್  – “Dis guy Singrish si beh zai sia.”

2.  ಮೆಸೊಲೆಕ್ಟ್ – “Dis guy Singlish damn good eh.”

3.  ಆಕ್ರೊಲೆಕ್ಟ್ – “This person’s Singlish is very good.”

ಸಿಂಗಾಪುರದಲ್ಲಿ ಸಿಂಗ್ಲಿಷ್ ನ ಪ್ರತಿ ವಾಕ್ಯದ ಕೊನೆಗೆ “ಲಾ” ಅನ್ನೋ ಪದ ಸಾಮಾನ್ಯ. ಸಿಂಗ್ಲಿಷ್ ವಾಕ್ಯಗಳು ಸಾಮಾನ್ಯವಾಗಿ ಒಂದು ವಿಷಯದ ಪ್ರಸ್ತಾವನೆ ಮೂಲಕ ಆರಂಭವಾಗುತ್ತದೆ.  ವಿಷಯ ಮತ್ತು ಕಾಮೆಂಟ್ಸ್ ಗಳ ನಡುವಿನ ಶಬ್ದಾರ್ಥ ಸಂಬಂಧವು ಮುಖ್ಯವಲ್ಲ. ನಾಮಪದಗಳು, ಕ್ರಿಯಾಪದಗಳು, ಕ್ರಿಯಾವಿಶೇಷಣಗಳು, ಮತ್ತು ಸಂಪೂರ್ಣ ವಿಷಯ-ಕ್ರಿಯಾಪದ-ವಸ್ತುವಿನ ಪದಗುಚ್ಛಗಳು ” ವಿಷಯವಾಗಿ ” ಕಾರ್ಯನಿರ್ವಹಿಸುತ್ತವೆ. ಇನ್ನೂ ಕಾಲಗಳು, ಅವುಗಳ ವ್ಯಾಕರಣಗಳು ಅಪರೂಪಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ.

You go ting ting a little bit, may be den you get answer.

{ ting = think, den = then}

Dat one his wife lah.

When I young ah, I go school every day.

He talk so long, never stop, I ask him also never.

{ never = didn’t}

Aiyah, cannot wait any more, must go already.

My boy is going to Primary One oreddy.

(oreddy = already.)

I late den take taxi, otherwise dun take. { den = then, dun = don’t}

Gimme can?  { = Can you please give that to me}

ಇಂತಹ ಅನೇಕ ವಾಕ್ಯಗಳು, ಪದಗಳು ವಿಚಿತ್ರ ಎನಿಸುವಷ್ಟು ಭಿನ್ನವಾಗಿರುತ್ತವೆ. ಬರೆದ ಸಿಂಗ್ಲಿಷ್ ವಾಕ್ಯಗಳನ್ನ ಹೇಗಾದರೂ ಅರ್ಥೈಸಿಕೊಳ್ಳಬಹುದು. ಆದರೆ ಮಾತಾಡುವ ಸಿಂಗ್ಲಿಷ್ ನಿಜಕ್ಕೂ ಭಯಾನಕ. ಚೀನೀಯರು ತಮ್ಮ ಮಾತೃ ಭಾಷೆಯ ಉಚ್ಚಾರಣೆಯಲ್ಲಿ ಪ್ರಯೋಗಿಸಿದರೆ, ಮಲಯ್ ಸಮುದಾಯದವರು ಅವರ ಭಾಷೆಯ ಸ್ವರದಲ್ಲಿ. ಒಂದಷ್ಟು ಪದಗಳು ನುಂಗಿ ಹೋದರೆ, ಮತ್ತೆ ಕೆಲವಷ್ಟು ಪದಗಳಿಗೆ ಸಂಗೀತ ಬೇರೆ. ಹೀಗೆ ಸ್ವರ, ರಾಗ, ತಾಳ, ಶ್ರುತಿ, ಗಮಕ, ಒಟ್ಟು ಸೇರಿ ಬಾಯಿಂದ ಹೊರ ಬೀಳುವ ಪದಗಳು ಕಿವಿಗೆ ಹೊಕ್ಕು ಅರ್ಥ ಆಗುವುದೆಂದರೆ ನನ್ನಂತವರ ಪಾಲಿಗೆ ನಿಜಕ್ಕೂ

“ಮೆಡಿಕಲ್ ಮಿರಾಕಲ್ “.

 

 

‍ಲೇಖಕರು avadhi

January 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. ಪಂಡಿತಾರಾಧ್ಯ

    ನಮ್ಮ ಮಂಡ್ಯದವರು ಏನು ಕಮ್ಮಿ ಇಲ್ಲ. ಕನ್ನಡದಲ್ಲೇ ಲಾ ಪಾಯಿಂಟ್ ಹಾಕಿ ಮಾತನಾಡುತ್ತಾರೆ!

    ಪ್ರತಿಕ್ರಿಯೆ
  2. Prasad MN

    ಕಳೆದ ವಾರ ಸಿಂಗಾಪುರ್ ಗೆ ಹೋದಾಗ ಟ್ಯಾಕ್ಸಿ ಡ್ರೈವರ್ ಇಂಗ್ಲೀಷ್ ಭಾಷೆ ಅರ್ಥ ವಾಗದೇ ಇರುವ ಕಾರಣ ಈಗ ತಿಳಿಯಿತು..
    ಶ್ರೀ ವಿದ್ಯಾ ರವರಿಗೆ ಧನ್ಯವಾದಗಳು

    ಪ್ರತಿಕ್ರಿಯೆ
  3. dinesh303Dinesh

    “ರತ್ನಾಕರವರ್ಣಿ ಭರತೇಶವೈಭವ”,………………?????????????? …..ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ…… ಶಬ್ಧದಾರಿದ್ರ್ಯವಿಲ್ಲ.!ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.
    ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ

    Anyone Having Please Post

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: